ಶಿವಪ್ಪ ಮೇಷ್ಟ್ರೆಂಬ ನಿಸ್ವಾರ್ಥಿ ಕಾಯಕಯೋಗಿ

Update: 2019-05-11 14:30 GMT

ಘರ್ಷಣೆ ಹುಟ್ಟಲು ಮತ್ತು ಬೆಳೆಯಲು ಎರಡು ಬಣ್ಣಗಳಷ್ಟೇ ಸಾಕಾಗುವ ನಮ್ಮೂರಲ್ಲಿ ಸರಕಾರಿ ಶಾಲೆಯ ಮೇಷ್ಟ್ರಾಗುವು ದೆಂದರೆ ಅದರಲ್ಲೂ ಮುಖ್ಯೋಪಾಧ್ಯಾಯ ರಾಗುವುದೆಂದರೆ ಕಡಿಮೆ ಸಾಹಸವೇನಲ್ಲ. ರಭಸವಾಗಿ ಹರಿಯುವ ನೀರಿಗೆ ಸಣ್ಣ ತೂಗು ಸೇತುವೆ ಕಟ್ಟಿ ಪರಮ ಜಾಗರೂಕತೆಯಿಂದ ಹೆಜ್ಜೆ ಇಟ್ಟರಷ್ಟೇ ಮತ್ತೊಂದು ತೀರ ತಲುಪಲು ಸಾಧ್ಯ. ಸಣ್ಣಗೆ ಹೆಜ್ಜೆ ತಪ್ಪಿದರೂ ವಿನಾಕಾರಣದ ಆಕ್ರೋಶ ದಲ್ಲಿ ಕೊಚ್ಚಿಕೊಂಡು ಹೋಗಬೇಕಾಗುತ್ತದೆ. ಇಂತಹ ಅಪಾಯದ ಕತ್ತಿ ಯನ್ನು ನೆತ್ತಿ ಮೇಲೆ ತೂಗಿಸಿಕೊಂಡೇ ಹತ್ತು ವರ್ಷಕ್ಕೂ ಹೆಚ್ಚು ಕಾಲ ಶಾಲೆ ಯನ್ನೂ, ಊರವರನ್ನೂ ಸಂಭಾಳಿಸಿದವರು ನಮ್ಮ ಶಿವಪ್ಪ ಮಾಷ್ಟ್ರು.

ನೂರು ವರ್ಷಕ್ಕೂ ಮಿಕ್ಕಿದ ಇತಿಹಾಸವಿರುವ ನಮ್ಮ ಶಾಲೆ, ಸಾವಿರಾರು ಮಕ್ಕಳು, ವಿಶಾಲವಾದ ಆಟದ ಮೈದಾನ, ಮಕ್ಕಳೇ ನೆಟ್ಟು ಬೆಳೆಸಿರುವ ವಿವಿಧ ಮರಗಳು, ಶಾಲೆಗೆ ತಾಗಿಕೊಂಡಂತೇ ಇರುವ ಸಂತೆ ಕಟ್ಟೆ, ವ್ಯಾಪಾರದ ಜೊತೆ ಜೊತೆಗೇ ಅಲ್ಲಿ ನಡೆಯುವ ‘ಇತರೇ’ ವ್ಯವಹಾರಗಳು,ಶಾಲೆಯ ಮೈದಾನದ ಪಕ್ಕದಲ್ಲಿ ಸರಕಾರ ನಿವೇಶನವಿಲ್ಲದವರಿಗೆಂದು ಒದಗಿಸಿದ ನಿವೇಶನದಲ್ಲಿ ಬದುಕು ಕಟ್ಟಿಕೊಂಡವರು, ಅವರ ರಸವ ತ್ತಾದ ಜೀವನ... ಊರ ಶಾಲೆಯಲ್ಲಿ ಒಂದನೇ ತರಗತಿಯ ಮೆಟ್ಟಿಲು ಹತ್ತುವುದೆಂದರೆ ಬದುಕಿನ ಸಮೃದ್ಧ ಪಾಠಗಳ ಬಾಗಿಲು ತೆರೆಯುವು ದೆಂದೇ ಅರ್ಥ.

ಸರಕಾರಿ ಶಾಲೆಯೆಂದರೆ ಅಶಿಸ್ತಿನ ಆಡುಂಬೋಲ, ಬೇಜವಾಬ್ದಾರಿ ಶಿಕ್ಷಕರು, ಮೂಲಭೂತ ಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ ಅಂತೆಲ್ಲ ಇದ್ದ ಕಾಲದಲ್ಲೇ ನಮ್ಮೂರಿನ ಶಾಲೆ ಸುತ್ತ ಹತ್ತು ಹಳ್ಳಿಗಳಲ್ಲಿ ಶಿಸ್ತಿಗೆ ಹೆಸರುವಾಸಿಯಾಗಿತ್ತು. ಹಲವು ಸಾಧಕರನ್ನೂ ಸೃಷ್ಟಿಸಿತ್ತು. ಇಂತಹ ಶಾಲೆಗೆ, ಅದೇ ಶಾಲೆಯಲ್ಲಿ ಓಡಿ-ಆಡಿ ಕಲಿತ ಶಿವಪ್ಪ ಪೂಜಾರಿ ಶಿಕ್ಷಕರಾಗಿ ನಿಯೋಜಿತರಾದಾಗ ಯಾವ ಕನಸುಗಳನ್ನು ಹೊತ್ತುಕೊಂಡು ಬಂದಿದ್ದರೋ ಗೊತ್ತಿಲ್ಲ, ಆದರೆ ನಾವು ಶಾಲೆಗೆ ದಾಖಲಾಗುವಷ್ಟರಲ್ಲಿ ಅವರನ್ನೂ ಶಾಲೆಯನ್ನೂ ಬೇರ್ಪಡಿಸಲಾಗದಷ್ಟು ಬೆರೆತು ಹೋಗಿದ್ದರು.

ಸರಿಯಾಗಿ ಹತ್ತು ಗಂಟೆಗೆ ಶಾಲೆಯ ಅಂಗಳದಲ್ಲಿ ಸೇರುತ್ತಿದ್ದ ಅಸೆಂಬ್ಲಿ,ಅಲ್ಲಿ ಅವರಾಡುತ್ತಿದ್ದ ಖಡಕ್ ಮಾತುಗಳು, ಮಕ್ಕಳನ್ನು ಯೋಚನೆಗೆ ಹಚ್ಚುತ್ತಿದ್ದ ಪುಟ್ಟ ಪುಟ್ಟ ಕಥೆಗಳು, ಇಡೀ ಶಾಲೆಯ ಎಲ್ಲ ಮಕ್ಕಳ ಬೆಳವಣಿಗೆ ಯನ್ನು ಗಮನಿಸುತ್ತಿದ್ದ ಅವರ ಜಾಣ್ಮೆ ಒಂದು ಕಡೆಯಾದರೆ ಹೆಡ್ ಮಾಷ್ಟ್ರೆಂಬ ಹಮ್ಮು ತೊರೆದು ನಮ್ಮೆಂದಿಗೆ ಅವರು ಬೆರೆಯುತ್ತಿ ದ್ದುದು, ಆಟ, ತಮಾಷೆಗಳು ಮತ್ತೊಂದು ಕಡೆ ಅವರ ಘನವಾದ ವ್ಯಕ್ತಿತ್ವಕ್ಕೆ ಮತ್ತಷ್ಟು ಹೊಳಪು ನೀಡುತ್ತಿದ್ದವು.

ಸಾಮಾನ್ಯವಾಗಿ ಕಬ್ಬಿಣದ ಕಡಲೆಯೆಂದೇ ಬಿಂಬಿಸಲ್ಪಡುವ ವಿಜ್ಞಾನ ವಿಷಯವನ್ನು ಬೋಧಿಸುತ್ತಿದ್ದ ಅವರು ಅತ್ಯಂತ ಸರಳವಾಗಿ, ನಿಜ ಜೀವನ ದ ಉದಾಹರಣೆಯೊಂದಿಗೆ ವಿವರಿಸುತ್ತಿದ್ದರೆ ಇಡೀ ತರಗತಿ ಬೆಕ್ಕಸಬೆರ ಗಾಗುತ್ತಿತ್ತು. ವಿಜ್ಞಾನ ಮತ್ತು ನೀತಿ ಸಂಬಂಧಿತ ಬದುಕು ಬೇರೆಬೇರೆಯಲ್ಲ ಎಂದು ಬಲವಾಗಿ ನಂಬಿದ್ದ ಅವರು ವಿಜ್ಞಾನದೊಳಗಡೆ ನೀತಿ ಕಥೆಗಳನ್ನು ಬೆರೆಸಿ ಪಾಠ ಮಾಡುತ್ತಿದ್ದರೆ ಕಥೆ ಯಾವುದು ಪಾಠ ಯಾವುದು ಗೊತ್ತಾಗು ತ್ತಿರಲಿಲ್ಲ. ಒಮ್ಮೆ ನೀರಿನ ಮತ್ತು ಎಣ್ಣೆಯ ಸಾಂದ್ರತೆಯ ಬಗ್ಗೆ ಪಾಠ ಮಾಡುತ್ತಾ ಅವರು, ಅವರ ಬಾಲ್ಯದ ಕಥೆಯೊಂದನ್ನು ಹೇಳಿದ್ದರು.

ಅದೊಂದು ಜೋರು ಮಳೆಗಾಲ. ಪಾಚಿಕಟ್ಟಿದ ಮಣ್ಣಿನ ರಸ್ತೆ ಕಾಲಿಟ್ಟಲ್ಲೆಲ್ಲಾ ಜಾರಿ ಬೀಳುವಂತಿತ್ತು. ವಿದ್ಯುತ್ ಇಲ್ಲದ ಕಾಲವದು. ಮನೆ ಬೆಳಗಲು ಸೀಮೆ ಎಣ್ಣೆ ದೀಪವೇ ಗತಿ. ಒಮ್ಮೆ ಅವರ ಅಪ್ಪ ಸೀಮೆಎಣ್ಣೆ ತರಲೆಂದು ಅವರನ್ನು ದೂರದ ಅಂಗಡಿಗೆ ಕಳುಹಿಸಿದ್ದರಂತೆ. ಮುಸ್ಸಂಜೆ ಹೊತ್ತು, ಸಾಲದ್ದಕ್ಕೆ ಮಳೆ ತುಂಬ ಜೋರಾಗಿ ಹೊಡೆಯು ತ್ತಿತ್ತಂತೆ. ಒಮ್ಮೆ ಮನೆ ತಲುಪಿದರೆ ಸಾಕು ಎನ್ನುವ ಗಡಿಬಿಡಿಯಲ್ಲಿದ್ದ ಅವರುಪಾಚಿಯ ಮೇಲೆ ಕಾಲಿಟ್ಟು ಜಾರಿ ಬಿದ್ದರು. ಕೈಯಲ್ಲಿದ್ದ ಸೀಮೆ ಎಣ್ಣೆ ಕ್ಯಾನ್ ಮಗುಚಿ ಬಿದ್ದು ಅರ್ಧದಷ್ಟು ಎಣ್ಣೆ ಚೆಲ್ಲಿ ಹೋಯಿತು. ಮನೆಗೆ ಹೋದ್ರೆ ಅಪ್ಪನಿಂದ ಬೈಸಿಕೊಳ್ಳಬೇಕಲ್ಲಾ ಎಂದು ಸುರಿಯುತ್ತಿರುವ ಮಳೆಗೆ ಕ್ಯಾನನ್ನು ಒಡ್ಡಿ ಕ್ಯಾನ್ ತುಂಬಿಸಿಕೊಂಡು ಏನೂ ಆಗದಂತೆ ಮನೆಗೆ ಹೋಗಿ ಸೀಮೆಎಣ್ಣೆ ಅಪ್ಪನ ಕೈಗಿತ್ತರು.

ಮಾಮೂಲಿಗಿಂತ ತುಸು ಭಾರ ಜಾಸ್ತಿ ಇದ್ದ ಆ ಕ್ಯಾನನ್ನು ಕೈಗೆತ್ತಿಕೊಂಡ ಕೂಡಲೇ ಅನುಮಾನ ಬಂದ ಅಪ್ಪ ಮುಚ್ಚಳ ತೆರೆದು ನೋಡಿದರೆ ನೀರಲ್ಲಿ ಬೆರೆಯದ ಎಣ್ಣೆ ಮೇಲೆ ತೇಲುತ್ತಿತ್ತಂತೆ. ಮಣ್ಣು ಮೆತ್ತಿಕೊಂಡಿರುವ ಶಿವಪ್ಪರ ಚೆಡ್ಡಿ, ಕೆಸರಿನ ಅವಶೇಷಗಳು ಇನ್ನೂ ಉಳಿದಿರುವ ಕ್ಯಾನ್‌ನ ತಳ, ತರಚು ಗಾಯಗಳಿರುವ ಮಂಡಿ ನೋಡುವಾಗಲೇ ಎಲ್ಲ ಅರ್ಥವಾದ ಅವರು ಏನನ್ನೂ ವಿಚಾರಿಸದೆ ಶಿವಪ್ಪರನ್ನು ಕರೆದು ಬೆನ್ನಿಗೆ ಸರಿಯಾಗಿ ಬಾರಿಸಿ ದರಂತೆ. ಅಪ್ಪನ ಸಿಟ್ಟೇನೂ ಅವರಿಗೆ ಹೊಸತಾಗಿರಲಿಲ್ಲ, ಆದರೆ ಈ ಬಾರಿ ಮಾತ್ರ ಅಪ್ಪ ಒಂದು ವಾರ ಅವರ ಜೊತೆ ಮಾತೇ ಆಡಲಿಲ್ಲವಂತೆ. ಎಣ್ಣೆ ಚೆಲ್ಲಿದ್ದರೆ ನಾಲ್ಕೇಟು ಕೊಟ್ಟು ಅದನ್ನಲ್ಲಿಗೆ ಮರೆತು ಬಿಡುತ್ತಿ ದ್ದರೋ ಏನೋ. ಆದರೆ ನಾನು ಅಕಸ್ಮಾತ್ತಾಗಿ ಸಂಭವಿಸಿದ ತಪ್ಪೊಂದನ್ನು ಮುಚ್ಚಿ ಹಾಕಲು ಮಾಡಿದ್ದು ದೊಡ್ಡ ಮೋಸ. ಬೆನ್ನಿನ ಮೇಲೆ ಈಗಲೂ ಕಲೆ ಉಳಿಸಿಕೊಂಡಿರುವ ಬರೆಗಿಂತಲೂ ಹೆಚ್ಚಾಗಿ ನನ್ನನ್ನು ಕಾಡುತ್ತಿರು ವುದು ಅಪ್ಪನ ಆವತ್ತಿನ ಮೌನ. ಬದುಕು ನನಗವತ್ತು ಎಷ್ಟೇ ಕಷ್ಟವಾದರೂ ಆಗಿರುವ ತಪ್ಪುಗಳನ್ನು ನಿರ್ವಂಚನೆಯಿಂದ ಒಪ್ಪಿಕೊಳ್ಳಬೇಕು ಎನ್ನುವ ಪಾಠ ಕಲಿಸಿತು ಎಂದು ಹೇಳಿ ಆಕಾಶ ದಿಟ್ಟಿಸಿದಾಗ ಇಡೀ ಕ್ಲಾಸ್ ಅಪ್ಪನ ಮೌನದಲ್ಲೂ, ಇವರ ನೋವಿನಲ್ಲೂ ಸಮಾನವಾಗಿ ಭಾಗಿಯಾಗಿತ್ತು.

ನೀತಿ ಪಾಠಗಳಿಗೆ ಅಂತ ಈಗಿನಂತೆ ಪ್ರತ್ಯೇಕ ಅವಧಿಗಳಿಲ್ಲದ ಸಮಯ ದಲ್ಲಿ ಪಾಠದ ಜೊತೆ ಜೊತೆಗೇ ಮಕ್ಕಳಲ್ಲಿ ನೈತಿಕತೆಯನ್ನು ತುಂಬುತ್ತಿದ್ದ, ಸಲಿಗೆಗೂ ಶಿಸ್ತಿಗೂ ವ್ಯತ್ಯಾಸವೇ ಗೊತ್ತಾಗದಂತೆ ಶಿಸ್ತು ಕಲಿಸುತ್ತಿದ್ದ, ಸಮಯ ಪರಿಪಾಲನೆಯನ್ನು ಮೊದಲು ತಾವು ಪಾಲಿಸಿ ನಂತರ ಮಕ್ಕಳಿಗೆ ವಿವರಿಸುತ್ತಿದ್ದ, ಮಕ್ಕಳು ಕಡ್ಡಾಯವಾಗಿ ಆಟ ಆಡಲೇಬೇಕು ಎಂಬ ಕಾನೂನು ತಂದಿದ್ದ, ಮೈದಾನದ ಮಾವಿನ ಮರದ ಹಣ್ಣುಗಳನ್ನು ಕೀಳುತ್ತಿದ್ದ ಮಕ್ಕಳನ್ನು ಉದಾರವಾಗಿ ಬಿಟ್ಟುಬಿಡುತ್ತಿದ್ದ, ಶಾಲೆಯ ಗೋಡೆಗಳನ್ನೇ ಕ್ಯಾನ್ವಾಸ್ ಮಾಡಿಕೊಂಡು ಚಿತ್ರ ಬಿಡಿಸುತ್ತಿದ್ದ, ಏನೇನೋ ಗೀಚುತ್ತಿದ್ದ ಮಕ್ಕಳನ್ನು ಗದರದೆ ಅವರಲ್ಲಿನ ಕಲೆಗೆ ಪ್ರೋತ್ಸಾಹ ನೀಡುತ್ತಿದ್ದ, ಮತ್ತೊಬ್ಬರಿಗೆ ಸಹಾಯ ಮಾಡುವುದನ್ನು ‘ವಿಶೇಷ’ ಅಂದುಕೊಳ್ಳದೆ ಅದು ಬದುಕು ಇರಬೇಕಾದ ಅತ್ಯಂತ ಸಹಜ ರೀತಿ ಎನ್ನುವ ಭಾವನೆಯನ್ನು ಎಲ್ಲರೊಳಗೆ ಮೂಡಿಸುತ್ತಿದ್ದ ಅವರ ಜಾಣ್ಮೆ ನನಗೀಗಲೂ ಒಂದು ದೊಡ್ಡ ಅಚ್ಚರಿ.

ಗುರುತರವಾದ ಯಾವ ಕೊರತೆಗಳೂ ಇಲ್ಲದಿದ್ದ ನಮ್ಮ ಶಾಲೆಯಲ್ಲಿ ಫಲಿತಾಂಶ, ಅಂಕಗಳು ಯಾವತ್ತೂ ದೊಡ್ಡ ಸಮಸ್ಯೆ ಆಗಿರಲೇ ಇಲ್ಲ. ಆದರೆ ಆಗಾಗ ಊರ ಮಧ್ಯೆ ಭುಗಿಲೇಳುತ್ತಿದ್ದ ಕೋಮು ಸಂಘರ್ಷದ ಬಿಸಿ ಶಾಲೆಗೆ ತಟ್ಟದಿರುವಂತೆ ನೋಡಿಕೊಳ್ಳುವುದೇ ಬಹು ದೊಡ್ಡ ಸವಾಲಾಗಿತ್ತು. ಊರ ಮಸೀದಿಯ ಅಂಗಳದಿಂದಲೂ, ಭಜನಾ ಮಂದಿರದ ಗೋಪುರದಿಂದಲೂ ಹೊರ ಬೀಳುತ್ತಿದ್ದ ಅತಿ ರಂಜಿತ ಸುದ್ದಿಗಳು, ದೌರ್ಜನ್ಯದ ಕಥೆಗಳು, ಮತ್ತೊಂದು ಧರ್ಮದ ಹಿಂಸಾ ವಿನೋದದ ಸಂಗತಿಗಳು, ಪರಧರ್ಮ ಭರ್ತ್ಸನೆಗಳು ಶಾಲೆಯ ಗೇಟು ದಾಟಿ ಒಳಬರದಂತೆ, ವಿದ್ಯಾರ್ಥಿಗಳ ಮನಸ್ಸನ್ನೂ ಹೃದಯವನ್ನೂ ಕೆಡಿಸದಂತೆ ನಿಜದ ‘ಕಾವಲುಗಾರ’ನಾಗುವುದು ಸದಾ ಸಂಘರ್ಷದ ಹಾದಿ ಯಲ್ಲೇ ಇರುವ ಊರಲ್ಲಿ ಸುಲಭಸಾಧ್ಯವಲ್ಲ. ಒಂದೇ ಒಂದು ಆತುರದ ನಿರ್ಧಾರ ಇಡೀ ಶಾಲೆಯನ್ನೂ, ಶಿಕ್ಷಕ ವರ್ಗವನ್ನೂ ಅವರ ಬದ್ಧತೆಯನ್ನೂ ಧರ್ಮದ ಅಮಲಿನ ಕಟಕಟೆಯಲ್ಲಿ ತಂದು ನಿಲ್ಲಿಸಬಲ್ಲುದು.

ಇಂತಹ ವಿಷಮ ಪರಿಸ್ಥಿತಿಯಲ್ಲಿ ವೃತ್ತಿ ಧರ್ಮಕ್ಕೇ ಬದ್ಧವಾಗಿದ್ದು ಕೊಂಡೇ ಮಾನವೀಯತೆಯನ್ನು ಪೋಷಿಸಲು, ಶಿಕ್ಷಣ ಎಲ್ಲರನ್ನೂ ಒಳ ಗೊಳ್ಳುವಂತೆ ನೋಡಿಕೊಳ್ಳಲು, ಶಾಲೆಯ ಪ್ರತಿ ಮಗುವಲ್ಲೂ ಒಂದು ಸುರಕ್ಷಿತ ಭಾವ ಹುಟ್ಟಿಸಲು ಅಧ್ಯಾಪಕನಾದವನಲ್ಲಿ ತನ್ನ ವೃತ್ತಿಯೆಡೆಗೆ ಅದಮ್ಯ ಬದ್ಧತೆ, ಅಖಂಡ ತಾಳ್ಮೆ ಮತ್ತು ಅಪಾರ ಶ್ರದ್ಧೆ ಇರಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ತಾನು ನನ್ನ ದೇಶದ ಭವಿಷ್ಯವನ್ನು ರೂಪಿಸುತ್ತಿದ್ದೇನೆ ಎನ್ನುವ ಪ್ರೀತಿ ಮತ್ತು ಜವಾಬ್ದಾರಿ ಇರಬೇಕಾಗುತ್ತದೆ. ಒಂದಿಡೀ ಜೀವನ ವನ್ನು ಶಾಲೆಗಾಗಿ ಮುಡಿಪಿಡುವುದು, ಪ್ರತಿ ಮಗುವಲ್ಲೂ ಒಂದು ಅದ್ಭುತ ಭವಿತವ್ಯವನ್ನು ಕಾಣುವುದು, ಎಳೆ ಪ್ರತಿಭೆಗಳನ್ನು ಪೋಷಿಸುವುದು, ತಪ್ಪು ನಡೆದಾಗ ಪ್ರೀತಿಯಿಂದ ತಿದ್ದುವುದಕ್ಕೆಲ್ಲಾ ಟೀಚರ್ಸ್ ಟ್ರೈನಿಂಗ್ ಸಾಕಾಗುವುದಿಲ್ಲ, ಅದು ಪ್ರತಿ ಬೆಳಗನ್ನೂ ಹೊಸತನದಿಂದ ಕಾಣುವ ಕಸುವನ್ನು ಬೇಡುತ್ತದೆ, ಪ್ರತಿ ದಿನ ಅಪ್ಡೇಟ್ ಆಗಲೇಬೇಕಾದ ಅನಿವಾರ್ಯವನ್ನು ಕೇಳುತ್ತದೆ. ತನ್ನ ವೃತ್ತಿ ಬದುಕನ್ನು ಮುಚ್ಚಟೆಯಿಂದ ಪ್ರೀತಿಸುವವರಿಗಷ್ಟೇ ತಮ್ಮಲ್ಲಿರುವ ಎಲ್ಲ ಅನುಭವಗಳನ್ನೂ, ಜ್ಞಾನವನ್ನೂ, ವಿವೇಕವನ್ನೂ, ಪ್ರಜ್ಞಾವಂತಿಕೆಯನ್ನು ನಿರ್ವಂಚನೆಯಿಂದ ಮತ್ತೊಬ್ಬರಿಗೆ ಧಾರೆ ಎರೆಯಲು ಸಾಧ್ಯ. ನಮ್ಮ ನಿಮ್ಮೆಲ್ಲರ ಮಧ್ಯೆ ಶಿವಪ್ಪ ಮೇಷ್ಟ್ರಂತಹ ನಿಸ್ವಾರ್ಥಿ ಕಾಯಕ ಯೋಗಿಗಳಿರುವುದಕ್ಕೇ ಎಲ್ಲಾ ಅತಿ ವ್ಯಾಮೋಹ, ವಿಪರೀತದ ಲಾಲಸೆಗಳಂತಹ ಅಪಸವ್ಯಗಳ ಮಧ್ಯೆಯೂ ಸರಕಾರಿ ಶಾಲೆಗಳು ಇನ್ನೂ ಉಸಿರಾಡುತ್ತಿರುವುದು.

Writer - ಫಾತಿಮಾ ರಲಿಯಾ

contributor

Editor - ಫಾತಿಮಾ ರಲಿಯಾ

contributor

Similar News