ಶ್ರೀರಂಗಪಟ್ಟಣ, ಮಳವಳ್ಳಿ ಪುರಸಭೆ ಚುನಾವಣೆ: ದೋಸ್ತಿ ಮುಖಂಡರಿಗೆ ಎದುರಾಗಿದೆ ಮತ್ತೊಂದು ಸವಾಲು

Update: 2019-05-05 13:15 GMT

ಮಂಡ್ಯ, ಮೇ 5: ಲೋಕಸಭಾ ಚುನಾವಣೆ ಕಾವು ಇಳಿಯುವ ಮುನ್ನವೇ ಜಿಲ್ಲೆಯ ಶ್ರೀರಂಗಪಟ್ಟಣ ಹಾಗೂ ಮಳವಳ್ಳಿ ಪುರಸಭೆಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಪಕ್ಷಗಳ ಮುಖಂಡರಿಗೆ ಮತ್ತೊಂದು ಸವಾಲು ಎದುರಾಗಿದೆ.

ದೇಶದ ಗಮನ ಸೆಳೆದಿರುವ ಮಂಡ್ಯ ಕ್ಷೇತ್ರದ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ರಾಜ್ಯವ್ಯಾಪಿ ಚರ್ಚೆ ನಡೆಯುತ್ತಿದೆ. ಇದರ ಜತೆಗೆ ಇದೀಗ ಶ್ರೀರಂಗಪಟ್ಟಣ ಹಾಗೂ ಮಳವಳ್ಳಿ ಪುರಸಭೆಗಳ ಚುನಾವಣೆ ಜನರಲ್ಲಿ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರ ಅಸ್ತಿತ್ವದಲ್ಲಿದ್ದರೂ ಜಿಲ್ಲೆಯಲ್ಲಿ ದೋಸ್ತಿ ಪಕ್ಷಗಳ ಮುಖಂಡರ ನಡುವೆ ಅಷ್ಟಕಷ್ಟೇ. ಹಾಲಿ ಜೆಡಿಎಸ್ ಶಾಸಕರು ಹಾಗೂ ಕಾಂಗ್ರೆಸ್‍ನ ಮಾಜಿ ಶಾಸಕರಿಗೆ ಪುರಸಭೆ ಚುನಾವಣೆ ಪ್ರತಿಷ್ಠೆ ವಿಷಯವಾಗಿದೆ.

ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಎರಡೂ ಕ್ಷೇತ್ರಗಳಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಶುರುವಾಗಿದೆ. ಮುಖಂಡರು ಹಾಗೂ ಕಾರ್ಯಕರ್ತರು ಗೆಲುವಿನ ತಂತ್ರ ರೂಪಿಸುತ್ತಿದ್ದಾರೆ. ಆಕಾಂಕ್ಷಿಗಳ ನಡುವೆ ಟಿಕೆಟ್ ಪೈಪೋಟಿ ನಡೆಯುತ್ತಿದೆ.

ಶ್ರೀರಂಗಪಟ್ಟಣ ಕ್ಷೇತ್ರ: 23 ಸದಸ್ಯರ ಸಂಖ್ಯಾಬಲವುಳ್ಳ ಶ್ರೀರಂಗಪಟ್ಟಣ ಪುರಸಭೆಗೆ 2013ರ ಮಾ.7ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 6, ಜೆಡಿಎಸ್ 6, ಬಿಜೆಪಿ 4, ಬಿಎಸ್‍ಆರ್ ಕಾಂಗ್ರೆಸ್ 1 ಹಾಗೂ ಬಂಡಾಯ ಕಾಂಗ್ರೆಸ್ ಮತ್ತು ಪಕ್ಷೇತರ 6 ಸದಸ್ಯರು ಆಯ್ಕೆಗೊಂಡಿದ್ದರು.

ಮೊದಲ ಎರಡೂವರೆ ವರ್ಷಗಳ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಎಸ್‍ಟಿ ಮಹಿಳೆಗೆ ಮೀಸಲಾಗಿದ್ದು, ಜೆಡಿಎಸ್‍ನ ಸುಮಾಶೇಖರ್, ಬಿಸಿಎಂ-ಎ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನ ವೆಂಕಟಸ್ವಾಮಿ ಅವಿರೋಧವಾಗಿ ಆಯ್ಕೆಗೊಂಡಿದ್ದರು. ನಂತರದ ಎರಡೂವರೆ ವರ್ಷಗಳ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ-ಎ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲುಗೊಂಡಿತ್ತು. ಒಂದು ವಾರದ ಬಳಿಕ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಬದಲಾಯಿಸಿದ್ದರಿಂದ ಅಸಮಾಧಾನಗೊಂಡ ಹಲವು ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಚುನಾವಣೆ ನಡೆಯಲೇ ಇಲ್ಲ. ಇದೀಗ ಮೇ 29ಕ್ಕೆ ಚುನಾವಣಾ ದಿನಾಂಕವನ್ನು ನಿಗದಿಗೊಳಿಸಲಾಗಿದ್ದು, ಮೇ 9ರಿಂದ 16ರವರೆಗೆ ಉಮೇದುವಾರಿಕೆ ಸಲ್ಲಿಕೆಯಾಗಲಿದೆ. ಮೇ 17ಕ್ಕೆ ನಾಮಪತ್ರ ಪರಿಶೀಲನೆ, ಮೇ 20ಕ್ಕೆ ಉಮೇದುವಾರಿಕೆ ವಾಪಸ್ಸು ಪಡೆಯಲು ಕೊನೆಯ ದಿನಾಂಕವಾಗಿದೆ.

ಹಾಲಿ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಕಾಂಗ್ರೆಸ್‍ನ ಮಾಜಿ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡರಿಗೆ ಪ್ರತಿಷ್ಠೆ ಪ್ರಶ್ನೆಯಾಗಿದ್ದರೆ, ಈ ಕ್ಷೇತ್ರದಲ್ಲಿ ಬಿಜೆಪಿಯೂ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ.

ವಾರ್ಡ್‍ವಾರು ಮೀಸಲಾತಿ ಪಟ್ಟಿ: ವಾರ್ಡ್ 1 ಪರಿಶಿಷ್ಟ ಪಂಗಡ, ವಾರ್ಡ್ 2 ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 3 ಸಾಮಾನ್ಯ, ವಾರ್ಡ್ 4 ಹಿಂದುಳಿದ ವರ್ಗ(ಬಿ) ಮಹಿಳೆ, ವಾರ್ಡ್ 5 ಸಾಮಾನ್ಯ, ವಾರ್ಡ್ 6 ಹಿಂದುಳಿದ ವರ್ಗ(ಎ), ವಾರ್ಡ್ 7 ಸಾಮಾನ್ಯ ಮಹಿಳೆ, ವಾರ್ಡ್ 8 ಹಿಂದುಳಿದ ವರ್ಗ(ಬಿ), ವಾರ್ಡ್ 9 ಹಿಂದುಳಿದ ವರ್ಗ (ಎ) ಮಹಿಳೆ), ವಾರ್ಡ್ 10 ಸಾಮಾನ್ಯ, ವಾರ್ಡ್ 11 ಸಾಮಾನ್ಯ, ವಾರ್ಡ್ 12 ಹಿಂದುಳಿದ ವರ್ಗ (ಎ), ವಾರ್ಡ್ 13 ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 14 ಸಾಮಾನ್ಯ ಮಹಿಳೆ, ವಾರ್ಡ್ 15 ಸಾಮಾನ್ಯ, ವಾರ್ಡ್ 16 ಸಾಮಾನ್ಯ, ವಾರ್ಡ್ 17 ಹಿಂದುಳಿದ ವರ್ಗ (ಎ), ವಾರ್ಡ್ 18 ಪರಿಶಿಷ್ಟ ಜಾತಿ, ವಾರ್ಡ್ 19 ಸಾಮಾನ್ಯ ಮಹಿಳೆ, ವಾರ್ಡ್ 20 ಸಾಮಾನ್ಯ ಮಹಿಳೆ, ವಾರ್ಡ್ 21 ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 22 ಸಾಮಾನ್ಯ ಮಹಿಳೆ, ವಾರ್ಡ್ 23 ಸಾಮಾನ್ಯ ಮಹಿಳೆ.

ಮಳವಳ್ಳಿ ಪುರಸಭೆ: ಹಾಲಿ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ಹಾಗೂ ಕಾಂಗ್ರೆನ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸ್ಥಳೀಯ ಪುರಸಭೆ ಚುನಾವಣೆ ಪ್ರತಿಷ್ಠೆಯಾಗಿದ್ದು, ಗದ್ದುಗೆ ಹಿಡಿಯಲು ರಣತಂತ್ರ ರೂಪಿಸುತ್ತಿದ್ದಾರೆ.

23 ಸದಸ್ಯ ಬಲದ ಪುರಸಭೆಯಲ್ಲಿ ಎರಡೂ ಪಕ್ಷಗಳಿಂದ ಆಕಾಂಕ್ಷಿತರ ಪಟ್ಟಿ ದೊಡ್ಡದಿರುವುದರಿಂದ ಟಿಕೆಟ್ ಹಂಚಿಕೆ ಕಗ್ಗಂಟಾಗುವ ಸಂಭವವಿದ್ದು, ಬಂಡಾಯದ ಬಾವುಟ ಬೀಸುವ ಸಾಧ್ಯತೆಯಿದೆ. ಕಳೆದ ಬಾರಿ ಜೆಡಿಎಸ್ 11 ಸ್ಥಾನ, ಕಾಂಗ್ರೆಸ್ 7 ಸ್ಥಾನ, ಪಕ್ಷೇತರರು 4 ಹಾಗೂ ಒಂದು ಸ್ಥಾನ ಬಿಜೆಪಿ ಪಾಲಾಗಿದ್ದು, ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ ಮತ್ತು ಪಕ್ಷೇತರರ ಬೆಂಬಲದೊಂದಿಗೆ ಕಾಂಗ್ರೆಸ್ ಗದ್ದುಗೆ ಹಿಡಿದಿತ್ತು.

ಕಳೆದ ಬಾರಿ ಒಂದು ಸ್ಥಾನದ ಕೊರತೆಯಿಂದ ಗುದ್ದುಗೆ ಹಿಡಿಯಲು ವಿಫಲವಾಗಿದ್ದ ಜೆಡಿಎಸ್ ಈ ಬಾರಿ ಅಧಿಕಾರ ಹಿಡಿಯಲು ತೀವ್ರ ಕಸರತ್ತು ನಡೆಸಲಿದ್ದರೆ, ಬಹುಮತದೊಂದಿಗೆ ಅಧಿಕಾರ ಉಳಿಸಿಕೊಳ್ಳುವ ಸವಾಲು ಕಾಂಗ್ರೆಸ್‍ಗೆ ಎದುರಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಜೆಡಿಎಸ್‍ನ ನಿಖಿಲ್ ಕುಮಾರಸ್ವಾಮಿ ಕಣದಲ್ಲಿದ್ದರೂ ಕಾಂಗ್ರೆಸ್ ಮುಖಂಡರು ತಟಸ್ಥರಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಪರ ಬ್ಯಾಟ್ ಮಾಡಿದ್ದಾರೆ. ಈಗ ಪುರಸಭೆ ಚುನಾವಣೆಯಲ್ಲಿ ದೋಸ್ತಿಗಳೇ ಪರಸ್ಪರ ಬಹಿರಂಗವಾಗಿ ಹೋರಾಟ ನಡೆಸಲು ಸಜ್ಜಾಗಿದ್ದಾರೆ.

Writer - ಕುಂಟನಹಳ್ಳಿ ಮಲ್ಲೇಶ

contributor

Editor - ಕುಂಟನಹಳ್ಳಿ ಮಲ್ಲೇಶ

contributor

Similar News