ನೀರಾಯಣ
ವೆಂಕಟೇಶ ಚಾಗಿ, ಲಿಂಗಸುಗೂರ
ಆದಿನ ಬೆಳಗ್ಗೆ ಪೇಪರ್ ಓದುತ್ತಾ ಕುಳಿತಿದ್ದೆ. ಅದೇ ರಾಜಕೀಯ ಸುದ್ದಿಗಳ ನಡುವೆ ಆ ಸುದ್ದಿ ನನ್ನ ಗಮನ ಸೆಳೆಯಿತು. ಅದಾವುದೋ ಮನೆಯಿಂದ ನೀರು ಕಳವಾಗಿದೆ ಎಂದು. ಅರೇ ಇದೆಂಥ ಕಾಲ ಬಂತಪ್ಪ. ಒಡವೆ, ಹಣ ಕಳವಾಗುವುದನ್ನು ಕೇಳಿದ್ದೆ ಆದರೆ ನೀರು ಕಳವಾಗುವುದೆಂದರೇನು ಹಾಗೇನೇ ಪೊಲೀಸ್ ಕಂಪ್ಲೇಂಟ್ ಆಗುವುದೆಂದರೇನು. ತುಂಬಾ ವಿಚಿತ್ರ ಎನಿಸಿತು. ನೀರು ಕಳ್ಳತನವಾಗುವಂತಹ ಪರಿಸ್ಥಿತಿ ಬಂದಿದೆಯೆಂದರೆ ಆ ಊರಿನಲ್ಲಿ ನೀರಿಗೆ ಅದೆಷ್ಟು ಬರ ಇರಬಹುದು ಎಂಬುದನ್ನು ಕಲ್ಪನೆ ಮಾಡಿಕೊಂಡಾಗ ಒಮ್ಮೆ ಮೈ ಜುಮ್ಮೆಂದಿತು. ನಮ್ಮ ಮನೆಯಲ್ಲಿ ನೀರಿಗೇನು ತೊಂದರೆ ಇಲ್ಲ ಬಿಡು ಎಂದು ಮನದೊಳಗೆ ಅಂದುಕೊಳ್ಳುತ್ತಿದ್ದಂತೆಯೇ ‘‘ರೀ ನೀರು ಖಾಲಿ ಆಗಿದೆ. ಟ್ಯಾಂಕ್‌ನವರಿಗೆ ಕಾಲ್ ಮಾಡಿ’’ ಎಂದು ಪ್ರೀತಿಯ ಮಡದಿ ಕೂಗಿದಳು. ‘‘ಇಷ್ಟು ಬೇಗ ನೀರು ಖಾಲಿ ಆಯ್ತಾ? ಐದು ಸಾವಿರ ರೂಪಾಯಿಗೆ ಒಂದು ಟ್ಯಾಂಕ್ ನೀರು. ನೋಡಿ ಬಳಸೋದು ತಾನೆ’’ ಎಂದೆ. ‘‘ಹ್ಹಾ.. ಎಲ್ಲಾ ನಾನೇ ಬಳಸಿದ್ನಾ? ಬಳಸೋವಾಗ ನಿಮಗೂ ಗೊತ್ತಾಗೊಲ್ವಾ’’ ಎಂದು ಸಿಡುಕುತ್ತಿದ್ದಂತೆಯೇ ‘‘ಆಯ್ತು ಬಿಡು ಮಾರಾಯ್ತಿ . ನೀರಿಗೆ ಬುಕ್ ಮಾಡ್ತೇನೆ’’ ಎಂದೆ. ನೀರಿಗೆ ಅದೆಷ್ಟು ಬೆಲೆ ಬಂದಿದೆಯೆಂದರೆ ಬಳಕೆ ಮಾಡೋಕೆ ಒಂದು ಟ್ಯಾಂಕ್ ನೀರು ಬೇಕು ಅಂದ್ರೂ ಬುಕ್ ಮಾಡ್ಬೇಕು. ಐದು ಸಾವಿರ ಕೊಟ್ಟು. ಅರ್ಜೆಂಟ್ ಬೇಕೆಂದರೆ ಹತ್ತು ಸಾವಿರವರೆಗೂ ಕೊಡಬೇಕು. ಎಂಥ ಪರಿಸ್ಥಿತಿ ಬಂತಪ್ಪ ಎಂದುಕೊಂಡೆ. ಮನೆ ಮನೆಗೆ ಇದ್ದ ಬೋರ್ ಗಳಲ್ಲಿ ನೀರು ಬತ್ತಿ ಹೋಗಿದೆೆ. ನದಿ ಕೆರೆಗಳು ನೀರು ಕಂಡು ವರ್ಷಗಳೇ ಉರುಳಿವೆ. ದೊಡ್ಡ ದೊಡ್ಡ ಕೊಡಗಳಲ್ಲಿ ಹಿಡಿದ ಮಳೆ ನೀರು 2-3 ದಿನಕ್ಕೆ ಬಳಕೆಯಾಗುತ್ತೆ. ಮಳೆ ಅಪರೂಪ. ಬಿಸಿ ಹವೆ. ಸರಕಾರದವರು ನಿಮ್ಮ ನಿಮ್ಮ ಮನೆಯ ಚರಂಡಿ ನೀರನ್ನೇ ಮರು ಬಳಕೆ ಮಾಡಿಕೊಳ್ಳಿ ಎಂದು ಆದೇಶ ಮಾಡಿ ಚರಂಡಿ ನೀರನ್ನು ಶುದ್ಧೀಕರಿಸುವ ಯಂತ್ರ ಕೊಟ್ಟಿದ್ದಾರೆ. ಆ ನೀರು ಟಾಯ್ಲೆಟ್‌ಗೆ ಆಗುತ್ತೆ. ನೀರನ್ನು ಜಾಸ್ತಿ ಬಳಸಿದರೆ ಸರಕಾರ ದಂಡ ಹಾಕುತ್ತೆ. ಕುಡಿಯೋಕೆ ಫಿಲ್ಟರ್ ನೀರು ತುಂಬಾ ದುಬಾರಿ. ಫಿಲ್ಟರ್ ನೀರಿರುವ ಪಾತ್ರೆಗೂ ಒಂದು ಪಾಸ್‌ವರ್ಡ್ ಇದೆ. ಬೇಕಾದಾಗ ಮಾತ್ರ ನೀರು ಕುಡಿಯೋಕೆ ತಗೋತೇವೆ. ಅತಿಥಿಗಳಿಗೂ ನಮ್ಮ ಮನೆಗೆ ಬರುವುದಾದರೆ ನೀವು ಕುಡಿಯಬೇಕಾದ ನೀರನ್ನು ಕಡ್ಡಾಯವಾಗಿ ನಿಮ್ಮ ಮನೆಯಿಂದಲೇ ತರಲು ಮನವಿ ಮಾಡಿಕೊಳ್ಳುತ್ತಿದ್ದೆ. ಈ ಪರಿಸ್ಥಿತಿ ನೋಡಿದರೆ ಪತ್ರಿಕೆಯಲ್ಲಿ ಬಂದ ನೀರಿನ ಕಳ್ಳತನದ ಸುದ್ದಿ ನಿಜ ಎನಿಸಿತು. ನಮಗೇನೆ ನೀರಿಲ್ಲ ಎಂದಮೇಲೆ ಗಿಡಗಳಿಗೆ ಇನ್ನೆಲ್ಲಿ ನೀರು? ಎಲ್ಲಾ ಬಯಲು ಬಯಲು. ಅಪರೂಪಕ್ಕೆ ಆಗಾಗ ಒಂದೆರಡು ಮೋಡಗಳು ಇಣುಕಿದರೂ ನಮ್ಮನ್ನು ಕಂಡು ಓಡಿಬಿಡುತ್ತವೆ.
ಅಷ್ಟೊತ್ತಿಗೆ ನೀರಿನ ಕಂಪೆನಿಯಿಂದ ಕಾಲ್ ಬಂತು ‘‘ಸರ್ ಫುಲ್ ಟ್ಯಾಂಕ್ ಇಲ್ಲ. ಹಾಫ್ ಇದೆ. ಈಗ ಬೇಕು ಅಂದ್ರೆ ಈಗ್ಲೆ ಕಳಿಸ್ತೇವೆ. ಫುಲ್ ಟ್ಯಾಂಕ್ ಬೇಕು ಅಂದ್ರೆ ಎರಡು ಮೂರು ದಿನ ತಡವಾಗುತ್ತೆ’’ ಅಂದ್ರು. ‘‘ಅಯ್ಯೋ ಅಷ್ಟೇ ಸಾಕು ಬೇಗ ಕಳಿಸಿ ಸಾರ್ ಮನೇಲಿ ಕಾಟ ತಡೆಯೋಕಾಗ್ತಿಲ್ಲ’’ ಎಂದೆ. ‘‘ರೀ ನೀರು ಬುಕ್ ಮಾಡಿದ್ರಾ? ಯಾವಾಗ ಬರುತ್ತಂತೆ?’’ ಮೇಲಿಂದ ಮೇಲೆ ಮಡದಿಯ ಪ್ರಶ್ನೆ. ‘‘ಫೋನ್ ಮಾಡಿದಿನಿ ಕಳಿಸ್ತಾರೆ ಇರೆ’’ ಎಂದು ಸಮಾಧಾನ ಪಡಿಸಿದೆ. ನೀರು ಆಫೀಸ್‌ನಲ್ಲಿ ಕೆಲಸಮಾಡುವವರು ನನಗೆ ಪರಿಚಯ ಇದ್ದುದರಿಂದ ಬೇಗ ನೀರು ಕಳಿಸಿ ಕೊಟ್ಟರು. ಹೊರಗಡೆ ನೀರಿನ ಗಾಡಿ ಬಂದಿದ್ದನ್ನು ಕಂಡು ನನಗೆ ಖುಷಿಯಾಗಿ ‘‘ನೀರು ಬಂತು ಕಣೆ ನೀರು ಬಂತು’’ ಎಂದು ಜೋರಾಗಿ ಕಿರುಚಿದೆ. ನೀರು ಬರದಿದ್ದರೆ ನೀರು ಬರುವ ತನಕ ನನ್ನ ಗತಿ ಏನು ಎಂದು ಯೋಚನೆ ಮಾಡುತ್ತಿರುವಾಗ ನೀರು ಬಂದಿದ್ದು ನಂಗೆ ತುಂಬಾ ಖುಷಿ ಆಯ್ತು. ‘‘ಮತ್ತೆ ಜೋರಾಗಿ ನೀರು ಬಂತು ಕಣೆ ನೀರು’’ ಎಂದು ಕೂಗಿದೆ. ಬೇಗ ನೀರು ಬಂದ ಖುಷಿಯಿಂದ ಕಣ್ಣು ಮುಚ್ಚಿ ದೇವರಿಗೆ ನಮಸ್ಕಾರ ಮಾಡಿದೆ. ಅದೇಕೋ ಮುಖದ ಮೇಲೆ ನೀರು ಬಿದ್ದಂಗಾಯ್ತು. ಕಣ್ಣು ತೆಗೆದು ನೋಡಿದಾಗ ಪ್ರೀತಿಯ ಮಡದಿ ಮುಖಕ್ಕೆ ನೀರು ಎರಚಿ ‘‘ಹೌದ್ರಿ ನಲ್ಲಿಲಿ ನೀರು ಬಂದಿದೆ. ಸಿಂಟ್ಯಾಕ್ಸ್‌ಗೆ ಏರಿಸಿ ಹೋಗಿ. ಬರೀ ಕನಸು ಕಾಣೋದೇ ಆಯ್ತು’’ ಎಂದಳು. ಹ್ಹಾ .. ನಾನು ಇಷ್ಟೊತ್ತು ಕಂಡಿದ್ದು ಕನಸಾ? ಎಂದು ಮನದಲ್ಲೇ ಅಂದುಕೊಂಡು ನಾ ಕಂಡಂದು ಕನಸು ಎಂಬುದನ್ನು ನಂಬದಾದೆ. ಹಾಸಿಗೆಯಿಂದ ಮೇಲೆದ್ದು ಹೊರಬಂದು ನೋಡಿದಾಗ ನಳದಲ್ಲಿ ನದಿಯಿಂದ ಬರುತ್ತಿದ್ದ ಸಿಹಿ ನೀರು ಚರಂಡಿಗೆ ಹರಿಯುತ್ತಿತ್ತು. ಚರಂಡಿಯಂತೂ ಹೊಳೆಯಂತೆ ಹರಿಯುತ್ತಿತ್ತು.
‘‘ಅಯ್ಯೋ ಅಯ್ಯ ಎಷ್ಟು ನೀರು ಹಾಳಾಗ್ತಿದೆ’’ ಎನ್ನುತ್ತಾ ನಲ್ಲಿ ಆಫ್ ಮಾಡಿದೆ. ಕನಸಿನಲ್ಲಿ ಕಂಡ ಪರಿಸ್ಥಿತಿ ನೆನೆದು ನೀರು ಬರುತ್ತಿದ್ದ ನಳಕ್ಕೆ ಒಂದು ದೊಡ್ಡ ನಮಸ್ಕಾರ ಹಾಕಿದೆ. ಎತ್ತರವಾಗಿ ಬೆಳೆದು ಮನೆಗೆ ಅಂಗಳಕ್ಕೆ ತಂಪು ನೆರಳು ನೀಡುತ್ತಿದ್ದ ಮರಕ್ಕೆ ಮನದಲ್ಲೇ ನಮಸ್ಕರಿಸಿದೆ.