ಒಂದು ಭಯಾನಕ ಬೇಸಿಗೆ, ಕ್ರೂರ ಬರಗಾಲ
ಚುನಾವಣಾ ಫಲಿತಾಂಶಗಳು ಘೋಷಣೆಯಾದ ಬಳಿಕ ನನ್ನ ಮುಸ್ಲಿಂ ಗೆಳೆಯರ ಮುಖದಲ್ಲಿ ನನಗೆ ಭಯ ಮತ್ತು ಹತಾಶೆ ಕಾಣಿಸುತ್ತಿದೆ. ನಾವು ನಿಮಗೆ ಮತ್ತು ನಮ್ಮ ಕ್ರಿಶ್ಚಿಯನ್ ಹಾಗೂ ದಲಿತ ಸಹ ನಾಗರಿಕರಿಗೆ ಆಶ್ವಾಸನೆ ನೀಡುತ್ತೇವೆ, ಮಾತು ಕೊಡುತ್ತೇವೆ: ಭಾರತ ಇನ್ನೂ ಕೂಡ ಆರೆಸ್ಸೆಸ್, ಬಿಜೆಪಿ ಮತ್ತು ಮೋದಿಯವರ ಕಲ್ಪನೆಯ ಹಿಂದೂ ರಾಷ್ಟ್ರವಾಗಿ ಮಾರ್ಪಾಟಾಗಿಲ್ಲ. ಇದು ಆಗಲು ನಾವು ಬಿಡುವುದಿಲ್ಲ.
ದೀರ್ಘಕಾಲದ, ಒಂದು ನಿರ್ದಯಿ ಬರಗಾಲದ ಬಳಿಕ ನೀವು ಹತಾಶ ಭರವಸೆಯಿಂದ ಮುಂಗಾರು ಮಳೆಗಾಗಿ ಕಾಯಿತ್ತೀರಿ. ಆ ಮಳೆ ಒಣಗಿದ ನಿಮ್ಮ ಗದ್ದೆಗಳಿಗೆ ನೀರೆರೆಯುತ್ತದೆ, ಹಸಿವಿನಿಂದ ಕಂಗಾಲಾಗಿರುವ ನಿಮ್ಮ ಜಾನುವಾರುಗಳಿಗೆ ಮೇವು ನೀಡುತ್ತದೆ ಎಂದೆಲ್ಲ ನಿರೀಕ್ಷಿಸುತ್ತೀರಿ. ಆದರೆ ನೀವು ಆಕಾಶದೆಡೆಗೆ ದಿಟ್ಟಿಸಿ ನೋಡುವಾಗ ಅಲ್ಲಿ ಮಳೆ ಮೋಡಗಳೇ ಕಾಣಿಸುವುದಿಲ್ಲ. ಇನ್ನೂ ದೀರ್ಘವಾದ, ಕ್ರೂರಿಯಾದ ಬೇಸಿಗೆಯನ್ನು ಸಹಿಸಬೇಕಾಗುತ್ತದೆಂದು ಆಗ ನೀವು ಮನಗಾಣುತ್ತೀರಿ.
ಮೇ 23ರಂದು ಉದ್ರೇಕಿತ ಟಿವಿ ಆ್ಯಂಕರ್‌ಗಳು ಚುನಾವಣಾ ಫಲಿತಾಂಶಗಳನ್ನು ಘೋಷಿಸುತ್ತಿದ್ದಂತೆ ನನಗೆ ಹೀಗೆಯೇ ಅನ್ನಿಸಿತು. ಪರಿಸ್ಥಿತಿ ಉತ್ತಮಗೊಳ್ಳುವುದಿಲ್ಲ; ಬದಲಾಗಿ ಅದು ಇನ್ನಷ್ಟು ಹದಗೆಡುತ್ತದೆ; ಸುಡು ಬಿಸಿಲಿನಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ; ಓಯಸಿಸ್‌ಗಳಿಲ್ಲ, ನೆರಲಿಲ್ಲ, ತಂಪು ನೀರಿನ ಕೊಳಗಳಿಲ್ಲ.
2014ರ ಚುನಾವಣೆಗಳಲ್ಲಿ ಮತ ನೀಡಿದ ಮತದಾರರಿಗಿಂತಲೂ ಹೆಚ್ಚಿನ ಸಂಖ್ಯೆಯ ಮತದಾರರು ದೇಶದ ಭವಿಷ್ಯವನ್ನು ನರೇಂದ್ರ ಮೋದಿಯವರ ಕೈಯಲ್ಲಿ ಇಟ್ಟಿದ್ದಾರೆ. ಆದರೆ 2019ರ ಮತದಾರರ ತೀರ್ಪನ್ನು ಬಿಜೆಪಿ ನಾಯಕತ್ವ ಮತ್ತು ಆರೆಸ್ಸೆಸ್ ದ್ವೇಷ ಮತ್ತು ಬೆದರಿಕೆಯ ರಾಜಕಾರಣಕ್ಕೆ ದೊರೆತ ಯಶಸ್ಸು ಎಂದು ಆರ್ಥೈಸುತ್ತವೆೆ. ದೇಶದ ಅಲ್ಪಸಂಖ್ಯಾತರನ್ನು ಖಂಡಿಸುವ ಒಂದು ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಭಾರತೀಯರು ಆಯ್ದುಕೊಂಡಿದ್ದಾರೆಂದು ಅವರು ತಿಳಿಯುತ್ತಾರೆ.
ಆದ್ದರಿಂದ ನಾನು ನನ್ನ ಭಾರತದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಹೋದರ ಸಹೋದರಿಯರಿಗೆ; ನನ್ನ ಎಡಪಂಥೀಯ ಮತ್ತು ಉದಾರವಾದಿ ಕಾಮ್ರೇಡ್‌ಗಳಿಗೆ -ಮಾನವ ಹಕ್ಕು ಹಾಗೂ ಶಾಂತಿ ಕಾರ್ಯಕರ್ತರಿಗೆ, ಚಿಂತಕರಿಗೆ, ಲೇಖಕರಿಗೆ, ಕಲಾವಿದರಿಗೆ ಈ ಬಹಿರಂಗ ಪತ್ರ ಬರೆಯುತ್ತಿದ್ದೇನೆ. ದ್ವೇಷ ಸಿದ್ಧಾಂತಗಳನ್ನು ಒಪ್ಪದೆ ಇರುವ ಮತ್ತು ಒಂದು ‘ಬಲಿಷ್ಠ’ ಸರಕಾರ ಬೇಕು ಎಂಬ ಕಾರಣಕ್ಕಾಗಿ ಮೋದಿಗೆ ಮತ ನೀಡಿದ ಮೋದಿ ಮತದಾರರಿಗೂ ಈ ಪತ್ರ.
ನಮ್ಮಲ್ಲಿ ದ್ವೇಷ ಮತ್ತು ಹೆದರಿಕೆಗೆ ಮತ ನೀಡಿದ್ದವರಿಂದಾಗಿ ನಾನು ತುಂಬಾ ದುಃಖಿತನಾಗಿದ್ದೇನೆ. ದ್ವೇಷ ಭಾಷಣಗಳು, ಗುಂಪು ಥಳಿತ ಮತ್ತು ಬಹುಸಂಖ್ಯಾತ ರೋಷಾವೇಷವು ಬಿಜೆಪಿ-ಆರೆಸ್ಸೆಸ್ ಕೂಟದ ಪೂರ್ವಾಗ್ರಹದ ಫಲ. ಎಲ್ಲ ವಿಪಕ್ಷಗಳು ಒಟ್ಟಾಗಿ ವಿಭಾಜಕ ಮತ್ತು ಅಪಾಯಕಾರಿಯಾದ ದ್ವೇಷ ರಾಜಕಾರಣದ ವಿರುದ್ಧ ಹೋರಾಡಲು ವಿಫಲವಾದದ್ದರ ಫಲ. ಮುಂದಿನ ಐದು ವರ್ಷಗಳಲ್ಲಿ ಈ ದೇಶಕ್ಕೆ ಏನು ಭವಿಷ್ಯ ಕಾದಿದೆಯೋ ಎಂದು ನಾನು ಭಯಗೊಂಡಿದ್ದೇನೆ.
ಕಹಿ ವಿಭಜನೆ
ಸ್ವಾತಂತ್ರ ಸಮಯದ ಮಹಾತ್ಮಾ ಗಾಂಧಿಯವರ ದೇಶದಿಂದ ಇಂಡಿಯಾ ಬಹಳ ದೂರ ಸಾಗಿ ಬಂದಿದೆ. ಒಬ್ಬನ ಸಮಾನ ನಾಗರಿಕತ್ವಕ್ಕೆ ಧರ್ಮ ಮತ್ತು ಜಾತಿ ಅಪ್ರಸ್ತುತವಾಗಿರುವ ಒಂದು ಜಾತ್ಯತೀತ (ಸೆಕ್ಯುಲರ್) ಪ್ರಜಾಪ್ರಭುತ್ವವನ್ನು ನಾವು ನಮ್ಮ ಸಂವಿಧಾನದ ಮೂಲಕ ಆಯ್ದುಕೊಂಡೆವು. ಅದು ಅದರ ಮೇಲ್ಜಾತಿಯ ಹಿಂದೂಗಳಿಗೆ ಎಷ್ಟು ಸೇರಿದೆಯೋ ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೆ ಮತ್ತು ದಲಿತರಿಗೆ ಕೂಡ ಅಷ್ಟೇ ಸೇರಿದ ಒಂದು ದೇಶವಾಗಿದೆ.
ಆದರೆ ಇವತ್ತು ಮೇಲ್ಜಾತಿ ಹಿಂದೂಗಳು ಎಲ್ಲ ರಂಗಗಳಲ್ಲೂ ತಮ್ಮ ಪ್ರಾಬಲ್ಯ ಸ್ಥಾಪಿಸಿದ್ದಾರೆ: ರಾಜಕಾರಣ, ಅರ್ಥವ್ಯವಸ್ಥೆ, ಮೀಡಿಯಾ, ನ್ಯಾಯಾಂಗ, ಶಿಕ್ಷಣರಂಗ - ಎಲ್ಲದರಲ್ಲೂ ಅವರದ್ದೇ ಪ್ರಾಬಲ್ಯ. ಇಷ್ಟಾಗಿಯೂ ಅವರು ತಮ್ಮ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಪರಿಣಾಮವಾಗಿ, ದೇಶವು ವಿಭಜನೆಗೊಂಡು ನಿಂತಿದೆ: ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ‘ಇತರ’ರಾಗಿದ್ದಾರೆ, ಅನ್ಯರಾಗಿದ್ದಾರೆ.
2014ರವರೆಗೆ ಭಾರತ ಎಂದಿಗೂ ಒಂದು ಬಹುಸಂಖ್ಯಾತ (ಮೆಜಾರಿಟೇರಿಯನ್) ಹಿಂದೂ ರಾಷ್ಟ್ರವಾಗಲಾರದೆಂಬ ನಂಬಿಕೆ ನನಗಿತ್ತು. ಯಾಕೆಂದರೆ ಭಾರತೀಯರಲ್ಲಿ ಬಹುಪಾಲು ಮಂದಿ, ಹಿಂದೂಗಳು ಎಂದಿಗೂ ಪರಸ್ಪರ ವಿರುದ್ಧವಾಗಿ ದ್ವೇಷದ ಒಂದು ರಾಜಕಾರಣವನ್ನು ಬೆಂಬಲಿಸಲಾರರು ಎಂದು ನಂಬಿದ್ದೆ. ಆದರೆ 2014ರಲ್ಲಿ ನನ್ನ ನಂಬಿಕೆ ಅಲ್ಲೋಲಕಲ್ಲೋಲವಾಯಿತು. ಆದರೂ ಮೋದಿಯವರ ಬಹಳಷ್ಟು ಮಂದಿ ಬೆಂಬಲಿಗರಿಗೆ ಮುಸ್ಲಿಮರ ವಿರುದ್ಧ ಕಹಿ ಮನಸ್ಸಿಲ್ಲ ಎಂದು ನಂಬಲು ನಾನು ಸಿದ್ಧನಿದ್ದೆ.
ಅದೇನಿದ್ದರೂ, ಮೋದಿಯವರ ಮೊದಲ ಅಧಿಕಾರಾವಧಿ ಮುಂದುವರಿಯುತ್ತಿದ್ದಂತೆ, ನಾನು ನಮ್ಮ ‘ಕಾರವಾನ್ ಎ ಮೊಹಬ್ಬತ್’ನ ಪ್ರಯಾಣಗಳಲ್ಲಿ ಏನನ್ನು ನೋಡಿದನೋ ಅದರಿಂದ ಆತಂಕಿತನಾದೆ. ನಾವು 14 ರಾಜ್ಯಗಳಲ್ಲಿ 28 ಪ್ರಯಾಣ ಕೈಗೊಂಡಿದ್ದೇವೆ. ಗುಂಪು ಥಳಿತ ಮತ್ತು ದ್ವೇಷ ಹಿಂಸೆಯಲ್ಲಿ ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರ ಕುಟುಂಬಗಳ ಸದಸ್ಯರನ್ನು ಭೇಟಿ ಮಾಡಿದ್ದೇವೆ. ನಾವು ಹೋದಲ್ಲೆಲ್ಲ ಅತಿಯಾದ ಹಾಗೂ ಸಹಜವೆಂಬಂತೆ ಕಾಣುವ, ಭಯಾನಕ ಕೋಮುಹಿಂಸೆಯ ಪುರಾವೆಗಳನ್ನು ಕಣ್ಣಾರೆ ಕಂಡಿದ್ದೇವೆ.
ಸ್ಥಳೀಯ ಸಮುದಾಯಗಳಲ್ಲಿ ಪಶ್ಚಾತ್ತಾಪವಾಗಲಿ, ಕರುಣೆ ಅನುಕಂಪವಾಗಲಿ ಎಲ್ಲೂ ಕಾಣಿಸಲಿಲ್ಲ.ಸ್ಥಳೀಯ ಆಳುವ ಸರಕಾರ ದ್ವೇಷ ಹಿಂಸೆಯನ್ನು ಒಂದು ಶೌರ್ಯ, ಸಹಜ, ಸಕ್ರಮವೆಂಬಂತೆ ಮಾಡಿ ಬಿಟ್ಟಿದೆ. ವಿಪಕ್ಷಗಳು ನೈತಿಕ ದಿವಾಳಿತನ ಕೋರಿ ವೌನವಹಿಸಿದವು. ತಮ್ಮ ಪರಂಪರೆಗೆ ಗಾಂಧಿಯ ಮೂಲವನ್ನು ಹೇಳುವ ಹಲವು ರಾಜಕೀಯ ಪಕ್ಷಗಳು-ಕಾಂಗ್ರೆಸ್ ಮತ್ತು ಸಮಾಜವಾದಿಗಳು-ಗಾಂಧೀಜಿಯು ಕೋಮುಗಲಭೆ ನಡೆದ ಸ್ಥಳಗಳಿಗೆ ಹೋಗಿ ಅಲ್ಲಿ ಕೋಮು ಸಂತ್ರಸ್ತರಿಗೆ ಸಾಂತ್ವನ ಹೇಳಿ, ಅವರ ನೋವನ್ನು ಹಂಚಿಕೊಂಡು ಅವರ ಸಂಕಷ್ಟದಲ್ಲಿ ತಾನೂ ಭಾಗಿಯಾಗಿ ದ್ವೇಷಾಗ್ನಿಯನ್ನು ನಂದಿಸಿ ಅಲ್ಲಿ ಶಾಂತಿ ಸ್ಥಾಪಿದ್ದನ್ನೆಲ್ಲ ಮರೆತು ಬಿಟ್ಟೆವು.
ಆದರೂ ನಾನು 2019ರ ಚುನಾವಣಾ ಫಲಿತಾಂಶಗಳಿಗಾಗಿ ತೀವ್ರ ಆತಂಕದಲ್ಲೇ ಕಾದೆ. ನನಗೆ ಅದು ಕೇವಲ ರಾಜಕೀಯ ಪಕ್ಷಗಳ ಸತ್ವ ಪರೀಕ್ಷೆಯಾಗಿರಲಿಲ್ಲ; ಅದು ಇಂಡಿಯಾದ ಜನರ ಸತ್ವ ಪರೀಕ್ಷೆಯಾಗಿತ್ತು.
ದ್ವೇಷದ ಈ ಅಭಿಯಾನವನ್ನು ಮೋದಿಯವರ ಎಷ್ಟು ಮಂದಿ ಮತದಾರರು ಸಕ್ರಿಯವಾಗಿ ಬೆಂಬಲಿಸುತ್ತಾರೆಂದು ನನಗೆ ಅಂದಾಜಿಲ್ಲ. 2019ರ ಚುನಾವಣೆಗಳು ನನ್ನ ಪಾಲಿಗೆ ಕೇವಲ ಮೋದಿಯವರ ಮುಂದುವರಿದ ಜನಪ್ರಿಯತೆಯ ಪ್ರಭಾವದ ಕುರಿತು ಅಷ್ಟೇ ಆಗಿರಲಿಲ್ಲ. ನನಗೆ ಅದು ಇಂಡಿಯಾದ ಬಹುಸಂಖ್ಯಾತ ಹಿಂದೂಗಳ ಆತ್ಮದ ವಿಷಯವೂ ಆಗಿತ್ತು. ಅವರು ಇತರ ಧರ್ಮೀಯರ ನಂಬಿಕೆಗಳ ಬಗ್ಗೆ ಸಹನೆ ಉಳ್ಳವರಾಗಿ ಉಳಿದಿದ್ದಾರೋ ಇಲ್ಲವೋ ಎಂಬುದನ್ನು ಅದು ಬಹಿರಂಗಪಡಿಸುತ್ತದೆಂದು ನಾನು ನಂಬಿದ್ದೆ. ನನ್ನ ತಿಳಿವಳಿಕೆ ತಪ್ಪಾಗಿರಬಹುದು. ಜನರು ಯಾವ್ಯಾವ ಕಾರಣಗಳಿಗಾಗಿ ಮತ ನೀಡುತ್ತಾರೆಂದೂ ನನಗೆ ಗೊತ್ತಾಗದೆ ಹೋಗಿರಬಹುದು. ಆದರೂ ಕೂಡ, ನಾನು ತಿಳಿದದ್ದಕ್ಕಿಂತ ಹೆಚ್ಚು ಹೃದಯಗಳಲ್ಲಿ ಇನ್ನಷ್ಟು ಹೆಚ್ಚು ದ್ವೇಷ ಹಾಗೂ ಮತಾಂಧತೆ ಇದೆ ಎಂಬುದನ್ನು ಚುನಾವಣಾ ಫಲಿತಾಂಶಗಳು ಪ್ರಕಟಪಡಿಸಿವೆ.
ಎಲ್ಲಕ್ಕಿಂತ ಹೆಚ್ಚಾಗಿ 2019ರ ಚುನಾವಣೆಗಳು ಇಂಡಿಯಾದ ಜಾತ್ಯತೀತ ಪ್ರಜಾಸತ್ತಾತ್ಮಕ ಸಂವಿಧಾನದ ಕುರಿತು ನಡೆದ ಜನಮತ ಗಣನೆ ಎಂದು ನಾನು ತಿಳಿದಿದ್ದೇನೆ.
ಮೋದಿ ನೇತೃತ್ವದ ಬಿಜೆಪಿ ಯಾವ ರೀತಿಯ ರಾಜಕಾರಣವನ್ನು ಪ್ರತಿನಿಧಿಸುತ್ತದೆಂದು 2014ರಲ್ಲಿ ನನಗೆ ಸ್ಪಷ್ಟವಾಗಿ ತಿಳಿದಿತ್ತು. 2002ರ ಗುಜರಾತ್ ನರಮೇಧದಲ್ಲಿ ಬದುಕಿ ಉಳಿದವರ ನಡುವೆ ಒಂದು ದಶಕಕ್ಕಿಂತಲೂ ಹೆಚ್ಚು ಸಮಯ ನಾನು ಮಾಡಿದ್ದ ಕೆಲಸದ ಅವಧಿಯಲ್ಲಿ ನಾನು ಏನನ್ನು ಕಲಿತಿದ್ದೇನೋ ಅದು ನನಗೆ ಆ ಸ್ಪಷ್ಟ ತಿಳಿವಳಿಕೆ ನೀಡಿತ್ತು. ತನ್ನ ಚುನಾವಣಾ ಭಾಷಣಗಳಲ್ಲಿ ಸತತವಾಗಿ ಮುಸ್ಲಿಮರ ಮತ್ತು ಕ್ರಿಶ್ಚಿಯನ್ನರ ಬಗ್ಗೆ ಹಂಗಿಸಿ ಮಾತಾಡಿ ಅವರನ್ನು ರಾಕ್ಷಸೀಕರಿಸಿದ ಒಬ್ಬ ನಾಯಕನನ್ನು ನಾನು ನೋಡಿದ್ದೆ. ಆ ನಾಯಕ ವಾರಗಳ ಕಾಲ ಮುಂದುವರಿದಿದ್ದ ಒಂದು ಪಾಶವೀ ನರಮೇಧ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ.
ಮತ್ತು ನಾನು ಇದರ ಪರಿಣಾಮಗಳನ್ನು, ಪ್ರತಿದಿನ ತಾರತಮ್ಯ ಹಾಗೂ ಭಯದಲ್ಲಿ ಬದುಕುವ ಧಾರ್ಮಿಕ ಅಲ್ಪ ಸಂಖ್ಯಾತರ ಪಾಡನ್ನು ಕಣ್ಣಾರೆ ಕಂಡಿದ್ದೆ. ಅವರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಹಿಷ್ಕಾರಕ್ಕೊಳಗಾಗಿದ್ದರು.
ಆದರೂ ಕೂಡ ಹಲವರು ದೇಶದಲ್ಲಿ ಮೋದಿಗೆ ಅನುಮಾನ ಲಾಭ ನೀಡಲು ಸಿದ್ಧರಿದ್ದರು. ಅವರು ‘ಅಚ್ಛೇದಿನ್’ ಬಗ್ಗೆ ‘‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’’ ಬಗ್ಗೆ ಮಾತಾಡಿದರು. ದಾಪುಗಾಲು ಹಾಕುತ್ತ ಮುನ್ನಡೆಯುವ ಅರ್ಥ್ಯವ್ಯವಸ್ಥೆ ಬಗ್ಗೆ, ಉದ್ಯೋಗ ಸೃಷ್ಟಿಗಳ ಬಗ್ಗೆ ಮಾತಾಡಿದರು. ಕ್ರೋನಿ(ಚಮಚಾ) ಕ್ಯಾಪಿಟಲಿಸಂ ಮತ್ತು ರೈತರ ಸಂಕಷ್ಟಗಳನ್ನು ಕೊನೆಗೊಳಿಸುವುದಾಗಿ ಅವರು ಹೇಳಿದರು.
ಆದರೆ 2019ರ ಚುನಾವಣೆಗಳು ಸಂಪೂರ್ಣವಾಗಿ ಭಿನ್ನವಾಗಿದ್ದು. ವಿಕಾಸ, ಉದ್ಯೋಗಗಳು, ಅರ್ಥವ್ಯವಸ್ಥೆ ಮತ್ತು ರೈತರ ಸಂಕಷ್ಟ ಮೋದಿಯವರ ಆವೇಶಪೂರಿತ ಚುನಾವಣಾ ಭಾಷಣಗಳಲ್ಲಿ, ರ್ಯಾಲಿಗಳಲ್ಲಿ ಪ್ರಸ್ತಾಪವಾದದ್ದು ತೀರ ಅಪರೂಪ. ಅಲ್ಲಿ ಕೊಡುಗೆಯಾಗಿ ಕಾಣಿಸಿದ್ದು ಸ್ಪಷ್ಟವಾಗಿತ್ತು: ತೊಲ್ಬಲದ ಹಿಂದೂ ರಾಷ್ಟ್ರೀಯವಾದ.
ಚುನಾವಣಾ ಪ್ರಚಾರದ ಅವಧಿಯಲ್ಲಿ ದ್ವೇಷ ಭಾಷಣ ಪರಾಕಾಷ್ಠೆ ತಲುಪಿತು. ಗುರಿಗಳು ನೇರವಾಗಿದ್ದವು. ಮುಸ್ಲಿಮರು ದೇಶದ ಒಳಗಿನ ಶತ್ರು: ಅವರು ಹೊರಗಿನ ಶತ್ರುವಿಗೆ, ಪಾಕಿಸ್ತಾನಕ್ಕೆ ನಿಷ್ಠರಾಗಿರುವವರೆಂದು ಅವರನ್ನು ರಾಕ್ಷಸೀಕರಿಸಲಾಯಿತು (ಡೆಮನೈಸ್ಡ್). ಅವರ ಪರವಾಗಿ ನಿಂತವರು-ಎಡ ಮತ್ತು ಮೇಲ್ವರ್ಗದ (ಎಲೈಟ್) ಉದಾರವಾದಿ ಬುದ್ಧಿಜೀವಿಗಳು, ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಟ್ರೋಜನ್ ಕುದುರೆ; ಅವರನ್ನು ಬಯಲುಗೊಳಿಸಿ ದಮನಿಸುವ ಅಗತ್ಯವಿದೆ.
ಭಾರತದ ಬಹುಸಂಖ್ಯೆಯ ಜನರು ದ್ವೇಷರಾಜಕಾರಣವನ್ನು ತಿರಸ್ಕರಿಸುತ್ತಾರೆಂದು ನಾನು ಭರವಸೆ ಇಟ್ಟುಕೊಂಡಿದ್ದೆ. ವಿಪಕ್ಷಗಳಲ್ಲಿ ಹಲವು ದೋಷಗಳಿದ್ದವು. ಕಾಂಗ್ರೆಸ್ ಸರಕಾರಗಳು ಅಧಿಕಾರದಲ್ಲಿದ್ದಾಗಲೇ ಹಲವು ಕೋಮು ನರಹತ್ಯೆಗಳು ನಡೆದಿದೆ. ಆದರೆ ಅವರ ತಪ್ಪುಗಳು ಹಾಗೂ ವೈಫಲ್ಯಗಳು ಏನೇ ಇರಲಿ, ಅವರು ಭಾರತ ಗಣರಾಜ್ಯದ ಜೀವಾಳವಾಗಿರುವ ಸಾಮಾಜಿಕ ಒಪ್ಪಂದ (ಸೋಶಿಯಲ್ ಕಾಂಟ್ರಾಕ್ಟ್)ವನ್ನು ನಾಶಮಾಡಲಾರರು. ಅಲ್ಪಸಂಖ್ಯಾತರನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡಲಾರರು. ನಾನು ಭರವಸೆಯಿಂದ ಕಾದೆ, ಆದರೆ ಚುನಾವಣಾ ಫಲಿತಾಂಶಗಳು ಬರಲಾರಂಭಿಸಿದಾಗ, ಅರ್ಥವ್ಯವಸ್ಥೆ, ಉದ್ಯೋಗ ಸೃಷ್ಟಿ ಹಾಗೂ ಕೃಷಿಕರ ಬಿಕ್ಕಟ್ಟಿನ ಹೊರತಾಗಿಯೂ ಮೋದಿಯವರಿಗೆ ಭಾರೀ ಬೆಂಬಲ ದೊರಕಿರುವುದು ಸ್ಪಷ್ಟವಾಯಿತು. ನನಗೆ ಚಿಂತೆಯಾಗುತ್ತಿದೆ, ಯಾಕೆಂದರೆ ಜಾತಿ ವರ್ಗದ ಮತ್ತು ಶಿಕ್ಷಣ ದೃಷ್ಟಿಯಿಂದ ಅತ್ಯಂತ ಹೆಚ್ಚು ಸವಲತ್ತು ಪಡೆದ ನಮ್ಮ ನಡುವೆ ಮತಾಂಧತೆ ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿದೆ. ‘‘ಇದು ಇಂಡಿಯಾದ ನಿಜವಾದ ಮುಖವೇ?’’ ಎಂದು ಜನರು ಕೇಳಬಹುದು. ಇದಕ್ಕೆ ಉತ್ತರ: ಹೌದು ಮತ್ತು ಅಲ್ಲ. ಭಾರತದ ಜನರು ದ್ವೇಷ ಮತ್ತು ಪ್ರೀತಿ, ಔದಾಸೀನ್ಯ ಮತ್ತು ಪ್ರತಿರೋಧ ಎರಡೂ ತಮ್ಮಲ್ಲಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಇಲ್ಲಿಂದ ನಾವು ಮುಂದೆ ಎಲ್ಲಿಗೆ ಹೋಗುವುದು?
ಹತಾಶೆ ತನ್ನ ಆಯ್ಕೆಯಲ್ಲ. ದ್ವೇಷ ಮತ್ತು ಹೆದರಿಕೆಯನ್ನು ಎದುರಿಸಲು ಇರುವ ಏಕೈಕ ದಾರಿ ವಿರೋಧಿಸುವ ಪ್ರತಿಭಟಿಸುವ ದೃಢ ನಿರ್ಧಾರ.
ಬಹುಸಂಖ್ಯಾವಾದದ(ಮೆಜಾರಿಟೇರಿಯನಿಸಮ್)ದಾಳಿಗೆ ನೇರವಾಗಿ ಗುರಿಯಾಗುವ ನಮ್ಮ ಸಹೋದರ ಸಹೋದರಿಯರ ಪರವಾಗಿ ಅವರ ಜೊತೆ ದೃಢವಾಗಿ ನಿಲ್ಲುವ ನಿರ್ಧಾರವೇ ನಮ್ಮ ಪ್ರತಿರೋಧದ ಮೊದಲ ಸ್ತಂಭ. ಚುನಾವಣಾ ಫಲಿತಾಂಶಗಳು ಘೋಷಣೆಯಾದ ಬಳಿಕ ನನ್ನ ಮುಸ್ಲಿಂ ಗೆಳೆಯರ ಮುಖದಲ್ಲಿ ನನಗೆ ಭಯ ಮತ್ತು ಹತಾಶೆ ಕಾಣಿಸುತ್ತಿದೆ. ನಾವು ನಿಮಗೆ ಮತ್ತು ನಮ್ಮ ಕ್ರಿಶ್ಚಿಯನ್ ಹಾಗೂ ದಲಿತ ಸಹ ನಾಗರಿಕರಿಗೆ ಆಶ್ವಾಸನೆ ನೀಡುತ್ತೇವೆ, ಮಾತು ಕೊಡುತ್ತೇವೆ: ಭಾರತ ಇನ್ನೂ ಕೂಡ ಆರೆಸ್ಸೆಸ್, ಬಿಜೆಪಿ ಮತ್ತು ಮೋದಿಯವರ ಕಲ್ಪನೆಯ ಹಿಂದೂ ರಾಷ್ಟ್ರವಾಗಿ ಮಾರ್ಪಾಟಾಗಿಲ್ಲ. ಇದು ಆಗಲು ನಾವು ಬಿಡುವುದಿಲ್ಲ. ಮೆಜಾರಿಟೇರಿಯನ್ ದ್ವೇಷವನ್ನು ವಿರೋಧಿಸುವ ಮಿಲಿಯನ್‌ಗಟ್ಟಲೆ ಭಾರತೀಯರಿದ್ದಾರೆ- ಹಿಂದೂಗಳು, ಕ್ರಿಶ್ಚಿಯನ್ನರು, ಮುಸ್ಲಿಮರು, ಸಿಖ್ಖರು, ಸಂದೇಹವಾದಿಗಳು, ಉಳ್ಳವರು, ಬಡವರು, ದುಡಿಯುವ ವರ್ಗದವರು.
ಇದರ ಅರ್ಥ ಮೋದಿಯವರ ಮತದಾರರನ್ನು ಹೊರಗಿಡುವುದು ಎಂದಲ್ಲ. ಅವರನ್ನು, ವಿಶೇಷವಾಗಿ ಯುವ ಮತದಾರರನ್ನು ಮಾತಿನ ಮೂಲಕ, ಸಂವಾದದ ಮೂಲಕ ಇದಿರುಗೊಳ್ಳುವುದು ಎಂದು ಇದರ ಅರ್ಥ. ಅವರನ್ನು ಅರ್ಥಮಾಡಿಕೊಳ್ಳುವುದು, ಅವರಿಗೆ ತಾರ್ಕಿಕವಾಗಿ ಅರ್ಥಮಾಡಿಸುವುದು ಎಂಬುದೇ ಇದರ ಅರ್ಥ. ಇನ್ನು ಜಾತ್ಯತೀತತೆಯ ಪರಿಕಲ್ಪನೆಯನ್ನು ಮರಳಿ ಪಡೆಯುವುದು, ರಕ್ಷಿಸುವುದು ಮತ್ತು ಅದನ್ನು ಸಂಭ್ರಮಿಸುವುದು ನಮ್ಮ ಕರ್ತವ್ಯವಾಗಬೇಕು. 2019ರ ಭಾರೀ ತೀರ್ಪಿನ ಬಳಿಕ, ಪ್ರಧಾನಿ ಮೋದಿ ತನ್ನ ಮೊದಲ ಸಾರ್ವಜನಿಕ ಭಾಷಣದಲ್ಲಿ ‘‘ಜಾತ್ಯತೀತತೆ ಎಂಬುದು ಮುಖವಾಡ; ಅದನ್ನು ತನ್ನ ಪರವಾಗಿ ಮತದಾರರು ನೀಡಿದ ತೀರ್ಪು ನಾಶ ಮಾಡಿಬಿಟ್ಟಿದೆ’’ ಎಂದು ಹೇಳಿರುವುದು ಕಳವಳಕಾರಿ ಸಂಗತಿ. ಆದರೆ ಸೆಕ್ಯುಲರಿಸಂ ಎಂಬುದು ಒಂದು ಮುಖವಾಡವಲ್ಲ. ಅದು ಭಾರತೀಯ ಗಣರಾಜ್ಯದ ತಿರುಳು. ಅದಿಲ್ಲವಾದಲ್ಲಿ ಭಾರತ ತನ್ನ ಆತ್ಮವನ್ನು ಕಳೆದುಕೊಳ್ಳುತ್ತದೆ. ಯಾವುದೇ ವಿರೋಧ ಪಕ್ಷ ಸೆಕ್ಯುಲರಿಸಂ ಎಂಬ ಪದವನ್ನೇ ಬಳಸದೇ ಇದ್ದದ್ದು ಈ ಬಾರಿಯ ಚುನಾವಣಾ ಪ್ರಚಾರದ ಮುಖ್ಯ ಸೋಲು ಮತ್ತು ವಿಶ್ವಾಸಘಾತುಕತನ. ಎಲ್ಲ ರೀತಿಯ ಪುರೋಗಾಮಿ ಭಿನ್ನಮತವನ್ನು ಮೋದಿ ಮೊದಲ ಅಧಿಕಾರಾವಧಿಗಿಂತ ಹೆಚ್ಚು ನಿರ್ಣಾಯಕವಾಗಿ, ಹೆಚ್ಚು ನಿರ್ದಯವಾಗಿ ದಮನಿಸಲಾಗುವುದೆಂಬ ಬಗ್ಗೆ ಅನುಮಾನವಿಲ್ಲ. ‘ಹುಸಿ ಸೆಕ್ಯುಲರ್/ ಲಿಬರಲ್ ರಾರ್ಟೆಲ್’ಗಳನ್ನು ಮತ್ತು ‘ಖಾನ್ ಮಾರುಕಟ್ಟೆ ಗದ್ದಲವನ್ನು’ ‘ಭಾರತದ ಅಕಡಮಿಕ್, ಸಾಂಸ್ಕೃತಿಕ ಹಾಗೂ ಬೌದ್ಧಿಕ ಭೂಪಟ’ದಿಂದ ನಿರ್ಮೂಲನಗೊಳಿಸುವುದಾಗಿ ಆರೆಸ್ಸೆಸ್ ಮತ್ತು ಬಿಜೆಪಿ ಎರಡೂ ಸಂಘಟನೆಗಳ ಹಿರಿಯ ನಾಯಕ ರಾಮ್ ಮಾಧವ್ ಈಗಾಗಲೇ ಹೇಳಲಾರಂಭಿಸಿದ್ದಾರೆ. ಆದ್ದರಿಂದ ಮೆಜಾರಿಟೇರಿಯನ್ ರಾಷ್ಟ್ರೀಯವಾದವನ್ನು ಹಾಗೂ ಕ್ರೋನಿ ಬಂಡವಾಳಶಾಹಿಯನ್ನು ವಿರೋಧಿಸುವವರಿಗೆ ಸಾರ್ವಜನಿಕವಾಗಿ ಸತ್ಯಹೇಳುವ ಧೈರ್ಯ ಇರಲೇಬೇಕು.
ಗಾಂಧೀಜಿಯವರ ಬಳಿಕ, ವಿಶ್ವದ ಅತ್ಯಂತ ಶ್ರೇಷ್ಠ ಗಾಂಧಿವಾದಿಯಾಗಿದ್ದ ಮಾರ್ಟಿನ್ ಲೂಥನ್ ಕಿಂಗ್ ಹೇಳಿದಂತೆ, ‘‘ನೈತಿಕ ಜಗತ್ತಿನ ಕಮಾನು ದೀರ್ಘವಾಗಿದೆ; ಆದರೆ ಅಂತಿಮವಾಗಿ ಅದು ನ್ಯಾಯದ ಕಡೆಗೆ ವಾಲುತ್ತದೆ.’’ ಫ್ರೆಂಟ್ ಲೇಖಕ ಸಾರ್ತ್ರೆ ಹೇಳಿದ ಮಾತು ಮನನೀಯ: ‘‘ನೀವು ಗೆಲ್ಲುತ್ತೀರಿ ಎಂಬುದಕ್ಕಾಗಿ ಫ್ಯಾಶಿಸಂ ವಿರುದ್ಧ ಹೋರಾಡುವುದಲ್ಲ; ನೀವು ಹೋರಾಡುವುದು ಯಾಕೆಂದರೆ ಅದು ಫ್ಯಾಶಿಸ್ಟ್ ಎಂಬ ಕಾರಣಕ್ಕಾಗಿ’’