ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಕೊಡುಗೆಯಿಲ್ಲವೇ?

Update: 2019-05-28 18:32 GMT

ಭಾಗ-34

ಗೋಡ್ಸೆ ಸಾವರ್ಕರ್‌ರ ‘ಗುರೂಪದೇಶ’ದ ದೀಕ್ಷೆ ಪಡೆದಿದ್ದ; ಸಾವರ್ಕರ್‌ರು ರಾಜಕೀಯ ಉದ್ದೇಶಗಳಿಗಾಗಿ ಕೊಲೆ ಮಾಡುವುದರಲ್ಲಿ ತಪ್ಪಿಲ್ಲ- ಹಾಗೆ ಮಾಡದಿದ್ದರೆ ಅದು ದೇಶದ್ರೋಹ; ಹಿಂದೂ ಮುಸ್ಲಿಮರು ಈ ದೇಶದಲ್ಲಿ ಒಂದಾಗಿ ಬಾಳಲಾರರು. ದ್ವಿ-ರಾಷ್ಟ್ರ ಸಿದ್ಧಾಂತದ ಬಗ್ಗೆ ಜಿನ್ನಾರೊಡನೆ ಕಲಹವಿರಲಿಲ್ಲ. ಈ ಎಲ್ಲದಕ್ಕಿಂತ ಮುಖ್ಯವಾಗಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಜನರ ಬಗ್ಗೆ ಭಯಂಕರವಾದ ದ್ವೇಷಾಗ್ನಿಯ ಕಿಡಿಯನ್ನೂ ಹಿಂದೂ ರಾಷ್ಟ್ರ ಸ್ಥಾಪನೆಯ ಕನಸುಗಾರರ ಹೃದಯದಲ್ಲಿ ಹೊತ್ತಿಸಿದರು.

ಸಾವರ್ಕರಿಸಂನ ಮೂರನೇ ತತ್ವ: ಧಾರ್ಮಿಕ ಎಂಬ ಸೋಗಿನಲ್ಲಿ ಜಾತೀಯತೆಯ ಆಧಾರದ ಮೇಲೆ ರಾಷ್ಟ್ರ ನಿರ್ಮಾಣವಾಗಬೇಕೆಂಬುದರ ವಿಸ್ತೃತ ಲಕ್ಷಣವೇ, ಅವರು ಬ್ರಿಟಿಷರಿಗೆ ಕ್ಷಮಾದಾನ ಪತ್ರವನ್ನು ಬರೆದು ಅವರಿಗೆ ವಿಧೇಯರಾಗಿ ನಡೆದುಕೊಳ್ಳುವುದಾಗಿ ಮುಚ್ಚಳಿಕೆ ಬರೆದುಕೊಟ್ಟದ್ದು. ಮುಸ್ಲಿಮರನ್ನು ಕ್ರಿಶ್ಚಿಯನರನ್ನು ಭಾರತೀಯ ಜನಾಂಗ ರಾಷ್ಟ್ರೀಯತೆಯಿಂದ ಹೊರಗಿಟ್ಟು ಹಿಂದೂ -ಮುಸ್ಲಿಮರನ್ನು ಪ್ರತ್ಯೇಕಗೊಳಿಸಿದ್ದು ಸಾವರ್ಕರ್‌ರ ಮೂಲಸಿದ್ದಾಂತವೆ ಎಂಬುದಕ್ಕೆ ಅನಿಲ್ ನೌರಿಯಾ: ಎ.ಎಸ್. ಭಿಡೆ ಬರೆದ ‘Veer Savarkar's whirlwind propaganda’ 1941ರ ಆವೃತ್ತಿ ಆಧಾರವಾಗಿ ಉದಾಹರಿಸಿದ್ದಾರೆ.
ಸಾವರ್ಕರ್‌ರ ರಾಜಕೀಯ ಸಿದ್ಧಾಂತದ ಪ್ರಕಾರ ‘‘ಮುಸ್ಲಿಮರು, ಕ್ರಿಶ್ಚಿಯನ್ನರು ಹಿಂದುತ್ವದಲ್ಲಿ ಸ್ಥಾನ ಪಡೆಯಲಾರರು. ಅವರು ಬೆರೆಯಲಾರರು. ಯಾಕೆಂದರೆ ಅವರ ಪುಣ್ಯಭೂಮಿ ಬಹುದೂರದ ಅರೇಬಿಯಾ ಅಥವಾ ಫೆಲೆಸ್ತೀನ್. ಆ ಹೆಸರುಗಳು ಮತ್ತು ಅವರ ಜೀವನ ದೃಷ್ಟಿ ವಿದೇಶಿ ಮೂಲದ ಪ್ರೇಮ ಸಂಕೇತಗಳು.’’ ಹಿಂದೂಗಳಿಗೆ ಭಾರತವೇ ಪುಣ್ಯಭೂಮಿ ಮತ್ತು ಪಿತೃಭೂಮಿ; ಕರ್ಮಭೂಮಿ. ಭಾರತದ ನಿಜವಾದ ವಾರಸುದಾರರು ಹಿಂದೂಗಳು. ಸಾವರ್ಕರ್‌ರ ಈ ರಾಜಕೀಯ ಸಿದ್ಧಾಂತ ಎಂತಹ ಪರಿಣಾಮಗಳಿಗೆ ಕಾರಣವಾಯಿತೆಂದರೆ, ಅವರ ಮಾತುಗಳಲ್ಲೇ ಹೇಳುವುದಾದರೆ, ‘‘ಎಲ್ಲಿಯವರೆಗೆ ಆ ದಿವ್ಯ ಯುಗ ಉದಯವಾಗುವುದಿಲ್ಲವೋ, ಅಲ್ಲಿಯವರೆಗೆ ರಕ್ತಪಾತ, ಪ್ರತೀಕಾರ ಪಾಪಕೃತ್ಯವಾಗಲಾರದು. ಅವು (ರಕ್ತಪಾತ ಮತ್ತು ಪ್ರತೀಕಾರ) ಅನ್ಯಾಯವನ್ನು ನಿರ್ಮೂಲನೆ ಮಾಡಿ, ಸತ್ಯಯುಗ ಸ್ಥಾಪನೆಗಾಗಿ ನಿಸರ್ಗವೇ ಸೃಷ್ಟಿಸಿದ ಸಾಧನೋಪಕರಣಗಳು.’’ ಮತ್ತೆ ಸಾವರ್ಕರ್ ತಮ್ಮ ಲೇಖನ ‘ಭಾರತೀಯ ಇತಿಹಾಸದ ಆರು ಉಜ್ವಲ ಅಧ್ಯಾಯಗಳು’ದಲ್ಲಿ ವಿಜಯಶಾಲಿಗಳಾದ ಹಿಂದೂ ಪರಾಕ್ರಮಿಗಳು ಸೋತ ಮುಸ್ಲಿಂ ರಾಜರ ಹೆಂಡಂದಿರನ್ನು ಕೆಡಿಸಬೇಕಾಗಿತ್ತು ಎಂದು ಪ್ರತಿಪಾದಿಸುತ್ತಾರೆ!! ಹಾಗೆ ಮಾಡದ ಶಿವಾಜಿಯನ್ನೂ ಖಂಡಿಸುತ್ತಾರೆ!! ಟಿಪ್ಪು ಸುಲ್ತಾನನನ್ನು ‘ಅನಾಗರಿಕ’ ಹಾಗೂ ‘ಕ್ರೂರ ಕಿರಾತಮೃಗ’ ಎಂದೂ, ಅಕ್ಬರ್ ವಿದೇಶಿ ಕ್ರೂರ ಅಸಹಿಷ್ಣು ವಿಧರ್ಮಿ ಎಂದೂ ಛೇಡಿಸುತ್ತಾರೆ. ಈ ಉದಾಹರಣೆಗಳನ್ನು ಉಲ್ಲೇಖಿಸಿ ಅಂಕಣಕಾರ ಗ್ರಂಥಕರ್ತ ಪ್ರಫುಲ್ಲ ಬಿದ್ವಾಯಿ ಹೇಳುತ್ತಾರೆ: ‘‘ಅಹಿಂಸೆ, ಶಾಂತಿ ಮತ್ತು ಹಿಂದೂ ಮುಸ್ಲಿಮರು ಸೌಹಾರ್ದದಿಂದ ಸಹಬಾಳ್ವೆ ಮಾಡಬೇಕೆಂದು ಬೋಧಿಸಿದ ದೇವದೂತ ಗಾಂಧೀಜಿಯನ್ನು ಸಾವರ್ಕರ್ ಅತೀವ ಭಾವಭರಿತರಾಗಿ ದ್ವೇಷಿಸುತ್ತಿದ್ದುದರಲ್ಲಿ ಆಶ್ಚರ್ಯವಿಲ್ಲ ಹಾಗೂ ಅವರು ತಮ್ಮ ಶಿಷ್ಯ ನಾಥೂರಾಮ್ ಗೋಡ್ಸೆಗೆ ಗಾಂಧಿ ಹತ್ಯೆಗೆ ಸ್ಫೂರ್ತಿ ನೀಡಿದರು. ಗೋಡ್ಸೆ ಅವರಿಂದ ಸ್ಫೂರ್ತಿ ಪಡೆದಿದ್ದೇನೆಂಬುದಕ್ಕೆ ಪ್ರಫುಲ್ಲ ಬಿದ್ವಾಯಿ ಗೋಡ್ಸೆ ಸಾವರ್ಕರ್‌ರಿಗೆ ಬರೆದ ಪತ್ರದಲ್ಲಿ: ‘‘ನಿಮ್ಮನ್ನು ಬಿಡುಗಡೆ ಮಾಡಿದ ಮೇಲೆ ಹಿಂದೂಸ್ಥಾನ ಹಿಂದೂಗಳಿಗೆ ಸೇರಿದ್ದು ಎಂದು ನಂಬಿದ ಪರಿವಾರಗಳ ಹೃದಯದಲ್ಲಿ ಒಂದು ದಿವ್ಯಾಗ್ನಿಯ ಕಿಡಿ ಪ್ರಜ್ವಲಿಸಿತು. ಸಾವರ್ಕರ್ ಹಿಂದೂ ಮಹಾಸಭಾ ಅಧ್ಯಕ್ಷರಾಗಿ ಆಯ್ಕೆ ಆದದ್ದು ನಮ್ಮ ಆ ಆಸೆ ಕಾರ್ಯಗತವಾಗುತ್ತದೆ ಎಂಬ ವಿಶ್ವಾಸವನ್ನು ಹುಟ್ಟಿಸಿದೆ’’ ಎಂಬುದಾಗಿ ಬರೆದಿದ್ದಾನೆ.


ಈ ಎಲ್ಲಾ ನಿರ್ವಿವಾದ ಮತ್ತು ನಿಃಸಂದಿಗ್ಧ ಹಾಗೂ ಅಲ್ಲಗಳೆಯಲಾರದ ಸಾವರ್ಕರ್ ಗೋಡ್ಸೆ ಅವರ ಪತ್ರ ವ್ಯವಹಾರ ಬರಹಗಳನ್ನು ಪರಿಶೀಲಿಸಿದರೆ- ಅವರಿಬ್ಬರಿಗೂ ಅತಿನಿಕಟ ಗುರು-ಶಿಷ್ಯ ಸಂಪರ್ಕವಿತ್ತು. ಗೋಡ್ಸೆ ಸಾವರ್ಕರ್‌ರ ‘ಗುರೂಪದೇಶ’ದ ದೀಕ್ಷೆ ಪಡೆದಿದ್ದ; ಸಾವರ್ಕರ್‌ರು ರಾಜಕೀಯ ಉದ್ದೇಶಗಳಿಗಾಗಿ ಕೊಲೆ ಮಾಡುವುದರಲ್ಲಿ ತಪ್ಪಿಲ್ಲ- ಹಾಗೆ ಮಾಡದಿದ್ದರೆ ಅದು ದೇಶದ್ರೋಹ; ಹಿಂದೂ ಮುಸ್ಲಿಮರು ಈ ದೇಶದಲ್ಲಿ ಒಂದಾಗಿ ಬಾಳಲಾರರು. ದ್ವಿ-ರಾಷ್ಟ್ರ ಸಿದ್ಧಾಂತದ ಬಗ್ಗೆ ಜಿನ್ನಾರೊಡನೆ ಕಲಹವಿರಲಿಲ್ಲ. ಈ ಎಲ್ಲದಕ್ಕಿಂತ ಮುಖ್ಯವಾಗಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಜನರ ಬಗ್ಗೆ ಭಯಂಕರವಾದ ದ್ವೇಷಾಗ್ನಿಯ ಕಿಡಿಯನ್ನೂ ಹಿಂದೂ ರಾಷ್ಟ್ರ ಸ್ಥಾಪನೆಯ ಕನಸುಗಾರರ ಹೃದಯದಲ್ಲಿ ಹೊತ್ತಿಸಿದರು. ಅವರ ಈ ಆದರ್ಶ ಸಿದ್ಧಿಗೆ ಅಡ್ಡಿಯಾಗಿದ್ದ - ಬಹುಶಃ ಅವರ ದೃಷ್ಟಿಯಲ್ಲಿ ಪರಮವೈರಿಯಾಗಿದ್ದ ಗಾಂಧೀಜಿಯನ್ನು ಮುಗಿಸಲು ಪ್ರಬಲ ಪ್ರೋತ್ಸಾಹ, ಪ್ರಚೋದನೆ, ಸೈದ್ಧಾಂತಿಕ ನೆಲೆಗಟ್ಟು, ‘ನೈತಿಕ’ ಧೈರ್ಯವನ್ನು ಸಾವರ್ಕರ್ ಅವರ ಶಿಷ್ಯ ವರ್ಗದಲ್ಲಿ ನಿಃಸ್ಸಂಶಯವಾಗಿ ತುಂಬಿದರು. ಗೋಡ್ಸೆ ಹತ್ಯೆಯ ಆರೋಪಿಗಳ ವಿಚಾರಣೆಯ ಕಾಲಕ್ಕೆ ಇತ್ತೀಚೆಗೆ ದೊರೆತ ಗೋಡ್ಸೆ-ಸಾವರ್ಕರ್‌ರ ಪತ್ರಗಳು ನ್ಯಾಯಾಧೀಶ ಆತ್ಮಚರಣರ ಮುಂದೆ ಸಾಕ್ಷ ರೂಪದಲ್ಲಿ ದಾಖಲಾಗಿದ್ದರೆ ಬಹುಶಃ ಸಾವರ್ಕರ್ ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ. 1964ರಲ್ಲಿ ಭಾರತ ಸರಕಾರ ಗಾಂಧೀ ಹತ್ಯೆಯ ಸಮಗ್ರ ತನಿಖೆ ಮಾಡಲು ನೇಮಿಸಿದ ಸುಪ್ರೀಂ ಕೋರ್ಟು ನ್ಯಾಯಮೂರ್ತಿ ಜೆ. ಎಲ್. ಕಪೂರರು ತಮ್ಮ ವರದಿಯಲ್ಲಿ: ‘‘ಈ ಎಲ್ಲಾ ಸಂಗತಿಗಳನ್ನು ಸಮಗ್ರವಾಗಿ ಪರಿಶೀಲಿಸಿದರೆ ಗಾಂಧೀಜಿಯ ಕೊಲೆಯಲ್ಲಿ ಸಾವರ್ಕರ್ ಮತ್ತು ಅವರ ತಂಡ (ಪರಿವಾರ)ದ ಪಾತ್ರವನ್ನು ಆಯುಧಗಳ ವ್ಯಾಪಾರಿ ಮತ್ತು ಇತರ ಸಹಕಾರಿಗಳಿಗೆ ಪ್ರೋತ್ಸಾಹವನ್ನು ನೀಡುವುದನ್ನು ಅಪರಾಧವನ್ನೆಸಗಲು ಪ್ರಚೋದನೆ (ಕುಮ್ಮಕ್ಕು) ಕೊಡುವುದನ್ನು ಜನವರಿ 20ರಂದು ಮಾಡಿದ ಕೊಲೆಯ ಪ್ರಯತ್ನ, ಜನವರಿ 30ರಂದು ಮಾಡಿದ ಕೊಲೆಯ ಪಿತೂರಿಗಳು ಮೊದಲೇ ಗೊತ್ತಿತ್ತು ಎಂಬ ತೀರ್ಮಾನವನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ ಎಂದು ಎಚ್ಚರಿಸುತ್ತದೆ’’ ಎಂಬುದಾಗಿ ವರದಿ ಮಾಡಿದ್ದಾರೆ. ‘‘ಇಂಥ ಸಂದರ್ಭ ಸನ್ನಿವೇಶಗಳಿದ್ದಾಗ್ಯೂ ಸರಕಾರ ಸಾವರ್ಕರ್‌ರನ್ನು ಖುಲಾಸೆ ಮಾಡಿದ ತೀರ್ಪಿನ ವಿರುದ್ಧವಾಗಿ ಯಾಕೆ ಮೇಲ್ಮನವಿ ಸಲ್ಲಿಸಲಿಲ್ಲ ಎಂಬುದು ಆಶ್ಚರ್ಯಕರ’’ ಎಂದಿದ್ದಾರೆ!
ಈಗ ದೇಶ ತನ್ನದೇ ತೀರ್ಮಾನಕ್ಕೆ ಬರಬೇಕು. ಗಾಂಧಿ ಹತ್ಯೆಯಲ್ಲಿ ಸಾವರ್ಕರ್‌ರ ಪಾತ್ರ ಏನೂ ಇರಲಿಲ್ಲ ಎಂಬ ಸಂಘಪರಿವಾರದ ಚೀತ್ಕಾರ ಕೇವಲ ತಿರುಬೊಬ್ಬೆ. ಅಸತ್ಯ ಘೋಷಣೆ.
(ಶನಿವಾರದ ಸಂಚಿಕೆಗೆ ಮುಂದುವರಿಯುವುದು)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ