ನಾ ಹ್ಯಾಂಗ ಮರೆಯಲಿ ನಿನ್ನಾ...

Update: 2019-05-04 17:19 GMT

ಪುಷ್ಪಲತಾ. ಎಂ

ಸಪ್ತಪದಿ ತುಳಿದು ತವರುಮನೆ ತೊರೆದು ಬಂಧು ಬಾಂಧವರಿಗೆಲ್ಲ ವಿದಾಯ ಹೇಳಿ ಬಸ್ಸನ್ನೇರಿ ಮದುವಣಗಿತ್ತಿಯ ಅಲಂಕಾರದ ಜತೆ ಪತಿಯ ಮನೆ ಸೇರಿದಾಗ ನನ್ನ ಜತೆಯಾದವಳು ನೀನು. ತದನಂತರ ಕರ್ತವ್ಯದ ಕರೆಗೆ ಓಗೊಟ್ಟು ಬಾಡಿಗೆ ಮನೆಗೆ ಬಂದಾಗ ತೆಪ್ಪಗೆ ನನ್ನ ಜತೆ ಪಯಣಿಸಿದವಳು ನೀನು. ಅಂದಿನಿಂದ ಇಂದಿನವರೆಗೂ ನನ್ನ ಕಷ್ಟಸುಖಗಳಲ್ಲಿ ಸಮಭಾಗಿಯಾಗಿ ಜೀವನ ಜೋಕಾಲಿಯನ್ನು ಸರಿದೂಗಿಸುತ್ತಾ ಮನೆಗೆ ಬೆಳಕಾಗಿ ಮನಕೆ ಮುದವಾದವಳು ನೀನು. ಮರೆಯಲುಂಟೇ ನಿನ್ನ ಹೇಳೇ....

ನನ್ನ ಪ್ರತಿದಿನದ ಧಾವಂತ, ಕೆಲಸದ ಒತ್ತಡ, ಬೆಳಗಿನ ಅವಸರಗಳನ್ನೆಲ್ಲ ಕಂಡು ನೋಯುತ್ತಾ, ಕೆಲಸ ಬೊಗಸೆಗಳಿಗೆಲ್ಲ ವೇಗ ನೀಡಿದೆಯಲ್ಲ! ಅನಿವಾರ್ಯ ಸಂದರ್ಭಗಳಲ್ಲಿ, ಕೆಲಸದ ಗುಂಗಿನಲ್ಲಿ, ಸಮಯದ ಅಭಾವಗಳ ನಡುವೆ ನಿನಗೆ ಹೆಚ್ಚೇ ಎನಿಸುವಷ್ಟು ಕೆಲಸಕೊಟ್ಟು ಹಿಂಸಿಸಿದೆನಲ್ಲ ನಾನು?

ನೆಂಟರಿಷ್ಟರು, ಬಂಧುಮಿತ್ರರು, ಹಬ್ಬಹರಿದಿನಗಳೆಂದಾಗ ಹಗಲಿರುಳೆನ್ನದೆ, ನಿನ್ನ ಕಡೆ ಕರುಣೆಯ ನೋಟವನ್ನೂ ಬೀರದೇ ಹಿಂಡಿ ಹಿಪ್ಪೆ ಮಾಡಿದೆನಲ್ಲ! ಆದರೂ ತುಟಿಪಿಟಿಕ್ಕೆನ್ನದೆ ನನ್ನೆಲ್ಲ ಗಡಿಬಿಡಿಗಳಿಗೂ ಸಾವಧಾನದಿಂದಲೇ ಸ್ಪಂದಿಸಿದ ನಿನ್ನ ತಾಳ್ಮೆಗೆ ಪದಗಳುಂಟೇ ಹೇಳು? ಅದಾವ ಪ್ರಶಸ್ತಿ ಉಡುಗೊರೆಗಳೂ ನಿನ್ನ ತುಂಬು ದುಡಿಮೆಗೆ ಸಾಟಿಯೇ?

ನನಗಿನ್ನೂ ನೆನಪು ಹಸಿರಾಗಿದೆ. ನನ್ನೀರ್ವರು ಮಕ್ಕಳು ಚಿಕ್ಕವರಿದ್ದಾಗ ಕ್ಷಣ ಕ್ಷಣಕ್ಕೂ, ಹಸಿ-ಬಿಸಿಯೆಂದು ನೋಡದೆ ನಿನ್ನ ಸಹನೆಗೆ ಸಹ್ಯವೋ ಎಂದರಿಯದೆ ದುಡಿಸಿ ನಿನ್ನ ಬೆವರಿಳಿಸುತ್ತಿದ್ದೆ. ಮಧ್ಯಾಹ್ನದ ಸುಡುಬಿಸಿಲಿನಲ್ಲೂ ನೀನು ಶಕ್ತಿಮೀರಿ ತಿರುತಿರುಗಿ ಬಿಸಿಯಾಗುತ್ತಿದ್ದರೂ ಬಿಡದೆ ನಿನ್ನನ್ನು ಉಪಯೋಗಿಸಿದೆ. ಒಂದೆರಡು ಅಂಗಗಳು ನಾವೊಲ್ಲೆವೆಂದಾಗ ಅವುಗಳಿಗೆ ಸಾಣೆ ಹಿಡಿಸಿ ಮತ್ತೆ ನಿನ್ನ ಒರೆಹಚ್ಚಿದೆ.

ಅಯ್ಯೋ.....ಅದೇಕೆ ಕಣೇ ಒಂದುದಿನ, ಒಂದೇ ಒಂದು ದಿನವಾದರೂ ನಾ ಒಲ್ಲೆ -ನಿನ್ನ ಕೆಲಸದ ಒತ್ತಡ ಮುಗಿಯದ ನರಕ, ನನ್ನಿಂದಾಗದೆಂಬ ಸೊಲ್ಲೇ ಎತ್ತಿಲ್ಲವಲ್ಲೇ! ಅದೆಂತಹಾ ತಾಳ್ಮೆ, ಕ್ಷಮೆ, ದೃಢತೆ, ಇಚ್ಛಾಶಕ್ತಿಗಳ ಸಂಗಮವೇ ನೀನು? ಕೋಪವೆಂದರೇನೆಂದೇ ನಿನಗರಿಯದಲ್ಲೇ....?

ಓಹ್... ಮಧ್ಯರಾತ್ರಿ... ಗಂಟೆ ಹನ್ನೆರಡಾಯಿತು. ನನ್ನ ಯೋಚನಾಲಹರಿಗೆ ಕದವಿಕ್ಕಿ ನಾಳೆ ಬರುವ ನೆಂಟರಿಷ್ಟರಿಗೆ ಬಗೆಬಗೆಯ ಭಕ್ಷಗಳ ತಯಾರಿಯ ಸುದೀರ್ಘ ಪಟ್ಟಿಯನ್ನು ಮೆಲುಕುತ್ತಾ ಅಡುಗೆ ಮನೆ ಒಪ್ಪಮಾಡಿ ಬೆನ್ನು ಹಾಸಿಗೆಯ ನೇವರಿಸಿದಾಗ ನಿದ್ರೆ ತಾನಾಗಿ ಆವರಿಸಿತ್ತು.

ಧಾವಂತದಿಂದಲೇ ಬೆಳಗೆದ್ದು ಗಡಿಯಾರ ನೋಡಿದಾಗ ಗಂಟೆ ಆರು. ಛೆ....ಅಲರಾಂನ್ನು ಕಡೆಗಣಿಸಿ ಮಲಗಿದ ಮೌಢ್ಯತೆಗೆ ಮರುಗುತ್ತಾ ದಾಪುಗಾಲು ಹಾಕಿ ಅಡುಗೆ ಮನೆಗೋಡಿ ಬಂದು ಕುಕ್ಕರ್ ಜೋಡಿಸಿ, ಒಂದಷ್ಟು ತರಕಾರಿ ಹೆಚ್ಚಿ ಮಾಡಬೇಕಾದ ಭಕ್ಷಗಳಿಗೆ ಮಸಾಲೆ ರುಬ್ಬುವ ಕೆಲಸ ನಿನಗೆ ಕೊಡೋಣವೆಂದುಕೊಂಡೆ ನೋಡು! ಅದೇನು ದುರದೃಷ್ಟವೋ ಕಾಣೆ ನಿನಗೇನು ಕೋಪವೋ ತಿಳಿಯದು, ಎಷ್ಟು ತಿರುಗಿಸಿದರೂ ನಿನ್ನ ಸದ್ದೇ ಇಲ್ಲ...! ಸಣ್ಣ ಪುಟ್ಟ ಏಟು ನೀಡಿ, ಮೇಲೆ ಕೆಳಗೆ ಕುಲುಕಿದರೂ ಸುದ್ದಿಯೇ ಇಲ್ಲ. ನಿರಂತರ ದುಡಿಮೆಯ ನಿನ್ನ ದೇಹ ನೀರವ ಮೌನವನ್ನು ಮೈಗೂಡಿಸಿಕೊಂಡಿದೆಯಲ್ಲ! ಏಕೆ ಪ್ರಿಯೇ, ನಾ ಮಾಡಿದ ತಪ್ಪಾದರೂ ಏನು? ಅದಾವ ಅಗೋಚರ ಕಾಯಿಲೆ ನಿನ್ನ ಬಾಧಿಸುತ್ತಿದೆ ಹೇಳು? ಅನ್ಯ ಪರಿಹಾರವಿಲ್ಲದೇ ನಿನ್ನ ಕೆಲಸಗಳಿಗಾಗಿ ಪರರನ್ನಾಶ್ರಯಿಸಬೇಕಾದ ದುರ್ಗತಿ. ಮನಸ್ಸಿನ ತುಂಬಾ ನೆಂಟರಾಗಮನದ ಗಡಿಬಿಡಿ. ಆದರೂ ನಾಲಿಗೆ ತುದಿಯಲ್ಲಿ ಛೆ..ಛೆ.. ಎಂಬ ದನಿ ನನಗರಿವಿಲ್ಲದೇ ಬಂದು ನಿನ್ನ ಬಗ್ಗೆ ಮೌನ ಗಾನ ಮೀಟುತ್ತಿದೆಯಲ್ಲಾ. ಇವೆಲ್ಲದರ ಅರಿವಿದ್ದರೂ ಏನೂ ಆಗಿಲ್ಲವೇನೋ ಎಂಬಂತೆ ಮೌನಗೌರಿಯಂತೆ ತೆಪ್ಪಗೆ ಮುದುಡಿ ಮೂಲೆ ಸೇರಿರುವಿಯಲ್ಲ.... ಏಕೀ ವೌನ...ಹೇಳೇ ಗೆಳತಿ? ಹೊಂಗನಸುಗಳೊಂದಿಗೆ ಪತಿಯ ಮನೆಗಾಗಮಿಸಿದ ನನಗೆ ಜತೆಯಾದವಳಲ್ಲವೇ ನೀನು? ಇಂದು ಮಾತ್ರ ನಿನ್ನ ನಡತೆ ಸಹ್ಯವೇನೇ ಹೇಳು? ಸಿಹಿಯಡುಗೆ ಉಂಡುಹೋದ ನೆಂಟರು ಮರೆಯಾಗುವವರೆಗೂ ಹೊರಗಿದ್ದು ಒಳ ಬಂದಾಗ ಮತ್ತೆ ನನಗೆ ನಿನ್ನ ಅನಾರೋಗ್ಯದ್ದೇ ಚಿಂತೆ. ಯಜಮಾನರನ್ನು ಕರೆದು ನಿಜ ವಿಚಾರ ಅವರಿಗೆ ತಿಳಿಸಬೇಕು...

ಅಲ್ಲಾ.. ಈ ಯಂತ್ರಗಳಿಗೆ ಎಷ್ಟು ಬಾಳಿಕೆ ಇದೆ ಹೇಳು? ಅವೇನು ಮನುಷ್ಯರೇ? ಅದರಲ್ಲೂ ನಿನ್ನ ಈ ಮಿಕ್ಸಿ ದ್ವಿಶತಕ ಬಾರಿಸಿ ಮುನ್ನುಗ್ಗುತ್ತಿದೆ. ಅದಕ್ಕೂ ರೆಸ್ಟ್ ಬೇಡವೇ? ಸಾಕು.... ಮಾರುಕಟ್ಟೆಯಲ್ಲಿ ಮನೋಹರವಾದ ಹೊಸ ಹೊಸ ವಿನ್ಯಾಸದ ಮಿಕ್ಸಿಗಳು, ರುಬ್ಬುವ ಯಂತ್ರಗಳು ಬಂದಿವೆ. ಎಷ್ಟೆಂದು ಅಪ್ಪ ನೆಟ್ಟ ಆಲದ ಮರ ಅಂತ ಒಂದನ್ನೇ ನಂಬುತ್ತೀಯ? ಅದನ್ನು ಚೀಲಕ್ಕೆ ತುಂಬಿಸಿ ಕೊಡು, ಪೇಟೆಗೆ ಹೋಗಿ ಬದಲಾಯಿಸಿ ಹೊಸತನ್ನು ತರೋಣ.....

ಛೆ....ಮತ್ತೂ ಯಾಕೋ ಮನತುಂಬಾ ನೋವು. ಮರೆಯಲೆಂತು ಗೆಳತಿ ನಿನ್ನ ಕಾರ್ಯ ವೈಖರಿ.. ಒಂದು ಬಾರಿ ಒಂದೇ ಒಂದು ಬಾರಿ ಕೋಪ, ಬಿಗುಮಾನ ಮರೆತು ಕಿರ್ರ್‌.... ಎನ್ನು. ನಿನ್ನ ಬದಲಾಯಿಸುವ ಮಾತೇ ಇಲ್ಲ... ಹೊಡೆದು ಬಡಿದು ಅಲುಗಾಡಿಸಿದರೂ ಸದ್ದಿಲ್ಲ, ಸೊಲ್ಲಿಲ್ಲ. ಪತಿರಾಯರ ಆಣತಿಯಂತೆ ನೀ ಚೀಲ ಸೇರಿದೆಯಲ್ಲ. ಸಾಗಿತ್ತು ನಮ್ಮ ಪಯಣ ಪಟ್ಟಣದ ಕಡೆಗೆ. ಏಸಿ ಶೋರೂಂ ತುಂಬಾ ನಿನ್ನ ಜಾತಿ ಬಾಂಧವರ ದಂಡೋ ದಂಡು! ವಿವಿಧ ಬಣ್ಣ, ವಿನ್ಯಾಸ, ಕೆಲಸದ ವೈಖರಿ, ಗ್ಯಾರಂಟಿ, ವಾರಂಟಿಗಳು. ಆದರೂ ನನ್ನ ಮಾತು ಇದನ್ನೇ ಸ್ವಲ್ಪ ರಿಪೇರಿ ಮಾಡಿ ಕೊಡ್ತೀರಾ...? ಅಂಗಡಿಯಾತನೋ ಗರಂ; ಇಪ್ಪತ್ತನಾಲ್ಕು ವರ್ಷ ಆಯಿತು ಅಂತೀರಾ ಮೇಡಂ.. ಮಿಕ್ಸಿ ಇನ್ನೆಷ್ಟು ವರ್ಷ ಬಾಳಬೇಕು ಹೇಳಿ? ಇದೇ ಮಹಾನ್ ಎನ್ನಬೇಕೇ ...

ಕೊನೆಯ ವಿದಾಯ ಹೇಳುತ್ತಾ ನಿನ್ನ ಮೈಸವರಿಕೊಂಡಿದ್ದ ನನ್ನ ಕಣ್ಣಂಚಿನಲ್ಲಿ ನೀರು ಕಂಡ ಅಂಗಡಿಯಾತ ಮುಸಿಮುಸಿ ನಗುತ್ತಾ ನಿನ್ನನ್ನು ಗೋಡೌನಿನೊಳಗೆ ತುರುಕಿದಾಗ ನನ್ನ ಕರುಳೇ ಬಾಯಿಗೆ ಬಂದಿತ್ತು ನೋಡು. ಹಗಲಿರುಳೆನ್ನದೆ ನನಗಾಗಿ ನನ್ನ ಮನೆಗಾಗಿ ದುಡಿದೆ. ನೀ ಯಂತ್ರವೇ ಆಗಿದ್ದರೂ ನನ್ನ ಉಸಿರ ಏರಿಳಿತವನ್ನೂ ಅರಿತಿದ್ದೆ. ಮರೆಯಲುಂಟೇ ನಿನ್ನ? ನೀನಿತ್ತ ಕಾಯಕಕ್ಕೆ ಎಣೆಯುಂಟೆ ಹೇಳು.? ಅಂದು ನೀನಿದ್ದ ಜಾಗವನ್ನು ಇಂದು ಹೊಸಬರು ಆಕ್ರಮಿಸಿರಬಹುದು. ಆದರೆ ನೀನು ನನ್ನವಳು..ಎಂದೆಂದಿಗೂ ನನ್ನವಳು. ನಾ ಹ್ಯಾಂಗ ಮರೆಯಲೇ ನಿನ್ನಾ.....

Writer - ಪುಷ್ಪಲತಾ. ಎಂ

contributor

Editor - ಪುಷ್ಪಲತಾ. ಎಂ

contributor

Similar News