ಸಚ್ಚಾರಿತ್ರ್ಯದ ಹಾದಿ
ಯಾರು ಸತ್ಯವನ್ನು ನುಡಿಯುವುದಕ್ಕಾಗಿ ಮಿತ ಭಾಷಿಗಳಾಗಿದ್ದರೋ.. ಎಂದು ರಘು ವಂಶಜರ ಬಗ್ಗೆ ಕವಿ ಕಾಳಿದಾಸ ನುಡಿದಿರುವುದನ್ನು ನೆನೆ ದಾಗಲೆಲ್ಲ ನನ್ನ ಮನದಲ್ಲಿ ಮೂಡುವುದು, ನನ್ನ ತಂದೆಯವರ ಚಿತ್ರ. ಸತ್ಯವ್ರತರಾಗಿ, ಮಿತಭಾಷಿಗಳಾಗಿ, ಸರಳರಾಗಿ ಬದುಕಿದಆದರ್ಶಪ್ರಾಯರವರು. ಅಸತ್ಯ, ಅವಿಚಾರ, ಅನಾಚಾರ ಗಳನ್ನು ಮೆಚ್ಚದವರು. ಅಂತರಂಗಶುದ್ಧ್ಧಿ, ಬಹಿರಂಗಶುದ್ಧಿಯನ್ನೇ ನೆಚ್ಚಿ ಗಾಂಧಿ ಮಾರ್ಗ ದಲ್ಲಿ ನಡೆದವರು. ಜ್ಞಾನಾರ್ಜನೆಯನ್ನು ಗೌರವಿಸಿ, ವಿದ್ಯಾ ಮಂದಿರಗಳನ್ನು, ವಿದ್ಯಾರ್ಥಿ ಗಳನ್ನು ಪ್ರೀತಿಸಿದ ಪೂಜ್ಯರು. ನಮ್ಮೂರ ಉಚ್ಚಿಲ ಶಾಲೆಯಲ್ಲಿ ಕರೆಸ್ಪಾಂಡೆಂಟ್ ನಾರಾಯಣ ಯು. ಎಂದು ಖ್ಯಾತರಾದ ನಮ್ಮ ತಂದೆ; ನಗರದ ಬೆಸೆಂಟ್ ಶಾಲೆಯ ಆಟದ ಟೀಚರ್ ವಸಂತಿ ಟೀಚರ್ ಎಂದು ಪ್ರಸಿದ್ಧರಾದ ನಮ್ಮಮ್ಮ. ನಿರಂಜನರ ಚಿರಸ್ಮರಣೆಯನ್ನೋದಿದ ಆ ಬಾಲ್ಯದ ದಿನಗಳಲ್ಲಿ, ಪೂರ್ವಾ ಭಿಮುಖವಾದ ನಮ್ಮ ಮನೆ ಮೆಟ್ಟಲಲ್ಲಿ ಕುಳಿತು, ಆಗಸದ ತಾರೆಗಳನ್ನು ದಿಟ್ಟಿಸಿ, ನನ್ನ ತಂದೆಯವರೂ ತೀರಿಕೊಂಡಾಗ ಹಾಗೆಯೇ ನಕ್ಷತ್ರವಾಗುವರೆಂದು ನಾನು ಕಲ್ಪಿಸಿಕೊಂಡಿದ್ದೆ. ನಸುಕಿನ ಚಳಿಗೆ ಏಳಲಾರದ ನಮ್ಮನ್ನು, ‘‘ನೋಡು ಕಂದ ಏನು ಅಂದ, ಸೂರ್ಯ ಮೂಡಲಲ್ಲಿ ಬಂದ, ಹೆಚ್ಚು ಮಲಗಲೇನು ಚಂದ, ಬಾ ಕಂದ, ಬಾ!’’ ಎಂದು ಹಾಡಿ ಅವರು ಎಬ್ಬಿಸುತ್ತಿದ್ದ ಪರಿ! ಮನೆಯೊಳಗೆ ನಡೆದಾಡುವಾಗಲೆಲ್ಲ ಅವರು ಹಾಡಿಕೊಳ್ಳುತ್ತಿದ್ದ, ‘‘ವೈಷ್ಣವ ಜನ ತೋ.....’’, ‘‘ದೇಹವಿದು ನೀನಿರುವ ಗುಡಿಯೆಂದು ತಿಳಿದೂ’’, ‘‘ಯಾರನು ಕೇಳಲಿ ನಾ, ಎಲ್ಲಿಹೆ ನೀನೆಂದೂ, ಎಲ್ಲಿ ಮನಕಳುಕಿರದೋ, ಎಲ್ಲಿ ತಲೆ ಬಾಗಿರದೋ...’’, ‘‘ಬ್ರೀತ್ಸ್ ದೇರ್ ದ ಮ್ಯಾನ್ ವಿದ್ ಸೋಲ್ ಸೋ ಡೆಡ್....’’ಮುಂತಾದ ಕವಿತೆಗಳು! ರುಗ್ಣಶಯ್ಯೆಯಲ್ಲೊರಗಿದ ಕೊನೆಯ ದಿನಗಳಲ್ಲೂ ಅವರು ಈ ಗೀತೆಗಳನ್ನು ಹಾಡಿಕೊಳ್ಳಲೆತ್ನಿಸುವಾಗ ನಮ್ಮ ಹೃದಯ ಹಿಂಡಿ ಬರುತ್ತಿತ್ತು.
ಬಂದರಿನ ವರ್ತಕ ವಿಲಾಸದ ತಮ್ಮ ದಿನದ ಕೆಲಸದ ಬಳಿಕ ಸಂಜೆಯ ರೈಲು ಹಿಡಿದು ನಮ್ಮೂರು ಸೋಮೇಶ್ವರ ಉಚ್ಚಿಲದ ಶಾಲಾಡಳಿತ ಸಂಬಂಧ ಅಲ್ಲಿಗೆ ಹೋಗಿ ರಾತ್ರಿ ಹನ್ನೊಂದರ ರೈಲಿನಲ್ಲಿ ಮರಳಿ ಮನೆಗೆ ಬರುತ್ತಿದ್ದರು, ನಮ್ಮ ತಂದೆ. ಅವರ ಪಾಲಿಗೆ ಹೆಚ್ಚಿನ ರಾತ್ರಿಗಳೆಲ್ಲ ಉಬ್ಬಸ ಬಾಧೆಯಿಂದ ನಿದ್ದೆಯಿರದೆ ಕಳೆವ ಸಂಕಟ ಸಮಯವಾದರೆ, ಸರಿ ರಾತ್ರಿಯಲ್ಲಿ ಅವರ ಬೆನ್ನು ನೀವಿ, ಗಾಳಿ ಹಾಕಿ, ಕಾಫಿ ಮಾಡಿ ಕುಡಿಸಿ ಉಪಚರಿಸುತ್ತಿದ್ದ ಸಾವಿತ್ರಿಯಂತಹ ನಮ್ಮಮ್ಮ, ಆದರೂ ಒಂದು ಹಗಲಾದರೂ ಅವರು ಮಲಗಿದ್ದನ್ನು ನಾವು ಕಂಡವರಲ್ಲ.
ತೀವ್ರ ಉಬ್ಬಸ ಬಾಧೆಯಿಂದ ಆಗಾಗ ಆಸ್ಪತ್ರೆ ಸೇರುತ್ತಿದ್ದ ತಂದೆಯವರ ಚಿಕಿತ್ಸೆ ನಗರದ ಫಾ. ಮುಲ್ಲರ್ಸ್ ಸೇವಾಸ್ಪತ್ರೆಯಲ್ಲಿ ನಡೆಯುತ್ತಿತ್ತು. ಆಸ್ಪತ್ರೆ ನಮಗೆ ಎರಡನೇ ಮನೆಯೇ ಆಗಿತ್ತು. ಎಪ್ಪತ್ತೈದರ ಹರೆಯದಲ್ಲಿ ಸಂಭವಿಸಿದ ಭೀಕರ ರಿಕ್ಷಾ ಅಪಘಾತದಲ್ಲಿ ತಲೆಯೊಡೆದು, ಮೊಣಕಾಲ ಚಿಪ್ಪು ಹರಿದು, ತಂದೆಯವರು ವಿಷಮ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದರು. ಕಂಗಾಲಾಗಿ ಅವರ ಬಳಿಗೆ ಹಾರಿ ಬಂದ ನಮ್ಮನ್ನು ಅವರೇ ಸಂತೈಸುವಂತಾಯ್ತು. ಅಸ್ತಮಾ ಕಾರಣ ಚಿಕಿತ್ಸೆಯಲ್ಲಿ ನೋವು ನಿವಾರಕಗಳನ್ನು ಪ್ರಯೋಗಿಸುವಂತಿರದಿದ್ದರೂ, ಮೌನವಾಗಿ ನೋವು ನುಂಗುತ್ತಿದ್ದ ತಂದೆಯವರ ಸ್ಥೈರ್ಯ ಈಗಲೂ ಕಣ್ಣಲ್ಲಿ ಕಟ್ಟಿದೆ. ಎರಡು ತಿಂಗಳ ಚಿಕಿತ್ಸೆಯ ಬಳಿಕ ಗುಣ ಹೊಂದಿ ಮನೆಗೆ ಮರಳಿದ ವಾರದಲ್ಲೇ ಮನೆಯೊಳಗೇ ಬಿದ್ದು ತೊಡೆಯ ಮೂಳೆ ಮುರಿತಕ್ಕೊಳಗಾಗಿ ಪುನಃ ಆಸ್ಪತ್ರೆ ಸೇರಿದ ತಂದೆಯವರು ಒಂದೂವರೆ ತಿಂಗಳ ಬಳಿಕ ಮನೆಗೆ ಮರಳುವಂತಾಯ್ತು. ಶಸ್ತ್ರಚಿಕಿತ್ಸೆಯಲ್ಲಿ ಪ್ರಯೋಗಿಸಲಾದ ಅರಿವಳಿಕೆಯಿಂದ ದೇವನೇ ಅವರನ್ನು ನಿಮಗೆ ಹಿಂದೆ ಉಳಿಸಿ ಕೊಟ್ಟನೆಂದು ಭಾವನಿರ್ಭರರಾಗಿ ನುಡಿದಿದ್ದರು, ಅರಿವಳಿಕೆ ತಜ್ಞ ಡಾ. ಸುಬೋಧ್ ಮುಖರ್ಜಿ. ಮನೆಗೆ ಮರಳಿದ ಕೆಲವೇ ದಿನಗಳಲ್ಲಿ ಆದ ಅಸ್ತಮಾ ಆಘಾತದಿಂದ ಪ್ರಜ್ಞಾಶೂನ್ಯರಾದ ತಂದೆಯವರು, ಪುನಃ ಆಸ್ಪತ್ರೆ ಸೇರಿದಾಗ ರಕ್ತ ಪರೀಕ್ಷೆಯಲ್ಲಿ ಲ್ಯೂಕೇಮಿಯಾ ಪತ್ತೆಯಾಯ್ತು. ಪಾ. ಮುಲ್ಲರ್ಸ್ ಆಸ್ಪತ್ರೆಯಲ್ಲಿ ಅವರ ರಕ್ತ ಪರೀಕ್ಷೆ ಹಾಗೂ ಚಿಕಿತ್ಸೆ ನಿಯಮಿತವಾಗಿ ನಡೆಯುತ್ತಿತ್ತು. ಹೆಚ್ಚಾಗಿ ಜೊತೆಗಿರುತ್ತಿದ್ದ ನನ್ನನ್ನು, ಮುಂಬೈಗೆ ಮರಳುವಂತೆ ಅವರು ಅನುನಯಿಸುತ್ತಿದ್ದರು. ‘‘ನನ್ನನ್ನೇ ನೋಡಿಕೊಂಡಿದ್ದರಾಯ್ತೇ, ಬೇಬೀ? ನಿನ್ನ ಮನೆ, ಗಂಡ, ಮಕ್ಕಳ ಯೋಗಕ್ಷೇಮ ನೋಡಬೇಡವೇ? ನಮ್ಮದೇನಿದೆ? ನೀನು ಹೀಗೆ ಮನೆಯಿಂದ ದೂರ ಇರುವುದು ಸರಿಯಲ್ಲ; ನಾವು - ನಿನ್ನಮ್ಮ ಮತ್ತು ನಾನು - ನಾವೆಂದೂ ಹೀಗೆ ದೂರ ಇದ್ದದ್ದೇ ಇಲ್ಲ; ಅಬ್ಬನ ಡೆಲಿವರಿಯಲ್ಲಿ ಹೊರತು- ಅದೂ ಒಂದೇ ತಿಂಗಳು. ನೀನಿನ್ನು ಹಿಂದಿರುಗು; ಇಲ್ಲಿಯ ಚಿಂತೆ ಬೇಡ’’ ಎಂದು ಅನುನಯಿಸುತ್ತಿದ್ದರು. ನಾನು ಮುಂಬೈಗೆ ಮರಳಿದಾಗ ತಪ್ಪದೆ ಪತ್ರ ಬರೆಯುತ್ತಿದ್ದು, ತಮ್ಮ ಯೋಗಕ್ಷೇಮ, ರಕ್ತ ಪರೀಕ್ಷೆಯ ವಿವರ, ಬ್ಲಡ್ ಕೌಂಟ್ ಎಲ್ಲ ತಿಳಿಸಿ. ತಾನು ಚೆನ್ನಿರುವೆನೆಂದೇ ಹೇಳುತ್ತಿದ್ದರು.
ಅಮ್ಮನ ಒಕ್ಕಣೆಯೂ ಸೇರಿ ಆ ಪತ್ರಗಳೆಲ್ಲ ನನ್ನ ಕಣ್ಣು ಮಂಜಾಗಿಸುವ ಅಪೂರ್ವ ನಿಧಿಯಾಗಿ ನನ್ನಲ್ಲಿದೆ. ತಾನು ಜೀವಮಾನವಿಡೀ ದುಡಿದ ನಮ್ಮೂರ ಶಾಲೆಯಲ್ಲಿ, 1997ರ ಸ್ವಾತಂತ್ರ ಸ್ವರ್ಣಮಹೋತ್ಸವದ ಆಚರಣೆಯಂದು, ಧ್ವಜಾರೋಹಣಕ್ಕೆ ಅವರನ್ನೇ ಮುಖ್ಯ ಅತಿಥಿಯಾಗಿ ಆಮಂತ್ರಿಸಲಾದಾಗ, ಅದನ್ನು ನಡೆಸಿಕೊಡುವುದು ಅವರಿಂದ ಸಾಧ್ಯವಾದುದು ನಮಗೆಲ್ಲ ಭಾವೋತ್ಕರ್ಷವನ್ನು ಉಂಟು ಮಾಡಿತ್ತು. ಮರುವರ್ಷ 1998ರ ಅವರ ಕೊನೆಯ ಸ್ವಾತಂತ್ರೋತ್ಸವದ ದಿನ, ಮಲಗಿದಲ್ಲಿಂದೆದ್ದು ಬಂದು ಟಿ.ವಿ.ಯೆದುರು ಕುಳಿತು ದಿಲ್ಲಿಯ ಸಮಾರಂಭವನ್ನು ವೀಕ್ಷಿಸುತ್ತಾ, ಧ್ವಜಾರೋಹಣದ ವೇಳೆ ಏಳಲಾಗದಿದ್ದರೂ, ಕಷ್ಟದಿಂದ ಎದ್ದುನಿಂತು ಗೌರವ ಸಲಿಸಿದ ನನ್ನಚ್ಚನ ಚಿತ್ರ ಮನದಿಂದ ಮಾಸುವುದೇ? ಶಾಲೆಗಾಗಿ ತನುಮನದಿಂದ ದುಡಿದ ಮೂವತ್ತು ವರ್ಷಗಳಲ್ಲಿ, ಶಾಲಾ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿವೃಂದ ಅವರ ಮೇಲಿರಿಸಿದ್ದ ಗೌರವ ಅಪಾರ. ಜಗಲಿಯ ತುದಿಯಲ್ಲಿ ಅವರು ನಡೆದು ಬರುತ್ತಿರುವುದನ್ನು ಕಂಡರೇ, ಶಾಲೆಯೆಲ್ಲ ಗೌರವದಿಂದ ವೌನವಾಗುತ್ತಿತ್ತು, ಎಂದು ನೆನಸಿಕೊಳ್ಳುವವರು ಇಂದೂ ಇದ್ದಾರೆ. ಮನೆಯ ಹಾಗೂ ಅಣ್ಣ, ತಮ್ಮ, ತಂಗಿಯ ಮಕ್ಕಳಂತೇ, ಮುಂಬೈ, ಮದರಾಸ್, ಬೆಂಗಳೂರು, ಮಂಗಳೂರ ಸನಿಹ ಬಂಧುಗಳೂ ಅವರಿಗೆ ಪ್ರಿಯರಾಗಿದ್ದರು.
ಹಿರಿಯರಲ್ಲಿ ಗೌರವ, ಕಿರಿಯರಲ್ಲಿ ಪ್ರೀತಿಯ ಸಂಭ್ರಮ ತೋರುತ್ತಿದ್ದ ಬಂಧು ಜನಪ್ರಿಯರವರು. ಮಳೆ ಬೋರೆಂದು ಸುರಿದು ಪ್ರವಾಹ ಉಕ್ಕೇರುವಂತಿದ್ದರೆ, ತಮ್ಮ ಗುಡ್ಡೆಮನೆಯ ಚಿಂತೆ ಅವರನ್ನು ಕಾಡುತ್ತಿತ್ತು. ಹಿತ್ತಿಲಲ್ಲಿ ನೀರು ತುಂಬುತ್ತಾ ಬಂದಿರಬಹುದೇ, ಅಳಿವೆಯಲ್ಲಿ ಅದಿ ಬಿದ್ದಿದೆಯೋ, ಇಲ್ಲವೋ ಹೇಗೆ ಎಂದು ನೋಡಿ ಬರಲು ಹೋಗುತ್ತಿದ್ದರು. ಗುಡ್ಡೆಮನೆಯಂತೆಯೇ, ತಂಗಿಯ ಮನೆ ‘ಸನ್ ವ್ಯೆ’ನ ವ್ಯವಹಾರ ಗಳನ್ನೂ ನೋಡಿಕೊಳ್ಳುತ್ತಿದ್ದ ನನ್ನಚ್ಚ, ಕೀಳಿಸಿದ ಕಾಯಿಗಳ ಲೆಕ್ಕವಷ್ಟೇ ಅಲ್ಲ, ಉದುರಿ ಬಿದ್ದ ಕಾಯಿಗಳ ಲೆಕ್ಕವನ್ನೂ ಬರೆದಿಡುತ್ತಿದ್ದರು. ಹಿತ್ತಿಲ ಕಾಯಿಗಳ ಆದಾಯವನ್ನು ಹಿತ್ತಿಲಿಗೇ ವ್ಯಯಿಸುತ್ತಿದ್ದ ಕರ್ಮರತರು. ಗಾಂಧಿ ಮಾರ್ಗದಲ್ಲಿ ನಡೆದು, ಅಸತ್ಯ, ಅವಿಚಾರ, ಕಂದಾಚಾರ, ಮೂಢನಂಬಿಕೆಗಳನ್ನು ಬಲವಾಗಿ ತಿರಸ್ಕರಿಸಿದವರು. ತಾರುಣ್ಯದಲ್ಲಿ ತಮ್ಮ ಗುಡ್ಡೆಮನೆಯಲ್ಲಿ ನಡೆಯುತ್ತಿದ್ದ ದೈವಕಾರ್ಯದಲ್ಲಿ ಪಾನಮತ್ತನಾದ ನಲಿಕೆಯಾತನ ಹೀನಭಾಷೆಗೆ ಹೇಸಿ, ಮತ್ತೆ ಮೂವತ್ತು ವರ್ಷಗಳ ವರೆಗೆ ಅಲ್ಲಿ ಆ ದೈವಕಾರ್ಯ ನಡೆಯದಂತೆ ನಿಷೇಧಿಸಿದವರು ನನ್ನ ತಂದೆ. ಮೂವತ್ತು ವರ್ಷಗಳ ಬಳಿಕ, ತಮ್ಮ ಚಿಕ್ಕಪ್ಪ ಪತ್ರ ಬರೆದು, ‘‘ಕುಟುಂಬಿಕರೆಲ್ಲ ಏನೋ ಸಂಕಷ್ಟವೆಂದು ಒಮ್ಮೆ ಆ ದೈವಕಾರ್ಯ ನಡೆಯಲೆಂದು ಕೋರಿದ್ದಾರೆ. ನೀನು ದೊಡ್ಡ ಮನಸ್ಸು ಮಾಡಿ ಇದೊಂದು ಬಾರಿ ನಡೆಸಲು ಅನುಮತಿ ಕೊಡು’’ ಎಂದು ಕೇಳಿಕೊಂಡಾಗ ಆ ಹಿರಿಯರ ಮಾತಿಗೆ ಗೌರವವಿತ್ತು ಒಪ್ಪಿಕೊಂಡವರು. ಹಾಗೆ ಆ ದೈವಕಾರ್ಯ ನಡೆದ ವರ್ಷವೇ ನನ್ನ ಚಿಕ್ಕಪ್ಪನ ಮಕ್ಕಳು ಅನುಪಮಾ, ನಿರುಪಮಾರ ಮದುವೆ ನಡೆಯಿತು. ಅನುವಿನ ಕೈ ಹಿಡಿದವನು, ನಮ್ಮವರ ಮಾವನ ಮಗ ವಾಸುದೇವ, ಇಂದು ಸಮುದಾಯದ ದೊಡ್ಡ ಕಾರ್ಯಕರ್ತ.
ಅಂದಿನ ದೈವಕಾರ್ಯದಲ್ಲಿ ನಡೆಯಲಿದ್ದ ಕೆಂಡಸೇವೆಯಲ್ಲಿ ಪವಾಡವೇನೂ ಇಲ್ಲವೆಂಬುದನ್ನು ಮನವರಿಕೆ ಮಾಡಿಕೊಡಲು, ಅವನು ತನ್ನ ಬಳಗದವರನ್ನು ಜೊತೆಗೆ ಕರೆತಂದಿದ್ದ. ಅವರೆಲ್ಲ ತಾವೂ ಕೆಂಡ ತುಳಿದು ತೋರಿದಾಗ ನಾವೆಲ್ಲ ಸಂಭ್ರಮಿಸಿದ್ದೆವು. ಪವಾಡಗಳ ವಿರುದ್ಧ ಡಾ. ಕೊವೂರರು ವೈಜ್ಞಾನಿಕ ಜಾಗೃತಿ ಮೂಡಿಸುತ್ತಿದ್ದ ದಿನಗಳವು. ನಮ್ಮ ಎಳವೆಯಲ್ಲಿ ನಮ್ಮನ್ನು ತಿಕ್ಕಿ, ತಿಕ್ಕಿ ಸ್ನಾನ ಮಾಡಿಸುತ್ತಿದ್ದ ನಮ್ಮ ತಂದೆ! ಎಂದಾ ದರೂ ನಮ್ಮಮ್ಮ ಚಪಾತಿ ಮಾಡುವುದಿದ್ದರೆ ಹಿಟ್ಟು ಕೈಯಿಂದ ನುಲಿನುಲಿದು ಬರುವಂತೆ ಸೊಗಸಾಗಿ ಅಂಟು ಮಾಡಿಕೊಡುತ್ತಿದ್ದ ಆ ಪರಿ! ಅಲಸಂಡೆಯಂತಹ ತರಕಾರಿಯನ್ನು ಅಳತೆಯಿಟ್ಟಂತೆ ಒಂದೇ ಸಮನಾದ ತುಂಡುಗಳಾಗಿ ಕೈಯಿಂದಲೇ ಕತ್ತರಿಸಿ ಕೊಡುತ್ತಿದ್ದ ಆ ಚಂದ! ಅಮ್ಮ ಒಗೆದು ಒಣಗಿಸಿದ ರಾಶಿ ಬಟ್ಟೆಗಳನ್ನು, ಸೀರೆ, ಪಂಚೆ, ಹಾಸು, ಹೊದಿಕೆ ಗಳನ್ನು ಅಮ್ಮನೊಡನೆ ತುದಿಗಳನ್ನು ಎಳೆದೆಳೆದು ಇಸ್ತ್ರಿ ಮಾಡಿದಂತೆ ಚೊಕ್ಕವಾಗಿ ಮಡಿಸಿ ಡುತ್ತಿದ್ದ ರೀತಿ! ಅಚ್ಚಬಿಳಿಯ ವೇಷ್ಟಿಯ ಚುಂಗನ್ನು ಎತ್ತಿ ಹಿಡಿದು, ಬೀಸುಗಾಲಿನಿಂದ ನಡೆವ ಆ ಎತ್ತರ ಕಾಯದ ಧೀರೋದಾತ್ತ ನಡೆ! ಮೇಜಿನ ಬಳಿ ಸದಾ ತಮ್ಮ ಕುರ್ಚಿಯಲ್ಲಿ ನೆಟ್ಟನೆ ಕುಳಿತು ಲೆಕ್ಕಪತ್ರ ನೋಡುತ್ತಾ, ಬರೆಯುತ್ತಾ ಇರುತ್ತಿದ್ದ ಪರಿ! ಉಚ್ಚಿಲ ಶಾಲೆಯಲ್ಲಿ ದಕ್ಷ ಆಡಳಿತಗಾರರಾಗಿದ್ದಂತೇ, ರಾಜ್ಯ ಫಿಶರೀಸ್ ಡಿವೆಲಪ್‌ಮೆಂಟ್ ಕಾರ್ಪೊರೇಶನ್ ಮತ್ತು ಜಿಲ್ಲಾ ಸಹಕಾರಿ ಬ್ಯಾಂಕ್‌ನ ಪದಾಧಿಕಾರಿಗಳಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಮೀನು ಮಾರಾಟ ಪೆಡರೇಶನ್‌ನ ಅಧ್ಯಕ್ಷರೂ, ನಿರ್ದೇಶಕರೂ ಆಗಿ ಆ ಸಂಸ್ಥೆಯನ್ನು ದಕ್ಷತೆಯಿಂದ ಲಾಭದತ್ತ ನಡೆಸಿದವರು, ನಮ್ಮ ತಂದೆ.
ಕೊಂಕಣ ರೈಲು ದಾರಿ ತೆರೆಯುವುದನ್ನೇ ತುಂಬ ಉತ್ಸಾಹದಿಂದ ನಿರೀಕ್ಷಿಸುತ್ತಿದ್ದ ನಮ್ಮ ತಂದೆಯವರಿಗೆ ಈ ಪಯಣವನ್ನೊದಗಿಸುವ ನನ್ನ ಆಸೆ ಕೊನೆಗೂ ಈಡೇರಲಿಲ್ಲ. ದಿಲ್ಲಿ ನೋಡುವ ಆಸೆಯೂ ಅವರಿಗಿತ್ತು. ಆದರೆ ಯಾವುದನ್ನೂ ಎಂದೂ ಬೇಕೇ ಎಂದವರಲ್ಲ. ಊಟ, ತಿಂಡಿಯಲ್ಲೂ ಎಂದೂ ಇಂತಹುದು ಬೇಕೆಂದು ಕೇಳಿದವರಲ್ಲ; ಯಾವುದಕ್ಕೂ ಆಸೆ ಪಟ್ಟವರಲ್ಲ. ಅಸೌಖ್ಯ ಉಲ್ಬಣಿಸುತ್ತಾ ಬಂದಂತೆ ಜ್ವರ, ಶೀತ, ನಿತ್ರಾಣ ಬಾಧಿಸ ತೊಡಗಿತು. ತುಂಬ ಕ್ಷೀಣರಾಗುತ್ತಾ ನಡೆದಾಗ ಮೂರು ಬಾರಿ ಬ್ಲಡ್ ಟ್ರಾನ್ಸ್‌ಪ್ಯೂಶನ್ ಮಾಡಬೇಕಾಯ್ತು. ಪರಕೀಯ ರಕ್ತದಿಂದ ಅವರ ಮುತ್ತಿನಂತಹ ಮೈಬಣ್ಣಕ್ಕೆ ಕಪ್ಪು ತಿರುಗಿತು. ಕಾಯ ಸೋಲುತ್ತಾ ಬಂದಿತ್ತು. ಪಾ. ಮುಲ್ಲರ್ಸ್‌ನ ಡಾ. ಕೆ. ಸುಂದರ ಭಟ್ ಅವರ ವೈದ್ಯರು. ಒಮ್ಮೆ ನಾವು ಕೃತಜ್ಞತೆ ಸಲಿಸಿದಾಗ, ‘‘ನಾನು ಮಾಡಿದ್ದಾಗಲೀ, ಮಾಡುವುದಾಗಲೀ ಏನೂ ಇಲ್ಲ; ಅವರು ಇಚ್ಛಾ ಮರಣಿ! ತಮಗೆ ಬೇಕೆಂದಷ್ಟು ದಿನ ಬದುಕಿರುತ್ತಾರೆ. ಅಷ್ಟೇ!’’ ಎಂದಿದ್ದರು. ವೈದ್ಯರು ಇರಬಹುದೆಂದಿದ್ದ ಎರಡೂವರೆ ವರ್ಷಗಳ ಜೀವಿತಾವಧಿಯನ್ನು ಮೀರಿ ನಾಲ್ಕೂವರೆ ವರ್ಷಗಳ ವರೆಗೆ ನಮ್ಮ ಪಾಲಿಗುಳಿದಿದ್ದರು, ನಮ್ಮ ತಂದೆ. ಅವರ ಅವಸಾನಕ್ಕೆ ಒಂದು ವರ್ಷದ ಹಿಂದೆ ನಮ್ಮ ಚಿಕ್ಕಪ್ಪ ಅನ್ನನಾಳದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಾ ನಮ್ಮಾಡನಿದ್ದರು. ಮೂರು ತಿಂಗಳಷ್ಟೇ ಬದುಕಿರಬಹುದು ಎಂದು ವೈದ್ಯರಂದಂತೆ ಸರಿಯಾಗಿ ಮೂರು ತಿಂಗಳಲ್ಲಿ ಹೃದಯಾಘಾತದಿಂದ ಅವರು ನಮ್ಮನ್ನಗಲಿದರು. ಆ ಮೂರು ತಿಂಗಳ ಕಾಲ, ಪ್ರತಿ ಬೆಳಗೂ ಎದ್ದು ಬಂದ ಚಿಕ್ಕಪ್ಪ, ‘‘ಗುಡ್ ಮಾರ್ನಿಂಗ್ ಅಣ್ಣಾ! ಹೇಗಿದ್ದೀರಿ?’’ ಎಂದರೆ, ‘‘ಮಾರ್ನಿಂಗ್, ಸಂಜೀ! ನಾನು ಚೆನ್ನಾಗಿದ್ದೇನೆ; ಪರ್ಸ್ಟ್ ಕ್ಲಾಸ್!’’ ಎಂದು ಅಣ್ಣ ಉತ್ತರಿಸಿ, ‘‘ನೀನು ಸಂಜೀ?’’ ಎಂದರೆ, ‘‘ನಾನೂ ಪರ್ಸ್ಟ್ ಕ್ಲಾಸ್, ಅಣ್ಣಾ!’’ ಎಂದು ತಮ್ಮ ಉತ್ತರಿಸುತ್ತಿದ್ದರು! ಅಣ್ಣನ ರಕ್ತಪರೀಕ್ಷೆ ನಡೆಯುತ್ತಿತ್ತು. ತಮ್ಮನ ರೇಡಿಯೇಶನ್ ನಡೆಯುತ್ತಿತ್ತು. ಆದರೂ ಇಬ್ಬರೂ ಸದಾ ಪಸ್ಟ್ ಕ್ಲಾಸ್!
1999 ಫೆೆಬ್ರವರಿ ಹದಿನೆಂಟರಂದು ನನ್ನಚ್ಚನನ್ನು ಕೊನೆಯ ಬಾರಿಗೆ ಆಸ್ಪತ್ರೆಗೆ ಕರೆದೊಯ್ದೆವು. ನೀಡಲಾದ ರಕ್ತವನ್ನು ಅವರ ದೇಹ ತಿರಸ್ಕರಿಸಿತು. ಪರೀಕ್ಷೆಯಲ್ಲಿ ನ್ಯುಮೋನಿಯಾ ಪತ್ತೆಯಾದಾಗ ಹೆಚ್ಚಿನ ಭರವಸೆಯೇನೂ ಉಳಿಯಲಿಲ್ಲ. ಆ ರಾತ್ರಿ, ‘‘ಇನ್ನು ಗುಣವಾಗುವಂತೇನೂ ಕಾಣುವುದಿಲ್ಲ; ಒಮ್ಮೆ ಊರಿಗೆ ಕೊಂಡು ಹೋಗಿ ಮುಟ್ಟಿಸುವಂತೆ ಹೇಳು’’ ಎಂದು ನಿರ್ವಿಣ್ಣರಾಗಿ ಅವರಂದಾಗ ನನ್ನ ಹೃದಯವೇ ಕುಸಿಯಿತು. ಮರುದಿನವಿಡೀ ನನ್ನಚ್ಚ, ತನ್ನ ಪ್ರೀತಿಯ ಹಾಡುಗಳನ್ನು ಹಾಡಿಕೊಳ್ಳುತ್ತಾ ಉಳಿದರು. ಎಲ್ಲವೂ ನೆನಪಿಗೆ ಬರುತ್ತಿದೆಯೆಂದು ಸಂತೋಷಿಸಿದರು. ನೋಡ ಬಂದವರಿಗೆಲ್ಲ ಎಂದಿನಂತೆ ತಾನು ಚೆನ್ನಿರುವೆನೆಂದೇ ಉತ್ತರಿಸಿದರು. ಅದರ ಮರುದಿನ ಫೆ. 20, ನಮ್ಮ ಚಿಕ್ಕಪ್ಪ ದೈವಾಧೀನರಾಗಿ ಒಂದು ವರ್ಷ. ಅಂದು ಬೆಳಗಿನಿಂದಲೇ ತಂದೆಯವರು ನಿರಾಹಾರರಾಗಿ ಉಳಿದರು. ಅಣ್ಣನ ಗೆಳೆಯ ಡಾಲ್ಫಿ ಪ್ರೀತಿಯಿಂದ ತಂದಿತ್ತ ಇಡ್ಲಿ, ಶೀರಾ ಏನನ್ನೂ ಮುಟ್ಟಲಿಲ್ಲ. ದಿನವಿಡೀ ಮಾತೂ ಆಡಲಿಲ್ಲ. ಆಕ್ಸಿಜನ್ ಸರಬರಾಜು ನಡೆದಿತ್ತು. ರಾತ್ರಿ ಕಫ ಹೊರಬರಲು ಪ್ರಾರಂಭವಾಯ್ತು. ಎದ್ದುಕುಳಿತು, ಸ್ಪಿಟೂನ್ ತಾವೇ ಕೈಯಲ್ಲಿ ಹಿಡಿದು ಕಫ ಖಾಲಿಯಾಗುವ ವರೆಗೆ ಹಾಗೇ ಕುಳಿತಿದ್ದ ನನ್ನಚ್ಚ, ರಾತ್ರಿ ಮೂರು ಗಂಟೆಗೆ ನನ್ನ ಕೈಯ ಕೊನೆಯ ಕಾಫಿಯನ್ನೊಂದಿಷ್ಟು ಕುಡಿದು, ಒರಗಿ ಕಣ್ಮುಚ್ಚಿದರು. ಅಸ್ಪಷ್ಟ ಮಾತುಗಳು ಅವರಿಂದ ಹೊರ ಬರುತ್ತಿದ್ದುವು. ಬೆಳಗ್ಗೆ ಆರಕ್ಕೆ ಬಂದು ನೋಡಿದ ನಮ್ಮ ಪ್ರಿಯ ಸಿಸ್ಟರ್ ಲೂಸಿ, ಬಳಿ ನಿಂತು ಪ್ರಾರ್ಥನೆ ಹೇಳಿದರು. ಮತ್ತೆ ನನ್ನಚ್ಚನ ಇಚ್ಛೆಯಂತೇ ಅವರನ್ನು ಶೀಘ್ರ ಮನೆ ತಲುಪಿಸುವ ವ್ಯವಸ್ಥೆ ಮಾಡಿದರು. ಆಕ್ಸಿಜನ್ ಸಹಿತ ಆಂಬ್ಯುಲೆನ್ಸ್‌ನಲ್ಲಿ ಬಂದು ಮನೆ ತಲುಪಿ, ಅವರ ಮಂಚದಲ್ಲಿ ಮಲಗಿಸಿದಾಗ, ‘‘ಮನೆಗೆ ಬಂದು ಮುಟ್ಟಿದೆವೆಂದು ಹೇಳು, ಬೇಬೀ’’ ಎಂದು ಅಮ್ಮ ಅಂದರು. ನಾನು ಹಾಗಂದೊಡನೆ, ‘‘ಆ....’’ ಎಂಬ ದೀರ್ಘ ಉದ್ಗಾರ ನನ್ನಚ್ಚನಿಂದ ಹೊರಟಿತು. ಮತ್ತೆ ಹತ್ತು ನಿಮಿಷದಲ್ಲಿ ಬಾಯಿಂದ ಒಂದು ಚೂರು ರಕ್ತ ಹೊರ ಬಂತು. ಮತ್ತೈದು ನಿಮಿಷದ ಬಳಿಕ ತುಂಬ ಶಾಂತವಾಗಿ ಉಸಿರು ನಿಂತು, ಅವರಾತ್ಮ ಪರಮಾತ್ಮನಲ್ಲಿ ಲೀನವಾಯ್ತು....
‘‘ಬ್ರೀದ್ಸ್ ದೇರ್ ದ ಮ್ಯಾನ್, ವಿದ್ ಸೋಲ್ ಸೋ ಡೆಡ್, ಹೂ ನೆವರ್ ಟು ಹಿಮ್‌ಸೆಲ್ಫ್ ಹ್ಯಾತ್ ಸೆಡ್, ದಿಸ್ ಈಸ್ ಮೈ ಓನ್, ಮೈ ನೇಟಿವ್ ಲ್ಯಾಂಡ್!’’ ಅವರ ಮೆಚ್ಚಿನ ಕವನವಾಗಿತ್ತು. ಅವರ ಕಣಕಣವೂ ಇದನ್ನೇ ನುಡಿಯುವಂತಿತ್ತು. ಗೌರವ ಹುಟ್ಟಿಸುವಂತಹ ಗಾಂಭೀರ್ಯದಿಂದ ಸದಾ ಕಾರ್ಯಮಗ್ನರಾಗಿರುತ್ತಾ ಮಿತಭಾಷಿಗಳಾಗಿದ್ದ ಅವರಿಂದ ಎಷ್ಟೋ ವಿಷಯಗಳನ್ನು ಕೇಳಿ ಅರಿಯಬಹುದಿತ್ತು; ಆ ಸುವರ್ಣಾವಕಾಶವನ್ನು ಉಪಯೋಗಿಸದೆ ಕಳೆದುಕೊಂಡೆವೆಂಬ ವ್ಯಥೆ, ನನ್ನದು. ವೈಚಾರಿಕ ಪ್ರವೃತ್ತಿಯ ಸುಧಾರಣಾಶೀಲರಾಗಿದ್ದ ಅವರು ದೈವಭಕ್ತಿಯಿಲ್ಲದವರೆಂದು ಕೊಂಡವರು ಹಲವರಿದ್ದರು. ಆದರೆ ದೈವಭಕ್ತಿಯ ಪ್ರದರ್ಶನ ಮಾತ್ರ ನಮ್ಮಲ್ಲಿರಲಿಲ್ಲ. ಊರ ದೈವಸ್ಥಾನದ ಹಾಗೂ ಕೌಟುಂಬಿಕ ಆಚರಣೆಯ ವಿಧಿ, ನಿಯಮಗಳನ್ನೆಲ್ಲ ಚೆನ್ನಾಗಿ ಅರಿತಿದ್ದ ಅವರ ಜ್ಞಾಪಕ ಶಕ್ತಿಯೂ ಅಪಾರವಾಗಿತ್ತು. ತಮ್ಮ ಕುಟುಂಬದ ಐದು ತಲೆಮಾರುಗಳ ವಂಶವೃಕ್ಷವನ್ನು ಅವರು ರಚಿಸಿದ್ದು, ಎಲ್ಲರ ಅಚ್ಚರಿ, ಪ್ರಶಂಸೆಗೆ ಪಾತ್ರವಾಗಿತ್ತು. ಧೈರ್ಯ, ಸ್ಥೈರ್ಯಗಳ ಉತ್ತುಂಗ ವ್ಯಕ್ತಿತ್ವ, ಸ್ಥಿರತೆಯ ಪ್ರತಿರೂಪ, ಜ್ಞಾನ, ವಿವೇಕಗಳ ಆಗರ, ಸಚ್ಚಾರಿತ್ರ ಸ್ವರೂಪ ನನ್ನ ತಂದೆ ನನ್ನ ಆದರ್ಶ.