ಕಲಿಕೆ ವಿವಿಧ ಹಂತಗಳಲ್ಲಿ... 3
ಯೋಗೇಶ್ ಮಾಸ್ಟರ್
ಅಧ್ಯಯನ ಮತ್ತು ಅರಿವು
ಕಲಿಕೆಯೆಂಬ ಪ್ರಕ್ರಿಯೆ
ಭಾಗ-19
► ಹಲ್ಲುಜ್ಜಲು ಕಲಿಸಿ
ಮಗುವು ಆರರಿಂದ ಏಳು ವರ್ಷಕ್ಕೆ ಬರುವ ಹೊತ್ತಿಗೆ ತಾನೇ ಜವಾಬ್ದಾರಿಯಿಂದ ಬೆಳಗ್ಗೆ ಮತ್ತು ರಾತ್ರಿ ಹಲ್ಲುಜ್ಜುವುದು ಅಭ್ಯಾಸವಾಗಿರಬೇಕು. ಚೆನ್ನಾಗಿ ನೆನಪಿನಲ್ಲಿಡಿ. ಅಗತ್ಯವಾದ ಮತ್ತು ಸದೃಢವಾದಂತಹ ಕೌಶಲ್ಯಗಳು ರೂಪುಗೊಳ್ಳುವುದೇ ಈ ಸಣ್ಣ ವಯಸ್ಸಿನಲ್ಲಿ. ಈಗೀಗಂತೂ ಸಣ್ಣ ಸಣ್ಣ ಮಕ್ಕಳಿಗೆ ದಂತಕುಳಿಗಳು, ಹಲ್ಲಿನ ಸಮಸ್ಯೆಗಳು ಬಹಳವಾಗಿ ಕಾಣುತ್ತಿವೆ. ಮಕ್ಕಳು ತೀರಾ ಸಣ್ಣವರಾಗಿದ್ದಾಗ, ಸರಿಸುಮಾರು ಮೂರು ವರ್ಷದ ಮಗುವಿಗೆ ಹಿರಿಯರು ತಾವೇ ಅವರ ಹಲ್ಲನ್ನು ಉಜ್ಜಿ ತೋರಿಸಬೇಕು. ನಾನು ಬಹಳಷ್ಟು ಜನರನ್ನು ಗಮನಿಸಿದ ಹಾಗೆ ದೊಡ್ಡವರಿಗೇ ಹಲ್ಲುಜ್ಜಲು ಬರುವುದಿಲ್ಲ. ಬ್ರಷ್ಶನ್ನು ಅಡ್ಡಾವಾಗಿ ಹಿಡಿದು ಎಡಕ್ಕೆ ಬಲಕ್ಕೆ ಆಡಿಸುತ್ತಾರೆ ಅಥವಾ ನೇರವಾಗಿ ಹಿಡಿದುಕೊಂಡು ಮೇಲಕ್ಕೆ ಕೆಳಕ್ಕೆ ಆಡಿಸುತ್ತಾರೆ. ಆದರೆ, ಸರಿಯಾದ ಕ್ರಮವೆಂದರೆ, ಅಡ್ಡವಾಗಿ ಹಿಡಿದ ಬ್ರಶನ್ನು ವೃತ್ತಾಕಾರವಾಗಿ ತಿರುಗಿಸುತ್ತಾ ತಿರುಗಿಸುತ್ತಾ ಉಜ್ಜುವುದು. ಒಳಗೆ, ಮೇಲೆ, ಮುಂದಿನ ಹಲ್ಲುಗಳ ಹಿಂಭಾಗದಲ್ಲಿ ಕೂಡಾ ಬ್ರಶನ್ನು ಆಡಿಸಬೇಕು. ಇಲ್ಲವಾದರೆ, ಆಹಾರದ ಕಣಗಳು ಮೆತ್ತಿಕೊಂಡಿರುತ್ತವೆ ಅಥವಾ ಪೇಯದ ಲೇಪ ಅಂಟಿಕೊಂಡೇ ಇರುತ್ತದೆ. ಅದು ಕ್ರಮೇಣ ಕಿಟ್ಟವಾಗಿ ಪರಿಣಮಿಸುತ್ತದೆ. ಮಗುವು ಪ್ರಾಯಶಃ ಎಂಟು ವರ್ಷದವರೆಗೂ ಇದರ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳದೇ ಇರಬಹುದು. ಆದರೆ, ರೂಢಿ ಮಾಡಿಸುವ ವಿಷಯದಲ್ಲಿ ಪೋಷಕರು ಹಿಂದೆ ಬೀಳಬಾರದು.
► ಬಟ್ಟೆಯಲ್ಲಿ ಅಚ್ಚುಕಟ್ಟುತನ
ತನ್ನ ಬಟ್ಟೆಯು ಗಲೀಜಾಗದಂತೆ ನೋಡಿಕೊಳ್ಳುವುದು, ಸ್ವಲ್ಪವೇ ಗಲೀಜಾದರೂ ಅದನ್ನು ತಕ್ಷಣವೇ ತೊಳೆದುಕೊಳ್ಳುವುದು ಇತ್ಯಾದಿ ಅಚ್ಚುಕಟ್ಟುತನವನ್ನು ಕಲಿಸಬೇಕು. ಮಕ್ಕಳು ಹೇಗೆಂದರೆ ಹಾಗೆ ಆಡುವಾಗ, ಬೀದಿಯಲ್ಲಿ ಆಟಗಳನ್ನು ಆಡುವಾಗ, ಶಾಲೆಯಲ್ಲಿ ಕ್ರೀಡೆಗಳನ್ನು ಆಡುವಾಗ ಬಟ್ಟೆ ಸಹಜವಾಗಿಯೇ ಕೊಳೆಯಾಗುತ್ತದೆ. ಆದರೆ, ಆಟವಾಡಲು, ಕ್ರೀಡೆಯಲ್ಲಿ ಭಾಗವಹಿಸಲು ಸೂಕ್ತವಾದಂತಹ ಮತ್ತು ಆಟಕ್ಕೆ ಮೀಸಲಾಗಿರುವಂತಹ ಬಟ್ಟೆಗಳನ್ನು ತೊಟ್ಟುಕೊಳ್ಳುವಂತಹ ಅಚ್ಚುಕಟ್ಟುತನ ಕಲಿಸಬೇಕು. ಏಕೆಂದರೆ, ಇತರ ಬಟ್ಟೆಗಳನ್ನು ಹಾಕಿಕೊಂಡು ಎಲ್ಲವನ್ನೂ ಕೊಳೆ ಮಾಡಿಕೊಳ್ಳುವ, ಹರಿದುಕೊಳ್ಳುವ ರೂಢಿ ಮಾಡಿಸಬಾರದು. ತೆಗೆದ ಬಟ್ಟೆಗಳನ್ನು ಮತ್ತೆ ಮಡಿಸಿಡುವುದು. ಕೊಳೆಯಾದ ಬಟ್ಟೆಯನ್ನು ಒಗೆಯಲು ಹಾಕುವುದು. ತಾವೇ ಬಟ್ಟೆ ಒಗೆಯುವುದು, ಇಸ್ತ್ರಿ ಮಾಡುವುದು ಇತ್ಯಾದಿಗಳನ್ನೆಲ್ಲಾ ಕಲಿಸಿದಿರಾದರೆ, ಪೋಷಕರಿಗೆ ಕೆಲಸದ ಹೊರೆಯೂ ಕಡಿಮೆಯಾಗುತ್ತದೆ ಮತ್ತು ಮಗುವು ಶಿಸ್ತನ್ನೂ ಕಲಿಯುತ್ತದೆ. ವಸ್ತುವಿಗೆ ಗೌರವಿಸುವುದನ್ನೂ ಕಲಿಯುವುದು ಹೀಗೆಯೇ. ಈ ಬಟ್ಟೆಯ ಅಚ್ಚುಕಟ್ಟುತನದ ಜೊತೆಜೊತೆಗೇ, ಮಗುವು ಆರರಿಂದ ಎಂಟು ವರ್ಷದ ಹೊತ್ತಿಗೆಲ್ಲಾ ಶೂ ಕಟ್ಟಿಕೊಳ್ಳಲು, ಅದನ್ನು ತಾನೇ ತೊಳೆದುಕೊಳ್ಳಲು, ಪಾಲಿಶ್ ಹಾಕಿಕೊಳ್ಳಲು ಕಲಿತಿರಬೇಕು. ಇನ್ನು ಮಗುವು ಶಾಲೆಗೆ ಅಥವಾ ಇನ್ನಾವುದಾದರೂ ಸಂಸ್ಥೆಗಳಿಗೆ ಹೋಗುವಾಗ ಕುತ್ತಿಗೆಗೆ ಟೈ ಅಥವಾ ಬೋ ಕಟ್ಟಿಕೊಳ್ಳುವ ಅಗತ್ಯವಿದ್ದರೆ ಅದನ್ನೂ ಮಗುವು ಕಲಿತಿರಬೇಕು.
► ಆರ್ಥಿಕ ನಿರ್ವಹಣೆ
ಮಗುವಿಗೆ ಹಣದ ಬಳಕೆಯ ಬಗ್ಗೆ ಮತ್ತು ಅದನ್ನು ನಿರ್ವಹಿಸುವ ತರಬೇತಿ ಆರಂಭವಾಗಬೇಕಾಗಿರುವುದು ಆರು ವರ್ಷಗಳ ನಂತರ. ಈ ಆರ್ಥಿಕ ನಿರ್ವಹಣೆಯಲ್ಲಿ ಮಗುವು ಕಲಿಯಬೇಕಾದ ಬಹಳಷ್ಟು ಅಂಶಗಳಿವೆ. ಹಣದ ವೌಲ್ಯ:
ಹಣದ ಮುಖ ಬೆಲೆಯನ್ನು ತಿಳಿದು ಕೊಳ್ಳುವುದು ಮತ್ತು ಅದನ್ನು ಕೊಡುವ ಹಾಗೂ ತೆಗೆದುಕೊಳ್ಳುವ, ಕೂಡಿಸುವ ವಿಚಾರದಲ್ಲಿ ಮಾಡಬೇಕಾದ ಸರಳ ಲೆಕ್ಕಾಚಾರಗಳನ್ನು ಕಲಿಯಬೇಕು. ಪಾಕೆಟ್ ಮನಿ:
ಈಗಲೂ ಬಹಳಷ್ಟು ಮನೆಗಳಲ್ಲಿ ಪಾಕೆಟ್ ಮನಿ ಏಕೆ ಕೊಡಬೇಕು? ಬೇಕಾದ ಅಗತ್ಯಗಳಿಗೆಲ್ಲಾ ನಾವು ಕೊಡುತ್ತಿರುತ್ತೇವೆ. ನಿನಗೆ ತಿಂಗಳಿಗೆ ಇಷ್ಟು ಎಂದು ನಾವು ಏಕೆ ಕೊಡಬೇಕು ಎಂಬುದು ಹಲವು ಪೋಷಕರ ಪ್ರಶ್ನೆ. ಆದರೆ, ಅವರ ಅಗತ್ಯಗಳನ್ನು ಪೋಷಕರು ಪೂರೈಸುವವರಾಗಿದ್ದರೂ ಕೂಡಾ, ಅವರ ವ್ಯಕ್ತಿಗತ ಆಸಕ್ತಿ, ಹವ್ಯಾಸ ಮತ್ತು ಆಸೆಗಳಿಗೆ ಪೂರಕವಾದಂತಹ ವ್ಯಾಪಾರಗಳನ್ನು ಮಾಡಲು ಒಂದು ಮಟ್ಟಿಗಿನ ಪಾಕೆಟ್ ಮನಿ ಅಗತ್ಯ. ಆದರೆ ಕೊಟ್ಟರೂ ಅವರು ಹೇಗೆ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಪ್ರತಿಯೊಂದಕ್ಕೆ ಲೆಕ್ಕ ಕೇಳದಿದ್ದರೂ ಒಂದು ಗಮನವಂತೂ ಇಟ್ಟಿರಬೇಕು. ಬಾಲ್ಯದಲ್ಲಿ ಲೆಕ್ಕಾಚಾರದಲ್ಲಿ ಹಣವನ್ನು ವ್ಯಯಿಸುವುದನ್ನು ಕಲಿತರೆ ದುಂದುವೆಚ್ಚದ ರೂಢಿ ಆಗುವುದಿಲ್ಲ. ನೀನು ಏನೇ ಎಷ್ಟೇ ಕೊಂಡರೂ ನಿನಗೆ ಕೊಟ್ಟಷ್ಟರಲ್ಲಿಯೇ ವ್ಯವಸ್ಥೆ ಮಾಡಿಕೊಳ್ಳಬೇಕು. ಪದೇ ಪದೇ ಕೊಡುವುದಿಲ್ಲ ಎಂಬ ಕಠಿಣ ನಿಯಮ ಮಕ್ಕಳಿಗೆ ಲೆಕ್ಕಾಚಾರದಲ್ಲಿ ವೆಚ್ಚ ಮಾಡಲು ನೆರವಾಗುತ್ತದೆ. ಉಳಿತಾಯ:
ಪಿಗ್ಗಿ ಬ್ಯಾಂಕ್ ಒಂದನ್ನು ಕೊಟ್ಟು, ಅದರಲ್ಲಿ ಮನೆಗೆ ಬಂದ ಅತಿಥಿಗಳು ಕೊಡುವ ಹಣ, ತಾವು ಪಾಕೆಟ್ ಮನಿಯಲ್ಲಿ ಉಳಿಸಿದ ಹಣ ಇತ್ಯಾದಿಗಳನ್ನು ಕೂಡಿಸಿಡುವ ಅಭ್ಯಾಸ ಮಾಡಬೇಕು. ಅವರಿಗೂ ತಮ್ಮ ಹುಂಡಿಯಲ್ಲಿ ಬೆಳೆಯುತ್ತಿರುವ ಹಣವನ್ನು ನೋಡಿದರೆ ಖುಷಿಯಾಗುತ್ತದೆ. ಆದರೆ, ಹಣದ ರಾಶಿಯನ್ನೇ ಬೆಳೆಸುವ ಗೀಳಾಗದಂತೆ ಅದನ್ನು ಉತ್ತಮವಾಗಿ ವ್ಯಯಿಸುವ ಅಭ್ಯಾಸ ಕೂಡ ಮಾಡಿಸಬೇಕು. ಈಗ ಕೆಲವು ಬ್ಯಾಂಕಿನವರು ಮಕ್ಕಳಿಗೆಂದೇ ಅಕೌಂಟ್ ತೆರೆದು ಅವರೇ ಹುಂಡಿಯನ್ನು ನೀಡುತ್ತಾರೆ. ಅದರಲ್ಲಿ ಮಗುವು ಶೇಖರಿಸಿಟ್ಟು, ನಂತರ ಆ ಹುಂಡಿಯನ್ನು ಬ್ಯಾಂಕಿಗೆ ಮರಳಿಸಿದರೆ, ಅದರಲ್ಲಿರುವ ಹಣವನ್ನು ಅವರು ಎಣಿಸಿ, ಮಗುವಿನ ಖಾತೆಗೆ ಜಮಾ ಮಾಡಿ ಖಾಲಿ ಹುಂಡಿಯನ್ನು ಮರಳಿಸುತ್ತಾರೆ. ಈ ರೀತಿ ಮಕ್ಕಳಿಗೆ ಪ್ರಾರಂಭದಲ್ಲಿಯೇ ಖರ್ಚು ಮತ್ತು ವೆಚ್ಚದ ಪರಿಚಯದ ಜೊತೆಗೆ ಉಳಿತಾಯದ ಪರಿಚಯವನ್ನೂ ಮಾಡಿಸಬೇಕು.
ಬ್ಯಾಂಕಿನ ಪರಿಚಯ: ಶಾಲೆಯಲ್ಲಿ ಮತ್ತು ಮನೆಯಲ್ಲಿ ಬ್ಯಾಂಕಿನ ವ್ಯವಹಾರಗಳನ್ನು ಮಕ್ಕಳಿಗೆ ಹೇಳಿಕೊಡಬೇಕು. ಚಲನ್ ಬರೆಯುವುದು, ಚೆಕ್ ಬರೆಯುವುದು, ಎಟಿಎಂ ಕಾರ್ಡ್ ಬಳಸುವುದು, ಆನ್‌ಲೈನ್ ಟ್ರಾನ್ಸಾಕ್ಷನ್; ಇತ್ಯಾದಿಗಳನ್ನೆಲ್ಲಾ ಎಂಟು - ಹತ್ತು ವರ್ಷಗಳ ಒಳಗೆ ಕಲಿಸಿರಬೇಕು. ಅವು ಸುಲಭವೂ ಆಗಿರುವುದರಿಂದ ಮತ್ತು ಅಗತ್ಯವೂ ಆಗಿರುವುದರಿಂದ ಯಾವ ಅನುಮಾನಗಳು ಇಲ್ಲದೇ ಕಲಿಸಬೇಕು.
ಗಳಿಕೆಯ ಮಾರ್ಗ: ವಿಶೇಷವಾದ ಹವ್ಯಾಸಗಳನ್ನು ರೂಢಿಸಿಕೊಂಡಿರುವ ಮಕ್ಕಳು ಉತ್ಪಾದನಾ ಕಾರ್ಯದಲ್ಲಿಯೂ ಕೂಡಾ ತೊಡಗಬಹುದು. ಉದಾಹರಣೆಗೆ, ಕರಕುಶಲ ವಸ್ತುಗಳನ್ನು ಮಾಡುವುದು, ಚಿತ್ರ ಬಿಡಿಸಿ ಗ್ರೀಟಿಂಗ್ ಕಾರ್ಡ್ ಅಥವಾ ಗೋಡೆಯ ಮೇಲೆ ತಗಲಿ ಹಾಕುವಂತಹ ಪಟಗಳನ್ನು ಮಾಡಿ ಅದಕ್ಕೆ ಉತ್ತಮ ರೀತಿಯಲ್ಲಿ ಅಂತಿಮ ರೂಪವನ್ನು ಕೊಟ್ಟು ತಮ್ಮ ಮನೆಯಲ್ಲಿ ಸಮಾರಂಭಗಳಾದಾಗ, ಸಮೀಪ ಇರುವ ದೇವಸ್ಥಾನ, ಪಾರ್ಕ್ ಇತ್ಯಾದಿ ಕಡೆಗಳಲ್ಲಿ ಕಡಿಮೆ ಬೆಲೆಗೆ ಅಥವಾ ಸಮರ್ಪಕ ಬೆಲೆಗೆ ಮಕ್ಕಳೇ ಮಾರಬಹುದು. ಮಕ್ಕಳನ್ನು ಉತ್ತೇಜಿಸುವ ದೃಷ್ಟಿಯಿಂದಲೂ ಕೊಳ್ಳುವವರಿರುತ್ತಾರೆ ಮತ್ತು ಅವು ಕೆಲವರಿಗೆ ಅಗತ್ಯವಿರುವ ವಸ್ತುಗಳೇ ಆಗಿದ್ದರೂ ಆಗಬಹುದು. ಆದರೆ, ವೃತ್ತಿಪರತೆಯು ಆ ವಸ್ತುವಿನಲ್ಲಿ ಕಾಣಬೇಕು. ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಶಾಲೆಯಲ್ಲಿಯೂ ಕೂಡಾ ಇಂತಹ ಮೇಳಗಳನ್ನು ಆಯೋಜಿಸಿದರೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮತ್ತು ಬೆಂಬಲವು ದೊರಕಿದಂತಾಗುತ್ತದೆ. ಪೋಷಕರಿಗೂ ಕೂಡಾ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.