ಹಂತಕರಿಬ್ಬರು ನೇಣುಗಂಬಕ್ಕೆ
ಭಾಗ-29
ಅಣ್ಣನ ಕೊಟ್ಟಕೊನೆಯ ಮೃತ್ಯುಪತ್ರದಲ್ಲಿ (ಇಚ್ಛಾಪತ್ರದಲ್ಲಿ)ತನ್ನ ಚಿತಾಭಸ್ಮವನ್ನು ಒಂದುಗೂಡಿದ ಹಿಂದೂ ಆಡಳಿತದಲ್ಲಿ ಅಖಂಡ ಭಾರತವನ್ನು ಸ್ಥಾಪಿಸುವ ತನಕ ನದಿಯಲ್ಲಿ ವಿಸರ್ಜಿಸಬಾರದೆಂದೂ, ಅದನ್ನು ಅಲ್ಲಿಯ ತನಕ ತಲೆತಲಾಂತರ ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರ ಮಾಡಬೇಕೆಂದೂ ಬರೆದಿಟ್ಟಿದ್ದನಂತೆ. ಆ ಮೃತ್ಯುಪತ್ರದ ಆದೇಶವನ್ನು ಕಾಪಾಡಲು ಗೋಪಾಲ ಗೋಡ್ಸೆ ಪ್ರತಿವರ್ಷ ಈ ರೀತಿ ಪುಣ್ಯತಿಥಿ ಆಚರಿಸುತ್ತಿದ್ದ. ನ್ಯಾ. ಮೂ. ಖೋಸ್ಲಾ ದಾಖಲಿಸಿರುವಂತೆ ಆ ಚಿತಾಭಸ್ಮ ಯಾರಿಗೂ ಸಿಕ್ಕಿಲ್ಲವೆಂಬುದು ನಿಜವಾದರೆ ಗೋಪಾಲ ಗೋಡ್ಸೆ ಪೂಜಿಸುತ್ತಿದ್ದ ಆ ಬೆಳ್ಳಿ ಕರಂಡದಲ್ಲಿ ಯಾವ ಬೂದಿಯಿತ್ತು.?
ತೀರ್ಪಿನ ವಿರುದ್ಧವಾಗಿ ನಾಥೂರಾಮ್ ಮತ್ತು ಆಪ್ಟೆ ಮಾಡಿಕೊಂಡ ಮೇಲ್ಮನವಿಯನ್ನು ಪ್ರೀವಿ ಕೌನ್ಸಿಲ್ ಅಂಗೀಕರಿಸಲಿಲ್ಲ. ಪಾಶಿ ಶಿಕ್ಷೆಗೆ ಗುರಿಯಾಗಿದ್ದವರನ್ನು ದಿನಾಂಕ 15-11-1949ರಂದು ಅಂಬಾಲ ಕೇಂದ್ರ ಕಾರಾಗೃಹದಲ್ಲಿ ಜಾರಿಗೊಳಿಸಬೇಕೆಂದು ದಿಲ್ಲಿ ವಿಶೇಷ ನ್ಯಾಯಾಧೀಶರಾಗಿದ್ದ ಎಸ್. ಎಸ್. ದುಬಾರ್ ಅಕ್ಟೋಬರ್ 26ರಂದು ಆಜ್ಞೆ ಹೊರಡಿಸಿದರು. ಈ ಆಜ್ಞೆ ಹೊರಟ ಮೇಲೆ ಪಾಶಿ ಶಿಕ್ಷೆಯನ್ನು ಮಾಫ್ ಮಾಡಬೇಕೆಂದು ಅಂದಿನ ಗವರ್ನರ್ -ಜನರಲ್ ಅವರಿಗೆ ದಯಾಭಿಕ್ಷಾ ಮನವಿಯನ್ನು ಸಲ್ಲಿಸಿದರು.
ಪ್ರಧಾನಿ ನೆಹರೂ ಮತ್ತು ಗೃಹಮಂತ್ರಿ ಸರ್ದಾರ್ ಪಟೇಲರಿಗೆ ಗಾಂಧೀಜಿಯವರ ಮಕ್ಕಳಾದ ದೇವದಾಸ ಗಾಂಧಿ, ರಾಮದಾಸ ಗಾಂಧಿ ಪತ್ರ ಬರೆದು ಅಹಿಂಸೆಯ ಹರಿಕಾರರಾದ ಗಾಂಧೀಜಿಯ ಕೊಲೆಗಾರರನ್ನು ಗಲ್ಲಿಗೇರಿಸುವುದು ಮಹಾತ್ಮರ ಆತ್ಮಕ್ಕೆ ವಿರುದ್ಧವಾಗುವುದೆಂದೂ, ಪಾಶಿ ಶಿಕ್ಷೆಯನ್ನು ತಪ್ಪಿಸಬೇಕೆಂದು ಮನವಿ ಮಾಡಿದರು. ಆದರೆ ಸರಕಾರ ಆ ಮನವಿಯನ್ನು ಮನ್ನಿಸಲಿಲ್ಲ. ನವೆಂಬರ್ 7ನೇ ತಾರೀಕು ಗವರ್ನರ್ ಜನರಲ್ ಕಚೇರಿಯಿಂದ ಒಂದು ಸಾಲಿನ ಉತ್ತರ ಬಂತು: ‘‘ದಯಾಭಿಕ್ಷಾ ಅರ್ಜಿಯನ್ನು ತಿರಸ್ಕರಿಸಲಾಗಿದೆ.’’
ಅಲ್ಲಿಗೆ ಮುಗಿಯಿತು ಗಾಂಧಿ ಹತ್ಯೆ ಮಾಡಿದವರ ಕಾನೂನು ಕದನ. ಇನ್ನು ಉಳಿದಿರುವುದು ಈ ದುರಂತ ನಾಟಕದ ಕೊನೆಯ ಅಂಕದ ಕೊನೆಯ ದೃಶ್ಯ.
ಹಂತಕರಿಬ್ಬರನ್ನು ಅಂಬಾಲ ಸೆರೆಮನೆಯಲ್ಲಿ ದಿನಾಂಕ 15-11-1949ರಂದು ಗಲ್ಲಿಗೇರಿಸಿದ್ದುದನ್ನು ಕಣ್ಣಾರೆ ಕಂಡವನ ಮಾತುಗಳನ್ನು ನ್ಯಾ. ಮೂ. ಖೋಸ್ಲಾ ಹೀಗೆ ದಾಖಲಿಸಿದ್ದಾರೆ:
‘‘ಗಲ್ಲಿಗೇರಿಸಲಿದ್ದ ಇಬ್ಬರು ಆರೋಪಿಗಳನ್ನು ತಮ್ಮ ಕೈಗಳೆರಡನ್ನೂ ಬೆನ್ನಹಿಂದೆ ಬಿಗಿದುಕಟ್ಟಿ ಕೊಠಡಿಗಳಿಂದ ಹೊರಗೆ ಕರೆತರಲಾ ಯಿತು. ಗೋಡ್ಸೆ ಮುಂದೆ ನಡೆದಿದ್ದ. ನಡೆಯುವಾಗ ಆಗಾಗ ಹೆಜ್ಜೆ ತಪ್ಪುತ್ತಿತ್ತು. ಅವನ ಹಾವಭಾವ ಮತ್ತು ಸಾಮಾನ್ಯ ಮುಖ ಚಹರೆ ಹೆದರಿದಂತೆ, ನಡುಕ ಹುಟ್ಟಿರುವಂತೆ ಕಾಣುತ್ತಿತ್ತು. ಅಂಜಿಕೆಯೊಡನೆ ಹೋರಾಡಲು ಧೈರ್ಯ ತೋರಿಸುವಂತೆ ಕೆಲಕ್ಷಣಗಳ ಅಂತರದಲ್ಲಿ ಆಗಾಗ ‘ಅಖಂಡ ಭಾರತ್’ ಎಂದು ಜಯಕಾರ ಹಾಕುತ್ತಿದ್ದ. ಆದರೆ ಅವನ ದನಿ ಕಂಪಿಸುವಂತಿತ್ತು. ವಿಚಾರಣೆಯ ಕಾಲಕ್ಕೆ ಮತ್ತು ಉಚ್ಚ ನ್ಯಾಯಾಲಯದಲ್ಲಿ ಅಪೀಲನ್ನು ವಾದಿಸುವಾಗ ಅವನ ದನಿಯಲ್ಲಿದ್ದ ಬಿರುಸು, ಗಡಸು, ಈಗ ಮಾಯವಾಗಿತ್ತು. ಹತಾಶೆ ಮತ್ತು ಆದದ್ದಾಗಲಿ ಎಂಬ ಕೆಟ್ಟ ಧೈರ್ಯದ ಕೂಗು ‘ಅಮರ್ ರಹೆ’ ಆಪ್ಟೆಯ ದನಿಯಲ್ಲಿತ್ತು. ಅವನ ಅಬ್ಬರದ ದೃಢ ಧ್ವನಿ ಗೋಡ್ಸೆಯ ದನಿಗೆ ತದ್ವಿರುದ್ಧವಾಗಿತ್ತು.’’
ಉಚ್ಚ ನ್ಯಾಯಾಲಯದ ಮರಣದಂಡನೆ ಜಾರಿಗೊಳಿಸುವುದನ್ನು ದೃಢೀಕರಿಸಲಿಕ್ಕಾಗಿ ಹಾಜರಿದ್ದ ಜೈಲ್ ಸೂಪರಿಂಟೆಂಡೆಂಟ್ ಮತ್ತು ಜಿಲ್ಲಾ ದಂಡಾಧಿಕಾರಿ ಹೇಳುವಂತೆ, ಗೋಡ್ಸೆಗಿಂತ ತೀರಾ ಭಿನ್ನವಾಗಿ ಆಪ್ಟೆ ಸಂಪೂರ್ಣ ಸ್ವಸ್ಥ ಚಿತ್ತದಿಂದಿದ್ದ. ಒಂದಿಷ್ಟೂ ಅಂಜಿಕೆಯ ಕಂಪನ ತೋರಿಸಲಿಲ್ಲ. ಅವನು ದೃಢ ಹೆಜ್ಜೆಯಿಡುತ್ತ, ಭುಜಗಳನ್ನು ಸೆಟೆದು ತಲೆಯೆತ್ತಿ ನಡೆಯುತ್ತಿದ್ದ. ಗೋಡ್ಸೆ ಜೈಲಿನಲ್ಲಿ ಕೊನೆಯ ದಿನಗಳಲ್ಲಿ ತಾನು ಮಾಡಿದ ಕೃತ್ಯಕ್ಕಾಗಿ ಪಶ್ಚಾತ್ತಾಪಪಟ್ಟನೆಂದೂ ಇನ್ನೊಂದು ಅವಕಾಶ ದೊರೆತರೆ ತನ್ನ ಶೇಷಾಯುಷ್ಯವನ್ನು ದೇಶದಲ್ಲಿ ಶಾಂತಿಯನ್ನು ಹಬ್ಬಿಸಲು ದೇಶ ಸೇವೆ ಮಾಡಲು ಕಳೆಯುವೆನೆಂದು ಹೇಳುತ್ತಿದ್ದನೆಂಬುದಾಗಿ ಜನರಾಡಿಕೊಳ್ಳುತ್ತಿದ್ದರು. ಆದರೆ ಆಪ್ಟೆ ತದ್ವಿರುದ್ಧವಾಗಿ ಯಾವ ಪಶ್ಚಾತ್ತಾಪವನ್ನೂ ಪಡಲಿಲ್ಲ. ಕೊನೆತನಕ ತನ್ನ ತಪ್ಪನ್ನು ಒಪ್ಪಿಕೊಳ್ಳಲಿಲ್ಲ. ಇಲ್ಲವೇ ಸೋತು ಹೋದವನು ಶತ್ರುವಿನ ಮುಂದೆ ಸೆರಗೊಡ್ಡಿ ಬೇಡಿಕೊಳ್ಳುವ ದೈನ್ಯತೆಯನ್ನಾಗಲಿ ಅವನು ತೋರಿಸಲಿಲ್ಲ. ಅವನ ಗೀತಾಧ್ಯಯನ ಮತ್ತು ಜೈಲಿನಲ್ಲಿ ತತ್ತ್ವ ಶಾಸ್ತ್ರವನ್ನು ಕುರಿತು ಗ್ರಂಥ ರಚನೆ ಮಾಡಿದ್ದರಿಂದ ಪ್ರತಿಭಟಿಸುವ ಇಲ್ಲವೇ ಪ್ರಾರ್ಥಿಸುವುದರ ಅಸಾರ್ಥಕತೆಯ ಭಾವನೆಯಿಂದಲೋ ಇಲ್ಲವೇ ಅವನ ಹುಟ್ಟುಗುಣವಾದ ಸ್ಥಿರ ಚಿತ್ತ ವೃತ್ತಿಯ ಫಲವಾಗಿಯೋ ತನ್ನ ದುರಂತ ಅಂತ್ಯಕ್ಕಾಗಿ ದೃಢವಾದ ಹೆಜ್ಜೆ ಹಾಕಿ ನಡೆದ. ತನ್ನ ಕರ್ತವ್ಯವನ್ನು ನೆರವೇರಿಸಿದ ಕೃತಕೃತ್ಯ ಭಾವನೆಯಿಂದ, ತನ್ನ ಕರ್ಮಕ್ಕೆ ತಕ್ಕ ಫಲವನ್ನು ಅನುಭವಿಸಬೇಕೆಂಬ ನಿರೀಕ್ಷೆಯಿಂದ ನಡೆದ.
ಆಪ್ಟೆ ನೇಣುಬಿಗಿದೊಡನೆ ತಕ್ಷಣವೇ ಪ್ರಾಣಬಿಟ್ಟ. ಗೋಡ್ಸೆ ಸ್ವಲ್ಪ ಹೊತ್ತು ಒದ್ದಾಡಿದಂತೆ ಕಂಡುಬಂತು. ತರುವಾಯ ನಿಶ್ಚೇಷ್ಟಿತವಾಗಿ ನಿಶ್ಶಬ್ದವಾಯಿತು. ಅಲ್ಲಿಗೆ ಮುಗಿಯಿತು ಅವರಿಬ್ಬರ ಕತೆ.
ಹೆಣಗಳನ್ನಿಳಿಸಿ ಸೆರೆಮನೆಯ ಆವರಣದಲ್ಲಿಯೇ ಸುಟ್ಟರು. ಸುಟ್ಟ ಜಾಗದಲ್ಲಿ ನೇಗಿಲು ಹೊಡೆದು, ಅದರ ಕುರುಹು ಕಾಣದಂತೆ ಮಾಡಿದರು. ಚಿತಾಭಸ್ಮವನ್ನು ರಹಸ್ಯವಾಗಿ ಗುಟ್ಟಾದ ತಾಣದಲ್ಲಿ ಘುಗ್ಗರ್ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಆ ಬೂದಿಯ ಒಂದು ಕಣವೂ ಯಾರಿಗೂ ದೊರೆಯಲಿಲ್ಲ. ಆದಾಗ್ಯೂ ಪ್ರತಿವರ್ಷ ನವೆಂಬರ್ 15ರಂದು ನಾಥೂರಾಮ್ ಗೋಡ್ಸೆಯ ತಮ್ಮ ಗೋಪಾಲ ಗೋಡ್ಸೆ ಅಣ್ಣನ ವಾರ್ಷಿಕ ತಿಥಿಯನ್ನು ಅವನು ಬದುಕಿದ್ದಷ್ಟು ಕಾಲ(ನವೆಂಬರ್ 26, 2005ರ ವರೆಗೆ) ಪುಣೆಯಲ್ಲಿ ತನ್ನದೇ ವಾಸದ ಮನೆಯ ಪಡಸಾಲೆಯಲ್ಲಿ ಒಂದು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದ್ದ. ಗೋಡೆಯ ಮೇಲೊಂದು ಬರ್ಮಾ (ಈಗಿನ ಮ್ಯಾನ್ಮಾರ್) ದೇಶವನ್ನು ಮತ್ತು ಬಾಂಗ್ಲಾದೇಶ, ಪಾಕಿಸ್ತಾನ ದೇಶಗಳನ್ನೊಳಗೊಂಡ ಅಖಂಡ ಭಾರತದ ಭೂನಕ್ಷೆಯ ಮುಂದೆ ಒಂದು ಬೆಳ್ಳಿ ಕರಂಡದಲ್ಲಿದ್ದ ನಾಥೂರಾಮನ ಚಿತಾಭಸ್ಮವೆಂದು ಭಾವಿಸಿ ಪೂಜಿಸಿ ಪ್ರತಿಜ್ಞೆ ಮಾಡುತ್ತಿದ್ದ: ‘‘ಪಾಕಿಸ್ತಾನವನ್ನೆಲ್ಲ ಗೆದ್ದು ತುಂಡಾದ ಮಾತೃಭೂಮಿಯನ್ನು ಸಿಂಧು ನದಿಯ ತೀರದಿಂದ ಬ್ರಹ್ಮಪುತ್ರಾನದಿ ಆಚೆಯ ಅರಣ್ಯದವರೆಗೆ ಹಿಂದೂಗಳ ಆಳ್ವಿಕೆಯಲ್ಲಿ ತಂದು ಒಂದುಗೂಡಿಸಿ ಅಖಂಡ ಭಾರತದಲ್ಲಿ ಹರಿಯುವ ನದಿಯಲ್ಲಿ ಈ ‘ಪವಿತ್ರ’ ಚಿತಾಭಸ್ಮವನ್ನು ವಿಸರ್ಜನೆ ಮಾಡಬೇಕು’’ ಎಂದು ಪ್ರತಿಜ್ಞಾ ಸಮಾರಂಭ ಏರ್ಪಡಿಸುತ್ತಿದ್ದ. ಅವನ ಅಣ್ಣನ ಕೊಟ್ಟ ಕೊನೆಯ ಮೃತ್ಯುಪತ್ರದಲ್ಲಿ (ಇಚ್ಛಾಪತ್ರದಲ್ಲಿ) ತನ್ನ ಚಿತಾಭಸ್ಮವನ್ನು ಒಂದುಗೂಡಿದ ಹಿಂದೂ ಆಡಳಿತದಲ್ಲಿ ಅಖಂಡ ಭಾರತವನ್ನು ಸ್ಥಾಪಿಸುವ ತನಕ ನದಿಯಲ್ಲಿ ವಿಸರ್ಜಿಸಬಾರದೆಂದೂ, ಅದನ್ನು ಅಲ್ಲಿಯ ತನಕ ತಲೆತಲಾಂತರ ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರ ಮಾಡಬೇಕೆಂದೂ ಬರೆದಿಟ್ಟಿದ್ದನಂತೆ. ಆ ಮೃತ್ಯುಪತ್ರದ ಆದೇಶವನ್ನು ಕಾಪಾಡಲು ಗೋಪಾಲ ಗೋಡ್ಸೆ ಪ್ರತಿವರ್ಷ ಈ ರೀತಿ ಪುಣ್ಯತಿಥಿ ಆಚರಿಸುತ್ತಿದ್ದ. ನ್ಯಾ. ಮೂ. ಖೋಸ್ಲಾ ದಾಖಲಿಸಿರುವಂತೆ ಆ ಚಿತಾಭಸ್ಮ ಯಾರಿಗೂ ಸಿಕ್ಕಿಲ್ಲವೆಂಬುದು ನಿಜವಾದರೆ ಗೋಪಾಲ ಗೋಡ್ಸೆ ಪೂಜಿಸುತ್ತಿದ್ದ ಆ ಬೆಳ್ಳಿ ಕರಂಡದಲ್ಲಿ ಯಾವ ಬೂದಿಯಿತ್ತು.?
ಗೋಪಾಲ ಗೋಡ್ಸೆ, ವಿಷ್ಣು ಕರ್ಕರೆ ಮತ್ತು ಮದನಲಾಲ್ ಪಹ್ವಾ ಹದಿನಾಲ್ಕು ವರ್ಷ ಸೆರೆಮನೆ ವಾಸ ಅನುಭವಿಸಿ ಜೀವಾವಧಿ ಶಿಕ್ಷೆಯನ್ನು ಮುಗಿಸಿದರು. ‘ಜೀವಾವಧಿ ಶಿಕ್ಷೆ’ ಎಂದರೆ ಜೀವನಪರ್ಯಂತ -ಬದುಕಿರುವವರೆಗೆ ಸೆರೆಮನೆ ವಾಸ ಎಂಬುದು ಇಂಗಿತ. ಆದರೆ, ಜೈಲ್ ಮ್ಯಾನ್ಯುಯಲ್ ಮತ್ತು ಆಡಳಿತೆಯ ನಿಯಮಾವಳಿಯ ಪ್ರಕಾರ ‘ಜೀವಾವಧಿ ಶಿಕ್ಷೆ’ ಎಂದರೆ ಇಪ್ಪತ್ತು ವರ್ಷಗಳು ಎಂತಲೂ, ಆ ಅವಧಿಯಲ್ಲಿ ಸೆರೆಯಾಳಾದವನ ಒಳ್ಳೆಯ ನಡತೆ, ಸರಕಾರ ಆಗಾಗ ಸೆರೆಯಾದವರಿಗೆ ಶಿಕ್ಷೆಯ ಅವಧಿಯನ್ನು ತಗ್ಗಿಸುವ ಆಜ್ಞೆ ಹೊರಡಿಸುವುದರ ಮೂಲಕ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಿ ಒಟ್ಟು ಹದಿನಾಲ್ಕು ವರ್ಷ ಸೆರೆವಾಸ ಅನುಭವಿಸಿದರೆ ಜೀವಾವಧಿ ಸಜೆ ತೀರಿಸಿದಂತೆಯೆ ಎಂದು ಭಾವಿಸಲಾಗಿತ್ತು. ಆದರೆ 2006ರಲ್ಲಿ ನಮ್ಮ ಸುಪ್ರೀಂ ಕೋರ್ಟು ಒಂದು ಕೇಸಿನಲ್ಲಿ ಜೀವಾವಧಿ ಶಿಕ್ಷೆ ಎಂದರೆ ಜೀವನಪರ್ಯಂತ -ಸಾಯುವವರೆಗೆ ಎಂದೇ ಅರ್ಥೈಸಿದೆ. ಏನೇ ಆಗಲಿ ಆಗ ಆಚರಣೆಯಲ್ಲಿದ್ದಂತೆ ಈ ಮೂವರನ್ನು ಅಕ್ಟೋಬರ್ 24, 1964ರಂದು ಬಿಡುಗಡೆ ಮಾಡಲಾಯಿತು. ಅವರು ಹೊರಬಂದಾಗ ಪುಣೆಯ ಹಿಂದೂ ಮಹಾಸಭೆ ಒಂದು ಅದ್ದೂರಿ ಸಮಾರಂಭವನ್ನು ಏರ್ಪಡಿಸಿತ್ತು.ಎಂ. ಜಿ. ಫುಯಸಾಸ್ ಎಂಬ ಮಹನೀಯರು ಒಂದು ಆಮಂತ್ರಣ ಪತ್ರಿಕೆಯನ್ನು ಅಚ್ಚು ಹಾಕಿಸಿದರು.
ಶ್ರೀ ಗಜಾನನ ಪ್ರಸನ್ನ
ಸಪ್ರೇಮ ನಮಸ್ಕಾರಗಳು:
ದಿ.ದೇಶಭಕ್ತ ನಾಥೂರಾಮ್ ವಿ. ಗೋಡ್ಸೆಯ ಸಹೋದರ
ಶ್ರೀ ಗೋಪಾಲ ಗೋಡ್ಸೆ
ಮತ್ತು ಶ್ರೀ ವಿಷ್ಣುಪಂತ್ ಕರ್ಕರೆ ಹಾಗೂ ಶ್ರೀ ಮದನಲಾಲ್ ಪಹ್ವಾ ಅವರ
ಬಿಡುಗಡೆಯ ಶುಭ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲು ಪ್ರೀತಿ ಗೌರವಗಳನ್ನು ಅರ್ಪಿಸಲು ಸಂತೋಷಕೂಟವನ್ನು ಏರ್ಪಡಿಸಲಾಗಿದೆ. ತಾವು ಈ ಸಮಾರಂಭಕ್ಕೆ ಬರಬೇಕೆಂದು ವಿನಂತಿ. ಶ್ರೀ ಸತ್ಯನಾರಾಯಣ ಪೂಜೆ ಮತ್ತು ಅಭಿನಂದನಾ ಸಮಾರಂಭವಿದೆ.
ಇಂತಿ ನಿಮ್ಮ
ಎಂ. ಜಿ. ಫುಯಸಾಸ್
ವೇಳೆ: 12-11-1964, ಗುರುವಾರ ಸಂಜೆ 5:30 ರಿಂದ 7:30.
ಸ್ಥಳ: ಉದಯ ಮಂಗಳ ಕಾರ್ಯಾಲಯ.
ಈ ಆಮಂತ್ರಣ ಪತ್ರಿಕೆಯನ್ನು ಪ್ರಕಟಿಸಿದವರು ಗಾಂಧಿ ಹತ್ಯೆಯ ಬಗ್ಗೆ ಎಂಥ ಭಾವನೆ ಹೊಂದಿದ್ದರು. ಆ ಹತ್ಯೆಗೆ ಯಾರಿಂದ ಸ್ಫೂರ್ತಿ ದೊರೆಯಿತು ಎಂಬುದು ಸ್ಪಷ್ಟವಾಗುತ್ತದೆ. ಇಲ್ಲಿ ಅದನ್ನು ವ್ಯಾಖ್ಯಾನಿಸುವ ಅಗತ್ಯವಿಲ್ಲ. ಆ ಆಮಂತ್ರಣದಲ್ಲಿಯೇ ಕಾಣಿಸಿರುವಂತೆ ನಾಥೂರಾಮ್ ಗೋಡ್ಸೆ ‘ದೇಶಭಕ್ತ’ರ ಸಾಲಿಗೆ ಸೇರಿಹೋದ! ಹತ್ಯೆಯಾದ ಮಹಾತ್ಮಾ ಗಾಂಧಿ ಅವರ ದೃಷ್ಟಿಯಲ್ಲಿ ದೇಶದ್ರೋಹಿ! ವಧೆಯಾಗಲೇಬೇಕಾದ ದ್ರೋಹಿ!
ಆಮಂತ್ರಣ ಪತ್ರಿಕೆಯನ್ನು ಪ್ರಕಟಿಸಿದ್ದ ಆ ಫುಯಾಸಾಸ್‌ನನ್ನು ಮುಂಬೈ ಸರಕಾರ ಅರೆಸ್ಟ್ ಮಾಡಿತು. ಆಗ ಅವನು ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಒಂದು ಪ್ರಮಾಣ ಪತ್ರಿಕೆಯನ್ನು ಸಲ್ಲಿಸಿ: ‘ಈ ಪರಾಕ್ರಮಿಗಳ ಪುನರಾಗಮನದ ಸ್ವಾಗತ ಸಮಾರಂಭಕ್ಕೆ 150 ಜನ ಬಂದಿದ್ದರೆಂದು’ ಹೆಮ್ಮೆಪಟ್ಟುಕೊಂಡಿದ್ದ! ಇದೂ ಒಂದು ಗಮನಿಸಬೇಕಾದ ಸಂಗತಿಯೇ. ಗಾಂಧಿ ಹತ್ಯೆಗೆ ಯಾರು ಕಾರಣ? ಅದರಿಂದ ಯಾರಿಗೆ ಹರ್ಷವಾಯಿತು? ಅವರಿಗೆ ಪ್ರೇರಣೆ ಕೊಟ್ಟ ಸಿದ್ಧಾಂತ ಯಾವುದು? ಈ ‘ಪರಾಕ್ರಮಿಗಳು’ ಬಿಡುಗಡೆ ಹೊಂದಿ ಹೊರಬಂದ ಮೇಲೆ ಎಲ್ಲಿದ್ದರು? ಈ ದೇಶದ ಉದ್ಧಾರಕ್ಕಾಗಿ, ತುಂಡಾಗಿದ್ದುದನ್ನು ಒಂದುಗೂಡಿಸಲು ಯಾವ ತ್ಯಾಗ ಮಾಡಿದರು? ಅದನ್ನು ಒಂದಿಷ್ಟು ಗಮನಿಸುವುದು ಅಗತ್ಯ.
ಗೋಪಾಲ ಗೋಡ್ಸೆ ಪುಣೆಯಲ್ಲಿ ನೆಲೆಸಿದ. 60ನೇ ದಶಕದಲ್ಲಿ ಒಮ್ಮೆ ಅವನನ್ನು ಅರೆಸ್ಟ್ ಮಾಡಲಾಗಿತ್ತು. 70,80,90ರ ದಶಕಗಳಲ್ಲಿ ಹಿಂದೂ ಕಡುನಿಷ್ಠಾ ಸಂಘಟನೆಯ ಧ್ವಜಚಿಹ್ನೆಯಾಗಿ ಮೆರೆದ. ಸಂಘಪರಿವಾರದ ಆದರ್ಶ ವ್ಯಕ್ತಿಯಾಗಿ ಮೆರೆದ. 83 ವರ್ಷ ವಯಸ್ಸಿನಲ್ಲಿ ನವೆಂಬರ್ 26, 2005ರಲ್ಲಿ ತೀರಿಹೋದ. ವಿಷ್ಣು ಕರ್ಕರೆ ಅಹಮದ್ ನಗರಕ್ಕೆ ಹಿಂದಿರುಗಿ ತನ್ನ ಡೆಕನ್ ಗೆಸ್ಟ್ ಹೌಸ್ ಹೋಟೆಲ್ ನಡೆಸುತ್ತಿದ್ದ. ಎಪ್ರಿಲ್ 4, 1974ರಲ್ಲಿ ತೀರಿಹೋದ. ಅವನ ದತ್ತು ಮಗಳು ಅವನ ಹೋಟೆಲ್ ಉದ್ಯಮವನ್ನು ನೋಡಿಕೊಳ್ಳುತ್ತಿದ್ದಾಳೆ.
ಮದನಲಾಲ್ ಪಹ್ವಾ ಮುಂಬೈಯಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿದ್ದ. ಅವನು 2006ರಲ್ಲಿ ತೀರಿಹೋದ. ಶಂಕರ ಕಿಸ್ಟಯ್ಯ ಎಲ್ಲಿದ್ದನೊ, ಏನಾದನೊ ಯಾರಿಗೂ ಗೊತ್ತಿಲ್ಲ. ಮಾಫಿ ಸಾಕ್ಷಿಯಾಗಿದ್ದ ಬಡ್ಗೆಗೆ ಪ್ರಾಣಾಪಾಯದ ಹೆದರಿಕೆ ಇದ್ದುದರಿಂದ ಅವನಿಗೆ ಮುಂಬೈ ಪೊಲೀಸ್ ಕಮಿಷನರ್ ಕಚೇರಿಯ ಆವರಣದಲ್ಲಿ ಒಂದು ಕೊಠಡಿಯನ್ನು ಕೊಟ್ಟು ರಕ್ಷಣೆ ಒದಗಿಸಲಾಗಿತ್ತು. ಹಿಂದಿನಂತೆ ಉಕ್ಕಿನ ಹುಲಿ ಉಗುರು ಮುಂತಾದ ಶಸ್ತ್ರಗಳನ್ನು ಮಾಡಿ ಜೀವನೋಪಾಯ ಮಾಡುತ್ತಿದ್ದ. ಅಲ್ಲಿಯ ಪೊಲೀಸರ ರಕ್ಷಣೆಯಲ್ಲಿದ್ದು ತೀರಿಹೋದ. ಅವನ ಹೆಂಡತಿ ಮಕ್ಕಳ ಗತಿ ಏನಾಯಿತೋ ಯಾರಿಗೂ ಗೊತ್ತಿಲ್ಲ.