ಸೊಳ್ಳೆಗಳ ರಾಜ್ಯ

Update: 2019-06-08 18:23 GMT

ವೀರನಗೆರೆ ಎಂಬ ಊರಿನಲ್ಲಿ ವಿವೇಕನೆಂಬ ಹುಡುಗನಿದ್ದ. ಅವನು ತನ್ನ ಹೆಸರಿಗೆ ತಕ್ಕಂತೆ ಬಹಳ ಬುದ್ಧಿವಂತನೂ, ವಿವೇಕವಂತನೂ ಆಗಿದ್ದ. ಚೋಟುದ್ದದ ಹುಡುಗನಾದರೂ ಮಾರುದ್ದದ ಜ್ಞಾನ ಅವನಲ್ಲಿತ್ತು. ವೀರನಗೆರೆ ಊರಿಗೆ ಸ್ವಲ್ಪವೇ ಸ್ವಲ್ಪ ದೂರದ ಅಂತರದಲ್ಲಿ ಶೂರನಗೆರೆ ಎಂಬ ಮತ್ತೊಂದು ಊರಿತ್ತು. ಪ್ರತಿದಿನ ಹುಡುಗ ವಿವೇಕ ಒಂದಲ್ಲ ಒಂದು ಕೆಲಸದ ನಿಮಿತ್ತ ಕಾಲು ನಡಿಗೆಯಲ್ಲೇ ಶೂರನಗೆರೆ ಊರಿಗೆ ಹೋಗಿ ಬರುತ್ತಿದ್ದ.

 ಹೀಗೆಯೇ ಒಮ್ಮೆ ಹುಡುಗ ವಿವೇಕ, ಶೂರನಗೆರೆ ಊರಿಗೆ ಹೋಗಿ ವಾಪಸು ತನ್ನೂರು ವೀರನಗೆರೆಗೆ ಬರುತ್ತಿದ್ದ. ಆಗ ದಾರಿ ಮಧ್ಯೆ ಕುರುಚಲು ಗಿಡಗಳ ನಡುವೆ ಸೊಳ್ಳೆಗಳ ಗುಂಪೊಂದು ಗುಂಯ್ ಗುಡುತ್ತಾ ಏನೋ ಮಾತನಾಡಿಕೊಳ್ಳುತ್ತಿದ್ದವು. ಇವನು ಒಂದು ಕ್ಷಣ ಅಲ್ಲಿಯೇ ನಿಂತುಕೊಂಡು ಕುತೂಹಲದಿಂದ ಆ ಸೊಳ್ಳೆಗಳನ್ನು ನೋಡುತ್ತಾ ಅವುಗಳ ಮಾತುಗಳನ್ನು ಆಲಿಸಿದ. ಆ ಸೊಳ್ಳೆಗಳ ಗುಂಪಿಗೆ ರಾಜನಾಗಿ ಅಲ್ಲಿ ದರ್ಬಾರ್ ನಡೆಸುತ್ತಿದ್ದ ಡೆಂಗ್ ಸೊಳ್ಳೆಯೊಂದು ಇತರೇ ಎಲ್ಲಾ ಸೊಳ್ಳೆಗಳಿಗೂ ಜೋರಾಗಿ ಹೇಳತೊಡಗಿತು.

‘‘ನಮ್ಮ ಕುಲಬಾಂಧವ ಸೊಳ್ಳೆಗಳೇ, ಎಲ್ಲರೂ ಕಿವಿಗೊಟ್ಟು ಕೇಳಿರಿ. ಈ ಶೂರನಗೆರೆ ಊರಿನ ಮನುಷ್ಯರು ಬಹಳ ಬುದ್ಧಿವಂತರಾಗಿದ್ದಾರೆ. ಹಾಗಾಗಿ ನಮ್ಮ ಸಂತತಿಯನ್ನು ನಾಶ ಮಾಡಲು ಇಡೀ ಊರನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಹಾಗೆಯೇ ನಮ್ಮನ್ನು ತಕ್ಷಣ ಕೊಲ್ಲಲು ವಿಷಕಾರಿ ಔಷಧಿಯನ್ನು ಸಿಂಪಡಿಸುತ್ತಿದ್ದಾರೆ. ಈ ಊರು ಯಾವುದೇ ಅನೈರ್ಮಲ್ಯವಿಲ್ಲದೆ ಸಂಪೂರ್ಣ ಸ್ವಚ್ಛಗೊಂಡು ನಮಗೆ ಒಂದು ಚೂರೂ ವಾಸಸ್ಥಳವಿಲ್ಲದಂತೆ ಮಾಡುತ್ತಿದೆ. ನಮಗಿನ್ನು ಈ ಶೂರನಗೆರೆ ಊರಿನಲ್ಲಿ ಉಳಿಗಾಲವಿಲ್ಲ. ಆದ್ದರಿಂದ ನಾವು ಇನ್ನು ಒಂಡೆರಡು ದಿನಗಳಲ್ಲಿ ಇಲ್ಲೇ ಸಮೀಪದಲ್ಲಿರುವ ವೀರನಗೆರೆ ಊರಿಗೆ ಹೋಗೋಣ. ಅಲ್ಲಿ ನಾವು ವಾಸಮಾಡಲು ಮತ್ತು ನಮ್ಮ ಸಂತಾನೋತ್ಪತ್ತಿ ಮಾಡಲು ಯೋಗ್ಯವಾಗಿರುವ ಎಲ್ಲಾ ರೀತಿಯ ಕೊಚ್ಚೆಗುಂಡಿಗಳು, ಕೊಳಕು ಜಾಗಗಳು, ಮಲಿನ ರಸ್ತೆಗಳು, ಅಶುದ್ಧತೆಯ ತಾಣಗಳು ಹೇರಳವಾಗಿವೆಯಂತೆ...’’ ಎಂದು ಡೆಂಗ್ ಸೊಳ್ಳೆ ಭಾಷಣ ಮಾಡಿತು.

ಇದನ್ನು ಕೇಳಿ ಅಲ್ಲಿದ್ದ ಇಡೀ ಸೊಳ್ಳೆಗಳ ಸಮೂಹ ಇನ್ನಷ್ಟು ಗಟ್ಟಿಯಾಗಿ ಗುಂಯ್ ಗುಡುವುದರ ಮೂಲಕ ತಮ್ಮ ರಾಜ ಡೆಂಗ್ ಸೊಳ್ಳೆಯ ನಿರ್ಧಾರವನ್ನು ಸ್ವಾಗತಿಸಿದವು. ಶುದ್ಧಗೊಂಡಿರುವ ಶೂರನಗೆರೆ ಊರನ್ನು ತೊರೆದು ಅಶುದ್ಧತೆಯನ್ನು ತುಂಬಿಕೊಂಡಿರುವ ವೀರನಗೆರೆ ಊರಿಗೆ ಹೊರಡಲು ತಮ್ಮ ರಾಜ ಡೆಂಗ್ ಸೊಳ್ಳೆಯ ಅಣತಿಯಂತೆ ಎಲ್ಲಾ ಸೊಳ್ಳೆಗಳೂ ಸಿದ್ಧವಾದವು. ಶೂರನಗೆರೆಯಲ್ಲಿದ್ದ ಸೊಳ್ಳೆಗಳ ರಾಜ್ಯ ವೀರನಗೆರೆಗೆ ಸ್ಥಳಾಂತರಗೊಳ್ಳಲು ದಿನಗಣನೆ ಶುರುವಾಯಿತು. ತಮಗೆ ಅನುಕೂಲಕರವಾದ ಅಶುಚಿತ್ವ ವೀರನಗೆರೆಯಲ್ಲಿರುವುದನ್ನು ನೆನೆದು ಸಂತಸದಿಂದ ಸೊಳ್ಳೆಗಳೆಲ್ಲಾ ಹಾಡತೊಡಗಿದವು.

ಕಣ್ಣಾರೆ ಆ ಸೊಳ್ಳೆಗಳನ್ನು ಕಂಡು, ಕಿವಿಯಾರೆ ಅವುಗಳ ಮಾತನ್ನು ಕೇಳಿದ ಹುಡುಗ ವಿವೇಕನಿಗೆ ಒಂದು ಕ್ಷಣ ಗಾಬರಿಯಾಯಿತು. ಇವುಗಳೆಲ್ಲಾ ತನ್ನೂರು ವೀರನಗೆರೆಗೆ ಬಂದು ಬಿಟ್ಟರೆ ಇಡೀ ಊರೇ ರೋಗಗ್ರಸ್ತವಾಗಿ ಜನರೆಲ್ಲಾ ಸಾಯುತ್ತಾರೆಂಬುದನ್ನು ನೆನಸಿಕೊಂಡೇ ಇವನು ಭಯಗೊಂಡನು. ಏನಾದರೂ ಮಾಡಿ ತನ್ನೂರನ್ನು ಈ ಸೊಳ್ಳೆಗಳಿಂದ ರಕ್ಷಿಸಬೇಕೆಂದು ಓಡೋಡಿ ಬಂದವನೇ ಊರಿನ ಮುಖಂಡರಿಗೆ ವಿಷಯ ತಿಳಿಸಿದ. ತಕ್ಷಣವೇ ತಮ್ಮೂರನ್ನು ಸ್ವಚ್ಛಗೊಳಿಸುವಂತೆ ವಿನಂತಿಸಿಕೊಂಡ. ಆದರೆ ಇವನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ‘‘ಏನೋ ಹುಡುಗ ಹೇಳ್ತಾನೆ, ಅವನ ಮಾತೂ ಒಂದು ಮಾತು ಅಂತ ಕೇಳೋಕ್ಕಾಗುತ್ತಾ...’’ ಅಂತ ನಿರ್ಲಕ್ಷ್ಯಿಸಿದರು. ಊರಿಗೆ ಸೊಳ್ಳೆಗಳು ಬರದಂತೆ ತಡೆಯಲು ಅವರಾರೂ ಕ್ರಮ ತೆಗೆದುಕೊಳ್ಳದೆ ಸುಮ್ಮನಾಗಿ ಬಿಟ್ಟರು.

ಒಂದೆರೆಡು ದಿನಗಳು ಕಳೆದವು ಶುಚಿತ್ವದ ಶೂರನಗೆರೆ ಊರನ್ನು ತೊರೆದು ತಮ್ಮ ರಾಜ್ಯದ ಸಮೇತವಾಗಿ ಅಲ್ಲಿದ್ದ ಸೊಳ್ಳೆಗಳೆಲ್ಲಾ ತಮ್ಮ ರಾಜ ಡೆಂಗ್ ಸೊಳ್ಳೆಯ ನೇತೃತ್ವದಲ್ಲಿ ಅಶುಚಿತ್ವದ ವೀರನಗೆರೆ ಊರಿಗೆ ಬಂದು ನೆಲಸಿದವು. ಕೆಲವೇ ದಿನಗಳಲ್ಲಿ ಇಲ್ಲಿದ್ದ ಕೊಳಚೆಯಲ್ಲಿ ಒಂದಕ್ಕೆ ನೂರು ಪಟ್ಟು ಸೊಳ್ಳೆಗಳನ್ನು ಇವು ಉತ್ಪತ್ತಿಮಾಡಿ ಇಡೀ ಊರನ್ನು ಮುತ್ತಿಕೊಂಡವು. ಇವುಗಳ ಕಡಿತದಿಂದ ಡೆಂಗ್ ಜ್ವರ, ಮಲೇರಿಯಾ, ಚಿಕುನ್‌ಗುನ್ಯಾ ಮುಂತಾದ ಮಾರಣಾಂತಿಕ ರೋಗಗಳು ಇಲ್ಲಿನ ಜನರಿಗೆ ಅಂಟಿಕೊಂಡಿತು. ಇಡೀ ವೀರನಗೆರೆ ಊರು ರೋಗಮಯವಾಗಿ ಜನರೆಲ್ಲಾ ಡೆಂಗ್ಯೂ ಜ್ವರದಿಂದ ನರಳ ತೊಡಗಿದರು. ಬಹಳಷ್ಟು ಮಂದಿ ಸತ್ತೂ ಹೋದರು. ಈಗ ಊರಿನ ಮುಖಂಡರಿಗೆ ಜ್ಞಾನೋದಯವಾಯಿತು. ಚೋಟುದ್ದದ ಹುಡುಗನೆಂದು ನಮ್ಮೂರ ಹುಡುಗ ವಿವೇಕನ ಮಾತನ್ನು ನಾವು ಅಲಕ್ಷ್ಯ ಮಾಡಬಾರದಿತ್ತೆಂದು ಪಶ್ಚಾತ್ತಾಪ ಪಟ್ಟರು. ಆದರೆ ಕಾಲ ಮಿಂಚಿ ಹೋಗಿತ್ತು. ಎಲ್ಲರೂ ತಲೆ ಮೇಲೆ ಕೈಹೊತ್ತು ಏನು ಮಾಡುವುದೆಂದು ತೋಚದೆ ಚಿಂತಿಸುತ್ತಾ ಕುಳಿತರು.

ಅಷ್ಟರಲ್ಲಿ ಹುಡುಗ ವಿವೇಕ ಅಲ್ಲಿಗೆ ಬಂದ. ‘‘ಈ ಸೊಳ್ಳೆಗಳಿಂದ ಈಗ ಆಗಿರುವ ಅನಾಹುತ ಸಾಕು. ಇನ್ನು ಮುಂದಕ್ಕೆ ಹೆಚ್ಚಿನ ಅನಾಹುತವಾಗದಂತೆ ನಾವು ಈ ಸೊಳ್ಳೆಗಳ ರಾಜ್ಯವನ್ನು ನಾಶ ಮಾಡಬೇಕು. ಏಳಿ ಎದ್ದೇಳಿ, ಸೊಳ್ಳೆಗಳು ನಾಶವಾಗುವತನಕ ಸುಮ್ಮನಿರದಿರಿ. ಬನ್ನಿ ನನ್ನ ಜೊತೆ...’’ ಎಂದು ಊರಿನ ಜನರನ್ನೆಲ್ಲಾ ಜಾಗೃತಿಗೊಳಿಸಿದ. ಇವನು ಹೇಳಿದಂತೆ ಎಲ್ಲರೂ ಸಮರೋಪಾದಿಯಲ್ಲಿ ಇಡೀ ಊರನ್ನು ಸ್ವಚ್ಛಗೊಳಿಸಿದರು. ಸೊಳ್ಳೆ ನಾಶಕ ಔಷಧಿಯನ್ನು ತಂದು ಊರಿಗೆಲ್ಲಾ ಸಿಂಪಡಿಸಿದರು. ಸೊಳ್ಳೆಗಳೆಲ್ಲಾ ಇವರ ಸ್ವಚ್ಛತೆಗೆ ಹೆದರಿ ವೀರನಗೆರೆ ಊರನ್ನೇ ಖಾಲಿ ಮಾಡಿದವು. ಹೀಗೆ ಸೊಳ್ಳೆಗಳ ರಾಜ್ಯವನ್ನು ಶುಚಿತ್ವದ ಅಸ್ತ್ರದಿಂದ ಊರಿನವರಿಂದಲೇ ಹುಡುಗ ವಿವೇಕ ತನ್ನ ವಿವೇಕತನದಿಂದ ನಾಶ ಮಾಡಿಸಿದ.

Writer - ಬನ್ನೂರು ಕೆ. ರಾಜು

contributor

Editor - ಬನ್ನೂರು ಕೆ. ರಾಜು

contributor

Similar News