ರಾಷ್ಟ್ರೀಯ ಶೈಕ್ಷಣಿಕ ಸಂರಕ್ಷಣಾಲಯದಲ್ಲಿ ಡಿಗ್ರಿಗಳಿನ್ನು ಸುರಕ್ಷಿತ!

Update: 2019-06-12 18:33 GMT

ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಬಯಸುವ, ನೌಕರಿಗೆ ಅರ್ಜಿಹಾಕುವ, ಇಮಿಗ್ರೇಶನ್ ಅಥವಾ ವಿದೇಶದ ನೌಕರಿಗಳಿಗೆ ಸಂಬಂಧಿಸಿ ವೀಸಾಪಡೆಯಬಯಸುವ ವಿದ್ಯಾರ್ಥಿಗಳ ಪರಿಶ್ರಮ ಪರದಾಟ ಪೇಚಾಟವನ್ನು ಕಡಿಮೆಮಾಡುವ ನಿಟ್ಟಿನಲ್ಲಿ ಎನ್‌ಎಡಿಯ ಸ್ಥಾಪನೆ, ಸೃಷ್ಟಿ ಬಹಳ ದೊಡ್ಡ ಒಂದು ಬೆಳವಣಿಗೆ.

ನ್ಯಾಶನಲ್ ಅಕಾಡಮಿಕ್ ಡಿಪಾಸಿಟರಿ(ಎನ್‌ಎಡಿ) ಅಥವಾ ರಾಷ್ಟ್ರೀಯ ಶೈಕ್ಷಣಿಕ ಸಂರಕ್ಷಣಾಲಯವು ಎಲ್ಲ ಡಿಗ್ರಿ, ಡಿಪ್ಲೊಮಾ, ಶೈಕ್ಷಣಿಕ ಸಂಸ್ಥೆಗಳು ನೀಡಿರುವ ಪ್ರಮಾಣ ಪತ್ರ (ಸರ್ಟಿಫಿಕೆಟ್)ಗಳನ್ನು ಸಂಗ್ರಹಿಸಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗದಾತರಿಗೆ ಎಲ್ಲಿಂದ ಯಾವಾಗಬೇಕಾದರೂ ಡೌನ್‌ಲೋಡ್ ಮಾಡಿ ಪರೀಕ್ಷಿಸಲು ಅವಕಾಶ ಮಾಡಿಕೊಡುತ್ತದೆ.
ಡಿಗ್ರಿ, ಡಿಪ್ಲೊಮಾ ಸರ್ಟಿಫಿಕೆಟ್‌ಗಳು ವ್ಯಕ್ತಿಯೊಬ್ಬ ಪಡೆದಿರುವ ಶೈಕ್ಷಣಿಕ ಅರ್ಹತೆಗಳು ಉದ್ಯಮಗಳಿಗೆ ಹಾಗೂ ಇತರ ಸಂಸ್ಥೆಗಳಿಗೆ ಆತನನ್ನು/ಆಕೆಯನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲು ಬೇಕಾದ ಅತ್ಯಂತ ಮುಖ್ಯ ದಾಖಲೆಗಳು. ಸುಮಾರು ಎರಡು ಶತಮಾನಗಳವರೆಗೆ ವಿದ್ಯಾರ್ಥಿಗಳು ಹಾಗೂ ಅವರಿಗೆ ನೌಕರಿ ನೀಡುವವರು ಸರ್ಟಿಫಿಕೆಟ್‌ಗಳ ಮೂಲ ಪ್ರತಿ (ಒರಿಜಿನಲ್)ಗಳನ್ನು ಅಥವಾ ಅಧಿಕೃತ ಅಧಿಕಾರಿಗಳು ಪ್ರಮಾಣಿಕರಿಸಿದ ಅವುಗಳನ್ನು ಟೈಪ್ ಮಾಡಲಾದ ಪ್ರತಿಗಳನ್ನು ಅವಲಂಬಿಸುತ್ತ ಬಂದಿದ್ದಾರೆ. ನಾಲ್ಕು ದಶಕಗಳ ಹಿಂದೆ ಬಂದ ಫೋಟೊಕಾಪಿ/ಝೆರಾಕ್ಸ್ ವ್ಯವಸ್ಥೆಯು ಸಮಸ್ಯೆಯನ್ನು ಸಾಕಷ್ಟು ಹಗುರ ಗೊಳಿಸಿತಾದರೂ ಮೂಲಪ್ರತಿಗಳು ಕಳೆದು ಹೋಗುವ, ಹಾನಿಗೊಳಗಾಗುವ ಭಯ ಅವುಗಳನ್ನು ಹೊಂದಿರುವವರನ್ನು ಸದಾ ಕಾಡುತ್ತಲೇ ಇರುತ್ತದೆ. ಅವುಗಳು ಕಳವಾಗುವುದು, ನಾಶಕ್ಕೊಳಗಾಗುವುದು, ಕಳೆದುಹೋಗುವುದು, ಅವರಿಗೊಂದು ದುಸ್ವಪ್ನ. ಅವುಗಳ ಸಾಗಣೆಯಲ್ಲಿ, ಅಂಚೆಮೂಲಕ ಕಳುಹಿಸುವುದರಲ್ಲೂ ಅಪಾಯಗಳಿಲ್ಲದಿಲ್ಲ. ಇಷ್ಟೇ ಅಲ್ಲದೆ, ಹಳೆಯ ಕಾಗದ-ಆಧಾರಿತ ಪ್ರಮಾಣ ಪತ್ರಗಳಿಗೆ ಗೆದ್ದಲು, ಬೆಂಕಿ ಇತ್ಯಾದಿಯ ಭಯವೂ ಇರುತ್ತದೆ.
ಕೇಂದ್ರ ಸರಕಾರ ಸ್ಥಾಪಿಸಿರುವ ಅಂತರ್ಜಾಲ ಆಧಾರಿತವಾದ ಒಂದು ಡಿಪಾಸಿಟರಿ ಇಂತಹ ಸಮಸ್ಯೆಗಳಿಗೆಲ್ಲ ಪರಿಹಾರವಾಗಬಲ್ಲದು. ವಿಶ್ವವಿದ್ಯಾನಿಲಯ ಅನುದಾನ ಆಯೋಗವು (ಯುಜಿಸಿ) ಇತ್ತೀಚೆಗೆ ಒಂದು ರಾಷ್ಟ್ರೀಯ ಅಕಾಡಮಿಕ್ ಡಿಪಾಸಿಟರಿಯನ್ನು ಸ್ಥಾಪಿಸಿದೆ. ಇದರಲ್ಲಿ ಎಲ್ಲ ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮತ್ತು, ಪ್ರಶಸ್ತಿ ನೀಡುವ ಸಂಘ ಸಂಸ್ಥೆಗಳು ಈ ದಾಖಲೆಗಳ ಸಾಫ್ಟ್‌ಕಾಪಿಗಳನ್ನು ಡಿಪಾಸಿಟ್‌ಮಾಡಿ ಇಡಬಹುದು. ಇವುಗಳನ್ನು ವಿಶ್ವದ ಯಾವುದೇ ಮೂಲೆಯಿಂದ ಯಾರು ಬೇಕಾದರೂ ಯಾವಾಗ ಬೇಕಾದರೂ ಅಂತರ್ಜಾಲದಲ್ಲಿ ಪಡೆದು ಪರೀಕ್ಷಿಸಬಹುದು.
3.65ಕೋಟಿ ಸ್ಕೂಲ್ ಸರ್ಟಿಫಿಕೆಟ್‌ಗಳು ಈ ಡಿಪಾಸಿಟರಿ ವ್ಯವಸ್ಥೆ ಲಕ್ಷಗಟ್ಟಲೆ ವಿದ್ಯಾರ್ಥಿಗಳಿಗೆ ಒಂದು ವರದಾನವಾಗಲಿದೆ. ಅವರಿಗೆ ಶ್ರಮ ಮತ್ತು ಹಣದ ಉಳಿತಾಯವಾಗಲಿದೆ.
ಭಾರತದಲ್ಲಿ ಹತ್ತನೇ ತರಗತಿಯ ಮಟ್ಟದಲ್ಲಿ ಶಾಲಾ ಶಿಕ್ಷಣವನ್ನು ವೌಲ್ಯಮಾಪನ ಮಾಡಲು 55 ಮಂಡಳಿಗಳಿವೆ, 359 ರಾಜ್ಯ (ಸ್ಟೇಟ್) ವಿಶ್ವವಿದ್ಯಾನಿಲಯಗಳಿವೆ; 123 ಡೀಮ್ಡ್ ವಿವಿಗಳು, 47 ಕೇಂದ್ರೀಯ ವಿವಿಗಳು ಮತ್ತು 260 ಖಾಸಗಿ ವಿವಿಗಳು ಇವೆ. ಇವಲ್ಲದೆ ಐಐಟಿ, ಐಐಎಂ, ಎಸ್‌ಐಟಿ, ಐಐಎಸ್‌ಇಆರ್‌ನಂತಹ ಸುಮಾರು 107 ‘ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್’ಗಳಿವೆ; ಇತರ ಕೆಲವು ಕೇಂದ್ರ ಸರಕಾರ ಪ್ರಾಯೋಜಿತ ಸಂಸ್ಥೆಗಳೂ ಇವೆ. ಹಲವಾರು ಶಾಲಾ ಪರೀಕ್ಷಾ ಮಂಡಳಿಗಳೇ ವಿವಿಧ ರೀತಿಯ ಸುಮಾರು 3.65ಕೋಟಿ ದಾಖಲೆಗಳನ್ನು ನೀಡುತ್ತವೆ.


ಎನ್‌ಎಡಿ ಎಂಬುದು ಒಂದು ಡಿಜಿಟಲ್ ಉಗ್ರಾಣ. ಇದರಿಂದ ದಾಖಲೆಗಳನ್ನು ಪಡೆದು ಪರೀಕ್ಷಿಸಿಸುವುದು ಸುಲಭವಷ್ಟೇ ಅಲ್ಲ; ಅದು ಪಾರದರ್ಶಕ ಕೂಡ. ಇದರ ಮೂಲಕ ದಾಖಲೆಗಳ ಆನ್ ಲೈನ್ ಲಾಗಿಂಗ್, ಪರೀಕ್ಷೆ ಮತ್ತು ಸರ್ಟಿಫಿಕೆಟ್‌ಗಳ ದೃಢೀಕರಣ, ಸಾಚಾತನ (ಅಥೆಂಟಿಕೇಶನ್) ಸುಲಭವಾಗುತ್ತದೆ. ಇದು ಸುಳ್ಳು ಪ್ರಮಾಣ ಪತ್ರ ನೀಡಿಕೆಯ (ಫೋರ್ಜರಿಯ) ಅಪಾಯವನ್ನು ದೂರಮಾಡುತ್ತದೆ.
ಮಾನವ ಸಂಪನ್ಮೂಲ ಸಚಿವಾಲಯವು 2016ರ ಅಕ್ಟೋಬರ್‌ನಲ್ಲಿ ತೆಗೆದುಕೊಂಡ ನಿರ್ಧಾರದಂತೆ ಎನ್‌ಎಡಿಯನ್ನು ಆರಂಭಿಸಲಾಗಿದೆ. ಸಂಬಂಧಿತ ವಿದ್ಯಾರ್ಥಿಯ ಅನುಮತಿ ಪಡೆದು ಉದ್ಯೋಗದಾತರು ಮತ್ತು ಇತರರು ಆತನ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪರೀಕ್ಷಿಸಬಹುದಾಗಿದೆ. ಇಷ್ಟೆಲ್ಲ ಸೌಕರ್ಯಗಳನ್ನು ನೀಡುತ್ತಲೇ ಅದು ದತ್ತಾಂಶಗಳ ಗೌಪ್ಯತೆಯನ್ನು ಕಾಪಾಡುತ್ತದೆ.
ಪರಿಶೀಲನೆ
ಎನ್‌ಎಡಿಯಲ್ಲಿ ಎರಡು ರೀತಿಯ ಡಿಜಿಟಲ್ ಡಿಪಾಸಿಟರ್‌ಗಳಿರುತ್ತವೆ: ಸಿಡಿಎಸ್‌ಎಲ್ ವೆಂಚರ್ಸ್‌ ಲಿಮಿಟೆಡ್ (ಸಿವಿಎಲ್) ಮತ್ತು ಎನ್‌ಎಸ್‌ಡಿಎಲ್ ಡಾಟಾಬೇಸ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ (ಎನ್‌ಡಿಎಮ್‌ಎಲ್). ಈ ಡಿಜಿಟಲ್ ಡಿಪಾಸಿಟರಿಗಳು ಹಾರ್ಡ್ ವೇರ್, ನೆಟ್‌ವರ್ಕ್ ಸವಲತ್ತುಗಳನ್ನು ಮತ್ತು ಎನ್‌ಎಡಿಯ ಸುಗಮ ಕಾರ್ಯನಿರ್ವಹಣೆಗೆ ಬೇಕಾದ ನಿಗದಿತ ಗುಣಮಟ್ಟದ ಸಾಫ್ಟ್‌ವೇರನ್ನು ಒದಗಿಸುತ್ತವೆ. ಎಲ್ಲ ಕೇಂದ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳ, ಮಂಡಳಿಗಳ ಹಾಗೂ ರಾಷ್ಟ್ರೀಯ ಮಹತ್ವದ ಸಂಸ್ಥೆಗಳ ಪರವಾಗಿ ಸಿವಿಎಲ್ ಮತ್ತು ಎನ್‌ಡಿಎಂಎಲ್‌ಗಳ ಜತೆ ಯುಜಿಸಿ ಒಂದು ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳುತ್ತದೆ. ಇಷ್ಟೇ ಅಲ್ಲದೆ ಶಿಕ್ಷಣ ಸಂಸ್ಥೆಗಳಿಗೆ, ಎಲ್ಲ ಸರಕಾರಿ ಅಂಗಸಂಸ್ಥೆಗಳಿಗೆ, ಬ್ಯಾಂಕ್‌ಗಳಿಗೆ ಮತ್ತು ಉದ್ಯೋಗದಾತ ಸಂಸ್ಥೆಗಳಿಗೆ, ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲು ಅವಕಾಶ ಮಾಡಿಕೊಡಲಾಗುವುದು.
ಎನ್‌ಎಡಿಯು ಎಲ್ಲ ಶಿಕ್ಷಣ ಸಂಸ್ಥೆಗಳನ್ನು ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯನ್ನಾಧರಿಸಿ ಪ್ರತಿಯೊಬ್ಬ ವಿದ್ಯಾರ್ಥಿಯ ಮಾಹಿತಿಯನ್ನು ತನ್ನಲ್ಲಿ ನೋಂದಾಯಿಸಿಕೊಳ್ಳುತ್ತದೆ. ಶೈಕ್ಷಣಿಕ ಸಂಸ್ಥೆಗಳು ನೀಡುವ ಪ್ರಶಸ್ತಿಗಳನ್ನು ಅಪ್‌ಲೋಡ್ ಮಾಡಲು ಮತ್ತು ಅವುಗಳನ್ನು ವಿದ್ಯಾರ್ಥಿಗಳ ಎನ್‌ಎಡಿ ಖಾತೆಗಳಿಗೆ ಲಿಂಕ್ ಮಾಡಲು ಅನುವು ಮಾಡಿಕೊಡುತ್ತದೆ. ಅಪ್‌ಲೋಡ್ ಮಾಡಿದ ದಾಖಲೆಗಳನ್ನು ಡೌನ್‌ಲೋಡ್ ಮಾಡಿ ವಿದ್ಯಾರ್ಥಿಗಳು ಅವುಗಳ ಪ್ರಮಾಣೀಕೃತ ಪ್ರಿಂಟ್‌ಗಳನ್ನು ಪಡೆಯಬಹುದು. ಈ ದಾಖಲೆಗಳನ್ನು ಪರಿಶೀಲಿಸಬಯಸುವ ಉದ್ಯೋಗದಾತ ಸಂಸ್ಥೆಗಳು ಕೆಲವೇ ನಿಮಿಷಗಳಲ್ಲಿ ಒಂದು ನಾಮಿನಲ್ ಶುಲ್ಕ ನೀಡಿ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬಹುದು. ಇದನ್ನೆಲ್ಲ ಮಾಡಲು ಬೇಕಾಗುವ ಸಿಬ್ಬಂದಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ಎನ್‌ಎಡಿ ಮಾಡುತ್ತದೆ.
ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಬಯಸುವ, ನೌಕರಿಗೆ ಅರ್ಜಿಹಾಕುವ, ಇಮಿಗ್ರೇಶನ್ ಅಥವಾ ವಿದೇಶದ ನೌಕರಿಗಳಿಗೆ ಸಂಬಂಧಿಸಿ ವೀಸಾಪಡೆಯಬಯಸುವ ವಿದ್ಯಾರ್ಥಿಗಳ ಪರಿಶ್ರಮ ಪರದಾಟ ಪೇಚಾಟವನ್ನು ಕಡಿಮೆಮಾಡುವ ನಿಟ್ಟಿನಲ್ಲಿ ಎನ್‌ಎಡಿಯ ಸ್ಥಾಪನೆ, ಸೃಷ್ಟಿ ಬಹಳ ದೊಡ್ಡ ಒಂದು ಬೆಳವಣಿಗೆ. ಈ ಕುರಿತು ಹೆಚ್ಚಿನ ವಿವರಗಳಿಗಾಗಿ ಲಾಗ್‌ಆನ್‌ಮಾಡಿ:
www.nad.gov.in

Writer - ಎಂ. ಎ. ಸಿರಾಜ್

contributor

Editor - ಎಂ. ಎ. ಸಿರಾಜ್

contributor

Similar News

ಜಗದಗಲ
ಜಗ ದಗಲ