ತೀವ್ರಗೊಂಡ ಕುಡಿಯುವ ನೀರಿನ ಹಾಹಾಕಾರ: ಶಿವಮೊಗ್ಗ ತಾಲೂಕಿನ 20 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು
ಶಿವಮೊಗ್ಗ, ಮೇ 27: ಶಿವಮೊಗ್ಗ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ತಾಪಮಾನದ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದ್ದು, ಕುಡಿಯುವ ನೀರಿನ ಹಾಹಾಕಾರ ಮತ್ತಷ್ಟು ಉಲ್ಬಣಿಸಿದೆ. ಅಂತರ್ಜಲ ಮಟ್ಟ ಕುಸಿಯಲಾರಂಭಿಸಿದ್ದು, ಗಂಭೀರ ಸ್ಥಿತಿಗೆ ತಲುಪಿದೆ. ಹಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಇನ್ನೂ ಕೆಲ ದಿನಗಳ ಕಾಲ ಇದೇ ಸ್ಥಿತಿ ಮುಂದುವರಿದರೆ, ಭೀಕರ ಬರಗಾಲಕ್ಕೆ ತಾಲೂಕು ತುತ್ತಾಗುವ ಆತಂಕ ಎದುರಾಗಿದೆ.
ಈಗಾಗಲೇ ತಾಲೂಕಿನ ಸುಮಾರು 20 ಕ್ಕೂ ಅಧಿಕ ಗ್ರಾಮಗಲ್ಲಿ, ಜಲಮೂಲಗಳು ಸಂಪೂರ್ಣ ಬರಿದಾಗಿವೆ. ನೀರಿನ ತೀವ್ರ ಅಭಾವ ಕಂಡುಬಂದಿದ್ದು, ಈ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ತಾಪಮಾನ ಇಳಿಕೆಯಾಗಿ, ಮಳೆಯಾಗದಿದ್ದರೆ ಇನ್ನೂ ಕೆಲ ದಿನಗಳಲ್ಲಿ ಸುಮಾರು 30 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವುದು ಖಚಿತವಾಗಿದೆ. ಎಲ್ಲವೂ ಪ್ರಕೃತಿಯ ಮೇಲೆ ಅವಲಂಬಿತಾಗಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.
ತಾಲೂಕಿನ ಶೇ. 90 ರಷ್ಟು ಕೆರೆಕಟ್ಟೆಗಳು ನೀರಿಲ್ಲದೆ ಬರಿದಾಗಿವೆ. ಬೋರ್‍ವೆಲ್, ಬಾವಿಗಳಲ್ಲಿ ನೀರು ಬತ್ತಿ ಹೋಗುತ್ತಿದೆ. ಕೆಲ ಗ್ರಾಮಗಳಲ್ಲಿ 700 ರಿಂದ 800 ಅಡಿಗಳವರೆಗೆ ಬೋರ್‍ವೆಲ್ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಇದರಿಂದ ಗದ್ದೆ, ತೋಟಗಳಲ್ಲಿ ಬೆಳೆದಿರುವ ಬೆಳೆಗಳ ಸಂರಕ್ಷಣೆಗೆ ರೈತರು ಪರದಾಡುವಂತಾಗಿದೆ. ಹಲವೆಡೆ ಫಸಲು ಬಿಸಿಲಿಗೆ ಒಣಗಲಾರಂಭಿಸಿದೆ.
ಸೂಚನೆ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ (ಎ.ಇ.ಇ.) ಗಂಗಾಧರಪ್ಪರವರು ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದರು. 'ಸದ್ಯ ತಾಲೂಕಿನ 20 ಕ್ಕೂ ಅಧಿಕ ಗ್ರಾಮಗಳಿಗೆ ದಿನನಿತ್ಯ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಹಳ್ಳಿ, ಲಕ್ಷ್ಮೀಪುರ, ಹೊಸಕೊಪ್ಪ, ಕೊಮ್ಮನಾಳು ಗ್ರಾ.ಪಂ. ವ್ಯಾಪ್ತಿಯ ಬೂದಿಗೆರೆ, ಕುಂಚೇನಹಳ್ಳಿ ವ್ಯಾಪ್ತಿಯ ಮೇಲಿನತಾಂಡಾ, ಬೀರನಕೆರೆ ಸುತ್ತಮುತ್ತಲಿನ ಗ್ರಾಮಗಳು, ಅಬ್ಗಲಗೆರೆ ಗ್ರಾ.ಪಂ. ವ್ಯಾಪ್ತಿಯ ಕಲ್ಲುಗಂಗೂರು, ಹುಣಸೋಡು, ಚೆನ್ನಮುಂಭಾಪುರ, ತಮ್ಮಡಿಹಳ್ಳಿ ಗ್ರಾ.ಪಂ.ನ ತ್ಯಾವರೆಕೊಪ್ಪ, ಕುಂಸಿ ಗ್ರಾ.ಪಂ.ನ ಕುಂಸಿ, ಪುರದಾಳು ಗ್ರಾ.ಪಂ.ನ ತ್ಯಾವರೆಕೊಪ್ಪ, ಹೊಳೆಕೊಪ್ಪ ಗ್ರಾ.ಪಂ.ನ ಚಾಮೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ' ಎಂದು ಮಾಹಿತಿ ನೀಡಿದ್ದಾರೆ.
ಉಳಿದಂತೆ ತಾಲೂಕಿನ ಪುರದಾಳು, ಶ್ರೀರಾಂಪುರ, ಬನ್ನಿಕೆರೆ ಕೊಮ್ಮನಾಳು, ಶೆಟ್ಟಿಹಳ್ಳಿ, ವೆಂಕಟಾಪುರ, ಬೆನವಳ್ಳಿ, ಹಾರ್ನಳ್ಳಿ, ರಾಮನಗರ, ವಿಠಗೊಂಡನಕೊಪ್ಪ, ಎಡವಾಲ, ಮುದುವಾಲ, ಚಾಮುಂಡಿಪುರ, ತ್ಯಾಜವಳ್ಳಿ, ಕೊನಗವಳ್ಳಿ, ಮುದ್ದಿನಕೊಪ್ಪ ಸೇರಿದಂತೆ ಕೆಲ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಗಂಭೀರ ಸ್ಥಿತಿಗೆ ತಲುಪುತ್ತಿದೆ. ಜಲಮೂಲಗಳು ಬರಿದಾಗುತ್ತಿವೆ. ಮುಂದಿನ ಒಂದು ವಾರದಲ್ಲಿ ಮಳೆಯಾದರೆ ಕೊಂಚ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಇಲ್ಲದಿದ್ದರೆ, ಈ ಗ್ರಾಮಗಳಿಗೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಗಂಗಾಧರಪ್ಪರವರು ಅಭಿಪ್ರಾಯಪಡುತ್ತಾರೆ.
ನೀರಿನ ಸಮಸ್ಯೆ ಕಂಡುಬರುವ ಗ್ರಾಮಗಳಲ್ಲಿ ಸಮರೋಪಾದಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ. ನಾಗರಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗುತ್ತಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯತ್ ಆಡಳಿತಗಳಿಗೆ ಈ ಕುರಿತಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಬರಿದು: ಶಿವಮೊಗ್ಗ ತಾಲೂಕಿನ ನೂರಾರು ಕೆರೆಕಟ್ಟೆ, ಬಾವಿ, ಬೋರ್‍ವೆಲ್‍ಗಳ ನೀರಿಲ್ಲದೆ ಖಾಲಿಯಾಗಿವೆ. ಹೊಸದಾಗಿ ಬೋರ್‍ವೆಲ್ ಕೊರೆಯಿಸಿದರೂ ನೀರು ಲಭ್ಯವಾಗುತ್ತಿಲ್ಲ. ಮಂಡಘಟ್ಟ, ಮಡಕೆಚೀಲೂರು, ಕಲ್ಲುಗಂಗೂರು ಮೊದಲಾದ ಗ್ರಾಮಗಳಲ್ಲಿ ಸುಮಾರು 500 ರಿಂದ 600 ಅಡಿಗಳವರೆಗೆ ಬೋರ್‍ವೆಲ್ ಕೊರೆಯಿಸಿದರೂ ನೀರು ಲಭ್ಯವಾಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಶಿವಮೊಗ್ಗ ತಾಲೂಕಿನಲ್ಲಿ ಈ ಮಟ್ಟಕ್ಕೆ ನೀರಿನ ಅಭಾವ ಕಂಡುಬಂದಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ.
80 ಬೋರ್‍ವೆಲ್ ಕೊರೆಯಿಸಲಾಗಿದೆ: ಎಂಜಿನಿಯರ್ ಗಂಗಾಧರಪ್ಪ
ಶಿವಮೊಗ್ಗ ತಾಲೂಕಿನ ವಿವಿಧೆಡೆ ಇಲ್ಲಿಯವರೆಗೂ ಸುಮಾರು 80 ಬೋರ್‍ವೆಲ್ ಕೊರೆಯಿಸಲಾಗಿದೆ. ಇದೀಗ ಇನ್ನಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತ್ತಿದ್ದು, ಹೊಸದಾಗಿ 20 ಕಡೆಗಳಲ್ಲಿ ಬೋರ್‍ವೆಲ್ ಕೊರೆಯಿಸಲು ಪ್ರಸ್ತಾವನೆಗಳು ಬಂದಿವೆ. ಇಲ್ಲಿಯವರೆಗೂ 20 ಕ್ಕೂ ಅಧಿಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡುಬಂದಿದ್ದು ಈ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಕೆಲವೆಡೆ ಅಂತರ್ಜಲ ಮಟ್ಟ ಗಂಭೀರ ಸ್ಥಿತಿಯಲ್ಲಿ ಕುಸಿಯುತ್ತಿದೆ' ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ (ಎ.ಇ.ಇ.) ಗಂಗಾಧರಪ್ಪರವರು ಮಾಹಿತಿ ನೀಡುತ್ತಾರೆ.
ಭೀಕರ ಬರ ಪರಿಸ್ಥಿತಿ!
ಶಿವಮೊಗ್ಗ ತಾಲೂಕನ್ನು ರಾಜ್ಯ ಸರ್ಕಾರ ಈಗಾಗಲೇ ಬರ ಪೀಡಿತವೆಂದು ಘೋಷಿಸಿದೆ. ಪ್ರಸ್ತುತ ವರ್ಷ ತಾಲೂಕಿನ ವಿವಿಧೆಡೆ ಕಂಡುಬಂದಿರುವ ಕುಡಿಯುವ ನೀರಿನ ಅಭಾವದ ಸ್ಥಿತಿ, ಇತ್ತೀಚಿನ ವರ್ಷಗಳಲ್ಲಿ ಕಂಡುಬಂದಿಲ್ಲ. ಹಲವು ಗ್ರಾಮಗಳಲ್ಲಿ ಜಲಮೂಲಗಳು ಬರಿದಾಗಿ, ಅಂತರ್ಜಲ ಕೂಡ ಕುಸಿಯುತ್ತಿದೆ. ಬಯಲುಸೀಮೆಯ ಪ್ರದೇಶಗಳ ರೀತಿಯಲ್ಲಿ 700-800 ಅಡಿಗಳವರೆಗೆ ಬೋರ್‍ವೆಲ್ ಕೊರೆಯಿಸುವ ಸ್ಥಿತಿಯಿದೆ. ಮೇವು-ನೀರಿಲ್ಲದೆ ಜಾನುವಾರುಗಳು ತತ್ತರಿಸುತ್ತಿವೆ. ಬೇಸಿಗೆಯ ಹಿಂಗಾರು ಮಳೆ ಕೈಕೊಟ್ಟಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡುವಂತೆ ಮಾಡಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಡುತ್ತಾರೆ.