ಅವಸರದ ಘಳಿಗೆಯಲ್ಲಿ ಪರಿಸರದ ಕಾಳಜಿ?

Update: 2019-06-06 18:33 GMT

ಪ್ರಕೃತಿಯ ಒಡಲನ್ನು ಸೀಳಿ ಅಕ್ರಮ ಸಂಪತ್ತನ್ನು ಸೃಷ್ಟಿಸಿರುವ ಮಾನವ ಸಮಾಜ ತನ್ನ ಬುಡವನ್ನು ತಾನೇ ಕತ್ತರಿಸಿಕೊಳ್ಳುತ್ತಿದೆ. ಹಾಗಾದರೆ ಪರಿಹಾರವೇನು? ದೇಶದ ಪ್ರಗತಿ ಆಗಬೇಡವೇ? ಭಾರತ ಔದ್ಯಮಿಕವಾಗಿ ವಿಶ್ವಮಾನ್ಯವಾಗುವುದು ಬೇಡವೇ? ಪ್ರವಾಸೋದ್ಯಮದಿಂದ ಬರುವ ಆದಾಯವನ್ನು ಜನಸಾಮಾನ್ಯರ ಅಭ್ಯುದಯಕ್ಕೆ ಬಳಸಿಕೊಳ್ಳಬಹುದಲ್ಲವೇ? ಈ ಪ್ರಶ್ನೆಗಳಿಗೆ ಖಂಡಿತವಾಗಿಯೂ ಉತ್ತರ ಇದೆ. ಸುಸ್ಥಿರ ಅಭಿವೃದ್ಧಿ ಎಂಬ ಪರಿಕಲ್ಪನೆಗೆ ಕಿವಿಗೊಡುವ ಔದಾರ್ಯ ಮತ್ತು ತಾಳ್ಮೆ ಆಳುವ ವರ್ಗಗಳಿಗೆ ಇರಬೇಕಷ್ಟೆ.

ವಿಶ್ವದಾದ್ಯಂತ ವಿಶ್ವ ಪರಿಸರ ದಿನದಂದು ಪರಿಸರ ಪ್ರಜ್ಞೆ ಅಡಿಯಿಂದ ಮುಡಿಯವರೆಗೂ ಪ್ರವಹಿಸಿ ಉಕ್ಕಿ ಹರಿಯುತ್ತದೆ. ತಮ್ಮ ಪರಿಸರ ಕಾಳಜಿಯನ್ನು ವ್ಯಕ್ತಪಡಿಸಲು ದುಂಬಾಲು ಬೀಳುವ ರಾಜಕೀಯ ನಾಯಕರು ಮತ್ತು ಸಂಘಟನೆಗಳು ಹಾದಿ ಬೀದಿಗಳಲ್ಲಿ ಸಮಾರಂಭಗಳನ್ನು ಏರ್ಪಡಿಸಿ ಪುಂಖಾನುಪುಂಖವಾಗಿ ತಮ್ಮ ಪರಿಸರ ಕಾಳಜಿಯನ್ನು ಹೊರಹಾಕುವ ಪ್ರಯತ್ನವನ್ನು ನೋಡಬಹುದು. ಜಗತ್ತಿನ ಸೃಷ್ಟಿ ಮತ್ತು ವಿನಾಶ ಈ ಎರಡು ಧ್ರುವಗಳ ನಡುವೆ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಿರುವ 21ನೇ ಶತಮಾನದ ಮಾನವ ತನ್ನ ಸುತ್ತಲಿನ ಪರಿಸರವನ್ನು ರಕ್ಷಿಸದಿದ್ದರೆ ಉಳಿಗಾಲವಿಲ್ಲ ಎಂಬ ವಾಸ್ತವವನ್ನು ಅರಿತಿದ್ದಾನೆ. ಇಂಗಾಲದ ಹೆಚ್ಚಳ, ಜಾಗತಿಕ ತಾಪಮಾನದ ಹೆಚ್ಚಳ, ಜಲಸಂಪನ್ಮೂಲಗಳ ನಾಶ, ಅರಣ್ಯಗಳ ವಿನಾಶ, ಭೂಮಿಯ ಫಲವತ್ತತೆಯ ಕೊರತೆ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹೀಗೆ ಹಲವು ಆಯಾಮಗಳಲ್ಲಿ ಆಧುನಿಕ ಮಾನವ ತನ್ನ ನಿತ್ಯ ಜೀವನದ ಸವಾಲುಗಳನ್ನು ಎದುರಿಸುತ್ತಿದ್ದಾನೆ. ಅಭಿವೃದ್ಧಿ ಮತ್ತು ಪ್ರಗತಿಯ ಪರಿಕಲ್ಪನೆಗಳು ಮನುಕುಲದ ಅಳಿವು ಉಳಿವಿನ ಮಾನದಂಡಗಳಾಗಿ ಪರಿಣಮಿಸುತ್ತಿದ್ದರೂ ಲೆಕ್ಕಿಸದ ನಾಗರಿಕ ಸಮಾಜ ತನ್ನ ಅಸ್ತಿತ್ವವನ್ನು ರಕ್ಷಿಸಿಕೊಳ್ಳುವ ಅವಸರದಲ್ಲಿ ಭವಿಷ್ಯದ ಹಾಳು ಬಾವಿಗಳನ್ನು ಸೃಷ್ಟಿಸುತ್ತಲೇ ಮುನ್ನಡೆಯುತ್ತಿದೆ.
ಭಾರತ ಸರಕಾರ, ವಿಶ್ವಸಂಸ್ಥೆ ಮತ್ತು ಜಾಗತಿಕ ಪರಿಸರವಾದಿ ಸಂಘ ಸಂಸ್ಥೆಗಳು ಪ್ರಕಟಿಸುವ ಅಂಕಿ ಅಂಶಗಳ ಹೂರಣವನ್ನು ಕೊಂಚಕಾಲ ಪಕ್ಕಕ್ಕಿಡೋಣ. ಚತ್ತೀಸ್‌ಗಡದಲ್ಲಿ ಭಾರತ ಸರಕಾರ 1 ಲಕ್ಷ 70 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಒಬ್ಬ ಕಾರ್ಪೊರೇಟ್ ಉದ್ಯಮಿಯ ಗಣಿಗಾರಿಕೆಗೆ ಪರಭಾರೆ ಮಾಡಿದಾಗ ಕೇಳಿಬರುವ ಪ್ರತಿರೋಧದ ದನಿಗಳು ದೇಶದ್ರೋಹದ ಸಂಕೇತವಾಗುವ ದುಃಸ್ಥಿತಿಯಲ್ಲಿ ನಾವಿದ್ದೇವೆ. ಈ ಭೂಮಿಯನ್ನು ಉಳಿಸಿಕೊಳ್ಳಲು ಹೋರಾಟಕ್ಕೆ ಸಜ್ಜಾಗುವವರು ಬಹುಶಃ ನಗರ ನಕ್ಸಲರಾಗಿ ಕಂಬಿ ಎಣಿಸಬೇಕಾಗಬಹುದು. ಏಕೆಂದರೆ ಈ ಬೃಹತ್ ಪ್ರಮಾಣದ ಭೂಮಿಯನ್ನು ಅಗೆದು, ಕೊರೆದು, ಬಡಕಲಾಗಿಸಿ, ಹಸಿರಿನ ಬಸಿರನ್ನು ಹೊಸಕಿ ಹಣದ ಹೊಳೆಯನ್ನು ಹರಿಸುವ ಉದ್ಯಮಿಯ ಪ್ರಗತಿಯ ಮುನ್ನೋಟ ಮತ್ತು ಕಾಣ್ಕೆ ದೇಶದ ಉನ್ನತಿಯ ಸಂಕೇತವಾಗಿಬಿಡುತ್ತದೆ. ದೇಶ ಅಭಿವೃದ್ಧಿಯಾಗುವುದಾದರೂ ಹೇಗೆ? ಎಂಬ ಪ್ರಶ್ನೆಗೆ ಉತ್ತರ ನೀಡಲು ಪರಿಸರವಾದಿಗಳು ಸಜ್ಜಾಗುವಷ್ಟರಲ್ಲೇ ಹಣಕಾಸು ಬಂಡವಾಳದ ವಾರಸುದಾರರು ಪ್ರಶ್ನಿಸುವ ದನಿಗಳನ್ನು ದಮನಿಸಿರುತ್ತಾರೆ ಅಥವಾ ಖರೀದಿಸಿರುತ್ತಾರೆ. ಇಂತಹ ಸಂದಿಗ್ಧತೆಯಲ್ಲಿ ನಾವಿದ್ದೇವೆ.


ದಟ್ಟ ಮಲೆನಾಡಿನ ಹಸಿರ ಮಡಿಲಲ್ಲಿ ಧರ್ಮ ಮತ್ತು ಸತ್ಯದ ನೆಲೆ ಬೀಡಾಗಿ ವಿಶ್ವಮಾನ್ಯತೆ ಪಡೆದಿರುವ ಧರ್ಮಸ್ಥಳದಲ್ಲಿ ಹರಿಯುವ ನೇತ್ರಾವತಿಯ ಒಡಲು ಬರಿದಾಗಿದೆ. ಮಂತ್ರಾಲಯದ ಗುರು ರಾಘವೇಂದ್ರರ ಸನ್ನಿಧಿಯಲ್ಲಿ ತುಂಗೆಯ ಒಡಲು ಬರಿದಾಗಿದೆ. ಇತ್ತ ಕಾವೇರಿಯ ಒಡಲಿನಲ್ಲಿ ಡಿಸ್ನಿ ಲ್ಯಾಂಡ್ ನಿರ್ಮಿಸುವ ಮೂಲಕ ಕಾವೇರಮ್ಮನ ಸಮಾಧಿ ನಿರ್ಮಿಸಲು ರಾಜ್ಯ ಸರಕಾರ ಸಜ್ಜಾಗುತ್ತಿದೆ. ಕಾವೇರಿಯ ಉಗಮಸ್ಥಾನ ಪ್ರವಾಸಿಗರ ತಾಣವಾಗಿದ್ದು ಹಸಿರು ಕಾಡುಗಳನ್ನು ನುಂಗಿ ಬಂಡವಾಳದ ಬಸಿರು ತನ್ನ ಸಂತತಿಯನ್ನು ಬೆಳೆಸಲು ಸಜ್ಜಾಗುತ್ತಿದೆ. ತಮಿಳುನಾಡಿನ ಸುನಾಮಿ ನಮ್ಮನ್ನು ಎಚ್ಚರಿಸಲೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸುತ್ತಿರುವಾಗಲೇ ಕೊಡಗಿನ ಬೆಟ್ಟಗಳು ಕುಸಿದುಬಿದ್ದಿವೆ. ಕೊಡಗು ಇನ್ನೂ ಚೇತರಿಸಿ ಕೊಂಡಿಲ್ಲ, ಕೇದಾರನಾಥದ ದುರಂತ ಇನ್ನೂ ಮರೆಯಾಗಿಲ್ಲ. ಆದರೂ ಪ್ರವಾಸೋದ್ಯಮದ ರಣಹದ್ದುಗಳು ಹಸಿರ ಬನಸಿರಿಯನ್ನು ಕಬಳಿಸಲು ಜಾಗತಿಕ ಶಸ್ತ್ರಾಸ್ತ್ರಗಳೊಡನೆ ದಾಳಿ ಮಾಡುತ್ತಲೇ ಇವೆ. ಹೌದಲ್ಲವೇ, ದೇಶದ ಅಭಿವೃದ್ಧಿಗೆ ಬೇಕಿರುವುದು ಬಂಡವಾಳ. ಹಸಿರ ಸೆರಗಿನಲ್ಲಿಟ್ಟ ಸಂಪತ್ತು ನಿಸರ್ಗವನ್ನು ರಕ್ಷಿಸುತ್ತದೆ. ನಿಸರ್ಗ ಚಿನ್ನದ ಮೊಟ್ಟೆ ಇಡುವುದೇ?
ನೇತ್ರಾವತಿ ಏಕೆ ಬರಿದಾಗುತ್ತದೆ? ಮೈಸೂರು ಏಕೆ ಬಿಸಿಲಿನ ಝಳಕ್ಕೆ ಹೈರಾಣಾಗುತ್ತದೆ? ಬೆಂಗಳೂರು ಏಕೆ ಕುಡಿವ ನೀರಿಗಾಗಿ ಹಾತೊರೆಯುತ್ತದೆ? ಕೊಡಗಿನ ಬೆಟ್ಟಗಳು ಏಕೆ ಕುಸಿಯುತ್ತವೆ? 21ನೇ ನಾಗರಿಕ ಸಮಾಜಕ್ಕೆ ನೀರಿನ ಮೌಲ್ಯ ಅರಿವಿಲ್ಲ. ಗಾಳಿಯ ಸೋಂಕು ತಗಲುತ್ತಿಲ್ಲ. ಶಾಖ ಹೆಚ್ಚಿಸುವ ಗಾಜಿನ ಮಹಲುಗಳನ್ನು ನಿರ್ಮಿಸಿ, ಬೃಹತ್ ಬಂಡೆಗಳನ್ನು ಕೊರೆಕೊರೆದು ತಯಾರಿಸಿದ ನವಿರು ಕಲ್ಲುಗಳ ನೆಲಹಾಸುಗಳನ್ನು ಹರಡಿ, ಸಿಮೆಂಟು ನೆಲದ ನಡುವೆ ಅಲ್ಲಲ್ಲಿ ಅಂದದ ಆಲಂಕಾರಿಕ ಗಿಡಗಳನ್ನು ನೆಟ್ಟು, ಶಾಖ ವಿಮುಕ್ತರಾಗಲು ಹವಾನಿಯಂತ್ರಣದ ವಿದ್ಯುತ್ ಉಪಕರಣಗಳ ಮೊರೆ ಹೋಗುವ ಶ್ರೀಮಂತಿಕೆಯ ವೈಭೋಗದ ಹರಿಕಾರರು ನವ ಭಾರತದ ಪ್ರಜ್ಞೆಯನ್ನು ಆವರಿಸಿರುವುದು ಈ ದುರಂತಗಳಿಗೆ ಮೂಲ ಕಾರಣ. 1970ರ ದಶಕದ ಶೋಲೆ ಚಿತ್ರದ ಗಬ್ಬರ್ ಸಿಂಗ್ ಪರದೆಯಲ್ಲಿ ಅಡಗಿದ್ದಾನೆ. ಆದರೆ ಅವನನ್ನೂ ಮೀರಿಸುವ ದರೋಡೆಕೋರರು ರಾಮನಗರದ ಬೆಟ್ಟಗುಡ್ಡಗಳನ್ನು ಕೊರೆದು ಸಪಾಟು ಮಾಡುತ್ತಿದ್ದಾರೆ. ಕೆಲವು ವರ್ಷಗಳ ನಂತರ ಶೋಲೆ ಮನದಲ್ಲಿ ಉಳಿದಿರುತ್ತದೆ ಆದರೆ ಶೋಲೆ ಬೆಟ್ಟ ಮತ್ತು ಸುತ್ತಲಿನ ಕಲ್ಲುಗುಡ್ಡಗಳು ನೆಲಸಮವಾಗಿರುತ್ತವೆ. ಡಕಾಯಿತರು ಎಂದರೆ ಯಾರು? ಸುಮ್ಮನೆ ಯೋಚಿಸೋಣ.
 ಬಾಲ್ಯದ ನನ್ನೂರಿನ ನಮ್ಮ ಮನೆಯಲ್ಲಿ ನಲ್ಲಿಯ ನೀರು ಐದು ಅಡಿ ಎತ್ತರದಲ್ಲಿ ಬರುತ್ತಿತ್ತು. ಮೂರು ಬಿಂದಿಗೆಗಳನ್ನು ಒಂದರ ಮೇಲೊಂದು ಜೋಡಿಸಿ ನೀರು ಹಿಡಿಯುತ್ತಿದ್ದುದು ಇಂದಿಗೂ ಕಣ್ತುಂಬಿ ಬರುತ್ತದೆ. ಆದರೆ ಈಗ ಆ ನನ್ನೂರಿನಲ್ಲಿ, ಕೋಲಾರ ಜಿಲ್ಲೆಯ ಬಂಗಾರಪೇಟೆ, ನಾನೂರು ಅಡಿ ಅಗೆದರೂ ನೀರಿನ ಹನಿಯೂ ದೊರೆಯುವುದಿಲ್ಲ. ಇದ್ದ ಒಂದು ಕೆರೆಯನ್ನು ವಸತಿ ಸೌಕರ್ಯಕ್ಕಾಗಿ ಬಡಾವಣೆ ಮಾಡೆಂದು ಹೇಳಿದವರಾದರೂ ಯಾರು? ಇದು ಎಲ್ಲ ಸಣ್ಣ ಪಟ್ಟಣಗಳ ಬವಣೆ. ಮಂಡ್ಯ, ನಾಗಮಂಗಲ, ಹೊಸಕೋಟೆ, ಕೋಲಾರ ಇಡೀ ರಾಜ್ಯದಲ್ಲಿ ಕೆರೆಗಳ ಆವರಣ ಆಧುನಿಕ ಬಂಗಲೆಗಳಿಗೆ ಬಲಿಯಾಗುತ್ತಿವೆ. ಇದನ್ನು ಅಭಿವೃದ್ಧಿ ಎನ್ನುವುದೋ, ನಗರೀಕರಣದ ಅನಿವಾರ್ಯತೆ ಎನ್ನುವುದೋ? ನಮಗೆ ಊರಗಲದ ರಸ್ತೆಗಳು ಬೇಕು, ದ್ವಿಪಥದಿಂದ ಈಗ ದಶಪಥದವರೆಗೆ ಬಂದಿದ್ದೇವೆ. ನವಿರಾದ ರಸ್ತೆಗಳ ಮೇಲೆ ಸಂಚರಿಸುವಾಗ ಮೈ ನವಿರೇಳುತ್ತದೆ. ಪಾವತಿಸುವ ಶುಲ್ಕ ಭವಿಷ್ಯದ ಕರಾಳ ದರ್ಶನಕ್ಕೆ ಸಂದ ದಕ್ಷಿಣೆ ಎಂಬ ಕನಿಷ್ಠ ಪರಿಜ್ಞಾನವೂ ನಮ್ಮನ್ನು ಕಾಡುವುದಿಲ್ಲ. ಟೋಲ್ ಶುಲ್ಕವನ್ನು ಸಂಗ್ರಹಿಸುವ ಉದ್ಯಮಿಗಳು ಕೆಲವೊಮ್ಮೆ ಶೋಲೆಯ ಗಬ್ಬರ್ ಸಿಂಗ್‌ನಂತೆಯೇ ಕಾಣುತ್ತಾರೆ. ‘‘ಕಿತನೇ ಆದ್ಮಿ ಥೇ’’ ಎಂಬ ಸಂಭಾಷಣೆಯನ್ನು ಬದಲಿಸಿ ‘‘ಕಿತನೇ ಬಾಕಿ ಹೈ’’ ಎಂದು ಹೇಳುವ ಮಟ್ಟಿಗೆ ನಾವು ತಲುಪಿದ್ದೇವೆ.
ಹಾರು ಬೂದಿ ನಮ್ಮನ್ನು ಕಂಗೆಡಿಸುವುದಿಲ್ಲ. ಅಣು ವಿದ್ಯುತ್ ಘಟಕಗಳಿಂದ ಉಂಟಾಗುವ ಪರಿಸರ ನಾಶ ನಮ್ಮನ್ನು ಬಾಧಿಸು ವುದಿಲ್ಲ. ದೇಶದ ಪ್ರಗತಿಗೆ ಇವು ಅನಿವಾರ್ಯವಾಗಿ ಬಿಡುತ್ತದೆ. ಗಣಿಗಾರಿಕೆಯಂತೂ ಕೆರೆ ಬಾವಿಗಳಿಗಿಂತಲೂ ಹೆಚ್ಚು ಶ್ರೇಷ್ಠ ಸ್ಥಾನ ಪಡೆದುಬಿಟ್ಟಿದೆ. ಬಳ್ಳಾರಿ, ಸಂಡೂರು ನಮ್ಮ ಕಣ್ಣೆದುರಿನಲ್ಲೇ ಇವೆ, ಈಗ ಜಿಂದಾಲ್ ಗರಿಗೆದರಿದೆ. ನಗರಗಳಲ್ಲಿ ಜಲಸಂಪನ್ಮೂಲಗಳನ್ನು ತಮ್ಮ ಮನಸೋಯಿಚ್ಛೆ ಬಳಸಿ, ಕಾರು, ಬಂಗಲೆ, ಮನೆಯಂಗಳದ ಹೂದೋಟ, ಹುಲ್ಲಿನ ಹಾಸು ಮತ್ತು ಕಾಂಕ್ರಿಟ್ ನೆಲಹಾಸುಗಳನ್ನು ತೊಳೆಯಲು ಉಪಯೋಗಿಸಿ, ಕುಡಿವ ನೀರಿಗಾಗಿ ಅಲ್ಲೆಲ್ಲೋ ಕೊಳೆಗೇರಿಯಲ್ಲಿನ ತತ್ವಾರವನ್ನು ಲೆಕ್ಕಿಸದೆ ಮಲೆನಾಡಿನ, ಕೊಡಗಿನ ಹಸಿರಿನ ಮಡಿಲಲ್ಲಿ ತಮ್ಮ ವಿಶ್ರಾಂತ ಘಳಿಗೆಗಳನ್ನು ಕಳೆಯಲು ಬಯಸುವ ಶ್ರೀಮಂತರ ಮೋಜು ಮಸ್ತಿಗೆ ಕಾಡುಗಳ ನಡುವೆಯೇ ರೆಸಾರ್ಟ್‌ಗಳನ್ನು, ಈಜು ಕೊಳಗಳನ್ನು, ಮೈ ಕೈ ನೋವು ಪರಿಹರಿಸುವ ಪ್ರಕೃತಿ ಚಿಕಿತ್ಸಾ ಕೇಂದ್ರಗಳನ್ನು ನಿರ್ಮಿಸುತ್ತಿದ್ದೇವೆ. ಮನರಂಜನೆಯೂ ಬೇಕಲ್ಲವೇ ನಗರ ಜೀವನದ ಜಂಜಾಟದಿಂದ ಬಸವಳಿದವರಿಗೆ!
 ಹಾಗಾಗಿ ನದಿ ತೀರಗಳೆಲ್ಲವೂ ಮೋಜು ಮಸ್ತಿಯ ಕೇಂದ್ರಗಳಾಗಿವೆ. ನಿಸರ್ಗ ಸೊಬಗನ್ನು ಸವಿಯುವ ಅವಕಾಶವನ್ನು ಪಕ್ಷಿ ಸಂಕುಲಗಳಿಂದ ಕಸಿದು ಕೊಂಡಿರುವ ಮಾನವ ಸಮಾಜ ತನ್ನದೇ ಆದ ಜಗತ್ತನ್ನು ಸೃಷ್ಟಿಸಿದೆ. ಚಿನ್ನವನ್ನು ಅರಸಿ ಭೂಮಿಯ ಒಡಲನ್ನು ಸಾವಿರಾರು ಅಡಿಗಳಷ್ಟು ಕೊರೆಯುತ್ತಿದ್ದ ಮನುಕುಲ ಇಂದು ಕುಡಿಯುವ ನೀರಿಗಾಗಿ ಇನ್ನೂ ಆಳಕ್ಕೆ ಹೋಗುತ್ತಿದೆ. ನೇತ್ರಾವತಿಯಲ್ಲಿ ನೀರಿಲ್ಲ ಎಂದು ವಿಷಾದದಿಂದ ನುಡಿಯುವವರಿಗೆ ಮಲೆನಾಡಿನ ಮಡಿಲಲ್ಲಿರುವ ದೈವಸನ್ನಿಧಿಗಳೇ ಎಷ್ಟು ಅರಣ್ಯವನ್ನು ಕಬಳಿಸಿವೆ, ಕಬಳಿಸುತ್ತಿವೆ ಎಂಬ ಪ್ರಜ್ಞೆ ಇರಬೇಕಲ್ಲವೇ? ನಿಜ, ದೈವ ನಂಬಿಕೆ ಜನಸಾಮಾನ್ಯರ ಹಕ್ಕು. ಆದರೆ ದೈವ ಸೃಷ್ಟಿಯನ್ನೇ ನಾಶಮಾಡಿ ನಂಬಿಕೆಯನ್ನು ಉಳಿಸುವುದೆಂದರೆ ಹೇಗೆ ? ನೇತ್ರಾವತಿ ಬರಿದಾಗಲು ಕಾರಣವೇನು ಎಂದು ಒಮ್ಮೆಯಾದರೂ ಯೋಚಿಸಬಹುದಲ್ಲವೇ? ಭಕ್ತಿಯ ಉನ್ಮಾದಕ್ಕೂ ಐಷಾರಾಮಿ ಬದುಕಿನ ಉನ್ಮಾದಕ್ಕೂ ಕೊಂಚವಾದರೂ ಅಂತರ ಇರಬೇಕಲ್ಲವೇ? ಎರಡರ ಸಮ್ಮಿಲನದಿಂದ ಪರಿಸರ ನಾಶವಾಗುತ್ತಿರುವುದನ್ನು ನಾವು ಕಂಡೂ ಕಾಣದಂತಿದ್ದೇವೆ ಎನಿಸುವುದಿಲ್ಲವೇ? ಇದು ಯಾವುದೇ ಮತಧರ್ಮದ ಪ್ರಶ್ನೆಯಲ್ಲ. ಮಾನವ ಸಂತಾನದ ಭವಿಷ್ಯದ ಪ್ರಶ್ನೆ.


ಸ್ವಚ್ಛ ಭಾರತ, ಸ್ವಚ್ಛ ರಸ್ತೆಗಳು, ಬಹಿರ್ದೆಶೆ ಮುಕ್ತ ಗ್ರಾಮಗಳು, ಶೌಚಾಲಯ ಕ್ರಾಂತಿ ಇವೆಲ್ಲವೂ ನಿತ್ಯ ಜೀವನದ ವಿದ್ಯಮಾನಗಳು. ಇದು ನಮ್ಮ ಸುತ್ತಲಿನ ಪರಿಸರವನ್ನು ನಮ್ಮ ಸ್ವಾರ್ಥಕ್ಕಾಗಿ ಸ್ವಚ್ಛವಾಗಿರಿಸುವ ಕ್ರಮಗಳಷ್ಟೇ. ಆದರೆ ನಮ್ಮ ಕಣ್ಣಿಗೆ ಕಾಣದ ದೂರದ ಪ್ರಪಂಚವೊಂದರಲ್ಲಿ ಭವಿಷ್ಯದ ಬದುಕನ್ನೇ ವಿನಾಶದಂಚಿಗೆ ಕೊಂಡೊಯ್ಯುವ ವಿನಾಶಕಾರಿ ಪ್ರಕ್ರಿಯೆಗಳು ನಡೆಯುತ್ತಿರುವುದು ಏಕೆ ನಮ್ಮ ಗಮನಕ್ಕೆ ಬರುವುದಿಲ್ಲ? ಅಣು ವಿದ್ಯುತ್ ಸ್ಥಾವರ, ಉಷ್ಣ ವಿದ್ಯುತ್ ಸ್ಥಾವರ ವಿರೋಧಿಸುವವರನ್ನು ಅಭಿವೃದ್ಧಿ ವಿರೋಧಿಗಳೆಂದೋ, ದೇಶದ್ರೋಹಿಗಳೆಂದೋ ಹೀಗಳೆಯುವವರು ತಮ್ಮ ರಾಜಕೀಯ ಪೊಟರೆಗಳಿಂದ ಹೊರಬಂದು ನೋಡಿದಾಗ ವಾಸ್ತವ ಪರಿಸ್ಥಿತಿಯ ಅರಿವಾಗಬಹುದು. ಪರಿಸರ ರಕ್ಷಣೆ ಎಂದರೆ ಬೀದಿಯ ಕಸ ಗುಡಿಸುವುದಲ್ಲ, ರಸ್ತೆ ಬದಿಯ ಕಸವನ್ನು ಮತ್ತೊಂದೆಡೆಗೆ ಸಾಗಿಸಿ ತ್ಯಾಜ್ಯ ಪರ್ವತಗಳನ್ನು ನಿರ್ಮಿಸುವುದಲ್ಲ. ಮರುಭೂಮಿಯಲ್ಲಿ ಒಂಟೆಯೊಂದು ಬಿಸಲೇರಿ ನೀರಿಗಾಗಿ ಹಾತೊರೆಯುವ ಜಾಹೀರಾತು ಈ ಕಾಲಘಟ್ಟದ ದುರಂತಕ್ಕೆ ಕನ್ನಡಿ ಹಿಡಿದಂತೆ ಕಾಣುತ್ತದೆ. ಅಮ್ಮಾ ನೀರು ಎಂದು ಗೋಗರೆಯುವ ಮರಿ ಒಂಟೆಯ ಆರ್ತನಾದ ನಮ್ಮ ಕಿವಿಗೆ ಇಂಪಾಗಿ ಕೇಳಿಸುತ್ತದೆ, ಸ್ಪ್ರೈಟ್ ಪಾನೀಯ ಕುಡಿದರೆ ಸ್ನಾನಕ್ಕೆ ನೀರಿಲ್ಲದಿದ್ದರೂ ಅಡ್ಡಿಯಿಲ್ಲ ಎಂದು ಸೂಚಿಸುವ ಜಾಹೀರಾತು ನಮ್ಮನ್ನು ರಂಜಿಸುತ್ತದೆ ಅಲ್ಲವೇ?
ಆದರೆ ಅಮ್ಮಾ ನೀರು ಎಂಬ ಆಕ್ರಂದನ ಈ ದೇಶದ ಪ್ರತಿಯೊಂದು ಗ್ರಾಮದಲ್ಲೂ, ಪಟ್ಟಣದಲ್ಲೂ, ನಗರದಲ್ಲೂ ಮಾರ್ದನಿಸಿದಾಗ ಹೇಗೆ ಕಾಣಬಹುದು? ನೇತ್ರಾವತಿಯ ಒಡಲಲ್ಲೇ ಈ ಕೂಗು ಕೇಳಿಬರುತ್ತಿದೆಯಲ್ಲವೇ? ನಾಳೆ ಕಾವೇರಿಯ ಮಡಿಲಲ್ಲೂ ಕೇಳಿಬರಬಹುದು. ಆಗ ನಮ್ಮ ರಕ್ಷಣೆಗೆ ಯಾವ ದೇವರೂ ಬರುವುದಿಲ್ಲ. ಕಾವೇರಿ ಮಾತೆಯೂ ಬರುವುದಿಲ್ಲ. ಪ್ರಕೃತಿಯ ಒಡಲನ್ನು ಸೀಳಿ ಅಕ್ರಮ ಸಂಪತ್ತನ್ನು ಸೃಷ್ಟಿಸಿರುವ ಮಾನವ ಸಮಾಜ ತನ್ನ ಬುಡವನ್ನು ತಾನೇ ಕತ್ತರಿಸಿಕೊಳ್ಳುತ್ತಿದೆ. ಹಾಗಾದರೆ ಪರಿಹಾರವೇನು? ದೇಶದ ಪ್ರಗತಿ ಆಗಬೇಡವೇ? ಭಾರತ ಔದ್ಯಮಿಕವಾಗಿ ವಿಶ್ವಮಾನ್ಯವಾಗುವುದು ಬೇಡವೇ? ಪ್ರವಾಸೋದ್ಯಮದಿಂದ ಬರುವ ಆದಾಯವನ್ನು ಜನಸಾಮಾನ್ಯರ ಅಭ್ಯುದಯಕ್ಕೆ ಬಳಸಿಕೊಳ್ಳಬಹುದಲ್ಲವೇ? ಈ ಪ್ರಶ್ನೆಗಳಿಗೆ ಖಂಡಿತವಾಗಿಯೂ ಉತ್ತರ ಇದೆ. ಸುಸ್ಥಿರ ಅಭಿವೃದ್ಧಿ ಎಂಬ ಪರಿಕಲ್ಪನೆಗೆ ಕಿವಿಗೊಡುವ ಔದಾರ್ಯ ಮತ್ತು ತಾಳ್ಮೆ ಆಳುವ ವರ್ಗಗಳಿಗೆ ಇರಬೇಕಷ್ಟೆ. ದುರಂತ ಎಂದರೆ ನವ ಉದಾರವಾದ ಸೃಷ್ಟಿಸಿರುವ ಸಮೂಹ ಸನ್ನಿ ಸುಶಿಕ್ಷಿತರನ್ನೂ ನಿಷ್ಕ್ರಿಯರನ್ನಾಗಿಸಿದೆ. ಬಂಡವಾಳ-ಅಭಿವೃದ್ಧಿ-ಮಾರುಕಟ್ಟೆಯ ಒಕ್ಕೂಟದ ಪ್ರಹಾರಕ್ಕೆ ಮನುಕುಲದ ಪ್ರಜ್ಞೆ ನಲುಗಿಹೋಗಿದೆ. ಈ ಪ್ರಜ್ಞೆಯ ಪುನರುತ್ಥಾನ ಸಾಧ್ಯವೇ? ಈ ಸಂದರ್ಭದಲ್ಲಿ ನಮ್ಮನ್ನು ಕಾಡಬೇಕಾದ ಪ್ರಶ್ನೆ ಇದು.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News

ಜಗದಗಲ
ಜಗ ದಗಲ