ಭಾರತದ ರಾಷ್ಟ್ರಗೀತೆಯ ವಿವಾದಾತ್ಮಕ ಇತಿಹಾಸ

Update: 2019-05-12 10:35 GMT

ಭಾರತದ ರಾಷ್ಟ್ರಗೀತೆ ‘ಜನ ಗಣ ಮನ ಅಧಿನಾಯಕ’ವನ್ನು 1911ರ ಡಿಸೆಂಬರ್ 11ರಂದು ರವೀಂದ್ರನಾಥ್ ಠಾಗೋರ್ ರಚಿಸಿದ್ದು ಇದನ್ನು ಅದೇ ತಿಂಗಳ 28ರಂದು ನಡೆದ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಮೊತ್ತಮೊದಲ ಬಾರಿಗೆ ಹಾಡಲಾಯಿತು.

ಠಾಗೋರ್‌ರ ‘ಅಮರ್ ಸೊನಾರ್ ಬಾಂಗ್ಲಾ’ ಗೀತೆಯನ್ನು ಬಳಿಕ ಬಾಂಗ್ಲಾದೇಶವು ತನ್ನ ರಾಷ್ಟ್ರಗೀತೆಯನ್ನಾಗಿ ಆಯ್ಕೆ ಮಾಡಿ ಕೊಂಡಿತು. ಆದರೆ ಠಾಗೋರರು ‘ಜನ ಗಣ ಮನ’ ಗೀತೆ ರಚಿಸಿದ ಕೆಲವೇ ದಿನಗಳಲ್ಲಿ ಈ ಗೀತೆಯ ಸುತ್ತ ವಿವಾದ ತಳಕು ಹಾಕಿಕೊಂಡಿತು.

‘ಜನ ಗಣ ಮನ’ವನ್ನು ಅಮರ್ತ್ಯ ಸೇನ್ ‘ಜನರ ಮನಸ್ಸಿನ ನಾಯಕ’ ಎಂದು ಭಾಷಾಂತರ ಮಾಡಿದ್ದು ಈ ಗೀತೆಯನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಲಾದ 5ನೇ ಜಾರ್ಜ್ ದೊರೆಯ ದಿಲ್ಲಿ ದರ್ಬಾರ್‌ನಲ್ಲಿ ರಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ವಿವಾದಕ್ಕೆ ಬಹುಶಃ ಅಂತ್ಯವೇ ಇಲ್ಲ ಎಂದು ಕಾಣುತ್ತದೆ. ಉದಾಹರಣೆಗೆ 2015ರಲ್ಲಿ ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್ ಸಿಂಗ್ ಹಾಗೂ ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಟ್ಜು ಈ ವಿವಾವನ್ನು ಮತ್ತೊಮ್ಮೆ ಕೆದಕಿದರು.

ಆದರೆ ಈ ಆರೋಪವನ್ನು ನಿರಾಕರಿಸುವ ಸೌತಿಕ್ ಬಿಸ್ವಾಸ್ ತಮ್ಮ ಲೇಖನದಲ್ಲಿ ಇತಿಹಾಸಕಾರ ಸಬ್ಯಸಾಚಿ ಭಟ್ಟಾಚಾರ್ಯ ಅವರ ಬರಹವನ್ನು ಉಲ್ಲೇಖಿಸುತ್ತಾರೆ. ‘ಜನ ಗಣ ಮನ’ವನ್ನು ಜಾರ್ಜ್ ವಿ.ಗಾಗಿ ರಚಿಸಿದ್ದಲ್ಲ ಎಂದು 1937 ರಲ್ಲಿ ಬರೆದಿರುವ ಪತ್ರದಲ್ಲಿ ಠಾಗೋರ್ ಸ್ಪಷ್ಟಪಡಿಸಿದ್ದಾರೆ.

ಪತ್ರದ ಈ ಕೆಳಗಿನ ವಾಕ್ಯಗಳನ್ನು ಬಿಸ್ವಾಸ್ ಉಲ್ಲೇಖಿಸುತ್ತಾರೆ:

‘ಇತಿಹಾಸದುದ್ದಕ್ಕೂ ಐದನೇ, ಅಥವಾ ಆರನೇ ಅಥವಾ ಯಾವೊಬ್ಬ ಜಾರ್ಜ್ ಕೂಡಾ ಮಾನವನ ಹಣೆಬರಹವನ್ನು ನಿರ್ಧರಿಸಲು ಸಾಧ್ಯವಿಲ್ಲ. ಜನ ಗಣ ಮನ ಗೀತೆಯಲ್ಲಿ ನಾನು ಎಲ್ಲಾ ಏಳು ಬೀಳುಗಳ ಮಧ್ಯೆ ಜನರಿಗೆ ಮಾರ್ಗವನ್ನು ತೋರುವ ಮಾರ್ಗನಿರ್ದೇಶಕನಾಗಿರುವ ಭಾರತದ ಭಾಗ್ಯವಿದಾತನನ್ನು ಸ್ತುತಿಸಿದ್ದೇನೆ’ ಎಂದಿದ್ದಾರೆ.

‘ಜನ ಗಣ ಮನ’ವನ್ನು 1950ರಲ್ಲಿ ಭಾರತದ ರಾಷ್ಟ್ರಗೀತೆ ಯಾಗಿ ವಿಧ್ಯುಕ್ತವಾಗಿ ಅಳವಡಿಸಿಕೊಳ್ಳಲಾಗಿದೆ. 1950ರ ಜನವರಿ 24ರಂದು ಭಾರತದ ಪ್ರಥಮ ರಾಷ್ಟ್ರಪತಿ ಡಾ ರಾಜೇಂದ್ರ ಪ್ರಸಾದರು ಸಂವಿಧಾನ ಸಭೆಯಲ್ಲಿ ಹೀಗೆ ಹೇಳಿದರು :

ಇಲ್ಲಿ ಒಂದು ವಿಷಯವು ಚರ್ಚೆಗೆ ಬಾಕಿಯಿದೆ, ಅದೆಂದರೆ ರಾಷ್ಟ್ರಗೀತೆಯ ಪ್ರಶ್ನೆ. ಈ ವಿಷಯವನ್ನು ಸಂಸತ್ತಿನಲ್ಲಿ ಚರ್ಚಿಸಿ, ಸಂಸತ್ತಿನಲ್ಲಿ ನಿರ್ಣಯ ಅಂಗೀಕರಿಸ ಬೇಕೆಂದು ಒಮ್ಮೆ ಯೋಚಿಸಲಾಯಿತು. ಆದರೆ ನಿರ್ಣಯದ ಮೂಲಕ ಅಧಿಕೃತ ನಿರ್ಧಾರಕ್ಕೆ ಬರುವ ಬದಲು ರಾಷ್ಟ್ರಗೀತೆಯ ಬಗ್ಗೆ ಹೇಳಿಕೆ ನೀಡುವುದು ಒಳ್ಳೆಯದು ಎಂದು ಭಾವಿಸಿದ್ದರಿಂ ನಾನು ಈ ಹೇಳಿಕೆ ನೀಡುತ್ತಿದ್ದೇನೆ.

‘ಜನ ಗಣ ಮನ’ ಎಂದು ಹೆಸರಾಗಿರುವ ಪದ ಮತ್ತು ರಾಗದ ಸಂಯೋಜನೆಯಾಗಿರುವ ಗೀತೆಯು (ಅಗತ್ಯವಿದ್ದರೆ ಕೆಲವು ಪದಗಳನ್ನು ಬದಲಾಯಿಸುವ ಸರಕಾರದ ಅಧಿಕಾರಕ್ಕೆ ಒಳಪಟ್ಟಿರುವ) ಭಾರತದ ರಾಷ್ಟ್ರಗೀತೆಯಾಗಿದೆ.ಮತ್ತು ಭಾರತದ ಸ್ವಾತಂತ್ರ ಹೋರಾಟದಲ್ಲಿ ಚಾರಿತ್ರಿಕ ಪಾತ್ರ ನಿರ್ವಹಿಸಿದ ವಂದೇ ಮಾತರಂ ಗೀತೆಗೂ ‘ಜನ ಗಣ ಮನ’ದ ಸಮಾನವಾದ ಗೌರವವನ್ನು ನೀಡಲಾಗುತ್ತದೆ ಮತ್ತು ಸಮಾನ ಸ್ಥಾನಮಾನವಿರಲಿದೆ (ಚಪ್ಪಾಳೆ). ಸದಸ್ಯರಿಗೆ ಇದರಿಂದ ತೃಪ್ತಿ ಯಾಗಿದೆ ಎಂದು ನಾನು ಆಶಿಸುತ್ತೇನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News