ನೈತಿಕ ಸತ್ಯಗಳು ಮತ್ತು ನ್ಯಾಯಾಂಗದ ಬದ್ಧತೆಯ ಕುರಿತು

Update: 2019-05-02 18:35 GMT

ಸುಪ್ರೀಂ ಕೋರ್ಟಿನ ಮಾಜಿ ಉದ್ಯೋಗಿಯೊಬ್ಬಳಿಗೆ ಭಾರತದ ಮುಖ್ಯ ನ್ಯಾಯಾಧೀಶರು ಲೈಂಗಿಕ ಕಿರುಕುಳ ನೀಡಿದ್ದರೆಂಬ ಆರೋಪದ ಸುತ್ತಲಿನ ವಿವಾದವು ಸಾರ್ವಜನಿಕ ಸಂಸ್ಥೆಗಳಿಗೂ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರ ಅಥವಾ ಕೆಲಸ ಮಾಡಬೇಕೆಂದು ಬಯಸುವವರ ನಡುವಿನ ಸಂಬಂಧಗಳನ್ನು ಸಮಸ್ಯಾತ್ಮಕಗೊಳಿಸಿದೆ. ಏಕೆಂದರೆ ಈ ಪ್ರಕರಣದಲ್ಲಿ ಮುಖ್ಯ ನ್ಯಾಯಾಧೀಶರ ಸ್ಥಾನದಂತಹ ಅತ್ಯುನ್ನತ ಸಾರ್ವಜನಿಕ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಸಾರ್ವಜನಿಕ ಸಂಸ್ಥೆಯ ಗೌರವ ಹಾಗೂ ಪ್ರತಿಷ್ಠೆಗಳ ಜೊತೆಗೆ ತನ್ನ ವೈಯಕ್ತಿಕ ಪ್ರತಿಷ್ಠೆಗಳನ್ನು ಸಮೀಕರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮುಖ್ಯ ನ್ಯಾಯಾಧೀಶರು ಮಾಡುತ್ತಿರುವ ಪ್ರತಿಪಾದನೆಗಳು ಪ್ರಧಾನಿ ನರೇಂದ್ರ ಮೋದಿಯವರ ಮಾದರಿಯನ್ನೇ ಹೋಲುತ್ತದೆಂದು ಹೇಳಬಹುದು ಮತ್ತು ಆ ಮಾದರಿಯಲ್ಲಿ ಇರುವ ಸಮಸ್ಯೆಯು ಸ್ಪಷ್ಟವಾಗಿಯೇ ಗೋಚರಿಸುತ್ತದೆ. ಈ ಇಬ್ಬರೂ ವ್ಯಕ್ತಿಗಳು ಎರಡು ಬೇರೆಬೇರೆ ಸಂದರ್ಭಗಳಲ್ಲಿ ತಮ್ಮ ಬಗ್ಗೆ ಎರಡು ನೈತಿಕ ಪ್ರತಿಪಾದನೆಗಳನ್ನು ಮಾಡಿಕೊಂಡಿದ್ದಾರೆ. ಮಾಧ್ಯಮಗಳಲ್ಲಿ ವರದಿಯಾದಂತೆ ಪ್ರಧಾನಿ ನರೇಂದ್ರ ಮೋದಿಯವರು ತಾವು ದೇಶವನ್ನು ರಕ್ಷಿಸಲು ಬಂದಿರುವ ರಕ್ಷಕನೆಂಬಂತೆ ಮತ್ತು ತನಗಿರುವ ವಿಶಿಷ್ಟ ಧೈರ್ಯಬಲ ಮತ್ತು ನೈತಿಕ ಶಕ್ತಿಗಳಿಂದಾಗಿ ತಮ್ಮ ಕೈಯಲ್ಲಿ ಮಾತ್ರ ದೇಶವು ಸುರಕ್ಷಿತವಾಗಿರುತ್ತದೆಂಬ ರೀತಿಯಲ್ಲಿ ತಮ್ಮ ವ್ಯಕ್ತಿತ್ವನ್ನು ವೈಭವೀಕರಿಸಿಕೊಂಡಿದ್ದಾರೆ. ಮತ್ತೊಂದು ಕಡೆ ಮುಖ್ಯ ನ್ಯಾಯಾಧೀಶರು ವ್ಯಕ್ತಿಯಾಗಿ ತಮ್ಮ ಮೇಲೆ ಬಂದಿರುವ ಲೈಂಗಿಕ ಕಿರುಕುಳದ ಆಪಾದನೆಯನ್ನು ನ್ಯಾಯಾಂಗವು ಎದುರಿಸುತ್ತಿರುವ ಬಿಕ್ಕಟ್ಟೆಂಬಂತೆ ಚಿತ್ರಿಸುತ್ತಿದ್ದಾರೆ. ಹಾಗಿದ್ದಲ್ಲಿ ಸಾರ್ವಜನಿಕ ಜೀವನದಲ್ಲಿ ಮುಖ್ಯವಾಗಬೇಕಿರುವುದು ವ್ಯಕ್ತಿಗಳೋ ಅಥವಾ ಸಾರ್ವಜನಿಕ ಸಂಸ್ಥೆಗಳೋ?
 ತಮ್ಮ ಮೇಲೆ ಬಂದಿರುವ ಆಪಾದನೆಗಳ ಬಗ್ಗೆ ಮುಖ್ಯ ನ್ಯಾಯಾಧೀಶರು ಮಾಡುತ್ತಿರುವ ಪ್ರತಿಪಾದನೆಗಳನ್ನು ಗಮನಿಸಿದರೆ ನ್ಯಾಯಾಂಗದ ಬದ್ಧತೆಯನ್ನು ಕಾಪಾಡಬೇಕೆಂಬ ತನ್ನ ವೈಯಕ್ತಿಕ ನೈತಿಕ ಬದ್ಧತೆಗೆ ಸುಪ್ರೀಂ ಕೋರ್ಟಿನ ಮಾಜಿ ಉದ್ಯೋಗಿಯು ತನ್ನ ಬಗ್ಗೆ ಮಾಡಿರುವ ಸುಳ್ಳು ಆಪಾದನೆಗಳು ಅಡ್ಡಿಪಡಿಸುತ್ತಿವೆ ಎಂದು ಹೇಳುತ್ತಿದ್ದಾರೆಂದು ಯಾರಿಗಾದರೂ ಭಾಸವಾಗುತ್ತದೆ. ವ್ಯಕ್ತಿಯಾಗಿ ತನ್ನ ಮೇಲೆ ಆಗುತ್ತಿರುವ ದಾಳಿಯು ಒಟ್ಟಾರೆಯಾಗಿ ನ್ಯಾಯಾಂಗದ ಮೇಲೆ ಆಗುತ್ತಿರುವ ದಾಳಿಯಾಗಿ ಪರಿಭಾವಿಸಬೇಕೆಂದು ಮುಖ್ಯ ನ್ಯಾಯಾಧೀಶರು ಹೇಳಿರುವುದಾಗಿ ವರದಿಯಾಗಿದೆ. ಮುಖ್ಯ ನ್ಯಾಯಾಧೀಶರ ಕಚೇರಿಯು ನ್ಯಾಯಾಂಗದಂತಹ ಸಾರ್ವಜನಿಕ ಸಂಸ್ಥೆಗಳಲ್ಲಿರಬೇಕಾದ ಬದ್ಧತೆಯ ಪ್ರತೀಕವೆಂಬುದು ನಿಜವೇ. ಅದೇನೇ ಇದ್ದರೂ ಸಮರ್ಥ ನ್ಯಾಯಾಧೀಶರ ಸಾಂವಿಧಾನಿಕತೆಯು ಆಯಾ ನ್ಯಾಯಾಧೀಶರ ನೈತಿಕ ಪ್ರೇರಣೆಗಳ ಮೇಲಾಗಲೀ ಅಥವಾ ಅವರು ತಮ್ಮ ಸರಳತೆ ಮತ್ತು ತ್ಯಾಗಗಳ ಕಥಾನಕವಾಗಿ ನೈತಿಕ ಸತ್ಯಗಳನ್ನು ಬಳಸಿಕೊಳ್ಳುವುದನ್ನಾಗಲೀ ಅವಲಂಬಿಸಬಾರದು. ಈ ಪ್ರಕರಣದಲ್ಲಿ ಮುಖ್ಯ ನ್ಯಾಯಾಧೀಶರು: ‘‘ಇಂತಹ ಆರೋಪಗಳನ್ನು ನಿರಾಕರಿಸುವಷ್ಟು ಮಹತ್ವವನ್ನು ಕೊಟ್ಟರೂ ನಾನು ಕೆಳಮಟ್ಟಕ್ಕೆ ಇಳಿದಂತಾಗುತ್ತದೆ’’, ‘‘ನನ್ನ ಜವಾನನ ಹತ್ತಿರ ನನಗಿಂತ ಹೆಚ್ಚು ದುಡ್ಡಿದೆ’’ ಎಂಬಂತಹ ನೈತಿಕ ಒಳದನಿಗಳುಳ್ಳ ಹೇಳಿಕೆಗಳನ್ನು ಮಾಡಿದ್ದಾರೆಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲೇ ಕೆಲವು ಅತ್ಯಂತ ಸುಸಂಗತವಾದ ಪ್ರಶ್ನೆಗಳನ್ನು ಎತ್ತಬೇಕಿದೆ.
ಒಂದು ವೇಳೆ ಮುಖ್ಯ ನ್ಯಾಯಾಧೀಶರು ನ್ಯಾಯಾಂಗ ಬದ್ಧತೆಯ ಪ್ರತೀಕವೇ ಆಗಿದ್ದರೆ ಹಾಗೂ ಸಾಕ್ಷ್ಯಾಧಾರಗಳನ್ನು ಆಧರಿಸಿದ ಸತ್ಯವನ್ನು ಹುಡುಕುವ ಕಾನೂನು ಪ್ರಕ್ರಿಯೆಗಳ ಸಂರಕ್ಷಕನೇ ಆಗಿದ್ದಲ್ಲಿ ತಮ್ಮ ರಕ್ಷಣೆಗಾಗಿ ಏಕೆ ಅವರು ಈ ಎಲ್ಲಾ ನೈತಿಕ ಪದಪುಂಜಗಳನ್ನು ಬಳಸುತ್ತಿದ್ದಾರೆ? ಸಾಕ್ಷ್ಯಾಧಾರಗಳ ಅವಲಂಬನೆ ಮತ್ತು ವಾದ ಮತ್ತು ಪ್ರತಿವಾದಗಳ ಮೂಲಕ ನ್ಯಾಯವನ್ನು ಒದಗಿಸುವುದು ಆಧುನಿಕ ನ್ಯಾುಕ ವ್ಯವಸ್ಥೆಯ ಸಾರವಾಗಿದೆ. ಒಂದು ಪಾರದರ್ಶಕ ಮತ್ತು ಪ್ರಬಲವಾದ ಪ್ರಕ್ರಿಯೆಗಳನ್ನು ಆಧರಿಸಿ ಪಡೆದ ನ್ಯಾಯವನ್ನು ಸತ್ಯದ ಜಯವೆಂದು ಪರಿಗಣಿಸಲಾಗುತ್ತದೆ. ಆಧುನಿಕ ನ್ಯಾಯಾಂಗದ ತಿರುಳೇ ವೈಜ್ಞಾನಿಕ ಸತ್ಯದ ಅನ್ವೇಷಣೆಯಾಗಿರುವುದರಿಂದ ಅದು ಆರೋಪಿಯು ತನ್ನ ಸ್ವರಕ್ಷಣೆಗೆ ನೈತಿಕ ಪರಿಭಾಷೆಗಳನ್ನು ಬಳಸುವ ಅಗತ್ಯವನ್ನೇ ಇಲ್ಲ್ಲವಾಗಿಸುತ್ತದೆಂದು ಹೇಳಬಹುದು. ಮತ್ತೊಂದು ಕಡೆಯಲ್ಲಿ ನೈತಿಕ ಸತ್ಯವೆಂಬುದು ಒಬ್ಬ ವ್ಯಕ್ತಿಯು ಸರಳತೆ ಮತ್ತು ನೈತಿಕ ಬದ್ಧತೆಗಳ ಪರಿಭಾಷೆಯನ್ನು ಬಳಸುತ್ತಾ ತನ್ನ ಪರವಾಗಿ ಮಾಡಿಕೊಳ್ಳುವ ಏಕಪಕ್ಷೀಯ ಕಥನವನ್ನು ಆಧರಿಸುತ್ತದೆ. ಲೈಂಗಿಕ ಕಿರುಕುಳದಂತಹ ಪ್ರಕರಣಗಳಲ್ಲಿ ಇಂತಹ ನೈತಿಕ ಭಾಷೆ ಮತ್ತು ಪದಪುಂಜಗಳು ಆರೋಪಿಗೆ ಪ್ರಾಥಮಿಕ ರಕ್ಷಣೆಯನ್ನು ಒದಗಿಸುವಲ್ಲಿ ಬಳಕೆಯಾಗು್ತವೆ ಎಂಬುದನ್ನು ಮರೆಯಬಾರದು.
ಈ ನೈತಿಕ ಪದಪುಂಜಗಳು ಆರೋಪದ ಸತ್ಯಾಸತ್ಯತೆಗಳನ್ನು ಸೂಕ್ತವಾದ ಪ್ರಕ್ರಿಯೆಗಳ ಮೂಲಕ ತನಿಖೆ ಮಾಡಿ ಕಂಡುಹಿಡಿಯುವ ಮುನ್ನವೇ ಆರೋಪಿಯನ್ನು ನಿರ್ದೋಷಿಯೆಂದು ಘೋಷಿಸಿಬಿಡುತ್ತಲ್ಲದೆ, ಅದು ದೂರುದಾರಳ ವಿಶ್ವಾಸಾರ್ಹತೆಯನ್ನೂ ದುರ್ಬಲಗೊಳಿಸುವ ಪ್ರಯತ್ನವಾಗುತ್ತದೆ. ಆ ಮೂಲಕ ದೂರುದಾರಳಿಗೆ ನಿಷ್ಪಕ್ಷಪಾತ ವಿಚಾರಣೆಯ ಅವಕಾಶವನ್ನು ನೀಡದೆ ವಂಚಿಸಿದಂತಾಗುತ್ತದೆ. ಈ ಪ್ರಕರಣದಲ್ಲಿ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವು ಸಂಭವಿಸಿದೆ. ಕೆಲಸದ ಸ್ಥಳಗಳಲ್ಲಿ ತೀವ್ರವಾದ ಅಧಿಕಾರ ಶ್ರೇಣೀಕರಣವಿರುತ್ತದೆ. ಈ ಪ್ರಕರಣವಂತೂ ನ್ಯಾಯಾಂಗದ ಅತ್ಯುನ್ನದ ಅಧಿಕಾರದಲ್ಲಿರುವವರನ್ನೇ ಒಳಗೊಂಡಿದೆ. ಅದೇನೇ ಇದ್ದರೂ ಈವರೆಗೆ ಈ ಪ್ರಕರಣವನ್ನು ನಿಭಾಯಿಸುವ ರೀತಿಯು ನ್ಯಾಯಾಂಗದ ಬಗ್ಗೆ ಸಾಂಸ್ಥಿಕ ವಿಶ್ವಾಸವನ್ನೇನೂ ಮೂಡಿಸುವುದಿಲ್ಲ. ಕಾಲಕಾಲಕ್ಕೆ ಸಾಂವಿಧಾನಿಕ ಸುಧಾರಣೆಗಳ ಮೂಲಕ ನಿಖರವಾಗುತ್ತಾ ಸಾಗಿರುವ ಪ್ರಬಲವಾದ ಮತ್ತು ಪಾರದರ್ಶಕವಾದ ನ್ಯಾಯಿಕ ಪ್ರಕ್ರಿಯೆಗಳನ್ನು ಅನುಸರಿಸುವ ಮೂಲಕ ಮಾತ್ರ ನ್ಯಾಯಾಂಗದ ಸಮಗ್ರತೆಯನ್ನು ಖಾತರಿಗೊಳಿಸಲು ಸಾಧ್ಯ. ಈ ಪ್ರಕರಣವನ್ನು ಪರಿಶೀಲಿಸಲು ರಚಿಸಲಾಗಿರುವ ತ್ರಿಸದಸ್ಯ ಸಮಿತಿಯು ನಡೆದುಕೊಳ್ಳುವ ರೀತಿ ಮತ್ತು ನ್ಯಾಯಿಕ ಪ್ರಕ್ರಿಯೆಗಳಿಂದ ಹೊರಬರುವ ಸತ್ಯಗಳು ಮಾತ್ರ ನ್ಯಾಯಾಂಗವು ತನ್ನ ಸಮಗ್ರತೆ ಮತ್ತು ಬದ್ಧತೆಯನ್ನು ಉಳಿಸಿಕೊಳ್ಳುತ್ತದೆಯೇ ಎಂಬುದನ್ನು ತಿಳಿಯಪಡಿಸುತ್ತದೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News

ಜಗದಗಲ
ಜಗ ದಗಲ