ಶಾಲೆಯ ಪುನರಾರಂಭದಲ್ಲಿ

Update: 2019-05-19 09:57 GMT

 ಒಳ್ಳೆಯ ಆರಂಭ

ಯಾವುದೇ ಕೆಲಸವನ್ನು ಸರಿಯಾಗಿ ಪ್ರಾರಂಭಿಸಿದರೆ ಅದು ಅರ್ಧ ಮುಗಿದಂತೆಯೇ ಎಂಬ ಮಾತಿದೆ. ಅದು ಶಾಲೆಯ ವಿಷಯದಲ್ಲಿಯೂ ಕೂಡಾ ಸರಿಯೇ. ಶಾಲೆಯ ಆಡಳಿತ ಮಂಡಳಿಯು ಯಾವುದೇ ತನ್ನ ಆಂತರಿಕ ನಿಯಮಗಳನ್ನು ಹೊಂದಿದ್ದರೂ ಕೂಡಾ ತರಗತಿಯಲ್ಲಿ ಪಾಠ ಮಾಡುವ ಶಿಕ್ಷಕರಿಗೆ ತಮ್ಮ ತರಗತಿಯ ನಿರ್ವಹಣೆಯಲ್ಲಿ ಕರ್ತವ್ಯ ಮತ್ತು ಅಧಿಕಾರವಿರುತ್ತದೆ. ತಮ್ಮ ಆಸಕ್ತಿ ಮತ್ತು ಶ್ರದ್ಧೆಗೆ ಅನುಗುಣವಾಗಿ ತಮ್ಮದೇ ಆದಂತಹ ಕೆಲವು ರೂಪುರೇಶೆಗಳನ್ನು ನಿರ್ಮಿಸಿಕೊಳ್ಳಬಹುದು.

ಶಿಕ್ಷಕರು ತಮ್ಮ ತರಗತಿಯಲ್ಲಿ ಮಾಡುವ ಪಾಠಗಳನ್ನು ಮತ್ತು ಪಾಠ ಮಾಡುವ ವಿಧಾನಗಳನ್ನು ಕುರಿತಾಗಿ ಪ್ರಾರಂಭದಲ್ಲಿಯೇ ಪಾಠ ಯೋಜನೆ (ಲೆಸನ್ ಪ್ಲಾನ್)ಗಳನ್ನು ಮಾಡಿಕೊಳ್ಳುವುದರಿಂದ ಒಂದು ಸಮಗ್ರ ಚಿತ್ರಣವು ಸಿಗುವುದು.

ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ವಿಷಯದಲ್ಲಿ

1.ಮಕ್ಕಳು ಶಾಲೆಗೆ ಬಂದಾಗ ಅವರನ್ನು ಉತ್ಸಾಹದಿಂದ ಮತ್ತು ಸಂತೋಷದಿಂದ ಎದುರುಗೊಳ್ಳಬೇಕು. ಹೃತ್ಪೂರ್ವಕವಾಗಿ ಸ್ವಾಗತಿಸಬೇಕು. ಹ್ಯಾಂಡ್ ಅಥವಾ ಫಿಂಗರ್ ಪಪೆಟ್‌ಗಳನ್ನು ತೋರಿಸಿ ಅವರನ್ನು ನಲಿಸುವುದು.

2.ಹಾಗೆ ಸ್ವಾಗತಿಸುವಾಗ ಅವರಿಗೆ ಬಲೂನ್, ಹೂವು, ಆಟಿಕೆ ಇತ್ಯಾದಿಗಳನ್ನು ನೀಡಿ ಸ್ವಾಗತಿಸುವುದು ಹೆಚ್ಚು ಸ್ವಾಗತಾರ್ಹ.

3.ಮಕ್ಕಳು ಶಾಲೆಗೆ ಬಂದಾದ ಮೇಲೆ ಕನಿಷ್ಠಪಕ್ಷ ಒಂದು ವಾರ ಅವರಿಗೆ ಪಠ್ಯಕ್ರಮದಿಂದ ಏನೂ ಬೋಧಿಸಬಾರದು. ಅವರು ಆಟಗಳನ್ನು ಆಡಲು ಬಿಡಬೇಕು. ಅವರು ಸ್ವಯಿಚ್ಛೆಯಿಂದ ಕೆಲಸಗಳನ್ನು ಮಾಡಲು ಬಿಡಬೇಕು. ಇದರಿಂದ ಶಿಕ್ಷಕರಿಗೆ ಮಕ್ಕಳ ಆಸಕ್ತಿ, ಅವರ ಇಷ್ಟ ಕಷ್ಟಗಳು ತಿಳಿಯುವುದಲ್ಲದೇ, ವರ್ತನೆಗಳು ಮತ್ತು ನಡವಳಿಕೆಗಳು ಮಗುವಿನಿಂದ ಮಗುವಿಗೆ ವ್ಯತ್ಯಾಸ ಇರುವುದರಿಂದ ಅವರನ್ನು ನಿಭಾಯಿಸಲು ಕೆಲವಾರು ಬಗೆಯ ತಂತ್ರಗಳನ್ನು ಯೋಜಿಸಲು ಸಾಧ್ಯವಾಗುವುದು.

4.ಈ ಒಂದು ವಾರದ ಅವಧಿಯಲ್ಲಿ ಶಿಕ್ಷಕರು ಮಕ್ಕಳಲ್ಲಿ ಹಲವಾರು ವಿಷಯಗಳನ್ನು ಗಮನಿಸಲು ಸಾಧ್ಯವಾಗುವುದು. ಹಾಗಾಗಿ ಶುಚಿತ್ವ, ಅಚ್ಚುಕಟ್ಟುತನ, ನಡೆದುಕೊಳ್ಳಬೇಕಾದ ರೀತಿ ನೀತಿಗಳನ್ನು ತಿಳಿ ಹೇಳಲು ಸಾಧ್ಯವಾಗುವುದಲ್ಲದೇ, ಪೋಷಕರಿಗೂ ಕೂಡಾ ಮಗುವಿನ ಕುರಿತಾಗಿ ಮತ್ತು ಶಾಲೆಯ ಚಟುವಟಿಕೆಗಳಿಗೆ ಪೂರಕವಾಗಿ ಕೆಲವು ಸಲಹೆ ಸೂಚನೆಗಳನ್ನು ನೀಡಲು ಸಾಧ್ಯವಾಗುವುದು.

5.ಮಗುವು ಶಾಲೆಯಿಂದ ಮನೆಗೆ ಹೋಗುವಾಗ ಕೈಯಿಂದ ಮಾಡಿರುವಂತಹ ಕಾಗದದ ಅಥವಾ ರಟ್ಟಿನ ಆಟಿಕೆಗಳನ್ನೋ, ಚಾಕೊಲೆಟ್‌ಗಳನ್ನೋ, ಬಲೂನ್ ಅಥವಾ ಇನ್ನೇನಾದರೂ ಅಂತಹ ಆಕರ್ಷಕವಸ್ತುಗಳನ್ನೋ ಮಗುವಿಗೆ ಕೊಡಬೇಕು (ಟೇಕ್ ಅವೇಸ್). ಇದೊಂದು ರೀತಿಯ ಪ್ರಲೋಭನೆಯಾದರೂ ಕೂಡಾ ಮಗುವು ಮತ್ತೆ ಮರುದಿನ ಶಾಲೆಗೆ ಬರುವ ಉತ್ಸಾಹವನ್ನು ತೋರುವುದು. ಒಂದಷ್ಟು ಕಾಲ ಹೀಗಾದರೆ, ಶಾಲೆಯ ಮತ್ತು ಶಿಕ್ಷಕರ ಆಕರ್ಷಣೆಯು ಮಕ್ಕಳಿಗೆ ಮುಂದೆ ಯಾವುದೇ ಪ್ರಲೋಭನೆ ಇಲ್ಲದೆಯೇ ಬರುವುದಕ್ಕೆ ರೂಢಿಯಾಗುತ್ತದೆ.

6.ಮಕ್ಕಳಿಗೆ ಸೌಜನ್ಯಪೂರಕವಾದಂತಹ ಸನ್ನಡತೆಯನ್ನು ಕಲಿಸಲು ಬೇಕಾದಂತಹ ಪದಗಳನ್ನು (ಉದಾಹರಣೆಗೆ: ವಂದಿಸುವುದು, ಕ್ಷಮೆ ಕೇಳುವುದು, ಥ್ಯಾಂಕ್ಸ್ ಹೇಳುವುದು, ಎಕ್ಸ್‌ಕ್ಯೂಸ್ ಮಿ ಎಂದು ಒಳಗೆ ಪ್ರವೇಶಿಸುವುದು ಇತ್ಯಾದಿ) ಪ್ರಾರಂಭದಿಂದಲೇ ಶಿಕ್ಷಕರು ಹೇಳುತ್ತಿರಬೇಕು ಮತ್ತು ಮಕ್ಕಳಿಗೂ ಹೇಳಲು ಪ್ರೇರೇಪಿಸಬೇಕು.

7.ಮಕ್ಕಳ ಮೆದುಳಿಗೆ ಕೆಲಸ ಕೊಡುವಂತಹ ಮತ್ತು ಅವರ ಮನಸ್ಸಿಗೆ ಸಂತೋಷವಾಗುವಂತಹ ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕು.
ಪ್ರಾಥಮಿಕ ಶಾಲೆಯ ಮಕ್ಕಳ ವಿಷಯದಲ್ಲಿ

1.ಶಿಸ್ತು ಮತ್ತು ಅಚ್ಚುಕಟ್ಟುತನವನ್ನು ರೂಢಿಸಲು ಶಿಕ್ಷಕರು ತಾವೇ ಮೊದಲು ಶಿಸ್ತು ಮತ್ತು ಅಚ್ಚುಕಟ್ಟುತನವನ್ನು ಪ್ರದರ್ಶಿಸಬೇಕು. ಇದು ಹೇಗೆಂದರೆ, ಮೊದಲು ಮಗುವು ನಡೆಯಲು ಕಷ್ಟ ಪಡುತ್ತಿರುವಾಗ ಮೊದಲು ನಾವು ಅವರ ಕೈಯನ್ನು ಹಿಡಿದು ನಡೆಸುತ್ತಿದ್ದು, ನಂತರ ಅವರಷ್ಟಕ್ಕೇ ನಡೆಯುವಂತೆ ಮಾಡುವುದಿಲ್ಲವೇ, ಹಾಗೆಯೇ ಶಿಸ್ತು ಮತ್ತು ಅಚ್ಚುಕಟ್ಟುತನವನ್ನು ರೂಢಿಸುವುದು. ಬರೀ ಶಿಸ್ತಾಗಿರಿ ಎಂದು ಎಷ್ಟು ಹೇಳಿದರೂ ಏನೂ ಪ್ರಯೋಜನವಾಗುವುದಿಲ್ಲ.

2.ಸಮಯಪ್ರಜ್ಞೆಯನ್ನು ರೂಢಿಸಲು ಕೂಡಾ ಪ್ರಾರಂಭವೇ ಉತ್ತಮ ಸಮಯ. ಕೊಟ್ಟಿರುವಂತಹ ಸಮಯದಲ್ಲಿ ಕೆಲಸವನ್ನು ಮುಗಿಸುವುದು ಸಾಧ್ಯವಾಗುವುದು ಯಾವಾಗೆಂದರೆ, ಇರುವಷ್ಟು ಸಮಯದಲ್ಲಿ ಪೂರೈಸಲು ಸಾಧ್ಯವಾಗುವಂತಹ ಕೆಲಸವನ್ನು, ಸಾಧ್ಯವಾಗುವಷ್ಟು ಕೆಲಸವನ್ನು ಮಾತ್ರವೇ ನೀಡುವುದು. ಮಗುವಿಗೆ ಒತ್ತಡವಾಗುವಂತೆ ಹೆಚ್ಚಿನ ಮನೆಗೆಲಸಗಳನ್ನು ನೀಡಿದರೆ, ಮಗುವು ತಾಯಿಯೋ ಮತ್ತಾರೋ ಕುಟುಂಬದ ಸದಸ್ಯರಿಂದ ಬರೆಯಿಸಿಕೊಂಡು ಬಂದುಬಿಡುತ್ತದೆ. ಆಗ ಕೊಡುವ ಮನೆಗೆಲಸವು ವ್ಯರ್ಥವಾಗುತ್ತದೆ. ಶಿಸ್ತಾಗಲಿ ಅಥವಾ ಸಮಯ ಪ್ರಜ್ಞೆಯಾಗಲಿ ಪೋಷಕರು ಮತ್ತು ಶಿಕ್ಷಕರು ಮಗುವಿನ ಜೊತೆಜೊತೆಯಾಗಿ ಮಾಡಿದರೆ ಮಾತ್ರ ಸಾಧ್ಯವಾಗುವುದು.

3.ಸ್ನೇಹಪೂರ್ವಕವಾಗಿ ಮತ್ತು ಸಹಕಾರತತ್ವದಲ್ಲಿ ಕೆಲಸಗಳನ್ನು ಮಾಡುವಂತಹ ವಾತಾವರಣವನ್ನು ನಿರ್ಮಿಸುವುದು. ಪೈಪೋಟಿ ಅಥವಾ ಅನಾರೋಗ್ಯಕರವಾದಂತಹ ಸ್ಪರ್ಧೆಯನ್ನು ಹೊಂದದೇ ಇರುವಂತೆ ನೋಡಿಕೊಳ್ಳುವುದು. ಯಾರು ಮೊದಲು ಬರುತ್ತೀರಿ ಎಂಬ ಪೈಪೋಟಿಯನ್ನು ಒಡ್ಡುವ ಬದಲು ಸಹಕಾರದಿಂದ ಮತ್ತು ಕ್ರೀಡಾಮನೋಭಾವದಿಂದ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ರೂಢಿಸಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತನ್ನು ಸಾಂಘಿಕ ಚಟುವಟಿಕೆಗಳ ಮೂಲಕ ಅವರಿಗೆ ರೂಢಿಸಬೇಕು. ಹಂಚಿಕೊಳ್ಳುವಿಕೆಯಲ್ಲಿ ಇರುವ ಆನಂದವನ್ನು ಕೂಡಾ ಅವರಿಗೆ ರೂಢಿಸಿದರೆ ಮಾತ್ರವೇ ಅವರು ಅನಾರೋಗ್ಯಕರವಾದಂತಹ ಪೈಪೋಟಿಯಿಂದ ಮುಕ್ತರಾಗುವರು.

4.ಬ್ರಿಜ್ ಕೋರ್ಸ್: ಈ ಬ್ರಿಜ್‌ಕೋರ್ಸ್‌ನಲ್ಲಿ ಹಿಂದಿನ ತರಗತಿಗಳಲ್ಲಿ ಮಾಡಿರುವ ಪಾಠಗಳ ಒಂದು ಪಕ್ಷಿನೋಟವನ್ನು ಹೊಂದುವುದು ಒಂದು ಮುಖ್ಯವಾದ ಭಾಗ. ಮಕ್ಕಳಿಗೆ ಪಾಠಗಳಲ್ಲಿ ಬೋಧಿಸಿರುವಂತಹ ವಿಷಯಗಳು ಪುನರಾವರ್ತನೆಯಾಗುವುದರೊಂದಿಗೆ ರಜೆಯ ಸಮಯದಲ್ಲಿ ಮರೆತಿರುವಂತೆ ಅಥವಾ ರೂಢಿ ತಪ್ಪಿರುವಂತಾಗಿರುವ ಭಾಷೆ, ವ್ಯಾಕರಣ, ಪದಸಂಪತ್ತು ಎಲ್ಲವೂ ಕೂಡಾ ಸ್ಮರಣೆಗೆ ತಂದುಕೊಂಡಂತಾಗುತ್ತದೆ. ಹಾಗೆಯೇ ಹಿಂದಿನ ತರಗತಿಗಳ ಪಾಠಗಳು ಮುಂದಿನ ಪಾಠಗಳ ವಿಸ್ತಾರದಂತೆ ಕೆಲಸ ಮಾಡುವುದರಿಂದ ಮಕ್ಕಳಿಗೆ ಒಂದು ರೀತಿಯಲ್ಲಿ ಹೊಸ ಪಾಠಗಳಿಗೆ ತಳಹದಿಯನ್ನು ನೀಡುತ್ತದೆ.

ಹೀಗೆಯೇ ವಿವಿಧ ವಿಷಯಗಳಿಗೆ ಮತ್ತು ತರಗತಿಗಳಿಗೆ ಸಂಬಂಧ ಪಟ್ಟಂತೆ ಆಯಾಯ ಶಿಕ್ಷಕರು ಮುತುವರ್ಜಿ ವಹಿಸಿ ಸಿದ್ಧತೆಗಳನ್ನು ಮಾಡಿಕೊಂಡಲ್ಲಿ ನಿರೀಕ್ಷಿತ ಮತ್ತು ಉದ್ದೇಶಿತ ಕಲಿಕೆಯ ಫಲವನ್ನು ಕಾಣುವುದು ಸಾಧ್ಯವಾಗುತ್ತದೆ. ಈ ಬಗೆಯ ಸಿದ್ಧತೆ ಮಗುವಿನ ಸಮಗ್ರ ಬೆಳವಣಿಗೆಯ ಮೇಲೂ ಪರಿಣಾಮವನ್ನು ಬೀರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News