ರಾಷ್ಟ್ರೀಯವಾದದ ವಿರುದ್ಧ ಧ್ವನಿಯೆತ್ತಿದ್ದ ಟಾಗೋರ್

Update: 2019-05-18 17:58 GMT

ನೂರು ವರ್ಷಗಳಿಗೂ ಹಿಂದೆ ಬರೆದ ಲೇಖನವೊಂದರಲ್ಲಿ ಟಾಗೋರ್ ಅವರು 2017ರ ಭಾರತ ದೇಶದ ರಾಜಕಾರಣಿಗಳ ವಾಸ್ತವ ಚಿತ್ರಣವನ್ನು ಪ್ರತಿಬಿಂಬಿಸಿದ್ದರು. ‘‘ರಾಷ್ಟ್ರವೆಂಬ ಚಿಂತನೆಯು, ಮನುಷ್ಯನು ಸಂಶೋಧಿಸಿದ ಅತ್ಯಂತ ಶಕ್ತಿಶಾಲಿಯಾದ ಮಂಪರು ಔಷಧಿ ಯಾಗಿದೆ. ಅದರ ಪ್ರಭಾವದಿಂದಾಗಿ ಎಲ್ಲಾ ಜನರು ನೈತಿಕತೆಯ ಕನಿಷ್ಠ ಅರಿವೂ ಇಲ್ಲದೆ ಅತ್ಯಂತ ವಿಷಪೂರಿತವಾದ ಸ್ವಯಂಪ್ರೇರಿತ ಕೃತ್ಯಗಳಲ್ಲಿ ನಿರತವಾಗುತ್ತಾರೆ’’ ಎಂದವರು ಹೇಳಿದ್ದರು.

ನೊಬೆಲ್ ಪುರಸ್ಕೃತ ಕವಿ-ಸಾಹಿತಿ ರವೀಂದ್ರನಾಥ್ ಟಾಗೋರ್ ಅವರ ಪ್ರಮುಖ ಕೃತಿ ‘ನ್ಯಾಶನಲಿಸಂ’ (ರಾಷ್ಟ್ರೀಯವಾದ) ಅನ್ನು ನೂರು ವರ್ಷಗಳ ಹಿಂದೆ, ಅಂದರೆ 1917ರಲ್ಲಿ ಅಮೆರಿಕದ ನ್ಯೂಯಾರ್ಕ್‌ನಗರದಲ್ಲಿರುವ ಮ್ಯಾಕ್‌ಮಿಲನ್ ಪ್ರಕಾಶನ ಸಂಸ್ಥೆ ಪ್ರಕಟಿಸಿತು. ಈ ಕೃತಿ ಪ್ರಕಟಣೆಗೊಂಡು ನೂರು ವರ್ಷಗಳಾದ ಬಳಿಕವೂ, ಭಾರತದ ಮಟ್ಟಿಗೆ ಈ ಪುಸ್ತಕವು ಎಲ್ಲಾ ರೀತಿಯ ಸಮಕಾಲೀನತೆಯನ್ನು ಹೊಂದಿದೆ. ‘ನ್ಯಾಶನಲಿಸಂ’ ಕೃತಿಯನ್ನು ಸ್ವತಃ ಟಾಗೋರ್ ಅವರೇ ಬಂಗಾಳಿ ಭಾಷೆಯಿಂದ ಇಂಗ್ಲಿಷ್‌ಗೆ ಭಾಷಾಂತರಿಸಿದ್ದರು. ಮೊದಲನೇ ಸಂಪುಟವು 1916ರಲ್ಲಿ ಅವರು ನೀಡಿದ ಮೂರು ಉಪನ್ಯಾಸಗಳನ್ನು ಒಳಗೊಂಡಿತ್ತು.

ಈ ಪುಸ್ತಕದ 1992ರ ಸಂಪುಟದಲ್ಲಿ ರೂಪಾ ದಿಲ್ಲಿಯ ನೂತನ ಆವೃತ್ತಿಯನ್ನು ಇ.ಪಿ. ಥಾಂಪ್ಸನ್ ಸಂಪಾದಿಸಿದ್ದರು ಹಾಗೂ ಅದು ಟಾಗೋರ್‌ರ ನೈವೇದ್ಯ ಎಂಬ ಕವನಸಂಕಲನವನ್ನು ಒಳಗೊಂಡಿತ್ತು.

ಈ ವಿಷಯವನ್ನು 2017ರ ಸಂಪುಟದ ಸಂಪಾದಕರಾದ ನಿರ್ಮಲ್ ಕಾಂತಿ ಭಟ್ಟಾಚಾರ್ಯ ಅವರು ತನ್ನ ಪ್ರಸ್ತಾವನೆಯಲ್ಲಿ ವಿವರಿಸಿದ್ದರು. ಆದರೆ ಅದನ್ನು ಈ ಸಂಪುಟದಿಂದ ತೆಗೆದುಹಾಕಿರುವುದಾಗಿ ಭಟ್ಟಾ ಚಾರ್ಯ ಅವರು ಯಾವುದೇ ವಿವರಣೆಯನ್ನು ನೀಡದೆ ತಿಳಿಸಿದ್ದರು.

ಟಾಗೋರ್ ಅವರು ಈ ಪುಸ್ತಕದ 1917ರ ಆವೃತ್ತಿಯನ್ನು ಆಗಿನ ಅಮೆರಿಕ ಅಧ್ಯಕ್ಷ ವುಡ್ರೊ ವಿಲ್ಸನ್ ಅವರಿಗೆ ಸಮರ್ಪಿಸಲು ಬಯಸಿದ್ದರು. ಅದಕ್ಕೆ ಅವಕಾಶ ದೊರೆಯಲಿಲ್ಲ.ಆದರೆ ಅಮೆರಿಕದಲ್ಲಿ ಭಾರತೀಯ ಕ್ರಾಂತಿಕಾರಿಗಳು ಹೂಡಿದ್ದ ಬ್ರಿಟಿಷ್ ವಿರೋಧಿ ಸಂಚು ಗಳಲ್ಲಿ ಟಾಗೋರ್ ಶಾಮೀಲಾಗಿದ್ದಾರೆಂಬ ಶಂಕೆ ಉದ್ಭವಿಸಿದ್ದ ಹಿನ್ನೆಲೆಯಲ್ಲಿ ಅವರಿಗೆ ಈ ಅವಕಾಶ ತಪ್ಪಿತೆನ್ನಲಾಗಿದೆ. ಸಹಜವಾಗಿ ಸೃಷ್ಟಿಯಾದ ಮಾನವ ಸಮಾಜವು, ತಥಾಕಥಿತ ಕೃತಕವಾಗಿ ಸೃಷ್ಟಿಯಾದ ರಾಷ್ಟ್ರೀಯತ್ವಕ್ಕಿಂತ ಹೆಚ್ಚು ಮಾನವೀಯತೆಯನ್ನು ಹೊಂದಿದೆಯೆಂಬ ಸ್ಪಷ್ಟ ಧೋರಣೆಯನ್ನು ಟಾಗೋರ್ ಹೊಂದಿದ್ದರು.

ಭಟ್ಟಾಚಾರ್ಯ ಅವರ ಪ್ರಕಾರ, ಟಾಗೋರ್ ಅವರು ಪಾಶ್ಚಾತ್ಯ ಗ್ರಹಿಕೆಯ ‘ರಾಷ್ಟ್ರೀಯವಾದ’ ಎಂಬ ಪರಿಕಲ್ಪನೆಯನ್ನು ತಿರಸ್ಕರಿಸಿದ್ದರು. ಈ ಪುಸ್ತಕವು ಟಾಗೋರ್ ಅವರ ‘ನ್ಯಾಶನಲಿಸಂ ಇನ್ ದಿ ವೆಸ್ಟ್’ (ಪಶ್ಚಿಮದಲ್ಲಿ ರಾಷ್ಟ್ರೀಯವಾದ), ‘ನ್ಯಾಶನಲಿಸಂ ಇನ್ ಜಪಾನ್’ (ಜಪಾನ್‌ನಲ್ಲಿ ರಾಷ್ಟ್ರೀಯ ವಾದ) ಹಾಗೂ ಮೂರನೇ ಹಾಗೂ ಅಂತಿಮವಾಗಿ, ‘ನ್ಯಾಶನಲಿಸಂ ಇನ್ ಇಂಡಿಯಾ’ (ಭಾರತದಲ್ಲಿ ರಾಷ್ಟ್ರೀಯವಾದ) ಈ ಮೂರು ಉಪನ್ಯಾಸಗಳನ್ನು ಒಳಗೊಂಡಿದೆ.

ಈ ಸಂಪುಟವು ಟಾಗೋರ್ ಅವರು ಕಳೆದ ಶತಮಾನದ ಕೊನೆಯ ದಿನ ಅಂದರೆ 1900ನೇ ಇಸವಿಯ ಮುನ್ನಾದಿನ ಅಥವಾ 1899ರ ಸಂಜೆಯಂದು ಬರೆದಿದ್ದಂತಹ ‘ಶತಮಾನದ ಸೂರ್ಯಾಸ್ತ’ ಕವನದೊಂದಿಗೆ ಕೊನೆಗೊಳ್ಳುತ್ತದೆ. 1916ರ ಮೇ ತಿಂಗಳಿನಿಂದ ಸೆಪ್ಟ್ಟಂಬರ್ ತಿಂಗಳವರೆಗೆ ನೀಡಿದ್ದ ಉಪನ್ಯಾಸಗಳನ್ನು ಒಳಗೊಂಡಿದೆ. ಟಾಗೋರ್ ಅವರ ತನ್ನ ಮೊದಲನೇ ಉಪನ್ಯಾಸದಲ್ಲಿ,‘‘ನಾವು ನಾವಾಗಿಯೇ ಒಂದು ದೇಶವಾಗಿ ಉಳಿದಿಲ್ಲ’’ ಎಂದು ದಿಟ್ಟತನದಿಂದ ಘೋಷಿಸಿದ್ದರು. ರಾಷ್ಟ್ರದ ಕುರಿತಾದ ಪಾಶ್ಚಾತ್ಯ ಪರಿಕಲ್ಪನೆಯನ್ನು ಅವರು ಪ್ರಶ್ನಿಸಿದ್ದರು. ಪಾಶ್ಚಾತ್ಯರ ಗ್ರಹಿಕೆಯಲ್ಲಿ ರಾಷ್ಟ್ರವೆಂದರೆ ಜನತೆಯ ರಾಜಕೀಯ ಹಾಗೂ ಆರ್ಥಿಕ ಒಕ್ಕೂಟವಾಗಿದೆ.

ತಥಾಕಥಿತವಾಗಿ ಸೃಷ್ಟಿಯಾದ ರಾಷ್ಟ್ರೀಯತ್ವಕ್ಕಿಂತ ಸಹಜವಾಗಿ ನಿರ್ಮಾಣವಾದ ಮಾನವ ಸಮಾಜವು ಹೆಚ್ಚು ಸತ್ವಯುತವಾದ ಮಾನವೀಯತೆಯನ್ನು ಒಳಗೊಂಡಿರುತ್ತದೆ. ಎಲ್ಲಾ ರಾಷ್ಟ್ರೀಯ ಇತಿಹಾಸಗಳು ಕೇವಲ ದೊಡ್ಡದಾದ ಅಧ್ಯಾಯಗಳಷ್ಟೇ ಆಗಿವೆ. ಭಾರತವು ಕೂಡಾ ಇದೇ ಉದ್ದೇಶದಿಂದ ಬಾಧಿತವಾಗಿದೆ.

ಪ್ರಸಕ್ತ ಕಾಲದ ರಾಷ್ಟ್ರೀಯತ್ವವನ್ನು ಕೆಟ್ಟದೆಂದೇ ಟಾಗೋರ್ ಪರಿಗಣಿಸಿದ್ದರು. ರಾಷ್ಟ್ರವೆಂಬ ಇನ್ನೊಂದು ಹೆಸರಿರುವ ಈ ರಾಜಕೀಯ ಹಾಗೂ ವಾಣಿಜ್ಯ ಸಂಘಟನೆಯು, ಉನ್ನತ ಸಾಮಾಜಿಕ ಬದುಕಿನ ಸೌಹಾರ್ದವನ್ನು ಬಲಿಗೊಟ್ಟು ಹೆಚ್ಚು ಶಕ್ತಿಯುತವಾದಲ್ಲಿ, ಆಗ ಅದು ಮಾನವೀಯತೆಗೆ ಕೆಡುಕಿನ ದಿನವಾಗಲಿದೆ ಎಂದು ಟಾಗೋರ್ ಪ್ರತಿಪಾದಿಸಿದ್ದರು. ರಾಷ್ಟ್ರೀಯವಾದವು ಹಾಲಿ ಯುಗದಲ್ಲಿ ಜಗತ್ತನ್ನು ಅದರ ನೈತಿಕ ಶಕ್ತಿಯನ್ನೇ ಕಬಳಿಸುತ್ತಾ ವ್ಯಾಪಿಸುತ್ತಿರುವ ಕೆಟ್ಟ ಪಿಡುಗಾಗಿದೆ ಎಂದವರು ಉಪನ್ಯಾಸದಲ್ಲಿ ಅಭಿಪ್ರಾಯಿಸಿದ್ದು.

ಈ ಉಪನ್ಯಾಸಗಳನ್ನು ನೀಡಿದ ಸಮಯದಲ್ಲಿ ಒಂದನೇ ಜಾಗತಿಕ ಯುದ್ಧ ಮುಗಿದಿತ್ತು ಹಾಗೂ ಎರಡನೇ ಜಾಗತಿಕ ಯುದ್ಧಕ್ಕೆ ನಾಂದಿ ಹಾಡಲಾಗಿತ್ತು. 1939-45ರ ಅವಧಿಯಲ್ಲಿ 1 ಕೋಟಿಗೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಹಿಟ್ಲರ್ ಹಾಗೂ ಮುಸ್ಸೋಲಿನಿಯ ಅತಿರೇಕದ ರಾಷ್ಟ್ರೀಯತಾವಾದವು ಗಮನಕ್ಕೆ ಬಂದಿತ್ತು. ಈ ಕಾರಣಕ್ಕಾಗಿಯೇ ಟಾಗೋರ್ ಅವರು ರಾಷ್ಟ್ರೀಯತಾವಾದವನ್ನು ಒಂದು ‘ಕೆಟ್ಟ ಪಿಡುಗು’ ಎಂಬುದಾಗಿ ಎಚ್ಚರಿಕೆ ನೀಡಿದ್ದರು. ಅದೇ ಉಸಿರಿನಲ್ಲಿ ಈ ಸಾಮಾಜಿಕ ಚಿಂತಕ-ಕವಿಯು ಈ ರಾಷ್ಟ್ರೀಯ ವಾದದ ದುಷ್ಟಪಿಡುಗಿನ ವಿರುದ್ಧ ಎಚ್ಚರಿಕೆ ನೀಡಿದ್ದರು. ‘‘ರಾಷ್ಟ್ರೀಯತಾವಾದವು, ರಾಷ್ಟ್ರದ ಅತಿ ದೊಡ್ಡ ಶತ್ರುವಾಗಿದೆ’’ ಎಂದವರು ಹೇಳಿದ್ದರು. 1947ರಲ್ಲಿ ಪಾಕಿಸ್ತಾನದ ಜನನ ಹಾಗೂ 1971ರಲ್ಲಿ ಬಾಂಗ್ಲಾ ವಿಮೋಚನೆಗೆ ಟಾಗೋರ್ ಕಾಣರವಲ್ಲವಾದರೂ, ಅಂತಹ ಪರಿಣಾಮಗಳು ಉಂಟಾಗುವುದನ್ನು ಅವರು ಮುಂಚಿತವಾಗಿಯೇ ಅರಿತಿದ್ದರು. ದುರದೃಷ್ಟವಶಾತ್ ಈ ಎರಡು ವಿದ್ಯಮಾನಗಳು ರಾಷ್ಟ್ರೀಯತಾವಾದದ ಕುರಿತು ಅವರು ವ್ಯಕ್ತಪಡಿಸಿದ ಭೀತಿಗಳು ಸತ್ಯವಾದುದೆಂದು ಸಾಬೀತುಪಡಿಸಿದವು.

ನೂರು ವರ್ಷಗಳಿಗೂ ಹಿಂದೆ ಬರೆದ ಲೇಖನವೊಂದರಲ್ಲಿ ಟಾಗೋರ್ ಅವರು 2017ರ ಭಾರತದ ದೇಶದ ರಾಜಕಾರಣಿ ಗಳ ವಾಸ್ತವ ಚಿತ್ರಣವನ್ನು ಪ್ರತಿಬಿಂಬಿಸಿದ್ದರು. ‘‘ರಾಷ್ಟ್ರವೆಂಬ ಚಿಂತನೆಯು, ಮನುಷ್ಯನು ಸಂಶೋಧಿಸಿದ ಅತ್ಯಂತ ಶಕ್ತಿಶಾಲಿ ಯಾದ ಮಂಪರು ಔಷಧಿಯಾಗಿದೆ. ಅದರ ಪ್ರಭಾವದಿಂದಾಗಿ ಎಲ್ಲಾ ಜನರು ನೈತಿಕತೆಯ ಕನಿಷ್ಠ ಅರಿವೂ ಇಲ್ಲದೆ ಅತ್ಯಂತ ವಿಷಪೂರಿತವಾದ ಸ್ವಯಂಪ್ರೇರಿತ ಕೃತ್ಯಗಳಲ್ಲಿ ನಿರತವಾಗುತ್ತಾರೆ’’ ಎಂದವರು ಲೇಖನದಲ್ಲಿ ಹೇಳಿದ್ದರು.

ಪ್ರಸಕ್ತ ಕಾಲದ ಭಾರತದಲ್ಲಿನ ಗೋರಕ್ಷಕರ ಹಾಗೂ ಭಾರತ್ ಮಾತಾ ಕೀ ಜೈ ಬ್ರಿಗೇಡ್‌ಗಳ ದುಂಡಾವರ್ತನೆಗಳಿಗೆ ಟಾಗೋರ್ ಅವರ ಈ ಮಾತುಗಳು ಚೆನ್ನಾಗಿ ಹೊಂದಿಕೆಯಾಗುತ್ತವೆ.

ಟಾಗೋರ್ ಅವರು ರಾಜಕೀಯ ರಾಷ್ಟ್ರದ ಪರಿಕಲ್ಪನೆಯನ್ನೇ ಪ್ರಶ್ನಿಸಿದ್ದಾರೆ. ಒಂದು ವೇಳೆ ಮನಸ್ಸಿಗೆ ಸ್ವಾತಂತ್ರವನ್ನು ತಾರದೆ ಇದ್ದಲ್ಲಿ ರಾಜಕೀಯ ಸ್ವಾತಂತ್ರವು ನಮಗೆ ವಿಮೋಚನೆಯನ್ನು ತರಲಾರದು ಎಂಬುದಾಗಿ ಅವರು ಅಭಿಪ್ರಾಯಿಸಿದ್ದರು.

ಬ್ರಿಟನ್ ರಾಷ್ಟ್ರದ ಉದಾಹರಣೆಯನ್ನು ತೆಗೆದುಕೊಂಡ ಅವರು, ಆ ದೇಶದ ಸರಕಾರವು ತನ್ನ ಇಡೀ ಜನತೆಯ ಸ್ವಹಿತಾಸಕ್ತಿಯನ್ನು ಸಂಘಟಿಸಿತ್ತು. ಅಲ್ಲಿ ಮಾನವೀಯತೆ ಹಾಗೂ ಆಧ್ಯಾತ್ಮಿಕತೆ ಅತ್ಯಂತ ಕನಿಷ್ಠವಾದುದಾಗಿತ್ತು ಎಂದವರು ಅಭಿಪ್ರಾಯಿಸಿದ್ದರು.

ಜಗತ್ತಿನ ಮಾನವಕುಲಕ್ಕೆ ರಾಷ್ಟ್ರೀಯತಾವಾದ ಬೇಕೇ ಅಥವಾ ಮಾನವೀಯತಾವಾದ ಬೇಕೇ ಎಂಬ ಮೂಲಭೂತವಾದ ಪ್ರಶ್ನೆಯೊಂದನ್ನು ಟಾಗೋರ್ ಎತ್ತಿದ್ದರು. ನಾಗರಿಕತೆಯ ಇತಿಹಾಸದಲ್ಲಿ ‘ರಾಷ್ಟ್ರೀಯತಾವಾದ’ದ ಪರಿಕಲ್ಪನೆಯೇ ಇಲ್ಲದಿರುವಾಗಲೂ ಮಾನವೀಯತೆಯು, ಬರ್ಬರತೆಯಿಂದ ಹಿಡಿದು ಸಾಂಸ್ಕೃತಿಕ ಜೀವನ ವೌಲ್ಯಗಳ ವಿವಿಧ ಹಂತಗಳನ್ನು ದಾಟಿ ಹೋಗಿತ್ತು’’ಎಂದು ಟಾಗೋರ್ ಅಭಿಪ್ರಾಯಿಸಿದ್ದರು. ರಾಷ್ಟ್ರೀಯವಾದ ಹಾಗೂ ಜನಾಂಗೀಯ ಪರಿಶುದ್ಧತೆಯ ಹೆಸರಿನಲ್ಲಿ ಮಾನವೀಯತೆಯು ಎರಡು ಜಾಗತಿಕ ಯುದ್ಧಗಳಿಂದ ಯಾತನೆ ಗೊಳಗಾಗಿತ್ತು . 1947ರಲ್ಲಿ ಭಾರತದ ವಿಭಜನೆ ಹಾಗೂ ಪಾಕಿಸ್ತಾನದ ರಚನೆಯೊಂದಿಗೆ 10 ಲಕ್ಷಕ್ಕೂ ಅಧಿಕ ಮಂದಿಯ ಹತ್ಯೆಗಳಿಂದ ದಕ್ಷಿಣ ಏಶ್ಯಾ ಬಾಧಿತವಾಯಿತು ಮತ್ತು 1 ಕೋಟಿಗೂ ಅಧಿಕ ಮಂದಿ ನಿರಾಶ್ರಿತರು ಹೇಳಲು ಸಾಧ್ಯವಿಲ್ಲದಂತಹ ಸ್ಥಳಾಂತರದ ತೊಂದರೆಗಳನ್ನು ಅನುಭವಿಸಿದರು ಎಂದವರು ಹೇಳಿದ್ದರು.

ತನ್ನ ಎರಡನೇ ಪ್ರಬಂಧ ‘ಜಪಾನ್‌ನಲ್ಲಿ ರಾಷ್ಟ್ರೀಯತಾವಾದ’ದಲ್ಲಿ ಟಾಗೋರ್ ಅವರು ಜಪಾನ್‌ನ ರಾಷ್ಟ್ರೀಯವಾದಕ್ಕಿಂತಲೂ ಹೆಚ್ಚಾಗಿ ಅದರ ಪುರಾತನ ಸಂಸ್ಕೃತಿಯ ಬಗ್ಗೆ ಹೆಚ್ಚು ಒತ್ತು ನೀಡಿದ್ದರು.

 ಈ ಉಪನ್ಯಾಸದಲ್ಲಿ ಟಾಗೋರ್ ಅವರು ವಿಜ್ಞಾನ ಹಾಗೂ ಆಧುನೀಕತೆ ಕುರಿತ ಐರೋಪ್ಯ ವೌಲ್ಯಗಳನ್ನು ಪ್ರಶ್ನಿಸಿದ್ದಾರೆ. ‘‘ ನಿಜವಾದ ಆಧುನೀಕರಣವು ಮನಸ್ಸಿನ ಸ್ವಾತಂತ್ರವಾಗಿದೆಯೇ ಹೊರತು ಅಭಿರುಚಿಯ ಗುಲಾಮಗಿರಿಯಲ್ಲ. ಅದು ಕೃತಿ ಹಾಗೂ ಚಿಂತನೆಯಿಂದ ಸ್ವತಂತ್ರವಾಗಿದೆಯೇ ಹೊರತು ಯುರೋಪಿಯನ್ ಶಾಲಾ ಶಿಕ್ಷಕರ ಬೋಧನೆಯಂತಲ್ಲ. ಅದೊಂದು ವಿಜ್ಞಾನವಾಗಿದೆ ಆದರೆ ಅದನ್ನು ಜೀವನದಲ್ಲಿ ತಪ್ಪಾಗಿ ಅಳವಡಿಸಿಕೊಳ್ಳಲಾಗಿದೆ ’’ ಎಂದವರು ಹೇಳಿದ್ದರು.

ಭಾರತದಲ್ಲಿ ರಾಷ್ಟ್ರೀಯತೆ ಕುರಿತ ತನ್ನ ಮೂರನೇ ಉಪನ್ಯಾಸದಲ್ಲಿ ಟಾಗೋರ್ ಅವರು ಭಾರತ ಎದುರಿಸುತ್ತಿರುವ ಸಮಸ್ಯೆಯು ರಾಜಕೀಯವಾದುದಲ್ಲ, ಬದಲಿಗೆ ಸಾಮಾಜಿಕವಾದುದು ಎಂದು ಹೇಳಿದ್ದರು. ಟಾಗೋರ್ ಅವರು ರಾಷ್ಟ್ರೀಯ ಇತಿಹಾಸ ಎಂಬ ಚಿಂತನೆಯನ್ನು ಕೂಡಾ ತಿರಸ್ಕರಿಸಿದ್ದರು. ಇರುವುದು ಒಂದೇ ಒಂದು ಇತಿಹಾಸ. ಅದುವೇ ಮಾನವನ ಇತಿಹಾಸವಾಗಿದೆ’’ ಎಂದವರು ಅಭಿಪ್ರಾಯಿಸಿದ್ದರು.

ಭಾರತೀಯ ಪರಿಕಲ್ಪನೆಯಲ್ಲೂ, ಟಾಗೋರ್ ಅವರು ಅತಿರೇಕದ ರಾಷ್ಟ್ರೀಯವಾದವನ್ನು ಖಂಡಿಸಿದ್ದರು. ‘‘ರಾಷ್ಟ್ರೀಯವಾದವು ಒಂದು ದೊಡ್ಡ ಪಿಡುಗಾಗಿದೆ. ಅದು ಭಾರತದ ಎಲ್ಲಾ ಸಂಕಷ್ಟಗಳ ತಳಹದಿಯಾಗಿದೆ. ತನ್ನ ಪ್ರವೃತ್ತಿಯಲ್ಲಿ ಕಟ್ಟಾ ರಾಜಕೀಯವನ್ನು ಮೈಗೂಡಿಸಿಕೊಂಡಿರುವ ದೇಶದಿಂದ ಆಳಲ್ಪಡುತ್ತಿರುವ ಹೊರತಾಗಿಯೂ ನಾವು ನಾವಾಗಿಯೇ ಬೆಳವಣಿಗೆ ಹೊಂದಲು ಪ್ರಯತ್ನಿಸಿದೆವು’’ ಎಂದವರು ಹೇಳಿದ್ದರು.

ರಾಷ್ಟ್ರೀಯವಾದದ ಕುರಿತಾಗಿ ಟಾಗೋರ್‌ರ ಕೃತಿಯು ದಿಟ್ಟ, ವೈಚಾರಿಕ ಹಾಗೂ ಮಾನವೀಯ ದೃಷ್ಟಿಕೋನದಿಂದ ಕೂಡಿದ್ದಾಗಿದೆ. ಟಾಗೋರ್ ಎಚ್ಚರಿಕೆ ನೀಡಿದ್ದಂತಹ ರಾಷ್ಟ್ರೀಯವಾದವೆಂಬ ‘ಪಿಡುಗಿನಿಂದ’ ಪ್ರಸಕ್ತ ಡೊನಾಲ್ಡ್ ಟ್ರಂಪ್ ಕೈಕೆಳಗೆ ಅಮೆರಿಕ, ರೆಸೆಪ್ ಎರ್ದೊಗಾನ್ ಆಳ್ವಿಕೆಯಲ್ಲಿ ಟರ್ಕಿ ಹಾಗೂ ಮೋದಿ ಆಡಳಿತದಲ್ಲಿ ಭಾರತವು ಯಾತನೆಗೀಡಾಗಿವೆ.

ರಾಷ್ಟ್ರೀಯವಾದವೆಂಬ ಅತ್ಯಂತ ಶಕ್ತಿಶಾಲಿ ಮಂಪರು ಔಷಧಿ ಯಿಂದ ಉಂಟಾಗಿರುವ ಗಾಢನಿದ್ದೆಯಿಂದ ಈ ದೇಶಗಳ ಹಾಗೂ ಜಗತ್ತಿನ ಜನತೆ ಯಾವಾಗ ಎಚ್ಚೆತ್ತುಕೊಳ್ಳುವರು ಎಂಬುದನ್ನು ಊಹಿಸುವುದು ಕಷ್ಟ. ಆದರೆ ಇಂತಹ ಮಂಪರು ಔಷಧಿಗೆ ‘ರಾಷ್ಟ್ರೀಯವಾದ’ ಕುರಿತಾದ ಟಾಗೋರ್ ಅವರು ಈ ಪುಟ್ಟ ಪುಸ್ತಕವು ಅತ್ಯಂತ ಶಕ್ತಿಶಾಲಿ ಪ್ರತಿ ಔಷಧಿಯಾಗಿದೆ.

Writer - ಪ್ರೊ. ಚಮನ್‌ಲಾಲ್

contributor

Editor - ಪ್ರೊ. ಚಮನ್‌ಲಾಲ್

contributor

Similar News