ಬಿಸಿಲಿದು ಬರಿ ಬಿಸಿಲಲ್ಲವೋ...
ಬಿರುಬೇಸಿಗೆಯ ನಡುವೆ ಸುಡುವ ಪ್ರಶ್ನೆಗಳನ್ನು ಒಡಲೊಳಗೆ ಇರಿಸಿಕೊಂಡು ಭರವಸೆಯ ನೆರಳಿನಲ್ಲಿ ಕೂತಿದ್ದೇವೆ. ಕೊಚ್ಚಿ ಕೊಂಡೊಯ್ಯದ, ತಣಿಸುವ ಹನಿಗಳ ಧ್ಯಾನದಲ್ಲಿದ್ದೇವೆ. ಸರ್ವಜೀವಿಗಳ ಬದುಕೂ ತಣಿಯುವ ಕಾಲವೆಂದು ಬರಬಹುದು ಎಂದು ಕಾಯುತ್ತಿದ್ದೇವೆ. ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು, ಕರೆದೀತು ಮುಗಿಲ ಬಳಗ ಎನ್ನುತ್ತಾರೆ ಕವಿ. ಮನದೊಳಗೂ, ಹೊರಗೂ, ವಾತಾವರಣದಲ್ಲೂ ಧಗೆ ಆರಿ ತಂಪು ಆವರಿಸಿಕೊಳ್ಳಲಿ, ಧೋ ಎಂದು ಸುರಿವ ಮಳೆ ಆವರಿಸಿರುವ ಕೊಳೆಯನ್ನು ತೊಳೆಯಲಿ ಎಂಬ ಆಶಯ ಈ ಉರಿಯನ್ನು ತುಸು ಸಹ್ಯವಾಗಿಸಬಹುದು. ಆಗ ಉಸಿರುಗಟ್ಟಿಸುವ ವಾತಾವರಣದಲ್ಲಿ ಹೊಸ ಗಾಳಿ ಸುಳಿಯಬಹುದು, ಹೊಸ ಚಿಗುರು ತೊನೆದಾಡಬಹುದು.
ನೆತ್ತಿಸುಡುವ ಉರಿ, ಪಾದ ಸುಡುವಂತೆ ಕಾದ ಭೂಮಿ, ತೊಯ್ದ ಮೈ, ಧಗೆಯಿಂದ ಹೊಮ್ಮುತ್ತಿರುವ ನಿಟ್ಟುಸಿರುಗಳ ಮೂಲಕ ಬೇಸಿಗೆ ತನ್ನ ಪ್ರತಾಪವನ್ನು ಇನ್ನಿಲ್ಲದಂತೆ ತೋರಿಸುತ್ತಿದೆ. ಹನಿ ಹನಿ ನೀರಿಗಾಗಿ ಪರದಾಡುತ್ತಿರುವ, ಬೇಗೆಯಿಂದ ಬೇಯುತ್ತಿರುವ ಜೀವಗಳು ಯಾತಕ್ಕೆ ಮಳೆ ಬಾರವೋ ಶಿವ ಶಿವ ಎಂದು ಮುಗಿಲಿನತ್ತ ನೋಟ ನೆಟ್ಟಿವೆ. ಮಳೆ ಸುರಿಸಬೇಕಾದ ಮೋಡಗಳು ನಮ್ಮ ನಾಯಕರ ಹುಸಿ ಭರವಸೆಗಳಂತೆ ಕ್ಷಣ ಕಾಲ ದಟ್ಟವಾಗಿ ಕವಿದು, ಆಸೆ ಹುಟ್ಟಿಸಿ ಮರುಗಳಿಗೆಯಲ್ಲೇ ಸ್ವಹಿತದ ಬಿರುಗಾಳಿಯ ಬಿರುಸಿಗೆ ಚದುರುತ್ತಿವೆ. ಜೀವ ಉಕ್ಕಿಸುವ ನೀರಸೆಲೆ ಪಾತಾಳದತ್ತ ಮುಖಮಾಡಿದೆ. ನಿಂತ ನೆಲ ಬಿರುಕುಬಿಡುತ್ತಿದೆ. ಮೋಡದ ಎತ್ತರಕ್ಕೆ ಏರಿದ ಎಟುಕದ ಬೆಲೆಗಳಿಗೆ ಜನರ ಬದುಕು ತತ್ತರಗೊಂಡಿದೆ. ಬಿಸಿ ಜೀವಶಕ್ತಿಯನ್ನು ಉದ್ದೀಪಿಸುವಂಥದ್ದು, ಶಾಖವಿಲ್ಲದೆ ಜೀವದ ಬೆಳವಣಿಗೆ ಇಲ್ಲ. ಹೀಗೆ ಯೋಚಿಸುವಾಗ ಬೇಸಿಗೆ ಎಂದರೆ ಸಾಕು, ಕುಣಿದು ಕುಪ್ಪಳಿಸುವಂತೆ ಮಾಡುತ್ತಿದ್ದ ಬಾಲ್ಯ ಕಣ್ಣಮುಂದೆ ಬರುತ್ತದೆ. ಶಾಲೆಗೆ ರಜೆಯ ಸಮಯ ಅದು. ಅಜ್ಜಿ ಮನೆಯ ಪ್ರೀತಿಯ ಆಹ್ವಾನ ಸಿದ್ಧವಾಗಿರುತ್ತಿತ್ತು. ಅಲ್ಲಿ ಮರಕೋತಿ ಆಟ, ಗೇರುಹಣ್ಣನ್ನು ಕೊಯ್ಯುವುದು, ಮಾವಿನ ಹಣ್ಣಿನ ರಸದೂಟ ಹೀಗೆ ಖುಷಿಗೆ ಪಾರವೇ ಇರುತ್ತಿರಲಿಲ್ಲ. ವಿವಿಧ ಬಗೆಯ ಹಪ್ಪಳ ಸಂಡಿಗೆಗಳ ತಯಾರಿ ಒಂದೆಡೆ, ದಣಿವಿಲ್ಲದ ಆಟ ಇನ್ನೊಂದೆಡೆ, ಮಕ್ಕಳ ಸೈನ್ಯಕ್ಕೆ ಅಂಕೆ ಅಂಕುಶ ಇರುತ್ತಿರಲಿಲ್ಲ. ಬಿಸಿಲಲ್ಲೇ ಕುಣಿದು ಕುಣಿದು ಮನೆಗೆ ಮರಳುವ ಹೊತ್ತಿಗೆ ಗುರುತೇ ಸಿಗದಷ್ಟು ಸುಟ್ಟ ಮುಖ ರಜೆಯ ಮಜವನ್ನು ಸಾರಿಹೇಳುತ್ತಿತ್ತು. ಹೊಸ ಪುಸ್ತಕ ಖರೀದಿಸಿ, ರಟ್ಟು ಹಾಕಿ ಹೊಸ ತರಗತಿಗೆ ಹೋಗುವ ಖುಷಿಯೂ ಜೊತೆಯಾಗುತ್ತಿತ್ತು. ಖುಷಿ, ನಿರೀಕ್ಷೆಗಳ ರಜೆಯ ದಿನಗಳು ಉತ್ಸಾಹ ತುಂಬುತ್ತಿದ್ದವು. ಆಗೆಲ್ಲ ಬೇಸಿಗೆ ಇಷ್ಟು ಅಸಹನೀಯ ಅನಿಸುತ್ತಿರಲಿಲ್ಲ. ಕಾಲ ಬದಲಾಯಿತೋ, ಪ್ರಜ್ಞೆ ಬಲಿಯಿತೋ, ಸುತ್ತಲಿನ ಪರಿಸರ ಅಸಹನೀಯವಾಯಿತೋ, ಈಗ ಬೇಸಿಗೆ ಎಂದರೆ ಧಗೆ ಬಿಟ್ಟರೆ ಬೇರೆ ಚಿತ್ರ ಮನಸ್ಸಿಗೆ ಬರುತ್ತಿಲ್ಲ.
ಬಿಸಿಲು ಎಂದರೆ ತಾಪ, ಬಿಸಿಲು ಎಂದರೆ ನಿಗಿನಿಗಿಸುವ ನಿಜ, ಬಿಸಿಲು ಎಂದರೆ ಮುಂದೆ ಬರಬಹುದಾದ ಮುಂಗಾರಿನ ತೋರುಗೈ. ಬಿಸಿಲು ನಿಜದ ಕೆಂಡವೂ ಹೌದು, ಅಸಹನೀಯ ಧಗೆಯ ಅಗ್ನಿಕುಂಡವೂ ಹೌದು, ಭರವಸೆಯ ದಾರಿಯೂ ಹೌದು. ಬಿಸಿಲಿನ ಉಗ್ರ ಪ್ರತಾಪ ಒಂದೆಡೆಯಾದರೆ ನಮ್ಮ ಸುತ್ತಲಿನ ವಿದ್ಯಮಾನಗಳು ಈ ಬಿಸಿಲಿಗೆ ಸಾಥ್ ಕೊಡುವಂತೆ ಬಿಸಿಯನ್ನು ಹೆಚ್ಚಿಸಿವೆ. ಸಾರ್ವಜನಿಕ ಸ್ಪೇಸ್‌ಗಳಲ್ಲಿ ಉಸಿರುಗಟ್ಟಿಸುವ ವಾತಾವರಣ ಹೆಚ್ಚಾಗುತ್ತಿದೆ. ಅದಕ್ಕೆ ಮುಕುಟವಿಟ್ಟಂತೆ ಈ ಬಾರಿಯ ಬೇಸಿಗೆಯ ಜೊತೆ ಚುನಾವಣೆಯ ಕಾವೂ ಸೇರಿ, ಭರವಸೆಗಳ ದಟ್ಟ ಮೋಡವೂ ಸೇರಿ, ಬೆದರಿಕೆಯ ಬಿಗಿತವೂ ಸೇರಿ ಯಾಕೋ ಮತ್ತಷ್ಟು ಬೇಗೆಯಿಂದ ಕನಲುವಂತಾಗಿದೆ. ಬಿಸಿಲಿದು ಬರಿ ಬಿಸಿಲಲ್ಲವೋ, ಹೊರಗೂ ಬಿಸಿ, ಒಳಗೂ ಬಿಸಿ ಎನ್ನುವಂತಾಗಿದೆ. ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚಿದಂತೆ ನಮ್ಮ ಉಸಿರುದಾಣಗಳೂ ದಮ್ಮುಗಟ್ಟಿಸುವ ವಾತಾವರಣದಿಂದ ತಪ್ಪಿಸಿಕೊಳ್ಳಲು ಹೆಣಗುತ್ತಿವೆ. ಮುಕ್ತವಾಗಿ ಮಾತಾಡುವುದೂ ಕಷ್ಟವಾದ ವಾತಾವರಣದಲ್ಲಿ ನಾವು ಬದುಕುತ್ತಿದ್ದೇವೆ. ನಮ್ಮ ಆಯ್ಕೆಯ ಆಹಾರ, ಬಟ್ಟೆ, ಬದುಕು ಎಲ್ಲದರ ಮೇಲೂ ಝಳಪಿಸುವ ದಂಡ ತೂಗುತ್ತಿದೆ. ಭ್ರಮಾತ್ಮಕ ಮಾತುಗಳ ಸಿಡಿಮದ್ದು ಪರಿಸರವನ್ನು ಕಲುಷಿತಗೊಳಿಸುತ್ತಿದೆ. ಮಾತಿನ ಪಟಾಕಿಗಳ ಸದ್ದಿನಿಂದ ಕಿವಿಗೆ ಸಣ್ಣ ಸದ್ದುಗಳನ್ನು ಗ್ರಹಿಸುವುದೇ ಕಷ್ಟವಾಗುತ್ತಿದೆ. ಯಾಕೋ ಇತ್ತೀಚೆಗೆ ಮಳೆ ಬಂದರೂ ಧಗೆ ಕಡಿಮೆಯಾದಂತೆ ಅನಿಸುತ್ತಿಲ್ಲ. ಬಿಸಿಲಿನ ಝಳಕ್ಕೆ ಬೆಲೆ ಏರಿಕೆ ಸೇರಿ ಜನಸಾಮಾನ್ಯರ ಬದುಕಿನ ಬವಣೆಯನ್ನು ಹೆಚ್ಚಿಸುತ್ತಿವೆ. ತರಕಾರಿ, ದಿನಸಿಗಳ ಬೆಲೆ ಬೇಸಿಗೆಯಲ್ಲಿ ಎಟುಕಲಾರದಷ್ಟು ಮೇಲೇರುತ್ತದೆ. ಬಿರುಕು ಬಿಟ್ಟ ಹೊಲದಲ್ಲಿ ನಿಂತು ಮೋಡದತ್ತ ಆಸೆಯ ಕಣ್ಣು ನೆಟ್ಟ ರೈತನ ಬಿಸಿಯುಸಿರೂ ಬೇಸಿಗೆಯ ಬಿಸಿಯ ಜೊತೆಯಾಗುತ್ತದೆ. ಕುಡಿಯುವ ನೀರಿಗೂ ತತ್ವಾರವಾಗಿ ಒಂದು ಕೊಡ ನೀರಿಗೆ ಮೈಲುಗಟ್ಟಲೆ ನಡೆಯುವ ಹೆಣ್ಣುಮಕ್ಕಳ ನಿಟ್ಟುಸಿರಿನ ಬೆಂಕಿ ನಮ್ಮನ್ನು ಸುಡುತ್ತಿದೆ. ಒಣಕಡ್ಡಿಗಳಾದ ಗಿಡಮರಗಳು ನಮ್ಮ ನಾಳೆಗಳೇನು ಎಂದು ಪ್ರಶ್ನೆ ಹಾಕುತ್ತಿವೆ. ಬರಿದಾಗುತ್ತಿರುವ ನೆಲದೊಡಲು ಮನುಕುಲದ ನಾಳೆಗಳ ಬಗ್ಗೆ ಆತಂಕಿತರಾಗುವಂತೆ ಮಾಡುತ್ತಿದೆ.
ಮನುಷ್ಯರದೊಂದು ಕತೆಯಾದರೆ ಪ್ರಾಣಿಗಳ ಮೂಕವೇದನೆಗೆ ಕಿವಿಗೊಡುವವರು ಯಾರು? ಎಲ್ಲೆಡೆ ಕೆರೆಗಳು, ಜಲಾಶಯಗಳು ಬತ್ತಿದರೆ ಪ್ರಾಣಿಗಳ ದಾಹ ತಣಿಯುವುದು ಹೇಗೆ? ಜಾನುವಾರು ಗಳು, ಪಕ್ಷಿಗಳು ನಾಗರಿಕೆ ಜಗತ್ತಿನ ಓಟದಲ್ಲಿ ದಿಕ್ಕೆಟ್ಟಿವೆ. ನಮ್ಮ ಅಭಿವೃದ್ಧಿಯ ಧಾವಂತ ಅವುಗಳ ದಾಹವನ್ನು ತಣಿಸುತ್ತಿಲ್ಲ. ಮರಗಿಡಗಳು, ಪ್ರಾಣಿಪಕ್ಷಿಗಳ ಬದುಕನ್ನು ಒಳಗು ಮಾಡಿಕೊಳ್ಳದ ನಮ್ಮ ಯೋಜನೆಗಳು ಅವುಗಳ ಬದುಕನ್ನು ದಿಕ್ಕಾಪಾಲಾಗಿಸಿವೆ. ಉರಿಬಿಸಿಲಲ್ಲಿ ಕಂಗೆಟ್ಟ ಪ್ರಾಣಿಗಳ ನೋವಿಗೆ ಮನುಷ್ಯ ಜಗತ್ತಿನ ಸ್ಪಂದನೆ ಕಡಿಮೆಯಾಗುತ್ತಿದೆಯೇನೋ ಅನಿಸುತ್ತಿದೆ. ಮನೆಯ ಸುತ್ತ ಚಿಲಿಪಿಲಿಗುಡುತ್ತಿದ್ದ ಪಕ್ಷಿಗಳ ಸದ್ದು ಅಡಗಿದೆ. ನಾವೇ ಕಟ್ಟಿಕೊಂಡ ಜಗತ್ತಲ್ಲಿ ನಾವೇ ಬಂದಿಯಾಗಿ ಚಡಪಡಿಸುತ್ತಿದ್ದೇವೆ. ಅದಕ್ಕೇ ಫ್ಯಾನ್, ಎ.ಸಿ, ಕೂಲರ್‌ಗಳಿದ್ದರೂ ಬೆವರುತ್ತಲೇ ಇದ್ದೇವೆ. ಧಗೆ ಇದ್ದರೆ, ಅದರ ಹಿಂದೆಯೇ ಮಳೆಯೂ ಬರಲೇಬೇಕಲ್ಲ... ಬದಲಾವಣೆ ಇಲ್ಲದೆ ಬದುಕಿಲ್ಲ. ಕಾಲದ ಚಕ್ಕಡಿಯೊಳಗೆ ಕುಳಿತ ನಾವು ಋತುಬದಲಾವಣೆಗೆ ಸಾಕ್ಷಿಯಾಗುತ್ತಾ ಬಂದಿದ್ದೇವೆ. ಎಲೆತುಂಬಿದ ಮರ ಒಣಗಿ, ಬೋಳಾಗಿ ಮತ್ತೆ ಎಲೆ ಚಿಗುರುವ, ಹೂವಾಗಿ, ಕಾಯಾಗಿ ಹಣ್ಣಾಗುವ ಪ್ರಾಕೃತಿಕವಾದ ಸಹಜವಾದ ಆವರ್ತನೆ ನಮ್ಮ ಕಣ್ಣಮುಂದೆಯೇ ನಡೆಯುತ್ತಿರುತ್ತದೆ. ಹದವಾದ ಬಿಸಿಲು ಬೇಕು, ಮಳೆ ಬೇಕು, ಚಳಿ ಬೇಕು. ಹೀಗೆ ಕಾಲಮಾನ ಬದಲಾಗುತ್ತದೆ ಎಂಬ ನಂಬಿಕೆಯೇ ಬದುಕನ್ನು ಮುನ್ನಡೆಸುವಲ್ಲಿ ಪ್ರಕೃತಿ ನಮಗೆ ಕಲಿಸುವ ಪಾಠ. ಬದುಕು ಹದವಾಗಿ ನಡೆಯಲು ಎಲ್ಲವೂ ಹದವಾಗಿರಬೇಕು. ಅದೆಷ್ಟೇ ತಾಪವಿದ್ದರೂ ಕೆಲವೇ ದಿನಗಳಲ್ಲಿ ಮತ್ತೆ ತಂಪು ಆಗೇ ಆಗುತ್ತದೆ ಎಂಬ ಭಾವ ನಮ್ಮನ್ನು ಜೀವಂತವಾಗಿಡುತ್ತದೆ. ಬೇಸಿಗೆಯ ಚಟುವಟಿಕೆಗಳ ದಿನದ ಕೊನೆಗೆ ಬಿಸಿಲಿನಿಂದ ಬಸವಳಿದು ಉಷ್ ಎಂದು ನಿಟ್ಟುಸಿರು ಬಿಡುವಾಗಲೂ ಇಷ್ಟೊಂದು ಸೆಕೆ ಇದ್ದ ಮೇಲೆ ನಾಲ್ಕಾರು ಹನಿಯಾದರೂ ಸುರಿಯಬಹುದು ಎಂಬ ಆಸೆಯ ತಂಗಾಳಿ ಸೋಕುತ್ತದೆ. ಬೆಂದ, ಬಿರಿದ ಧರೆ ಮಳೆ ಹನಿಗೆ ಬಾಯೊಡ್ಡಿ ಚಿಗುರುವ ಕನಸು ಕಾಣುತ್ತದೆ. ಮತ್ತೆ ಮಳೆ, ಮತ್ತೆ ಚಳಿ, ಮತ್ತೆ ಬಿಸಿಲು ಕಾಲಚಕ್ರದೊಂದಿಗೆ ಬದುಕೂ ಮುನ್ನಡೆಯುತ್ತದೆ.
ಬಿರುಬೇಸಿಗೆಯ ನಡುವೆ ಸುಡುವ ಪ್ರಶ್ನೆಗಳನ್ನು ಒಡಲೊಳಗೆ ಇರಿಸಿಕೊಂಡು ಭರವಸೆಯ ನೆರಳಿನಲ್ಲಿ ಕೂತಿದ್ದೇವೆ. ಕೊಚ್ಚಿ ಕೊಂಡೊಯ್ಯದ, ತಣಿಸುವ ಹನಿಗಳ ಧ್ಯಾನದಲ್ಲಿದ್ದೇವೆ. ಸರ್ವಜೀವಿಗಳ ಬದುಕೂ ತಣಿಯುವ ಕಾಲವೆಂದು ಬರಬಹುದು ಎಂದು ಕಾಯುತ್ತಿದ್ದೇವೆ. ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು, ಕರೆದೀತು ಮುಗಿಲ ಬಳಗ ಎನ್ನುತ್ತಾರೆ ಕವಿ. ಮನದೊಳಗೂ, ಹೊರಗೂ, ವಾತಾವರಣದಲ್ಲೂ ಧಗೆ ಆರಿ ತಂಪು ಆವರಿಸಿಕೊಳ್ಳಲಿ, ಧೋ ಎಂದು ಸುರಿವ ಮಳೆ ಆವರಿಸಿರುವ ಕೊಳೆಯನ್ನು ತೊಳೆಯಲಿ ಎಂಬ ಆಶಯ ಈ ಉರಿಯನ್ನು ತುಸು ಸಹ್ಯವಾಗಿಸಬಹುದು. ಆಗ ಉಸಿರುಗಟ್ಟಿಸುವ ವಾತಾವರಣದಲ್ಲಿ ಹೊಸ ಗಾಳಿ ಸುಳಿಯಬಹುದು, ಹೊಸ ಚಿಗುರು ತೊನೆದಾಡಬಹುದು.