ಆರೋಪಿಗಳಿಂದ ಮೇಲ್ಮನವಿ
ಭಾಗ-27
ಸೆಷನ್ಸ್ ನ್ಯಾಯಾಲಯದಲ್ಲಿ ಆರೋಪಿಗಳ ಪರ ಹಾಜರಾಗಿದ್ದ ಅದೇ ವಕೀಲರು ಮೇಲ್ಮನವಿದಾರರ ಪರ ವಾದಿಸಿದರು. ಕೆಳಗಿನ ನ್ಯಾಯಾಲಯದಲ್ಲಿ ಮುಂದಿಟ್ಟ ವಾದಗಳನ್ನೇ ಇಲ್ಲಿಯೂ ಮಂಡಿಸಿದರು. ಅವರದು ಅದೇ ರಾಗ; ಅದೇ ತಾಳ. ಗಾಂಧಿ ಹತ್ಯೆ ಮಾಡಬೇಕೆಂದು ಗೋಡ್ಸೆ ಯಾರೊಡನೆಯೂ ಪಿತೂರಿ ಮಾಡಲಿಲ್ಲ. ಅವನೊಬ್ಬನೆ ‘ತಲೆಕೆಟ್ಟು’ ಈ ಕೃತ್ಯವೆಸಗಿದ. ಆದ್ದರಿಂದ ಉಳಿದವರು ಈ ಕೃತ್ಯದಲ್ಲಿ ಭಾಗಿಗಳಲ್ಲ.
ಸೆಷನ್ಸ್ ನ್ಯಾಯಾಧೀಶರಾಗಲಿ,ವಿಶೇಷ ನ್ಯಾಯಾಧೀಶರಾಗಲಿ ಆರೋಪಿಗಳಿಗೆ ಮರಣದಂಡನೆಯ ಶಿಕ್ಷೆ ವಿಧಿಸಿದಾಗ ಆ ಶಿಕ್ಷೆಯ ತೀರ್ಪನ್ನು ಉಚ್ಚ ನ್ಯಾಯಾಲಯ ಎತ್ತಿ ಹಿಡಿದು ದೃಢೀಕರಿಸಿದ ನಂತರವೇ ಶಿಕ್ಷಿಸಲ್ಪಟ್ಟ ಆರೋಪಿಗಳನ್ನು ನೇಣುಗಂಬಕ್ಕೆ ಏರಿಸಬೇಕು.ಇದು ಶಾಸನ. ಗಾಂಧೀ ಹತ್ಯೆಯಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಗೋಡ್ಸೆ ಮತ್ತು ಆಪ್ಟೆ ಮೇಲ್ಮನವಿ ಸಲ್ಲಿಸಲಿ, ಸಲ್ಲಿಸದಿರಲಿ ಉಚ್ಚ ನ್ಯಾಯಾಲಯವು ಆ ತೀರ್ಪನ್ನು ಪರಿಶೀಲಿಸಲೇಬೇಕು. ನ್ಯಾಯಾಧೀಶರು ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ :366ರ ಪ್ರಕಾರ ತೀರ್ಪು ಕೊಡುವಾಗ ಶಿಕ್ಷೆ ವಿಧಿಸಿದಾಗಲೆ "subject to the confirmation by the high court under s:413 cr.p.c the accused are sentenced to death.the records shall be submitted to the high court for confirmation under s:368 cr.p.c.’’ಎಂದೇ ತೀರ್ಪಿನಲ್ಲಿ ಘೋಷಿಸಲಾಗುತ್ತದೆ. ಶಾಸನದ ಈ ವಿಧಿಗೆ ಅನುಸಾರವಾಗಿ ಗೋಡ್ಸೆ ಮತ್ತು ಆಪ್ಟೆ ಮೇಲ್ಮನವಿ ಮಾಡಿಕೊಳ್ಳದೆ ಹೋಗಿದ್ದರೂ ಸಿಮ್ಲಾ ಉಚ್ಚ ನ್ಯಾಯಾಲಯಕ್ಕೆ (ಆಗಿನ್ನೂ ದಿಲ್ಲಿ ಉಚ್ಚ ನ್ಯಾಯಾಲಯ ಅಸ್ತಿತ್ವದಲ್ಲಿ ಬಂದಿಲ್ಲದಿದ್ದರಿಂದ)ದಿಲ್ಲಿ ಸೆಷನ್ಸ್ ನ್ಯಾಯಾಧೀಶರ ತೀರ್ಪುಗಳ ವಿರುದ್ಧ ಸಿಮ್ಲಾ ಉಚ್ಚ ನ್ಯಾಯಲಯಕ್ಕೆ ಮೇಲ್ಮನವಿ ಮಾಡಿಕೊಳ್ಳಬೇಕಾಗಿತ್ತು. ಆದರೂ ಅವರಿಬ್ಬರೂ ಉಳಿದ ಆರೋಪಿಗಳೂ ಮೇಲ್ಮನವಿ ಸಲ್ಲಿಸಿದರು. ಸೆಷನ್ಸ್ ನ್ಯಾಯಾಲಯದಲ್ಲಿ ಆರೋಪಿಗಳ ಪರ ಹಾಜರಾಗಿದ್ದ ಅದೇ ವಕೀಲರು ಮೇಲ್ಮನವಿದಾರರ ಪರ ವಾದಿಸಿದರು. ಕೆಳಗಿನ ನ್ಯಾಯಾಲಯದಲ್ಲಿ ಮುಂದಿಟ್ಟ ವಾದಗಳನ್ನೇ ಇಲ್ಲಿಯೂ ಮಂಡಿಸಿದರು. ಅವರದು ಅದೇ ರಾಗ; ಅದೇ ತಾಳ. ಗಾಂಧಿ ಹತ್ಯೆ ಮಾಡಬೇಕೆಂದು ಗೋಡ್ಸೆ ಯಾರೊಡನೆಯೂ ಪಿತೂರಿ ಮಾಡಲಿಲ್ಲ. ಅವನೊಬ್ಬನೆ ‘ತಲೆಕೆಟ್ಟು’ ಈ ಕೃತ್ಯವೆಸಗಿದ. ಆದ್ದರಿಂದ ಉಳಿದವರು ಈ ಕೃತ್ಯದಲ್ಲಿ ಭಾಗಿಗಳಲ್ಲ. ಡಾ.ಪರಚುರೆಯ ಪರವಾಗಿ ವಾದಿಸಿದ ವಕೀಲರು, ಅವನು ಗ್ವಾಲಿಯರ್ ಮಿಲಿಟರಿ ಕಾರಾಗೃಹದಲ್ಲಿ ಕೊಟ್ಟ ತಪ್ಪೊಪ್ಪಿಗೆ ಹೇಳಿಕೆ ಅವನನ್ನು ಬಲತ್ಕಾರ ಮಾಡಿ, ಪ್ರಾಣಭಯದ ಅಂಜಿಕೆ ಹಾಕಿ ಸಹಿ ಹಾಕಿಸಿಕೊಂಡದ್ದು. ಅದನ್ನು ನಂಬಕೂಡದು. ಶಂಕರ ಕಿಸ್ಟಯ್ಯ ಬಡ್ಗೆಯ ಜೀತದಾಳು. ಅವನು ಅವನ ‘ಧಣಿ’ ಹೇಳಿದಂತೆ ಮಾಡಿದ.ಅಸ್ವತಂತ್ರ ಜೀತದಾಳು. ಅವನು ಮಾಡಿದ್ದ ಅಪರಾಧವೆಂದರೆ ಬಡ್ಗೆ ಕೊಟ್ಟ ಆಯುಧಗಳನ್ನು ಸ್ಫೋಟಕ ವಸ್ತುಗಳನ್ನು ವಶದಲ್ಲಿಟ್ಟುಕೊಂಡು ಎಲ್ಲಿಗೆ ಬೇಕೆಂದರೆ ಅಲ್ಲಿಗೆ ಕೊಂಡೊಯ್ಯುವುದು, ಯಾರಿಗೆ ಮುಟ್ಟಿಸಬೇಕೆಂದರೆ ಅವರಿಗೆ ಅವುಗಳನ್ನು ಮುಟ್ಟಿಸುವುದು. ಅವನು ಹೆಚ್ಚೆಂದರೆ ತನ್ನ ಧಣಿಯ ಆಜ್ಞಾನುವರ್ತಿ; ಕೇವಲ ಉಪಕರಣ.ಆಜ್ಞೆ ಮಾಡಿದ ‘ಧಣಿ’ ಬಡ್ಗೆ ಮಾಫಿ ಸಾಕ್ಷಿಯಾಗಿ ಶಿಕ್ಷೆ ತಪ್ಪಿಸಿಕೊಂಡ. ಅವನ ಜೀತದಾಳು ಯಾಕೆ ಶಿಕ್ಷೆ ಅನುಭವಿಸಬೇಕು? ವಿಚಾರಣೆ ಮಾಡಿದ ನ್ಯಾಯಾಧೀಶರೇ ಅವನ ಜೀವವಾಧಿ ಶಿಕ್ಷೆಯನ್ನು ಏಳು ವಷರ್ಕ್ಕೆ ಇಳಿಸಬೇಕೆಂದು ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ(ಒಮ್ಮೆ ಅಪರಾಧಿ ಕೊಲೆ ಮಾಡುವ ಕೃತ್ಯ ನಡೆದಾಗ ಖುದ್ದಾಗಿ ಪ್ರತ್ಯಕ್ಷ ಅಲ್ಲಿದ್ದು ಭಾಗಿಯಾಗಿದ್ದರೆ ಐಪಿಸಿ 109ರ ಪ್ರಕಾರ ಅವನೂ ಕೊಲೆ ಮಾಡಿದಂತೆಯೇ. ಒಂದು ವೇಳೆ ಸಾವರ್ಕರ್, ಪರಚುರೆಯಂತೆ ಕೃತ್ಯ ನಡೆದಾಗ ಪ್ರತ್ಯಕ್ಷ ಹಾಜರಿಲ್ಲದಿದ್ದರೂ ಐಪಿಸಿ 114ರ ಪ್ರಕಾರ ಕೊಲೆಗಾರನೆ.) ಸೆಷನ್ಸ್ ನ್ಯಾಯಾಧೀಶರು ಅವನು ಅಪರಾಧ ಎಸಗಿದ್ದಾನೆ ಎಂದು ನಿರ್ಧರಿಸಿದ ಮೇಲೆ ಅಪರಾಧಕ್ಕೆ ಐಪಿಸಿನಲ್ಲಿ ಹೇಳಿದ ಮರಣದಂಡನೆ ಇಲ್ಲವೇ ಜೀವಾವಧಿ ಶಿಕ್ಷೆ ವಿಧಿಸಲೇಬೇಕು. ಅವರಿಗೆ ಅದಕ್ಕಿಂತ ಕಡಿಮೆ ಶಿಕ್ಷೆ ವಿಧಿಸುವ ಅಧಿಕಾರವಿಲ್ಲ. ಆದರೆ ಸರಕಾರಕ್ಕೆ ಆ ಶಿಕ್ಷೆಯನ್ನು ಕಡಿಮೆ ಮಾಡಲು ಶಿಫಾರಸು ಮಾಡಬಹುದು. ಆ ಶಾಸನದ ಪ್ರಕಾರ ನ್ಯಾ.ಶ್ರೀ.ಆತ್ಮಚರಣರು ಸರಕಾರಕ್ಕೆ ಶಿಕ್ಷೆ ತಗ್ಗಿಸಲು ಶಿಫಾರಸು ಮಾಡಿದ್ದರು.
ಈ ಸಂದರ್ಭದಲ್ಲಿ ಶಂಕರ ಕಿಸ್ಟಯ್ಯನ ಹಿನ್ನೆಲೆಯನ್ನು ನಾಲ್ಕು ಮಾತಿನಲ್ಲಿ ಗಮನಿಸುವುದು ಅಗತ್ಯ. ಅವನು ಮೂಲತಃ ಸೊಲ್ಲಾಪುರದ ತೆಲುಗು ಮಾತೃಭಾಷೆಯವನು. ಬಹುಶಃ ಸೊಲ್ಲಾಪುರವೂ ಅವನ ಮೂಲವಾಗಿರಲಿಕ್ಕಿಲ್ಲ. ಆಂಧ್ರದಿಂದಲೊ ಮತ್ತೆಲ್ಲಿಂದಲೊ ಅವನ ಹೆತ್ತವರು ವಲಸೆ ಬಂದಿರಬೇಕು. ಅವನು ಚಿಕ್ಕಂದಿನಲ್ಲಿಯೆ ಮುಂಬೈಗೆ ಬಂದು ಆಶ್ರಯ ಪಡೆದಿದ್ದ. ಬಡ್ಗೆ ಅವನನ್ನು ಬಹುಕ್ರೂರವಾಗಿ ನಡೆಸಿಕೊಂಡಿದ್ದ. ಅವನ ಹಿಂಸೆಯನ್ನು ತಾಳಲಾರದೆ ಸೊಲ್ಲಾಪುರಕ್ಕೆ ಓಡಿಹೋಗಿದ್ದ. ಅವನ ಮೇಲೆ ಬಡ್ಗೆ ಪೊಲೀಸರಿಗೆ ಫಿರ್ಯಾದಿಕೊಟ್ಟು ಹಿಡಿತರಿಸಿ ಅವನನ್ನು ವಶಕ್ಕೆ ತೆಗೆದುಕೊಂಡು ಬಿಡುಗಡೆ ಹೊಂದಲಾಗದ ಬಂಧನಕ್ಕೆ ಒಳಗಾಗಿ ಅಸಹಾಯಕನಾಗಿ ಬಿದ್ದಿದ್ದ ಜೀತದಾಳು. ಅವನ ಈ ಜೀವನ ವೃತ್ತಾಂತವೂ ನ್ಯಾಯಾಲಯದ ಗಮನಕ್ಕೆ ಬಂದಿತ್ತು. ಆದ್ದರಿಂದ ಅವನ ಬಗ್ಗೆ ನ್ಯಾಯಾಲಯ ಈ ಕಾರುಣ್ಯ ದೃಷ್ಟಿ ವಹಿಸಿತ್ತು. ಉಚ್ಚ ನ್ಯಾಯಾಲಯವೂ ಇದೇ ಕಾರುಣ್ಯ ದೃಷ್ಟಿಯನ್ನು ವಿಸ್ತರಿಸಿ ‘ಕೃತ್ಯ ಮಾಡಿದವನು’ ತಪ್ಪಿಕೊಂಡಾಗ ‘ಕೃತ್ಯ ನೋಡಿದವನೇಕೆ’ ಶಿಕ್ಷೆ ಅನುಭವಿಸಬೇಕು ಎಂದು ಅನುಕಂಪ ತೋರಿಸಿ ಅವನನ್ನು ದೋಷಮುಕ್ತನನ್ನಾಗಿ ಮಾಡಿತು. ಅವನು ಬಿಡುಗಡೆ ಹೊಂದಿದ.
ಇನ್ನು ಡಾ.ಪರಚುರೆಯ ವಿಚಾರಕ್ಕೆ ಬಂದಾಗ ಅವನ ತಪ್ಪೊಪ್ಪಿಗೆ ಖುದ್ದು ರಾಜಿಯಿಂದ, ಸ್ವಬುದ್ಧಿಯಿಂದ, ಸ್ವಇಚ್ಛೆಯಿಂದಲೇ ಮಾಡಿದ್ದೆಂದು ವಿಚಾರಣೆ ಮಾಡಿದ ವಿಶೇಷ ನ್ಯಾಯಾಧೀಶರು ತೀರ್ಮಾನಿಸಿದ್ದುದನ್ನು ಉಚ್ಚ ನ್ಯಾಯಾಲಯದಲ್ಲಿ ಅಪೀಲು ವಿಚಾರಣೆ ಮಾಡಿದ ಮೂವರು ನ್ಯಾಯಮೂರ್ತಿಗಳಲ್ಲಿ ಇಬ್ಬರು ವಿಶೇಷ ನ್ಯಾಯಾಧೀಶರು ಅಭಿಪ್ರಾಯವನ್ನು ಎತ್ತಿಹಿಡಿದರು. ಒಬ್ಬ ನ್ಯಾಯಮೂರ್ತಿ ಅಚ್ಛ್ರುರಾಮ್ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು.ಬಹುಮತದ ಅಭಿಪ್ರಾಯದ ತೀರ್ಪು ಕೊಟ್ಟು ಅವನ ಶಿಕ್ಷೆಯನ್ನು ಕಾಯಂ ಮಾಡಬಹುದಿತ್ತು. ಆದರೆ ಇಬ್ಬರು ಹಿರಿಯ ನ್ಯಾಯಮೂರ್ತಿಗಳು(ಶ್ರೀ ಭಂಡಾರಿ ಮತ್ತು ಖೋಸ್ಲಾ)ಅಲ್ಪಮತದ ಕಿರಿಯ ನ್ಯಾಯಮೂರ್ತಿಗಳ ಅಭಿಪ್ರಾಯವನ್ನು ಅಂಗೀಕರಿಸಿ ಡಾ.ಪರಚುರೆಯನ್ನು ಸಂಶಯದ ಸೌಲಭ್ಯ (Benefit of doubt)ಕೊಟ್ಟು ದೋಷಮುಕ್ತ ಮಾಡಿದರು.
ಮರಣದಂಡನೆಗೆ ಗುರಿಯಾಗಿದ್ದ ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆಯ ಶಿಕ್ಷೆಯನ್ನು ಖಾಯಂ ಮಾಡುವುದೇ ಬೇಡವೆ ಎಂದು ಈ ಅಪೀಲಿನಲ್ಲಿ ಮುಖ್ಯವಾದ ಅಂಶ.
ಕೆಳ ನ್ಯಾಯಾಲಯದಲ್ಲಿ ಅವರ ಪರವಾಗಿ ವಾದಿಸಿದ ವಕೀಲರೇ ಇಲ್ಲಿಯೂ ಅದೇ ವಾದ ಮಂಡಿಸಿದರು. ನಾಥೂರಾಮ್ ಗೋಡ್ಸೆ ಈ ಕೃತ್ಯವನ್ನು ತಾನೊಬ್ಬನೇ ‘ತಲೆಕೆಟ್ಟು’ ಎಸಗಿದ. ಉಳಿದವರೊಡನೆ ಅವನು ಪಿತೂರಿ ಮಾಡಲಿಲ್ಲ. ಅವನೆಸಗಿದ ಕೃತ್ಯಕ್ಕೆ ಅವನೊಬ್ಬನೆ ಭಾಗಿ. ಉಳಿದವರಿಗೆ ಸಂಬಂಧವಿಲ್ಲ ಎಂಬುದು ಅವರ ವಾದದ ತಳಹದಿ. ವಕೀಲರು ಮಂಡಿಸಿದ ವಾದವನ್ನು ಸಮರ್ಥಿಸಿ ಆರೋಪಿ ಗೋಡ್ಸೆ ಕೆಳ ಕೋರ್ಟಿನಲ್ಲಿ ಲಿಖಿತ ಹೇಳಿಕೆಯನ್ನು ಹಾಜರುಪಡಿಸಿದ್ದಲ್ಲದೆ ಅದನ್ನು ಬಹಿರಂಗ ನ್ಯಾಯಾಲಯದಲ್ಲಿ ಓದಿ ಹೇಳಿದ. ಆ ಹೇಳಿಕೆಯನ್ನು ಓದಲು ಐದು ಗಂಟೆ ಕಾಲ ಹಿಡಿಯಿತು. ಅದನ್ನು ಓದುವುದರ ಮುಖ್ಯ ಉದ್ದೇಶ ಪಾಶೀ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಆರೋಪಿ ತನ್ನ ರಾಜಕೀಯ ಸಿದ್ಧಾಂತ, ನಂಬಿಕೆ, ನಿಷ್ಠೆಗಳೇನು ಎಂಬುದನ್ನು ನ್ಯಾಯಾಲಯದಲ್ಲಿ ಪ್ರಕಟಿಸಿ ಪ್ರಸಿದ್ಧಿ ಪಡೆಯಬೇಕೆಂಬುದೇ ಆಗಿತ್ತು. ರಾಜಕೀಯ ಸಿದ್ಧಾಂತ, ಧೋರಣೆಯ ಪ್ರತಿಪಾದನೆಗಾಗಿ ಆರೋಪಿ ನ್ಯಾಯಾಲಯವನ್ನು ವೇದಿಕೆಯನ್ನಾಗಿ ದುರುಪಯೋಗಿಸಿಕೊಳ್ಳಲು ಅವಕಾಶ ಕೊಡಬಾರದೆಂದು ವಿಶೇಷ ಪ್ರಾಸಿಕ್ಯೂಟರ್ ದಫ್ತರಿ ಆರೋಪಿಸಿದರು. ಆದರೂ ಉಚ್ಚನ್ಯಾಯಾಲಯ ಈ ಆಕ್ಷೇಪಣೆಯನ್ನು ತಳ್ಳಿಹಾಕಿ ಆರೋಪಿ ತನ್ನ ಲಿಖಿತ ಹೇಳಿಕೆಯನ್ನು ದಾಖಲಿಸಲು ಮತ್ತು ಅದನ್ನು ಓದಿ ಹೇಳಲು ಅವಕಾಶ ಕೊಟ್ಟರು. ಆ ಹೇಳಿಕೆಯ ಪ್ರಮುಖ ಭಾಗಗಳನ್ನು ಈ ಹಿಂದೆಯೇ ಎತ್ತಿ ತೋರಿಸಲಾಗಿದೆ.
(ಬುಧವಾರದ ಸಂಚಿಕೆಗೆ ಮುಂದುವರಿಯುವುದು)