ಅಯೋತಿ ದಾಸ್ ಪಂಡಿತರ್

Update: 2019-06-02 10:54 GMT

ಭಾರತದ ದಲಿತ ರಾಜಕೀಯ ಇತಿಹಾಸದಲ್ಲಿ ತಮಿಳ್ನಾಡಿಗೆ ವಿಶೇಷವಾದ ಸ್ಥಾನವಿದೆ. ಬಿ.ಆರ್. ಅಂಬೇಡ್ಕರ್‌ರವರ ರಾಜಕೀಯ ಆಗಮನದ ಬಳಿಕ ತಮಿಳು ನಾಡಿನ ಅವರ ಸಮಕಾಲೀನರಾದ ಎಂ.ಸಿ. ರಾಜ(1883-1943), ರೆತ್ತೈ ಮಲೈ ಶ್ರೀನಿವಾಸನ್ (1825-1945), ಮಿನಾಂಬಾಳ್ (1904-1992) ಮತ್ತು ಎನ್. ಸಿವರಾಜ್ (1892- 1954) ಅಂಬೇಡ್ಕರ್‌ರ ಅವಧಿಯಲ್ಲೇ ಅವರ ಜತೆ ಕೆಲಸ ಮಾಡಿದರು. ಆದರೆ ಅಯೋತಿ ದಾಸ್ ಪಂಡಿತರ್ (1845-1914) ನಿಸ್ಸಂಶಯವಾಗಿಯೂ ಈ ನಾಯಕರಿಗೆ ದಾರಿದೀಪವಾಗಿದ್ದರು.

ಸಾಂಪ್ರದಾಯಿಕ ಶಿಕ್ಷಣ ಮತ್ತು ಚೆನ್ನೈಯ ಸಿದ್ಧ ಔಷಧಿ ವೈದ್ಯರ ಹಿನ್ನೆಲೆಯ ಕುಟುಂಬವೊಂದರಲ್ಲಿ 1854ರಲ್ಲಿ ಜನಿಸಿದ ಅಯೋತಿ ದಾಸ್‌ರ ಅಜ್ಜ ಕಾಂತಪ್ಪನ್ ಬ್ರಿಟಿಷ್ ಅಧಿಕಾರಿಗಳ ಮನೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಬ್ರಿಟಿಷರು ಅಡುಗೆ ಕೆಲಸಕ್ಕೆ ದಲಿತರನ್ನೇ ನೇಮಿಸಿಕೊಳ್ಳುತ್ತಿದ್ದರು.

1812ರಲ್ಲಿ ಚೆನ್ನೈ ಎಜುಕೇಶನ್ ಸೊಸೈಟಿ ಸ್ಥಾಪಿಸಲ್ಪಟ್ಟಾಗ ಚೆನ್ನೈಯ ಜಿಲ್ಲಾ ಕಲೆಕ್ಟರ್ ಎಲಿಸ್ ಪ್ರಮುಖ ತಮಿಳು ಪಠ್ಯಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದರು. ಆಗ ಅವರಿಗೆ ತಮಿಳು ಮಹಾಕಾವ್ಯ ತಿರುಕ್ಕುರಳ್ ನೀಡಿದವರು ಕಾಂತಪ್ಪನ್.

ಊಟಿ ಮದರಾಸು ಪ್ರೆಸಿಡೆನ್ಸಿಯ ಬೇಸಿಗೆ ರಾಜಧಾನಿ ಆಗಿದ್ದರಿಂದ ಕಾಂತಪ್ಪನ್ ಕೂಡ ಊಟಿಗೆ ಹೋಗಬೇಕಾಯಿತು. ಹಾಗಾಗಿ ಊಟಿಯಲ್ಲಿ ಬೆಳೆದ ಅಯೋತಿ ದಾಸ್ ಅಲ್ಲಿ ಆದಿವಾಸಿಗಳನ್ನು ಸಂಘಟಿಸುವ ಮೂಲಕ ತನ್ನ ಸಮಾಜ ಸೇವೆಯನ್ನು ಆರಂಭಿಸಿದರು. ಆ ಬಳಿಕ ಇದು ದ್ರಾವಿಡ ಪಾಂಡಿಯನ್ ಪತ್ರಿಕೆಯ ಆರಂಭಕ್ಕೆ ಮತ್ತು ದ್ರಾವಿಡ ಮಹಾ ಜನಸಭಾದ ಸ್ಥಾಪನೆಗೆ ಕಾರಣವಾಯಿತು.

ಸ್ವಾತಂತ್ರ ಹೋರಾಟದ ಸಮಯದಲ್ಲಿ ಪ್ರಸ್ತಾಪಿಸಲ್ಪಡುತ್ತಿದ್ದ ಇಂಡಿಯಾ ಎಂಬ ದೇಶದ ವಿಚಾರದ ಕುರಿತ ಮೊದಲ ಟೀಕಾಕಾರರಲ್ಲಿ ಅಯೋತಿ ದಾಸ್ ಕೂಡ ಒಬ್ಬರು. ಅಂತಹ ಒಂದು ಇಂಡಿಯಾ ಬ್ರಾಹ್ಮಣಶಾಹಿ ರಾಜಕೀಯ ವರ್ಗದ ಲಾಭಗಳಿಗೆ, ಹಿತಾಸಕ್ತಿಗಳಿಗೆ ಪೂರಕವಾಗುವಂತಷ್ಟೆ ಇರುತ್ತದೆ ಎಂದು ಅವರು ಹೇಳಿದರು.

ಅಯೋತಿ ದಾಸ್ ಮತ್ತು ಅವರ ಸಮಕಾಲೀನ ಶ್ರೀನಿವಾಸನ್‌ರವರ ಕೃತಿಗಳಲ್ಲಿ ಮೀಸಲಾತಿ, ವೈಚಾರಿಕ ಚಿಂತನೆ ಹಾಗೂ ಬ್ರಾಹ್ಮಣ ವಿರೋಧಿ ಚಳವಳಿಗಳ ಕುರಿತಾದ ಧ್ವನಿಗಳ ಮೂಲ ಇದೆ. ಇವೇ ಧ್ವನಿಗಳು ಮುಂದೆ 20ನೇ ಶತಮಾನದ ತಮಿಳುನಾಡು ರಾಜಕಾರಣಕ್ಕೆ ಚೌಕಟ್ಟು ಒದಗಿಸಿದವು.

ಬೌದ್ಧ ಧರ್ಮದ ಪುನರುಜ್ಜೀವನ

ಭಾರತದಲ್ಲಿ ಬೌದ್ಧ ಧರ್ಮವು ಪುನರುಜ್ಜೀವನದ ಅವಧಿಯಲ್ಲಿ ಇದ್ದಾಗ, ಓರ್ವ ಸಮಾಜ ಸುಧಾರಕನೆಂದು ಖ್ಯಾತರಾದ ಅಯೋತಿ ದಾಸ್ ಮದರಾಸು ಪ್ರಾಂತದಲ್ಲಿ ಅದರ ಪುನರುಜ್ಜೀವನದ ರೂವಾರಿಯಾದರು. 1898ರಲ್ಲಿ ಅವರು ಚೆನ್ನೈಯಲ್ಲಿ ಮುಖ್ಯ ಕಚೇರಿ ಹೊಂದಿದ್ದ ಒಂದು ಬೌದ್ಧ ಧರ್ಮ ಸಮಾಜವನ್ನು ಸ್ಥಾಪಿಸಿದರು. ಆ ಸಮಾಜದ ಕಾರ್ಯಕಲಾಪಗಳನ್ನು ಸಮನ್ವಯಗೊಳಿಸಲು 1907ರಲ್ಲಿ ಅವರು ತಮಿಝನ್ ಎಂಬ ಒಂದು ಸಾಪ್ತಾಹಿಕ ಪತ್ರಿಕೆಯನ್ನು ಆರಂಭಿಸಿದರು. ಬೌದ್ಧ ಧರ್ಮಕ್ಕೆ ಸಂಬಂಧಿಸಿದಂತೆ ಅವರ ಬರವಣಿಗೆಯ ಒಂದು ಪುರಾವೆಯಾಗಿ ಆ ಪತ್ರಿಕೆ ಉಳಿದಿದೆ. ಅವರು ಬರವಣಿಗೆಯ ಜೊತೆಗೆ ಪಾರಂಪರಿಕ ಜಾನಪದ, ಹಬ್ಬಗಳು ಮತ್ತು ನಂಬಿಕೆಗಳನ್ನು ಕೂಡ ತನ್ನ ಅಧ್ಯಯನದ ವ್ಯಾಪ್ತಿಯಲ್ಲಿ ಸೇರಿಸಿಕೊಂಡಿದ್ದರು.

ಧಾರ್ಮಿಕ ದಾಳಿಗಳ ಪರಿಣಾಮವಾಗಿ ಬುದ್ಧನ ಪ್ರತಿಮೆಗಳನ್ನು ಕಿತ್ತು ತೆಗೆದು ಅಲ್ಲಿ ಸ್ಥಳೀಯ ದೇವ ದೇವತೆಗಳ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿದ್ದಕ್ಕೆ ಉದಾಹರಣೆಯಾಗಿ ಅವರು ಮಧುರೈ ಪಾಂಡಿ ಮುನ್ನಿ ಮತ್ತು ಸೇಲಂ ತಲೈಮೆಚ್ಚಿ ಮುನ್ನೇಶ್ವರಂ ದೇವಾಲಯಗಳನ್ನು ಉದಾಹರಿಸಿದ್ದಾರೆ.

ದಲಿತ ಮತ್ತು ಬೌದ್ಧ ಇತಿಹಾಸಗಳ ಜೋಡಣೆ

ಅವರ ಪ್ರಕಾರ, ಆಮದು ಮತ್ತು ಆಧುನಿಕ ಕಾಲಗಳ ನಡುವೆ ಎಲ್ಲೋ ನಡೆದ ಅಧಿಕಾರ ಚೌಕಟ್ಟುಗಳ ಪಲ್ಲಟಗಳಿಂದಾಗಿ ಭೌದ್ಧ ಧರ್ಮೀಯರನ್ನು ಅಸ್ಪಶ್ಯರನ್ನಾಗಿ ಮಾಡಿ ಜಾತಿ ತಾರತಮ್ಯಕ್ಕೆ ಅವಕಾಶ ಮಾಡಿಕೊಡಲಾಯಿತು. ಅವರು ಹೇಳುವಂತೆ ಕೇವಲ ಜನರು ಒಂದು ನಿರ್ದಿಷ್ಟ ಸಾಮಾಜಿಕ ನಂಬಿಕೆಯನ್ನು ಒಪ್ಪಿಕೊಂಡದ್ದೇ ಅಸ್ಪಶ್ಯತೆಗೆ ಕಾರಣ, ಬೌದ್ಧ ಧರ್ಮವನ್ನು ಆಚರಿಸುವವರನ್ನು ಕಳಂಕ ಹೊತ್ತವರು, ಅಸ್ಪಶ್ಯರು ಎಂದು ಪರಿಗಣಿಸಲಾಯಿತು.

ಸೆಕ್ಕಿರೊರ್‌ನ ಪೆರಿಯ ಪುರಾಣಂ ಹರಿಶ್ಚಂದ್ರ ಪುರಾಣಂ ನಂತಹ ತಮಿಳು ಭಕ್ತಿ ಪುಸ್ತಕಗಳ ವಿಕೃತಿಗಳನ್ನು ಅವರು ಬಯಲಿಗೆಳೆದರು. ಅವರ ಪ್ರಸಿದ್ಧ ಕೃತಿ ‘ಆಧಿ ವೇದಂ’ (1912) ಬುದ್ಧನ ಜೀವನ ಚರಿತ್ರೆಯಾಗಿದೆ. ದಲಿತರನ್ನು ಉತ್ತಮ ಚಾರಿತ್ರದ ಭಾರೀ ಶಿಕ್ಷಿತ ಜನರೆಂದು ಪರಿಗಣಿಸಿದ ಮೊತ್ತ ಮೊದಲ ಧೀಮಂತರಲ್ಲಿ ಅಯೋತಿ ದಾಸ್ ಒಬ್ಬರು. ಜಾತಿ ವಿರೋಧಿ ಸಂವಾದಕ್ಕೆ ಅವರ ಕೊಡುಗೆಗಳು, ಬರವಣಿಗೆಗಳು ಐತಿಹಾಸಿಕ ಪುರಾವೆ ಒದಗಿಸುತ್ತೆವೆ. ಅವರ ಹೋರಾಟ ಸಾಮಾಜಿಕ್ಕಿಂತ ಹೆಚ್ಚಾಗಿ ಸೈದ್ಧಾಂತಿಕ ಹೋರಾಟವಾಗಿತ್ತು.

ಬೌದ್ಧ ಧರ್ಮದ ಮೇಲೆ ಹೇರಿದ ಟೀಕೆ, ಅವಮಾನ ದಲಿತರಲ್ಲಿ ಪ್ರತಿಫಲಿಸಿತು ಎಂದು ಅವರು ವಾದಿಸಿದರು. ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದ 58 ವರ್ಷಗಳ ಬಳಿಕ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.

ನಂತರದ ವರ್ಷಗಳಲ್ಲಿ ಅಯೋತಿ ದಾಸ್‌ರ ಸಾಧನೆಗಳನ್ನು ಜನ ಮರೆತರಾದರೂ, 1990ರ ದಶಕದ ಅಂತ್ಯದಲ್ಲಿ ಜ್ಞಾನ ಅಲೋಶಿಯಸ್ ಸಂಗ್ರಹಿಸಿದ ಅಯೋತಿ ದಾಸ್‌ರ ಬರವಣೆಗೆಗಳು ತಮಿಳು ದಲಿತ ರಾಜಕಾರಣಕ್ಕೆ ನವಚೈತನ್ಯ ನೀಡಿದವು. ತಮಿಳು ಕಾದಂಬರಿಗಳಲ್ಲಿ ಅವರು ಒಂದು ಪಾತ್ರವಾಗಿ ಮಿಂಚಿದರು.

ಪಾ.ರಂಜಿತ್ ನಿರ್ದೇಶನದ ಮಡ್ರಾಸ್, ಕಬಾಲಿ, ಮತ್ತು ಕಾಲಾದಂತಹ ಸಿನೆಮಾಗಳಲ್ಲಿ ಅಯೋತಿ ದಾಸ್‌ರ ಉಲ್ಲೇಖಗಳಿವೆ. (ಮೇ 20, 2019 ಅಯೋತಿ ದಾಸ್‌ರ 174ನೇ ಜನ್ಮದಿನ)

Writer - ಸ್ಟಾಲಿನ್ ರಾಜಂಗಮ್

contributor

Editor - ಸ್ಟಾಲಿನ್ ರಾಜಂಗಮ್

contributor

Similar News