ಬದುಕಿನ ಘನತೆಯನ್ನು ಎತ್ತಿ ಹಿಡಿಯುವ ‘ಕಾರೇಹಣ್ಣು’
‘ಕಾರೇಹಣ್ಣು ’ ಮಧುಸೂದನ ವೈ. ಎನ್. ಅವರು ಬರೆದಿರುವ 2019ನೇ ಸಾಲಿನ ‘ಈ ಹೊತ್ತಿಗೆ’ ಪ್ರಶಸ್ತಿಯನ್ನು ಪಡೆದಿರುವ ಕಥಾಸಂಕಲನ. ಹತ್ತು ಕತೆಗಳನ್ನು ಈ ಕೃತಿ ಹೊಂದಿದೆ. ವಿಷಾದ ಕೇಂದ್ರಿತವಾದ ಮನಸ್ಸೊಂದು ಎಲ್ಲ ಕತೆಗಳಲ್ಲೂ ತುಯ್ದೊಡುತ್ತದೆ. ತನಗೆ ಕಂಡದ್ದನ್ನು ಅರ್ಥ ಮಾಡಿಸುವ ಪ್ರಯತ್ನಕ್ಕಿಳಿಯದೇ, ಒಳಗಿನ ತಲ್ಲಣಗಳನ್ನು ಇದ್ದ ಹಾಗೆಯೇ ಕಟ್ಟಿ ಕೊಡುವುದು ಲೇಖಕರ ಬರವಣಿಗೆಯ ವೈಶಿಷ್ಟ.
‘ನನ್ನ ಪ್ರೀತಿಯ’ ಕತೆಯನ್ನು ಸ್ವಗತದಂತೆ, ಒಂದು ಪತ್ರ ವಿನಿಮಯದಂತೆ ಕತೆಗಾರ ನಿರೂಪಿಸುತ್ತಾರೆ. ಪ್ಯಾರಿಸ್ ನೋಡಲು ಹೋದ ಕಥಾ ನಾಯಕ ಆ ನಗರದೊಳಗಿನ ತಲ್ಲಣ, ವಿಷಾದ, ವ್ಯಂಗ್ಯಗಳನ್ನು ಮೊನಾಲಿಸಾಳ ಕಣ್ಣಲ್ಲಿ ಕಾಣುತ್ತಾನೆ. ಮಾಯಾ ಎನ್ನುವ ತನ್ನ ಪತ್ನಿಗೆ ಬರೆಯುವ ಪತ್ರ, ಪ್ರವಾಸದ ಅನುಭವವೊಂದನ್ನು ಕಟ್ಟಿಕೊಡುವಂತಿದೆ. ಇದರ ಜೊತೆಗೆ ನಗರದೊಳಗಿನ ಏಕಾಂಗಿ ಮನಸ್ಸು ತನಗೆ ತಾನೇ ಬಡಬಡಿಸುವಂತೆಯೂ ಇದೆ. ‘ಬೋಣಿ’ ಕತೆ ನಿರ್ಲಕ್ಷಕ್ಕೀಡಾದ ಬದುಕನ್ನು ಕಟ್ಟಿಕೊಡುತ್ತದೆ. ನಿವೃತ್ತ ಮೇಷ್ಟ್ರೊಬ್ಬರು ಮೆಣಸಿನ ಕಾಯಿ ಅಂಗಡಿಯ ಬಜ್ಜಿಯನ್ನು ಬೋಣಿ ಮಾಡಲು ಆಗಮಿಸುವ ಜೊತೆಗೆ ಅದನ್ನು ಸುತ್ತಿಕೊಂಡ ಮನುಷ್ಯನ ನಂಬಿಕೆ, ಭರವಸೆಗಳನ್ನು ಹೇಳುವಂತಹದು. ತಳಸ್ತರದ ಗಂಡ ಹೆಂಡತಿ ಸಂಬಂಧ, ಅದರ ನಡುವೆ ಗೊಂದಲದಲ್ಲಿ ಸಿಕ್ಕು ತುಯ್ದಿಡುವ ಮಗು ಮನಸ್ಸನ್ನು ಈ ಕತೆ ಹೇಳುತ್ತದೆ. ‘ಮುಲಾಮು’ ಕತೆ ಬೇರೆಯಾದ ಎರಡು ಹೃದಯಗಳ ಗಾಯಗಳಿಗೆ ಸಂಬಂಧಿಸಿದ್ದು ಮತ್ತು ಅವುಗಳು ಮತ್ತೆ ಮುಖಾಮುಖಿಯಾಗಿ ಪಡೆಯುವ ಸಾಂತ್ವನವನ್ನು ಹೇಳುವಂತಹದ್ದು. ಬದುಕಿನ ಘನತೆಯನ್ನು ತೆರೆದಿಡುವ ಕತೆ ಇದು.
‘ಹುಡುಕಾಟ’ ಮಗನೊಬ್ಬ ತನ್ನ ತಂದೆಯ ನೆನಪುಗಳ ಬೆನ್ನ ಹಿಂದೆ ಬಿದ್ದು ಆತನನ್ನು ಜೀವಂತವಾಗಿಟ್ಟುಕೊಳ್ಳುವ ಬಗೆಯನ್ನು ಹೇಳುತ್ತದೆ. ‘ಯುಗಯುಗಳ ದಾಟಿ’ ಕತೆ ವಿಡಂಬನಾತ್ಮಕವಾಗಿ ಬದುಕಿನ ಮಗ್ಗುಲುಗಳನ್ನು ಕಟ್ಟಿಕೊಡುತ್ತದೆ. ಮುನ್ನುಡಿಯಲ್ಲಿ ಸುನಂದಾ ಕಡಮೆ ಅವರು ಕತೆಗಾರನ ಕುರಿತಂತೆ ಹೀಗೆ ಹೇಳುತ್ತಾರೆ ‘‘ಮಧು ಅವರಿಗೆ ಕಥೆ ಹೇಳುವ ನಯನಾಜೂಕು ಗೊತ್ತಿದೆ. ಪಾತ್ರಗಳ ಸೃಷ್ಟಿಯಲ್ಲಿ ಇರಬೇಕಾದ ಸಹಾನುಭೂತಿಯ ಅರಿವಿದೆ. ಕಥೆಗಾಗಿ ನಿರ್ಮಿಸಿಕೊಳ್ಳಬೇಕಾದ ವಾತಾವರಣ ಅಂಕುಡೊಂಕುಗಳ ತಿಳುವಳಿಕೆಯಿದೆ. ಭಾಷೆಯನ್ನು ಸಹಜವಾಗಿ ದುಡಿಸಿಕೊಳ್ಳುವ ಪ್ರತಿಭೆಯಿದೆ. ಯಾವುದೇ ವಸ್ತುವನ್ನು ಕಥೆಗಳ ಹಾದಿಗೆ ತಂದು ಮುನ್ನಡೆಸುವ ಛಲವಿದೆ. ತಮ್ಮ ಪ್ರಾಮಾಣಿಕ ಸಂವೇದನೆಗಳನ್ನು ತಿದ್ದಿ ತೀಡಿ ಓದುಗರೊಂದಿಗೆ ಸಂವಾದಿಸಲು ಬಿಡುವ ಕಲೆ ಇದೆ....’’
ಪಲ್ಲವ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 138. ಮುಖಬೆಲೆ 120 ರೂ. ಆಸಕ್ತರು 94803 53507 ದೂರವಾಣಿಯನ್ನು ಸಂಪರ್ಕಿಸಬಹುದು.