ಆರೆಸ್ಸೆಸ್ ಗಾಂಧಿಯನ್ನು ಎಷ್ಟೊಂದು ದ್ವೇಷಿಸುತ್ತಿತ್ತು ಎಂದರೆ...

Update: 2019-05-27 18:32 GMT

ಸಂಸತ್ತಿಗೆ ಬಿಜೆಪಿ ಅಭ್ಯರ್ಥಿಗಳಾಗಿದ್ದವರು ಮತ್ತು ಬಿಜೆಪಿಯ ಕೇಂದ್ರ ಸಚಿವರಾಗಿದ್ದವರು ಕೂಡ ಗೋಡ್ಸೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿರುವಾಗ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಗಾಂಧಿಯ ಬಗ್ಗೆ ಆಡುವ ಹೊಗಳಿಕೆಯ ಮಾತುಗಳು ಎಷ್ಟು ವಿಶ್ವಾಸಾರ್ಹ? ರಾಷ್ಟ್ರಪಿತನ ಬಗ್ಗೆ ದ್ವೇಷ ಮನೋಭಾವ ಸಂಘಪರಿವಾರದ ನರನಾಡಿಗಳಲ್ಲಿ ಹರಿಯುತ್ತಿದೆ ಎಂಬುದು ಐತಿಹಾಸಿಕ ಸತ್ಯ.

ಇತ್ತೀಚೆಗೆ ಹಿಂದುತ್ವ ರಾಜಕಾರಣಿಗಳ ಒಂದು ಸರಣಿ ನಾಥೂರಾಮ್ ಗೋಡ್ಸೆಯನ್ನು ಹೊಗಳಿ ನೀಡಿರುವ ಹೇಳಿಕೆಗಳು ಮಹಾತ್ಮಾಗಾಂಧಿಯವರು ಬದುಕು ಮತ್ತು ಕೊಡುಗೆಗಳ ಬಗ್ಗೆ ಸಂಘಪರಿವಾರದ ಆಳದಲ್ಲಿ ಹುದುಗಿರುವ ದ್ವಂದ್ವ ಮನೋಧರ್ಮವನ್ನು, ವಿರೋಧಾಭಾಸದ ನಿಲುವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಸಂಸತ್ತಿಗೆ ಬಿಜೆಪಿ ಅಭ್ಯರ್ಥಿಗಳಾಗಿದ್ದವರು ಮತ್ತು ಬಿಜೆಪಿಯ ಕೇಂದ್ರ ಸಚಿವರಾಗಿದ್ದವರು ಕೂಡ ಗೋಡ್ಸೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿರುವಾಗ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಗಾಂಧಿಯ ಬಗ್ಗೆ ಆಡುವ ಹೊಗಳಿಕೆಯ ಮಾತುಗಳು ಎಷ್ಟು ವಿಶ್ವಾಸಾರ್ಹ? ರಾಷ್ಟ್ರಪಿತನ ಬಗ್ಗೆ ದ್ವೇಷ ಮನೋಭಾವ ಸಂಘಪರಿವಾರದ ನರನಾಡಿಗಳಲ್ಲಿ ಹರಿಯುತ್ತಿದೆ ಎಂಬುದು ಐತಿಹಾಸಿಕ ಸತ್ಯ.
1946-47ರಲ್ಲಿ ನಡೆದ ದೊಂಬಿಗಳು ಎರಡೂಕಡೆಯ ತೀವ್ರಗಾಮಿಗಳನ್ನು ಮುನ್ನೆಲೆಗೆ ತಂದವು. ಮುಸ್ಲಿಮರ ಕಡೆಯಲ್ಲಿ ಮುಸ್ಲಿಂ ನ್ಯಾಶನಲ್ ಗಾರ್ಡ್ಸ್ ಮತ್ತು ಖಕ್ಸರ್‌ಗಳು ಮತ್ತು ಹಿಂದೂಗಳ ಕಡೆಯಲ್ಲಿ ಹಿಂದೂ ಮಹಾಸಭಾ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಇದ್ದವು. ಆರೆಸ್ಸೆಸ್ ಕಾರ್ಯಕರ್ತರು ಪಂಜಾಬ್‌ನಲ್ಲಿ ನಡೆದ ಹಿಂಸೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. 1947ರ ಮಾರ್ಚ್ 8ರಂದು ದಿಲ್ಲಿ ಪ್ರಾಂತದ ಆರೆಸ್ಸೆಸ್ ಕಾರ್ಯಕರ್ತರ ಒಂದು ರ್ಯಾಲಿ ನಡೆಯಿತು. ಅದರಲ್ಲಿ ಸುಮಾರು ಒಂದು ಲಕ್ಷ ಕಾರ್ಯಕರ್ತರು ಭಾಗವಹಿಸಿದ್ದರು. ಅಂದಿನ ಮುಖ್ಯ ಅತಿಥಿಯಾಗಿದ್ದ, ಆಗ ಆರೆಸ್ಸೆಸ್‌ನ ನೇತೃತ್ವವಹಿಸಿದ್ದ ಎಂ. ಎಸ್. ಗೋಳ್ವಾಲ್ಕರ್ ತನ್ನ ಧರ್ಮವನ್ನು ರಕ್ಷಿಸುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವೆಂದು ಅಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಹೇಳಿದರು.
 ಎರಡು ದಿನಗಳ ನಂತರ ದರಿಯಾಗಂಜ್‌ನಲ್ಲಿ ಶ್ಯಾಮ್‌ಬಿಹಾರಿ ಲಾಲ್ ಎಂಬವರ ಮನೆಯಲ್ಲಿ ಆರೆಸ್ಸೆಸ್ ನಾಯಕರ ಒಂದು ಸಭೆ ನಡೆಯಿತು. ಸಭೆಗೆ ಹಾಜರಾದವರಲ್ಲಿ ಹೆಚ್ಚಿನವರು ಹಿಂದೂ ವ್ಯಾಪಾರಿಗಳಾಗಿದ್ದರು. ಸಭೆಯಲ್ಲಿ ಪಂಜಾಬಿನ ಸೂಕ್ಷ್ಮವಾದ ಹಿಂದೂ ಮುಸ್ಲಿಂ ಪರಿಸ್ಥಿತಿಯಲ್ಲಿ ಚರ್ಚಿಸಲಾಯಿತು. ದಿಲ್ಲಿಯ ಶಾಖೆಯ ಪರವಾಗಿ ಲಾಲಾಹರಿಚಂದ್ ಎಂಬವರೊಬ್ಬರು ಗೋಳ್ವಾಲ್ಕರ್‌ಗೆ ಒಂದು ಲಕ್ಷ ರೂಪಾಯಿಯ ನಿಧಿ ಅರ್ಪಿಸಿದರು. ಗೋಳ್ವಾಲ್ಕರ್ ತನ್ನ ಭಾಷಣದಲ್ಲಿ ಹಿಂದೂಗಳು ನಾಶವಾದರೆ ಸಂಘವೂ ನಾಶವಾಗುತ್ತದೆ ಎಂದರು. ಅಲ್ಲದೆ, ಮುಂದುವರಿದು ಅವರು ಹೇಳಿದರು. ‘‘ಪಂಜಾಬಿನಲ್ಲಿ ಹಿಂದೂಗಳಲ್ಲಿ ಒಗ್ಗಟ್ಟು ಇಲ್ಲದಿರುವುದೇ ಇಂದಿನ ಅನಾಹುತಕ್ಕೆ ಕಾರಣ. ಸಂಘವು ಹಿಂದೂಗಳನ್ನು ಒಂದುಗೂಡಿಸಬೇಕು ಮತ್ತು ಬಂಡವಾಳಶಾಹಿಗಳು ಹಣಕಾಸು ನೆರವು ನೀಡುವ ಮೂಲಕ ಈ ಕೆಲಸದಲ್ಲಿ ಸಹಾಯಮಾಡಬೇಕು (ಸಿಐಡಿ ವರದಿ, ಮಾರ್ಚ್ 8 ಮತ್ತು 9, ಕಡತ ಸಂಖ್ಯೆ 137, ದಿಲ್ಲಿ ಪೊಲೀಸ್ ದಾಖಲೆಗಳು, 5ನೇ ಕಂತು, ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಗ್ರಂಥಾಲಯ)
1947ರ ಸೆಪ್ಟಂಬರ್ ತಿಂಗಳ ಕೊನೆಯ ವಾರದಲ್ಲಿ ಗಾಂಧೀಜಿ ಹರಿಜನ ಕಾಲನಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಒಂದು ತಂಡದೊಡನೆ ಮಾತುಕತೆ ನಡೆಸಿದರು. ಅವರು ಕಾರ್ಯಕರ್ತರ ಶಿಸ್ತು ಮತ್ತು ಅದರೊಳಗೆ ಅಸ್ಪಶ್ಯತೆ ಇಲ್ಲದಿರುವುದನ್ನು ಹೊಗಳಿದರು. ಆದರೆ ‘‘ನಿಜವಾಗಿಯೂ ಉಪಯೋಗಕಾರಿಯಾಗಬೇಕಾದರೆ ಸ್ವ-ತ್ಯಾಗದೊಂದಿಗೆ ಉದ್ದೇಶದ ಪರಿಶುದ್ಧತೆ ಮತ್ತು ನಿಜವಾದ ಜ್ಞಾನವೂ ಸೇರಿಕೊಳ್ಳಬೇಕು ಎಂದು ಹೇಳಿದರು.’’ ಸಂಘವು ಮುಸ್ಲಿಂ ವಿರೋಧಿಯಾಗಿದೆ ಎಂಬ ಹಲವು ಆಪಾದನೆಗಳನ್ನು ಗಾಂಧೀಜಿಯ ಗಮನಕ್ಕೆ ತರಲಾಗಿತ್ತು. ಹಿಂದೂ ಧರ್ಮವು ಯಾರನ್ನೂ ಹೊರಗಿಡುವ (ಎಕ್ಸ್‌ಕ್ಲೂಸಿವ್) ಒಂದು ಧರ್ಮವಲ್ಲವೆಂದು ಅವರು ಸಂಘದ ಕಾರ್ಯಕರ್ತರಿಗೆ ಜ್ಞಾಪಿಸಿ ‘‘ಹಿಂದೂಗಳಿಗೆ ಇಸ್ಲಾಂನೊಂದಿಗೆ ಜಗಳ ಸಾಧ್ಯವಿಲ್ಲ’’ ಎಂದರು.
ಸಂಘದ ಶಕ್ತಿಯನ್ನು ಭಾರತ ಹಿತಾಸಕ್ತಿಗಳ ಪರವಾಗಿ ಅಥವಾ ಅದರ ವಿರುದ್ಧವಾಗಿ ಬಳಸಬಹುದು ಎಂದು ಗಾಂಧಿ ನುಡಿದರು. (1947ರ ಸೆಪ್ಟಂಬರ್ 28, ಹರಿಜನ್ ವರದಿ)


ಗಾಂಧೀಜಿ ಆರೆಸ್ಸೆಸ್ ಬಗ್ಗೆ ದ್ವಂದ್ವ ನಿಲುವು ಹೊಂದಿದ್ದರು. ಸಂಘಕ್ಕೆ ಅವರಲ್ಲಿ ವಿಶ್ವಾಸವಿರಲಿಲ್ಲ. ಸಂಘದ ಪತ್ರಿಕೆ ಆರ್ಗನೈಸರ್‌ನಲ್ಲಿ ಪ್ರಕಟವಾದ ಒಂದು ಲೇಖನವು ಬಂಗಾಳದಲ್ಲಿ ಕೋಮುಶಾಂತಿ ನೆಲಸುವಂತೆ ಮಾಡಲು ಗಾಂಧೀಜಿ ನಡೆಸಿದ ಪ್ರಯತ್ನಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ‘‘ರೋಮ್ ನಗರ ಹತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸುತ್ತಿದ್ದ’’ ಎಂದು ಅದು ಟೀಕೆ ಮಾಡಿತು: ‘‘ನಮ್ಮ ಕಣ್ಣುಗಳ ಮುಂದೆಯೇ ಇತಿಹಾಸ ಪುನರಾವರ್ತಿಸುತ್ತಿದೆ. ಕೋಲ್ಕತಾದಿಂದ ಮಹಾತ್ಮಾಗಾಂಧಿ ಇಸ್ಲಾಮ್ ಧರ್ಮವನ್ನು ಹೊಗಳುತ್ತಿದ್ದಾರೆ, ಅಲ್ಲಾಹು ಅಕ್ಬರ್ ಎಂದು ಕೂಗುತ್ತಿದ್ದಾರೆ, ಹಿಂದುಗಳಿಗೆ ಹಾಗೆಯೇ ಮಾಡಲು ಉಪದೇಶಿಸುತ್ತಿದ್ದಾರೆ. ಇದೇ ವೇಳೆ, ಪಂಜಾಬ್ ಮತ್ತು ಇತರ ಪ್ರದೇಶಗಳಲ್ಲಿ ಇಸ್ಲಾಮ್‌ನ ಹೆಸರಿನಲ್ಲಿ ಹಾಗೂ ಅಲ್ಲಾಹು ಅಕ್ಬರ್ ಎಂಬ ಕೂಗಿನ ಹಿನ್ನೆಲೆಯಲ್ಲೇ ಅತ್ಯಂತ ಕ್ರೂರವಾದ, ನಾಚಿಕೆ ಗೇಡಿನ ಪಾಶವೀಕೃತ್ಯಗಳನ್ನು ನಡೆಸಲಾಗುತ್ತಿದೆ.’’ ಗಾಂಧಿ ಮುಸ್ಲಿಮರಿಗೆ ತನ್ನ ಮೈತ್ರಿಹಸ್ತ ಚಾಚಿದ್ದರು. ಆದರೆ ‘‘ಮುಸ್ಲಿಮರು ಗಾಂಧೀಜಿ ಮತ್ತು ಅವರ ಮಾತುಗಳಿಗೆ, ಅವುಗಳು ತಮಗೆ ಅನುಕೂಲಕರವಾಗದ ಹೊರತು ಯಾವುದೇ ಮಹತ್ವ ನೀಡುವುದಿಲ್ಲ’’ ಎಂದು ಆರೆಸ್ಸೆಸ್ ನಂಬಿತ್ತು. ಆದರೂ ಹಿಂದೂಗಳು ಅವರಿಗೆ ತುಂಬ ಗೌರವ ಹಾಗೂ ಮನ್ನಣೆ ನೀಡುತ್ತಾರೆ. ಆದರೆ ಅವರು ಗಾಂಧಿಯ ಇಸ್ಲಾಮಿಕ್ ಬೋಧನೆ ಮತ್ತು ತುಷ್ಠೀಕರಣವನ್ನು ಮೆಚ್ಚುವಂತಹ ಮನಸ್ಥಿತಿಯಲ್ಲಿಲ್ಲ. ಗಾಂಧೀಜಿಯ ನಾಯಕತ್ವವನ್ನು, ಹಿಂದೂಗಳ ಅವರ ನಾಯಕತ್ವವನ್ನು ಇತರ ಉದ್ದೇಶಗಳಿಗಾಗಿ ಬಳಸಬೇಕೆಂದು ಆರ್ಗನೈಸರ್‌ನ ಈ ಲೇಖನ ಅವರನ್ನು ಒತ್ತಾಯಿಸಿತು. ‘‘ಹಿಂದೂಗಳನ್ನು ಒಂದುಗೂಡಿಸುವ ಮತ್ತು ಸಂಘಟಿಸುವ ಅಭೂತಪೂರ್ವವಾದ ಅವಕಾಶ ಮಹಾತ್ಮಾರಿಗಿದೆ...’’(ರಘು, ‘ವ್ಹೆದರ್ ಮಹಾತ್ಮಾ ಗಾಂಧಿ?’ ಆರ್ಗನೈಸರ್ ಸೆಪ್ಟಂಬರ್ 11,1947)

ಇದು ಏಕಕಾಲದಲ್ಲಿ ಟೀಕೆಯೂ, ಬೇಸರವೂ ಆಗಿತ್ತು.ಗಾಂಧೀಜಿ ತನ್ನ ಸ್ಥಾನಮಾನ ಹಾಗೂ ಪ್ರತಿಷ್ಠೆಯನ್ನು ಹಿಂದೂಗಳನ್ನು ಸಕ್ರಿಯವಾಗಿ ಹಾಗೂ ಮಿಲಿಟೆಂಟ್ ಆಗಿ ಮುನ್ನಡೆಸಿ, ಮುಸ್ಲಿಮರಿಗೆ ಅವರ ಜಾಗ ಯಾವುದೆಂದು ತೋರಿಸಿಕೊಟ್ಟಲ್ಲಿ ಎಷ್ಟು ಚೆನ್ನಾಗಿರುತ್ತದೆ. ಆರೆಸ್ಸೆಸ್‌ನ ದೃಷ್ಟಿಯಲ್ಲಿ ಗಾಂಧೀಜಿ ಓರ್ವ ದಿಕ್ಕುತಪ್ಪಿದ ನಾಯಕ. ಆರೆಸ್ಸೆಸ್‌ನವರ ಕವಾಯತಿನ ಬೀಟ್‌ಗೆ ನಿಯೋಗಿಸಲಾಗಿದ್ದ ಓರ್ವ ಪೊಲೀಸ್ ವರದಿ ಮಾಡಿದಂತೆ ಸ್ವತಃ ಅದರ ಪ್ರಯತ್ನವು ‘‘ಹಿಂದೂಗಳನ್ನು ದೈಹಿಕವಾಗಿ ಬಲಿಷ್ಠರಾಗುವಂತೆ ಬೆಳೆಸುವುದು ಹಾಗೂ ಭಾರತದಲ್ಲಿ ಹಿಂದೂ ಆಳ್ವಿಕೆಯನ್ನು ಸ್ಥಾಪಿಸುವುದು’’ ಆಗಿತ್ತು. ‘‘ಸದ್ಯದ ಹಾಲಿ ಸರಕಾರ ನೂರಕ್ಕೆ ನೂರರಷ್ಟು ಪ್ರತಿ ಶತ ಹಿಂದೂ ಸರಕಾರವಲ್ಲ, ಆದರೂ ಅವರು ಅದಕ್ಕೆ ವಿರೋಧಿಗಳಲ್ಲ; ಯಾಕೆಂದರೆ ಅದರ ಸಹಾಯದಿಂದ ಅವರು ಸಂಪೂರ್ಣವಾಗಿ ಹಿಂದೂ ರಾಷ್ಟ್ರವಾಗಿರುವಂತಹ ಒಂದು ರಾಷ್ಟ್ರವನ್ನು ಸ್ಥಾಪಿಸಲು ಸಮರ್ಥರಾಗಬಹುದು.’’ ಪೊಲೀಸ್ ವರದಿ ಹೀಗೇ ಮುಂದುವರಿಯುತ್ತದೆ:

‘‘ಸಂಘದ ಸ್ವಯಂಸೇವಕರ ಪ್ರಕಾರ, ಸ್ವಲ್ಪ ಸಮಯದ ಹಿಂದೆ ದಿಲ್ಲಿಯಲ್ಲಿ ಆರಂಭಿಸಲಾದಂತಹ ಚಳವಳಿಯ ರೀತಿಯ ಇನ್ನೊಂದು ಚಳವಳಿ ಆರಂಭಗೊಂಡಲ್ಲಿ ಮಾತ್ರ ಮುಸ್ಲಿಮರು ಭಾರತವನ್ನು ಬಿಟ್ಟು ತೊಲಗುತ್ತಾರೆ......’’
ಗಾಂಧೀಜಿ ದಿಲ್ಲಿಯಿಂದ ನಿರ್ಗಮಿಸುವುದನ್ನೇ ಆರೆಸ್ಸೆಸ್ ಕಾರ್ಯಕರ್ತರು ಕಾಯುತ್ತಿದ್ದರು. ಮಹಾತ್ಮಾ ಗಾಂಧಿ ದಿಲ್ಲಿಯಲ್ಲಿರುವವರೆಗೆ ತಾವು ತಮ್ಮ ಒಳ ಸಂಚಿನ ಯೋಜನೆಗಳನ್ನು ಕಾರ್ಯಗತಗೊಳಿಸಲು ತಮಗೆ ಸಾಧ್ಯವಾಗುವುದಿಲ್ಲವೆಂದು ಆರೆಸ್ಸೆೆಸಿಗರು ತಿಳಿದಿದ್ದರು. ಅಲ್ಲದೆ ಸದ್ಯದಲ್ಲೇ ಬರಲಿದ್ದ ಈದ್‌ಲ್ ಅಝುಹಾದ ವೇಳೆ ಮುಸ್ಲಿಮರು ಯಾವುದೇ ಕೈನ್ (ಹಸುಗಳನ್ನು) ಕೊಂದಲ್ಲಿ ಆಗ ಸಂಘಿಗಳಿಗೆ ಅದರ ಸುಳಿವು ಸಿಗುತ್ತದೆ, ದಿಲ್ಲಿಯಲ್ಲಿ ಕೋಮು ಗಲಭೆಗಳು ಭುಗಿಲೇಳುವ ಸಾಧ್ಯತೆ ಇದ್ದೇ ಇರುತ್ತದೆ ಎಂಬುದು ಆರೆಸ್ಸೆಸ್‌ನ ಅಭಿಪ್ರಾಯವಾಗಿತ್ತು. (ಸೋರ್ಸ್ ರಿಪೋರ್ಟ್ ಅಕ್ಟೋಬರ್ 24, 1947, ಭಗವಾನ್ ದಾಸ್ ಜೈನ್, ಸ್ಟೇಶನ್ ಇನ್‌ಸ್ಪೆಕ್ಟರ್‌ರವರ ಸಹಿ ಇದೆ; ಕಡತ 138, ದಿಲ್ಲಿ ಪೊಲೀಸ್ ದಾಖಲೆಗಳು, 5ನೇ ಕಂತು, ಎನ್‌ಎಂಎಂಎಲ್).
  1947ರ ನವೆಂಬರ್ ತಿಂಗಳಲ್ಲಿ ಎಂ.ಎಸ್. ಗೋಳ್ವಾಲ್ಕರ್ ದಿಲ್ಲಿಗೆ ಮರಳಿ ಬಂದರು. ಅವರು ಬೆಂಬಲಿಗರಿಂದ ಹಣ ಸಂಗ್ರಹಿಸಿದರು, ಆರೆಸ್ಸೆಸ್ ಕಾರ್ಯಕರ್ತರನ್ನು ಭೇಟಿಯಾಗಿ ದಿಲ್ಲಿಯಲ್ಲಿ ಸಂಘದ ಅಭಿವೃದ್ಧಿ ಎಷ್ಟಾಗಿದೆ ಎಂದು ಪರಿಶೀಲಿಸಿದರು. ಹಲವು ಸಾವಿರ ಹೊಸ ಸದಸ್ಯರನ್ನು ಆರೆಸ್ಸೆಸ್‌ಗೆ ಸೇರಿಸಿಕೊಳ್ಳಲಾಗಿತ್ತು. ನವೆಂಬರ್ 15ರ ಒಂದು ಗುಪ್ತಚರ ವರದಿಯಲ್ಲಿ ಹೀಗೆ ದಾಖಲಾಗಿದೆ. ‘‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು, ವಿಶೇಷವಾಗಿ ಪಂಜಾಬ್‌ನಿಂದ ನಿರಾಶ್ರಿತರಾಗಿ ಬರುತ್ತಿರುವವರು, ದೀಪಾವಳಿ ಹಬ್ಬದ ಬಳಿಕ ದಿಲ್ಲಿಯಲ್ಲಿ ಕೋಮುಗಲಭೆ ಆರಂಭಿಸುವ ಉದ್ದೇಶ ಹೊಂದಿದ್ದಾರೆ. ದಿಲ್ಲಿಯಲ್ಲಿ ಮುಸ್ಲಿಮರು ಅಡ್ಡಾಡುತ್ತ ವಾಣಿಜ್ಯೋದ್ಯಮಿಗಳಿಂದ ದೊಡ್ಡ ಮೊತ್ತದ ಧನ ಸಂಗ್ರಹ ಮಾಡುವ ದೃಶ್ಯವನ್ನು ತಾವು ಸಹಿಸಿಕೊಳ್ಳಲಾರೆವು ಎನ್ನುತ್ತಾರೆ ಅವರು. ಮುಸ್ಲಿಂ ಲೀಗ್ ಅನ್ನು ಮತ್ತು ಪಾಕಿಸ್ತಾನದ ಸ್ಥಾಪನೆಯನ್ನು ವಿರೋಧಿಸಿದರು ಎಂಬ ಒಂದೇ ಕಾರಣಕ್ಕಾಗಿ ಹಿಂದೂ ಮತ್ತು ಸಿಖ್ ನಿರಾಶ್ರಿತರನ್ನು ನಿರ್ಗತಿಕರನ್ನಾಗಿ ಮಾಡಲಾಗಿದೆ. ಅವರು ಹಸಿವಿನಿಂದ ಉಪವಾಸ ಬಿದ್ದು ಸಾಯುತ್ತಿದ್ದಾರೆ ಮತ್ತು ಸದ್ಯದಲ್ಲೇ ಬರಲಿರುವ ಚಳಿಗಾಲದಲ್ಲಿ ಚಳಿಯಲ್ಲಿ ಮರಗಟ್ಟಿ ಸಾಯಬೇಕಾಗುತ್ತದೆ. ಕೆಲವು (ಆರೆಸ್ಸೆಸ್) ಕಾರ್ಯಕರ್ತರು ಶಸ್ತ್ರಗಳನ್ನು ಹಾಗೂ ಸ್ಫೋಟಕಗಳನ್ನು ತರಲು ಹೊರಗೆ ಹೋಗಿದ್ದಾರೆ ಎಂದು ವರದಿಯಾಗಿದೆ’’ (ನವೆಂಬರ್ 10, 15 ಮತ್ತು 17ರ ವರದಿಗಳು).


 ಡಿಸೆಂಬರ್ 7ರಂದು ರಾಮಲೀಲಾ ಮೈದಾನದಲ್ಲಿ ದಿಲ್ಲಿ ಆರೆಸ್ಸೆಸ್ ಘಟಕದ ವಾರ್ಷಿಕ ಸಭೆಯ ಸಮಾರಂಭ ನಡೆಯಿತು. ಅಂದಿನ ಮುಖ್ಯ ಭಾಷಣ ಮಾಡಿದ ಗೋಳ್ವಾಲ್ಕರ್ ಒಂದೂವರೆ ಗಂಟೆ ಮಾತಾಡಿದರು. ಅವರು ಆತ್ಮಾಭಿನಂದನೆಯೊಂದಿಗೆ ತನ್ನ ಭಾಷಣ ಆರಂಭಿಸಿದರು. ಭಾರತದ ಉದ್ದಗಲಕ್ಕೂ ಆರೆಸ್ಸೆಸ್‌ನ ಸಾವಿರಾರು ಶಾಖೆಗಳಿವೆ. ಅವುಗಳಿಗೆಲ್ಲ ನಾವು ಭೇಟಿ ನೀಡಬೇಕಾದರೆ 20ರಿಂದ 25 ವರ್ಷಗಳೇ ಬೇಕಾಗಬಹುದು. ಸತತವಾಗಿ ಪ್ರವಾಸ ಮಾಡಿಯೂ ಅವರು ಅವುಗಳಲ್ಲಿ ಕೆಲವೇ ಕೆಲವು ಶಾಖೆಗಳಿಗೆ ಭೇಟಿ ನೀಡಲು ಸಾಧ್ಯವಾಯಿತು. ಅವರ ಸಂಘಟನೆ ಕುರಿತು ಕೆಲವು ವರ್ಷಗಳ ಹಿಂದೆ ಕೇಳಿಯೇ ಇರದಿದ್ದ ಜನರಿಗೆ ಅದರ ಬೆಳವಣಿಗೆಯನ್ನು ಕಂಡು ಆಶ್ಚರ್ಯವಾಯಿತು......
ಬಳಿಕ ಗೊಲ್ವಾಲ್ಕರ್ ಆರೆಸ್ಸೆಸ್ ಗುರಿಗಳು, ಉದ್ದೇಶಗಳು ಹಾಗೂ ಆದರ್ಶಗಳ ಬಗ್ಗೆ ಮಾತಾಡಿದರು. ಮಧ್ಯಯುಗದ ಸೇನಾದೊರೆಗಳಾದ ಶಿವಾಜಿ ಮತ್ತು ರಾಣಾ ಪ್ರತಾಪ್ ರವರನ್ನು ಪ್ರಶಂಶಿಸಿದ ಬಳಿಕ ಅವರು ಹಿಂದೂ ಏಕತೆ ಮತ್ತು ಸ್ವಾಭಿಮಾನದ ಬಗ್ಗೆ ಮಾತನಾಡಿದರು. ‘‘ನಮ್ಮನ್ನು ನಾವು ಹಿಂದೂಗಳೆಂದು ಕರೆದುಕೊಳ್ಳಲು ನಾಚಿಕೊಳ್ಳಬಾರದು. ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಎತ್ತಿಹಿಡಿಯಲು ಸಂಘವು ಪ್ರತಿಜ್ಞೆ ಕೈಗೊಂಡಿದೆ.’’
ಮರುದಿನ ಸಂಜೆ ರೋಹ್ಟಕ್ ರಸ್ತೆಯಲ್ಲಿರುವ ಸಂಘದ ಶಿಬಿರದಲ್ಲಿ ಒಂದು ಸಭೆ ನಡೆಯಿತು. ಅಲ್ಲಿ ಸುಮಾರು 2,000 ಮಂದಿ ಪೂರ್ಣಕಾಲಿಕ ಆರೆಸ್ಸೆಸಿಗರು ಉಪಸ್ಥಿತರಿದ್ದರು. ಕಾರ್ಯಕರ್ತರ ಆ ಗುಂಪನ್ನು ಉದ್ದೇಶಿಸಿ ಗೋಳ್ವಾಲ್ಕರ್ ಹೇಳಿದರು: ‘‘ಶಿವಾಜಿ ನಡೆಸಿದ್ದಂತಹ ತಂತ್ರಗಳನ್ನು ಬಳಸಿ ನಾವು ಗೆರಿಲ್ಲಾ ಯುದ್ಧಕ್ಕೆ ಸಿದ್ಧರಾಗಬೇಕು. ಪಾಕಿಸ್ತಾನವನ್ನು ಮುಗಿಸುವವರೆಗೆ ಸಂಘವು ವಿರಮಿಸುವುದಿಲ್ಲ. ನಮ್ಮ ದಾರಿಗೆ ಯಾರಾದರೂ ಅಡ್ಡ ಬಂದಲ್ಲಿ, ಅದು ನೆಹರೂ ಸರಕಾರವಿರಲಿ ಅಥವಾ ಬೇರೆ ಯಾವುದೇ ಸರಕಾರವಿರಲಿ, ನಾವು ಅವರ ವಿರುದ್ಧ ಹೋರಾಡಬೇಕು. ಸಂಘವನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ.’’
 ಅಂದಿನ ಸಭೆಯಲ್ಲಿ ಸಾದಾ ಉಡುಪಿನಲ್ಲಿದ್ದ ಓರ್ವ ಪೊಲೀಸ್ ಹಾಜರಿದ್ದ. ಅವನ ವರದಿಯ ಪ್ರಕಾರ ಮುಸ್ಲಿಮರನ್ನು ಉಲ್ಲೇಖಿಸಿ ಗೋಳ್ವಾಲ್ಕರ್ ಹೀಗೆ ಹೇಳಿದರು: ‘‘ಅವರನ್ನು ಭಾರತದಲ್ಲ್ಲಿಟ್ಟು ಕೊಳ್ಳಲು ಭೂಮಿಯ ಮೇಲಿರುವ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಅವರು ದೇಶವನ್ನು ಬಿಟ್ಟು ತೊಲಗಲೇಬೇಕು. ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಅವರ ಮತಗಳಿಂದ ಲಾಭ ವಾಗಬಹುದೆಂಬ ಕಾರಣಕ್ಕಾಗಿ ಮಹಾತ್ಮಾ ಗಾಂಧಿ ಮುಸ್ಲಿಮರನ್ನು ಭಾರತದಲ್ಲೇ ಉಳಿಸಿಕೊಳ್ಳಲು ಬಯಸಿದರು. ಆದರೆ, ಚುನಾವಣೆ ನಡೆಯುವಷ್ಟರಲ್ಲಿ ಭಾರತದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಇರುವುದಿಲ್ಲ...... ಮಹಾತ್ಮಾಗಾಂಧಿ ಇನ್ನು ಅವರನ್ನು ಹಾದಿ ತಪ್ಪಿಸಲು ಸಾಧ್ಯವಿಲ್ಲ. ಅಂತಹ ವ್ಯಕ್ತಿಗಳನ್ನು ತಕ್ಷಣ ವೌನವಾಗಿಸಲು ಬೇಕಾದ ಶಕ್ತಿ ಸಾಮರ್ಥ್ಯ ವ್ಯವಸ್ಥೆ ನಮ್ಮ ಬಳಿ ಇದೆ. ಆದರೆ ಹಿಂದೂಗಳಿಗೆ ಹಾನಿ ಮಾಡದೆ ಇರುವುದು ನಮ್ಮ ಪರಂಪರೆ. ನಮಗೆ ಅನಿವಾರ್ಯವಾದರೆ ನಾವು ಆ ಮಾರ್ಗವನ್ನೂ ಹಿಡಿಯಲೇ ಬೇಕಾಗುತ್ತದೆ.’’ (ಅದೇ ಕಡತದಲ್ಲಿ 1947ರ ಡಿಸೆಂಬರ್ 7 ಮತ್ತು 9ರ ದಿನಾಂಕ ನಮೂದಿಸಿರುವ ಸಿ.ಐ.ಡಿ. ಇನ್‌ಸ್ಪೆಕ್ಟರ್ ಕರ್ತಾರ್ ಸಿಂಗ್‌ರವರ ವರದಿಗಳು).
1947ರ ದ್ವಿತೀಯಾರ್ಧದಲ್ಲಿ ದಿಲ್ಲಿಯಲ್ಲಿ ಜನರ ಮನಸ್ಥಿತಿ ತುಂಬ ಕೊಳಕಾಗಿತ್ತು. ಪಂಜಾಬ್‌ನಲ್ಲಿ ನಡೆದ ಘಟನೆಗಳಿಂದ ಕ್ರುದ್ಧರಾದ, ಹಾಗೂ ಸಿಖ್ ಮತ್ತು ಹಿಂದೂ ನಿರಾಶ್ರಿತರು ಹೊತ್ತುತಂದಿದ್ದ ತಮ್ಮ ಮೇಲೆ ನಡೆದಿದ್ದ ದೌರ್ಜನ್ಯಗಳ ವಿವರಗಳನ್ನು ಕೇಳಿ ರೋಷಾಗ್ನಿಯಿಂದ ಉರಿಯುತ್ತಿದ್ದ ಆರೆಸ್ಸೆಸ್ ಮಿಲಿಟಂಟ್ ಶಕ್ತಿಗಳು ದಿಲ್ಲಿಯಲ್ಲಿರುವ ಎಲ್ಲ ಇಸ್ಲಾಮಿಕ್ ಪ್ರಭಾವಗಳಿಂದ, ಎಲ್ಲ ಮುಸ್ಲಿಮರಿಂದ ದಿಲ್ಲಿಯನ್ನು ಮುಕ್ತಗೊಳಿಸಬೇಕೆಂದು ಬಯಸಿದವು. ಭಾರತವನ್ನು ಒಂದು ಹಿಂದೂ ರಾಷ್ಟ್ರವಾಗಿ ಮಾಡುವ ತಮ್ಮ ಹಾದಿಗೆ ಅಡ್ಡವಾಗಿರುವ ಗಾಂಧಿ ಮತ್ತು ನೆಹರೂರಂತಹ ವ್ಯಕ್ತಿಗಳನ್ನು ‘ತಕ್ಷಣ ವೌನವಾಗಿಸುವ’ ಬಗ್ಗೆ ಕೂಡ ಗೋಳ್ವಾಲ್ಕರ್ ಮತ್ತು ಆರೆಸ್ಸೆಸ್ ಮಂದಿ ಯೋಚಿಸುತ್ತಿದ್ದರು.

ಕೃಪೆ: thewire 

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News

ಜಗದಗಲ
ಜಗ ದಗಲ