ಸಾಮೂಹಿಕ ವಿವಾಹದಲ್ಲಿ ಪುತ್ರನ ಮದುವೆ ಮಾಡಿಸಿದ ಸಾಹಿತಿ ಕುಂ.ವೀರಭದ್ರಪ್ಪ

Update: 2019-06-06 13:41 GMT

ಚಿತ್ರದುರ್ಗ, ಜೂ. 6: ಹಿರಿಯ ಸಾಹಿತಿ ಕುಂ.ವೀರಭದ್ರಪ್ಪನವರು ತಮ್ಮ ಪುತ್ರನಿಗೆ ಮುರುಘ ರಾಜೇಂದ್ರ ಮಠದಲ್ಲಿ ಪ್ರತಿ ತಿಂಗಳು ನಡೆಯುವ ಸರಳ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಅಂತರ್ಜಾತಿ ಮದುವೆ ಮಾಡಿಸಿದ್ದಾರೆ.

ನಗರದ ಮುರುಘಾ ಮಠದ ಆವರಣದಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಕು.ವೀರಭದ್ರಪ್ಪನವರ ಪುತ್ರ ಪ್ರವರ ಕುಂ.ವಿ., ಅಂಬಿಕಾ ಅವರೊಂದಿಗೆ ಅಂತರ್ಜಾತಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ವೇಳೆ ನೂತನ ವಧು-ವರರನ್ನು ಉದ್ದೇಶಿಸಿ ಮಾತನಾಡಿದ ಶಿವಮೂರ್ತಿ ಶರಣರು, ಶ್ರೀಮಠದಲ್ಲಿ ನಡೆಯುವ ಅಂತರ್‌ಜಾತಿ, ಅಂತರ್‌ಧರ್ಮೀಯ ವಿವಾಹಗಳಿಂದು ಜಾತಿ-ಜಾತಿಗಳ ನಡುವೆ ಸಾಮರಸ್ಯ ಬೆಸೆಯುವಲ್ಲಿ ಮಹತ್ವದ ಪಾತ್ರವಹಿಸಿ, ಜಾತಿಪದ್ಧತಿ ಆಚರಣೆಯನ್ನು ಸಮಾಜದಲ್ಲಿ ಕಡಿಮೆಗೊಳಿಸಿವೆ ಎಂದರು.

ಅನುಭವ ಮಂಟಪದ ಮಹತ್ವ ಒಗ್ಗೂಡಿಸುವಿಕೆ, ಅಂದರೆ ಜಾತಿ-ಜಾತಿಗಳನ್ನು ಒಟ್ಟುಗೂಡಿಸುವುದು ಜೊತೆಗೆ ಮಾನವ ಮಾನವರ ನಡುವೆ ಸಾಮರಸ್ಯತೆಯನ್ನು ಬೆಸೆಯುವುದು, ಹೃದಯ ಹೃದಯಗಳ ನಡುವೆ ಸಾಮರಸ್ಯತೆ ಬೆಳೆಸುವುದು. ಇದನ್ನು 900 ವರ್ಷಗಳ ಹಿಂದೆಯೇ ಬಸವಾದಿ ಶರಣರು ಮಾಡಿದ್ದರು.

ಈ ಸಂಬಂಧದಲ್ಲಿ ಶಾಂತಿ ಸಾಮರಸ್ಯತೆ ಇರುತ್ತದೆ. ಒಗ್ಗೂಡುವಿಕೆಯಿಂದ ಜೀವನ ಆನಂದಮಯವಾಗುತ್ತದೆ. ಆದರೆ ಅಗಲಿಸುವಿಕೆಯಿಂದ ಅಶಾಂತಿ, ಅಸಮಾಧಾನಗಳು ತುಂಬಿರುತ್ತವೆ. 12ನೆ ಶತಮಾನದಲ್ಲೆ ಬಸವಾದಿ ಪ್ರಥಮರು ಹತ್ತಾರು ಸಮಾಜಮುಖಿ ಲೋಕಕಲ್ಯಾಣ ಕಾರ್ಯಗಳನ್ನು ಮಾಡುತ್ತಿದ್ದರು ಎಂದು ಶ್ರೀಗಳು ಸ್ಮರಿಸಿದರು.

ಇಂದು ಆರು ಅಂತರ್‌ಜಾತಿ ವಿವಾಹಗಳು ಸೇರಿದಂತೆ ಒಟ್ಟು 45 ಜೋಡಿಗಳು ಈ ಸರಳ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಮೂಲಕ ಸಾಮಾಜಿಕ ಸಾಮರಸ್ಯತೆ, ಸಮಾನತೆ, ಮಾನವೀಯ ಕಾರ್ಯಗಳನ್ನು ಶ್ರೀಮಠವು ಮಾಡುತ್ತಿದೆ ಎಂದರು.
ಸಾಮೂಹಿಕ ವಿವಾಹ ಮಹೋತ್ಸವ ಮುಗಿದ ಬಳಿಕ ನೂತನ ವಧು-ವರರು, ಅತಿಥಿಗಳು ಎಲ್ಲರೂ ಸಸಿ ನೆಡುವುದರ ಮೂಲಕ ಮುರುಘಾವನದಲ್ಲಿ ವಿಶ್ವ ಪರಿಸರ ದಿನಾಚರಣೆಗೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ಕೃಪಾಸಾಗರ್ ನಿರ್ದೇಶನದ 'ಸಾರ್ವಜನಿಕರಲ್ಲಿ ವಿನಂತಿ' ಸಿನೆಮಾ ಪೋಸ್ಟರ್‌ನ್ನು ಡಾ.ಶಿವಮೂರ್ತಿ ಮುರುಘಾ ಶರಣರು ಬಿಡುಗಡೆಗೊಳಿಸಿದರು.

ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ನಿವೃತ್ತ ನ್ಯಾಯಾಧೀಶ ಎಚ್.ಎಂ. ಭರತೇಶ್, ಕೆ.ವಿ.ಶಿವಕುಮಾರ್, ಸಾಹಿತಿ ಕುಂ.ವೀರಭದ್ರಪ್ಪ ದಂಪತಿ, ಕೆಪಿಟಿಸಿಎಲ್ ಅಧಿಕಾರಿ ಗುರುಮಲ್ಲಯ್ಯ, ಭೈರಮಂಗಲ ರಾಮೇಗೌಡ, ಪ್ರಕಾಶ್ ಕಂಬತ್ತಳ್ಳಿ, ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News