ಆಲಿಕಲ್ಲು
ಸಾಲುಗಟ್ಟಿದ್ದ ಅಷ್ಟೊಂದು ಜನಗಳ ಮಧ್ಯೆ ಆಸ್ಪತ್ರೆಯ ಕಾರಿಡಾರಿನಲ್ಲಿ ಕಾಯುವವನಿಗೆಂಥ ಕೆಲಸವಿರುತ್ತದೆ. ಸುಮ್ಮನೆ ಅಲ್ಲಿಂದಿಲ್ಲಿಗೆ ಅಲೆಯುತ್ತಾ ತೂಗು ಹಾಕಿದ ಅದೇ ಬೋರ್ಡುಗಳನ್ನು ಮತ್ತೆ ಮತ್ತೆ ಓದಿಕೊಳ್ಳುತ್ತಿದ್ದೆ. ಕ್ಷಯ ರೋಗದ ಬಗ್ಗೆ ಎಚ್ಚರ, ನಾಯಿ ಕಚ್ಚಿದರೆ ಪ್ರಾಥಮಿಕ ಚಿಕಿತ್ಸೆ ಅಗತ್ಯ, ಸುರಕ್ಷಿತ ಲೈಂಗಿಕತೆಗಾಗಿ ನಿರೋಧ್ ಬಳಸಿ ಒಂದಿಷ್ಟು ಚಿತ್ರ ಪಟಗಳು ಅನಾಯಸವಾಗಿ ಕಣ್ಣುಗಳು ಸುಖಾ ಸುಮ್ಮನೆ ಓದುತ್ತಲೇ ಇದ್ದವು. ಒಂದು ದಿನವೂ ಅಕ್ಷರ ಓದದೆ ಕಣ್ಣು ಮುಚ್ಚದ ರಾತ್ರಿಗಳಿರದವನಿಗೆ ಅಕ್ಷರದ ಗೀಳನ್ನು ತಡೆದುಕೊಳ್ಳುವುದಾದರೂ ಹೇಗೆ? ಅರ್ಧ ಅಂಟು ಹರಿದು ಗಾಳಿಗೆ ಹಾರಾಡುವ ಅಷ್ಟೂ ನೋಟಿಸುಗಳಲ್ಲಿನ ಸಣ್ಣ ದೊಡ್ಡ ಅಕ್ಷರಗಳನ್ನೆಲ್ಲಾ ಹೆರಕಿ ಹೆರಕಿ ಓದಿ ಮುಗಿಸುತ್ತಿದ್ದೆ. ಹೊರಗೆ ಇನ್ನೂ ಸೂರ್ಯನಿಗೆ ಧಮಕಿ ಹಾಕಿದ ಮೋಡಗಳು ಬಾನಿಡೀ ತುಂಬಿಕೊಂಡು ಗಾಳಿಯ ಸಾಂಗತ್ಯ ಬಳಸಿದ್ದವು. ಸಣ್ಣಗೆ ಬೀಸಿ ಬರುವ ಗಾಳಿಗೆ ನೇತಾಡುವ ನೋಟಿಸುಗಳ ಮಧ್ಯೆ ನುಸುಳಿಕೊಂಡು ಕಚಗುಳಿಯಿಟ್ಟು ಇನ್ನಷ್ಟು ಅಂಟನ್ನು ಗೋಡೆಯಿಂದ ಬೇರ್ಪಡಿಸುವ ಹವಣಿಕೆಯಲ್ಲಿದ್ದವು. ಅವುಗಳನ್ನೇ ನೋಡುತ್ತಾ ನಾನು ಸುಮ್ಮನೆ ಹಿಂದಿನೆರಡು ದಿನಗಳನ್ನು ಮೆಲುಕು ಹಾಕಿದೆ. ಮೊನ್ನೆ ರಾತ್ರಿ ಆರಾಮವಾಗಿ ಮನೆಯಲ್ಲಿ ಮಲಗಿರಬೇಕಾದರೆ ತಂಗಿ ತಟ್ಟಿ ಎಚ್ಚರಿಸಿ ಏಳು, ಏಳು ಅಮ್ಮ ಬಿದ್ದಿದ್ದಾರೆ ಎಂದು ಚೀರಿಕೊಂಡದ್ದು ಕಿವಿಯೊಳಗಿಳಿದಿತ್ತು. ಆ ಗಾಢ ನಿದ್ದೆಯಿಂದ ಎಚ್ಚರಗೊಂಡ ಬಳಿಕ ಒಂದು ಕ್ಷಣವೂ ಎವೆ ಮುಚ್ಚಿರಲಿಲ್ಲ. ಈಗ ಅದೇ ಕಣ್ಣುಗಳು ಭಾರವಾಗುತ್ತಾ ರೆಪ್ಪೆಗಳು ತರಚುತ್ತಿದ್ದವು. ಮನೆಯಲ್ಲಿ ಯಾರೋ ತಿಂದು ಎಸೆದಿದ್ದ ಬಾಳೆ ಹಣ್ಣಿನ ಸಿಪ್ಪೆ ಚಾವಡಿಯ ಮಧ್ಯೆ ಬಿದ್ದಿದ್ದು ಉಮ್ಮನಿಗೆ ಕತ್ತಲಲ್ಲಿ ಗೋಚರವಾಗಿರಲಿಲ್ಲ. ರಾತ್ರಿಯೇನೋ ತಡಕಾಡುತ್ತಾ ಸ್ವಿಚ್ ಹಾಕಲು ಹೊರಟ ಉಮ್ಮ ಸಿಪ್ಪೆಯ ಮೇಲೆ ಕಾಲಿಟ್ಟು ಜಾರಿ ಬಿದ್ದಿದ್ದರು. ಕಾಲು ಸಣ್ಣಗೆ ಬಾತು ಕೊಂಡಿದ್ದರೂ ಆ ಅಪರಾತ್ರಿಯಲ್ಲಿ ಯಾವ ಡಾಕ್ಟರ್ ಇರುವುದಿಲ್ಲವಾದ್ದರಿಂದ ಒದ್ದೆ ಬಟ್ಟೆ, ಮಂಜುಗಡ್ಡೆಯಿಟ್ಟು ಉಮ್ಮನನ್ನು ನಾನು ತಂಗಿ ಸೇರಿ ಹತ್ತಿರದ ಬೆಡ್ಡಿನಲ್ಲಿ ಮಲಗಿಸಿದೆವು. ನಡು ನಡುವೆ ನೋವಿನಿಂದ ಚೀರುವ ಅಮ್ಮ ಗುಬ್ಬಚ್ಚಿಯಂತೆ ಮುದುಡಿ ಮಲಗಿದ್ದರು. ಕರೆಂಟಿಲ್ಲದ ಆ ಬೇಸಿಗೆ ರಾತ್ರಿ ನಕ್ಷತ್ರ ನೋಟದಲ್ಲಿ ಕಳೆದು ಹೋಗುತ್ತಿತ್ತು. ಒಂದಷ್ಟು ನೆನಪುಗಳ ಬೆನ್ನೇರುವಾಗ ಆಹ್ ಎಂದು ನೋವಿನಿಂದ ಚೀರುವ ಅಮ್ಮನ ನೋವು ಆಲೋಚನೆಗಳನ್ನು ತುಂಡರಿಸುತ್ತಿದ್ದವು. ನೀರವ ರಾತ್ರಿಯ ಜೀರುಂಡೆಯ ಸದ್ದು ಮತ್ತಷ್ಟು ಏಕತಾನತೆಗೆ ತಳ್ಳುತ್ತಿತ್ತು. ಬೇಸಿಗೆಯ ಈ ರಾತ್ರಿ ಗೋಡೆಗೊರಗಿ ಕುಳಿತವನಿಗೆ ತೂಕಡಿಕೆಯೂ ಬರುವಂತಿರಲಿಲ್ಲ. ಬೆವರು ಕತ್ತಿನಿಂದಿಳಿದು ಬೆನ್ನ ಮೂಲಕ ಹರಿದು ಗೋಡೆಗಂಟುವಂತೆ ಮತ್ತಷ್ಟು ಇರಿಸು ಮುರಿಸಾಗುತ್ತಿತ್ತು. ಸುಮಾರು ಹೊತ್ತು ಕಳೆಯಿತು. ಆ ಕ್ಷಣ ತರು ಲತಾದಿಗಳಿಗೆ ನಿಟ್ಟುಸಿರು ಬಿಟ್ಟಂತೆ ಸಣ್ಣಗೆ ತಂಗಾಳಿಯೊಂದು ಕಿಟಕಿ ತೂರಿ ಮೈಯಾವರಿಸಿತು. ಅದರ ಬೆನ್ನಿಗೆ ಫ್ಯಾನ್ ರೊಯ್ಯನೆ ತಿರುಗತೊಡಗಿತು. ಅಬ್ಬಾ ...ಸದ್ಯ ಕರೆಂಟು ಬಂತಲ್ವಾ ಅಂತ ಅನಿಸಬೇಕಾದರೆ, ಅಮ್ಮನಿಗೆ ವಿಪರೀತ ವಾಂತಿ. ತಂಗಿ ಉಮ್ಮನನ್ನು ಹಿಡಿದುಕೊಂಡಿದ್ದಳು. ಅರ್ಧ ಗಂಟೆಗೂ ಮೀರಿ ಉಮ್ಮನ ಅಸ್ವಸ್ಥತೆ ಮುಂದುವರಿಯಿತು. ನಿಶ್ಯಕ್ತಿ, ನಿತ್ರಾಣ ಅಮ್ಮನಿಗೆ ಜೋರಿದೆ ಎಂದು ತಂಗಿ ಆಗಾಗ ಗೊಣಗಿಕೊಳ್ಳುವುದು ಹತ್ತಿರದ ಕೋಣೆಯಿಂದ ನನಗೆ ಕೇಳುತ್ತಿತ್ತು.
ಆಹ್ ಈ ಅಪರಾತ್ರಿ ಯಾವ ಡಾಕ್ಟರ ಬಳಿ ಕರೆದುಕೊಂಡು ತೆರಳುವುದು? ಅಂದುಕೊಳ್ಳುವಾಗ ಮಸೀದಿಯ ಸುಬಹಿ ಬಾಂಗ್ (ಮುಂಜಾನೆಯ ನಮಾಝಿನ ಕರೆ) ಕೇಳಿಸಿತು. ನಮಾಝ್ ಮುಗಿಸಿ ರಿಕ್ಷಾಗೆ ಫೋನ್ ಮಾಡಿದೆ. ಒಂದಿಬ್ಬರು ಬರಲಾಗುವುದಿಲ್ಲವೆಂದರೂ ಒಬ್ಬರು ಹೇಗೋ ಒಪ್ಪಿದರು.
ರಿಕ್ಷಾ ಬಂತು. ಎದ್ದು ಕುಳಿತದ್ದು ಮಾತ್ರ, ಉಮ್ಮನಿಗೆ ಕಾಲು ನೆಲಕ್ಕೂರಲು ಆಗುತ್ತಿಲ್ಲ. ಉಮ್ಮನ ಈ ಅವಸ್ಥೆ ನೋಡಿ ಅಳು ಬರುವುದೊಂದು ಬಾಕಿ. ಎಷ್ಟು ಲವಲವಿಕೆಯಿಂದ ನಡೆಯುತ್ತಿದ್ದ ಉಮ್ಮ ಒಂದೇ ರಾತ್ರಿಗೆ ಬಿದ್ದು ಇಷ್ಟೂ ನಿಶ್ಯಕ್ತರಾಗುವುದು ನನಗೆ ಊಹಿಸಲು ಸಾಧ್ಯವಿರಲಿಲ್ಲ. ದಿನದ ಒಂದು ಕ್ಷಣವೂ ಸುಮ್ಮನೆ ಕೂರದ ಉಮ್ಮ ಏನಾದರೂ ಕೆಲಸಕ್ಕೆ ಕೈಹಚ್ಚುತ್ತಿದ್ದರು. ತಂಗಿ ಒಂದು ಭುಜಕ್ಕೆ ಹೆಗಲುಕೊಟ್ಟು ನಾನು ಇನ್ನೊಂದು ಭುಜಕ್ಕೆ ಹೆಗಲು ಕೊಟ್ಟು ಹೇಗೋ ರಿಕ್ಷಾದಲ್ಲಿ ಕೂರಿಸಿದ್ದೆವು. ಬೆಳಕು ಹರಿವ ಮೊದಲೇ ಆಸ್ಪತ್ರೆಗೆ ತಲುಪಿದೆವು.
ಸುಮಾರು ಹೊತ್ತು ಕಾದ ಬಳಿಕ ಡಾಕ್ಟರ್ ಬಂದರು. ಪರಿಶೀಲಿಸಿ ಗ್ಲೂಕೋಸ್ ಹಾಕಬೇಕೆಂದು ಹೇಳಿದ್ದರು. ಕಾಲು ಸ್ಕ್ಯಾನಿಂಗ್ ಮಾಡಿ ಪ್ಲಾಸ್ಟರ್ ಹಾಕಿದರು. ಅಷ್ಟುದ್ದ ಸಿಮೆಂಟು ಹಾಕಿಸಿ ಮಲಗಿದ ಅಮ್ಮ ಏನೇನೂ ಮಾತನಾಡುತ್ತಿರಲಿಲ್ಲ. ಗ್ಲೂಕೋಸಿನ ಬಾಟಲ್‌ನಲ್ಲಿ ಹನಿ ಹನಿ ಉದುರುವುದು ನೋಡುತ್ತಿದ್ದಂತೆ ಸಣ್ಣದಿರುವಾಗ ಸಿರಪ್ ಬಾಟಲ್ ಅಮ್ಮ ನಮ್ಮ ನಾಲಗೆಗೆ ಹನಿಸುವುದು ನೆನಪಿಗೆ ಬರುತ್ತಿತ್ತು. ಅಮ್ಮನನ್ನೇ ದಿಟ್ಟಿಸಿ ನೋಡಿದೆ. ಸಣ್ಣ ಮಗುವಿನಂತೆ ಮುದುಡಿ ಮಲಗಿದ್ದು ಕಾಣುವಾಗ ಕಣ್ಣುಗಳು ಕೊಳವಾಗದಿರಲಿಲ್ಲ. ಈಗ ಹೀಗೆ ಅಮ್ಮ ಆಸ್ಪತ್ರೆಯ ಬೆಡ್ನಲ್ಲಿ ಮಲಗಿ ಎರಡು ರಾತ್ರಿ ಕಳೆದಿದೆ. ನಾನು ಅವರ ಬಳಿ ಕುಳಿತಲ್ಲಿ ಕುಳಿತಿರಲು ಆಗದೆ ಸುಮ್ಮನೆ ಕಾರಿಡಾರ್ ತುಂಬಾ ಆಗಾಗ ನಡೆಯುತ್ತಿದ್ದೇನೆ. ಹೊಸ ಹೊಸ ಜನರು ಪರಿಚಯವಾಗುತ್ತಲೇ ಇದ್ದಾರೆ. ಒಂದಷ್ಟು ರೋಗಿಗಳು, ಅವರ ಜೊತೆ ಬಂದವರು. ಎಲ್ಲರ ಜೊತೆ ಹರಟುತ್ತಾ ಎರಡು ದಿನಗಳು ಮುಗಿದು ಹೋಗಿದ್ದವು. ಯಾರಾದರೂ ಇದ್ದರೆ ಮಾತಿಗೆ ಕರೆಯುವುದು. ಇಲ್ಲದಿದ್ದರೆ ಓದಿದ ಪತ್ರಿಕೆಯನ್ನು ಮತ್ತೆ ಮತ್ತೆ ತಿರುವಿ ಹಾಕುತ್ತಿದ್ದೆ.
‘‘ಹೇ, ನೀನೇನು ಇಲ್ಲಿ’’
ಸದ್ದು ಬಂದ ಕಡೆ ತಿರುಗಿ ನೋಡಿದೆ. ಅಂಗಜ ಕೈಗೆ ಬ್ಯಾಂಡೇಜು ಹಾಕಿ ನನ್ನನ್ನು ಕಂಡು ಪರಿಚಯದ ನಗು ನಕ್ಕ.
ಉಮ್ಮನಿಗೆ ಸ್ವಲ್ಪ ಹುಷಾರಿಲ್ಲ ಅಂಥ ತುಳುವಿನಲ್ಲೇ ಉತ್ತರಿಸಲು ಹೊರಟೆ. ಅಂಗಜ ಮಾತ್ರ ಅಪ್ಪಟ ಬ್ಯಾರಿಯಲ್ಲಿ ‘‘ಯಾ ರಬ್ಬೆ, ಯಾವಾಗಿನಿಂದ?’’ ಎಂದು ಕತ್ತಿ ತಾಗಿ ಗಾಯ ಮಾಡಿಕೊಂಡ ತನ್ನ ಕೈಯನ್ನು ಹಿಡಿದುಕೊಂಡೇ ಕನಿಕರಿಸಿದ. ಈ ಅಂಗಜ ಸಣ್ಣದರಲ್ಲೇ ನಮ್ಮ ಪರಿಸರದಲ್ಲಿ ಬೆಳೆದು ನಮ್ಮ ಸುತ್ತಲಿನ ಕೂಲಿ ಕೆಲಸಕ್ಕೆ ಬರುತ್ತಿದ್ದ ಐನಾತಿಯವನು. ನಮ್ಮನ್ನು ಬ್ಯಾರಿಯಲ್ಲಿ ಮಾತನಾಡಿಸುತ್ತಾ ಸ್ಪಷ್ಟವಾಗಿ ಬ್ಯಾರಿ ಮಾತನಾಡಲು ಕಲಿತಿದ್ದ. ಈಗ ಸುಮಾರು ವರ್ಷ ನಾನು ಕೆಲಸಕ್ಕೆ ಬಂದ ಬಳಿಕ ಕಂಡಿರಲೇ ಇಲ್ಲ. ಬೆಂಗಳೂರಿಗೆ ಬಂದು ರೂಂ ಮೇಟ್‌ಗಳಲ್ಲಿ ಕಲಿತುಕೊಂಡ ತುಳುವಿನಲ್ಲೇ ಉತ್ತರಿಸಿ, ನನ್ನ ತುಳು ಪಾಂಡಿತ್ಯ ಪ್ರದರ್ಶನದ ವರಸೆ ನೋಡಿ ನನಗೆ ನಾಚಿಕೆಯಾಯಿತು. ಅಂಗಜ ತುಂಬಾ ಸುಸ್ತಾದಂತಿದ್ದ. ಅವನ ಮುಖ ಸೋತಂತಿತ್ತು. ಅಷ್ಟೊತ್ತಿಗೆ ಅಮ್ಮನ ಹೆಸರು ಕರೆಯುತ್ತಾ ‘‘ಈ ಪೇಶೆಂಟಿನ ಮನೆಯವರು ಯಾರಾದರೂ ಇದ್ದಾರಾ?’’ ಯಾರೋ ನರ್ಸ್ ಕೂಗಿ ಕರೆಯುತ್ತಿದ್ದಳು. ಸ್ವಾರಿ, ಡಾಕ್ಟರ್ ಕರೀತಿದ್ದಾರೆ ಮತ್ತೆ ಸಿಗುವ ಅಂತ ಅಂಗಜನ ಬಿಟ್ಟು ಡಾಕ್ಟರ್ ಛೇಂಬರ್‌ಗೆ ಬಂದೆ.
‘‘ನೀವಾ, ಹಾ ಬನ್ನಿ ಕೂತ್ಕೊಳ್ಳಿ.. ಅಲ್ಲ ನಿಮ್ಮ ಉಮ್ಮನಿಗೆ ಬಿ.ಪಿ. ಶುಗರ್ ಇದ್ಯಾ?’’
‘‘ಇಲ್ವಲ್ಲ, ಅವರಿಗೆ ಯಾವುದೇ ರೋಗವಿರಲಿಲ್ಲ, ಒಂದು ದಿನವೂ ಕೆಲಸ ಮಾಡದವರಲ್ಲ. ದಿನವೂ ಮನೆಯ ಸುತ್ತಲೂ ಒಡಾಡಿ ಕೆಲಸ ಮಾಡುವವರು, ಯಾಕೆ ಏನಾಯಿತು?’’
‘‘ಏನಿಲ್ಲ, ಆದರೆ ಸ್ವಲ್ಪ ಸೀರಿಯಸ್ ಮ್ಯಾಟರ್, ನಿಮ್ಮ ಅಮ್ಮ ಹಿಂದಿನ ಥರ ಮರಳುವುದಷ್ಟು ಸುಲಭವಿಲ್ಲ. ಅವರಿಗೆ ಮನಸ್ಸಿಗೇನೋ ಘಾಸಿಯಾದಂತಿದೆ. ಅವರಿಗೆ ನಡೆದಾಡುವುದಕ್ಕೆ ಆಗುವುದೆಂಬ ಗ್ಯಾರಂಟಿಯಾಗಿ ಹೇಳಲಿಕ್ಕೂ ಆಗುವುದಿಲ್ಲ. ಸುಲಭವಾಗಿ ಹಿಂದಿನ ಸ್ಥಿತಿಗೆ ಮರಳುವಂತಿಲ್ಲ. ಹಾಗೇನಾದರೂ ಆದರೂ ಅದು ಪವಾಡವೇ. ಗ್ಲೂಕೋಸ್ ಮುಗಿದರೆ ಕರೆದುಕೊಂಡು ಹೋಗಬಹುದು. ಆದರೆ ರೋಗಿಯ ಜೊತೆ ಏನೂ ಈ ವಿಚಾರದಲ್ಲಿ ಅಪ್ಪಿ ತಪ್ಪಿಯೂ ಚರ್ಚಿಸಲೂ ಬೇಡಿ’’ ಅಂಥ ಡಾಕ್ಟರ್ ಉದ್ದದ ಭಾಷಣ ಬಿಗಿದರು.
ನನ್ನ ಗಂಟಲು ಕಟ್ಟಿತು. ಇನ್ನು ಏನು ಹೇಳುವುದೆಂದು ತೋಚದೆ ಸುಮ್ಮನೆ ಕಲ್ಲಾಗಿ ಬಿಟ್ಟೆ. ‘ಇಷ್ಟು ದಿನವು ಲವ ಲವಿಕೆಯಿಂದ ಉಮ್ಮನಿಗೇನಾಗಿ ಹೋಯಿತು?’ ಏನೂ ಹೊಳೆಯದೇ ಹಾಗೇ ಬೆಪ್ಪಾಗಿ ಡಾಕ್ಟರ್ ಮುಖ ನೋಡಿದೆ. ಅವರಿಗೇನು ಹೇಳಲು ಉಳಿದಿಲ್ಲವೆಂದು ಅವರ ಮುಖಭಾವ ಹೇಳುತ್ತಿತ್ತು. ಹೊರಗಿನಿಂದ ಗಾಳಿ ಮೆಲ್ಲಗೆ ಬೀಸಿತು. ತೂಗು ಹಾಕಿದ್ದ ಕ್ಯಾಲೆಂಡರ್ ಒಮ್ಮೆ ಪಟ ಪಟನೆ ಹೊಡೆದುಕೊಂಡಿತು.
ಆಯಿತು, ಡಾಕ್ಟರ್ ಅಂಥ ಮರು ಮಾತೇನೂ ಹೇಳಲಾಗದೆ ಫೀಸು ಕೊಟ್ಟು ಹೊರ ಬಂದೆ. ಮತ್ತೆ ಉಮ್ಮನನ್ನು ನೋಡಲೆಂದು ಹೋದೆ, ಉಮ್ಮ ಕಣ್ಣು ತೆರೆದು ಕಿಟಕಿಯಿಂದ ಕಪ್ಪಿಟ್ಟ ಮೋಡವನ್ನೇ ನೋಡುತ್ತಿದ್ದರು. ನನ್ನ ಕಂಡು ಸುಮ್ಮನೆ ನಕ್ಕರು. ಉಮ್ಮನ ಬಳಿ ಹೋಗಿ ಕುಳಿತು ಕೈ ಹಿಡಿದುಕೊಂಡೆ. ಕಣ್ಣ ಹನಿಯೊಂದು ಜಿಗಿದು ಆತ್ಮಹತ್ಯೆಗೆ ಶರಣಾಯಿತು.
‘ಇಲ್ಲ ನನ್ನ ಉಮ್ಮ ಹಿಂದಿನಂತಾಗುತ್ತಾರೆ’ ನನ್ನೊಳಗೆ ಧೈರ್ಯ ತಂದುಕೊಂಡೆ. ಗ್ಲೂಕೋಸಿನ ಬಾಟಲಿನ ಕೊನೆಯ ಬಿಂದುಗಳು ಮುಗಿಯಲಾರದೆ ಸತಾಯಿಸುತ್ತಿದ್ದವು.
ಮತ್ತೆ ಆಸ್ಪತ್ರೆ ಕಾರಿಡಾರಿಗೆ ಬಂದೆ. ಇಡೀ ಸುತ್ತಲಿನ ಪರಿಸರವನ್ನೊಮ್ಮೆ ದಿಟ್ಟಿಸಿದೆ. ಬಿಸಿಲ ಝಳಕ್ಕೆ ಎಲೆ ಉದುರಿಸಿಕೊಂಡಿದ್ದ ಹತ್ತಾರು ಮರಗಳು ಬೋಳಾಗಿದ್ದವು. ಮರದಡಿಯಲ್ಲಿ ನಾಲ್ಕೈದು ರೋಗಿಗಳೋ, ಅವರ ಮನೆಯವರೋ ಏನೋ ಮಾತನಾಡುತ್ತಿದ್ದರು. ಅವರ ಹತ್ತಿರದಲ್ಲೇ ಕಂತ್ರಿ ನಾಯಿಗಳ ಗುಂಪೊಂದು ಕಸದಲ್ಲಿನ ಆಹಾರಗಳನ್ನು ತಿನ್ನುವುದಕ್ಕೆ ಗಲಾಟೆ ಮಾಡುತ್ತಿದ್ದವು. ಒಂದಷ್ಟು ದನಗಳ ಗುಂಪು ಅವುಗಳಿಗೆ ಪೈಪೋಟಿ ನೀಡುತ್ತಿದ್ದವು. ಆಕಾಶ ಕಪ್ಪಿಟ್ಟು ಮಳೆಯ ಆಸೆ ಹುಟ್ಟಿಸುತ್ತಿತ್ತು. ಹಕ್ಕಿಗಳು ರಾಶಿ ರಾಶಿ ಗುಳೆ ಹೊರಟಂತೆ ಒಂದೇ ಕಡೆಗೆ ಹಾರಾಡುತ್ತಿದ್ದವು. ಹಾಗೇ ಆಕಾಶ ದಿಟ್ಟಿಸುತ್ತಾ ಕರಿ ಮೋಡಗಳ ಸಮ್ಮೇಳನ ನೋಡುತ್ತಾ ನಿಂತೆ. ನನ್ನೊಳಗೂ ಅಮ್ಮನ ಅನಾರೋಗ್ಯದ ಚಿಂತೆ ಕಪ್ಪಿಟ್ಟಿದ್ದವು.
ಓಯ್... ನೀನೇನಪ್ಪಾ ಇಲ್ಲಿ? ಅಂತ ಯಾರೋ ಕೇಳಿದಂತಿತ್ತು. ಹಿಂದಿರುಗಿ ನೋಡಿದೆ, ವೀಲ್ ಚೈರ್‌ನಲ್ಲಿ ಕುಳಿತ ಆ ವೃದ್ಧ ಶರೀರವನ್ನು ಗುರುತಿಸಲಾಗಲಿಲ್ಲ. ಇನ್ನಷ್ಟು ಹತ್ತಿರ ಹೋದೆ.
‘‘ಹೋ ಯಾರು, ಅಜ್ಜನಾ, ಗುರುತೇ ಸಿಗ್ಲಿಲ್ಲ. ಅಮ್ಮನಿಗೆ ಸ್ವಲ್ಪ ಹುಷಾರಿಲ್ಲ ಅಂಥ ಬಂದಿದ್ದು. ರಾತ್ರಿ ಬಿದ್ದು ಸ್ವಲ್ಪ ಕಾಲಿಗೆ ಪೆಟ್ಟಾಗಿದೆ. ಈಗ ಏನೂ ತಿನ್ನುವುದೂ ಇಲ್ಲ. ಎಂಥ ಮಾಡುವುದು’’
‘‘ಮತ್ತೆಂಥ ಈ ಬಿಸಿಲಲ್ವಾ, ನನಗೂ ನಡೀಲಿಕ್ಕೆ ಆಗುವುದಿಲ್ಲ ತುಂಬಾ ಸುಸ್ತು, ಇನ್ನು ವಯಸ್ಸಾಯ್ತಲ್ವಾ, ತ್ರಾಣವೂ ಇಲ್ಲ. ಟಾಕನ್ ಕೊಟ್ಟಿದ್ದಾರೆ, ಸುಮಾರು ಹೊತ್ತು ಕಾಯ್ಬೇಕು’’ ಅಂತ ದಾಯಿದ ಪೊರ್ಬು ಅಂದಿದ್ದರು.
‘‘ಹೋ ಸರಿ, ಇನ್ನೊಮ್ಮೆ ಸಿಗೋಣ’’ ಅಂದು ಉಮ್ಮನಿರುವಲ್ಲಿಗೆ ಬಂದೆ.
ದಾಯಿದ ಪೊರ್ಬು ಅಂದರೆ, ಅಮ್ಮನಿಗಿಂತಲೂ ಇಪ್ಪತ್ತು ವರ್ಷ ಹಳೆಯವರು. ಪರಿಸರದಲ್ಲೇ ಮನೆ. ಆಗೊಮ್ಮೆ ಈಗೊಮ್ಮೆ ಕಬ್ಬು ಮಾರುತ್ತಾ ಬರುವವರು. ಮಕ್ಕಳನ್ನು ಪ್ರೀತಿಸುವ ಈ ಅಜ್ಜ ಕ್ರಿಸ್‌ಮಸ್ ಬಂದರೆ ಚಾಕಲೇಟು ತರಲು ಮರೆಯುವುದಿಲ್ಲ. ನಾವೆಲ್ಲರೂ ಪ್ರೀತಿಯಿಂದ ಅಜ್ಜ ಅಂತ ಕರೆದೇ ನಮಗೆಲ್ಲಾ ಅವರು ಸಂತಕ್ಲಾಸ್ನಂತೆ ಕಾಣುತ್ತಿದ್ದರು. ಕ್ರಿಸ್‌ಮಸ್ ಬಂದಾಗಲೆಲ್ಲಾ ಸಂತಕ್ಲಾಸ್ ನೋಡಿದರೆ ಅಜ್ಜನೇ ಸ್ವತಃ ವೇಷಹಾಕಿ ಬಂದರೇ ಅನ್ನುವಷ್ಟು ನೆಚ್ಚಿಕೊಂಡಿದ್ದೆವು.
ಉಮ್ಮನ ಗ್ಲೂಕೋಸ್ ಮುಗಿಯಿತು. ಡಿಸ್ಚಾರ್ಜ್ ಮಾಡಿ ಹೊರಗಿದ್ದ ಕೌಂಟರ್‌ನಲ್ಲಿ ಸಹಿ ಹಾಕಿಯೂ ಆಯಿತು. ನಡೆಯಲಾಗದ ಉಮ್ಮನಿಗಾಗಿ ರಿಕ್ಷಾಕ್ಕೆ ಫೋನ್ ಮಾಡಿದೆ. ತಂಗಿ ನಾನು ಹೆಗಲು ಕೊಟ್ಟು ಉಮ್ಮನನ್ನು ಅಲ್ಲೆ ಹೊರಗಿನ ಕಾರಿಡಾರಿನ ಚೈರ್‌ನಲ್ಲಿ ಕುಳ್ಳಿರಿಸಿದೆ. ಆಕಾಶ ಇನ್ನಷ್ಟು ಕಪ್ಪಿಟ್ಟಿತು. ಗಾಳಿ ರಭಸವಾಗಿ ಬೀಸಲಾರಂಭಿಸಿತು. ಧೂಳು ವೃತ್ತಾಕಾರಕ್ಕೆ ತಿರುಗಿ ಸುತ್ತಮುತ್ತ ರಾಚಲಾರಂಭಿಸಿತು. ಆಕಾಶದಲ್ಲಿ ಪಳ್ಳನೆ ಮಿಂಚೊಂದು ಹೊಳೆಯಿತು. ಅದರ ಬೆನ್ನಿಗೆ ತಿರುಗುತ್ತಿದ್ದ ಫ್ಯಾನ್ ನಿಂತು ಹೋಯಿತು. ಲೈಟೂ ನಂದಿತು.
ಕತ್ತಲಾವರಿಸಿದ್ದ ಕಾರಿಡಾರ್ ತುಂಬಾ ಮಿಂಚಿನ ಬೆಳಕಾಯಿತು. ಕ್ಷಣಾರ್ಧದಲ್ಲಿ ಕಿವಿಗಡಚಿಕ್ಕುವಂತಹ ಗುಡುಗಿಗೆ ಆಸ್ಪತ್ರೆ ಆವರಣವೇ ಕಂಪಿಸಿತು. ಅದರ ಬೆನ್ನಿಗೆ ದಪ್ಪ ದಪ್ಪ ಹನಿ ಭೂಮಿಗೆ ಮುತ್ತಲಾರಂಭಿಸಿತು. ಆಹಾ ಮೊದಲ ಮಳೆಯ ಮಣ್ಣಿನ ಗಮಲು ಎಲ್ಲೆಡೆ ಹಬ್ಬಿತು. ಅಷ್ಟರಲ್ಲೇ ಜನರೇಟರ್ ಆನ್ ಮಾಡಿದ್ದರಿಂದ ಕಾರಿಡಾರ್ ಟ್ಯೂಬ್ ಲೈಟ್ ಉರಿಯಲಾರಂಭಿಸಿತು. ಅದರ ಸುತ್ತ ಮಳೆ ಹಾತೆಗಳು ಗಿರಕಿ ಹೊಡೆಯಲಾರಂಭಿಸಿದವು. ಧೋ ಎಂದು ಒಂದೇ ಸಮನೆ ದಪ್ಪ ದಪ್ಪ ಹನಿ ಮಳೆ ಸುರಿಯಲಾರಂಭಿಸಿತು. ಹಾ, ಒಂದು ಕ್ಷಣ ಮಳೆ ಕೊಟ್ಟ ಮಣ್ಣ ಸುವಾಸನೆಗೆ ಮೈ ಮರೆತು ಆಕಾಶ ದಿಟ್ಟಿಸಿದೆ. ದೂರದಲ್ಲೇ ಕಾಮನ ಬಿಲ್ಲೊಂದು ಕಂಡಂತಾಯಿತು. ನಾನು ಮೈ ಮರೆತೆ.
ಸ್ವಲ್ಪ ಕಳೆದು ತಿರುಗಿ ನೋಡುತ್ತೇನೆ. ಕುರ್ಚಿನಲ್ಲಿ ಕುಳಿತಿದ್ದ ಉಮ್ಮ ಕಾಣುತ್ತಿಲ್ಲ. ಒಂದು ಕ್ಷಣ ಬೆಚ್ಚಿ ಬಿದ್ದೆ. ತಂಗಿ ಆಸ್ಪತ್ರೆಗೆ ತಂದಿದ್ದ ವಸ್ತ್ರಗಳನ್ನು ತರಲು ಮೇಲೆ ಹೋಗಿದ್ದಳು.
‘‘ಅರೆ ಉಮ್ಮ ಎಲ್ಲಿ?’’ ನನ್ನನ್ನೇ ಕೇಳಿಕೊಂಡೆ. ಸುತ್ತಲೂ ನೋಡಿದೆ.
ದೂರದಲ್ಲಿ ಬಿಳಿ ಪ್ಲಾಸ್ಟರ್ ಹಾಕಿ ಕಾಲೆಳೆದುಕೊಂಡು ಮಳೆಯ ಮಧ್ಯೆ ಯಾರೋ ಕಾರಿಡಾರಿನ ಕೊನೆಯಿಂದ ನಡೆದು ಬರುತ್ತಿರುವಂತೆ ಕಂಡಿತು. ಹತ್ತಿರ ಓಡಿದೆ. ನಡೆದಾಡಲೇ ಸಾಧ್ಯವಿಲ್ಲವೆಂದ ಉಮ್ಮ ನಿರಾಳರಾಗಿ ಕಾಲೆಳೆದುಕೊಂಡು ನಡೆದು ಬರುತ್ತಿದ್ದರು. ಅಬ್ಬಾ ಇದು ಖಂಡಿತಾ ಅದ್ಭುತ ಕಾಣ್ಕೆ ಎಂದು ನಂಬದಾದೆ.
ನನ್ನನ್ನು ‘‘ಮೋನು, ಆಲಿಕಲ್ಲು ಬಿತ್ತು ನೋಡು, ನೀನು ತಿನ್ನು ಆರೋಗ್ಯಕ್ಕೆ ಒಳ್ಳೆಯದು’’ ಎಂದು ಅಂಗೈ ಬಿಡಿಸಿದರು. ಅವರ ಬಾಯಿಯೊಳಗೆ ಆಲಿಕಲ್ಲು ಇದ್ದದ್ದರಿಂದ ಗಲ್ಲ ಉಬ್ಬಿತ್ತು. ಉಮ್ಮನನ್ನು ಖುಷಿಯಿಂದ ತಬ್ಬಿಕೊಂಡು ಒಂದು ಭುಜಕ್ಕೆ ಭಾರಕೊಟ್ಟು ಮತ್ತೆ ಕುರ್ಚಿ ಬಳಿ ಕರೆದುಕೊಂಡು ಬಂದು ಕುಳ್ಳಿರಿಸಿದೆ. ಅಷ್ಟರಲ್ಲಿ ರಿಕ್ಷಾ ಬಂತು. ಉಮ್ಮ ನನ್ನೊಬ್ಬನ ಸಹಾಯದಿಂದ ರಿಕ್ಷಾ ಹತ್ತಿದರು. ತಂಗಿಗೂ ದಿಗಿಲು. ರಿಕ್ಷಾದವನಲ್ಲಿ ‘ಜೋಗಿಬೆಟ್ಟು’ ಎಂದು ಹೇಳಿದೆ. ರಿಕ್ಷಾ ಆಸ್ಪತ್ರೆಯ ಗೇಟು ದಾಟಿ ಸಾಗುತ್ತಿತ್ತು. ಜಿಟಿ ಜಿಟಿಯ ಮಳೆಯಲ್ಲಿ ರಿಕ್ಷಾದ ಹೊರಗೇನೂ ಕಾಣುತ್ತಿರಲಿಲ್ಲ. ದೂರದಲ್ಲಿ ಓರ್ವ ವೃದ್ಧ ಗೇಟಿನ ಬದಿಯಲ್ಲಿ ಮಳೆಯಲ್ಲಿ ನೆನೆಯುತ್ತಾ, ಆಲಿಕಲ್ಲು ಹೆದುಕ್ಕುತ್ತಿದ್ದು ಮಬ್ಬು ಮಬ್ಬಾಗಿ ಕಾಣುತ್ತಿತ್ತು. ‘‘ಹಾ ಮೊದಲ ಮಳೆಯೇ?’’ ಅಮ್ಮ ಖುಷಿಯಿಂದೊಮ್ಮೆ ಹೇಳಿಕೊಂಡರು. ರಿಕ್ಷಾ ಅವನ ಹತ್ತಿರವಾಗಿಯೇ ಸಾಗಿತು. ಆ ವೃದ್ಧನಿಗೆ ಮಳೆಯ ಮಧ್ಯೆಯೂ ಸಂತಕ್ಲಾಸ್‌ನ ಚಹರೆಯೇ ಇತ್ತು.