1951-52: ಭಾರತದ ಸಾರ್ವತ್ರಿಕ ಚುನಾವಣೆ
ಭಾರತ ಸ್ವಾತಂತ್ರಗೊಂಡ ಬಳಿಕ ನಡೆದ ಪ್ರಥಮ ಚುನಾವಣೆ ಯಾಗಿರುವ 1951-52ರ ಸಾರ್ವತ್ರಿಕ ಚುನಾವಣೆ 1951ರ ಅಕ್ಟೋಬರ್ 25 ರಿಂದ 1952ರ ಫೆಬ್ರವರಿ 21ರವರೆಗೆ ನಡೆಯಿತು. 1949ರ ನವೆಂಬರ್ 26ರಂದು ಅಂಗೀಕರಿಸಲಾದ ಭಾರತದ ಸಂವಿಧಾನದ ಉಪಬಂಧಗಳ ಅಡಿ ಈ ಚುನಾವಣೆ ನಡೆದಿದ್ದು ಬಹುತೇಕ ರಾಜ್ಯಗಳ ವಿಧಾನಸಭೆ ಚುನಾವಣೆಯನ್ನೂ ಏಕಕಾಲದಲ್ಲೇ ನಡೆಸಲಾಯಿತು. ಸಂವಿಧಾನವನ್ನು ಅಂಗೀಕರಿಸಿದ ಬಳಿಕ ಸಂವಿಧಾನ ಸಭೆಯೇ ಮಧ್ಯಂತರ ಸಂಸತ್ತು ಆಗಿ ಮುಂದುವರಿಯಿತು. ಜವಾಹರಲಾಲ್ ನೆಹರೂ ಮಧ್ಯಂತರ ಸಚಿವ ಸಂಪುಟದ ಮುಖ್ಯಸ್ಥರಾಗಿದ್ದರೆ ವಿವಿಧ ಸಮುದಾಯ ಹಾಗೂ ಪಕ್ಷಗಳ 15 ಪ್ರತಿನಿಧಿಗಳು ಸದಸ್ಯರಾಗಿದ್ದರು. ಚುನಾವಣೆ ಘೋಷಣೆಯಾದೊಡನೆ ಈ ಸಂಪುಟದ ಹಲವು ಸದಸ್ಯರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದರು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮದೇ ಪಕ್ಷವನ್ನು ಸ್ಥಾಪಿಸಿದರು. ಲೋಕಸಭೆಯ 489 ಸ್ಥಾನಗಳಿಗೆ 1849 ಅಭ್ಯರ್ಥಿಗಳು ಸ್ಪರ್ಧಿಸಿ ದ್ದರು. 360 ಮಿಲಿಯಕ್ಕೂ ಹೆಚ್ಚಿನ ಜನಸಂಖ್ಯೆಯಲ್ಲಿ 173 ಮಿಲಿಯಕ್ಕೂ ಅಧಿಕ ಜನ ಮತ ಚಲಾಯಿಸಲು ಅರ್ಹರಾಗಿದ್ದು ಇದು ಆ ಕಾಲದಲ್ಲಿ ನಡೆದ ಅತೀ ದೊಡ್ಡ ಚುನಾವಣೆಯಾಗಿತ್ತು. ಶೇ.47.7ರಷ್ಟು ಪ್ರಮಾಣ ದಲ್ಲಿ ಮತ ಚಲಾವಣೆಯಾಗಿತ್ತು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್(ಐಎನ್‌ಸಿ) 364 ಸ್ಥಾನಗಳಲ್ಲಿ ಜಯ ಸಾಧಿಸುವ (ಚಲಾವಣೆಯಾದ ಶೇ.45 ಮತ ಪಡೆಯುವ) ಮೂಲಕ ಭಾರೀ ಬಹುಮತದಿಂದ ಗೆದ್ದಿತು. ಎರಡನೇ ಅತೀ ದೊಡ್ಡ ಪಕ್ಷ ಪಡೆದ ಮತಗಳಿಗಿಂತ ನಾಲ್ಕು ಪಟ್ಟಿಗೂ ಅಧಿಕ ಮತವನ್ನು ಐಎನ್‌ಸಿ ಪಡೆದಿತ್ತು. ಜವಾಹರಲಾಲ್ ನೆಹರೂ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಚುನಾಯಿತರಾದ ಮೊತ್ತಮೊದಲ ಪ್ರಧಾನ ಮಂತ್ರಿಯಾದರು. ಚುನಾವಣಾ ಪ್ರಕ್ರಿಯೆ: ಭಾರತದ ಸಂವಿಧಾನದಲ್ಲಿ ಸಂಸದೀಯ ವ್ಯವಸ್ಥೆಯ ಸರಕಾರಕ್ಕೆ ಅವಕಾಶ ನೀಡಲಾಗಿದೆ. ಪ್ರಧಾನಿ ನೇತೃತ್ವದ ಸಚಿವ ಸಂಪುಟ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿರುತ್ತದೆ. ಬಹುತೇಕ ಪಾಶ್ಚಿಮಾತ್ಯ ದೇಶಗಳಿಗಿಂತ ಭಿನ್ನವಾಗಿ, ಭಾರತದಲ್ಲಿ ಚುನಾವಣೆಯನ್ನು ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿರುವ ಭಾರತ ಚುನಾವಣಾ ಆಯೋಗ ನಡೆಸುತ್ತದೆ. ಪ್ರಥಮ ಚುನಾವಣೆಯ ಸಂದರ್ಭ ಚುನಾವಣಾ ಆಯೋಗವು ಏಕಸದಸ್ಯ ಸಂಸ್ಥೆಯಾಗಿತ್ತು ಮತ್ತು ಸುಕುಮಾರ್ ಸೇನ್ ಭಾರತದ ಮೊತ್ತಮೊದಲಿನ ಚುನಾವಣಾ ಆಯುಕ್ತರಾಗಿದ್ದರು. 1951ರ ಸಾರ್ವತ್ರಿಕ ಚುನಾವಣೆಯಲ್ಲಿ (ಜಮ್ಮು ಕಾಶ್ಮೀರ ಹೊರತುಪಡಿಸಿ) ಭಾರತದಲ್ಲಿ 17.32 ಕೋಟಿ ಮತದಾರರಿದ್ದರು. 21 ವರ್ಷ ಮೇಲ್ಪಟ್ಟ ಎಲ್ಲಾ ಭಾರತೀಯರೂ ಮತದಾನಕ್ಕೆ ಅರ್ಹರಾಗಿದ್ದರು. ಆಗ ದೇಶದ ಶೇ.85ರಷ್ಟು ಜನತೆ ಓದಲು ಅಥವಾ ಬರೆಯಲು ತಿಳಿಯದವರಾಗಿದ್ದರು. ಚುನಾವಣೆಯನ್ನು ಸಂಘಟಿಸಲು ಈ ರೀತಿಯ ವ್ಯಾಪಕ ಅನಕ್ಷರತೆಯು ಚುನಾವಣಾ ಆಯೋಗಕ್ಕೆ ಒಂದು ಸವಾಲಾಗಿತ್ತು.
ಈ ಹಿನ್ನೆಲೆಯಲ್ಲಿ ಪ್ರತೀ ಮತಕ್ಷೇತ್ರದಲ್ಲೂ ಪ್ರತಿಯೊಂದು ಅಭ್ಯರ್ಥಿಗೂ ಪ್ರತ್ಯೇಕ ಬಣ್ಣದ ಮತಪೆಟ್ಟಿಗೆಯನ್ನು ವ್ಯವಸ್ಥೆ ಮಾಡಲಾಗಿತ್ತು ಮತ್ತು ಈ ಮತಪೆಟ್ಟಿಗೆಯಲ್ಲಿ ಪ್ರತೀ ಅಭ್ಯರ್ಥಿಯ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಬರೆಯಲಾಗಿತ್ತು. ಮತದಾರರ ಪಟ್ಟಿಯನ್ನು ಟೈಪ್ ಮಾಡಲು ಹಾಗೂ ಜೋಡಿಸಲು 6 ತಿಂಗಳ ಗುತ್ತಿಗೆ ಆಧಾರದಲ್ಲಿ 16,500 ಗುಮಾಸ್ತರನ್ನು ನೇಮಿಸಲಾಗಿತ್ತು. ಮತದಾರರ ಪಟ್ಟಿಯನ್ನು ಮುದ್ರಿಸಲು 3,80,000 ರೀಮ್‌ಗಳಷ್ಟು ಕಾಗದಗಳನ್ನು ಬಳಸಲಾಗಿತ್ತು. ಕಠಿಣ ಹವಾಮಾನ ಮತ್ತು ಸಾಗಣೆ ವ್ಯವಸ್ಥೆಯ ಸಮಸ್ಯೆಯಿಂದಾಗಿ ಚುನಾವಣೆಯನ್ನು 68 ಹಂತದಲ್ಲಿ ನಡೆಸಲಾಗಿತ್ತು. ಒಟ್ಟು 1,96,084 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಇದರಲ್ಲಿ 27,527 ಮತಗಟ್ಟೆಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿತ್ತು. ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರಗಳನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳ ಜನತೆ 1952ರ ಫೆಬ್ರವರಿ- ಮಾರ್ಚ್‌ನಲ್ಲಿ ನಡೆದ ಮತದಾನದಲ್ಲಿ ಮತ ಚಲಾಯಿಸಿದರು. ಕಾಶ್ಮೀರದಲ್ಲಿ 1967ರವರೆಗೆ ಲೋಕಸಭಾ ಚುನಾವಣೆ ನಡೆದಿರಲಿಲ್ಲ. ಹಿಮಾಚಲ ಪ್ರದೇಶದಲ್ಲಿ ಫೆಬ್ರವರಿ -ಮಾರ್ಚ್‌ನಲ್ಲಿ ಮಂಜಿನ ಸಮಸ್ಯೆ ಇರುವ ಕಾರಣ ಆ ರಾಜ್ಯದಲ್ಲಿ 1951ರಲ್ಲಿ ಮತದಾನ ನಡೆಯಿತು. ಪ್ರಪ್ರಥಮ ಮತವನ್ನು ಹಿಮಾಚಲ ಪ್ರದೇಶದ ಚಿನ್ನಿ ಜಿಲ್ಲೆಯ ಮತಗಟ್ಟೆ ಯಲ್ಲಿ ಚಲಾಯಿಸಲಾಯಿತು. ಸಂಸತ್ತಿನ ಕೆಳಮನೆ(ಲೋಕಸಭೆಗೆ) 489 ಸದಸ್ಯರನ್ನು ಮತದಾರರು ಆಯ್ಕೆ ಮಾಡಿದರು. ಇದು 25 ರಾಜ್ಯಗಳ 401 ಕ್ಷೇತ್ರಗಳಲ್ಲಿ ಹಂಚಿಕೆಯಾಗಿತ್ತು. ಫಸ್ಟ್ ಪಾಸ್ಟ್ ದಿ ಪೋಸ್ಟ್ (ಎಫ್‌ಪಿಟಿಪಿ) ವ್ಯವಸ್ಥೆಯಲ್ಲಿ (ಮತದಾರರು ಮತಪತ್ರಗಳಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿ ಯನ್ನು ಸೂಚಿಸುವ, ಅತ್ಯಧಿಕ ಮತ ಪಡೆದವರು ಗೆಲ್ಲುವ ವ್ಯವಸ್ಥೆ) 314 ಚುನಾವಣಾ ಕ್ಷೇತ್ರಗಳಲ್ಲಿ ಎಫ್‌ಟಿಪಿಪಿ ಮೂಲಕ ತಲಾ ಒಬ್ಬರನ್ನು, 86 ಚುನಾವಣಾ ಕ್ಷೇತ್ರಗಳಲ್ಲಿ ಇಬ್ಬರನ್ನು, ಸಾಮಾನ್ಯ ವಿಭಾಗದಿಂದ ಒಬ್ಬರನ್ನು, ಪರಿಶಿಷ್ಟ ಜಾತಿ ಅಥವಾ ಪಂಗಡದ ವಿಭಾಗದಿಂದ ಒಬ್ಬರನ್ನು ಆಯ್ಕೆ ಮಾಡಲಾಗಿತ್ತು. ಒಂದು ಚುನಾವಣಾ ಕ್ಷೇತ್ರದಲ್ಲಿ ಮೂವರು ಪ್ರತಿನಿಧಿಗಳಿದ್ದರು. ಸಂವಿಧಾನವು ಸಮಾಜದ ಹಿಂದುಳಿದ ವರ್ಗದವರಿಗೆ ನೀಡಿದ್ದ ಮೀಸಲಾತಿ ಸೌಲಭ್ಯದ ಹಿನ್ನೆಲೆಯಲ್ಲಿ ಈ ರೀತಿಯ ಬಹು ಅಭ್ಯರ್ಥಿಗಳ ಕ್ಷೇತ್ರವನ್ನು ರೂಪಿಸಲಾಗಿತ್ತು. 1960ರಲ್ಲಿ ಇವನ್ನು ರದ್ದುಗೊಳಿಸಲಾಯಿತು. ಅಲ್ಲದೆ ರಾಷ್ಟ್ರಪತಿಯವರು ಇಬ್ಬರು ಆಂಗ್ಲೋ ಇಂಡಿಯನ್ ಸದಸ್ಯರನ್ನು ನಾಮನಿರ್ದೇಶನ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ. ರಾಜಕೀಯ ಪಕ್ಷಗಳು: ಮೊತ್ತ ಮೊದಲ ಚುನಾವಣೆಯಲ್ಲಿ 53 ರಾಜಕೀಯ ಪಕ್ಷಗಳು ಹಾಗೂ 533 ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಪ್ರಾಬಲ್ಯಕ್ಕೆ ಸವಾಲೆಸೆಯುವ ಉದ್ದೇಶದಿಂದ ನೆಹರೂ ಅವರ ಸಚಿವ ಸಂಪುಟದ ಇಬ್ಬರು ಸದಸ್ಯರು ಪ್ರತ್ಯೇಕ ರಾಜಕೀಯ ಪಕ್ಷಗಳನ್ನು ಸ್ಥಾಪಿಸಿದ್ದರು. ಅಲ್ಲದೆ 1951ರಲ್ಲಿ ಶ್ಯಾಮಪ್ರಸಾದ್ ಮುಖರ್ಜಿ ಜನಸಂಘವನ್ನು ಸ್ಥಾಪಿಸಿದರು. ಭಾರತದ ಪ್ರಪ್ರಥಮ ಕಾನೂನು ಸಚಿವ ಡಾ ಬಿ.ಆರ್. ಅಂಬೇಡ್ಕರ್ ‘ಶೆಡ್ಯೂಲ್ಡ್ ಕಾಸ್ಟ್ಸ್ ಫೆಡರೇಶನ್’ ಅನ್ನು ಪುನರೂರ್ಜಿತಗೊಳಿಸಿದರು(ಬಳಿಕ ಇದಕ್ಕೆ ದಿ ರಿಪಬ್ಲಿಕನ್ ಪಾರ್ಟಿ ಎಂದು ಹೆಸರಿಡಲಾಯಿತು).
ಆಚಾರ್ಯ ಕೃಪಲಾನಿಯವರ ನೇತೃತ್ವದಲ್ಲಿ ಕಿಸಾನ್ ಮಝ್ದೂರ್ ಪ್ರಜಾ ಪರಿಷದ್, ರಾಮಮನೋಹರ ಲೋಹಿಯಾ ಹಾಗೂ ಜಯಪ್ರಕಾಶ್ ನಾರಾಯಣ್ ನಾಯಕತ್ವದಲ್ಲಿ ಸೋಷಿಯಲಿಸ್ಟ್ ಪಾರ್ಟಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮುಂತಾದ ಪಕ್ಷಗಳೂ ಮುನ್ನೆಲೆಗೆ ಬಂದವು. ಆದರೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಪ್ರಭಾವದ ಎದುರು ಸಣ್ಣಪುಟ್ಟ ಪಕ್ಷಗಳು ಚುನಾವಣೆಯಲ್ಲಿ ಯಾವುದೇ ುರುತು ಮೂಡಿಸಲು ವಿಫಲವಾದವು.