ಗಾಂಧೀಜಿ ಮತ್ತು ಸ್ವಚ್ಛತೆ
ವಿದೇಶದ ನೆಲದಲ್ಲಿ 20 ವರ್ಷ ಇದ್ದ ಬಳಿಕ ತಮ್ಮ 46ನೆಯ ವಯಸ್ಸಿನಲ್ಲಿ ಗಾಂಧೀಜಿ ಅಂತಿಮವಾಗಿ ತಮ್ಮ ತಂಡದೊಂದಿಗೆ ಭಾರತಕ್ಕೆ ಹಿಂದಿರುಗಿದರು. ಅದೇ ವರ್ಷ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಗಾಂಧೀಜಿ ಹಾಗೂ ಅವರ ತಂಡದ ಹುಡುಗರು ಭಂಗಿಗಳಾಗಿ (ಸ್ವಚ್ಛತಾ ಕಾರ್ಮಿಕರಾಗಿ) ಕೆಲಸ ಮಾಡಿದರು. ಅದೇ ವರ್ಷ ಗಾಂಧೀಜಿ ಪೂನಾದಲ್ಲಿರುವ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸಂಸ್ಥೆಯ ವಸತಿ ಸ್ಥಳಗಳಿಗೆ ಭೇಟಿ ನೀಡಿದರು. ಗಾಂಧೀಜಿ ಅಲ್ಲಿಯ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವುದು ಒಂದು ದಿನ ಬೆಳಗ್ಗೆ ಅಲ್ಲಿಯ ನಿವಾಸಿಗಳ ಕಣ್ಣಿಗೆ ಬಿತ್ತು. ಅವರು ಇದನ್ನು ಇಷ್ಟಪಡಲಿಲ್ಲ. ಆದರೆ ಈ ರೀತಿಯ ಕಾರ್ಯಗಳು ಸ್ವರಾಜ್ಯಕ್ಕೆ ಹೇಳಿಸಿದಂತಿವೆ ಎಂಬುದು ಗಾಂಧೀಜಿಯ ವಿಶ್ವಾಸವಾಗಿತ್ತು. ಹಲವು ಬಾರಿ ಅವರು ದೇಶದಾದ್ಯಂತ ಸಂಚಾರ ಕೈಗೊಂಡರು. ಹೋದಲ್ಲೆಲ್ಲಾ ಅಸ್ವಸ್ಥಕರ ಪರಿಸ್ಥಿತಿ ಅವರ ಕಣ್ಣಿಗೆ ಬಿದ್ದಿತು. ಈ ದೇಶದಲ್ಲಿ ಕೆಲವೇ ಕೆಲವರು ಚಪ್ಪಲಿ, ಶೂಗಳನ್ನು ಧರಿಸುವ ಸ್ಥಿತಿಯಲ್ಲಿದ್ದರೂ ಕಾಲ್ನಡಿಗೆಯಲ್ಲಿ ಸಾಗುವ ಬಗ್ಗೆ ಇಲ್ಲಿ ಯೋಚಿಸಲೂ ಸಾಧ್ಯವಿಲ್ಲ. ಬಾಂಬೆಯಂತಹ ನಗರಗಳಲ್ಲೂ ಜನರು ಎಲ್ಲಿ ಮಹಡಿ ಮೇಲಿಂದ ತಮ್ಮ ಮೇಲೆ ಉಗುಳಿನ ಎಂಜಲು ಬೀಳುತ್ತದೆಯೋ ಎಂಬ ಹೆದರಿಕೆಯಿಂದಲೇ ಬೀದಿಗಳಲ್ಲಿ ನಡೆಯುವ ಸ್ಥಿತಿಯಿದೆ ಎಂದು ಗಾಂಧೀಜಿ ಹೇಳುತ್ತಿದ್ದರು. ರೈಲ್ವೆ ನಿಲ್ದಾಣ ಹಾಗೂ ಧರ್ಮಶಾಲೆ(ಧರ್ಮಛತ್ರ)ಗಳಲ್ಲಿನ ಸಾರ್ವಜನಿಕ ಶೌಚಾಲಯದಲ್ಲಿ ಹೊಲಸು ದುರ್ನಾತ ಸಹಿಸಲು ಅಸಾಧ್ಯವಾಗಿತ್ತು. ರೈಲ್ವೆ ಕಂಪಾರ್ಟ್‌ಮೆಂಟ್‌ಗಳನ್ನು ಕೊಳಕುಗೊಳಿಸುವ ಪ್ರಯಾಣಿಕರ ವರ್ತನೆ ಬಗ್ಗೆ ಗಾಂಧೀಜಿ ಮರುಗುತ್ತಿದ್ದರು.
ಹಳ್ಳಿಯ ಬಡವರು ಹಾಗೂ ಅವರ ಎತ್ತಿನ ಗಾಡಿಗಳು ಬಳಸುತ್ತಿದ್ದ ರಸ್ತೆಗಳಂತೂ ಅತ್ಯಂತ ಕಳಪೆ ಸ್ಥಿತಿಯಲ್ಲಿದ್ದವು. ಪವಿತ್ರ ಯಾತ್ರಾ ಸ್ಥಳಗಳಲ್ಲಿರುವ ಕೆರೆಗಳಲ್ಲಿ ಜನರು ಸ್ನಾನ ಮಾಡುವ ಮೊದಲು ಆ ಕೆರೆಯ ನೀರು ಎಷ್ಟೊಂದು ಮಲಿನವಾಗಿದೆ ಎಂಬುದರ ಬಗ್ಗೆ ಕಿಂಚಿತ್ತೂ ಗಮನ ನೀಡುತ್ತಿರಲಿಲ್ಲ. ಜೊತೆಗೆ, ಇವರೂ ನದಿ ದಂಡೆಯನ್ನು ಮಲಿನಗೊಳಿಸುತ್ತಿದ್ದರು. ಕಾಶಿ ವಿಶ್ವನಾಥ ದೇವಸ್ಥಾನದ ಅಮೃತಶಿಲೆಯ ನೆಲಹಾಸಿನ ಮೇಲೆ ನದಿಯಲ್ಲಿ ಬೆಳ್ಳಿ ನಾಣ್ಯ ಹೆಕ್ಕುವ ಧಾವಂತದಲ್ಲಿ ಮೈಗಂಟಿದ ಕೆಸರು ಮಣ್ಣು ಅಂಟಿಕೊಂಡಿರುವುದನ್ನು ಕಂಡಾಗ ಗಾಂಧೀಜಿಗೆ ಬಹಳ ನೋವಾಗುತ್ತಿತ್ತು. ದೇವರ ದರ್ಶನ ಭಾಗ್ಯಕ್ಕಾಗಿ ಬಹುತೇಕ ಸಂದರ್ಭ ಭಕ್ತರು ಇಕ್ಕಟ್ಟಾದ, ಜಾರುವ ಓಣಿಗಳಲ್ಲಿ ಯಾಕೆ ಸಾಗಬೇಕು ಎಂಬ ಬಗ್ಗೆ ಯೋಚಿಸಿ ಆಶ್ಚರ್ಯಪಡುತ್ತಿದ್ದರು. ನಗರಪಾಲಿಕೆಯವರೊಂದಿಗೆ ಮಾತನಾಡುತ್ತಿದ್ದಾಗ ಗಾಂಧೀಜಿ ಹೇಳುತ್ತಿದ್ದುದು ಇಷ್ಟೇ- ‘‘ವಿಸ್ತಾರವಾದ ರಸ್ತೆಗಳು, ಭವ್ಯ ಬೀದಿ ದೀಪಗಳು, ಸೊಗಸಾದ ಉದ್ಯಾನಗಳು, ಪಾರ್ಕ್‌ಗಳಿಗಾಗಿ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಮಾದರಿ ಶೌಚಕೂಪಗಳನ್ನು ಹೊಂದಿಲ್ಲದ, ದಿನದ 24 ಗಂಟೆಯೂ ಬೀದಿಗಳು ಹಾಗೂ ಓಣಿಗಳನ್ನು ಸ್ವಚ್ಛವಾಗಿರಿಸಿಕೊಳ್ಳದ ನಗರಪಾಲಿಕೆಗಳು ಅಸ್ತಿತ್ವದಲ್ಲಿ ಇರಲು ಅರ್ಹವಲ್ಲ. ಸ್ವಚ್ಛತಾ ಕಾರ್ಮಿಕರು ಯಾವ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ ಎಂಬ ಬಗ್ಗೆ ನೀವು ಎಂದಾದರೂ ಯೋಚನೆ ಮಾಡಿದ್ದೀರಾ ’’ ಎಂದು ಪ್ರಶ್ನಿಸುತ್ತಿದ್ದರು. ಮನೆಯ ಕೆಲಸಗಾರರ ವಾಸಸ್ಥಳವೂ ಮನೆ ಮಾಲಕರ ಬಂಗಲೆಯಂತೆಯೇ ಸ್ವಚ್ಛವಾಗಿರಬೇಕು ಎಂಬ ಬಗ್ಗೆ ಗಾಂಧೀಜಿ ಯಾವಾಗಲೂ ಒತ್ತು ನೀಡುತ್ತಿದ್ದರು. ಇಂಗ್ಲಿಷರಂತೆ ಬಾಹ್ಯ ನೈರ್ಮಲ್ಯದ ಕಲೆಯನ್ನು ನಾವು ಕಲಿತಿಲ್ಲ ಎಂದು ಹೇಳುವುದರಿಂದ ಯಾವುದೇ ಲಾಭವಾಗದು. ವೈಸ್‌ರಾಯ್ ಮನೆಯಲ್ಲಿ ನಿಯೋಜಿತವಾಗಿರುವ ಮನೆಗೆಲಸದವರು ಮತ್ತು ಸ್ವಚ್ಛತಾ ಕಾರ್ಮಿಕರ ವಸತಿ ಗೃಹ ಅತ್ಯಂತ ಕೊಳಕಾಗಿರುವುದನ್ನು ಕಂಡಾಗ ನನಗೆ ಯಾತನೆಯಾಗುತ್ತದೆ.
ನಮ್ಮ ನೂತನ ಸರಕಾರದ ಸಚಿವರ ಈ ರೀತಿಯ ವ್ಯವಹಾರವನ್ನು ಸಹಿಸಲಾಗದು. ಈ ಸಚಿವರೂ ಕೂಡಾ ಅದೇ ಸುಸ್ಥಿತಿಯಲ್ಲಿರುವ ಬಂಗಲೆಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಆಗ ತಮ್ಮ ಕೆಲಸದವರ ವಾಸಸ್ಥಾನವೂ ತಮ್ಮ ಬಂಗಲೆಯಂತೆಯೇ ಸ್ವಚ್ಛವಾಗಿರುವ ಬಗ್ಗೆ ಅವರು ಗಮನ ಹರಿಸಬೇಕು. ತಮ್ಮ ಸಿಬ್ಬಂದಿಯ ಪತ್ನಿ ಮತ್ತು ಮಕ್ಕಳ ಸ್ವಚ್ಛತೆಯ ಬಗ್ಗೆಯೂ ಗಮನ ನೀಡಬೇಕು. ತಮ್ಮ ಶೌಚಾಲಯಗಳನ್ನು ಸ್ವಚ್ಛ ಮಾಡುವುದರಲ್ಲಿ ಜವಾಹರಲಾಲ್ ಮತ್ತು ಸರ್ದಾರ್ ಪಟೇಲ್‌ಗೆ ಯಾವುದೇ ಆಕ್ಷೇಪವಿಲ್ಲ. ತಮ್ಮ ಸಹಾಯಕರ ವಸತಿ ಸ್ಥಳ ಸ್ವಚ್ಛವಾಗಿದ್ದರೂ ಇವರು ಖಂಡಿತಾ ಆಕ್ಷೇಪ ಸೂಚಿಸಲಾರರು. ಒಂದು ಕಾಲದಲ್ಲಿ ಜವಾಹರಲಾಲ್ ಮನೆಯಲ್ಲಿ ಕೆಲಸಕ್ಕಿದ್ದ ಹರಿಜನ ವ್ಯಕ್ತಿ ಈಗ ಉತ್ತರಪ್ರದೇಶ ವಿಧಾನಸಭೆಯ ಸದಸ್ಯನಾಗಿದ್ದಾನೆ. ಸಚಿವರ ಸಿಬ್ಬಂದಿ ವರ್ಗದವರ ವಸತಿ ಗೃಹಗಳನ್ನು ತಮ್ಮ ಸ್ವಂತ ಮನೆಯಂತೆ ಸ್ವಚ್ಛವಾಗಿ ಮತ್ತು ಓರಣವಾಗಿ ಇಟ್ಟುಕೊಂಡಾಗ ಮಾತ್ರ ನನಗೆ ತೃಪ್ತಿಯಾಗುತ್ತದೆ. (1946ರ ಸೆಪ್ಟಂಬರ್ 3ರಂದು ಹೊಸದಿಲ್ಲಿಯಲ್ಲಿ ಪ್ರಾರ್ಥನಾ ಸಭೆಯಲ್ಲಿ ಮಾಡಿದ ಭಾಷಣ).