ಭಡ್ತಿ ಮೀಸಲಾತಿ: ಹೋರಾಟದ ಹಾದಿ ನೆನೆಯುತ್ತಾ...

Update: 2019-05-13 06:13 GMT

ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಭಡ್ತಿಯಲ್ಲಿ ಮೀಸಲಾತಿ ಮುಂದುವರಿಸಬಾರದೆಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದಾಗ ಎಸ್ಸಿ ಮತ್ತು ಎಸ್ಟಿ ನೌಕರರು ಕಂಗಾಲಾಗಿ ಕುಸಿದು ಹೋಗಿದ್ದರು! ಅನೇಕರು ಇದಕ್ಕೆ ಹೋರಾಟ ಮಾಡಬೇಕೆಂದು ಆರಂಭದಲ್ಲಿ ಆವೇಶದಿಂದ ಬಂದರೂ ಬಹುತೇಕ ನೌಕರರು ಕ್ರಮೇಣ ಎಲ್ಲರಿಗೂ ಆಗಿದ್ದು ನನಗೂ ಆಗುತ್ತೆ ಎಂದು ಹಿಂದೆ ಸರಿದು ಏನು ಆಗುತ್ತೋ ನೋಡೋಣ ಎಂದು ಅವಕಾಶವಾದಿಗಳಾಗಿ ನೋಡುತ್ತಾ ಕಾದು ಕುಳಿತರು.

ಸರ್ವೋಚ್ಚ ನ್ಯಾಯಾಲಯದ ಭಡ್ತಿ ಮೀಸಲಾತಿ ತೀರ್ಪು ಎಸ್ಸಿ ಮತ್ತು ಎಸ್ಟಿಗಳ ಪರವಾಗಿ ಬಂದಿದೆ. ನನ್ನ ಮನಸ್ಸು ಎರಡು ವರ್ಷಗಳ ಹಿಂದಿನ ಹೋರಾಟದ ಹಾದಿಯನ್ನು ನೆನೆಯುತ್ತಿದೆ...
 ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಭಡ್ತಿಯಲ್ಲಿ ಮೀಸಲಾತಿ ಮುಂದುವರಿಸಬಾರದೆಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದಾಗ ಎಸ್ಸಿ ಮತ್ತು ಎಸ್ಟಿ ನೌಕರರು ಕಂಗಾಲಾಗಿ ಕುಸಿದು ಹೋಗಿದ್ದರು! ಅನೇಕರು ಇದಕ್ಕೆ ಹೋರಾಟ ಮಾಡಬೇಕೆಂದು ಆರಂಭದಲ್ಲಿ ಆವೇಶದಿಂದ ಬಂದರೂ ಬಹುತೇಕ ನೌಕರರು ಕ್ರಮೇಣ ಎಲ್ಲರಿಗೂ ಆಗಿದ್ದು ನನಗೂ ಆಗುತ್ತೆ ಎಂದು ಹಿಂದೆ ಸರಿದು ಏನು ಆಗುತ್ತೋ ನೋಡೋಣ ಎಂದು ಅವಕಾಶವಾದಿಗಳಾಗಿ ನೋಡುತ್ತಾ ಕಾದು ಕುಳಿತರು. ಒಂದಷ್ಟು ಜನ ನೌಕರರಂತೂ ರಾತ್ರಿ ಹಗಲೆನ್ನದೆ ಹೋರಾಟಕ್ಕಿಳಿದರು. ಇವರಲ್ಲಿ ಕೆಲವರು ನನ್ನ ಬಳಿ ಬಂದರು. ಪವಿತ್ರಾ ಪ್ರಕರಣ ಮತ್ತು ಅದರ ಹಿಂದಿನ ನಾಗರಾಜ್ ಪ್ರಕರಣಗಳನ್ನು ಒಂದಷ್ಟು ಓದಿಕೊಂಡ ನಾನು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳಾದ ಜಸ್ಟೀಸ್ ಗೋಪಾಲಗೌಡರಿಂದ ಮೊದಲಿಗೆ ‘ಲೀಗಲ್ ಒಪೀನಿಯನ್’ ಪಡೆದೆವು. ಅತ್ಯಂತ ಗಂಭೀರ ಅಧ್ಯಯನದಿಂದ ಕೂಡಿದ್ದ ಈ ಕಾನೂನು ಸಲಹೆ ನಾವು ಮುಂದೆ ಹೋಗಲು ಹಾದಿ ಸುಗಮವಾಯಿತು.
ಈ ಮಧ್ಯೆ ಕರ್ನಾಟಕ ಸರಕಾರ ಅತ್ತ ಎಸ್ಸಿ ಎಸ್ಟಿಗಳು ಇತ್ತ ಹಿಂದುಳಿದವರು ಮತ್ತು ಬಲಿಷ್ಠ ಜಾತಿಗಳು ಒಟ್ಟಿಗಿದ್ದ ಪರಿಣಾಮ ಗೊಂದಲಕ್ಕೆ ಬಿದ್ದು ಸ್ಪಷ್ಟ ನಿಲುವು ತೆಗೆದುಕೊಳ್ಳಲಾರದೆ ಮರು ಪರಿಶೀಲನೆ ಅರ್ಜಿ (review petition) ಹಾಕಲು ಮೀನಮೇಷ ಎಣಿಸುತ್ತಾ ಕಡೆಗೆ ಒತ್ತಡಕ್ಕೆ ಮಣಿದು ಕಾಟಾಚಾರಕ್ಕೆಂಬಂತೆ ಸುಪ್ರೀಂ ಕೋರ್ಟ್‌ನ ಬೇಸಿಗೆ ರಜೆಯ ಕಡೆಯದಿನ ಅರ್ಜಿ ಹಾಕಿ ಸುಮ್ಮನಾಯಿತು! ಸರಕಾರ ಕಡೆಯಲ್ಲಿ ನೇಮಿಸಿದ ಅಟಾರ್ನಿ ಜನರಲ್ ಕೂಡ ಕಾರಣಾಂತರಗಳಿಂದ ರಾಜೀನಾಮೆ ನೀಡಿ ಹೋಗಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಪಕವಾಗಿ ಕೇಸು ನಡೆಸದ ಸರಕಾರ ಈ ಮಧ್ಯೆ ‘ಆರ್ಡಿನೆನ್ಸ್’ ತಂದಿತು. ಈ ‘ಆರ್ಡಿನೆನ್ಸ್ ಕಡೆಗೆ ಬಿಜೆಪಿ ಬೆಂಬಲಿತ ರಾಷ್ಟ್ರಪತಿ ಬಳಿ ಹೋಗುತ್ತೆ ಅವರೇನು ಮಾಡುತ್ತಾರೋ ಮಾಡಲಿ’ ಎಂಬ ಮನಸ್ಥಿತಿಯಲ್ಲಿ ಚೆಂಡನ್ನು ರಾಷ್ಟ್ರಪತಿಗಳ ಬಳಿ ತಳ್ಳಿ ಸುಮ್ಮನಾಯಿತು! ಈ ಮದ್ಯೆ ನಡೆದ ರಾಜಕಾರಣದ ಪ್ರಹಸನಗಳನ್ನು ಹೇಳುತ್ತಾ ಹೋದರೆ ಅದಕ್ಕೆ ಕೊನೆ ಮೊದಲಿಲ್ಲ! ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಮಾಧ್ಯಮದಲ್ಲಿ ಬರೆಯುತ್ತಾ ಸತತವಾಗಿ ಧ್ವನಿಮಾಡುತ್ತಲೇ ಇದ್ದೆ. (ಈ ಸಾಂದರ್ಭಿಕ ಲೇಖನಗಳು ನನ್ನ ಈಚಿನ ಪುಸ್ತಕ ’ಮೂಕನಾಯಕ’ದಲ್ಲಿವೆ)
ಈ ಹಿನ್ನೆಲೆಯಲ್ಲಿ ನೌಕರರನ್ನು ಜಾಗೃತಗೊಳಿಸಲು ನಮ್ಮ ಶಿವಶಂಕರ್ ನೇತೃತ್ವದ ಕರ್ನಾಟಕ ಎಸ್ಸಿ ಎಸ್ಟಿ ಸರಕಾರಿ ನೌಕರರ ಸಂಘ ಹಾಗೂ ಕೆಪಿಟಿಸಿಎಲ್ ನೌಕರರ ಸಂಘದವರು ಸಂಘಟಿಸಿದ ಸುಮಾರು 34 ಸಭೆಗಳಲ್ಲಿ ರಾಜ್ಯಾದ್ಯಂತ ಭಾಗವಹಿಸಿದ ನಾನು ಸುದೀರ್ಘವಾಗಿ ಮಾತನಾಡುತ್ತ ನೌಕರರಲ್ಲಿ ಸದರಿ ತೀರ್ಪುಗಳ ಆಳ ಅಗಲಗಳನ್ನು ಪರಿಚಯಿಸುತ್ತಾ ಅರಿವು ಮೂಡಿಸಿದೆ.


ಇದರ ಬೆನ್ನಲ್ಲೇ ದಿಲ್ಲಿಗೆ ಹೋಗಿ ಜಸ್ಟೀಸ್ ನಾಗಮೋಹನದಾಸ್ ಮಾರ್ಗದರ್ಶನ ಪಡೆದು, ಕರ್ನಾಟಕದವರೇ ಆದ ಸುಪ್ರೀಂ ಕೋರ್ಟ್ ವಕೀಲರಾದ ಸಂಜಯ್ ನುಲಿ, ಶ್ರೀಶ ದೇಶಪಾಂಡೆ, ಸಿ.ಎಂ. ಅಂಗಡಿ, ಶೇಖರ್ ದೇವಸ, ವಿದ್ಯಾಸಾಗರ್ ಗಳನ್ನು ಸೇರಿಸಿ ವಕೀಲರ ಒಂದು ಟೀಮ್ ಮಾಡಿ ಸುಮಾರು ಆರು ನೂರು ಮಂದಿಯನ್ನು (ಇದರಲ್ಲಿ ಮುಖ್ಯ ಇಂಜಿನಿಯರ್ ಹುದ್ದೆಯಿಂದ ಹಿಡಿದು ಜವಾನನವರೆಗೂ ಎಲ್ಲಾ ಹಂತದವರಿದ್ದರು, ಅನೇಕ ಇಲಾಖೆಗಳವರೂ ಇದ್ದರು) ಅರ್ಜಿದಾರರನ್ನಾಗಿ ಮಾಡಿ ಮರುಪರಿಶೀಲನೆ ಅರ್ಜಿಗಳನ್ನು ಹಾಕಿದೆವು. ನಮಗೆ ಆರಂಭದಲ್ಲಿ ಆರ್ಥಿಕ ನೆರವೂ ದೊರಕಿತು. ನಮ್ಮ ವಕೀಲರು ಕೂಡ ಕೊಟ್ಟಷ್ಟು ಪಡೆದು ಕೆಲಸ ಮಾಡತೊಡಗಿದರು. ಆಶ್ಚರ್ಯವೆಂದರೆ ದಲಿತರ ಪರವಾಗಿ ನಿಂತ ಈ ವಕೀಲರಲ್ಲಿ ನನ್ನನ್ನೂ ಸೇರಿಸಿದಂತೆ ಒಬ್ಬರೂ ದಲಿತರಿರಲಿಲ್ಲ! ನಮ್ಮ ಟೀಮ್ ನಾಗಮೋಹನದಾಸ್ ನೇತೃತ್ವದಲ್ಲಿ ಕರ್ನಾಟಕ ಸರಕಾರಕ್ಕೂ ಕಾನೂನಿನ ಸಲಹೆ ಸೂಚನೆಗಳನ್ನು ನೀಡಿತ್ತು.
ಒಂದು ಇಡೀ ದಿನ ದಾಸ್‌ರೊಂದಿಗೆ ಸುಪ್ರೀಂ ಕೋರ್ಟ್‌ನ ಲೈಬ್ರರಿಯಲ್ಲಿ ಕುಳಿತು ಕರ್ನಾಟಕ ಸರಕಾರಕ್ಕೆ ನೀಡಲು ಒಂದು ‘ನೋಟ್’ ಅನ್ನು ತಯಾರಿಸಲು ಪಟ್ಟ ಶ್ರಮವನ್ನು ನಾನಿನ್ನೂ ಮರೆತಿಲ್ಲ! ಒಂದು ಹಂತದಲ್ಲಿ ಹಿಂದುಳಿದ ವರ್ಗಗಳ ನೌಕರರು ಬಂದು ನೀವು ಹಿಂದುಳಿದ ವರ್ಗಗಳ ಆಯೋಗದ ಅದ್ಯಕ್ಷರಾಗಿದ್ದವರು ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದವರಾಗಿ ನಮ್ಮೆಂದಿಗೆ ಇರಬೇಕಿತ್ತು. ಆದರೆ ನೀವು ನಮ್ಮ ವಿರುದ್ಧವಿರುವ ದಲಿತರ ಪರವಾಗಿದ್ದೀರಿ.. ಇದು ನ್ಯಾಯವೇ..?ಎಂದರು. ನಾನು ಹೇಳಿದೆ ನೀವು ಹಿಂದುಳಿದವರಾಗಿ ದಲಿತರೊಂದಿಗೆ ನಿಂತು ಬೆಂಬಲಿಸುತ್ತಾ ದಲಿತರೊಂದಿಗೆ ನಮಗೂ ಭಡ್ತಿಯಲ್ಲಿ ಮೀಸಲಾತಿ ಕೊಡಿ.. ಎಂದು ಕೇಳಬೇಕಿತ್ತು.. ಅದು ಬಿಟ್ಟು ಬಲಿಷ್ಠರ ಜತೆ ನಿಂತು ದಲಿತರಿಗೆ ನೀಡಿರುವುದನ್ನು ವಿರೋಧಿಸುತ್ತಿದ್ದೀರಲ್ಲ.. ಇದು ನ್ಯಾಯವೇ. ಎಂದೆ.
ನಮ್ಮ ಮರುಪರಿಶೀಲನಾ ಅರ್ಜಿಗಳು ತಾಂತ್ರಿಕ ಕಾರಣಕ್ಕೆ ಕೋರ್ಟ್‌ನ ಮುಂದೆ ಬರುವುದು ತಡವಾದಂತೆಲ್ಲಾ ನಮ್ಮ ದಲಿತ ನೌಕರರು ತಾಳ್ಮೆ ಕಳಕೊಂಡು ನಮಗೆ ಸಹಕಾರ ಕೊಡುವುದನ್ನು ನಿಲ್ಲಿಸಿದರು. ಬಾಯಿಗೆ ಬಂದಂತೆ ಮಾತಾಡತೊಡಗಿದರು! ಇವರ ಅಸಹಕಾರದಿಂದಾಗಿ ನಾವು ತೀರಾ ಆರ್ಥಿಕ ತೊಂದರೆಗೆ ಒಳಗಾದೆವು! ದಿಲ್ಲಿಗೆ ಹೋಗಿ ಬರುವುದಕ್ಕೂ ಸಾಧ್ಯವಿಲ್ಲದಂತಾಯಿತು. ಈ ಮಧ್ಯೆ ಮೈಸೂರು ಕಡೆ ಕೆಲವರು ಕೇಸಿಗಾಗಿ ನಮಗೆ ನೀಡಬೇಕೆಂದು ಸುಮಾರು ಎರಡು ಕೋಟಿ ರೂ. ವಸೂಲಿ ಮಾಡಿದ್ದಾರೆ ಎಂಬ ಸುದ್ದಿ ಹರಡಿತು!? ಆದರೆ ಇದರಲ್ಲಿ ನಮಗೆ ಎರಡು ರೂಪಾಯಿ ಕೂಡ ತಲುಪಲಿಲ್ಲ! ಈ ಸುದ್ದಿ ನಿಜವೋ ಸುಳ್ಳೋ ಗೊತ್ತಿಲ್ಲ? ಅನೇಕ ಬಡ ನೌಕರರು ನನಗೆ ಐನೂರರಿಂದ ಐದು ಸಾವಿರದ ವರೆಗೂ ಸುಮಾರು ಎರಡು ಲಕ್ಷದವರೆಗೂ ಕಳಿಸಿದರು. ಇದು ಒಂದಷ್ಟು ಹೋಗಿಬರಲು ನೆರವಾಯಿತು. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಕೇಸು ನಡೆಸಲು ಇದು ಯಾವ ಲೆಕ್ಕಕ್ಕೂ ಇಲ್ಲ. ಕರ್ನಾಟಕ ಭವನದ ಮೂರರಲ್ಲಿ ಒಬ್ಬ ಕನ್ನಡಿಗ ದಲಿತ ನೌಕರ ನನಗೆ ಸದಾ ಒಂದು ಕೊಠಡಿ ಇಟ್ಟಿರುತ್ತಿದ್ದ ಇದರಿಂದಾಗಿ ನನಗೆ ವಾಸ್ತವ್ಯಕ್ಕೆ ತೊಂದರೆಯಾಗಲಿಲ್ಲ.
ಇದೆಲ್ಲಾ ಆದ ಮೇಲೆ ಕರ್ನಾಟಕದಲ್ಲಿ ನಡೆದ ಪ್ರಹಸನಗಳ ಬಗ್ಗೆ ನಾನು ಹೇಳಬೇಕಿಲ್ಲ! ನಂತರ ಅನೇಕ ರೀತಿಯ ಪ್ರಾಮಾಣಿಕ ಹೋರಾಟಗಳೂ ಆರಂಭವಾದವು. ನಾಗಸಿದ್ಧಾರ್ಥ ಹೊಲೆಯಾರ್ ಭಡ್ತಿ ಮೀಸಲಾತಿಯ ಮೇಲೆ ಬೆಳಕು ಚೆಲ್ಲುವ ಪುಸ್ತಕ ಬರೆದು ಹೋರಾಟದಲ್ಲಿ ತೊಡಗಿಸಿಕೊಂಡರು. ಸರಕಾರದ ಮೇಲೆ ಒತ್ತಡವೂ ಹೆಚ್ಚಾಯಿತು. ಈಗ ಸಹಜವಾಗಿಯೇ ಪ್ರಕರಣ ಕೋರ್ಟಿನ ಮುಂದೆ ಬಂತು. ಇದರ ಕಾನೂನಾತ್ಮಕ ವಿವರಗಳಿಗೆ ನಾನು ಹೋಗಲ್ಲ. ಒಟ್ಟಿನಲ್ಲಿ ನಮ್ಮ ಎಲ್ಲಾ ಅರ್ಜಿಗಳನ್ನು ಸರಕಾರದ ಅರ್ಜಿಗಳೊಂದಿಗೆ ನ್ಯಾಯಾಲಯ ಪರಿಗಣಿಸಿದೆ. ಇದೊಂದು ಐತಿಹಾಸಿಕ ತೀರ್ಪು. ಇಡೀ ದೇಶಕ್ಕೆ ಇಂತಹ ಪ್ರಕರಣಗಳಲ್ಲಿ ಈ ತೀರ್ಪು ಅನುಕರಣೀಯವಾಗಬಲ್ಲದು.

Writer - ಸಿ.ಎಸ್. ದ್ವಾರಕಾನಾಥ್

contributor

Editor - ಸಿ.ಎಸ್. ದ್ವಾರಕಾನಾಥ್

contributor

Similar News

ಜಗದಗಲ
ಜಗ ದಗಲ