ಮಾಧ್ಯಮಿಕ ಶಿಕ್ಷಣ ಮಂಡಳಿಯ ಅಗತ್ಯವಿದೆಯೇ?
ಮಾಧ್ಯಮಿಕ ಶಿಕ್ಷಣ ವ್ಯವಸ್ಥೆಯ ನಿಷೇಧವು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲಿದೆ. ಸಮಗ್ರ ಭಾರತದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಒಂದೇ ಮಾದರಿಗೊಳಪಡಿಸಬೇಕು. ಈವರೆಗೆ ಸಿಬಿಎಸ್‌ಇ ಮಾದರಿಯು ಅತ್ಯುತ್ತಮವಾದುದಾಗಿದೆ. ಒಂದು ವೇಳೆ ಪ್ರತಿಯೊಂದು ಗ್ರಾಮದ ಮಗುವು ತನ್ನ ಹಳ್ಳಿಯ ಶಾಲೆಯಲ್ಲೇ 12ನೇ ತರಗತಿಯನ್ನು ಪೂರ್ಣಗೊಳಿಸಲು ಸಾಧ್ಯವಾದಲ್ಲಿ ನವಸಮಾಜ ರೂಪುಗೊಳ್ಳಲು ಆರಂಭವಾಗುತ್ತದೆ.
ತೆಲಂಗಾಣದ ಮಾಧ್ಯಮಿಕ ಪರೀಕ್ಷಾ ಮಂಡಳಿಯು, ಬೃಹತ್ ವ್ಯವಸ್ಥಿತ ಬಿಕ್ಕಟ್ಟೊಂದನ್ನು ಸೃಷ್ಟಿಸಿದೆ. ಈ ಪರೀಕ್ಷಾ ಮಂಡಳಿಯ ಯಡವಟ್ಟಿನಿಂದಾಗಿ ಸುಮಾರು 20 ವಿದ್ಯಾರ್ಥಿಗಳು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ಇನ್ನೂ ಹಲವಾರು ಮಂದಿ ಸಾವಿಗೆ ಶರಣಾಗುವ ಸಾಧ್ಯತೆಯಿದೆ. ಈ ಸಮಸ್ಯೆಗೆ ಪರಿಹಾರವು ಕೇವಲ ಉತ್ತರಪತ್ರಿಕೆಗಳಲ್ಲಿನ ಅಂಕಗಳ ಮರುಎಣಿಕೆಯಲ್ಲಾಗಲಿ ಅಥವಾ ಉತ್ತರಪತ್ರಿಕೆಗಳ ಮರುವೌಲ್ಯ ಮಾಪನದಲ್ಲಾಗಲಿ ಇಲ್ಲ. ಸಮಸ್ಯೆಯು ಅದಕ್ಕಿಂತಲೂ ತುಂಬಾ ದೊಡ್ಡದಾಗಿದೆ. ಶಿಕ್ಷಣದ ಆಡಳಿತಾತ್ಮಕ ಸಂರಚನೆಗಳನ್ನೇ ನಿಯಂತ್ರಿಸುವ ಬೃಹತ್ ಖಾಸಗಿ ಕಾಲೇಜ್ ಜಾಲದಲ್ಲಿಯೇ ಈ ಸಮಸ್ಯೆಯ ಬೇರು ಅಡಗಿದೆ. ನಾರಾಯಣ ಹಾಗೂ ಶ್ರೀಚೈತನ್ಯದಂತಹ ಖಾಸಗಿ ಶಿಕ್ಷಣ ರ್ಯಾಕೆಟ್‌ಗಳು ಮಧ್ಯಮತಳಹದಿಯ ಶಿಕ್ಷಣ ವ್ಯವಸ್ಥೆಯನ್ನೇ ನಾಶಪಡಿಸಿವೆ ಹಾಗೂ ಇದೀಗ ಅದು ಪರಿಕಲ್ಪನೆ ಶಾಲೆ (ಕಾನ್ಸೆಪ್ಟ್ ಸ್ಕೂಲ್)ಗಳ ಹೆಸರಿನಲ್ಲಿ ಶಾಲಾ ಶಿಕ್ಷಣ ರ್ಯಾಕೆಟ್‌ನೊಳಗೆ ನುಸುಳಿವೆ.
ಈ ಖಾಸಗಿ ರ್ಯಾಕೆಟ್ ನಾಲ್ಕು ಪ್ರಮುಖ ಕೆಲಸಗಳನ್ನು ಮಾಡಿವೆ:
1. ಎರಡು ರಾಜ್ಯಗಳಾದ್ಯಂತ ಅವು ಜ್ಯೂನಿಯರ್ ಕಾಲೇಜುಗಳು, ಶಾಲೆಗಳು ಹಾಗೂ ಕೋಚಿಂಗ್ ಸೆಂಟರ್‌ಗಳನ್ನು ಸ್ಥಾಪಿಸಿವೆ.
2. ಬೃಹತ್ ಜಾಹೀರಾತು ಬಂಡವಾಳದ ಮೂಲಕ ಅವು ಬುಡಕಟ್ಟು ಪ್ರದೇಶಗಳಲ್ಲಿ, ಖಾಸಗಿ ಶಿಕ್ಷಣಸಂಸ್ಥೆಗಳು ಮಾತ್ರವೇ ಉತ್ತಮ ಶಿಕ್ಷಣವನ್ನು ನೀಡಬಲ್ಲವು ಎಂಬ ಭಾವನೆ ಮೂಡುವಂತೆ ಮಾಡಿವೆ. ಕುಟುಂಬದ ಆರ್ಥಿಕ ಸಂರಚನೆಯನ್ನೇ ನಾಶಪಡಿಸುವ ಮೂಲಕ ಅವು ಗ್ರಾಮಗಳು, ಪಟ್ಟಣಗಳು ಹಾಗೂ ನಗರಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಶಿಕ್ಷಣಸಂಸ್ಥೆಗಳಲ್ಲಿ ಪ್ರವೇಶ ಪಡೆಯುವಂತೆ ಮಾಡುತ್ತವೆ. ಕೆಲವೇ ಡಜನ್ ವಿದ್ಯಾರ್ಥಿಗಳಿಗಾಗಿ ಹಣಪಾವತಿಸಿ ರ್ಯಾಂಕ್ ದೊರೆಯುವಂತೆ ಮಾಡುವಲ್ಲಿ ಸಫಲವಾಗುತ್ತವೆ. ತದನಂತರ ತಕ್ಷಣವೇ ಮಾಧ್ಯಮ ಜಾಲಗಳ ಮೂಲಕ ಬೃಹತ್ ಜಾಹೀರಾತು ಬಂಡವಾಳವನ್ನು ಹರಿಸಲಾಗುತ್ತದೆ ಮತ್ತು ಪೋಷಕರು ಹಾಗೂ ಮಕ್ಕಳ ಮಾನಸಿಕತೆಯ ಮೇಲೆ ಬೃಹತ್ ಸಮರದಲ್ಲಿ ತೊಡಗುತ್ತವೆ.
3. ಇದರಿಂದಾಗಿ ವಸತಿ ಹಾಗೂ ಖಾಸಗಿ ಮಾಧ್ಯಮಿಕ ಹಾಗೂ ಕೋಚಿಂಗ್ ಸೆಂಟರ್‌ಗಳಲ್ಲಿ ಬೃಹತ್ ದಾಖಲಾತಿ ಅಭಿಯಾನವನ್ನೇ ಕೈಗೊಳ್ಳುತ್ತವೆ. ಅವು ತಮ್ಮ ಬಳಿ ಬೃಹತ್ ವಸತಿ ಶಾಲಾ ಜಾಲವನ್ನು ಕೂಡಾ ಹೊಂದಿರುತ್ತವೆ. ವಿದ್ಯಾರ್ಥಿಗಳನ್ನು ಉರುಹೊಡೆಯುವಂತೆ ಮಾಡುತ್ತವೆಯೇ ಹೊರತು ಅವರಲ್ಲಿ ಅಧ್ಯಯನಶೀಲತೆಯನ್ನು ಇಂತಹ ಶಿಕ್ಷಣಸಂಸ್ಥೆಗಳು ಹುಟ್ಟು ಹಾಕುವುದಿಲ್ಲ. ವಿದ್ಯಾರ್ಥಿಗಳು ತಮ್ಮ ಎಳೆಯ ವಯಸ್ಸಿನಲ್ಲಿ ಮನರಂಜನೆಯಿಂದ ವಂಚಿತರಾಗಿ ನಿದ್ದೆಗೆಟ್ಟು ಕಲಿಯುವಂತೆ ಮಾಡುತ್ತವೆ.
4. ಅವು ಇದೀಗ ದೊಡ್ಡ ಮಟ್ಟದಲ್ಲಿ ಸರಕಾರಿ ಶಾಲೆಗಳ ಮೇಲೂ ನಿಯಂತ್ರಣವನ್ನು ಸಾಧಿಸಲು ಹೊರಟಿವೆ. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಜಾಲದ ಕಿಂಗ್‌ಪಿನ್ ಆಗಿರುವ ಪೊಂಗೂರು ನಾರಾಯಣ ಎಂಬವರನ್ನು ತನ್ನ ಪಕ್ಷಕ್ಕೆ ಸೇರ್ಪಡೆಗೊಳಿಸುವ ಮೂಲಕ ಒಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಪೊಂಗೂರು ನಾರಾಯಣ ಆಂಧ್ರ, ತೆಲಂಗಾಣ ರಾಜ್ಯಗಳ ಅತಿ ದೊಡ್ಡ ಶಿಕ್ಷಣ ರ್ಯಾಕೆಟ್‌ಗಳ ಮುಖವಾಗಿದ್ದಾರೆ. ನಾರಾಯಣ ಬಡಪಾಯಿ ವಿದ್ಯಾರ್ಥಿಗಳ ಪೋಷಕರಿಂದ ಕೊಳ್ಳೆ ಹೊಡೆದು ಸಂಪಾದಿಸಿದ ಹಣಕ್ಕಾಗಿಯೇ ಆತನನ್ನು ಸಚಿವನನ್ನಾಗಿ ಮಾಡಿದ್ದಾರೆ. ಆನಂತರ ಅವರು ಅನಕ್ಷರಸ್ಥ ಶಿಕ್ಷಣ ಉದ್ಯಮಿ ಮಲ್ಲಾ ರೆಡ್ಡಿಯನ್ನು ಕೂಡಾ ಪಕ್ಷಕ್ಕೆ ಸೇರ್ಪಡೆಗೊಳಿಸಿದರು ಹಾಗೂ ಆತನನ್ನು ಸಂಸದನನ್ನಾಗಿ ಮಾಡಿದರು. ಇದೀಗ ಆತ ಕೆಸಿಆರ್ ಅವರನ್ನು ಖರೀದಿಸಿದ್ದು, ತೆಲಂಗಾಣದ ಸಚಿವರಾಗಿದ್ದಾರೆ.
ಖಾಸಗಿ ಶಾಲೆ, ಮಾಧ್ಯಮಿಕ ಹಾಗೂ ಪದವಿ ಕಾಲೇಜ್‌ನ ಮ್ಯಾನೇಜ್‌ಮೆಂಟ್‌ಗಳು ತಾವು ಅಕ್ರಮವಾಗಿ ಸಂಪಾದಿಸಿದ ಹಣದ ಮೂಲಕ ವಸ್ತುಶಃ ಈ ರಾಜ್ಯಗಳನ್ನು ನಿಯಂತ್ರಿಸುತ್ತಿವೆ.
ಖಾಸಗಿ ಶಾಲೆ, ಮಾಧ್ಯಮಿಕ ಹಾಗೂ ಪದವಿ ಕಾಲೇಜ್ ಶಿಕ್ಷಣದಿಂದ ಹಿಡಿದು ಖಾಸಗಿ ಪರಿಭಾವಿತ (ಡೀಮ್ಡ್) ವಿವಿಗಳವರೆಗೆ ಎಲ್ಲವೂ ಅನೈತಿಕ, ಭ್ರಷ್ಟಾಚಾರ ಹಾಗೂ ಕಳಪೆ ದರ್ಜೆಯ ಶಿಕ್ಷಣದ ದಂಧೆಯಲ್ಲಿ ತೊಡಗಿವೆ. ಈ ಪೈಕಿ ಮಾಧ್ಯಮಿಕ ಶಿಕ್ಷಣ ವ್ಯವಸ್ಥೆಗೆ ಅತಿ ದೊಡ್ಡ ಹಾನಿಯುಂಟಾಗಿದೆ.
ಈ ಪಿಡುಗನ್ನು ಬೇರು ಸಮೇತ ಕಿತ್ತೊಗೆಯಬೇಕಾದರೆ ಈ ಎರಡೂ ರಾಜ್ಯಗಳು ಮಾಧ್ಯಮಿಕ ಶಿಕ್ಷಣ ವ್ಯವಸ್ಥೆಯನ್ನು ರದ್ದುಪಡಿಸಬೇಕು ಹಾಗೂ ಪ್ರತಿಯೊಂದು ಹೈಸ್ಕೂಲ್ ಕೂಡಾ ಅದೇ ಶಾಲೆಯಲ್ಲಿ 11 ಮತ್ತು 12ನೇ ತರಗತಿಯನ್ನು ಬೋಧಿಸಬೇಕು. ವಾರ್ಷಿಕ ಮಂಡಳಿ ಪರೀಕ್ಷೆಯನ್ನು 12ನೇ ತರಗತಿಯಲ್ಲಿ ಮಾತ್ರವೇ ನಡೆಸಬೇಕು ಹಾಗೂ 10ನೇ ತರಗತಿಯಲ್ಲಿ ಅತ್ಯಂತ ಕಟ್ಟುನಿಟ್ಟಾದ ಆಂತರಿಕ ಪರೀಕ್ಷೆಯನ್ನು ನಡೆಸಬೇಕು. ಒಂದು ವೇಳೆ ಈ ವ್ಯವಸ್ಥೆಯನ್ನು ಉತ್ತಮ ಇಂಗ್ಲಿಷ್ ಮಾಧ್ಯಮದಲ್ಲಿ ಒಂದು ತೆಲುಗು ಭಾಷೆಯ ಜೊತೆ ಬೋಧಿಸುವ ಮೂಲಕ ಬಲಪಡಿಸಲು ಸಾಧ್ಯವಾಗುವು ದಾದರೆ, ಗ್ರಾಮೀಣ ಮಟ್ಟದ ಶಾಲೆಗಳ ಗುಣಮಟ್ಟವೂ ಮೇಲ್ದರ್ಜೆಗೆ ಏರಲಿದೆ ಹಾಗೂ ಪೋಷಕರಿಗೆ ಪ್ಲಸ್ 2 ಮಟ್ಟದ ಶಿಕ್ಷಣಕ್ಕಾಗಿ ಹೆಚ್ಚು ಹಣವನ್ನು ಖರ್ಚುಮಾಡಬೇಕಾಗಿ ಬರಲಾರದು. ಎರಡನೆಯದಾಗಿ ತಮ್ಮ ಮಕ್ಕಳನ್ನು ಹಳ್ಳಿಗಳಿಂದ ಬಹುದೂರದ ನಗರಗಳಲ್ಲಿರುವ ಕಾಲೇಜುಗಳಿಗೆ ಕಳುಹಿಸುವುದನ್ನು ತಪ್ಪಿಸಬಹುದಾಗಿದೆ.
ಮಾಧ್ಯಮಿಕ ಮಟ್ಟದಲ್ಲಿ ತೆಲುಗಿನ ಬದಲಿಗೆ ಸಂಸ್ಕೃತವನ್ನು ಎರಡನೇ ಭಾಷೆಯಾಗಿ ಬಳಸಲು ಅವಕಾಶ ನೀಡುವುದು ಅಂಕನಿರ್ವಹಣೆಯ ಕಾರ್ಯತಂತ್ರವಾಗಿದೆ. ಯಾವುದೇ ವಿದ್ಯಾರ್ಥಿಯು ನೈಜ ಸಂಸ್ಕೃತವನ್ನು ಕಲಿಯುವುದಿಲ್ಲ. ಅದರ ಬದಲು ಸಂಸ್ಕೃತವನ್ನು ಕೈಬಿಟ್ಟು ತೆಲುಗನ್ನು ಕಡ್ಡಾಯಗೊಳಿಸಬೇಕಾಗಿದೆ.
ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣದ ಬಳಿಕ ತೆಲಂಗಾಣ ಸರಕಾರವು ಮಾಧ್ಯಮಿಕ ಶಿಕ್ಷಣ ಮಂಡಳಿಯನ್ನು ರದ್ದುಪಡಿಸಿ ಶಾಲೆಗಳಲ್ಲಿ 1ರಿಂದ 12ನೇ ತರಗತಿಯವರೆಗೆ ಅಂದರೆ 10+2 ಶಿಕ್ಷಣವ್ಯವಸ್ಥೆಯನ್ನು ಜಾರಿಗೊಳಿಸುವ ಚಿಂತನೆಗೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಆದರೆ ಈ ಬದಲಾವಣೆಯನ್ನು ಮಾಧ್ಯಮಿಕ ಹಾಗೂ ಖಾಸಗಿ ಶಾಲಾ ಲಾಬಿಗಳು ವಿರೋಧಿಸುವ ಸಾಧ್ಯತೆಯಿದೆ. ಆದರೆ ಖಾಸಗಿ ಶಿಕ್ಷಣ ಲಾಬಿಗಳ ಒತ್ತಡಗಳಿಗೆ ಮಣಿಯದೆ ಇದನ್ನು ಸರಕಾರವು ಕಾರ್ಯಗತಗೊಳಿಸಬೇಕಾಗಿದೆ.
ಒಂದು ವೇಳೆ ಇತ್ತ ಆಂಧ್ರಪ್ರದೇಶದಲ್ಲಿ ಜಗನ್ ರೆಡ್ಡಿ ಸರಕಾರ ಅಧಿಕಾರಕ್ಕೇರಿದಲ್ಲಿ ಅವರು ಮಾಧ್ಯಮಿಕ ಶಿಕ್ಷಣ ಮಂಡಳಿಯನ್ನು ತಕ್ಷಣವೇ ರದ್ದುಪಡಿಸಬೇಕು. ಆದರೆ ಖಾಸಗಿ ಮಾಧ್ಯಮಿಕ ಹಾಗೂ ಕೋಚಿಂಗ್ ಸಂಸ್ಥೆಗಳ ಲಾಬಿಗಳು ಆ ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮೇಲೆ ಬಲವಾದ ಹಿಡಿತವನ್ನು ಹೊಂದಿವೆ. ಅವುಗಳ ಪ್ರಭಾವದಿಂದ ಯಾವ ಪಕ್ಷವೂ ಹೊರತಾಗಿಲ್ಲ.
ಎಲ್ಲಾ ರೀತಿಯ ರಾಜಕೀಯ ಸಿದ್ಧಾಂತಗಳನ್ನು ಹೊಂದಿರುವ ಹಲವಾರು ಕಿರಿಯ ಹಾಗೂ ಹಿರಿಯ ಶಾಲಾ ಶಿಕ್ಷಕರ ನಾಯಕರು ಖಾಸಗಿ ಶಾಲೆಗಳು, ಜೂನಿಯರ್ ಕಾಲೇಜುಗಳು ಹಾಗೂ ಭಾರೀ ಪ್ರಮಾಣದಲ್ಲಿ ಹಣ ಕಮಾಯಿಸುವ ಕೋಚಿಂಗ್ ಸೆಂಟರ್‌ಗಳ ಸ್ಥಾಪನೆಯಲ್ಲಿ ಶಾಮೀಲಾಗಿದ್ದಾರೆ.
ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವುದರಿಂದ ಚುನಾವಣಾ ವ್ಯವಸ್ಥೆಗೆ ಭಾರೀ ಪ್ರಮಾಣದಲ್ಲಿ ಹಣ ಹರಿದು ಬರುವುದನ್ನು ಕಡಿಮೆಗೊಳಿಸಬಹುದಾಗಿದೆ. ಯಾಕೆಂದರೆ ಖಾಸಗಿ ಶೈಕ್ಷಣಿಕ ಸಂಸ್ಥೆಗಳ ಮ್ಯಾನೇಜ್‌ಮೆಂಟ್‌ಗಳು ರಾಜಕೀಯ ಪಕ್ಷಗಳಿಗೆ ತಾವು ವಿದ್ಯಾರ್ಥಿಗಳ ಅಮಾಯಕ ಪಾಲಕರಿಂದ ದೋಚಿದ ಬಹಳಷ್ಟು ಹಣವನ್ನು ನೀಡುತ್ತವೆ. ಈ ಅಪವಿತ್ರ ಮೈತ್ರಿಯನ್ನು ಮುರಿಯಬೇಕಾಗಿದೆ.
ಆದರೆ ಇಂತಹ ಬದಲಾವಣೆಗೆ ಈ ಲಾಬಿಗಳು ಸುಲಭದಲ್ಲಿ ಆಸ್ಪದ ನೀಡಲಾರವು. ವಿದ್ಯಾರ್ಥಿ ಸಂಘಟನೆಗಳು ಹಾಗೂ ನಾಗರಿಕ ಸಂಘಟನೆಗಳು ಈ ಬದಲಾವಣೆಗಾಗಿ ಸರಕಾರದ ಮೇಲೆ ಒತ್ತಡ ಹೇರಬೇಕು. ತೆಲಂಗಾಣದಲ್ಲಿ ಈ ನಿಟ್ಟಿನಲ್ಲಿ ಆರಂಭಗೊಂಡ ಚಳವಳಿಯು ಆಂಧ್ರದಲ್ಲಿಯೂ ಪ್ರತಿಧ್ವನಿಸಬೇಕು.
ಮಾಧ್ಯಮಿಕ ಶಿಕ್ಷಣ ವ್ಯವಸ್ಥೆಯ ನಿಷೇಧ ಹಾಗೂ ಅದನ್ನು ಸರಕಾರಿ ಶಾಲಾ ವ್ಯವಸ್ಥೆಗೆ ಸೇರ್ಪಡೆಗೊಳಿಸುವ ಪ್ರಯತ್ನವನ್ನು ಜೂನಿಯರ್ ಉಪನ್ಯಾಸಕರ ಸಂಘಗಳು ವಿರೋಧಿಸಿವೆ. ಹೈಸ್ಕೂಲ್‌ಗಳಲ್ಲಿ ತಾವು ಬೋಧನೆ ಮಾಡಲಿಕ್ಕೆ ಇರುವವರಲ್ಲವೆಂಬ ವಾದ ಅವರದ್ದಾಗಿದೆ. ಜೂನಿಯರ್ ಕಾಲೇಜ್‌ಗಳ ಹಾಗಲ್ಲದೆ ಶಾಲೆಗಳು ಗ್ರಾಮೀಣ ಪ್ರದೇಶಗಳಾದ್ಯಂತ ಹರಡಿವೆ. ಕಿರಿಯ ಉಪನ್ಯಾಸಕರು ದುರ್ಗಮ ಹಳ್ಳಿ ಪ್ರದೇಶಗಳಿಗೆ ಬೋಧನೆಗಾಗಿ ತೆರಳಲಾರರೆಂದು ಅವರು ಹೇಳುತ್ತಾರೆ.
ಇಂತಹವನ್ನು ಸರಕಾರಗಳು ಅತ್ಯಂತ ದೃಢವಾಗಿ ನಿಭಾಯಿಸಬೇಕಾಗಿದೆ. ಜೂನಿಯರ್ ಕಾಲೇಜ್ ಮಟ್ಟದ ಉಪನ್ಯಾಸಕರು ನೌಕರಿಯಲ್ಲಿ ಮುಂದುವರಿಯಬೇಕಾದರೆ, ಅವರು ಯಾವುದೇ ಸ್ಥಳಕ್ಕೆ ತೆರಳಿ ಆಯಾ ಶಾಲೆಗಳಲ್ಲಿನ 11 ಹಾಗೂ 12 ತರಗತಿಗಳಿಗೆ ಬೋಧಿಸಲೇಬೇಕೆಂಬ ನಿಯಮವನ್ನು ರೂಪಿಸಬೇಕು.
ಈ ಮೊದಲು ದಿವಂಗತ ರಾಜಶೇಖರ್ ರೆಡ್ಡಿ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದಾಗ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೊಳಿಸಿದಾಗಲೂ ಶಾಲಾ ಶಿಕ್ಷಕರು ಕ್ಯಾತೆ ತೆಗೆದಿದ್ದರು. ತಾವು ತೆಲುಗು ಮಾಧ್ಯಮದಲ್ಲಿ ಮಾತ್ರ ಬೋಧಿಸಲಿಕ್ಕಿರುವುದಾಗಿ ಅವರು ವಾದಿಸಿದ್ದರು. ಈ ರೀತಿಯ ಬೋಧನಾ ವಿರೋಧಿ ಶಕ್ತಿಗಳನ್ನು ಕಠಿಣವಾಗಿ ಹದ್ದುಬಸ್ತಿನಲ್ಲಿಡಬೇಕಾಗಿದೆ.
ಮಾಧ್ಯಮಿಕ ಶಿಕ್ಷಣ ವ್ಯವಸ್ಥೆಯ ನಿಷೇಧವು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲಿದೆ. ಸಮಗ್ರ ಭಾರತದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಒಂದೇ ಮಾದರಿಗೊಳಪಡಿಸಬೇಕು. ಈವರೆಗೆ ಸಿಬಿಎಸ್‌ಇ ಮಾದರಿಯು ಅತ್ಯುತ್ತಮವಾದುದಾಗಿದೆ. ಒಂದು ವೇಳೆ ಪ್ರತಿಯೊಂದು ಗ್ರಾಮದ ಮಗುವು ತನ್ನ ಹಳ್ಳಿಯ ಶಾಲೆಯಲ್ಲೇ 12ನೇ ತರಗತಿಯನ್ನು ಪೂರ್ಣಗೊಳಿಸಲು ಸಾಧ್ಯವಾದಲ್ಲಿ ನವಸಮಾಜ ರೂಪುಗೊಳ್ಳಲು ಆರಂಭವಾಗುತ್ತದೆ.
ಕೃಪೆ: countercurrents.org