ಬಿಜೆಪಿ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿದೆಯೇ?

Update: 2019-05-13 18:31 GMT

ಭಾಗ-1

ತಳದಲ್ಲಿ ಹುದುಗಿದ್ದ ಕೆಲವು ಒಲವುಗಳನ್ನು, ನಿಲುವುಗಳನ್ನು ಮೇಲಕ್ಕೆ ತಂದು ನಮ್ಮ ಕಣ್ಮುಂದೆ ನಿಲ್ಲಿಸುವ ಬೃಹತ್ ಮಸೂರಗಳಂತೆ ಚುನಾವಣೆಗಳು ಕಾರ್ಯನಿರ್ವಹಿಸುತ್ತವೆ. ಈ ಚುನಾವಣೆಗಳು ಹೀಗೆ ಮುನ್ನೆಲೆಗೆ ತಂದು ನಿಲ್ಲಿಸಿರುವ ಒಂದು ವಿಷಯವೆಂದರೆ ಬಿಜೆಪಿಯ ಪೊಳ್ಳುತನ ಮತ್ತು ಅದು ಪ್ರತಿನಿಧಿಸುವ ಅದರ ತಥಾಕಥಿತ ದಿಗ್ವಿಜಯದ ಕ್ಷಣ ಭಂಗುರತೆ.

ಈಗ ನಮ್ಮಲ್ಲಿ ಹೆಚ್ಚಿನವರು ಮೇ 23ರಂದು ಏನಾಗುತ್ತದೆ ಮತ್ತು ಅದು ನಮ್ಮ ಹಾಗೂ ದೇಶದ ಭರವಸೆಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬ ಬಗ್ಗೆಯೇ ಯೋಚಿಸುತ್ತಿದ್ದೇವೆ. ಆದರೆ ಮತದಾನ ಮತ್ತು ಚುನಾವಣಾ ಫಲಿತಾಂಶಗಳ ಬಗ್ಗೆ ಮಗ್ನರಾಗಿರುವಾಗ, ಈ ಚುನಾವಣೆ ಎತ್ತಿರುವ ಕೆಲವು ಪ್ರಶ್ನೆಗಳ ಕೆಲವು ಮುಖ್ಯ ವಿಷಯಗಳ ಹಿಂದಣ ಗಂಭೀರವಾದ ಮಹತ್ವವನ್ನು ನಾವು ಕಡೆಗಣಿಸುವ ಸಾಧ್ಯತೆ ಇದೆ.
ತಳದಲ್ಲಿ ಹುದುಗಿದ್ದ ಕೆಲವು ಒಲವುಗಳನ್ನು, ನಿಲುವುಗಳನ್ನು ಮೇಲಕ್ಕೆ ತಂದು ನಮ್ಮ ಕಣ್ಮುಂದೆ ನಿಲ್ಲಿಸುವ ಬೃಹತ್ ಮಸೂರಗಳಂತೆ ಚುನಾವಣೆಗಳು ಕಾರ್ಯನಿರ್ವಹಿಸುತ್ತವೆ. ಈ ಚುನಾವಣೆಗಳು ಹೀಗೆ ಮುನ್ನೆಲೆಗೆ ತಂದು ನಿಲ್ಲಿಸಿರುವ ಒಂದು ವಿಷಯವೆಂದರೆ ಬಿಜೆಪಿಯ ಪೊಳ್ಳುತನ ಮತ್ತು ಅದು ಪ್ರತಿನಿಧಿಸುವ ಅದರ ತಥಾಕಥಿತ ದಿಗ್ವಿಜಯದ ಕ್ಷಣ ಭಂಗುರತೆ.
ಆರೆಸ್ಸೆಸ್ ಸಿದ್ಧಾಂತವನ್ನು ವಿರೋಧಿಸುವ ನಮಗೂ ಕೂಡ ಇದು ಒಂದು ಒಳ್ಳೆಯ ಸಂಗತಿಯಲ್ಲ. ಆದರೆ ದೀರ್ಘಾವಧಿಯಲ್ಲಿ ಆರೆಸ್ಸೆಸ್ ಆಡಳಿತ ನಡೆಸುವ ಸವಾರ್ಧಿಕಾರದ, ಏಕಮುಖಿಯಾದ ಒಂದು ‘ಹಿಂದೂರಾಷ್ಟ್ರ’ ಅಸಂಭವನೀಯ ಎಂಬುದಂತೂ ಸ್ಪಷ್ಟ. ಇದರ ಅರ್ಥ ಹಲವು ಭಯಾನಕ ಸಾಧ್ಯತೆಗಳು ಇರಲಾರವು ಎಂದಲ್ಲ.
ಯಾಕೆ? ಎಂದು ತಿಳಿದುಕೊಳ್ಳಲು ನಾವು 2014ಕ್ಕೆ ಹಿಂದಿರುಗಿ ಹೋಗೋಣ. ಎರಡು ರೀತಿಯ ಪಾತ್ರಗಳ, ಇಬ್ಬರು ಪಾತ್ರಧಾರಿಗಳ ರಾಜಕೀಯ ಕ್ರಿಯೆಯ ಭಾರೀ ಅಲೆಯೊಂದಿಗೆ ಆಗ ಬಿಜೆಪಿ ಅಧಿಕಾರಕ್ಕೆ ಬಂತು: ಆರೆಸ್ಸೆಸ್ ಮತ್ತು ಅದರ ಸಂಘ ಪರಿವಾರ ಒಂದೆಡೆ, ಮತ್ತು ಒಂದು ಬೃಹತ್ ವಾಣಿಜ್ಯ -ಕಾರ್ಪೊರೇಟ್ ಮೀಡಿಯಾ ಕೂಟ ಇನ್ನೊಂದೆಡೆ. ಈ ಎರಡಕ್ಕೂ ತನ್ನದೇ ಆದ ರಾಜಕೀಯ ಯೋಜನೆ, ಪ್ರಾಜೆಕ್ಟ್ ಇತ್ತು. ಮೋದಿಯವರನ್ನು ಬೆಂಬಲಿಸುವ ಕಾರ್ಪೊರೇಟ್‌ಗಳು ತಮ್ಮದೇ ಆದ ‘ಆರ್ಥಿಕ ಸುಧಾರಣೆಗಳನ್ನು’ ತರಲು ಬಯಸಿದ್ದವು. ಆರೆಸ್ಸೆಸ್ ಹಿಂದುತ್ವವನ್ನು ಮುನ್ನೆಲೆಗೆ ತರಲು ಬಯಸಿತ್ತು.
ಇವೆರಡರಲ್ಲಿ ಒಂದನ್ನು ಅಥವಾ ಎರಡನ್ನೂ ಒಪ್ಪದವರು ಇವು ಹೇಗೆ ಅನ್ಯಾಯ, ಹಿಂಸೆ ಮತ್ತು ದ್ವೇಷಕ್ಕೆ ಹಾದಿಯಾಗುತ್ತವೆ ಎಂಬ ಬಗ್ಗೆ ಮಾತಾಡುತ್ತಾರೆ. ಆದರೆ ಈ ಎರಡು ಪ್ರಾಜೆಕ್ಟ್‌ಗಳಿಗೆ ಇನ್ನೊಂದು ಸಮಸ್ಯೆ ಇದೆ. ಇವು ನಮ್ಮ ನಿರೀಕ್ಷೆಗಳನ್ನು ಈಡೇರಿಸುವುದಿಲ್ಲ ಎಂಬುದಷ್ಟೇ ಅಲ್ಲ;ಇವು ಈ ಪ್ರಾಜೆಕ್ಟ್‌ಗಳ ಬೆಂಬಲಿಗರ ನಿರೀಕ್ಷೆಗಳನ್ನು ಕೂಡ ಈಡೇರಿಸಲು ಅಸಮರ್ಥವಾಗಿವೆ.
ಈ ಅರ್ಥದಲ್ಲಿ ಇವುಗಳು ಕೇವಲ ಭ್ರಾಮಕ ಪ್ರಾಜೆಕ್ಟ್‌ಗಳು. ಇದನ್ನು ಅರ್ಥಮಾಡಿಕೊಳ್ಳಲು 2014ರಿಂದ 2019ರವರೆಗೆ ಏನೇನಾಯಿತು ಎಂದು ಗಮನಿಸೋಣ.
ಬಿಜೆಪಿಯ ಕಾರ್ಯಸೂಚಿಯಿಂದ ಆರ್ಥಿಕ ಯೋಜನೆ, ಪ್ರಾಜೆಕ್ಟ್ ಕಣ್ಮರೆಯಾಗಿದೆ ಎಂದು ಬಹುಸಂಖ್ಯೆಯ ವಿಶ್ಲೇಷಕರು ಈಗಾಗಲೇ ಹೇಳಿದ್ದಾರೆ. ತನ್ನದೇ ಆದ ಹಿಂದಿನ ಘೋಷಣೆಯಾಗಿರುವ ‘ಅಚ್ಛೇದಿನ್’ ಎಂಬ ಘೋಷಣೆಯನ್ನು ಎಲ್ಲರೂ ಮರೆತುಬಿಡಬೇಕೆಂದು ಸ್ವತಃ ಆಳುವ ಪಕ್ಷವೇ ಬಯಸುತ್ತಿರುವ ಒಂದು ವಿಚಿತ್ರ ಚುನಾವಣೆ ಇದು. ಇದೊಂದು ಆಕಸ್ಮಿಕವಲ್ಲ, ಅಪಘಾತವೂ ಅಲ್ಲ. ಮೋದಿ ಸರಕಾರದ ಕೇವಲ ‘ಆರ್ಥಿಕ ದುರಾಡಳಿತ’ದ ಮಿಸ್‌ಮ್ಯಾನೇಜ್‌ಮೆಂಟ್‌ನ ಒಂದು ಪರಿಣಾಮವೂ ಇದಲ್ಲ.
2014ರಲ್ಲಿ ಕಾರ್ಪೊರೇಟ್ ಮೀಡಿಯಾ ತನ್ನ ‘‘ಸುಧಾರಣೆಗಳ ಕಾರ್ಯಸೂಚಿ’’(ಅಜೆಂಡಾ) ಭಾರತದ ವಾಣಿಜ್ಯೋದ್ಯಮಗಳ ಮತ್ತು ಆ ಮೂಲಕ ಎಲ್ಲರ ಪಾಲಿಗೆ ಲಾಭದಾಯಕವಾಗುತ್ತದೆ; ಒಳಿತನ್ನು ಮಾಡುತ್ತದೆ ಎಂದು ಜನತೆಗೆ ಮನವರಿಕೆ ಮಾಡಿಸಿತ್ತು. ಹೊಸ ಭೂಸ್ವಾಧೀನ ಕಾಯ್ದೆಯನ್ನು ಹಿಂದಕ್ಕೆ ಪಡೆಯುವುದು, ಕಾರ್ಮಿಕ ಕಾನೂನುಗಳನ್ನು ಮೃದುಗೊಳಿಸುವುದು, ಅರಣ್ಯ ಮತ್ತು ಪರಿಸರ ಅಂಗೀಕಾರ ಪರವಾನಗಿ ಪಡೆಯುವುದನ್ನು ಇನ್ನಷ್ಟು ಸುಲಭಗೊಳಿಸುವುದು ಇತ್ಯಾದಿ ಆ ‘ಸುಧಾರಣೆ’ಗಳಾಗಿದ್ದವು.
ಆದರೆ ವಾಸ್ತವದಲ್ಲಿ ಮತ್ತು 2014ರ ಬಹಳಷ್ಟು ಮೊದಲೇ ಭಾರತದಲ್ಲಿ ‘ಸುಧಾರಣೆಗಳು’ ದೇಶದ ನೂರು ಟಾಪ್ ಕಂಪೆನಿಗಳಷ್ಟೇ ಲಾಭ ಮಾಡುವ ಕ್ರಮಗಳಾಗಿ ತಮ್ಮ ಉದ್ದೇಶದಲ್ಲಿ ವಿಫಲಗೊಂಡಿದ್ದವು. ಹೀಗಾಗಿ, ತನ್ನ ಮೊದಲ ಎರಡು ವರ್ಷಗಳ ಅವಧಿಯಲ್ಲಿ ಈ ಕಾರ್ಯಸೂಚಿಯನ್ನು ಮೋದಿ ಸರಕಾರ ಪ್ರಯತ್ನಿಸಿದ ಬಳಿಕ ತನಗೆ ಕಾರ್ಪೊರೇಟ್‌ನ ಬೆಂಬಲವಾಗಲಿ ಜನ ಸಮುದಾಯದ ಬೆಂಬಲವಾಗಲಿ ಸಿಗುತ್ತಿಲ್ಲವೆಂದು ಅದಕ್ಕೆ ಮನವರಿಕೆಯಾಯಿತು. ಆಗ ಅದು ತನ್ನ ಇಡೀ ಆರ್ಥಿಕ ಯೋಜನೆಯನ್ನು ಮೂಲೆಗೆ ಎಸೆಯಿತು. ಆ ಬಳಿಕ ಅದು ಕೆಲವು ಕಲ್ಯಾಣ ಯೋಜನೆಗಳನ್ನು ಆಯ್ದ ಕಾರ್ಪೊರೇಟ್‌ಗಳಿಗೆ ಸಂಪನ್ಮೂಲಗಳನ್ನು ನೀಡುತ್ತಾ, ದೇಶಕ್ಕೆ ನೋಟು ರದ್ದತಿ ಮತ್ತು ಜಿಎಸ್‌ಟಿ ಎಂಬ ಎರಡು ಭಾರೀ ಅವಳಿ ಹೊಡೆತಗಳನ್ನು ನೀಡಿತು. ಇದೆಲ್ಲದರ ಪರಿಣಾಮವಾಗಿ ಭಾರತದ ಅರ್ಥವ್ಯವಸ್ಥೆ ಎಲ್ಲಿಲ್ಲದ ಬಿಕ್ಕಟ್ಟಿಗೆ ಸಿಲುಕಿತು.
ಹಿಂದುತ್ವ ಪ್ರಾಜೆಕ್ಟ್
ಇವೆಲ್ಲದರ ಮಧ್ಯೆ ‘ಹಿಂದುತ್ವ ಪ್ರಾಜೆಕ್ಟ್’ ಜೀವಂತವಾಗಿ ಹಾಗೂ ಸದೃಢವಾಗಿ ಇರುವಂತೆ ಕಾಣಿಸುತ್ತಿದೆ ಮತ್ತು ಇದೇ ಹಲವರಿಗೆ ಭಯ ಹುಟ್ಟಿಸುವ ಸಂಗತಿಯಾಗಿದೆ.ಆದರೆ ಈ ಯೋಜನೆ ಮೇಲ್ಮೈಗೆ ಯಶಸ್ವಿಯಾದಂತೆ ಕಂಡರೂ, ಆಳದಲ್ಲಿ ಈ ಯೋಜನೆ ಕೂಡ ಅದರದೇ ನಿಜ ಗುರಿಗಳನ್ನು ತಲುಪಲು ಸಮರ್ಥವಾಗುತ್ತಿಲ್ಲ. ಉದ್ಯೋಗಗಳು ಮತ್ತು ಆರ್ಥಿಕ ಭದ್ರತೆ ಹಿಂದುತ್ವ ಪ್ರಾಜೆಕ್ಟ್‌ನ ಒಂದು ಅವಿಭಾಜ್ಯ ಅಂಗವಾಗಿತ್ತು. ಆದರೆ ಈಗ ವೌನವಾಗಿ ಇದನ್ನೇ ಬದಿಗೆ ತಳ್ಳಲಾಗಿದೆ.
ಅದೇ ರೀತಿಯಾಗಿ, ಹಿಂದುತ್ವದ ಪ್ರತಿಯೊಂದು ಅನುಕ್ರಮವಾದ ಕಾರ್ಯಸೂಚಿ ಕೂಡ ಹಿಂದೆ ಬರಲಾಗದ ಒಮ್ಮುಖ ದಾರಿಯಲ್ಲಿ ಸಿಕ್ಕಿ ಹಾಕಿಕೊಂಡಂತೆ ಕಾಣಿಸುತ್ತಿದೆ.ಉದಾಹರಣೆಗೆ ‘ಟುಕುಡೇ ಟುಕುಡೇ ಗ್ಯಾಂಗ್’ ಎಂದು ಆಪಾದಿಸಲಾಗಿದ್ದ ಬೆರಳೆಣಿಕೆಯ ಜೆಎನ್‌ಯು ವಿದ್ಯಾರ್ಥಿಗಳು ಇಂದು ಅವರನ್ನು ಹಾಗೆ ಕರೆದ ಬಿಜೆಪಿ ಬೆಂಬಲಿಗರಿಗಿಂತ ಬಹಳ ದೊಡ್ಡ ರಾಜಕೀಯ ವ್ಯಕ್ತಿಗಳಾಗಿ ಬೆಳೆದಿದ್ದಾರೆ.(ಯಾರಿಗಾದರೂ ಬಿ.ಪಿ. ಶರ್ಮಾ ಯಾರೆಂದಾದರೂ ಈಗ ನೆನಪಿದೆಯೇ?)
‘ಗೋರಕ್ಷಾ’ ಎಂಬುದರ ಮೂಲ ಉದ್ದೇಶ ಮುಸ್ಲಿಮರನ್ನು ಗುರಿಯಾಗಿಸಿ ಮಾಡುವ ಹಿಂಸೆಯಾಗಿತ್ತು. ಆದರೆ ಅದು ದಲಿತರ ಮೇಲಿನ ದಾಳಿಯಾಗಿ ಅವನತಿ ಹೊಂದಿತ್ತು. ಬೆಳೆನಾಶ ಮತ್ತು ರೈತರನ್ನು ಬೆದರಿಸಿ ಹಣಕೀಳುವ ಸಮಸ್ಯೆಯಾಗಿ ಅವಸಾನ ಕಂಡಿತು. ಇವತ್ತು ಬಹಳ ಮಂದಿ ಬಿಜೆಪಿ ನಾಯಕರೇ ಅದಕ್ಕೆ ‘ಗೋ ರಕ್ಷಾ ಪ್ರಾಜೆಕ್ಟ್’ಗೆ ಆಧ್ಯತೆ ನೀಡುತ್ತಿಲ್ಲ. ಹಾಗೆಯೇ ರಾಮಮಂದಿರ ನಿರ್ಮಾಣ ಐದು ವರ್ಷಗಳಲ್ಲಿ ಕೇವಲ ಆಶ್ವಾಸನೆಯಾಗಿಯೇ ಉಳಿದಿದೆ. ನಾಗರಿಕತ್ವ(ತಿದ್ದುಪಡಿ) ಮಸೂದೆ ಇದ್ದಲ್ಲೇ ಇದೆ. ಈ ಮಸೂದೆಗೆ ಈಗ ವ್ಯಕ್ತವಾಗಿರುವ ಪ್ರತಿಭಟನೆ ಮತ್ತು ರಾಜ್ಯಸಭೆಯಲ್ಲಿ ಈಗ ಇರುವ ರಾಜಕೀಯ ಪಕ್ಷಗಳ ಬಲಾಬಲವನ್ನು (ಸಂಖ್ಯಾಬಲವನ್ನು)ಗಮನಿಸಿದರೆ ಅದು ಅಂಗೀಕಾರವಾಗುವುದು ಸುಲಭ ಸಾಧ್ಯವಲ್ಲ ಅನ್ನಿಸುತ್ತದೆ. ಈ ಮಸೂದೆ, ಕಾಯ್ದೆಯಾಗದೆ ಒಂದು ರಾಷ್ಟ್ರವ್ಯಾಪಿ ನಾಗರಿಕರ ರಾಷ್ಟ್ರೀಯ ನೋಂದಣಿಯಿಂದ ಹಿಂದುತ್ವದ ಉದ್ದೇಶಗಳು ಈಡೇರುವುದಿಲ್ಲ.
ಕೃಪೆ: thewire

Writer - ಶಂಕರ್ ಗೋಪಾಲಕೃಷ್ಣನ್

contributor

Editor - ಶಂಕರ್ ಗೋಪಾಲಕೃಷ್ಣನ್

contributor

Similar News

ಜಗದಗಲ
ಜಗ ದಗಲ