ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯ
ಚುನಾವಣಾ ರಾಜಕಾರಣದಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಬೇಕೆಂಬ ಆಗ್ರಹಗಳ ಹಿಂದಿನ ಉದ್ದೇಶವು ರಾಜಕೀಯದಲ್ಲಿ ಮಹಿಳೆಯರ ಭೌತಿಕ ಪ್ರಾತಿನಿಧ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ. ಬದಲಿಗೆ ಅವಕಾಶವಾದ, ಲಿಂಗೀಯತೆ ಮತ್ತು ಪುರುಷಾತಿರೇಕವಾದಗಳಿಂದ ತುಂಬಿಹೋಗಿರುವ ಪ್ರಧಾನ ಧಾರೆ ರಾಜಕಾರಣವನ್ನು ಬದಲಿಸುವಂತೆ ಪ್ರಭಾವಿಸುವುದೂ ಅದರ ಉದ್ದೇಶಗಳಲ್ಲಿ ಒಂದಾಗಿದೆ. ಆದರೆ ಕಾಂಗ್ರೆಸ್‌ನ ವಕ್ತಾರೆಯಾಗಿದ್ದ ಪ್ರಿಯಾಂಕಾ ಚತುರ್ವೇದಿಯವರು ಕಾಂಗ್ರೆಸನ್ನು ತೊರೆದು ಶಿವಸೇನೆಯನ್ನು ಸೇರಿದಂತಹ ಘಟನೆಗಳು ಸಂದರ್ಭದಲ್ಲಿರುವ ದುರಂತ ವಿಪರ್ಯಾಸಗಳತ್ತವೂ ಗಮನ ಸೆಳೆಯುತ್ತದೆ. ತನ್ನ ವಿರುದ್ಧ ಲಿಂಗೀಯ ಮತ್ತು ರೌಡಿಗಿರಿಯಂಥ ದೌರ್ಜನ್ಯಗಳನ್ನು ಮಾಡಿದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡದ್ದನ್ನು ಆಕ್ಷೇಪಿಸಿ ಕಾಂಗ್ರೆಸನ್ನು ತೊರೆದ ಚತುರ್ವೇದಿಯವರನ್ನು ಬರಮಾಡಿಕೊಂಡಿದ್ದು ಮಾತ್ರ ಲಿಂಗೀಯ ದೌರ್ಜನ್ಯ ಮತ್ತು ರೌಡಿಗಿರಿಗಳಲ್ಲಿ ಕಾಂಗ್ರೆಸ್‌ಗಿಂತ ಉತ್ತಮ ಹಿನ್ನೆಲೆಯನ್ನೇನೂ ಹೊಂದಿರದ ಶಿವಸೇನಾ ಪಕ್ಷ. ತನ್ನ ಈ ಮೇಲ್ಚಲನೆಯನ್ನು ಸಮರ್ಥಿಸಿಕೊಂಡಿರುವ ಚತುರ್ವೇದಿಯವರು ಮಹಿಳೆಯರ ಹಕ್ಕುಗಳಿಗಾಗಿ ತಮ್ಮ ಹೋರಾಟ ಮುಂದುವರಿಸುವುದಾಗಿಯೂ ಸಹ ಹೇಳಿದ್ದಾರೆ.
ಇಂತಹ ಬೆಳವಣಿಗೆಗಳು ರಾಜಕೀಯಕ್ಕೆ ಹೊಸದೇನಲ್ಲವಾದರೂ, ಅದು ರಾಜಕಾರಣದಲ್ಲಿ ಈಗ ‘ಹೊಸದಾಗಿ ಸರ್ವೇ ಸಾಮಾನ್ಯ’ವಾಗುತ್ತಿರುವ ವಿಷಯವೊಂದನ್ನು ಬೆಳಕಿಗೆ ತಂದಿದೆ: ಅದು ಯಾವುದೇ ಬಗೆಯ ಅಪರಾಧಿ ಮನೋಭಾವ, ಬದ್ಧತೆ ಅಥವಾ ತಾತ್ವಿಕ ನೀತಿ ನಿಯಮಗಳಿಗೆ ಬದ್ಧವಾಗದೆ ಬೆಳೆಯಬೇಕೆಂಬ ನಗ್ನ ಸ್ವಾಭಿವೃದ್ಧಿವಾದ (ಕೆರೆರಿಸಂ). ಈ ಹೊಸ ಸರ್ವೇ ಸಾಮಾನ್ಯತೆಯನ್ನು ಸಮೀಪದಿಂದ ಪರಿಶೀಲಿಸುವ ಅಗತ್ಯವಿದೆ. ಇದು ಈ ನಡುವೆ ರಾಜಕೀಯ ಪಕ್ಷಗಳು ತಮ್ಮ ಸದಸ್ಯರನ್ನು ತಮ್ಮ ಪಕ್ಷದ ಬ್ರಾಂಡನ್ನು ಯಶಸ್ವಿಯಾಗಿ ಮಾರಾಟ ಮಾಡಬಲ್ಲ ಮತ್ತು ಸಂಬಳಕ್ಕಾಗಿ ಕೆಲಸ ಮಾಡುವ ಉದ್ಯೋಗಿಗಳನ್ನಾಗಿ ಕಾಣುತ್ತಿರುವುದನ್ನೂ ಸಹ ತೋರಿಸುತ್ತದೆ. ಆದರೆ ಅಂತಹ ಸದಸ್ಯರಿಗೆ ಜನರೊಂದಿಗಾಗಲೀ ಅಥವಾ ತಾನು ಸದಸ್ಯರಾಗಿರುವ ಪಕ್ಷದ ಗುರಿ ಮತ್ತು ಸೈದ್ಧಾಂತಿಕ ತಿರುಳುಗಳ ಜೊತೆಯಾಗಲೀ ಆಳವಾದ ಸಂಬಂಧವೇ ಇರದಿರುವುದರಿಂದ ಅಂತಹವರನ್ನು ರಾಜಕಾರಣಿಗಳೆಂದೂ ಹೇಳಲು ಸಾಧ್ಯವಿಲ್ಲ. ಹೀಗಾಗಿ ಅವರು ಕಾರ್ಪೊರೇಟ್ ಸಿಬ್ಬಂದಿ ಸಂಸ್ಕೃತಿಯಲ್ಲಿ ಸರ್ವೇ ಸಾಮಾನ್ಯವಾಗಿರುವಂತೆ ಪಕ್ಷಗಳನ್ನೂ ಸಹ ಬದಲಾಯಿಸುತ್ತಾರೆ.
ನಿರ್ದಿಷ್ಟ ಘಟನೆಯಲ್ಲಿರುವ ಮತ್ತೊಂದು ಸಮಸ್ಯೆಯೆಂದರೆ ಮಹಿಳಾ ಹಕ್ಕುಗಳು ಮತ್ತು ಸ್ತ್ರೀವಾದದ ಬಗೆಗಿನ ಮಾತುಗಳನ್ನು ತೀರಾ ಸೀಮಿತವಾಗಿ ಮತ್ತು ಸದ್ಯದ ಸ್ವರಕ್ಷಣೆಯ ಸಾಧನವಾಗಿ ಬಳಸಿರುವುದು. ಭ್ರಷ್ಟ ಮತ್ತು ಸ್ತ್ರೀ ದ್ವೇಷಿ ರಾಜಕಾರಣವನ್ನು ಅಂಗೀಕರಿಸುವ ಅಥವಾ ಅದರ ವಿರುದ್ಧ ಹೋರಾಡುವುದರ ನಡುವೆ ಮಾಡಿಕೊಂಡಿರುವ ಆಯ್ಕೆಯು ಸ್ತ್ರೀವಾದವನ್ನು ಹೇಗೆ ಅರ್ಥಮಾಡಿಕೊಳ್ಳಲಾಗಿದೆಯೆಂಬುದನ್ನು ತೋರಿಸುತ್ತದೆ. ಸ್ತ್ರೀವಾದದ ನೈಜ ಗ್ರಹಿಕೆಯು ಪುರುಷಪ್ರಾಧಾನ್ಯತೆಗೆ ವ್ಯತಿರಿಕ್ತವಾದ ಮತ್ತು ಭಿನ್ನವಾದ ರಾಜಕೀಯ ಭಾಷೆಯಲ್ಲಿ ಮಾತನಾಡುತ್ತದೆ. ಶಾಸನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಬೇಕೆಂಬ ಆಗ್ರಹದ ಹಿಂದಿರುವ ನಿಜವಾದ ನಿರೀಕ್ಷೆಯು ಇದೇ ಆಗಿದೆ. ಮಹಿಳೆಯರು ರಾಜಕೀಯದಲ್ಲಿ ಇದ್ದು ಯಶಸ್ವಿಯಾಗಬೇಕೆಂದರೆ ಪುರುಷರಂತೇ ಇರಬೇಕು ಎಂಬ ಮಹಿಳಾ ರಾಜಕಾರಣಿಗಳ ತಿಳವಳಿಕೆಗಳಿಂದ ಮಹಿಳೆಯರು ಯಶಸ್ವಿಯಾಗುವುದಿರಲಿ, ಉಳಿಯಲೇ ಅವಕಾಶ ಮಾಡಿಕೊಡದಂತಹ ಪುರುಷಾತಿರೇಕದ ರಾಜಕೀಯದ ಮೇಲೆ ಏನಾದರೂ ಪ್ರಭಾವ ಬೀರಲು ಸಾಧ್ಯವೇ?
ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿರುವುದನ್ನು ಖಾತರಿ ಮಾಡಬೇಕೆಂದರೆ ಮಹಿಳಾ ಮೀಸಲಾತಿ ತುಂಬಾ ಮುಖ್ಯ. ಕಳೆದ ಸಂಸತ್ತಿನಲ್ಲಿ ಶೇ.11ರಷ್ಟು ಮಾತ್ರ ಮಹಿಳಾ ಪ್ರತಿನಿಧಿಗಳಿದ್ದರು. ಅಂದರೆ 90ಲಕ್ಷ ಮಹಿಳೆಯರಿಗೆ ಒಬ್ಬರು. ಇದು ಮಹಿಳಾ ಮೀಸಲಾತಿಯ ಅಗತ್ಯವನ್ನು ಇನ್ನೂ ಪ್ರಬಲವಾಗಿ ಬೆಳಕಿಗೆ ತರುತ್ತದೆ. ರಾಜಕೀಯ ಪಕ್ಷಗಳು ಸಹ ಸ್ವಪ್ರೇರಣೆಯಿಂದ ಮಹಿಳೆಯರಿಗೆ ಅವಕಾಶ ಕೊಡುವುದು ತುಂಬಾ ಕಡಿಮೆಯೆನ್ನುವ ಸತ್ಯವೂ ಸಹ ಮೀಸಲಾತಿಯ ಅಗತ್ಯವನ್ನು ಜರೂರು ಮಾಡುತ್ತದೆ. ಪಕ್ಷಗಳು ಮಹಿಳಾ ಪ್ರತಿನಿಧಿಗಳ ತಾರಾ ವರ್ಚಸ್ಸನ್ನು ಅಥವಾ ಅವರ ವಂಶಪರಂಪರೆಯ ಮೇಲೆ ಪ್ರಧಾನವಾಗಿ ಆಧಾರ ಪಡುತ್ತವೆ. ರಾಜಕೀಯ ಪಕ್ಷಗಳು ಮಹಿಳಾ ಅಭ್ಯರ್ಥಿಗಳನ್ನು ಚುನಾಯಿಸುವಾಗ ಅವರ ಗೆಲ್ಲುವ ಸಾಮರ್ಥ್ಯಗಳನ್ನು ಮಾತ್ರ ಪರಿಗಣಿಸುತ್ತವೆ. ಆದರೆ ಸಮುದಾಯದೊಂದಿಗೆ ಅವರು ಎಷ್ಟು ಬೆರೆತು ಕೆಲಸ ಮಾಡಿದ್ದಾರೆಂಬುದನ್ನು ಕಡೆಗಣಿಸುತ್ತವೆ. ಒಂದು ವೇಳೆ ಪಕ್ಷದ ಟಿಕೆಟ್ ದೊರೆತರೂ ಅವರು ತಮ್ಮ ಬಗ್ಗೆ ವ್ಯತಿರಿಕ್ತ ಧೋರಣೆಯುಳ್ಳ, ಕಚ್ಚೆಹರುಕ, ಮತ್ತು ದಬ್ಬಾಳಿಕೆ ಮಾಡುವಂತಹ ಕಾರ್ಯಕರ್ತರೊಂದಿಗೆ ಕೆಲಸ ಮಾಡಬೇಕಾದ ಪ್ರತಿಕೂಲ ಸಂದರ್ಭವನ್ನು ಎದುರಿಸಬೇಕಾಗುತ್ತದೆ ಅಥವಾ ತಮ್ಮನ್ನು ಆಟದ ಗೊಂಬೆಯನ್ನಾಗಿ ಪರಿಗಣಿಸುವ, ಅಥವಾ ಪ್ರತಿಯೊಂದನ್ನೂ ಮತ್ತೊಬ್ಬರೇ ನಿರ್ವಹಿಸುವ ಅಥವಾ ತಮ್ಮ ಸ್ತ್ರೀತನವನ್ನು ಮಾತ್ರ ಗ್ಲಾಮರೀಕರಿಸುವಂತಹ ಅಪಮಾನಗಳಿಗೆ ಗುರಿಯಾಗಬೇಕಾಗುತ್ತದೆ. ಹೀಗೆ ತಮ್ಮ ವ್ಯಕ್ತಿತ್ವವು ಹನನವಾಗುವುದನ್ನು ಮಹಿಳೆಯರೇ ವಿರೋಧಿಸಬೇಕಿರುವುದು ಅತ್ಯಗತ್ಯ.
ಒಂದೊಮ್ಮೆ ಮಹಿಳೆಯರು ಚುನಾವಣೆಯಲ್ಲಿ ಗೆದ್ದು ರಾಜಕೀಯ ಅಧಿಕಾರವನ್ನು ಪಡೆದುಕೊಂಡರೂ ಆ ಅಧಿಕಾರವು ರಾಜಕೀಯದಲ್ಲಿ ಸಮರ್ಥ ಭಾಗೀದಾರಿಕೆಯಾಗಿ ಪರಿವರ್ತನೆಯಾಗುತ್ತದೆಂದು ಹೇಳಲಾಗುವುದಿಲ್ಲ. ಮಹಿಳೆಯರೇ ಅಧಿನಾಯಕಿಯಾಗಿರುವ ಪಕ್ಷಗಳಲ್ಲೂ ಆಳವಾಗಿ ಬೇರುಬಿಟ್ಟಿರುವ ಸ್ತ್ರೀ ವಿರೋಧವನ್ನು ಮುರಿಯಲು ಆಗಿಲ್ಲದಿರುವುದೇ ಈ ವಾಸ್ತವವನ್ನು ಎತ್ತಿ ತೋರಿಸುತ್ತದೆ. ಆದರೆ ಕೆಳಗಿನ ಹಂತದ ರಾಜಕೀಯ ಸಂಸ್ಥೆಗಳಲ್ಲಿ ಮಹಿಳೆಯರ ಭಾಗೀದಾರಿಕೆ ಹೆಚ್ಚಿರುವುದರಿಂದ ರಾಜಕೀಯ ಕೆಲಸಗಳ ಬಗೆಗಿನ ಧೋರಣೆ ಮತ್ತು ಕಾರ್ಯಸೂಚಿಗಳಲ್ಲಿ ಬದಲಾವಣೆಗಳು ಬಂದಿರುವುದನ್ನು ಅಧ್ಯಯನಗಳು ತೋರಿಸುತ್ತವೆ. ಆದ್ದರಿಂದ ಮಹಿಳೆಯರು ಚುನಾಯಿತರಾದರೆ ಅವರು ಭಿನ್ನಾವಾಗಿ ಯೋಚಿಸುತ್ತಾರೆಯೇ, ಕೆಲಸದ ಸಾರದಲ್ಲಿ ಬದಲಾವಣೆ ಬರುವಂತೆ ಭಿನ್ನವಾಗಿ ಕಾರ್ಯ ನಿರ್ವಹಿಸುತ್ತಾರೆಯೇ? ಎಂದು ಕೇಳಿಕೊಳ್ಳುವ ಅಗತ್ಯವಿದೆ. ಮಹಿಳಾ ಮೀಸಲಾತಿಯು ಶಾಸನಸಭೆಗಳಲ್ಲಿ ಅವರ ಪ್ರಾತಿನಿಧ್ಯವನ್ನು ಖಾತರಿಗೊಳಿಸಿದರೂ ಸಹ ರಾಜಕೀಯ ಶಕ್ತಿಬಲಗಳ ಚಲನೆಯ ಗತಿಯನ್ನು ಮಾರ್ಪಡಿಸುವಂತಹ ಎರಡನೇ ಹೆಜ್ಜೆಯನ್ನೂ ಮಹಿಳೆಯರು ನಂತರದಲ್ಲಿ ಇಡಬೇಕಾಗುತ್ತದೆ.
ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳೆಯರ ನಿರ್ದಿಷ್ಟ ಬೇಡಿಕೆಗಳನ್ನು ಪ್ರತಿನಿಧಿಸಬಲ್ಲ ಪ್ರತಿನಿಧಿಗಳಿಗೆ ಮತ್ತು ಹೊಸ ಗುಂಪುಗಳಿಗೆ ಮತ್ತು ರಾಜಕೀಯ ಸಂಸ್ಕೃತಿಗೆ ಅವಕಾಶಗಳನ್ನು ಸೃಷ್ಟಿಸುವ ಅಗತ್ಯವಿದೆ. ಉದಾಹರಣೆಗೆ ಶ್ರಮಶಕ್ತಿ ಭಾಗೀದಾರಿಕೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿರುವಂತಹ ಮತ್ತು ಮತದಾರರ ಪಟ್ಟಿಯಿಂದ ಎರಡು ಕೋಟಿ ಮಹಿಳಾ ಮತದಾರರು ಕಣ್ಮರೆಯಾಗಿರುವಂತಹ ರಾಜಕಿಯದಲ್ಲಿ ಮಹಿಳಾ ಪ್ರಾತಿನಿಧ್ಯದ ವಿಷಯದೊಂದಿಗೆ ನೇರವಾದ ಸಂಬಂಧ ಹೊಂದಿರುವಂತಹ ವಿಷಯಗಳ ಸುತ್ತ್ತ ಅವರು ಪ್ರಶ್ನೆಗಳನ್ನು ಎತ್ತಬಹುದು. ಮಹಿಳಾ ವಿಷಯಗಳೆಂದರೆ ಲಿಂಗಾಧಾರಿತವಾಗಿ ಸಮಾಜವು ಧ್ರುವೀಕರಣಗೊಂಡಿರುವ ವಿಷಯಗಳಷ್ಟೇ ಮುಖ್ಯವಾಗಿ ಗ್ಯಾಸ್ ಸಿಲಿಂಡರಿನ ಲಭ್ಯತೆ ಮತ್ತು ಬೆಲೆ ಏರಿಕೆಯಂತಹ ವಿಷಯಗಳು ಕೂಡಾ ಹೌದು ಎನ್ನುವ ರೀತಿಯಲ್ಲಿ ಅವರು ಗ್ರಹಿಕೆಗಳನ್ನು ವಿಸ್ತರಿಸಿಕೊಳ್ಳಬೇಕು. ಒಂದು ವಿಭಿನ್ನ ಮಾದರಿಯ ರಾಜಕೀಯ ಮತ್ತು ಹೊಸ ಹೊಸ ಸಂವೇದನೆಗಳಿಗೆ ಅವಕಾಶ ಒದಗಿಸಿ ನಿಜವಾದ ಅರ್ಥದಲ್ಲಿ ಮಹಿಳಾ ಪ್ರಾತಿನಿಧ್ಯ ದೊರೆಯಬೇಕೆಂದರೆ ವಿಭಿನ್ನ ಕ್ಷೇತ್ರಗಳ ಮತ್ತು ವಿಭಿನ್ನ ಹಿನ್ನೆಲೆಯ ಮಹಿಳಾ ಧ್ವನಿಗಳು ಪ್ರತಿನಿಧಿತವಾಗುವ ಅಗತ್ಯವಿದೆ. ಮಹಿಳೆಯಾಗಿರುವ ಜೀವಂತ ಅನುಭವದ ಜೊತೆಜೊತೆಗೆ ಪ್ರಜಾತಂತ್ರದ ಮತ್ತು ಸ್ತ್ರೀವಾದದ ಬಗೆಗೆ ಅಚಲವಾದ ನಂಬಿಕೆ ಮತ್ತು ಆಚರಣೆಗಳಿರುವ, ದುರಾಕ್ರಮಣಕಾರಿ ಪೌರುಷತ್ವವನ್ನು ಹಾಗೂ ಅನ್ಯಾಕ್ರಮಣವನ್ನು ಪ್ರಸರಿಸುವ ಶಕ್ತಿಗಳನ್ನು ಪ್ರಶ್ನಿಸಬಲ್ಲ ಶಕ್ತಿಯನ್ನು ಗಳಿಸಿಕೊಳ್ಳುವ ಅಗತ್ಯವೂ ಇದೆ. ಸ್ತ್ರೀವಾದದ ಬಗ್ಗೆ ಕೇವಲ ಮಾತುಗಳನ್ನು ಮಾತ್ರ ಆಡುವುದರಿಂದ ಅಥವಾ ಅದನ್ನು ತನ್ನ ಸ್ವಂತ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ಬಳಸುವುದರಿಂದ ಸಮಾಜದಲ್ಲಿರುವ ಧೋರಣೆಗಳು ಬದಲಾಗುವುದಿಲ್ಲ. ಮಹಿಳೆಯರು ರಾಜಕೀಯದಲ್ಲಿ ಹೆಚ್ಚೆಚ್ಚು ಪ್ರವೇಶ ಮಾಡುವುದರಿಂದ ನಿಧಾನವಾಗಿ ಧೋರಣೆಗಳಲ್ಲಿ ಬದಲಾವಣೆ ಬರುವುದಾದರೂ ಪ್ರಧಾನವಾಗಿ ಪುರುಷಮಯ ಕ್ಷೇತ್ರವೆಂದು ಪರಿಗಣಿಸಲಾಗಿರುವ ಈ ವಲಯದಲ್ಲಿ ಉಳಿದು ಯಶಸ್ವಿಯಾಗುವ ಸಲುವಾಗಿ ಅದೇ ಬಗೆಯ ಅಧಿಕಾರ ಸಂಸ್ಕೃತಿಗೆ ಬಲಿಯಾಗಲುಬಿಡದೆ ಪ್ರತಿಭಟಿಸುವ ಪ್ರಯತ್ನಗಳನ್ನು ಮಾಡುವುದೂ ಸಹ ಅಷ್ಟೇ ಅಗತ್ಯವಾಗಿದೆ.