ಕಾಳಿ ನದಿಯ ಒಳಸುಳಿಗಳು....

Update: 2019-05-28 18:32 GMT

ಕಾಳಿಗಂಗಾ ಕೊಂಕಣಿಯ ಪ್ರಮುಖ ಲೇಖಕ ಮಹಾಬಳೇಶ್ವರ ಸೈಲ್ ಅವರ ಮೊದಲ ಕಾದಂಬರಿ. ಗೀತಾ ಶೆಣೈ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಗೋವಾ ಕರ್ನಾಟಕವನ್ನು ಕೇಂದ್ರವಾಗಿಟ್ಟುಕೊಂಡು ಈ ಕಾದಂಬರಿಯನ್ನು ಬರೆಯಲಾಗಿದೆ. ಗೋವೆಯಿಂದ ಕರ್ನಾಟಕದ ಕಾಳಿ ನದಿ ತೀರಕ್ಕೆ ವಲಸೆ ಬಂದ ಕುಟುಂಬವೊಂದು ಕಾಲಾನುಕ್ರಮ ದಲ್ಲಿ ಹದಿನೆಂಟು ಶಾಖೆಗಳಾಗಿ ಕವಲೊಡೆದು, ಅದು ನೆಲೆ ನಿಂತ ಜಾಗದಲ್ಲಿ ಜನವಸತಿ, ಹಾಗೂ ಕೃಷಿ ಸಮಾಜವೊಂದು ತೆರೆದುಕೊಳ್ಳುವ ಬಗೆಯನ್ನು ಬೇರೆ ಬೇರೆ ನೆಲೆಗಳಲ್ಲಿ ಲೇಖಕರು ಹಿಡಿದಿಟ್ಟಿದ್ದಾರೆ. ಪ್ರಾಕೃತಿಕ ವಿಕೋಪಗಳು, ಮನುಷ್ಯನೊಳಗಿನ ತಲ್ಲಣಗಳು, ಲಿಂಗ ಅಸಮಾನತೆಯ ನಡುವೆ ಕೃಷಿ ಕಾರ್ಯಗಳು ಬದುಕನ್ನು ಆವಾಹಿಸಿಕೊಂಡ ಪರಿಯನ್ನು ಕಾದಂಬರಿ ಎಳೆ ಎಳೆಯಾಗಿ ಬಿಡಿಸಿಡುತ್ತದೆ. ಹಳೆ ತಲೆಮಾರಿನ ಸಮಸ್ಯೆಗಳೇ ಒಂದಾದರೆ, ಹೊಸ ತಲೆಮಾರು ದುಡಿಮೆಯಾಗಿ ಮಣ್ಣನ್ನು ಕಡೆಗಣಿಸುತ್ತದೆ. ಸೇನೆಯಲ್ಲಿ ಸೇರುವುದೂ ಅವರ ಪಾಲಿಗೆ ದುಡಿಮೆಯ ಭಾಗವಾಗಿ ಕಾಣುತ್ತದೆ. ಇದು ಸಮಾಜದಲ್ಲಿ ಬೇರೆ ಬೇರೆ ರೀತಿಯ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತದೆ.
 ಬದುಕಿನ ಹರಿಯುವಿಕೆ, ತೆರೆದುಕೊಳ್ಳುವ ತಿರುವು, ಆಳ ಅಗಲ, ಪ್ರಪಾತಗಳಿಗೆ ದುರಂತವಾಗಿ ಕಾಳಿ ನದಿ ಕಾದಂಬರಿಯುದ್ದಕ್ಕೂ ನಮ್ಮನ್ನು ಕಾಡುತ್ತದೆ. ಗೋವಿಂದ ಕಾಳಿ ನದಿಗೆ ಹಾರಿ ಸಾಯುವ ಮೂಲಕ ಅದು ರುದ್ರರೂಪವನ್ನು ತಾಳುತ್ತದೆ. ಒಂದು ಸ್ಥಿರ ಸಮಾಜ ಹೇಗೆ ಬೇರೆ ಬೇರೆ ಕಾರಣಗಳಿಂದ ಹಂತ ಹಂತವಾಗಿ ಅಧೋಗತಿಯತ್ತ ಸಾಗುತ್ತದೆ ಎನ್ನುವುದನ್ನು ಕೊನೆ ಹೇಳುತ್ತದೆ. ಕಾದಂಬರಿಯ ಕೊನೆಯಲ್ಲಿ ತುಂಬಿ ಹರಿಯುವ ಕಾಳಿಯನ್ನು ಹೀಗೆ ಬಣ್ಣಿಸಲಾಗುತ್ತದೆ ‘‘ಭರತ ಮತ್ತು ಇಳಿತದ ಸಂಧಿಕಾಲದಲ್ಲಿ ನೀರಿನ ಧಾರೆ ಸುಳಿ ಸುಳಿಯಾಗಿ ಸುತ್ತುತ್ತಿರುತ್ತವೆ. ಮೇಲ್ಭಾಗದ ಪದರು ಮತ್ತು ಕೆಳಭಾಗದ ನೀರಿನ ನಡುವೆ ಜಗಳವೇ ನಡೆಯುತಿತ್ತು. ಇಡೀ ನದಿಯ ಅಲೆಗಳು ಒಂದು ವಿಶ್ವಾಕಾರದ ಸುಳಿಯಾಗಿ ಸುತ್ತುತ್ತಿತ್ತು. ನೆತ್ತಿಯ ಮೇಲೆ ನಡುಮಧ್ಯಾಹ್ನದ ಬಿಸಿಲು ಸುಡುತ್ತಿತ್ತು. ಗಾಳಿ ಅಲೆಗಳೊಂದಿಗೆ ಸೇರಿ ನೀರಿನ ಬೆನ್ನ ಮೇಲೆ ಅಲೆದಾಡುತ್ತಿತ್ತು. ಆದರೆ ಅದರ ದಿಕ್ಕು ಸರಿಯಾಗಿ ತಿಳಿಯುತ್ತಿರಲಿಲ್ಲ. ಕಲರವಿಸುವ ನೀರು, ಹೊಳೆಯುವ ಬಿಸಿಲು, ಆಡುವ ಗಾಳಿ ಮತ್ತು ಇವುಗಳ ನಡುವೆ ನಿರ್ಜೀವ ಶರೀರ! ಪ್ರಕೃತಿ ನಿಷ್ಠುರತೆಯಿಂದ ಗೋವಿಂದನ ದೇಹದ ಬಿಸಿಯನ್ನೆಲ್ಲಾ ಹೀರಿ ಬಿಟ್ಟಿದೆ...’’ ಕಾದಂಬರಿಯ ಕೆಲವು ಚಿತ್ರಗಳನ್ನು ರೇಖೆಗಳ ಮೂಲಕ ಅಲ್ಲಲ್ಲಿ ಕಟ್ಟಿ ಕೊಡಲಾಗಿದೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ಪುಟಗಳು 280. ಮುಖಬೆಲೆ 275 ರೂ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News