ಪ್ರಯೋಗ ಶೀಲತೆಯಲ್ಲಿ ಗೆದ್ದ ಬರಹಗಳು!

Update: 2019-05-12 11:01 GMT

ರಹಮತ್ ತರೀಕೆರೆ

ಈಚಿನ ವರ್ಷಗಳಲ್ಲಿ ಎರಡು ಆಸಕ್ತಿಕರ ಸಂಗತಿಗಳು ಬರಹದ ಲೋಕದಲ್ಲಿ ಕಾಣಿಸಿಕೊಂಡಿವೆ. ಒಂದು- ಮುದ್ರಣ ಮಾಧ್ಯಮವನ್ನು ಅಪ್ರಸ್ತುತಗೊಳಿಸಿಬಿಡುತ್ತದೆ ಎಂದು ಅಂಜಿಸುವ ಪರಿಯಲ್ಲಿ ನುಗ್ಗಿ ಬಂದ ದೃಶ್ಯಮಾಧ್ಯಮ ಮತ್ತು ಸೋಶಿಯಲ್ ಮೀಡಿಯಾಗಳು, ವೃತ್ತಪತ್ರಿಕೆಗಳನ್ನಾಗಲಿ ಓದುಗರ ಸಂಖ್ಯೆಯನ್ನಾಗಲಿ ತಗ್ಗಿಸಲಾಗದೇ ಹೋದುದು. ಇದರ ಪರಿಣಾಮವಾಗಿ ಕಳೆದ ಕಾಲು ಶತಮಾನದಲ್ಲಿ, ನೂರಾರು ಅಂಕಣ ಬರಹಗಾರರು ಮೂಡಿ ಬಂದರು. ಎರಡನೆಯದಾಗಿ, ಅಂಕಣ ಪ್ರಕಾರವು ಕತೆ ಕವಿತೆಗಳಿಗಿಂತಲೂ ಹೆಚ್ಚು ಜನಪ್ರಿಯವೂ ಪ್ರಭಾವಶಾಲಿಯೂ ಅನಿಸತೊಡಗಿದ್ದು. ಕೆಲವು ವೃತ್ತಿಪರ ಪತ್ರಕರ್ತರು ಪ್ರಮುಖ ಅಂಕಣಕಾರರಾಗಿ ಚಿಂತಕರಾಗಿ ರೂಪುಗೊಂಡರೆ, ಕತೆ ಕವನ ವಿಮರ್ಶೆ ಬರೆಯುತ್ತಿದ್ದ ಅನೇಕರು ಅಂಕಣಕಾರರಾಗಿ ರೂಪಾಂತರ ಪಡೆದರು. ಬಹುಶಃ ಅಂಕಣ ಪ್ರಕಾರವು ನಮ್ಮೀ ಕಾಲದಲ್ಲಿ ಜನಪ್ರಿಯಗೊಳ್ಳಲು ಒಂದು ಚಾರಿತ್ರಿಕ ಕಾರಣವೂ ಇದ್ದಂತೆ ತೋರುತ್ತದೆ. ಅದೆಂದರೆ, ಅದು ಜನಾಭಿಪ್ರಾಯ ರೂಪಿಸುವ ಕೆಲಸದಲ್ಲಿ ಉಪಯುಕ್ತವೂ ನೇರವೂ ಆಗಿರುವುದು; ಇದಕ್ಕೆ ತಕ್ಕಂತೆ ಲೇಖಕರು ಜನಾಭಿಪ್ರಾಯ ರೂಪಿಸುವುದು ಅನಿವಾರ್ಯವೆನಿಸುವಂತಹ ಘಟನೆಗಳು ದೇಶದಲ್ಲಿ ನಡೆಯುತ್ತ ಹೋದವು. ಕೋಮುವಾದವೂ ಮಾರುಕಟ್ಟೆ ಶಕ್ತಿಗಳೂ ಸಮಾಜವನ್ನು ಪ್ರಭಾವಿಸುವ ಮತ್ತು ಸರಕಾರವನ್ನು ನಿಯಂತ್ರಿಸುವಕಸುವನ್ನು ಪಡೆದುಕೊಂಡಂತೆ, ಅವುಗಳ ಹಿತಾಸಕ್ತಿ ಪ್ರತಿಪಾದಿಸುವ ಅಂಕಣ ಕಾರರನ್ನು ಪತ್ರಿಕೆಗಳು ರೂಪಿಸಿದವು. ಬಲಪಂಥೀಯ ರಾಜಕೀಯ ಸಿದ್ಧಾಂತಕ್ಕೆ ಸೇರಿದ ಅಂಕಣಕಾರರು ಅಂಕಣ ಬರಹವನ್ನು ಸಿದ್ಧಾಂತ ಪ್ರಚಾರಕ್ಕೆ ಮಾಧ್ಯಮ ವಾಗಿಯೂ ತಮ್ಮ ಸೈದ್ಧಾಂತಿಕ ಎದುರಾಳಿಗಳನ್ನು ರಾಕ್ಷಸೀಕರಿಸಿ ಹಣಿಯಲು ಹತ್ಯಾರವಾಗಿಯೂ ಬಳಸತೊಡಗಿದರು. ಅವರಲ್ಲಿ ಕೆಲವರು ಸಕ್ರಿಯ ರಾಜಕಾರಣಕ್ಕೆ ಇಳಿದು ಚುನಾವಣೆಗಳಲ್ಲೂ ಗೆದ್ದರು. ಇನ್ನೊಂದು ಕಡೆಯಲ್ಲಿ ಸಮಾಜದ ಸಮಸ್ಯೆಗಳನ್ನು ಮುಂದಿಡುತ್ತ, ತುಸು ದುಗುಡದ ದನಿಯಲ್ಲಿ, ಹೊಸ ಆಶೋತ್ತರ ಹಾಗೂ ಸಣ್ಣಪುಟ್ಟ ಗೆಲುವುಗಳನ್ನು ವ್ಯಕ್ತಪಡಿಸುತ್ತ ಪ್ರಗತಿಪರ ಲೇಖಕರೂ ಅಂಕಣ ಬರಹದಲ್ಲಿ ಸಕ್ರಿಯರಾದರು. ಹೀಗೆ ಸಕ್ರಿಯರಾದವರ ಮೂಲಕ ಮುಖ್ಯವಾಗಿ ಮಹಿಳೆಯರ, ದಲಿತರ ಮತ್ತು ದಮನಿತ ಸಮುದಾಯಗಳ ಪರವಾದ ಚಿಂತನೆಗಳು ಪ್ರಕಟವಾದವು. ಹೀಗೆ ಕಳೆದೆರಡು ದಶಕಗಳ ಭಾರತದ ಸಾಮಾಜಿಕ ರಾಜಕೀಯ ವಿದ್ಯಮಾನಗಳೇ ಕನ್ನಡದಲ್ಲಿ ಅಂಕಣ ಪ್ರಕಾರದ ವಸ್ತು ನಿಲುವು ಹಾಗೂ ಆಕೃತಿಯನ್ನು ರೂಪಿಸಿದವು ಹಾಗೂ ಅದನ್ನು ಪ್ರಧಾನ ನೆಲೆಗೆ ತಂದವು.

ಈ ಹಿನ್ನೆಲೆಯಲ್ಲಿ ಅಂಕಣ ಬರಹವು, ಲೇಖಕರು ಮತ್ತು ‘ವೈಯಕ್ತಿಕ’ವಾದ ಕಲ್ಪನೆ ಕನಸು ತಲ್ಲಣ ಗಳನ್ನು ತೋಡಿಕೊಳ್ಳುವ ಜಾಗವಲ್ಲ. ಪ್ರಕ್ಷುಬ್ಧ ಯುದ್ಧಕಣದಲ್ಲಿ ನಿಂತು ಕತ್ತಿವರಸೆ ಮಾಡುವುದಾಗಿದೆ. ಇದರಿಂದ ಅಂಕಣಗಳಲ್ಲಿ ಖಾಸಗಿ ಅನುಭವವನ್ನು ಶೋಧಿಸುವ ಅಂತರ್ಮುಖಿ ಲೋಕಗಳು ತುಸು ಕ್ಷೀಣಗೊಂಡವು. ಬದಲಿಗೆ ನಾಡಿನ ಸಾಮಾಜಿಕ ರಾಜಕೀಯ ಸಂಘರ್ಷಗಳ ಒಳಗಿದ್ದುಕೊಂಡು, ವರ್ತಮಾನದ ವಿದ್ಯಮಾನಗಳನ್ನುಗಮನಿಸುವುದು; ಅವಕ್ಕೆ ಮೈಯೆಲ್ಲ ಕಣ್ಣಾಗಿ ತೀವ್ರವಾಗಿ ಜೀವಂತವಾಗಿ ಮಿಡಿಯುವುದು; ವಿಶಾಲವಾದ ಓದುಗ ಸಮುದಾಯದ ಜತೆ ಸಂವಾದ ಮಾಡುವುದು; ಓದುಗರ ಪ್ರಜ್ಞೆಯನ್ನು ಪ್ರಖರಗೊಳಿಸುವ ಆ್ಯಕ್ಟಿವಿಸ್ಟ್ ಆಗುವುದುಹೆಚ್ಚಾಗಿದೆ.

ಡಾ. ವಿನಯಾ

ಇಂತಹದೊಂದು ಸಾಂಸ್ಕೃತಿಕ ಹೊಣೆಗಾರಿಕೆಯ ನೊಗಕ್ಕೆ ತಮಗರಿಯದೆ ನಮ್ಮ ಅನೇಕ ಲೇಖಕರು ಕೊರಳನ್ನು ಕೊಟ್ಟುಕೊಂಡಂತಿದೆ. ಇದು ಕಾಲದ ಅಪೇಕ್ಷೆಗಾಗಿ ಲೇಖಕರು ಮತ್ತು ಅಂಕಣಪ್ರಕಾರವು ತಮ್ಮನ್ನು ರೂಪಾಂತರ ಮಾಡಿಕೊಂಡಿರುವ ಪರಿ ಕೂಡ. ವಿಶಾಲ ಓದುಗರಿಗೆ ಅಂಕಣ ಬರೆಯುವಾಗ ಲೇಖಕರು,ಬಿಢೆಯನ್ನು ಬಿಟ್ಟು ಭಾಷೆ ಶೈಲಿಯನ್ನು ಸರಳಗೊಳಿಸಿಕೊಳ್ಳಬೇಕಾಗುತ್ತದೆ. ಕತೆ ಕವಿತೆ ಪ್ರಕಾರದ ಚಹರೆ ಮತ್ತು ಕಸುವನ್ನು ಅಂಕಣದ ಹೊಟ್ಟೆಗೆ ಹೊರಳಿಸಬೇಕಾಗುತ್ತದೆ. ಪ್ರಕಾರದ ಹಮ್ಮನ್ನು ಬಿಟ್ಟುಕೊಟ್ಟು ಬರಹಕ್ಕಿದ್ದ ಗಡಿಗೆರೆಗಳನ್ನು ವಿಸ್ತರಣೆ ಮಾಡಬೇಕಾಗುತ್ತದೆ. ಪ್ರತಿವಾರವೂ ಏನಾದರೂ ಒಂದು ವಸ್ತು ವನ್ನು ಮೈಮೇಲೆ ಎಳೆದುಕೊಂಡು ತನ್ನನ್ನು ನಿರಂತರ ಪ್ರಯೋಗಶೀಲತೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಗೆದ್ದವರೂ ಇದ್ದಾರೆ. ಕೈಸುಟ್ಟುಕೊಂಡವರೂ ಇದ್ದಾರೆ.

ಈ ಪ್ರಯೋಗದಲ್ಲಿ ಗೆದ್ದ ಲೇಖಕರಲ್ಲಿ ವಿನಯಾ ಸಹ ಒಬ್ಬರು.ಅವರು ನಮ್ಮ ಒಳ್ಳೆಯ ಕತೆಗಾರ್ತಿ, ಕವಿ, ಪ್ರಭಾವಶಾಲಿ ವಾಗ್ಮಿ. ಈಚೆಗೆ ಅವರ ಹೆಸರು ಅಂಕಣಗಳಿಂದಲೇ ಹೆಚ್ಚು ಖ್ಯಾತವಾಗಿರು ವಂತಿದೆ. ಇದಕ್ಕೆ ಕಾರಣ, ಅವರ ಅಂಕಣಗಳಲ್ಲಿ ಇರುವ ವಿಶಿಷ್ಟ ಚಿಂತನೆ ಮತ್ತು ಸೂಕ್ಷ್ಮ ಸಂವೇದನೆಗಳು. ಇಲ್ಲಿನ ಅಂಕಣಗಳು ಮುಖ್ಯವಾಗಿ ಮೂರು-ನಾಲ್ಕು ವಿಷಯಗಳ ಮೇಲೆ ಕೇಂದ್ರೀಕರಿಸಿಕೊಂಡು ಹುಟ್ಟಿವೆ.

ಅ. ಶಿಕ್ಷಣಲೋಕದ ತಲ್ಲಣಗಳು. ವಿನಯಾ ಅಧ್ಯಾಪಕಿಯಾದ ಕಾರಣ, ಇಲ್ಲಿನ ಬರಹಗಳಲ್ಲಿ ಕಾಲೇಜಿನ, ವಿದ್ಯಾರ್ಥಿಗಳ,ಪಠ್ಯಕ್ರಮದ ಚರ್ಚೆ ಮತ್ತೆಮತ್ತೆ ಬರುತ್ತದೆ. ವಿಶೇಷವೆಂದರೆ ಈ ‘ಶೈಕ್ಷಣಿಕ’ ಎನ್ನಲಾಗುವ ಸಂಗತಿಯ ಹಿಂದಿರುವ ವಿದ್ಯಾರ್ಥಿಗಳ ಬಡತನ, ಜಾತಿಯ ಕೀಳರಿಮೆ, ಮತೀಯ ದ್ವೇಷದ ಸೋಂಕು, ಕೌಟುಂಬಿಕ ಬಿಕ್ಕಟ್ಟು, ಹಾದಿ ತಪ್ಪುವಿಕೆ ಹಾಗೂ ಅಪಾರ ಜೀವಪರತೆ ಯನ್ನೂ ಅಂಕಣಗಳು ಚರ್ಚಿಸುತ್ತವೆ. ಹೀಗಾಗಿ ಇಲ್ಲಿನ ಶಿಕ್ಷಣ ಚಿಂತನೆಯು ಸಮಾಜ ಚಿಂತನೆಯೂ ಆಗಿಬಿಡುತ್ತದೆ. ಈ ಬರಹಗಳನ್ನೇ ಪ್ರತ್ಯೇಕ ಕೃತಿಯನ್ನಾಗಿಸಿದರೆ ಅದೊಂದು ಆಶಯಕೇಂದ್ರಿತ ಕೃತಿಯಾಗಿ,ಶಿಕ್ಷಣಲೋಕದಲ್ಲಿ ಕೆಲಸ ಮಾಡುವವರಿಗೆ ಕೈಪಿಡಿಯೂ ಆಗಬಲ್ಲದು ಅನಿಸುತ್ತದೆ. ಶೈಕ್ಷಣಿಕ ಕ್ಷೇತ್ರಕ್ಕೆ ಲಗತ್ತಾಗಿರುವ ಹಲವು ಆಯಾಮಗಳ ಚರ್ಚೆಯ ಹಿಂದೆ ವಿನಯಾ ಒಬ್ಬ ತಾಯಿಯಾಗಿಯೂ ಆಲೋಚಿಸುತ್ತಾರೆ. ಈ ತಾಯಿ ಮನಸ್ಸು ಅವರ ಎಲ್ಲ ಬರಹದ ಹಿಂದಿರುವ ಶಕ್ತಿಯಾಗಿದೆ. ಈ ತಾಯ್ತನವು ಲೋಕದ ಎಲ್ಲ ಬಗೆಯ ನಂಜಿನ ರೂಪಗಳನ್ನು ಮುಖಾಮುಖಿ ಮಾಡಲು ಒಂದು ನೈತಿಕ ಚೌಕಟ್ಟೂ ಆಗಿದೆ. ಇದು ಹೊಸ ಮನುಷ್ಯರ ಸೃಷ್ಟಿಗಾಗಿ ಹೊಸ ಸಮಾಜ ಕಟ್ಟುವ ಕನಸೂ ಆಗಿದೆ.

ಆ. ಇಲ್ಲಿ ಹಲವು ಮಹಿಳೆಯ ವ್ಯಕ್ತಿಚಿತ್ರಗಳು ಬರುತ್ತವೆ. ಅವರ ಅನನ್ಯವಾದ ಅನುಭವ ಲೋಕವೊಂದು ಅನಾವರಣವಾಗುತ್ತದೆ. ವಿನಯಾರ ಎಲ್ಲ ಬರಹದ ಆಳದಲ್ಲಿರುವ ಸ್ತ್ರೀಸಂವೇದನೆಯು ಈ ಅಂಕಣಗಳಲ್ಲೂ ಹರಿದಿದೆ. ಪುರುಷವಾದಿ ಚಿಂತನೆ ಮತ್ತು ಕ್ರಿಯೆಗಳನ್ನು ಅವರು ತಣ್ಣಗೆ ಸ್ತ್ರೀಸಂವೇದನೆಯ ನೆಲೆಯಿಂದ ಬಿಡಿಸಿ ತೋರಿಸುವರು. ಈ ಅರ್ಥದಲ್ಲಿ ಇಲ್ಲಿನ ಅಂಕಣ ಗಳನ್ನು ಸ್ತ್ರೀಪ್ರಜ್ಞೆಯಲ್ಲಿ ಬರೆದ ಮಹಿಳಾ ಇತಿಹಾಸವೆಂದು ಕರೆಯಬಹುದು. ಈ ಇತಿಹಾಸವು ಕೇವಲ ನೊಂದ ನೋವಿನಲ್ಲಿ ಮಂಡಿತವಾಗದೆ, ಇರುವ ಕಟ್ಟುಗಳನ್ನು ಬಿಡಿಸಿಕೊಂಡು ಹೊರ ಬರುವ ಹೊರದಾರಿಗಳನ್ನು ಹುಡುಕುವ ಸ್ತ್ರೀ ರಾಜಕೀಯ ಪ್ರಜ್ಞೆಯಿಂದ ಕೂಡಿದೆ.

ಇ. ಮಾರುಕಟ್ಟೆ ಸಂಸ್ಕೃತಿ ಮತ್ತು ಕೋಮುವಾದಗಳೂ ಸಮಾಜದಲ್ಲಿ ಹುಟ್ಟಿಸುತ್ತಿರುವ ಹೊಸ ಚಿಂತನೆಯ ಕ್ರಮದ ದುರಂತಗಳನ್ನು ಇಲ್ಲಿನ ಬರಹಗಳನ್ನು ಮಂಡಿಸುತ್ತವೆ. ಪಾರಂಪರಿಕ ಸಮಾಜದಲ್ಲಿದ್ದ ಸಾಮುದಾಯಿಕ ವಿವೇಕ ಹಾಗೂ ಕೂಡುಬಾಳುವೆಯ ರಚನೆಗಳು ಭಗ್ನವಾಗುತ್ತಿರುವ ಬಗ್ಗೆ ದುಗುಡದಲ್ಲಿ ಘಟನೆಗಳನ್ನು ವಿಶ್ಲೇಷಣೆ ಮಾಡುತ್ತವೆ.

ಹೀಗೆ ಶಿಕ್ಷಣ,ಹೆಣ್ಣು, ಮಾರುಕಟ್ಟೆ ಮತ್ತು ಮತೀಯ ವಿಕಾರಗಳನ್ನು ವಸ್ತುವಾಗಿಸಿಕೊಂಡಿರುವ ಇಲ್ಲಿನ ಅಂಕಣಗಳು ವರ್ತಮಾನ ಸಮಾಜವು ಚಲಿಸುತ್ತಿರುವ ಅನೇಕ ದಿಕ್ಕುಗಳನ್ನು ಕಾಣಿಸುತ್ತವೆ. ಈ ದಿಸೆಗಳನ್ನು ಕಲ್ಪನೆಯಿಂದಲ್ಲ, ಅಂಕಿ ಅಂಶಗಳನ್ನು ಬಳಸಿಕೊಂಡು ವಿಶ್ಲೇಷಿಸುವುದರಿಂದ, ಅಂಕಣಗಳು ಸಮಾಜಶಾಸ್ತ್ರೀಯ ಅಧ್ಯಯನದ ಆಯಾಮವನ್ನೂ ಪಡೆದುಕೊಳ್ಳುತ್ತವೆ. ಮುಖ್ಯವಾದ ಸಂಗತಿಯೆಂದರೆ, ಇವು ಜನರ ದೈನಿಕ ಬದುಕಿನ ವಿವರಗಳನ್ನು ಹೆಕ್ಕಿಕೊಂಡು ಬದುಕಿನ ಅರ್ಥವನ್ನು ಶೋಧಿಸುತ್ತವೆ.

ವಿನಯಾ ಕತೆಗಾರ್ತಿಯೂ ಕವಿಯೂ ಆದ ಕಾರಣ, ಇಲ್ಲಿನ ಬರಹಗಳಿಗೆ ಕಥನಕ್ರಮವು ಒದಗಿದೆ ಹಾಗೂ ಮಿಂಚಿನಂತಹ ರೂಪಕಗಳೂ ಉಪಮೆಗಳೂ ಕೂಡಿ ಭಾಷೆ ಕಾವ್ಯಾತ್ಮಕವಾಗಿದೆ. ಈ ಕಥನಾತ್ಮಕತೆ ಮತ್ತು ಕಾವ್ಯಾತ್ಮಕತೆಗಳು ಭಾಷಿಕ ಚಂದಕ್ಕಾಗಿ, ಸಂವಹನದ ಸರಾಗತೆಗಾಗಿ ಮಾತ್ರವಲ್ಲ,ವಾಸ್ತವದ ದುರಂತವನ್ನು ಹಿಡಿಯುವ ನುಡಿಗಟ್ಟುಗಳಾಗಿ ಬಂದಿವೆ.ಹೀಗೆ ಕಥನ, ಕಾವ್ಯಾತ್ಮಕತೆ, ಜೀವಂತವಾದ ನಾಟಕೀಯ ಸಂಭಾಷಣೆ,ಆತ್ಮಕಥನಾತ್ಮಕವಾದ ನೆನಪು ಹಾಗೂ ಅಂಕಿಅಂಶಗಳು ಹದವಾಗಿ ಬೆರೆಯುವ ಇಲ್ಲಿ ಬರಹ ವಿಶಿಷ್ಟವಾಗಿದೆ. ಇಲ್ಲಿ ಪ್ರಾಸಂಗಿಕವಾಗಿ ಬರುವ ಅನೇಕ ಹೇಳಿಕೆಗಳು ಪ್ರತ್ಯೇಕ ಚಿಂತನೆಗೆ ಕಾರಣವಾಗುವಷ್ಟು ಒಳನೋಟದಿಂದ ಕೂಡಿವೆ. ಆದರೆ ಅವನ್ನು ಲೇಖಕಿಗೆ ಅಂಕಣದ ಪರಿಮಿತಿಯಿಂದಲೊ ಏನೊ, ಬೆಳೆಸಲು ಸಾಧ್ಯವಾಗಿಲ್ಲ. ಇಲ್ಲಿನ ಬರಹದ ಆಕೃತಿಯ ಇನ್ನೊಂದು ವಿಶಿಷ್ಟತೆಯೆಂದರೆ, ಸಾಹಿತ್ಯಲೋಕದ ನೆನಪುಗಳಲ್ಲಿ ಬೆಳೆಯುವುದು.ಇಲ್ಲಿ ಮತ್ತೆಮತ್ತೆ ಬರುವ ಸಾಹಿತ್ಯ ಕೃತಿಗಳ ಮತ್ತು ಅಲ್ಲಿರುವ ಪ್ರಸಂಗಗಳು ಚಿಂತನೆ ಪ್ರಕಟಿಸಲು ಒದಗುವ ರೂಪಕಗಳಂತಿವೆ. ಹೀಗೆ,ಸಾಹಿತ್ಯದ ನೆನಪುಗಳು ಸಾಮಾಜಿಕ ಚಿಂತನೆಯಾಗಿ ರೂಪಾಂತರಗೊಳ್ಳುವ ಪ್ರಯೋಗವನ್ನು ಇಲ್ಲಿ ಕಾಣಬಹುದು.ವಿನಯಾ ದೊಡ್ಡದನ್ನು ಕೊಡಬಲ್ಲ ಕಸುವುಳ್ಳ ಲೇಖಕಿ. ಅವರ ಪ್ರತಿಭೆ ಕಸುವು ಸೂಕ್ಷ್ಮತೆ ಅನುಭವಗಳನ್ನು ಇಲ್ಲಿನ ಅಂಕಣಗಳು ಚೆನ್ನಾಗಿ ದುಡಿಸಿಕೊಂಡಿವೆ. ಆದರೆ ಕೆಲವು ಅಂಕಣಗಳು ಅವರ ಬರೆಹ ದಣಿದಿರುವ ಸೂಚನೆಯನ್ನೂ ಕೊಡುತ್ತಿವೆ. ಕೆಲವು ಅಂಕಣಗಳು ಶಿಥಿಲವಾಗಿವೆ.ವಾಚಾಳಿಯಾಗಿವೆ. ಲಹರಿತನದಲ್ಲಿ ಬಿಗಿ ಕಳೆದುಕೊಂಡಿವೆ. ಡೆಡ್‌ಲೈನಿನ ಸಮ್ಮುಖದಲ್ಲಿ ಮನೆಗೆಲಸ ಅಧ್ಯಾಪನ ಪ್ರಯಾಣಗಳ ಒತ್ತಡದಲ್ಲಿ ಅವರು ಇಷ್ಟು ಬರಹ ಮಾಡಿದ್ದಾರೆ. ಆದರೆ ಪ್ರಕಟನೆಯ ಹಂತದಲ್ಲಿ ಅವಸರದ ಅಂಕಣಗಳು ಮರುಹುಟ್ಟು ಪಡೆಯುವ ಅವಕಾಶವನ್ನು ಕಳೆದುಕೊಂಡಿವೆ ಅನಿಸುತ್ತದೆ.

ಪ್ರಶ್ನೆಯೆಂದರೆ, ಯಾಕೆ ಸಂಘರ್ಷ ಮತ್ತು ವಿಷಾದಗಳು ನಮ್ಮ ಕಾಲದ ಚಿಂತನೆಯ ಮುಖ್ಯ ದನಿಯಾಗಿವೆ? ಕೊಲೆಗಡುಕ ಸಿದ್ಧಾಂತಗಳನ್ನು ಎದುರಿಸುವ ಕದನದಲ್ಲಿ ಸೋತಿರುವ ದನಿಯಲ್ಲಿ ಲೇಖಕರು ಬರೆಯುತ್ತಿದ್ದಾರೆಯೇ? ವಿನಯಾರ ಇಡೀ ಕೃತಿ ವಿಷಾದದ ದನಿಯಿಂದ ತುಂಬಿಹೋಗಿದೆ. ಇದಕ್ಕೆ ಕಾರಣ, ಅವರು ಆರಿಸಿಕೊಂಡಿರುವ ವಸ್ತುಗಳು ಅಂತಹವು. ಮೂಲತಃ ವಿನಯಾರ ಒಟ್ಟು ಬರಹದಲ್ಲಿಯೇ ವಿಷಾದದ ಮೂಲಕವೇ ಓದುಗರನ್ನು ಚಿಂತನೆಗೆ ಹಚ್ಚಿಸುವ ವಿಧಾನವಿದೆ. ಈ ವಿಷಾದ ದನಿಗೆ ನಮ್ಮ ಪರಿಸರದ ಬದುಕಿನಲ್ಲಿ ಕಾರಣಗಳೂ ಇವೆ. ಆದರೆ ಇದೊಂದು ಸ್ಥಾಯಿ ನುಡಿಗಟ್ಟಾಗಿಬಿಡುವ ಆತಂಕ ನನಗೆ. ಅಂಕಣದ ಕೊನೆಯಲ್ಲಿ ಬದಲಾಗುವ ಆಶೋತ್ತರದ ನುಡಿಗಳಿದ್ದರೂ ಅವು ಆತ್ಮವಿಶ್ವಾಸ ಕಳೆದುಕೊಳ್ಳದಂತೆ ತನ್ನನ್ನು ತಾನೇ ಸಾಂತ್ವನ ಹೇಳಿಕೊಳ್ಳುವಂತೆ,ಕತ್ತಲ ಕೊನೆಗೆ ಬೆಳಕಿದೆ ಎಂದು ಓದುಗರಿಗೆ ಭರವಸೆ ಹುಟ್ಟಿಸಲು ತಂದುಕೊಂಡ ಉಮೇದಿನಂತೆ ಕೇಳಿಸುತ್ತವೆ. ಇದು ವಿನಯಾರ ಬರಹದ ಲಕ್ಷಣವಲ್ಲ. ನಮ್ಮ ಕಾಲದ ಬಹುತೇಕರ ಬರಹವನ್ನು ಆವರಿಸಿಕೊಂಡಿರುವ ಧಾಟಿ. ಬರಹದಲ್ಲಿ ಏಕತಾನತೆ ತರುವ ಈ ಧಾಟಿ, ಬೇರೆಬೇರೆ ಬಗೆಯಲ್ಲಿ ಲೋಕ ಗ್ರಹಿಸಲು ಮತ್ತು ವಿಶ್ಲೇಷಿಸಲು ತೊಡಕನ್ನೂ ಒಡ್ಡಬಲ್ಲದೇ? ಈ ಧಾಟಿಯಿಂದ, ಕಟುವಾಸ್ತವಕ್ಕೆ ಬೆನ್ನು ತಿರುಗಿಸದೆಯೂ ತಪ್ಪಿಸಿಕೊಳ್ಳಲು ಸಾಧ್ಯವಿದೆಯೇ? ಇದು ನಮ್ಮೆಲ್ಲರ ಮುಂದಿರುವ ಪ್ರಶ್ನೆ.

Writer - ರಹಮತ್ ತರೀಕೆರೆ

contributor

Editor - ರಹಮತ್ ತರೀಕೆರೆ

contributor

Similar News