ತುಂಗಾ ಡ್ಯಾಂನಲ್ಲಿ ನೀರಿದ್ದರೂ ಶಿವಮೊಗ್ಗ ನಗರದಲ್ಲಿ ತಪ್ಪದ ಜೀವಜಲಕ್ಕೆ ಹಾಹಾಕರ

Update: 2019-05-06 17:17 GMT

ಶಿವಮೊಗ್ಗ, ಮೇ 6: ಪ್ರಸ್ತುತ ಬೇಸಿಗೆ ಅವದಿಯಲ್ಲಿ ರಾಜ್ಯದ ಹಲವೆಡೆ ಜಲಮೂಲಗಳು ಬರಿದಾಗಿ, ಕುಡಿಯುವ ನೀರಿಗೆ ನಾಗರೀಕರು ಪರಿತಪಿಸುತ್ತಿದ್ದಾರೆ. ಆದರೆ ಶಿವಮೊಗ್ಗ ನಗರಕ್ಕೆ ನೀರು ಪೂರೈಕೆಯಾಗುವ ತುಂಗಾ ಜಲಾಶಯದಲ್ಲಿ ನೀರಿದ್ದರೂ, ನಾನಾ ಕಾರಣಗಳಿಂದ ನಗರದ ಹಲವು ಬಡಾವಣೆಯ ನಾಗರೀಕರು ಜೀವಜಲಕ್ಕೆ ಪರಿತಪಿಸುವಂತಹ ಸ್ಥಿತಿಯಿದೆ.

ತುಂಗಾ ಡ್ಯಾಂನಲ್ಲಿ ಇನ್ನೂ ಒಂದೂವರೆ ತಿಂಗಳ ಕಾಲ ಕುಡಿಯುವ ನೀರು ಪೂರೈಕೆ ಮಾಡುವಷ್ಟು ಜಲಸಂಗ್ರಹವಿದೆ. ಆದಾಗ್ಯೂ ಪ್ರಸ್ತುತ ಬೇಸಿಗೆ ವೇಳೆ ಕೆಲ ಬಡಾವಣೆಗಳಿಗೆ ನಿಯಮಿತವಾಗಿ ನೀರು ಪೂರೈಕೆಯಾಗದಿರುವ ದೂರುಗಳಿವೆ. ಇದಕ್ಕೆ ವಿದ್ಯುತ್ ನಿಲುಗಡೆ, ಒಳಚರಂಡಿ ಕಾಮಗಾರಿ, ಪೈಪ್‍ಲೈನ್‍ಗಳು ದುರಸ್ತಿಗೀಡಾಗುವುದು ಸೇರಿದಂತೆ ಮತ್ತಿತರ ಕಾರಣಗಳಿಂದ ನಗರ ವ್ಯಾಪ್ತಿಯ ಹಲವೆಡೆ ಸಮರ್ಪಕವಾಗಿ ನೀರು ಪೂರೈಕೆಯಾಗದಿರುವ ವ್ಯಾಪಕ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. 

ಸೋಮವಾರ ಕೂಡ ವಿನೋಬನಗರ, ಹೊಸಮನೆ, 60 ಅಡಿ ರಸ್ತೆ, ಶಿವಾಲಯ ಸುತ್ತಮುತ್ತ, ನರಸಿಂಹ ಬಡಾವಣೆ, ಶರಾವತಿ ನಗರ ಸೇರಿದಂತೆ ಹಲವು ಬಡಾವಣೆಗಳಿಗೆ ಕುಡಿಯುವ ನೀರು ಸರಬರಾಜಾಗಿಲ್ಲ. ಬಿ.ಹೆಚ್.ರಸ್ತೆಯ ಸರ್ಕಾರಿ ಮೆಡಿಕಲ್ ಕಾಲೇಜು ಬಳಿ ಮತ್ತೆ ಮುಖ್ಯ ಪೈಪ್‍ಲೈನ್ ಒಡೆದು ಹೋಗಿದ್ದರಿಂದ, ಈ ಬಡಾವಣೆಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವಂತಾಗಿದೆ ಎಂದು ಕರ್ನಾಟಕ ಜಲ ಮಂಡಳಿ ಮೂಲಗಳು ಹೇಳುತ್ತವೆ. 

'ಬಸ್ ನಿಲ್ದಾಣದಿಂದ ಆಲ್ಕೋಳ ವೃತ್ತದವರಿಗಿನ ಬಿ.ಹೆಚ್.ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಇತ್ತೀಚೆಗೆ ಡಾಂಬರೀಕರಣ ನಡೆಸಲಾಗಿದೆ. ಸರ್ಕಾರಿ ಮೆಡಿಕಲ್ ಕಾಲೇಜು ಎದುರು ಪೈಪ್‍ಲೈನ್ ಹಾದು ಹೋಗಿರುವ ಸ್ಥಳದ ಮೇಲೆಯೇ ಡಾಂಬರೀಕರಣ ನಡೆಸಲಾಗಿದೆ. ಡಾಂಬರೀಕರಣ ಮಾಡುವ ವೇಳೆ ವೈಬ್ರೇಟರ್ ಯಂತ್ರದ ವಾಹನ ಓಡಾಡಿದ್ದರಿಂದ ಹಾಗೂ ಪ್ರಸ್ತುತ ವಾಹನಗಳ ಸಂಚಾರದಿಂದ ಈ ಸ್ಥಳದಲ್ಲಿ ನಿರಂತರವಾಗಿ ಪೈಪ್ ಒಡೆದು ಹೋಗುತ್ತಿದೆ. 
ಈ ಸ್ಥಳದಲ್ಲಿ ಹಾಕಿರುವ ಕುಡಿಯುವ ನೀರಿನ ಪೈಪ್ ಸಿಮೆಂಟ್‍ನದ್ದಾಗಿದ್ದು, ಮೂರ್ನಾಲ್ಕು ದಶಕಗಳ ಹಿಂದಿನದ್ದಾಗಿದೆ. ಇದರ ಮೇಲೆಯೇ ಡಾಂಬರ್ ಹಾಕಿದ್ದು ಹಾಗೂ ವಾಹನಗಳು ಓಡಾಡುತ್ತಿರುವುದರಿಂದ ಈ ಸ್ಥಳದಲ್ಲಿ ನಿರಂತರವಾಗಿ ಪೈಪ್‍ಲೈನ್ ದುರಸ್ತಿಗೀಡಾಗುತ್ತಿದೆ. ಈ ಮುಖ್ಯ ಪೈಪ್‍ಲೈನ್ ಸಕ್ರ್ಯೂಟ್‍ಹೌಸ್ ಬಳಿಯಿರುವ ಓವರ್ ಹೆಡ್ ಟ್ಯಾಂಕ್ ಘಟಕಕ್ಕೆ ನೀರು ಪೂರೈಕೆಯಾಗುತ್ತಿದೆ. ಇಲ್ಲಿಂದ ವಿವಿಧ ಬಡಾವಣೆಗಳ ಓವರ್ ಹೆಡ್ ಟ್ಯಾಂಕ್‍ಗಳಿಗೆ ನೀರು ಸರಬರಾಜಾಗುತ್ತದೆ' ಎಂದು ಕರ್ನಾಟಕ ಜಲ ಮಂಡಳಿಯ ಅಧಿಕಾರಿಗಳು ತಿಳಿಸುತ್ತಾರೆ. 

ಇತ್ತೀಚೆಗೆ ಮದಾರಿಪಾಳ್ಯ ಏರಿಯಾದಲ್ಲಿ ಉಂಟಾಗಿದ್ದ ಸಮಸ್ಯೆಗೆ ಯುಜಿಡಿ ಕಾಮಗಾರಿ ಕಾರಣವಾಗಿದೆ. ಪೈಪ್‍ಲೈನ್ ದುರಸ್ತಿಗೀಡಾಗಿದ್ದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಇದೀಗ ಪರ್ಯಾಯ ವ್ಯವಸ್ಥೆಯ ಮೂಲಕ ನೀರು ಪೂರೈಸಲಾಗುತ್ತಿದೆ. ಸದ್ಯ ಯಾವುದೇ ಸಮಸ್ಯೆಯಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ. 

ಗಮನಹರಿಸಲಿ: ನಗರದ ಹಲವೆಡೆ ಹಲವು ದಶಕಗಳಷ್ಟು ಹಳೇಯದಾದ, ಕುಡಿಯುವ ನೀರಿನ ಪೈಪ್‍ಲೈನ್‍ಗಳನ್ನು ಹಾಕಲಾಗಿದೆ. ಇಂತಹ ಪೈಪ್‍ಲೈನ್‍ಗಳನ್ನು ಬದಲಾವಣೆ ಮಾಡಬೇಕಾಗಿದೆ. ಹಾಗೆಯೇ ಪ್ರಮುಖ ರಸ್ತೆಗಳಡಿ ಹಾದು ಹೋಗಿರುವ ಪೈಪ್‍ಲೈನ್‍ಗಳನ್ನು ರಸ್ತೆಯಂಚಿಗೆ ಸ್ಥಳಾಂತರಿಸುವುದು ಇಲ್ಲವೇ, ಭಾರೀ ವಾಹನ ಓಡಾಡಿದರೂ ದುರಸ್ತಿಯಾಗದ ಪೈಪ್‍ಗಳನ್ನು ಅಳವಡಿಸಬೇಕು ಎಂಬುವುದು ನಾಗರಿಕರು ಸಲಹೆ ನೀಡುತ್ತಾರೆ. 

ಒಟ್ಟಾರೆ ಡ್ಯಾಂನಲ್ಲಿ ನೀರಿದ್ದರೂ ಇತರೆ ಕಾರಣಗಳಿಂದ ನಗರದ ಕೆಲ ಬಡಾವಣೆಯ ನಿವಾಸಿಗಳು ಜೀವಜಲಕ್ಕೆ ಹಾಹಾಕಾರ ಎದುರಿಸುವಂತಾಗಿರುವುದು ವಿಪರ್ಯಾಸದ ಸಂಗತಿ ಎಂದರೇ ತಪ್ಪಾಗಲಾರದು. 

ದುರಸ್ತಿಗೆ ಕ್ರಮ: ಕಾರ್ಯಪಾಲಕ ಅಭಿಯಂತರ ಎಸ್.ರಮೇಶ್

ನಗರದ ಸರ್ಕಾರಿ ಮೆಡಿಕಲ್ ಕಾಲೇಜು ಎದುರು ಹಾದು ಹೋಗಿರುವ ಮುಖ್ಯ ಪೈಪ್‍ಲೈನ್ ಒಡೆದು ಹೋದ ಪರಿಣಾಮ ನಗರದ ಕೆಲ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವಂತಾಗಿದೆ. ಪೈಪ್‍ಲೈನ್ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈ ಸ್ಥಳದಲ್ಲಿಯೇ ಹಲವು ಬಾರಿ ಪೈಪ್‍ಲೈನ್ ದುರಸ್ತಿಗೀಡಾಗುತ್ತಿದೆ. ಇಲ್ಲಿರುವ ಪೈಪ್‍ಲೈನ್ ಹಳೇಯದಾಗಿದೆ. ಹಾಗೆಯೇ ರಸ್ತೆ ಡಾಂಬರೀಕರಣದ ವೇಳೆ ವೈಬ್ರೇಟರ್ ಯಂತ್ರ ಓಡಾಡಿದ್ದರಿಂದ ಪೈಪ್ ಬಿರುಕು ಬಿಡುತ್ತಿದೆ. ಉಳಿದಂತೆ ವಿದ್ಯುತ್ ಕಡಿತ ಮತ್ತೀತರ ಕಾರಣಗಳಿಂದ ಕೆಲವೊಮ್ಮೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ಉಳಿದಂತೆ ನೀರು ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಿಲ್ಲ' ಎಂದು ಕರ್ನಾಟಕ ನೀರು ಸರಬರಾಜು ಮಂಡಳಿಯ ಕಾರ್ಯಪಾಲಕ ಅಭಿಯಂತರ ರಮೇಶ್‍ರವರು ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. 

ಜನರಿಗೆ ತೊಂದರೆಯಾಗುತ್ತಿದೆ: ಪಾಲಿಕೆ ಸದಸ್ಯ ಧೀರರಾಜ್ 

ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ ಎಂಬ ಗಾದೆ ಮಾತು ಶಿವಮೊಗ್ಗ ನಗರಕ್ಕೆ ಸೂಕ್ತವಾಗಿ ಅನ್ವಯವಾಗುತ್ತದೆ. ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುವ ತುಂಗಾ ಡ್ಯಾಂನಲ್ಲಿ ವರ್ಷವೀಡಿ ನೀರಿನ ಲಭ್ಯತೆಯಿರುತ್ತದೆ. ನಗರದಲ್ಲಿಯೇ ತುಂಗಾ ನದಿ ಹಾದು ಹೋಗುತ್ತದೆ. ಆದರೆ ಸಮರ್ಪಕವಾಗಿ ನೀರು ಪೂರೈಕೆಯಾಗದಿರುವುದು ನಿಜಕ್ಕೂ ವಿಷಾದಕರ ಸಂಗತಿಯಾಗಿದೆ. ನಗರದ ಕೆಲ ಬಡಾವಣೆಗಳಿಗೆ ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ತಕ್ಷಣವೇ ಸಮರ್ಪಕವಾಗಿ ನೀರು ಪೂರೈಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಹಾಗೆಯೇ ಇತ್ತೀಚೆಗೆ ಮಹಾನಗರ ಪಾಲಿಕೆ ಆಡಳಿತ ಏಕಪಕ್ಷೀಯವಾಗಿ ಕುಡಿಯುವ ನೀರು, ಆಸ್ತಿ ತೆರಿಗೆ ದರ ಹೆಚ್ಚಳ ಮಾಡಿದೆ. ಈ ಬಗ್ಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ ನಂತರ ಆದೇಶ ಹೊರಡಿಸಬೇಕು' ಎಂದು ಮಹಾನಗರ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆರವರು ಆಗ್ರಹಿಸಿದ್ದಾರೆ. 

Writer - ವರದಿ: ಬಿ.ರೇಣುಕೇಶ್

contributor

Editor - ವರದಿ: ಬಿ.ರೇಣುಕೇಶ್

contributor

Similar News