ವಸತಿ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ವಾಣಿಜ್ಯ ಕಟ್ಟಡಗಳು: ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ನಾಗರಿಕರ ಆಕ್ರೋಶ

Update: 2019-05-04 17:01 GMT

ಮಂಡ್ಯ, ಮೇ 4: ಜನವಸತಿಗೆ ಅಗತ್ಯವಿರುವ ಬಡಾವಣೆ ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ ಕಿಷ್ಕಿಂದೆಯ ನಗರವಾಗಿ ಮಾರ್ಪಟ್ಟಿರುವ ಮಂಡ್ಯ ನಗರದಲ್ಲಿ ತಲೆ ಎತ್ತುತ್ತಿರುವ ವಾಣಿಜ್ಯ ಕಟ್ಟಡಗಳು ಸಮಸ್ಯೆಯನ್ನು ಮತ್ತಷ್ಟು ಗಂಭೀರವಾಗಿಸಿದೆ.

ವಾಣಿಜ್ಯ ಉದ್ದೇಶ ಕಟ್ಟಡ ನಿರ್ಮಾಣಕ್ಕೆ ಸಾಕಷ್ಟು ನಿಬಂಧನೆಗಳಿದ್ದರೂ ಅದನ್ನು ಪಾಲಿಸದಿರುವುದು ಹಾಗೂ ಪಾಲಿಸದೆ ಇರುವವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಜನವಸತಿ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದೆ.
ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ವಾಣಿಜ್ಯ ಸಂಕೀರ್ಣಗಳು, ಸಮುದಾಯ ಭವನಗಳು ನಾಗರಿಕರಿಗೆ ಬಹುದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿವೆ. ಸೂಕ್ತ ಪಾರ್ಕಿಂಗ್ ವ್ಯವಸ್ಥೆಯಿಲ್ಲದೆ ನಿರ್ಮಾಣವಾಗಿರುವ ಈ ಕಟ್ಟಡಗಳು ಮೊದಲೇ ಅವ್ಯವಸ್ಥೆಯ ಆಗರವಾಗಿರುವ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಕಷ್ಟಕರವಾಗಿಸಿದೆ.

ಅಂಗಡಿ ಮುಂಗಟ್ಟು, ಹೊಟೇಲ್‍ಗಳು, ಬ್ಯಾಂಕ್‍ಗಳು, ಮಾಲ್‍ಗಳು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳದೆ ರಸ್ತೆಯನ್ನೆ ಪಾರ್ಕಿಂಗ್ ಲಾಟ್ ಆಗಿ ಪರಿವರ್ತಿಸಿರುವುದರಿಂದ ನಗರದ ಹೃದಯ ಭಾಗದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ವ್ಯವಸ್ಥೆ ನಿತ್ಯದ ಸಮಸ್ಯೆಯಾಗಿ ಕಾಡುತ್ತಿದೆ.
ಒಂದೆಡೆ ಫುಟ್‍ಪಾತ್ ಖಾಸಗಿ ವಾಣಿಜ್ಯ ವ್ಯವಹಾರಸ್ಥರ ಪಾರ್ಕಿಂಗ್ ವ್ಯವಸ್ಥೆಯಾಗಿ ಮಾರ್ಪಟ್ಟಿದ್ದರೆ, ಮತ್ತೊಂದೆಡೆ ಹೆದ್ದಾರಿಯಲ್ಲಿ ಅತಿಯಾದ ವಾಹನ ದಟ್ಟಣೆಯಿಂದಾಗಿ ಪಾದಚಾರಿಗಳು ಸಂಚರಿಸುವುದೇ ದುಸ್ತರವಾಗಿದೆ. ಜೀವ ಬಿಗಿ ಹಿಡಿದು ಸಂಚರಿಸುವಂತಹ ಪರಿಸ್ಥಿತಿ ಬಂದಿದೆ.

ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಸಾಕಷ್ಟು ನಿಬಂಧನೆಗಳಿವೆ. ಸಮುದಾಯ ಭವನಗಳನ್ನು ವಸತಿ ಪ್ರದೇಶಗಳಲ್ಲಿ ನಿರ್ಮಿಸುವಂತೆಯೇ ಇಲ್ಲ. ಹೀಗಿದ್ದರೂ ಅನುಮತಿ ನೀಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರಸಭೆ ಅನುಮೋದಿತ ನಕ್ಷೆಯನ್ನು ಸಾರಾಸಗಟಾಗಿ ಉಲ್ಲಂಘಿಸುತ್ತಿದ್ದರೂ ನಗರಸಭೆ ಇಂಜಿನಿಯರ್ ಗಳು, ರೆವಿನ್ಯೂ ಇನ್ಸಪೆಕ್ಟರ್ ಗಳು ಅಕ್ರಮ ಕಟ್ಟಡಗಳ ಮಾಲಕರಿಂದ ಕಿಕ್‍ಬ್ಯಾಕ್ ಪಡೆದು ಅಕ್ರಮಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ನಗರದ ಕೇಂದ್ರ ಭಾಗದಲ್ಲಿರುವ ಸುಭಾಷ್ ನಗರ, ಅಶೋಕನಗರ, ವಿದ್ಯಾನಗರ, ನೆಹರು ನಗರದ, ಬಂದೀಗೌಡ ಬಡಾವಣೆ ಸೇರಿದಂತೆ ಹಲವು ಪ್ರತಿಷ್ಠಿತ ಬಡಾವಣೆಗಳ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಎಗ್ಗಿಲ್ಲದೆ ಸಾಗಿದೆ.

ಸಾಮಾನ್ಯವಾಗಿ ವಸತಿ ನಿವೇಶನಗಳನ್ನು ಪರಿವರ್ತಿಸುವ ಮುನ್ನ ನಗರಸಭೆ ವ್ಯಾಪ್ತಿಯ ನಿವಾಸಿಗಳು ಮುಡಾದಿಂದ ತಾಂತ್ರಿಕ ಅನುಮೋದನೆ ಪಡೆಯಬೇಕು. ಆದರೆ, ಸಂಬಂಧಿಸಿದ ಕೆಲವು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ತಾಂತ್ರಿಕ ಅನುಮೋದನೆಯಲ್ಲಿ ನಮೂದಿಸಿದ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಲಾಗುತ್ತಿದೆ.

ಮಂಡ್ಯ ನಗರ ಕೇಂದ್ರಸ್ಥಾನದಿಂದ ಮೂರು ಕಿ.ಮೀಗಿಂತ ಹೆಚ್ಚು ವಿಸ್ತಾರಗೊಂಡಿಲ್ಲ. ರಾಜ್ಯ ಸಾರಿಗೆ ಬಸ್ ನಿಲ್ದಾಣದಿಂದ ಕೂಗಳತೆ ದೂರದಲ್ಲಿರುವ ಮಂಡ್ಯ ನಗರದ ಐತಿಹಾಸಿಕ ಕೆರೆ ಮುಚ್ಚಿ ವಿವೇಕಾನಂದ ನಗರ ನಿರ್ಮಾಣವಾಗಿದೆ. ಆದರೆ, ದಶಕಗಳೇ ಕಳೆದರೂ ಇನ್ನೂ ಅದನ್ನು ನಗರಸಭೆ ವ್ಯಾಪ್ತಿಗೆ ಸೇರಿಸುವ ಕೆಲಸ ಆಗಿಲ್ಲ. ನಗರ ವಿಸ್ತಾರಗೊಳಿಸುವ ಪ್ರಯತ್ನದಲ್ಲಿ ಹೊಸ ಬಡಾವಣೆಗಳು ನಿರ್ಮಾಣಗೊಳ್ಳದೆ ಪ್ರಸ್ತುತ ಸೀಮಿತ ಪ್ರದೇಶಗಳಲ್ಲೇ ಕಟ್ಟಡ ನಿರ್ಮಾಣ ಹಾಗೂ ವಾಣಿಜ್ಯ ಚಟುವಟಿಕೆ ನಡೆಯುತ್ತಿದ್ದು, ಹಲವು ಗಂಭೀರ ಸಮಸ್ಯೆಗಳ ಉದ್ಭವಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ನಗರದ ಜನನಿಬಿಡ, ವಾಣಿಜ್ಯ ಪ್ರದೇಶಗಳಾದ ಮಾರುಕಟ್ಟೆ, ಜೈನರ ಬೀದಿ, ಪೇಟೆ ಬೀದಿಗಳಂತೂ ಹಳ್ಳಿಯ ಸ್ವರೂಪದಲ್ಲೇ ಇವೆ. ಒಟ್ಟು ವ್ಯಾಪಾರ ವಹಿವಾಟಿನ ಅರ್ಧದಷ್ಟು ನಡೆಯುವ ಪ್ರದೇಶದ ಸ್ಥಿತಿ ಈ ರೀತಿ ಇದ್ದರೆ, ಗುತ್ತಲು ರಸ್ತೆ, ಅಸ್ಪತ್ರೆ ರಸ್ತೆ, ವಿವಿ ರಸ್ತೆ, 100 ಅಡಿ ರಸ್ತೆ ಹಾಗೂ ಆರ್.ಪಿ ರಸ್ತೆ ಮತ್ತು ಹೆದ್ದಾರಿ ಇಕ್ಕೆಲಗಳು ಸೇರಿದಂತೆ ಬಹುತೇಕ ಕಡೆಗಳಲ್ಲಿ ರಸ್ತೆಗಳ ಒತ್ತುವರಿಯಾಗಿದೆ. ಪಾದಚಾರಿ ರಸ್ತೆಗಳಂತೂ ದಾಖಲೆಯಲ್ಲಿ ಮಾತ್ರ ಎಂಬಂತಾಗಿದೆ. ಇದರಿಂದ ನಗರ ಅಂದಗೆಡುತ್ತಿರುವುದಷ್ಟೇ ಅಲ್ಲದೆ ಸಂಚಾರ ವ್ಯವಸ್ಥೆ ತೀರಾ ಹದಗೆಟ್ಟಿದೆ. ವಸತಿ ಪ್ರದೇಶದಲ್ಲಿ ಜನಜಂಗುಳಿಯ ಪರಿಣಾಮ ಶಬ್ಧಮಾಲಿನ್ಯ, ಪರಿಸರ ಮಾಲಿನ್ಯ ಸೇರಿದಂತೆ ಪರಿಸರ ಸಂಬಂಧಿ ಸಮಸ್ಯೆಗಳು ತಲೆದೋರಿವೆ.

ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಲು ಹಲವು ನಿಯಮಗಳನ್ನು ವಿಧಿಸಿ ಕೆಲ ಸಂದರ್ಭಗಳಲ್ಲಿ ತಾಂತ್ರಿಕ ಅನುಮೋದನೆ ನೀಡಲಾಗುತ್ತದೆ. ಅದನ್ನು ಉಲ್ಲಂಘಿಸಿದವರ ವಿರುದ್ಧ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಸಾರ್ವಜನಿಕರು ನ್ಯಾಯಾಲಯದ ಮೊರೆ ಹೋಗಿ ಈ ಬಗ್ಗೆ ಕ್ರಮ ಕೈಗೊಳ್ಳಬಹುದು ಎಂದು ಮುಡಾ ಇಂಜಿನಿಯರೊಬ್ಬರು ಹೇಳುತ್ತಾರೆ.

ನಗರ ಯೋಜಿತ ಬೆಳವಣಿಗೆಯಲ್ಲಿ ವಿಶಾಲವಾದ ರಸ್ತೆ, ಚರಂಡಿ ಇರಬೇಕು ಎಂಬ ನಿಯಮವಿದೆ. ಇನ್ನೂ ವಾಣಿಜ್ಯ ಪ್ರದೇಶಗಳಲ್ಲಿ ಅಗತ್ಯ ವಾಹನ ನಿಲುಗಡೆ ಸೇರಿದಂತೆ ವಾಣಿಜ್ಯ ಚಟುವಟಿಕೆಗೆ ಪೂರಕವಾದ ಸೌಲಭ್ಯಗಳನ್ನು ಸಂಬಂಧಿಸಿದವರು ಪೂರೈಸಬೇಕು ಎಂಬ ನಿಯಮವಿದೆ. ಇದ್ಯಾವುದು ಮಂಡ್ಯಕ್ಕೆ ಅನ್ವಯಿಸುವುದಿಲ್ಲ ಎಂಬಂತೆ ಜನಪ್ರತಿನಿಧಿಗಳು, ಅಧಿಕಾರಿಗಳು  ಜಾಣ ಮೌನ ವಹಿಸಿರುವ ಪರಿಣಾಮ ಎಲ್ಲೆಂದರಲ್ಲಿ ನಾಯಿಕೊಡೆಗಳಂತೆ  ವಸತಿ, ವಾಣಿಜ್ಯ ಸಂಕೀರ್ಣಗಳು ನಿರ್ಮಾಣವಾಗುತ್ತಿವೆ. 

Writer - ಕುಂಟನಹಳ್ಳಿ ಮಲ್ಲೇಶ

contributor

Editor - ಕುಂಟನಹಳ್ಳಿ ಮಲ್ಲೇಶ

contributor

Similar News