19ನೇ ಶತಮಾನದ ಸುಧಾರಕನಿಗೆ ಸಿಗದ ಮನ್ನಣೆ

Update: 2019-05-19 18:31 GMT

ಸದ್ಯ ನಾವು ವಿದ್ಯಾಸಾಗರ್ ಅವರ 200ನೇ ಹುಟ್ಟುಹಬ್ಬವನ್ನು ಆಚರಿಸಲಿದ್ದೇವೆ. ಹೊಸ ಪ್ರತಿಮೆಯ ಅಗತ್ಯವಿದೆಯೇ ಎಂಬ ಬಗ್ಗೆ ನಾವು ಚರ್ಚೆ ಮಾಡಬಹುದು. ಆದರೆ, ಕೇವಲ ಪೊಳ್ಳು ಹೊಗಳಿಕೆ ಮತ್ತು ಶ್ಲಾಘನೆಗಿಂತ ಹೆಚ್ಚಿನದಕ್ಕೆ ಅರ್ಹರಾಗಿರುವ ಓರ್ವ ಪ್ರಭಾವಿ ವ್ಯಕ್ತಿಯ ಬಗ್ಗೆ ಹೆಚ್ಚಿನದನ್ನು ತಿಳಿಯಲು ನಾವು ಸಮಯ ತೆಗೆದುಕೊಳ್ಳಬೇಕಿದೆ.

ಇತ್ತೀಚೆಗೆ ಪಶ್ಚಿಮ ಬಂಗಾಳದ ಕೋಲ್ಕತಾದ ಬಿದನ್ ಸರನಿಯಲ್ಲಿರುವ ವಿದ್ಯಾಸಾಗರ ಕಾಲೇಜು ಕಟ್ಟಡದ ಆವರಣದಲ್ಲಿದ್ದ ಈಶ್ವರ ಚಂದ್ರ ವಿದ್ಯಾಸಾಗರ ಅವರ ಪ್ರತಿಮೆಯ ಧ್ವಂಸ ಪ್ರಕರಣ ಬಂಗಾಳ ಮತ್ತು ಇಡೀ ಭಾರತದಲ್ಲಿ ಈ ಮಹಾನ್ ತತ್ವಜ್ಞಾನಿಯ ಸಾಧನೆಗಳ ಸುತ್ತ ಸುದೀರ್ಘ ಸಮಯದಿಂದ ಇರುವ ಸಾಂಸ್ಕೃತಿಕ ವಿಸ್ಮತಿಯತ್ತ ಬೊಟ್ಟು ಮಾಡಿದೆ.
ಈಶ್ವರ ಚಂದ್ರ ವಿದ್ಯಾಸಾಗರ ಅವರು ಪ್ರಾತಃ ಸ್ಮರಣೀಯರೂ ಹೌದು ಮತ್ತು ಅತೀಹೆಚ್ಚು ಚರ್ಚೆಗೆ ಒಳಗಾದವರೂ ಹೌದು.
ಮೇ 14ರಂದು ಹಿಂಸಾತ್ಮಕ ರಾಜಕೀಯ ಸಂಘರ್ಷದ ಮಧ್ಯೆ ವಿದ್ಯಾಸಾಗರ ಅವರ ಪ್ರತಿಮೆಯನ್ನು ಧ್ವಂಸ ಮಾಡಿದಾಗ, ಧ್ವಂಸಗೈದ ಆರೋಪಿಗಳು ಯಾರು ಎನ್ನುವ ಪರ ವಿರೋಧ ಆರೋಪಗಳು ನಡೆಯಿತೇ ವಿನಹ ಆಧುನಿಕ ಬಂಗಾಳಕ್ಕೆ ಈ ಮೇಧಾವಿಯ ಕಾಣಿಕೆ ಏನು ಎನ್ನುವುದನ್ನು ತಿಳಿಯುವ ಗೋಜಿಗೆ ಯಾರೂ ಹೋಗಲಿಲ್ಲ. ಅಷ್ಟರ ಮಟ್ಟಿಗೆ ವಿದ್ಯಾಸಾಗರ್ ಆಧುನಿಕ ಬಂಗಾಳದ ಜನಜೀವನದಿಂದ ಮರೆಯಾಗಿದ್ದರು. ಒಂದು ರೀತಿಯಲ್ಲಿ ಈ ಧ್ವಂಸ ಘಟನೆ ಮತ್ತಿ ವಿದ್ಯಾಸಾಗರರ ಬದುಕನ್ನು ನೆನಪಿಸುವಂತೆ ಮಾಡಿದೆ.
ವಿದ್ಯಾಸಾಗರ ಕಾಲೇಜಿನಲ್ಲಿ ಅವರ ಪ್ರತಿಮೆಯನ್ನು ಧ್ವಂಸಗೈದ ಮತ್ತು ಆನಂತರ ಈ ಕೃತ್ಯ ಎಸಗಿದ ವ್ಯಕ್ತಿಯನ್ನು ರಕ್ಷಿಸಲು ನಡೆಸಿದ ಪ್ರಯತ್ನಗಳ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಓದುತ್ತಿದ್ದಂತೆ ನಾನು ಮತ್ತೊಮ್ಮೆ ವಿದ್ಯಾಸಾಗರ ಅವರನ್ನು ಕಳೆದುಕೊಂಡ ಭಾವ ಮೂಡಿತು.
 ಅಷ್ಟಕ್ಕೂ ಯಾರೀ ವಿದ್ಯಾಸಾಗರ್?
ದಶಕಗಳ ಕಾಲ ವಿದ್ಯಾಸಾಗರ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಅಧ್ಯಯನ ನಡೆಸಿರುವ ನನಗೆ ಅವರ ಬಗ್ಗೆ ಪೂಜ್ಯ ಭಾವವಿದೆ. ಧಾರ್ಮಿಕ ತಾರತಮ್ಯ, ವೌಢ್ಯ, ಅನಕ್ಷರತೆ, ಲಿಂಗ ತಾರತಮ್ಯ, ವಸಾಹತು ನಿಯಂತ್ರಣ ಇವುಗಳ ವಿರುದ್ಧ ಹೋರಾಡಲು ಕೆಲವೇ ಕೆಲವು ಬಂಗಾಳಿಗಳು ಧೈರ್ಯ ತೋರಿದ್ದ ಕಾಲದಲ್ಲಿ ಆದರ್ಶಪ್ರಾಯರಾಗಿದ್ದವರು ವಿದ್ಯಾಸಾಗರ್.
ವಿದ್ಯಾಸಾಗರ್ ಅವರ ಸಮಕಾಲೀನ ಲೇಖಕ ಮೈಕಲ್ ಮಧುಸೂಧನ್ ದತ್ತ ತಿಳಿಸುವಂತೆ, ದೃಢ ನಿಶ್ಚಯದ ಮತ್ತು ನೇರನುಡಿಯ ವ್ಯಕ್ತಿಯಾಗಿದ್ದ ವಿದ್ಯಾಸಾಗರ್ ಬಂಗಾಳಿ ತಾಯಿಯ ಹೃದಯ ಹೊಂದಿದ್ದರು. ಅವರು ಸದಾ ಚರ್ಚೆಯ ಮತ್ತು ಅದರ ಜೊತೆಗೆ ವಿವಾದದ ವಿಷಯವಾಗಿದ್ದರು.
ಅಷ್ಟಕ್ಕೂ, ಧೋತಿ ಮತ್ತು ಕಂಬಳಿಯನ್ನು ತ್ಯಜಿಸಲು ನಿರಾಕರಿಸಿದ, ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಶಾಸ್ತ್ರಗಳನ್ನು ತಡಕಾಡಿದ ಮತ್ತು ಉಪಖಂಡದಿಂದ ಹೊರಗೆ ಎಂದೂ ಪ್ರಯಾಣಿಸದ ಓರ್ವ ಬ್ರಾಹ್ಮಣ ಪಂಡಿತನ ಬಗ್ಗೆ ಸಮಕಾಲೀನ ಭಾರತೀಯರು ಏನೆಂದು ತಿಳಿಯಬೇಕು?
ವಿದ್ಯಾಸಾಗರ್ ಅವರ ಹೆಸರಲ್ಲಿ ವಿಶ್ವವಿದ್ಯಾನಿಲಯಗಳು ಮತ್ತು ಸೇತುವೆಗಳಿರಬಹುದು. ಆದರೆ ಹೂಗ್ಲಿಯ ಎರಡನೇ ಸೇತುವೆಯ ಮೇಲೆ ಪ್ರಯಾಣಿಸುವ ಅದೆಷ್ಟು ಮಂದಿ ಅರೆಕ್ಷಣ ನಿಂತು ರಡ್‌ನಿಂದ ಕೋಲ್ಕತಾಗೆ ಪ್ರಯಾಣ ಬೆಳೆಸಿದ್ದ ಬಡಬಾಲಕನಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾರೆ? ಆಗೊಮ್ಮೆ ಈಗೊಮ್ಮೆ ಮುದ್ರಣ, ಪ್ರತಿಮೆ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ವಿದ್ಯಾಸಾಗರ್ ಅವರ ಮುಖವನ್ನು ಕಂಡರೂ, ಇಂದಿನ ಟ್ವಿಟರ್ ಮತ್ತು ಇನ್ಸ್‌ಟಾಗ್ರಾಮ್ ಯುಗದಲ್ಲಿ ಅವರ ಶಿಸ್ತುಬದ್ಧ ನಡತೆ ಮತ್ತು ವ್ಯಾಕರಣಬದ್ಧತೆಗೆ ಏನಾದರೂ ಸ್ಥಾನವಿದೆಯೇ?
 ಎರಡು ಸತ್ಯಗಳು

ಬದ್ಧತೆಗಿಂತ ಹೆಸರಿಗೆ ಹೆಚ್ಚು ಒತ್ತು ನೀಡುವ ರಾಜಕೀಯದ ಈ ಕಾಲದಲ್ಲಿ ಭ್ರಷ್ಟಾಚಾರ ದಿನದ ಕಾನೂನಾಗಿದೆ. ನಮ್ಮ ನಾಯಕರು ತಮಗೆ ಇಷ್ಟಬಂದ ರೀತಿಯಲ್ಲಿ ಸತ್ಯವನ್ನು ತಿರುಚುತ್ತಿದ್ದಾರೆ. ಆದರೆ ವಿದ್ಯಾಸಾಗರ್ ಅವರು ತನ್ನ ಹಿರಿಯರ ವಸಾಹತುಶಾಹಿ ದ್ವಂದ್ವ ಮಾತುಗಳ ವಿರುದ್ಧ ಸೆಟೆದು ನಿಂತರು ಮತ್ತು ಸತ್ಯ ಯಾವತ್ತಿದ್ದರೂ ಒಂದೇ ಅದನ್ನು ಬದಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಹಾಗಾಗಿ ಮೊನ್ನೆ ಬಹುತೇಕ ಎಲ್ಲ ಪಕ್ಷಗಳ ನಾಯಕರು ತಮ್ಮತಮ್ಮ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ವಿದ್ಯಾಸಾಗರ್ ಅವರ ಭಾವಚಿತ್ರವನ್ನು ಹಾಕಿರುವುದನ್ನು ಕಂಡಾಗ ತಮಾಷೆಯೆನಿಸಿತು. ಅಷ್ಟಕ್ಕೂ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೈದವರು ಯಾರು ಎಂಬ ಪ್ರಶ್ನೆಯನ್ನು ಪಕ್ಕಕ್ಕಿಡೋಣ. ಇಲ್ಲೂ ರಾಜಕಾರಣಿಗಳ ಮಾತುಗಳನ್ನು ಕೇಳುವುದಾದರೆ, ಇಲ್ಲಿ ಕನಿಷ್ಠ ಎರಡು ಸತ್ಯಗಳು ಹರಿದಾಡುತ್ತಿವೆ, ಎರಡನ್ನೂ ಚುನಾವಣಾ ಯಶಸ್ಸಿನ ಅಗತ್ಯಕ್ಕೆ ತಕ್ಕಂತೆ ನುಡಿಯಲಾಗುತ್ತಿದೆ.
ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೈದವರಿಗೆ ಅವರು ಯಾವುದರ ಮೇಲೆ ದಾಳಿ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಯಾವುದೇ ಕಲ್ಪನೆ ಇದ್ದಿರಲಾರದು. ಸಮಕಾಲೀನ ದೃಷ್ಟಿಕೋನದಲ್ಲಿ ಇದೊಂದು ಸಮಾನಾಂತರ ಹಾನಿಯಷ್ಟೇ.
ವಿದ್ಯಾಸಾಗರ್ ಈಗಲೂ ಕಳೆದು ಹೋಗಿದ್ದಾರೆ
ನಾನು ನನ್ನ ಪುಸ್ತಕಕ್ಕಾಗಿ ಅಧ್ಯಯನ ನಡೆಸುತ್ತಿದ್ದಾಗ, ಬಿಡುವಿಲ್ಲದ ಮತ್ತು ಇತರರ ಬಗ್ಗೆ ಮತ್ಸರ ತೋರುವ ಕೋಲ್ಕತಾದ ಸಾರ್ವಜನಿಕ ಜೀವನದಿಂದ ಬೇಸತ್ತ ವಿದ್ಯಾಸಾಗರ್ ಅವರು ತನ್ನ ನಿವೃತ್ತಿ ಜೀವನ ಕಳೆದ ಕಡಿದಾದ ಗ್ರಾಮ ಕರ್ಮತರ್‌ಗೆ ಭೇಟಿ ನೀಡಿದೆ. ಅಂದು ನಾನು ಈ ಮಹಾನ್ ಪುರುಷನ ಸ್ಮರಣಾರ್ಥ ಹಲವು ಫೋಟೊಗಳನ್ನು ಕ್ಲಿಕ್ಕಿಸಿದೆ.
ಈ ಫೋಟೊಗಳನ್ನು ನಾನು ನನ್ನ ಪುಸ್ತಕದಲ್ಲಿ ಬಳಸಿದ್ದೆ ಮತ್ತು ಅದರಲ್ಲಿ ವಿದ್ಯಾಸಾಗರ್ ಅವರನ್ನು ನಾವು ಯಾವ ರೀತಿ ಮರೆತಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತದೆ. ಕರ್ಮತರ್‌ನಲ್ಲಿದ್ದ ವಿದ್ಯಾಸಾಗರ್ ಅವರ ಪ್ರತಿಮೆಯ ಪಕ್ಕದಲ್ಲಿ ಅಲಂಕಾರಕ್ಕಾಗಿ ನೆಟ್ಟಿದ್ದ ಬಳ್ಳಿ ಪ್ರತಿಮೆ ತುಂಬೆಲ್ಲ ಹರಡಿ ಅದನ್ನು ಅಸ್ಪಷ್ಟಗೊಳಿಸಿತ್ತು. ವಿದ್ಯಾಸಾಗರ್ ಅವರ ಮೇಲಿನ ಗೌರವದಿಂದ ನೆಟ್ಟಿದ್ದ ಈ ಬಳ್ಳಿ ಯಾರ ಸ್ಮರಣಾರ್ಥ ಈ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತೋ ಅವರನ್ನೇ ಮರೆಮಾಚಿತ್ತು.
ಕೆಲದಿನಗಳ ಹಿಂದೆ ನಾನು ಕ್ಲಿಕ್ಕಿಸಿದ ಅದೇ ಫೋಟೊವನ್ನು ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ಹಾಕಿದ್ದರು. ಆದರೆ ಅವರಿಗೆ ನಾನು ಆ ಫೋಟೊ ಯಾಕಾಗಿ ತೆಗೆದಿದ್ದೆ ಎನ್ನುವ ಅರಿವಿರಲಿಕ್ಕಿಲ್ಲ.
ಒಂದು ವಿಷಯವಂತೂ ಸ್ಪಷ್ಟ. ಸದ್ಯ ನಾವು ವಿದ್ಯಾಸಾಗರ್ ಅವರ 200ನೇ ಹುಟ್ಟುಹಬ್ಬವನ್ನು ಆಚರಿಸಲಿದ್ದೇವೆ. ಹೊಸ ಪ್ರತಿಮೆಯ ಅಗತ್ಯವಿದೆಯೇ ಎಂಬ ಬಗ್ಗೆ ನಾವು ಚರ್ಚೆ ಮಾಡಬಹುದು. ಆದರೆ, ಕೇವಲ ಪೊಳ್ಳು ಹೊಗಳಿಕೆ ಮತ್ತು ಶ್ಲಾಘನೆಗಿಂತ ಹೆಚ್ಚಿನದಕ್ಕೆ ಅರ್ಹರಾಗಿರುವ ಓರ್ವ ಪ್ರಭಾವಿ ವ್ಯಕ್ತಿಯ ಬಗ್ಗೆ ಹೆಚ್ಚಿನದನ್ನು ತಿಳಿಯಲು ನಾವು ಸಮಯ ತೆಗೆದುಕೊಳ್ಳಬೇಕಿದೆ.
 ಕೃಪೆ: scroll.in

Writer - ಬ್ರಿಯನ್ ಎ ಹ್ಯಾಚರ್

contributor

Editor - ಬ್ರಿಯನ್ ಎ ಹ್ಯಾಚರ್

contributor

Similar News

ಜಗದಗಲ
ಜಗ ದಗಲ