ಕಳೆದು ಹೋದ ಸಾಲುಗಳನ್ನು ಹುಡುಕುವ ‘ಕಡೇ ನಾಲ್ಕು ಸಾಲು’

Update: 2019-05-16 18:32 GMT

ಉಮಾ ಮುಕುಂದ ಅವರ ಮೊತ್ತ ಮೊದಲ ಕವನ ಸಂಕಲನ ‘ಕಡೇ ನಾಲ್ಕು ಸಾಲು’. ಸುಮಾರು 35 ಕವಿತೆಗಳನ್ನು ಈ ಸಂಕಲನ ಒಳಗೊಂಡಿದೆ. ಸಾಮಾಜಿಕ ತಾಣಗಳಲ್ಲಿ ತಮ್ಮ ಕವಿತೆ, ಬರಹಗಳ ಮೂಲಕ ಸಕ್ರಿಯರಾಗಿರುವ ಉಮಾ ಅವರು ಇಲ್ಲಿ ಬದುಕಿನ ಸ್ವಾರಸ್ಯಗಳನ್ನು ಮೊಗೆದು ಕವಿತೆಗಳನ್ನಾಗಿಸಿದ್ದಾರೆ. ತಾಜಾತನ, ಲವಲವಿಕೆಯ ಮೂಲಕ ಇವರ ಕವಿತೆಗಳು ಓದುಗರ ಮನವನ್ನು ತಟ್ಟುತ್ತವೆ. ಫೇಸ್‌ಬುಕ್ ಬರಹಗಾರರ ಕುರಿತಂತೆ ಕೆಲವು ನಿರ್ದಿಷ್ಟ ಹಿರಿಯರು ಅಸಮಾಧಾನಗಳನ್ನು ಹೊಂದಿರುವ ಈ ಸಂದರ್ಭದಲ್ಲಿ ‘ತಾನು ಫೇಸ್‌ಬುಕ್ ಕವಿ ಎಂದು ಗುರುತಿಸಿಕೊಳ್ಳಲು ಹಿಂಜರಿಕೆಯಿಲ್ಲ’ ಎಂದು ಹೇಳುತ್ತಾರೆ. ‘ಬರಹಗಳು ಯಾವ ಮಾಧ್ಯಮದಲ್ಲಿ ಪ್ರಕಟವಾಗಿವೆ ಎನ್ನುವುದಕ್ಕಿಂದ ಅವು ಓದುಗರ ಮೇಲೆ ಏನು ಪರಿಣಾಮವನ್ನು ಉಂಟು ಮಾಡುತ್ತವೆ ಎನ್ನುವುದು ಮುಖ್ಯ’ ಇದು ಕವಯಿತ್ರಿಯ ಅಭಿಮತ.
 ಇಲ್ಲಿರುವ ಎಲ್ಲ ಕವಿತೆಗಳಿಗೂ ಪರಸ್ಪರ ಅಂತರ್ ಸಂಬಂಧವಿದೆ. ಹಿತ್ತಲನ್ನು ರೂಪಕವಾಗಿಸುತ್ತಾ, ಕಳೆಗಳನ್ನು ಕೀಳುತ್ತಾ ಹೇಗೆ ಬೆರಳುಗಳು ಪರಸ್ಪರ ಸಂಧಿಸಿ ಸಂಬಂಧವನ್ನು ಬಿಗಿ ಗೊಳಿಸುತ್ತವೆ ಎನ್ನುವುದನ್ನು ಹೇಳುತ್ತಾರೆ. ಸಂಬಂಧ ಗಟ್ಟಿಯಾಗುವುದು ಅಂಗಳದಲ್ಲಲ್ಲ, ಹಿತ್ತಲಲ್ಲಿ ಎನ್ನುವ ಭಾವ ಇಲ್ಲಿದೆ. ಕಥೆ ಮುಗಿಯುವುದಕ್ಕೆ ನಾಲ್ಕೇ ನಾಲ್ಕು ಸಾಲುಗಳಿತ್ತು. ಅಷ್ಟರಲ್ಲಿ ಬಾಗಿಲು ಬಡಿದ ಸದ್ದು. ಆ ನಾಲ್ಕು ಸಾಲುಗಳನ್ನು ಮುಗಿಸಿ ಬಾಗಿಲು ತೆರೆಯಲು ಹೋದರೆ, ಬಂದವರು ಮರಳಿಯಾಗಿತ್ತು. ಇದೀಗ ಬಾಗಿಲು ಬಡಿದವರು ಯಾರು? ಎನ್ನುವುದು ಲೇಖಕಿಯನ್ನು ಕಾಡತೊಡಗುತ್ತದೆ. ಮರಳಿ ಬಂದು ನೋಡಿದರೆ ಪೂರ್ತಿಗೊಳಿಸಿದ ನಾಲ್ಕು ಸಾಲು ಕಾಣೆಯಾಗಿತ್ತು. ಕಥನದ ರೂಪದ ಈ ಕವಿತೆಯನ್ನು ಸರಳವಾಗಿ ಹರಡುತ್ತಾ ನಮ್ಮಾಳಗೆ ಗಾಢವಾದ ಖೇದವೊಂದನ್ನು ಬಿತ್ತುತ್ತಾರೆ. ಪ್ರೇಮ ಸಂಬಂಧಗಳು, ದಾಂಪತ್ಯ, ಹೆಣ್ಣಿನ ತೊಳಲಾಟ, ಇಬ್ಬಂದಿತನ, ಅಸಹಾಯಕತೆ ಇವೆಲ್ಲವುಗಳನ್ನು ಬೇರೆ ಬೇರೆ ದಾರಿಗಳ ಮೂಲಕ ಕವಯಿತ್ರಿ ಹೇಳಲು ಪ್ರಯತ್ನಿಸುತ್ತಾರೆ. ಲೇಖಕಿಯ ಅಂತರಂಗದ ಮಾತುಗಳ ಒಂದು ಕವಿತೆಯಿಂದ ಇನ್ನೊಂದು ಕವಿತೆಗೆ ಖೋ ಕೊಡುತ್ತಾ ಹೋಗುವುದು ಇಲ್ಲಿನ ವಿಶೇಷತೆ. ಎಚ್. ಎಸ್. ರಾಘವೇಂದ್ರರಾವ್ ಮುನ್ನುಡಿಯಲ್ಲಿ ಹೇಳುವಂತೆ ‘‘....ದಾಂಪತ್ಯ ಇವರ ಕವಿತೆಯ ಮೂಲ ನೆಲೆಗಳಲ್ಲಿ ಒಂದು. ಇಲ್ಲಿ ‘ನಾವು’ ಎಂಬ ಒಂದುತನ ಇರುವಂತೆಯೇ ‘ನಾನು’ ‘ಅವನು’ ಎಂಬ ಭಿನ್ನತೆಯೂ ಅರಿವಿಗೆ ಬರುತ್ತಿರುತ್ತವೆ. ಹಳೆಯ ನೆನಪುಗಳು ಸಂಬಂಧವನ್ನು ಪೊರೆಯುವ ಜೀವದ್ರವ್ಯವೆಂಬ ತಿಳುವಳಿಕೆ ಇರುವುದರಿಂದಲೇ ‘ಕಾಫಿ-ಗೀಫಿ’ಗಳ ‘ಬಾದಾಮು ಹಲ್ವಗಳ’ ಲಾಲ್‌ಬಾಗಿನಲ್ಲಿ ತೆಗೆದ ಪೋಟೋಗಳ ಮಾತು ಬರುತ್ತದೆ....’’
 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News