ವಂಚಕರಿಂದ ನಮ್ಮ ಆಧಾರ್ ಕಾರ್ಡ್ ದುರುಪಯೋಗವಾಗಬಹುದೇ?
ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮೋಸ, ಕಪಟಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ವಂಚಕರು ತಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ದುರುಪಯೋಗಿಸಿಕೊಂಡು ಬ್ಯಾಂಕ್ ಖಾತೆಯನ್ನು ತೆರೆಯಬಹುದೇ ಎಂಬ ಕಳವಳ ಹಲವರಲ್ಲಿದ್ದರೆ ಅದು ಸಹಜವೇ ಆಗಿದೆ. ಅಂತಹವರು ಚಿಂತಿಸಬೇಕಿಲ್ಲ. ಯಾರಾದರೂ ವಂಚಕರು ತಮ್ಮ ಆಧಾರ್ ಕಾರ್ಡ್‌ನ ಝೆರಾಕ್ಸ್ ಪ್ರತಿಯನ್ನು ಪಡೆದುಕೊಂಡು ತಮಗೆ ಗೊತ್ತಿಲ್ಲದೆ ತಮ್ಮ ಹೆಸರುಗಳಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಪ್ರಯತ್ನಿಸಿದರೆ ಏನಾಗುತ್ತದೆ, ಇದರಿಂದ ತಮಗೆ ತೊಂದರೆಯಾಗಬಹುದೇ ಎಂಬ ಹಲವಾರು ಪ್ರಶ್ನೆಗಳು ಆಧಾರ್ ಕಾರ್ಡ್ ಹೊಂದಿರುವವರನ್ನು ಆಗಾಗ್ಗೆ ಕಾಡುತ್ತಲೇ ಇರುತ್ತವೆ. ಆಧಾರ್ ಕಾರ್ಡ್‌ಗಳನ್ನು ವಿತರಿಸುವ ನೋಡಲ್ ಸಂಸ್ಥೆಯಾಗಿರುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ವು ಆಧಾರ್ ದತ್ತಾಂಶಗಳು ಸಂಪೂರ್ಣ ಸುರಕ್ಷತೆ ಮತ್ತು ಭದ್ರತೆಯನ್ನು ಹೊಂದಿವೆ ಎಂದು ಹೇಳಿದೆ.
ಯಾರೇ ಆದರೂ ಕೇವಲ ಆಧಾರ್ ಕಾರ್ಡ್ ಅಥವಾ ಅದರ ಝೆರಾಕ್ಸ್ ಪ್ರತಿಯನ್ನು ನೀಡಿ ಹೊಸ ಬ್ಯಾಂಕ್ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ ಎಂದು ಯುಐಡಿಎಐ ಸ್ಪಷ್ಟವಾಗಿ ಹೇಳಿದೆ. ಅಕ್ರಮ ಹಣ ವಹಿವಾಟು ತಡೆ (ದಾಖಲೆಗಳ ನಿರ್ವಹಣೆ) ನಿಯಮಗಳು, 2005 ಮತ್ತು ಆರ್‌ಬಿಐ ಸುತ್ತೋಲೆಗಳನ್ವಯ ಬ್ಯಾಂಕುಗಳು ನಿರ್ದಿಷ್ಟ ಸುರಕ್ಷತಾ ಪರಿಶೀಲನೆ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಬಯೊಮೆಟ್ರಿಕ್ ಡಾಟಾ ಅಥವಾ ಒಟಿಪಿ (ಒಂದು ಬಾರಿಯ ಪಾಸ್‌ವರ್ಡ್) ದೃಢೀಕರಣದ ಮೂಲಕ ಬ್ಯಾಂಕುಗಳು ವ್ಯಕ್ತಿಯ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಈ ಪ್ರಕ್ರಿಯೆಯಲ್ಲಿ ಸೇರಿದೆ. ಅಲ್ಲದೆ ಖಾತೆ ತೆರೆಯಲು ಆಧಾರ್ ಕಾರ್ಡ್‌ನ್ನು ಸ್ವೀಕರಿಸುವುದಕ್ಕೆ ಮುನ್ನ ಬ್ಯಾಂಕುಗಳು ಶ್ರದ್ಧೆಯಿಂದ ನಿರ್ವಹಿಸಬೇಕಾದ ಇನ್ನೊಂದು ಕರ್ತವ್ಯವೂ ಇದೆ. ಅದು ಕೆವೈಸಿ(ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ). ಕೆವೈಸಿ ಪಡೆದುಕೊಳ್ಳುವಾಗ ಬ್ಯಾಂಕುಗಳು ಎಲ್ಲ ವಿವರಗಳನ್ನು ಖಚಿತಪಡಿಸಿಕೊಳ್ಳುತ್ತವೆ. ಹೀಗಾಗಿ ನಿಯಮಾವಳಿಗಳನ್ವಯ ಯಾವುದೇ ವಂಚಕರು ಬಯೊಮೆಟ್ರಿಕ್ ಡಾಟಾ ಅಥವಾ ಒಟಿಪಿ ದೃಢೀಕರಣವಿಲ್ಲದೆ ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ.
ಆದರೂ ಯಾರಾದರೂ ವಂಚಕರು ಬಯೊಮೆಟ್ರಿಕ್ ಡಾಟಾ ಅಥವಾ ಒಟಿಪಿ ಮತ್ತು ಇತರ ದೃಢೀಕರಣವಿಲ್ಲದೆ ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆಯನ್ನು ತೆರೆಯಲು ಸಫಲರಾದರೆ ನಿಮಗಾಗಬಹುದಾದ ನಷ್ಟಕ್ಕೆ ಬ್ಯಾಂಕ್ ಹೊಣೆಗಾರನಾಗುತ್ತದೆ ಎಂದು ಯುಐಡಿಎಐ ತಿಳಿಸಿದೆ.
ಈಗಲೂ ನಿಮ್ಮ ಆಧಾರ್ ಕಾರ್ಡ್ ಸುರಕ್ಷತೆಯ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ 12 ಅಂಕಿಗಳ ಆಧಾರ್ ನಂಬರ್‌ಗೆ ಪರ್ಯಾಯ ಆಯ್ಕೆಯನ್ನು ಯುಐಡಿಎಐ ನಿಮಗೆ ಒದಗಿಸಿದೆ. ನಿಮ್ಮ ಆಧಾರ್ ಕಾರ್ಡ್‌ನ ವಿವರಗಳನ್ನು ಸುರಕ್ಷಿತಗೊಳಿಸಲು ನೀವು ಬಯಸಿದರೆ ಮಾಸ್ಕ್ಡ್ ಆಧಾರ್ ಕಾರ್ಡ್ ಸೂಕ್ತ ಆಯ್ಕೆಯಾಗುತ್ತದೆ. ಆಧಾರ್ ಕಾರ್ಡ್‌ನ ವಿವರಗಳನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳುವಾಗ ಮಾಸ್ಕ್ಡ್ ಆಧಾರ್ ಕಾರ್ಡನ ಹೆಚ್ಚು ಸುರಕ್ಷಿತ ಪರ್ಯಾಯವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಮಾಸ್ಕ್ಡ್ ಆಧಾರ್ ಕಾರ್ಡ್ ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ಮಾತ್ರ ತೋರಿಸುತ್ತದೆ. ಹೀಗಾಗಿ ಆಧಾರ್ ಕಾರ್ಡ್ ಅಥವಾ ಅದರ ಝೆರಾಕ್ಸ್ ಪ್ರತಿಯನ್ನು ಹೊತ್ತೊಯ್ಯುವ ಬದಲು ಮಾಸ್ಕ್ಡ್ ಆಧಾರ್ ಕಾರ್ಡ್ ಹೊಂದಿರುವುದು ಸೂಕ್ತ. ಇದನ್ನು ನೀವು ಎಲ್ಲಾದರೂ ಮರೆತುಬಿಟ್ಟರೆ ಅಥವಾ ಕಳ್ಳತನವಾದರೆ ಅದರ ದುರುಪಯೋಗದ ಸಾಧ್ಯತೆ ತೀರ ಕಡಿಮೆಯಿರುತ್ತದೆ. ಅಲ್ಲದೆ ಮಾಸ್‌ಆಧಾರ್ ಕಾರ್ಡ್ ನಿಮ್ಮ ಭಾವಚಿತ್ರ, ಸ್ಮಾರ್ಟ್ ಕ್ಯೂಆರ್ ಕೋಡ್‌ನಂತಹ ಪ್ರಮುಖ ವಿವರಗಳನ್ನು ಹೊಂದಿರುವುದಿಲ್ಲ.