ಗಾಂಧಿ ಹತ್ಯೆಯ ಹಿಂದಿದ್ದ ಚಾಲಕ ಶಕ್ತಿ!?
ಭಾಗ-28
ಘಟನಾವಳಿಗಳ ಒಂದೊಂದೇ ಬಿಡಿ ಬಿಡಿ ಸಂಕಲಿ (Links)ಗಳನ್ನು ಒಂದಕ್ಕೊಂದು ಜೋಡಿಸಿದರೆ, ಗಾಂಧಿ ಹತ್ಯೆಯ ಸಂಚು ಸಾವರ್ಕರ್‌ರಿಗೆ ಗೊತ್ತಿರಲೇಬೇಕೆಂಬ ಅವಿಚ್ಛಿನ್ನ ಸರಪಳಿ (chain)ಯ ಪುರಾವೆ ಪೂರ್ಣವಾಗದೆ? ಬರೀ ಗೊತ್ತಿತ್ತು ಮಾತ್ರವಲ್ಲ ಅವರ ಬೆಂಬಲವೂ, ಪ್ರೋತ್ಸಾಹವೂ ಇತ್ತೆಂದು ನಿರ್ಣಯಿಸಲು ಸಾಧ್ಯವಿಲ್ಲವೆ?
ನಾಥೂರಾಮನು ತನ್ನ ಹೇಳಿಕೆಯನ್ನು ಓದುವಾಗ ಎಂತಹ ನಾಟಕೀಯ ಪರಿಣಾಮ ಉಂಟಾಯಿತೆಂಬುದನ್ನು ನ್ಯಾಯಮೂರ್ತಿ ಖೋಸ್ಲಾ, ತಾವು ಬರೆದ ಗ್ರಂಥದಲ್ಲಿ ಬಣ್ಣಿಸಿದ್ದಾರೆ. ‘‘ನಾಥೂರಾಮ್ ಕೆಳ ನ್ಯಾಯಾಲಯದಲ್ಲಿ ಹೇಳದೆ ಇದ್ದ ಒಂದು ಹೊಸ ಅಂಶವನ್ನು ನ್ಯಾಯಾಲಯದಲ್ಲಿ ಮಂಡಿಸಿದ. ಅವನ ಮುಖ್ಯವಾದ ವಾದ, ಹಿಂದೂ ಧರ್ಮದಲ್ಲಿ ವಿಧಿಸಿರುವಂತೆ ತನ್ನ ಧರ್ಮವನ್ನು ಪರಿಪಾಲಿಸುವ ಧರ್ಮಕಾರ್ಯವಾಗಿತ್ತು. ಆ ಧರ್ಮಕಾರ್ಯವನ್ನು ತಾನು ಧಾರ್ಮಿಕ ಶ್ರದ್ಧೆಯಿಂದ ಈಡೇರಿಸಿದ. ಕೆಲವು ಪ್ರಮುಖ ಚಾರಿತ್ರಿಕ ಸಂಗತಿಗಳನ್ನು ಧರ್ಮಸೂತ್ರಗಳನ್ನು ಪ್ರಸ್ತಾವಿಸಿ, ತನ್ನ ಮಾತೃಭೂಮಿಯ ರಕ್ಷಣೆ ಮಾಡಿ ಅದನ್ನು ಕಾಪಾಡಿಕೊಂಡು ಹೋಗಲು ಹಿಂದೂಗಳಿಗೆ ಕಳಕಳಿಯ ಬಿನ್ನಹ ಮಾಡಿಕೊಂಡ.’’ ಅವನು ಬಳಸಿದ ಭಾಷೆ, ವ್ಯಕ್ತಪಡಿಸಿದ ಭಾವನೆಗಳು ಅವನ ಸ್ವಂತ ಶಕ್ತಿ ಸಾಮರ್ಥ್ಯಕ್ಕೆ ಮೀರಿದ್ದವು. ಬಹುಶಃ ಆ ಹೇಳಿಕೆಯನ್ನು ಸಿದ್ಧಗೊಳಿಸುವುದರಲ್ಲಿ ಆರೋಪಿಗಳಲ್ಲೆಲ್ಲ ಅತ್ಯಂತ ಭಾಷಾಪಾಂಡಿತ್ಯ, ಭಾವನೆಗಳ ಔನ್ಯತ್ಯ ಹೊಂದಿದ್ದ ಸಾವರ್ಕರ್‌ರ ಪಾತ್ರವಿರಬಹುದೆಂಬ ಸಂಶಯವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ಆ ಸಂದೇಹಕ್ಕೆ ಆಧಾರ ಸೆರೆಮನೆಯಲ್ಲಿದ್ದ ಕಾವಲುಗಾರರು, ಕೆಲವು ಪೊಲೀಸರು ಆರೋಪಿಗಳು ವಿಚಾರ ವಿನಿಮಯ ಮಾಡಲು, ಪತ್ರ ವ್ಯವಹಾರ ಮಾಡಲು ನೆರವಾಗುತ್ತಿದ್ದರೆಂದೂ ಸಂದೇಹವಿತ್ತು. ಆದ್ದರಿಂದಲೇ ಕೆಲವು ಕಾವಲುಗಾರರನ್ನು ಸೇವಕರನ್ನು ವರ್ಗಾಯಿಸಿದ್ದರು. ಅದೇನೇ ಇದ್ದರೂ ನಾಥೂರಾಮ್ ತನ್ನ ‘ರಾಜಕೀಯ ನಂಬುಗೆಗಳನ್ನು’ ಪ್ರಚುರಪಡಿಸುವುದರಲ್ಲಿ ಸಫಲನಾದ. ಆ ರಾಜಕೀಯ ನಂಬುಗೆಗಳಲ್ಲಿ ಅತೀ ಪ್ರಮುಖವಾದದ್ದು: ‘‘ಹಿಂದೂಗಳಲ್ಲದವರು ಈ ದೇಶದಲ್ಲಿ ಶತಶತಮಾನಗಳು ಬಾಳಿದ್ದರೂ ಅವರು ಹಿಂದೂ ರಾಷ್ಟ್ರದ ಒಂದು ಭಾಗವೆಂದು ಆ ಸ್ವಯಂದೀಕ್ಷಾ ಬದ್ಧ ಈ ದೇಶಪ್ರೇಮಿ ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಆ ಹಿಂದೂಗಳಲ್ಲದವರನ್ನು ದ್ವೇಷಿಸುವುದು ದೇಶದ್ರೋಹವೆಂದು ಅವನು ಭಾವಿಸಿರಲಿಲ್ಲ. ಪರಮತದ ಅಸಹಿಷ್ಣುತೆ, ಅವರ ದ್ವೇಷವೇ ತನ್ನ ಧಾರ್ಮಿಕ ಸಿದ್ಧಾಂತವೆಂದು ಪ್ರತಿಪಾದಿಸಿದ.ಇತರ ಇನ್ನಾವುದೇ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಅವನಿಗಿರಲಿಲ್ಲ...’’ ಇಂಥ ಮನೋಭಾವದ ದ್ವೇಷ ಮತ್ತು ಅಸಹಿಷ್ಣುತೆ -ಜನಕರು ಯಾರು? ಅವುಗಳ ಅಂದಿನ ದುಷ್ಪರಿಣಾಮ ಗಾಂಧಿ ಹತ್ಯೆಯೊಂದಿಗೇ ಮುಗಿಯಲಿಲ್ಲ. ಅವು ಕಳೆದ ಶತಮಾನದ 80ರ ದಶಕದಿಂದ ಉಲ್ಬಣಿಸಿ 92ರಲ್ಲಿ ಬಾಬರಿ ಮಸೀದಿಯ ಧ್ವಂಸದ ಘೋರ ದುಷ್ಪರಿಣಾಮದಲ್ಲಿ ವ್ಯಕ್ತವಾಗಿ, ತತ್‌ಪರಿಣಾಮ ಸರಣಿ ಬಾಂಬ್ ಸ್ಫೋಟಗಳ ರೂಪದಲ್ಲಿ ಈ ದೇಶವನ್ನು ತಲ್ಲಣಗೊಳಿಸುತ್ತದೆ ಎಂಬುದನ್ನು ಮುಂದೆ ಪ್ರಸ್ತಾವಿಸಲಾಗುವುದು. ಈ ದುರಂತಕತೆಯ ಬೀಜರೂಪ ಗಾಂಧಿ ಹತ್ಯೆ. ಅದರ ಜನಕರಾರು ಎಂಬುದನ್ನು ವಿಶ್ಲೇಷಿಸಬೇಕು. ಹಾಗೆ ವಿಶ್ಲೇಷಣೆ ಮಾಡಿದ ನಮ್ಮ ದೇಶದ ಪ್ರಸಿದ್ಧ ಇತಿಹಾಸಕಾರರಾದ ಕೆ.ಎನ್. ಫಣಿಕ್ಕರರು ಗಾಂಧಿ ಹತ್ಯೆಯ ಮೂಲಕಾರಣ ಏನು ಎಂಬುದನ್ನು ಹೀಗೆ ಹೇಳಿದ್ದಾರೆ:
"The real assassin (of mahatma gandhi)was not nathuram godse, but hindu communalism of which savarkar was the most ardent ideologue and practitioner savarkar, the progenitor of the idea of hindutva and the ideological mentor of the sangh parivar was the moving figure behind the assassination..the nation become fully aware that savarkar from whom the sangh parivar draws inspiration was a corroborator in the murder of the mahatma ..‘(the hindu, 28.11.2004)
‘‘ಮಹಾತ್ಮಾ ಗಾಂಧಿಯ ನಿಜವಾದ ಹಂತಕ ನಾಥೂರಾಮ್ ಗೋಡ್ಸೆ ಅಲ್ಲ; ಹಿಂದೂ ಮತಾಂಧತೆಯ ಕೋಮುವಾದ. ಆ ಕೋಮುವಾದದ ಅತ್ಯಂತ ಕಡುನಿಷ್ಠೆಯ ಪ್ರತಿಪಾದಕರೂ ಅದನ್ನು ಆಚರಿಸಿದವರೂ ಸಾವರ್ಕರ್‌ರು. ಹಿಂದುತ್ವ ಸಿದ್ಧಾಂತದ ಜನಕರು, ಸಂಘ ಪರಿವಾರದ ಉಪದೇಶಕರೂ, ಮಾರ್ಗದರ್ಶಿಗಳೂ ಆದ ಸಾವರ್ಕರ್‌ರು ಗಾಂಧಿ ಹತ್ಯೆಯ ಹಿಂದಿದ್ದ ಚಾಲಕ ಶಕ್ತಿ. ಸಂಘಪರಿವಾರಕ್ಕೆ ಸ್ಫೂರ್ತಿದಾತರಾಗಿದ್ದ ಸಾವರ್ಕರ್‌ರು ಮಹಾತ್ಮರ ಕೊಲೆಯಲ್ಲಿ ಸಹಭಾಗಿಗಳಾಗಿದ್ದರೆಂದು ರಾಷ್ಟ್ರಕ್ಕೆ ಸಂಪೂರ್ಣ ಮನವರಿಕೆಯಾಯ್ತು...’’
ಯಾವುದೇ ಒಂದು ಘಟನೆ ಕಾರ್ಯರೂಪದಲ್ಲಿ ಪ್ರಕಟವಾಗಲು ಅದಕ್ಕೊಂದು ಭಾವಬೀಜ ಇರಲೇಬೇಕು. ಗಾಂಧೀಜಿಯನ್ನು ಭಾರತದ ರಾಜಕೀಯ ರಂಗದಿಂದ ಮುಗಿಸಬೇಕು ಎಂಬ ಭಾವಬೀಜವೇ ಗೋಡ್ಸೆಯ ಕೈಯಿಂದ ಗಾಂಧೀಜಿಯ ಎದೆಗೆ ಗುಂಡಿಕ್ಕುವುದರ ಮೂಲಕ ಸಿದ್ಧಿಸಿತು. ಆ ಭಾವಬೀಜ ಸಾವರ್ಕರ್‌ರು ರೂಪಿಸಿದ ಹಿಂದುತ್ವ ಸಿದ್ಧಾಂತ. ಆ ಸಿದ್ಧಾಂತದ ಸ್ವರೂಪವನ್ನು ಈ ಹಿಂದೆ ನಿರೂಪಿಸಲಾಗಿದೆ.
ಈ ಸಿದ್ಧಾಂತವನ್ನು ಮನಸಾರೆ ಮೆಚ್ಚಿದ್ದ ಸಂಘಪರಿವಾರದ ಕಡುನಿಷ್ಠಾವಂತ ಗೋಡ್ಸೆ. ಆ ಗೋಡ್ಸೆಗೂ ಸಾವರ್ಕರ್‌ರಿಗೂ ನಿಕಟ ಸಂಪರ್ಕವಿತ್ತು. ಗೋಡ್ಸೆ ರತ್ನಗಿರಿಯಲ್ಲಿದ್ದಾಗ ಸಾವರ್ಕರ್ ಆಪ್ತ ಕಾರ್ಯದರ್ಶಿಯಾಗಿದ್ದ. ಅಲ್ಲದೆ ಗಾಂಧಿ ಕೊಲೆ ಮೊಕದ್ದಮೆಯಲ್ಲಿ ಸರಕಾರ ನ್ಯಾಯಾಲಯದಲ್ಲಿ ಸಾಕಷ್ಟು ಮಾಹಿತಿಯನ್ನು ದಸ್ತಾವೇಜುಗಳ ಮೂಲಕ ಸಾದರಪಡಿಸಿತ್ತು. ಆ ದಾಖಲೆಗಳನ್ನು ದಿಲ್ಲಿಯಲ್ಲಿ ಸಂಸದ್ ಭವನದ ಸಮೀಪದಲ್ಲೇ ಇರುವ ಭಾರತ ಪ್ರಾಚೀನ ದಸ್ತಾವೇಜುಗಳ ಭಂಡಾಗಾರ (National archies of india)ದಲ್ಲಿ ಇಡಲಾಗಿದೆ. ಅವುಗಳನ್ನು ಅವಲೋಕಿಸಿದರೆ ಸಾವರ್ಕರ್‌ರಿಗೂ ಗೋಡ್ಸೆಗೂ ದೀರ್ಘಕಾಲದ ನಿಕಟ ಸಂಪರ್ಕವಿತ್ತು ಎಂಬುದು ನಿಸ್ಸಂದೇಹವಾಗಿ ಸಾಬೀತಾಗುತ್ತದೆ. 1938 ಫೆಬ್ರವರಿ 28ರಂದು ಗೋಡ್ಸೆ, ಸಾವರ್ಕರ್‌ರಿಗೆ ಬರೆದ ಒಂದು ಪತ್ರದಿಂದ ಅವರಿಬ್ಬರಿಗೂ ದೀರ್ಘಕಾಲದ ನಿಕಟ ಸಂಪರ್ಕವಿತ್ತು ಎಂಬುದು ವೇದ್ಯವಾಗುತ್ತದೆ. ಅವರಿಬ್ಬರಿಗೂ ಗುರು-ಶಿಷ್ಯ ಬಾಂಧವ್ಯವಿತ್ತು ಆ ಪತ್ರದಲ್ಲಿ: ‘‘ನಿಮ್ಮನ್ನು ರತ್ನಗಿರಿಯ ದಿಗ್ಬಂಧನದಿಂದ ಬಿಡುಗಡೆ ಮಾಡಿದ ಮೇಲೆ ಹಿಂದೂಸ್ಥಾನ ಹಿಂದೂಗಳದು ಎಂದು ಮನಸಾರೆ ನಂಬಿದವರ ಮನದಲ್ಲಿ ಒಂದು ದಿವ್ಯಾಗ್ನಿ ಪ್ರಜ್ವಲಿಸತೊಡಗಿದೆ.ನೀವು ಹಿಂದೂ ಮಹಾಸಭೆಯ ಅಧ್ಯಕ್ಷ ಸ್ಥಾನವನ್ನು ಅಂಗೀಕರಿಸಲು ಒಪ್ಪಿಕೊಂಡು ಹೇಳಿಕೆ ಕೊಟ್ಟ್ಟಿದ್ದರಿಂದ (ಹಿಂದೂಸ್ಥಾನ ಹಿಂದೂಗಳದು ಎಂಬ) ನಮ್ಮ ಆಶಾವಾದ ವಾಸ್ತವವಾಗಿ ಕೈಗೂಡುವುದೆಂಬ ವಿಶ್ವಾಸ ದೃಢವಾಗಿದೆ. 50,000 ಆರೆಸ್ಸೆಸ್ ಸೈನಿಕರು ಸನ್ನದ್ಧರಾಗಿ ನಿಂತಿದ್ದಾರೆ.’’ ಸಾವರ್ಕರ್‌ರು ಅವರಿಗೆ ಮಾರ್ಗದರ್ಶನ ಮಾಡಬೇಕೆಂದು ಗೋಡ್ಸೆ ಅಂಗಲಾಚುತ್ತಾನೆ.
ತರುವಾಯ ಗೋಡ್ಸೆ ಸಂಪಾದಕತ್ವದಲ್ಲಿ ನಾರಾಯಣ ಆಪ್ಟೆ ಪ್ರಕಟಿಸುತ್ತಿದ್ದ ‘ಅಗ್ರಣಿ’ ಪತ್ರಿಕೆಗೆ ಸಾವರ್ಕರ್‌ರು ಆಗಿನ ಕಾಲದಲ್ಲಿ (1944) ಹದಿನೈದು ಸಾವಿರ ರೂಪಾಯಿಗಳ ಧನ ಸಹಾಯ ಮಾಡಿದರೆಂಬುದನ್ನು ಸಾವರ್ಕರ್‌ರೇ ಒಪ್ಪಿಕೊಂಡಿದ್ದಾರೆ.ಅಂದ ಮೇಲೆ ಸಾವರ್ಕರ್‌ರಿಗೆ ಗೋಡ್ಸೆ -ಆಪ್ಟೆ ಮಾಡಿದ ಗಾಂಧೀ ಹತ್ಯೆ ಸಂಚು ಗೊತ್ತಿಲ್ಲದೆ ಆಗಿರಲಾರದು.
1946ರಲ್ಲಿ ಸಾವರ್ಕರ್‌ರಿಗೆ ಗೋಡ್ಸೆ ಬರೆದಿದ್ದ ಇನ್ನೊಂದು ಪತ್ರವೂ ಪ್ರಾಚೀನ ದಸ್ತಾವೇಜುಗಳ ಭಂಡಾರದಲ್ಲಿದೆ. ದಿಲ್ಲಿಯ ಶೇಠ್ ಜುಗುಲ್ ಕಿಷನ್ ಬಿರ್ಲಾ ಅವರು ಸಾವರ್ಕರ್‌ರಿಗೆ ಕೊಟ್ಟಿದ್ದ ಒಂದು ಸಾವಿರ ರೂಪಾಯಿಗಳ ಚೆಕ್‌ಅನ್ನು ಗೋಡ್ಸೆಗೆ ಕಳಿಸಿದ್ದು ತಮಗೆ ತಲುಪಿದ ಪ್ರಸ್ತಾಪ ಆ ಪತ್ರದಲ್ಲಿದೆ. 1947ರಲ್ಲಿ ಸಾವರ್ಕರ್‌ರು ಕೈಗೊಂಡಿದ್ದ ಒಂದು ಪ್ರವಾಸದಲ್ಲಿ ಸಾವರ್ಕರ್ ಜೊತೆಗೆ ಗೋಡ್ಸೆ ಮತ್ತು ಆಪ್ಟೆ ಇಬ್ಬರೂ ಪ್ರವಾಸ ಮಾಡಿದ್ದರು. ಸಾವರ್ಕರ್‌ರು ಗೋಡ್ಸೆಗೆ ಬರೆದ ಪತ್ರದಲ್ಲಿ ‘ಪಂಡಿತ ನಾಥೂರಾಮ್’ ಎಂಬ ಒಕ್ಕಣೆ ಇದೆ.
ಜನವರಿ 20ರಂದು ಬಿರ್ಲಾ ಗೃಹದ ಆವರಣದಲ್ಲಿ ಗಾಂಧೀಜಿ ಪ್ರಾರ್ಥನಾ ಸಭೆಯಲ್ಲಿ ಮಾತನಾಡುತ್ತಿದ್ದಾಗ ಮದನಲಾಲ್ ಪಹ್ವಾ ಗನ್-ಕಾಟನ್ -ಸ್ಲಾಬ್ ಸ್ಫೋಟಿಸಿದ ಸುದ್ದಿಯನ್ನು ಓದಿದ, ಮುಂಬೈ ರುಯಿಯ ಕಾಲೇಜಿನ ಡಾ.ಜಗದೀಶ ಚಂದ್ರ ಜೈನ್ ಎಂಬ ಮಹನೀಯರು ಮುಂಬೈ ರಾಜ್ಯದ ಆಗ ಪ್ರಧಾನಿ ಎಂದು ಕರೆಯಲಾಗುತ್ತಿದ್ದ ಮುಖ್ಯಮಂತ್ರಿ ಬಿ.ಜಿ.ಖೇರ್ ಅವರನ್ನು ಕಂಡರು. ಅಲ್ಲಿ ಏನಾಯಿತು ಎಂಬುದನ್ನು ಮೊರಾರ್ಜಿ ದೇಸಾಯಿ ನ್ಯಾಯಾಲಯದಲ್ಲಿ ನುಡಿದ ಸಾಕ್ಷದ ಪ್ರಕಾರ: ‘‘ಅವರು(ಡಾ.ಜೈನ್) ಮದನ್‌ಲಾಲ್‌ನು ತಮ್ಮ ಮುಂದೆ ಹೇಳಿದ ಸಂಗತಿಯನ್ನು ನನಗೆ ತಿಳಿಸಿದರು. ಮದನ್‌ಲಾಲ್ ಮತ್ತು ಅವನ ಗೆಳೆಯರು ಒಬ್ಬ ಮಹಾನಾಯಕನ ಪ್ರಾಣ ತೆಗೆಯಬೇಕೆಂದು ನಿರ್ಧರಿಸಿರುವುದಾಗಿ ಹೇಳಿದ. ತರುವಾಯ ಮದನ್‌ಲಾಲ್ ಮಹಾತ್ಮಾ ಗಾಂಧೀ ಹೆಸರು ಹೇಳಿದ. ಅಹಮದಾಬಾದಿನ ಕರ್ಕರೆ ಎಂಬ ತನ್ನ ಧಣಿಯೊಡನೆ ಸಾವರ್ಕರ್‌ರ ಮನೆಗೆ ಕರೆದುಕೊಂಡು ಹೋಗಿದ್ದ. ಸಾವರ್ಕರ್‌ರೊಡನೆ ಕರ್ಕರೆ ಎರಡು ಗಂಟೆ ಕಾಲ ಮಾತನಾಡಿದ್ದ. ಸಾವರ್ಕರ್‌ರು ಅವನು ಮಾಡುತ್ತಿದ್ದ ಕೆಲಸಕ್ಕಾಗಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ಅವನ ಬೆನ್ನುತಟ್ಟಿ ನಿಮ್ಮ ಕೆಲಸ ಮುಂದುವರಿಸಿ ಎಂದು ಹೇಳಿದರು.’’ (ಎಂದು ಡಾ.ಜೈನ್ ತಮ್ಮ ಮುಂದೆ ಹೇಳಿದ್ದರು).
ಮೊರಾರ್ಜಿ ಅವರ ಈ ಹೇಳಿಕೆಯನ್ನು ಮಾಫಿ ಸಾಕ್ಷಿ (Approver)ದಿಗಂಬರ ರಾಮಚಂದ್ರ ಬಡ್ಗೆ ಸಮರ್ಥಿಸಿ ನ್ಯಾಯಾಲಯದಲ್ಲಿ ಸಾಕ್ಷ ನುಡಿದಿದ್ದ.
ಈ ಘಟನಾವಳಿಗಳ ಒಂದೊಂದೇ ಬಿಡಿ ಬಿಡಿ ಸಂಕಲಿ (Links)ಗಳನ್ನು ಒಂದಕ್ಕೊಂದು ಜೋಡಿಸಿದರೆ, ಗಾಂಧಿ ಹತ್ಯೆಯ ಸಂಚು ಸಾವರ್ಕರ್‌ರಿಗೆ ಗೊತ್ತಿರಲೇಬೇಕೆಂಬ ಅವಿಚ್ಛಿನ್ನ ಸರಪಳಿ (chain)ಯ ಪುರಾವೆ ಪೂರ್ಣವಾಗದೆ? ಬರೀ ಗೊತ್ತಿತ್ತು ಮಾತ್ರವಲ್ಲ ಅವರ ಬೆಂಬಲವೂ, ಪ್ರೋತ್ಸಾಹವೂ ಇತ್ತೆಂದು ನಿರ್ಣಯಿಸಲು ಸಾಧ್ಯವಿಲ್ಲವೆ? 1948 ಜುಲೈ 20 ರಿಂದ ಜುಲೈ 30ರವರೆಗೆ ಹತ್ತು ದಿನಗಳ ಕಾಲ ದಿಗಂಬರ ಬಡ್ಗೆಯ ಸಾಕ್ಷವನ್ನು ದಾಖಲಿಸಿಕೊಂಡ ನ್ಯಾಯಾಧೀಶರು ಅವನ ವರ್ತನೆಯನ್ನು ಹೀಗೆ ಪ್ರಶಂಸಿಸಿದ್ದಾರೆ.
‘‘ಅವನು (ಬಡ್ಗೆ) ತನ್ನ ಸಾಕ್ಷವನ್ನು ನೇರವಾಗಿ ಯಾವ ಅಡೆತಡೆಗಳಿಲ್ಲದಂತೆ ಸರಾಗವಾಗಿ ನುಡಿದಿದ್ದಾನೆ. ಪಾಟೀ ಸವಾಲಿನಿಂದ ನುಣುಚಿಕೊಳ್ಳಲು ಅಥವಾ ತಪ್ಪಿಸಿಕೊಳ್ಳಲು ಸತ್ಯವನ್ನು ಉತ್ತರಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಲಿಲ್ಲ.’’ ಅಂದ ಮೇಲೆ ಸಾವರ್ಕರ್‌ರ ಆಶೀರ್ವಾದ ಗೋಡ್ಸೆಗೆ ಇತ್ತು ಎಂಬ ವಿಷಯದಲ್ಲಿ ಅವರಿಗೆ ಯಾಕೆ ಸಂಶಯವುಂಟಾಯಿತು.?
ಈ ಅಪೀಲಿನ ಮುಖ್ಯ ತೀರ್ಪನ್ನು ನ್ಯಾ.ಮೂರ್ತಿಗಳಾದ ಭಂಡಾರಿ ಬರೆದರು. 315 ಪುಟಗಳಷ್ಟು ದೀರ್ಘವಾದ ತೀರ್ಪನ್ನು ನ್ಯಾ.ಮೂ.ಭಂಡಾರಿ ಓದಿದರು. ನ್ಯಾ.ಮೂ.ಅಚ್ಛ್ರುರಾಮ್ ಪ್ರತ್ಯೇಕ ಸಹಮತದ ತೀರ್ಪನ್ನು ಬರೆದರು. ನಾಥೂರಾಮ್ ಗೋಡ್ಸೆ ಮತ್ತು ಆಪ್ಟೆಗೆ ವಿಧಿಸಿದ್ದ ಮರಣದಂಡನೆಯನ್ನು ಎತ್ತಿ ಹಿಡಿದರು. ಪರಚುರೆಯನ್ನು ನಿರ್ದೋಷಿ ಎಂದು ಘೋಷಿಸಿ ಬಿಡುಗಡೆ ಮಾಡಿದರು.