ಮೈಸೂರು-ಕೊಡಗು ಲೋಕಸಭಾ ಫಲಿತಾಂಶದ ಮೇಲೆ ಅಡಗಿದೆಯಾ ಮೈತ್ರಿ ಸರ್ಕಾರದ ಭವಿಷ್ಯ ?

Update: 2019-05-07 16:29 GMT

ಮೈಸೂರು,ಮೇ.7: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಫಲಿತಾಂಶದ ಮೇಲೆ ಅಡಗಿದೆಯಾ ಮೈತ್ರಿ ಸರ್ಕಾರದ ಭವಿಷ್ಯ? ಈ ರೀತಿಯ ಚರ್ಚೆಗಳು ಇದೀಗ ರಾಜಕೀಯ ವಲಯದಲ್ಲಿ ಕಾವೇರುತ್ತಿದೆ.

ಪ್ರಸ್ತುತ ರಾಜಕೀಯ ರಂಗದಲ್ಲಿ ದಿನೇ ದಿನೇ ಹೊಸ ತಿರುವುಗಳು ಸೃಷ್ಟಿಯಾಗುತ್ತಿದ್ದು, ಮೈತ್ರಿ ಸರ್ಕಾರದ ಕುರ್ಚಿ ಅಲುಗಾಡಲು ಪ್ರಾರಂಭವಾಗಿದೆಯೇ? ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಿ.ಎಚ್.ವಿಜಯ್ ಶಂಕರ್ ಸ್ಪರ್ಧೆಮಾಡಿದ್ದು, ಅವರ ಭವಿಷ್ಯ ಸ್ಟ್ರಾಂಗ್ ರೂಂ ನಲ್ಲಿ ಅಡಗಿದೆ. ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯ್ ಶಂಕರ್ ಗೆಲುವು ಸಾಧಿಸದೇ ಇದ್ದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇ 23 ರ ನಂತರ ಬೆಂಬಲ ವಾಪಸ್ ಪಡೆಯಲು ನಿರ್ಧರಿಸಿದ್ದಾರಾ ಎಂಬ ಮಾತುಗಳು ಹರಿದಾಡುತ್ತಿವೆ.

ಬಿಜೆಪಿಯಲ್ಲಿದ್ದ ಸಿ.ಎಚ್.ವಿಜಯ್ ಶಂಕರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದ ಸಿದ್ದರಾಮಯ್ಯ ಮುಂದಿನ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವ ಭರವಸೆಯನ್ನು ನೀಡಿದ್ದರು. ಅದರಂತೆ ಯಶಸ್ವಿಯೂ ಆದರು. ವಿಜಯ್ ಶಂಕರ್ ಗೆಲ್ಲಲೇ ಬೇಕು ಎಂದು ಪ್ರತಿಷ್ಟೆಯಾಗಿ ತೆಗೆದುಕೊಂಡ ಸಿದ್ದರಾಮಯ್ಯ, ತಮ್ಮ ರಾಜಕೀಯ ಕಡು ವೈರಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಸೂಚಿಸಿದ್ದರು.

ಚುನಾವಣೆಯೇನೊ ಮುಗಿದು ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿದೆ. ಹೀಗಿರುವಾಗ ಇತ್ತೀಚೆಗೆ ಮೈಸೂರಿನಲ್ಲಿ ಸಚಿವ ಜಿ.ಟಿ.ದೇವೇಗೌಡ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಲ್ಲ, ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲವನ್ನೇ ಮೂಡಿಸಿ ಬಿಟ್ಟಿತು. ಇದಕ್ಕೆ ಸಹಮತ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರು ಜಿ.ಟಿ.ದೇವೇಗೌಡ ಹೇಳಿರುವುದು ಸತ್ಯ ಎಂದು ಹೇಳಿದ್ದಾರೆ.

ವಿಜಯ್ ಶಂಕರ್ ಗೆಲವು ಸಾಧಿಸಿದರೆ ಇದ್ಯಾವುದಕ್ಕೂ ಸಿದ್ದರಾಮಯ್ಯ ತಲೆಕೆಡಿಸಿಕೊಳ್ಳುವುದಿಲ್ಲ, ಒಂದು ವೇಳೆ ಸೋತರೆ ಜಿ.ಟಿ.ದೇವೇಗೌಡರ ಸಚಿವ ಸ್ಥಾನವನ್ನು ಕಿತ್ತುಹಾಕಲು ಒತ್ತಡ ಹೇರಲಿದ್ದಾರೆ. ಹಾಗೆಯೇ, ಸಾ.ರಾ.ಮಹೇಶ್ ಅವರನ್ನು ಸಚಿವ ಸಂಪುಟದಿಂದ ಹೊರಗಿಡುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಲಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಪ್ಪದಿದ್ದರೆ ಮೈತ್ರಿ ಸರ್ಕಾರದ ಬೆಂಬಲವನ್ನು ವಾಪಸ್ ಪಡೆಯಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿದೆ.

ವಿಜಯ್ ಶಂಕರ್ ಗೆಲುವಿಗಾಗಿ ಸಿದ್ದರಾಮಯ್ಯ ತಮ್ಮ ವಿರೋಧಿಗಳನ್ನು ಹತ್ತಿರಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಮನವಿ ಮಾಡಿದ್ದರು. ಆದರೆ ಒಂದು ವೇಳೆ ಸೋಲುಂಟಾದರೆ ನಿರ್ಧಾಕ್ಷಿಣ್ಯವಾಗಿ ಇಬ್ಬರು ಸಚಿವರ ತಲೆದಂಡ ಗ್ಯಾರಂಟಿ. ಇಲ್ಲದಿದ್ದರೆ ಮೈತ್ರಿ ಸರ್ಕಾರ ಪತನಗೊಳ್ಳಲಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳುತ್ತಾರೆ.

ಏನೇ ಆದರೂ ಮೈತ್ರಿ ಸರ್ಕಾರ ಉಳಿಯಬೇಕೆಂದರೆ ಮೈಸೂರಿನಲ್ಲಿ ವಿಜಯ್ ಶಂಕರ್ ಗೆಲ್ಲಬೇಕು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಮೈತ್ರಿ ಸರ್ಕಾರದ ಮೇಲೆ ಪರಿಣಾಮ ಬೀರಲಿದೆ ಎಂಬ ಮಾತುಗಳು ಗಟ್ಟಿಯಾಗಿ ಕೇಳಿಬರುತ್ತಿವೆ.

Writer - ನೇರಳೆ ಸತೀಶ್‍ ಕುಮಾರ್

contributor

Editor - ನೇರಳೆ ಸತೀಶ್‍ ಕುಮಾರ್

contributor

Similar News