ಶಿವಮೊಗ್ಗ: ಜನ-ವಾಹನ ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿದೆ 'ಸ್ಮಾರ್ಟ್ ಸಿಟಿ'ಯ ಮುಖ್ಯ ರಸ್ತೆಗಳು

Update: 2019-05-07 17:38 GMT

ಶಿವಮೊಗ್ಗ, ಮೇ 7: ನಗರ-ಪಟ್ಟಣ ಬೆಳವಣಿಗೆ, ಜನ-ವಾಹನ ಸಂಚಾರಕ್ಕೆ ಅನುಗುಣವಾಗಿ ಮೂಲಸೌಕರ್ಯಗಳ ಬೆಳವಣಿಗೆಯಾಗಬೇಕು. ಆದರೆ ಶಿವಮೊಗ್ಗ ನಗರದ ಬೆಳವಣಿಗೆಯ ವೇಗಕ್ಕೆ ಅನುಗುಣವಾಗಿ ಮೂಲಸೌಕರ್ಯಗಳು ಅಭಿವೃದ್ದಿಯಾಗುತ್ತಿಲ್ಲ. ಇದಕ್ಕೆ ನಗರದ ಪ್ರಮುಖ ರಸ್ತೆಗಳೇ ಸಾಕ್ಷಿಯಾಗಿವೆ.

ಕೇಂದ್ರ ಸರ್ಕಾರದ ಪ್ರತಿಷ್ಠಿತ 'ಸ್ಮಾರ್ಟ್ ಸಿಟಿ' ಯೋಜನೆಯಡಿ ಆಯ್ಕೆಯಾಗಿ, ನೂರಾರು ಕೋಟಿ ರೂ. ವೆಚ್ಚದಲ್ಲಿ ಹತ್ತು ಹಲವು ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿರುವ ಶಿವಮೊಗ್ಗ ನಗರದ ಹಲವು ಪ್ರಮುಖ ರಸ್ತೆಗಳು ಪ್ರಸ್ತುತ ಜನ-ವಾಹನ ಸಂಚಾರವೇ ದುಸ್ತರವಾಗಿ ಪರಿಣಮಿಸಿದೆ. ಅಪಘಾತದ, ಅಪಾಯಕಾರಿ ಮಾರ್ಗಗಳಾಗಿ ಮಾರ್ಪಡಾಗುತ್ತಿವೆ. 

ಕಳೆದ ಹಲವು ವರ್ಷಗಳಿಂದ ಪ್ರಮುಖ ರಸ್ತೆಗಳನ್ನು ಅಗಲೀಕರಣಗೊಳಿಸಿ, ಮೇಲ್ದರ್ಜೆಗೇರಿಸುವ ಯೋಜನೆ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸ್ಥಳೀಯಾಡಳಿತದ ನಿರ್ಲಕ್ಷ್ಯ ಧೋರಣೆಯಿಂದ ಕೆಲ ಮುಖ್ಯ ರಸ್ತೆಗಳಲ್ಲಿ ಜನರಿರಲಿ, ವಾಹನಗಳು ಓಡಾಡಲೂ ಸಾಧ್ಯವಾಗದಂತಹ ದುಃಸ್ಥಿತಿಯಿದೆ. ಮತ್ತೆ ಕೆಲ ರಸ್ತೆಗಳಲ್ಲಂತೂ ಫುಟ್‍ಪಾತ್‍ಗಳೇ ಇಲ್ಲವಾಗಿದೆ. ಬಹುತೇಕ ಪಾದಚಾರಿ ಮಾರ್ಗಗಳು ಒತ್ತುವರಿಯಾಗಿವೆ. ಇದರಿಂದ ಪಾದಚಾರಿಗಳು ತಮ್ಮ ಜೀವ ಕೈಯಲ್ಲಿಡಿದು ರಸ್ತೆಗಳ ನಡುವೆಯೇ ಓಡಾಡುವಂತಹ ಸ್ಥಿತಿಯಿದೆ. ಇನ್ನೊಂದೆಡೆ ರಸ್ತೆಗಳ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ ಮಾಡುತ್ತಿರುವುದರಿಂದ, ಟಾಫ್ರಿಕ್ ಕಿರಿಕಿರಿಯು ತೀವ್ರವಾಗುವಂತಾಗಿದೆ. 

ದಟ್ಟಣೆಯಿರುವ ರಸ್ತೆಗಳು: ಹೆಲಿಪ್ಯಾಡ್ ವೃತ್ತದಿಂದ ಶಿವಮೂರ್ತಿ ವೃತ್ತದ ನಡುವಿನ ಕುವೆಂಪು ರಸ್ತೆ, ಗೋಪಿ ವೃತ್ತದಿಂದ ಜೈಲ್ ವೃತ್ತದ ನಡುವಿನ ದುರ್ಗಿಗುಡಿ ರಸ್ತೆ, ಜೈಲ್ ವೃತ್ತದಿಂದ ಲಕ್ಷ್ಮೀ ಚಿತ್ರಮಂದಿರವರೆಗಿನ ಜೈಲ್ ರಸ್ತೆ, ಬಿ.ಹೆಚ್.ರಸ್ತೆ ನೆಹರೂ ರಸ್ತೆ ಸಂಪರ್ಕಿಸುವ ಸವಾರ್ ಲೈನ್ ರಸ್ತೆ, ಗಾಂಧಿಬಜಾರ್ ರಸ್ತೆ, ಎ.ಎ.ವೃತ್ತ ಸಂಪರ್ಕಿಸುವ ಕೆ.ಆರ್.ಪುರಂ ರಸ್ತೆ, ಓ.ಟಿ.ರಸ್ತೆಗಳು, ಗಾರ್ಡನ್ ಏರಿಯಾ ರಸ್ತೆಗಳನ್ನು ಸಂಪರ್ಕಿಸುವ ಎಲ್.ಎಲ್.ಆರ್. ರಸ್ತೆ, ಜೆಪಿಎನ್ ರಸ್ತೆ ಅತೀ ಹೆಚ್ಚು ಜನ-ವಾಹನ ದಟ್ಟಣೆಯಿರುವ ರಸ್ತೆಗಳಾಗಿವೆ. 

ಇದರಲ್ಲಿ ಟ್ರಾಫಿಕ್ ದಟ್ಟಣೆಯ ಕಾರಣದಿಂದಲೇ ಕೆಲ ರಸ್ತೆಗಳಲ್ಲಿ ಏಕಮುಖ ವಾಹನ ಸಂಚಾರಕ್ಕೆ ಹಾಗೂ ಒಂದು ಕಡೆ ಮಾತ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಆದಾಗ್ಯೂ ಈ ರಸ್ತೆಗಳಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಲ್ಲ. ಸುಗಮ ವಾಹನ ಸಂಚಾರ ದುಸ್ತರವಾಗಿದೆ ಎಂದು ನಾಗರಿಕರು ದೂರುತ್ತಾರೆ. 

'ಕೆಲ ಮುಖ್ಯ ರಸ್ತೆಗಳು ಅಗಲೀಕರಣ ಹಾಗೂ ಮೇಲ್ದರ್ಜೆಗೇರಿ ಅದೆಷ್ಟೋ ವರ್ಷಗಳೇ ಆಗಿವೆ. ಕೆಲ ರಸ್ತೆಗಳಂತೂ 20-30 ವರ್ಷಗಳ ಹಿಂದಿನ ವಾಹನ ದಟ್ಟಣೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರ್ಮಿಸಿದ್ದಾಗಿದೆ. ಏರುತ್ತಿರುವ ಜನ ಹಾಗೂ ವಾಹನಗಳ ಸಂಖ್ಯೆಗೆ ಅನುಗುಣವಾಗಿ ರಸ್ತೆಗಳನ್ನು ಮೇಲ್ದರ್ಜೆಗೇರಿಸಿಲ್ಲ. 

ಹಾಗೆಯೇ ಹಲವು ಮುಖ್ಯ ರಸ್ತೆಗಳಿಗೆ ಸೇರಿದ ಜಾಗವು ಅವ್ಯಾಹತವಾಗಿ ಒತ್ತುವರಿಯಾಗಿದೆ. ಕುವೆಂಪು ರಸ್ತೆ ಮೊದಲಾದೆಡೆ ರಸ್ತೆಗೆ ಹೊಂದಿಕೊಂಡಂತೆ ಮನೆ, ವಾಣಿಜ್ಯ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ. ಇನ್ನೂ ಕೆಲವೆಡೆ ರಸ್ತೆಯ ಇಕ್ಕೆಲಗಳು ವಾಣಿಜ್ಯ ವ್ಯವಹಾರಗಳಿಗೆ ಬಳಕೆಯಾಗುತ್ತಿವೆ. ಈ ಎಲ್ಲ ಕಾರಣಗಳಿಂದ ನಗರದ ಹಲವು ಮುಖ್ಯ ರಸ್ತೆಗಳು ಜನ-ವಾಹನಗಳ ಸಂಚಾರಕ್ಕೆ ಅಯೋಗ್ಯವಾಗಿವೆ ಎಂದರೇ ತಪ್ಪಾಗಲಾರದು' ಎಂದು ಕೆಲ ನಾಗರಿಕರು ಅಭಿಪ್ರಾಯಪಡುತ್ತಾರೆ. 

ಕ್ರಮ ಕೈಗೊಳ್ಳಲಿ: ಪ್ರಸ್ತುತ ಸ್ಮಾರ್ಟ್ ಸಿಟಿ ಯೋಜನೆಯಡಿ, ನೂರಾರು ಕೋಟಿ ರೂ. ವೆಚ್ಚದಲ್ಲಿ ನಗರದ ಪ್ರಮುಖ ಬಡಾವಣೆಗಳ ರಸ್ತೆ ಅಭಿವೃದ್ದಿಗೊಳಿಸಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯೇ, ಪ್ರಮುಖ ರಸ್ತೆಗಳನ್ನು ಮುಂದಿನ ಹತ್ತಿಪ್ಪತ್ತು ವರ್ಷಗಳ ಜನ-ವಾಹನ ಸಂಖ್ಯೆಗೆ ಅನುಗುಣವಾಗಿ ಅಭಿವೃದ್ದಿಗೊಳಿಸುವ ಯೋಜನೆಗೆ ಕ್ರಮಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಥಳಿಯಾಡಳಿತ, ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳು ಸೂಕ್ತ ಗಮನಹರಿಸಲಿದ್ದಾರೆಯೇ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ. 

ನೆನೆಗುದಿಗೆ ಬಿದ್ದ ಕುವೆಂಪು ರಸ್ತೆ ಅಗಲೀಕರಣ ಪ್ರಸ್ತಾಪ

ಅತೀ ಹೆಚ್ಚು ಜನ-ವಾಹನ ದಟ್ಟಣೆಯಿರುವ ಹಾಗೂ ವ್ಯಾಪಾರ-ವಹಿವಾಟು ಹೆಚ್ಚಿರುವ ಕುವೆಂಪು ರಸ್ತೆಯ ಅಗಲೀಕರಣಗೊಳಿಸುವ ಪ್ರಸ್ತಾಪ ಕಳೆದ ಹಲವು ವರ್ಷಗಳಿಂದಿದೆ. ಕಳೆದ ಕೆಲ ವರ್ಷಗಳ ಹಿಂದೆ ಪಿಡಬ್ಲ್ಯೂಡಿ ಇಲಾಖೆ ಮೂಲಕ ರಸ್ತೆ ಅಗಲೀಕರಣಗೊಳಿಸುವ ಚರ್ಚೆ ನಡೆದಿತ್ತು. ಅದರಂತೆ ಎಷ್ಟು ಅಡಿ ರಸ್ತೆ ಅಗಲೀಕರಣಗೊಳಿಸಬೇಕು, ತೆರವಾಗುವ ಕಟ್ಟಡಗಳ ಸಂಖ್ಯೆ ಮತ್ತಿತರ ವಿವರಗಳನ್ನು ಕೂಡ ಕಲೆ ಹಾಕಲಾಗಿತ್ತು. ಸುಮಾರು 60 ರಿಂದ 70 ಕೋಟಿ ರೂ. ಅಗತ್ಯವಿದೆ ಎಂದು ಪಿಡಬ್ಲ್ಯೂಡಿ ಇಲಾಖೆಯು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಯಾಗದ ಕಾರಣದಿಂದ ಈ ರಸ್ತೆಯ ಅಗಲೀಕರಣ ಪ್ರಸ್ತಾಪ ನೆನೆಗುದಿಗೆ ಬೀಳುವಂತಾಗಿದೆ. ದಿನದಿಂದ ದಿನಕ್ಕೆ ಈ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಈ ರಸ್ತೆಯಲ್ಲಿ ಫುಟ್‍ಪಾತ್‍ಗಳೇ ಇಲ್ಲವಾಗಿದೆ. ಕೆಲವೆಡೆ ರಸ್ತೆ ಜಾಗ ಅತಿಕ್ರಮಿಸಿ ಮನೆ, ವಾಣಿಜ್ಯ ಕಟ್ಟಡಗಳ ನಿರ್ಮಾಣ ಮಾಡಿರುವುದು ಕಂಡುಬರುತ್ತದೆ. 

ಅಭಿವೃದ್ದಿಗೆ ಗಮನಹರಿಸಲಿ: ಯುವ ಮುಖಂಡ ಆರ್.ಕಿರಣ್

ಶಿವಮೊಗ್ಗ ನಗರವು ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲೊಂದಾಗಿದೆ. ನಗರದ ಜನಸಂಖ್ಯೆ ಹಾಗೂ ವಾಹನ ದಟ್ಟಣೆಗೆ ಅನುಗುಣವಾಗಿ ರಸ್ತೆಗಳು ಅಭಿವೃದ್ದಿಯಾಗಬೇಕಾಗಿದೆ. ಇದು ಅನಿವಾರ್ಯ ಕೂಡ ಆಗಿದೆ. ಸದ್ಯ ನಗರದ ಹೃದಯ ಭಾಗದಲ್ಲಿರುವ ಕೆಲ ಮುಖ್ಯ ರಸ್ತೆಗಳು ಕಿರಿದಾಗಿರುವುದು ಹಾಗೂ ಒತ್ತುವರಿಯಾಗಿರುವುದರಿಂದ ಜನ-ವಾಹನ ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿವೆ. ಈ ಕಾರಣದಿಂದ ಮುಖ್ಯ ರಸ್ತೆಗಳ ಅಗಲೀಕರಣ ಹಾಗೂ ಮೇಲ್ದರ್ಜೆಗೇರಿಸಲು ತುರ್ತು ಕ್ರಮಕೈಗೊಳ್ಳಬೇಕಾಗಿದೆ' ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್. ಕಿರಣ್‍ ಅಭಿಪ್ರಾಯಪಡುತ್ತಾರೆ. 

ಒತ್ತುವರಿ ತೆರವಿಗೆ ಮುಂದಾಗಲಿ: ಪರಿಸರ ಸಿ. ರಮೇಶ್

ನಗರದ ಹಲವು ಮುಖ್ಯ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳೇ ಕಣ್ಮರೆಯಾಗಿದ್ದು, ಸಂಪೂರ್ಣ ಒತ್ತುವರಿಯಾಗಿವೆ. ಇದರಿಂದ ಪಾದಚಾರಿಗಳು ರಸ್ತೆ ಮಧ್ಯೆ, ವಾಹನಗಳ ಜೊತೆ ಓಡಾಡುವಂತಾಗಿದೆ. ಅಪಘಾತಕ್ಕೆ ತುತ್ತಾಗುವಂತಾಗಿದೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಈ ಕಾರಣದಿಂದ ಮುಖ್ಯ ರಸ್ತೆಗಳಲ್ಲಿ ಸುವ್ಯವಸ್ಥಿತ ಪಾದಚಾರಿ ಮಾರ್ಗಗಳ ಅಭಿವೃದ್ದಿಗೆ ವಿಶೇಷ ಯೋಜನೆಯನ್ನು ಮಹಾನಗರ ಪಾಲಿಕೆ ಆಡಳಿತ ರೂಪಿಸಿ ಅನುಷ್ಠಾನಗೊಳಿಸಬೇಕು' ಎಂದು ಪರಿಸರ ಸಿ. ರಮೇಶ್‍ ಒತ್ತಾಯಿಸುತ್ತಾರೆ. 

ಸ್ಮಾರ್ಟ್ ಸಿಟಿಯಡಿ ಅಭಿವೃದ್ದಿಗೊಳಿಸಲಿ: ಜಿ.ಎಂ.ಸುರೇಶ್‍ ಬಾಬು

ಸದ್ಯ ಸ್ಮಾರ್ಟ್ ಸಿಟಿ ಯೋಜನೆಯಡಿ ಬಸ್ ನಿಲ್ದಾಣ ದಿಂದ ಆಲ್ಕೋಳದ ವೃತ್ತದವರೆಗಿನ ಸುಮಾರು 2-3 ಕಿ.ಮೀ. ರಸ್ತೆ ಅಭಿವೃದ್ದಿಗೆ ಸರಿಸುಮಾರು 30 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚ ಮಾಡುತ್ತಿರುವ ಮಾಹಿತಿಗಳಿವೆ. ಒಂದೇ ರಸ್ತೆಗೆ ಇಷ್ಟೊಂದು ವೆಚ್ಚ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ. ಇದಕ್ಕೆ ಬದಲಾಗಿ ಸ್ಮಾರ್ಟ್ ಸಿಟಿಯಡಿ ಜನ-ವಾಹನ ದಟ್ಟಣೆ ಹೆಚ್ಚಿರುವ ಮುಖ್ಯ ರಸ್ತೆಗಳ ಅಭಿವೃದ್ದಿಗೆ ವಿನಿಯೋಗಿಸಿದರೆ ನಾಗರಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಜಿಲ್ಲಾ ಪತ್ರ ಬರಹಗಾರರ ಸಂಘದ ಮುಖಂಡ ಜಿ.ಎಂ.ಸುರೇಶ್‍ ಬಾಬು ಅಭಿಪ್ರಾಯಪಡುತ್ತಾರೆ. 

Writer - ವರದಿ: ಬಿ. ರೇಣುಕೇಶ್

contributor

Editor - ವರದಿ: ಬಿ. ರೇಣುಕೇಶ್

contributor

Similar News