ಏನಿದು ವಾಲಂಟರಿ ಪ್ರಾವಿಡೆಂಟ್ ಫಂಡ್...?
ಉದ್ಯೋಗಿಗಳು ಭವಿಷ್ಯ ನಿಧಿ ಯೋಜನೆಯಡಿ ಕಡ್ಡಾಯ ಮೊತ್ತಕ್ಕಿಂತ ಹೆಚ್ಚಿನ ವಂತಿಗೆಯನ್ನು ಸ್ವಯಂ ಇಚ್ಛೆಯಿಂದ ಸಲ್ಲಿಸಿದರೆ ಅದನ್ನು ವಾಲಂಟರಿ ಪ್ರಾವಿಡೆಂಟ್ ಫಂಡ್(ವಿಪಿಎಫ್) ಎಂದು ಕರೆಯಲಾಗುತ್ತದೆ.
ವೇತನದಾರನ ಮೂಲ ವೇತನ ಮತ್ತು ತುಟ್ಟಿಭತ್ತೆಯ ಒಟ್ಟು ಮೊತ್ತದ ಶೇ.12ರಷ್ಟು ಹಣ ನೌಕರರ ಭವಿಷ್ಯ ನಿಧಿ(ಇಪಿಎಫ್‌ಒ)ಗೆ ಆತನ ಕಡ್ಡಾಯ ವಂತಿಗೆಯಾಗಿರುತ್ತದೆ. ಶೇ.12ಕ್ಕಿಂತ ಹೆಚ್ಚಿನ ವಂತಿಗೆಯು ವಿಪಿಎಫ್ ಎಂದು ಪರಿಗಣಿಸಲಾಗುತ್ತದೆ.
ಹೆಸರೇ ಸೂಚಿಸುವಂತೆ ಇದು ವೇತನದಾರನು ಸ್ವಯಂಪ್ರೇರಿತವಾಗಿ ಸಲ್ಲಿಸುವ ಹೆಚ್ಚುವರಿ ವಂತಿಗೆಯಾಗಿದೆ ಮತ್ತು ಇದು ಕಡ್ಡಾಯವಲ್ಲ.
ವಿಪಿಎಫ್‌ನ ವೈಶಿಷ್ಟಗಳು
ವೇತನದಾರನು ತನ್ನ ಮೂಲವೇತನ ಮತ್ತು ತುಟ್ಟಿಭತ್ತೆ(ಇದ್ದರೆ)ಯ ಶೇ.100ರವರೆಗೆ ಮೊತ್ತವನ್ನು ವಿಪಿಎಫ್‌ನಲ್ಲಿ ಹೂಡಿಕೆ ಮಾಡಬಹುದು. ಇದಕ್ಕೆ ಭವಿಷ್ಯ ನಿಧಿ(ಪಿಎಫ್)ಗೆ ಸಿಗುವ ಬಡ್ಡಿಯೇ ಅನ್ವಯವಾಗುತ್ತದೆ. ವೇತನದಾರ ಒಮ್ಮೆ ವಿಪಿಎಫ್‌ಗೆ ನೋಂದಣಿ ಮಾಡಿಕೊಂಡರೆ ಐದು ಮೂಲವರ್ಷಗಳು ಪೂರ್ಣಗೊಳ್ಳುವ ಮುನ್ನ ವಂತಿಗೆ ಪಾವತಿಯನ್ನು ನಿಲ್ಲಿಸುವಂತಿಲ್ಲ ಅಥವಾ ಅಂತ್ಯಗೊಳಿಸುವಂತಿಲ್ಲ. ವಿಪಿಎಫ್‌ಗೆ ಸಲ್ಲಿಸುವ ವಂತಿಗೆಯು ಆದಾಯ ತೆರಿಗೆ ಕಾಯ್ದೆಯ 80ಸಿ ಕಲಮ್‌ನಡಿ ತೆರಿಗೆ ವಿನಾಯಿತಿಗೆ ಅರ್ಹವಾಗಿದೆ.
ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?
ವಿಪಿಎಫ್ ಇಪಿಎಫ್ ಯೋಜನೆಯ ವಿಸ್ತರಣೆಯಾಗಿರುವುದರಿಂದ ಇಪಿಎಫ್‌ಗೆ ಅರ್ಹನಾಗಿರುವ ಅಥವಾ ಈಗಾಗಲೇ ಸದಸ್ಯನಾಗಿರುವ ಯಾವುದೇ ವೇತನದಾರ ವ್ಯಕ್ತಿ ಇದಕ್ಕೆ ಸೇರಬಹುದು. ಇದಕ್ಕಾಗಿ ಆತ ತನ್ನ ಸಂಸ್ಥೆಯ ಮೂಲಕ ಇಪಿಎಫ್‌ಒಗೆ ಅರ್ಜಿ ಸಲ್ಲಿಸಬಹುದಾಗಿದೆ ಮತ್ತು ಹೆಚ್ಚುವರಿ ವಂತಿಗೆಯ ಮೊತ್ತವನ್ನು ಸ್ವಯಂ ನಿರ್ಧರಿಸಬಹುದು.
ವಿಪಿಎಫ್‌ನ ಲಾಭಗಳು
ಇಪಿಎಫ್/ವಿಪಿಎಫ್ ಸರಕಾರದ ಬೆಂಬಲವಿರುವ ಯೋಜನೆಗಳಾಗಿರುವುದರಿಂದ ಇವುಗಳಲ್ಲಿ ಹೂಡಿಕೆಯು ಅತ್ಯಂತ ಸುರಕ್ಷಿತವಾಗಿರುತ್ತದೆ ಮತ್ತು ಖಾತರಿ ಪಡಿಸಿದ ಪ್ರತಿಫಲವೂ ದೊರೆಯುತ್ತದೆ. ಖಾಸಗಿ ಕಂಪೆನಿಗಳು ಹೊಂದಿರುವ ಯಾವುದೇ ದೀರ್ಘಾವಧಿಯ ನಿವೃತ್ತಿ ಯೋಜನೆಗಳಿಗೆ ಹೋಲಿಸಿದರೆ ಇಪಿಎಫ್/ವಿಪಿಎಫ್ ಹೆಚ್ಚು ಸುರಕ್ಷಿತವಾಗಿವೆ. ಸರಕಾರದ ಯಾವುದೇ ದೀರ್ಘಾವಧಿಯ ಯೋಜನೆ ಅಥವಾ ಬ್ಯಾಂಕುಗಳ ನಿರಖು ಠೇವಣಿಗಿಂತ ಹೆಚ್ಚಿನ ಪ್ರತಿಫಲವನ್ನು ಇವು ನೀಡುತ್ತವೆ.
ತೆರಿಗೆ
ಆದಾಯ ತೆರಿಗೆ ಕಾಯ್ದೆಯ 80ಸಿ ಕಲಮ್‌ನಡಿ ಕಡಿತಕ್ಕೆ ಅರ್ಹತೆಯ ಜೊತೆಗೆ ವಿಪಿಎಫ್‌ಗೆ ಸಲ್ಲಿಸುವ ವಂತಿಗೆ, ದುಡಿದ ಪ್ರತಿಫಲ ಮತ್ತು ಪಕ್ವಗೊಂಡ ಮೊತ್ತ ಇವೆಲ್ಲವೂ ತೆರಿಗೆ ಮುಕ್ತವಾಗಿವೆ. ಕಲಂ 80 ಸಿ ಅಡಿ ತೆರಿಗೆ ವಿನಾಯಿತಿಯು ಯೋಜನೆಗೆ ಸಲ್ಲಿಸಲಾದ ಒಟ್ಟು ವಂತಿಗೆಗಳ ಮೇಲೆ ವಾರ್ಷಿಕ 1.5 ಲ.ರೂ.ಗೆ ಸೀಮಿತವಾಗಿದೆ.
ಹಿಂದೆಗೆದುಕೊಳ್ಳುವಿಕೆ
ಮನೆ ಸಾಲ ಮರುಪಾವತಿ, ಮದುವೆ, ಗಂಭೀರ ವೈದ್ಯಕೀಯ ಚಿಕಿತ್ಸೆಯಂತಹ ಅಗತ್ಯಗಳಿಗಾಗಿ ಯೋಜನೆೆಯಿಂದ ಭಾಗಶಃ ಹಣವನ್ನು ಹಿಂದೆಗೆದುಕೊಳ್ಳಬಹುದು. ಆದರೆ ಯೋಜನೆಯ ಸದಸ್ಯನಾಗಿ ಐದು ವರ್ಷಗಳನ್ನು ಪೂರೈಸುವ ಮೊದಲೇ ಹಣವನ್ನು ಹಿಂದೆಗೆದುಕೊಂಡರೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ವರ್ಗಾವಣೆ
ವ್ಯಕ್ತಿಯು ತಾನು ಕೆಲಸ ಮಾಡುತ್ತಿರುವ ಕಂಪೆನಿಯನ್ನು ಬದಲಿಸಿದರೆ ಪಿಎಫ್‌ನೊಂದಿಗೆ ವಿಪಿಎಫ್ ಖಾತೆಯನ್ನೂ ಸುಲಭವಾಗಿ ವರ್ಗಾಯಿಸಿಕೊಳ್ಳಬಹುದಾಗಿದೆ.
ಅಂದ ಹಾಗೆ ವಿಪಿಎಫ್ ವಂತಿಗೆಯನ್ನು ಹೆಚ್ಚಿಸಬಹುದಾಗಿದೆ ಅಥವಾ ಕಡಿಮೆ ಮಾಡಬಹುದಾಗಿದೆ ಮತ್ತು ಐದು ವರ್ಷಗಳ ಬಳಿಕ ಅಂತ್ಯಗೊಳಿಸಬಹುದಾಗಿದೆ.
ವಿಪಿಎಫ್‌ಗೆ ವಂತಿಗೆಯನ್ನು ಕನಿಷ್ಠ ಐದು ವರ್ಷಗಳ ಅವಧಿಗೆ ಮುಂದುವರಿಸುವ ಶಿಸ್ತುಬದ್ಧತೆ ನಿಮ್ಮಲ್ಲಿದ್ದರೆ ನೀವು ಅದರಲ್ಲಿ ಹೂಡಿಕೆ ಮಾಡಬಹುದು.