ಪ್ರಜಾಪ್ರಭುತ್ವದಲ್ಲಿ ಭಯದ ಉತ್ಪಾದನೆ ಮತ್ತು ಮತ ಯಾಚನೆ
ಕಳೆದ ಒಂದೆರಡು ದಶಕಗಳಲ್ಲಿ ಈ ದೇಶದ ಪರಧರ್ಮ ಸಹಿಷ್ಣುಗಳೂ, ಸಾತ್ವಿಕರೂ ಆದ ಮತ್ತು ತಮ್ಮ ಪಾಡಿಗೆ ತಾವು ಬದುಕುವ ಜನರಲ್ಲಿ ಬಹಳಷ್ಟು ಮಂದಿ (ಮುಖ್ಯವಾಗಿ ಸ್ವಸಂತೃಪ್ತ ಮಧ್ಯಮ ವರ್ಗ) ಪರಧರ್ಮ ದ್ವೇಷಿಗಳಾಗಿ ಪಕ್ಕಾ ಕೋಮುವಾದಿಗಳಾಗಿ ಪರಿವರ್ತಿತರಾಗಿದ್ದಾರೆ. ಇದಕ್ಕೂ ನಮ್ಮ ದೇಶದಲ್ಲಿ ಬೆಂಕಿ ಉಗುಳುವ ಭಾವೋದ್ರೇಕಪೂರಿತವಾದ ಭಾಷಣ ಮಾಡುವ ಕೋಮುವಾದಿ ನಾಯಕರು ಅಧಿಕಾರಕ್ಕೆ ಬರುವುದಕ್ಕೂ ಇರುವ ಕೊಂಡಿಯನ್ನು ಕೋಮು ಹಿಂಸೆಯ ಭಯದ ಮೂಲಕ ಅರ್ಥಮಾಡಿಕೊಳ್ಳಬಹುದು.
1937ರಲ್ಲಿ ಪುಲಿಟ್ಸರ್ ಬಹುಮಾನ ಪಡೆದ ಪ್ರಸಿದ್ಧ ಕೃತಿ ‘ದಿ ಡಿನಾಯಲ್ ಆಫ್ ಡೆತ್’ನ ಲೇಖಕ ಮಾನವ ಶಾಸ್ತ್ರಜ್ಞ ಅರ್ನೆಸ್ಟ್ ಬೆಕರ್, ಮಾನವ ನಾಗರಿಕತೆ ಎಂಬುದು ಅಂತಿಮವಾಗಿ ಮನುಷ್ಯರು ಸಾವು ಮತ್ತು ತಾವು ಒಂದಲ್ಲ ಒಂದು ದಿನ ಖಂಡಿತವಾಗಿಯೂ ಸಾಯುತ್ತೇವೆ ಎಂಬ ಅರಿವಿನ ವಿರುದ್ಧ ಹೂಡಿದ ಒಂದು ದೀರ್ಘಕಾಲೀನ ರಕ್ಷಣಾ ವ್ಯವಸ್ಥೆ ಎಂದು ವಾದಿಸುತ್ತಾನೆ. ಈ ರಕ್ಷಣಾ ವ್ಯವಸ್ಥೆ ಅಥವಾ ‘ಡಿಫೆನ್ಸ್ ಮೆಕ್ಯಾನಿಸಂ’, ಬದುಕಿ ಉಳಿಯಬೇಕೆಂಬ ನಮ್ಮ ಪ್ರಾಥಮಿಕ ‘ಸರ್ವೈವಲ್ ಮೆಕ್ಯಾನಿಸಂ’ಗೆ ನಾವು ಭಾವನಾತ್ಮಕವಾಗಿ ಹಾಗೂ ಬೌದ್ಧಿಕವಾಗಿ ಪ್ರತಿಕ್ರಿಯಿಸುವಂತೆ ಮಾಡುತ್ತದೆ. ಇಂತಹ ಪ್ರತಿಕ್ರಿಯೆಗಳ ಒಟ್ಟು ಮೊತ್ತವೇ ನಮ್ಮ ನಾಗರಿಕತೆ. ಇದರ ಮೂಲದಲ್ಲಿರುವುದು ಭಯ, ಅಂದರೆ ಸಾವಿನ ಭಯ ಮತ್ತು ಸಾವು ಯಾವಾಗ ಬರುತ್ತದೆಂದು ಹೇಳಲಾಗದ ಅನಿಶ್ಚಿತತೆ
ಸಾವನ್ನು, ಸಾವಿನ ಅನಿವಾರ್ಯತೆಯನ್ನು ಉಪೇಕ್ಷಿಸಲು ಅಥವಾ ದೂರ ಮಾಡುವುದಕ್ಕಾಗಿಯೇ ಮನುಷ್ಯನ ಹೆಚ್ಚಿನ ಕ್ರಿಯೆಗಳು, ಕೆಲಸ ಕಾರ್ಯಗಳು ನಡೆಯುತ್ತವೆ. ಈ ಪ್ರಪಂಚದಿಂದ ತಮ್ಮ ಸಂಪೂರ್ಣ ‘ನಿರ್ಮೂಲನ’, ಅಂದರೆ ತಮ್ಮ ಸಾವು ಹಾಗೂ ಸಾವಿನ ಭಯ ಮನುಷ್ಯರಲ್ಲಿ ಎಂತಹ ಆತಂಕವನ್ನು ಸೃಷ್ಟಿಸುತ್ತದೆಂದರೆ ಅವರು ಅದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲೇ ತಮ್ಮ ಬದುಕು ಸವೆಸಿ ಬಿಡುತ್ತಾರೆ. ಹೀಗೆ ಅರ್ಥಮಾಡಿಕೊಳ್ಳುವ ಪ್ರಯತ್ನದ ಪರಿಣಾಮವಾಗಿಯೇ ಅವರು ಹಲವು ರೀತಿಯ ನಂಬಿಕೆಗಳ ಧಾರ್ಮಿಕ ವ್ಯವಸ್ಥೆಗಳನ್ನು, ದೇವರು-ಕಾನೂನು ಕಟ್ಟಳೆಗಳು, ಸಾಹಿತ್ಯ ಸಂಸ್ಕೃತಿಗಳನ್ನು ಕಟ್ಟಿಕೊಳ್ಳುತ್ತಾರೆ ಮತ್ತು ತಾವು ಕಟ್ಟಿಕೊಂಡದ್ದನ್ನು, ರೂಪಿಸಿಕೊಂಡದ್ದನ್ನು ಹಂಚಿಕೊಳ್ಳುವವರನ್ನು, ನಂಬುವವರನ್ನು, ಬದುಕುವವರನ್ನು ತಮ್ಮವರೆಂದು, ತಮ್ಮ ಪಂಗಡದವರು ಅಥವಾ ತಮ್ಮ ಧರ್ಮ ಜಾತಿ ಪಂಥದವರೆಂದು ಇಷ್ಟಪಡುತ್ತಾರೆ. ಇವರಿಗಿಂತ ಬೇರೆಯಾದವರನ್ನು ತಮ್ಮ ‘ಶತ್ರು’ಗಳೆಂದು ತಿಳಿದು ಕಾಲ್ಪನಿಕ ಶತ್ರುಗಳ ಬಗ್ಗೆ ಭಯ ಮತ್ತು ಬಳಿಕ ದ್ವೇಷ ಬೆಳೆಸಿಕೊಳ್ಳಲಾರಂಭಿಸಬಹುದು. ಆಗ ಅವರಲ್ಲಿ ಇಂತಹ ಭಯ ಮತ್ತು ದ್ವೇಷ ಬೆಳೆಯುವಂತೆ ಮಾಡುವ ನಾಯಕರು, ರಾಜಕಾರಣಿಗಳು ಅವರ ನಡುವೆ ಹಲವು ರೀತಿಗಳ ಧ್ರುವೀಕರಣ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಾಗುತ್ತದೆ.
ಧರ್ಮದಲ್ಲಾಗಲಿ, ರಾಜಕಾರಣದಲ್ಲಾಗಲಿ ಹಲವು ರೀತಿಯ ಭಯ ಹುಟ್ಟಿಸುವುದು, ತಕ್ಷಣದ ಭಯದಿಂದ ದೂರದ ಸಾವಿನ ಭಯ ಹುಟ್ಟಿಸಿ ಆ ಭಯದಿಂದ ಹುಟ್ಟುವ ಆತಂಕವನ್ನು ದೂರ ಮಾಡಿ ರಕ್ಷಣೆಯ ಭರವಸೆ ನೀಡುವುದು ಎಲ್ಲ ನಾಗರಿಕತೆಗಳಲ್ಲೂ ಪ್ರಭುತ್ವಗಳು ಮತ್ತು ಸಂಘಟಿತ ಧರ್ಮದ ಅಧಿಕಾರ ಕೇಂದ್ರಗಳು ತಮ್ಮ ಯಜಮಾನಿಕೆ ನಡೆಸಲು ಲಾಗಾಯ್ತಿನಿಂದ ಬಳಸಿಕೊಂಡು ಬಂದ ತಂತ್ರಗಳಾಗಿವೆ. ಭಯದಿಂದ ಮನುಷ್ಯರ ಪರಸ್ಪರ ಸಂಬಂಧಗಳ ಹಾಗೂ ವರ್ತನೆಯ ಮೇಲಾಗುವ ಪರಿಣಾಮಗಳ ಬಗ್ಗೆ ಮನೋ ವಿಜ್ಞಾನಿಗಳು ವಿವರವಾದ ಅಧ್ಯಯನ ನಡೆಸಿದ್ದಾರೆ. ಈ ಕುರಿತಾದ ಒಂದು ಸಿದ್ಧಾಂತವನ್ನು ಮನೋವಿಜ್ಞಾನದಲ್ಲಿ ‘ಟೆರರ್ ಮ್ಯಾನೇಜ್‌ಮೆಂಟ್ ಥಿಯರಿ’ (ಟಿಎಮ್‌ಟಿ)ಅಥವಾ ‘ಭಯ ನಿರ್ವಹಣೆ ಸಿದ್ಧಾಂತ’ ಎಂದು ಕರೆಯಲಾಗಿದೆ.
ಸಾವು ಅನಿವಾರ್ಯವೆಂದು ಮನಗಂಡಾಗ ಸ್ವ-ರಕ್ಷಣೆಗಾಗಿ ಮನುಷ್ಯ ನಡೆಸುವ ಪ್ರಯತ್ನಗಳು ಒಂದು ಮಾನಸಿಕ ತುಮುಲಕ್ಕೆ ಕಾರಣವಾಗಿ, ಆ ತುಮುಲ ಅಥವಾ ಸಂಘರ್ಷದಿಂದ ಭಯ ಹುಟ್ಟಿಕೊಳ್ಳುತ್ತದೆ. ಆಗ ಮನುಷ್ಯರು ಸಹಜವಾಗಿಯೇ ತಮ್ಮ ಜಾತಿ ಪಂಥ ಧರ್ಮ ನಂಬಿಕೆ ಸಾಂಸ್ಕೃತಿಕ ವೌಲ್ಯಗಳಿಗೆ ಆತುಕೊಳ್ಳುತ್ತಾರೆ. ತಾವು ತಮ್ಮ ಸಾಂಸ್ಕೃತಿಕ ಅಥವಾ ಧಾರ್ಮಿಕ ವೌಲ್ಯಗಳ ಅಳತೆಗೋಲಿನಿಂದ ನೋಡಿದಾಗ ಎಷ್ಟರ ಮಟ್ಟಿಗೆ ತಾವು ಇತರರ ದೃಷ್ಟಿಯಲ್ಲಿ ಗೌರವಾರ್ಹರು, ಆತ್ಮ ಗೌರವವುಳ್ಳವರು ಎಂಬುದು ಅವರ ‘ಸ್ವ-ಗೌರವ’ವನ್ನು (ಸೆಲ್ಫ್ -ಎಸ್ಟೀಮ್) ನಿರ್ಧರಿಸುತ್ತದೆ.
ಟಿಎಂಟಿಯ ಪ್ರಕಾರ ಇಂತಹ ಆತ್ಮಗೌರವಕ್ಕೆ ಧಕ್ಕೆಯಾಗುತ್ತದೆ ಎಂದಾಗ ಆಥವಾ ನಾವು ಅನುಭವಿಸುವ ಭಯದಿಂದ ನಮ್ಮನ್ನು ರಕ್ಷಿಸುವ ಧರ್ಮ ಅಥವಾ ಸಂಸ್ಕೃತಿಗೆ ಅಥವಾ ದೇಶದ ಭದ್ರತೆಗೆ ಅಪಾಯ ಬಂದಿದೆ ಅಥವಾ ನಮ್ಮ ನೆರೆಯ ರಾಷ್ಟ್ರ ನಮ್ಮ ಮೇಲೆ ಯುದ್ಧ ಸಾರುವ ಗಂಡಾಂತರ ಎದುರಾಗಿದೆ ಎಂದು ನಾಯಕನೊಬ್ಬ ಸಾಮೂಹಿಕ ಭಯ ಸೃಷ್ಟಿಸಿದಾಗ ಅದು ಆ ನಾಯಕನಿಗೆ ರಾಜಕೀಯವಾಗಿ ಲಾಭದಾಯಕವಾಗಬಹುದು. ದೇಶವನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳಿಂದ ಮತದಾರರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಯುದ್ಧದ ಭಯಕ್ಕಿಂತ ಉತ್ತಮವಾದ ಬೇರೆ ತಂತ್ರ ಇರಲಾರದು. ಕೌಟಿಲ್ಯ ತನ್ನ ‘ಅರ್ಥಶಾಸ್ತ್ರ’ದಲ್ಲೂ ಈ ತಂತ್ರವನ್ನು ಉಲ್ಲೇಖಿಸುತ್ತಾನೆ.
ಒಂದೆಡೆ ಭಯೋತ್ಪಾದಕರು ಎಲ್ಲಿ ಯಾವಾಗ ಎಂದು ಗೊತ್ತಾಗದ ರೀತಿಯಲ್ಲಿ ಅತ್ಯಂತ ಅನಿರೀಕ್ಷಿತವಾಗಿ ಬಾಂಬ್ ದಾಳಿ ನಡೆಸಿ ಅಮಾಯಕರನ್ನು ಕೊಲ್ಲುವ ಭಯವಾದರೆ, ಇನ್ನೊಂದೆಡೆ ಆತ್ಮಾಹುತಿ ದಾಳಿಕೋರ ಯಾವ ಧರ್ಮಕ್ಕೆ ಸೇರಿದವನು ಎಂಬ ನೆಲೆಯಲ್ಲಿ ಹುಟ್ಟಿಕೊಳ್ಳುವ ಸಾಮೂಹಿಕ ಕೋಮು ಹಿಂಸೆಯ ಭಯ. ಶ್ರೀಲಂಕಾದಲ್ಲಿ ನಡೆದ ಚರ್ಚ್ ದಾಳಿಯ ಬಳಿಕ ಅಲ್ಲಿಯ ಅಲ್ಪಸಂಖ್ಯಾತ ಮುಸ್ಲಿಮರನ್ನು ಈಗ ಈ ಭಯ ಕಾಡುತ್ತಿದೆ.
ಮೂಲಭೂತವಾಗಿ ನಾವು ನಮ್ಮ ಜತೆ ಬದುಕುವ ವಿವಿಧ ಧರ್ಮ, ನಂಬಿಕೆ, ಜೀವನ ಶೈಲಿಯ ಜನರ ಜತೆ ವ್ಯವಹರಿಸುವಾಗ ನಮ್ಮ ಮನೋಭಾವ ಹಾಗೂ ವರ್ತನೆಯ ಮೇಲೆ ಭಯ ಮತ್ತು ಆತಂಕ ಪರಿಣಾಮ ಬೀರುತ್ತದೆ. ಇದನ್ನು ತಿಳಿದ ರಾಜಕಾರಣಿಗಳು, ನಾಯಕರು ಮತದಾರರಲ್ಲಿ ಧರ್ಮ ಮತ್ತು ನಂಬಿಕೆಗಳ ನೆಲೆಯಲ್ಲಿ ರಾಜಕೀಯ ಧ್ರುವೀಕರಣ ನಡೆಸಲು ಪ್ರಯತ್ನಿಸುತ್ತಿರುವುದನ್ನು ನಾವೀಗ ನೋಡುತ್ತಿದ್ದೇವೆ. ಭಯೋತ್ಪಾದನೆಯನ್ನು ಯಾವುದೇ ಒಂದು ಕೋಮಿನ ಜತೆ ಸಮೀಕರಿಸಿದಾಗ, ಇನ್ನೊಂದು ಕೋಮಿನವರು ತಮಗರಿವಿಲ್ಲದಂತೆಯೇ ಅಪ್ರಜ್ಞಾಪೂರ್ವಕವಾಗಿ ಆ ಕೋಮಿನ ವಿರುದ್ಧ ಮತ ಚಲಾಯಿಸಬಹುದು. ಹಾಗಾಗಿ ತುಂಬ ಪರ ಧರ್ಮ ಸಹಿಷ್ಣುಗಳಾದ ಜನರು ಕೂಡ ನಮ್ಮ ದೇಶದ ಕೋಮುವಾದಿ ರಾಜಕಾರಣಿಗಳ ಆದೇಶ ಪೂರಿತ ಭಾಷಣದಿಂದ ಪ್ರಭಾವಿತರಾಗುತ್ತಿದ್ದಾರೆ. ಅವರ ರಾಜಕೀಯ ನೀತಿಗಳೇನು? ಅವರ ಅಂತಿಮ ಗುರಿ/ಉದ್ದೇಶಗಳೇನು? ಎಂಬುದನ್ನು ಗಮನಿಸದೆ ಅವರು ಹೇಳುವ ಅಭ್ಯರ್ಥಿಗೆ ಮತ ಚಲಾಯಿಸುವ ಮಾನಸಿಕ ಸ್ಥಿತಿಗೆ ತಲುಪುತ್ತಿದ್ದಾರೆ. ಕಳೆದ ಒಂದೆರಡು ದಶಕಗಳಲ್ಲಿ ಈ ದೇಶದ ಪರಧರ್ಮ ಸಹಿಷ್ಣುಗಳೂ, ಸಾತ್ವಿಕರೂ ಆದ ಮತ್ತು ತಮ್ಮ ಪಾಡಿಗೆ ತಾವು ಬದುಕುವ ಜನರಲ್ಲಿ ಬಹಳಷ್ಟು ಮಂದಿ (ಮುಖ್ಯವಾಗಿ ಸ್ವಸಂತೃಪ್ತ ಮಧ್ಯಮ ವರ್ಗ) ಪರಧರ್ಮ ದ್ವೇಷಿಗಳಾಗಿ ಪಕ್ಕಾ ಕೋಮುವಾದಿಗಳಾಗಿ ಪರಿವರ್ತಿತರಾಗಿದ್ದಾರೆ. ಇದಕ್ಕೂ ನಮ್ಮ ದೇಶದಲ್ಲಿ ಬೆಂಕಿ ಉಗುಳುವ ಭಾವೋದ್ರೇಕಪೂರಿತವಾದ ಭಾಷಣ ಮಾಡುವ ಕೋಮುವಾದಿ ನಾಯಕರು ಅಧಿಕಾರಕ್ಕೆ ಬರುವುದಕ್ಕೂ ಇರುವ ಕೊಂಡಿಯನ್ನು ಕೋಮು ಹಿಂಸೆಯ ಭಯದ ಮೂಲಕ ಅರ್ಥಮಾಡಿಕೊಳ್ಳಬಹುದು. ಪುಲ್ವಾಮ ದಾಳಿ, ಸರ್ಜಿಕಲ್ ಸ್ಟ್ರೈಕ್, ನೆರೆರಾಷ್ಟ್ರದಿಂದ ಪೂರ್ಣ ಪ್ರಮಾಣದ ಯುದ್ಧದ ಭಯ, ‘ಈ ಭಯದಿಂದ ನಿಮ್ಮನ್ನು ರಕ್ಷಿಸುವ ಕಾವಲುಗಾರ ನಾನು’ ಇತ್ಯಾದಿ ಹೇಳಿಕೆಗಳು ಭಯ ಉತ್ಪಾದನೆಯ ಮೂಲಕ ಮತಯಾಚನೆಯ ರಾಜಕೀಯ ದಾಳಗಳೆಂದು ಬಹುಪಾಲು ಮತದಾರರು ಅರ್ಥಮಾಡಿಕೊಳ್ಳಲಾರರು. ಇದನ್ನು ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ಧರಲ್ಲದ ಮತದಾರರಿರುವ ಒಂದು ದೇಶದಲ್ಲಿ ಪ್ರಜಾಪ್ರಭುತ್ವವನ್ನು, ಪ್ರಜಾಪ್ರಭುತ್ವದ ಆತ್ಮವಾಗಿರುವ ಸಂವಿಧಾನವನ್ನು ರಕ್ಷಿಸಿಕೊಳ್ಳುವುದೇ ದೇಶದ ಮುಂದೆ ಇರುವ ದೊಡ್ಡ ಸವಾಲಾಗಬಹುದು. ಎಲ್ಲಿ ಸಂವಿಧಾನವೇ ‘ನಿರ್ಮೂಲನೆಯಾಗಿಬಿಡುತ್ತದೋ ಎಂಬ ಭಯ ಪ್ರಜಾಪ್ರಭುತ್ವ ಪ್ರಿಯರನ್ನು ಅರ್ನೆಸ್ಟ್ ಬೆಕರ್ ಉಲ್ಲೇಖಿಸುವ ಮನುಷ್ಯನ ‘ನಿರ್ಮೂಲನದ’ ಭಯಕ್ಕಿಂತಲೂ ಮಿಗಿಲಾಗಿ ಕಾಡಬಹುದು.
ರಾಜಕಾರಣಿಗಳ ಭಯ ಹುಟ್ಟಿಸುವ ಭಾಷಣಗಳ ಪರಿಣಾಮಗಳಿಂದ ಮತದಾರರು ಪ್ರಭಾವಿತರಾಗುವುದು ಅಂತಿಮವಾಗಿ ಯಾವುದೇ ಪ್ರಜಾಪ್ರಭುತ್ವಕ್ಕೆ ಎದುರಾಗಬಹುದಾದ ಅತ್ಯಂತ ದೊಡ್ಡ ಭಯ.
(bhaskarrao599@gmaiL.com)