ಸಂಗಾತಿ ಚೆ ಎಂಬ ವಿಸ್ಮಯ
ಸಂಗಾತಿ ಅರ್ನೆಸ್ಟೋ ಚೆಗುವಾರರನ್ನು ಕ್ಯೂಬನ್ ಕ್ರಾಂತಿಕಾರಿಯೆನ್ನುವುದು ಆತನ ವ್ಯಕ್ತಿತ್ವವನ್ನು ಸಂಕುಚಿತಗೊಳಿಸಿದಂತೆ. ಆತ ಅರ್ಜೆಂಟೀನಾದಲ್ಲಿ ಹುಟ್ಟಿದ...ಮತ್ತು ಕ್ಯೂಬಾದಲ್ಲಿ ತನ್ನ ಬದುಕಿನ ಹೆಚ್ಚಿನ ವರ್ಷಗಳನ್ನು ಕಳೆದ.
ಆದರೆ ಆತ ಯಾವುದೇ ಒಂದು ದೇಶಕ್ಕೆ ಮಾತ್ರ ಸೀಮಿತವಾಗಲಿಲ್ಲ... ಆತನ ಪ್ರಭಾವ ಲ್ಯಾಟಿನ್ ಅಮೆರಿಕಾದ ಹೆಚ್ಚು ಕಡಿಮೆ ಎಲ್ಲೆಡೆಯ ವಿಮೋಚನಾ ಹೋರಾಟದಲ್ಲಿತ್ತು. ಆತ ಕ್ರಾಂತಿಯ ಅದೆಂತಹ ಅದಮ್ಯ ಚೇತನವೆಂದರೆ ಜಗತ್ತಿನ ಯಾವುದೇ ಮೂಲೆಯಲ್ಲಿಯಾದರೂ ಅನ್ಯಾಯ, ಶೋಷಣೆ, ದೌರ್ಜನ್ಯದ ವಿರುದ್ಧ ಯಾರು ಹೋರಾಡುತ್ತಾರೋ.... ತಮ್ಮ ನಾಡಿನ ವಿಮೋಚನೆಗಾಗಿ ಯಾರು ಹೋರಾಡುತ್ತಾರೋ... ಅವರೆಲ್ಲರೂ ನನ್ನ ಸಂಗಾತಿಗಳು ಎಂದು ಘೋಷಿಸಿದ್ದ. ಆತ ಹುತಾತ್ಮನಾಗಿ ಸುಮಾರು ಐವತ್ತೆರಡು ವರ್ಷಗಳಾದರೂ ಆತ ಇಂದಿಗೂ ಓರ್ವ ಸೆಲೆಬ್ರಿಟಿಯಾಗಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾನೆ. ಇನ್ನೂ ವಿಚಿತ್ರವೆಂದರೆ ನಮ್ಮ ದೇಶದಲ್ಲಿ ಆತನ ಸಿದ್ಧಾಂತದ ಕಟುವಿರೋಧಿಗಳಾದ ಬಲಪಂಥೀಯ ಯುವಕರೂ ಆತನ ಭಾವಚಿತ್ರವಿರುವ ಟೀ ಶರ್ಟ್ ಧರಿಸುತ್ತಾರೆ.... ಕ್ಯಾಪ್ ಧರಿಸುತ್ತಾರೆ... ಅವರ್ಯಾರೂ ಆತನನ್ನು ಓದಿರಲು ಸಾಧ್ಯವಿಲ್ಲ... ಮತ್ತು ಜಗತ್ತಿನಾದ್ಯಂತದ ಎಡಪಂಥೀಯ ಚಳವಳಿಗಾರರಿಗೆ ಆತ ಓರ್ವ ರೋಲ್ ಮಾಡೆಲ್ ಆಗಿ ಇಂದಿಗೂ ಪ್ರಸ್ತುತ.
ಚೆ ಮೂಲತಃ ಓರ್ವ ಚರ್ಮರೋಗ ಶಾಸ್ತ್ರದಲ್ಲಿ ಪರಿಣತಿ ಪಡೆದ ವೈದ್ಯ. ಒಂದು ಕಾಲಕ್ಕೆ ಆತ ತಾನೋರ್ವ ಮಹಾನ್ ವೈದ್ಯಕೀಯ ಸಂಶೋಧಕನಾಗಬೇಕೆಂಬ ಕನಸು ಕಂಡವನು. ಆತ ತಾನು ಬದಲಾದ ಬಗೆಯನ್ನು ತನ್ನ ದಿನಚರಿಯಲ್ಲಿ ಹೀಗೆ ಬರೆಯುತ್ತಾನೆ
"ಕ್ರಾಂತಿಯ ಹಂಬಲ ಹೋರಾಟಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡು ಪಡೆದ ಪಕ್ವ ದೃಷ್ಟಿಕೋನ ನನ್ನ ಹಿಂದಿನ ವೈದ್ಯಕೀಯ ವಿದ್ಯಾರ್ಥಿ ದೆಸೆಯಲ್ಲಿ ಇರಲಿಲ್ಲ. ನಾನು ಎಲ್ಲರಂತೆ ಯಶಸ್ಸಿಗೆ ಆಶಿಸಿದೆ. ನಾನೊಬ್ಬ ಪ್ರಸಿದ್ಧ ಸಂಶೋಧಕನಾಗಿ , ಬಿಡುವಿಲ್ಲದೇ ದುಡಿದು, ಮಾನವ ಜೀವಿಗಳೆಲ್ಲರಿಗೂ ಲಾಭವಾಗುವಂತಹ ಏನಾದರೂ ಸಂಶೋಧನೆ ಮಾಡುವ ಕನಸು ಕಾಣುತ್ತಿದ್ದೆ. ಆದರೆ ಇವೆಲ್ಲಾ ವೈಯಕ್ತಿಕ ಯಶಸ್ಸಿಗಾಗಿ ಕಟ್ಟಿದ ಕನಸುಗಳು.ನಮ್ಮೆಲ್ಲರಂತೆ ನಾನೂ ಸಹ ನಮ್ಮ ಪರಿಸರದಿಂದ ರೂಪಿತವಾದ ವ್ಯಕ್ತಿಯಾಗಿದ್ದೆ.
ದಾರಿದ್ರ್ಯದಿಂದಾಗಿ, ಹೇಗೆ ತಂದೆ ತಾಯಿಯರು ತಮ್ಮ ಮಕ್ಕಳ ರೋಗಗಳಿಗೆ ಔಷಧಿ ಕೊಡಲಾರದಾಗಿದ್ದರೆಂಬುದನ್ನು ಕಂಡೆ, ಹಸಿವೆ ಮತ್ತು ನರಳಿಕೆಗಳಿಂದ ಪೀಡಿತನಾದ ತಂದೆ ತನ್ನ ಮಗು ಸಾಯುವುದನ್ನು ನಿರ್ವಿಕಾರವಾಗಿ ಸಾಯುವುದನ್ನು ಸಹಿಸಿಕೊಳ್ಳುವಷ್ಟು ಪಶುಪ್ರಾಯನಾಗಿ ಮನುಷ್ಯನು ಅಧಃ ಪತನಕ್ಕೆ ಜಾರುವುದನ್ನು ಕಂಡೆ. ಪ್ರಸಿದ್ಧ ಸಂಶೋಧಕನಾಗುವುದಕ್ಕಿಂತ ಅಥವಾ ಆರೋಗ್ಯ ಶಾಸ್ತ್ರಕ್ಕೆ ಒಂದು ಅಮೂಲ್ಯ ಕೊಡುಗೆ ಕೊಡುವುದಕ್ಕಿಂತಲೂ ಯಾವ ರೀತಿಯಲ್ಲೂ ಕನಿಷ್ಟವೆಂದು ಹೇಳಲಾಗದ ಜೀವನದ ಧ್ಯೇಯ ಇನ್ನೊಂದು ಇದೆಯೆಂದು ನಾನು ಕಂಡುಕೊಂಡೆ. ಆಗ ಈ ಜನರ ಸಹಾಯಕ್ಕೆ ನಾನು ಒದಗಬೇಕೆಂಬ ಜ್ಞಾನೋದಯವಾಗಿತ್ತು."
ಚೆ ಒಂದರ್ಥದಲ್ಲಿ ವಿಶ್ವ ಸಂಚಾರಿ. ಆತ ತನ್ನ ಸಂಚಾರದಲ್ಲಿ ಕಂಡುಕೊಂಡ ಮಾನವಕುಲದ ಹಸಿವು-ನೋವು-ಸಂಕಟ-ನರಳಿಕೆಗಳು ಆತನ ಬದುಕಿನ ಪಥವನ್ನು ಬದಲಿಸಿದವು. ಅಪ್ಪಟ ಮಾನವತಾವಾದಿಯಾಗಿದ್ದ, ಸೂಕ್ಷ್ಮ ಸಂವೇದನೆಯ ವ್ಯಕ್ತಿಯಾಗಿದ್ದ ಚೆ ವಿಮೋಚನಾ ಹೋರಾಟಕ್ಕೊಂದು ಪರ್ಯಾಯ ಹೆಸರೇ ಆಗಿ ಪರಿವರ್ತಿತಗೊಂಡಿದ್ದರ ಹಿಂದೆ ಇರುವುದೇ ಆತ ಕಂಡು ಕೊಂಡ ಸತ್ಯಗಳು.
ಕ್ಯೂಬಾ ವಿಮೋಚನಾ ಹೋರಾಟದ ಮಹಾದಂಡನಾಯಕನಾಗಿ ಕಾರ್ಯನಿರ್ವಹಿಸಿದ ಚೆ ಕ್ಯೂಬಾ ವಿಮೋಚನೆಯಾದ ಬಳಿಕ ಅಧಿಕಾರದ ಕುರ್ಚಿಯಲ್ಲಿ ಆಸೀನನಾಗಿ ಸುಖಃ ಅನುಭವಿಸಬಹುದಿತ್ತು. ಆತನಿಗೆ ಉನ್ನತೋನ್ನತ ಸ್ಥಾನಗಳು ಒದಗಿಬಂದರೂ ಆತ ಎಂದೂ ಮೈ ಮರೆಯಲಿಲ್ಲ. ಕ್ಯೂಬಾದ ಮಂತ್ರಿಯಾಗಿಯೂ ಕಬ್ಬಿನ ಗದ್ದೆಗಳಲ್ಲಿ ಅತೀ ಸಾಮಾನ್ಯ ರೈತನಂತೆ ದುಡಿದ.
ಚೆ ಕ್ಯೂಬಾದಲ್ಲಿ ಅಧಿಕಾರದ್ದಲ್ಲಿದ್ದಾಗ ಅನಾರೋಗ್ಯ ಪೀಡಿತನಾದ. ಆತನಿಗೆ ವಿಶ್ರಾಂತಿಗಾಗಿ ಒಳ್ಳೆಯ ವಸತಿಯ ಅಗತ್ಯ ಬಿತ್ತು. ಆದರೆ ಅದಕ್ಕೆ ತಗಲುವ ಆರ್ಥಿಕ ಚೈತನ್ಯ ಆತನಲ್ಲಿರಲಿಲ್ಲ. ಸರಕಾರ ಆತನಿಗೆ ಉತ್ತಮ ವಸತಿಯ ವ್ಯವಸ್ಥೆ ಮಾಡಿತು. ಆಗ ಚೆ ಹೇಳಿದ ಮಾತು “ಇದು ಅತ್ಯಂತ ಐಷಾರಾಮಿ ವಿಲ್ಲಾ. ಇದರಲ್ಲಿ ನಾನು ಅತ್ಯಂತ ಸಾಧಾರಣವಾದುದನ್ನೇ ಆಯ್ದುಕೊಂಡಿದ್ದೇನೆ. ಆದರೆ ನಾನು ಇಲ್ಲೇ ಬೀಡು ಬಿಟ್ಟಿರುವ ವಿಚಾರ ಜನರನ್ನು ನೋಯಿಸಬಹುದು. ನಾನು ಚೇತರಿಸುತ್ತಲೇ ಈ ಮನೆಯನ್ನು ಬಿಟ್ಟು ಹೋಗುವೆನೆಂದು ಕ್ಯೂಬಾದ ಜನತೆಗೆ ಮಾತು ಕೊಡುತ್ತೇನೆ.” ಸುಮ್ಮನೆ ನಮ್ಮ ಮಂತ್ರಿ ಮಹೋದಯರ ಬದುಕನ್ನೊಮ್ಮೆ ತಾಳೆ ಹಾಕಿ ನೋಡಿ. ಅಧಿಕಾರ ಮುಗಿದರೂ ವರ್ಷಾನುಗಟ್ಟಲೆ ಜನತೆಯ ತೆರಿಗೆಯ ಹಣವನ್ನು ತಮ್ಮ ಐಷಾರಾಮಿ ಬದುಕಿಗಾಗಿ ಯಾವ ರೀತಿ ದುರುಪಯೋಗಪಡಿಸುತ್ತಾರೆ...
ಸಂಗಾತಿ ಚೆಗುವಾರನನ್ನು 1967ರಲ್ಲಿ ಕೊಲ್ಲಲಾಗುತ್ತದೆ. ಆತನನ್ನು ಯಾವ ಸೈನಿಕ ಕೊಂದಿದ್ದನೋ ಆ ಸೈನಿಕನಿಗೆ ಆತನ ವೃದ್ದಾಪ್ಯದಲ್ಲಿ ಅನಾರೋಗ್ಯ ಕಾಡಿದಾಗ ಆತನಿಗೆ ಚಿಕಿತ್ಸೆ ನೀಡಿ ಆತನನ್ನು ಗುಣಮುಖವಾಗಿಸಿದ್ದು ಕ್ಯೂಬಾದಲ್ಲಿ ಚೆಗುವಾರನ ಹೆಸರಲ್ಲೇ ನಿರ್ಮಿಸಲಾಗಿದ್ದ ಆಸ್ಪತ್ರೆಯಲ್ಲಿ. ಚೆ ಯ ಸಂಗಾತಿ ಕ್ಯೂಬಾದ ಅಂದಿನ ಅಧ್ಯಕ್ಷ ಫಿಡೆಲ್ ಕಾಸ್ಟ್ರೋನಿಗೆ ಆತ ತನ್ನ ಸಂಗಾತಿ ಚೆ ಯನ್ನು ಕೊಂದ ಸೈನಿಕ ಎಂಬ ಸತ್ಯ ಗೊತ್ತಿದ್ದರೂ ಆತನಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಚೆ ಮತ್ತು ಫಿಡೆಲ್ ಯುದ್ಧಗಳು ಯುದ್ಧಭೂಮಿಗೆ ಮಾತ್ರ ಸೀಮಿತ ಎಂದು ಅಚಲವಾಗಿ ನಂಬಿದ್ದರು. ಫಿಡೆಲ್ ಪ್ರಕಾರ ಚೆ ಯನ್ನು ಕೊಂದಿದ್ದ ಆ ಸೈನಿಕ ಅಂದು ತನ್ನ ಸೇನೆಯ ಪರವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದ.
ಚೆ ಎಂದರೆ ಓದಿದಷ್ಟೂ ಮತ್ತೆ ಮತ್ತೆ ಓದಿಸುವ ಒಂದು ವಿಸ್ಮಯ ಗ್ರಂಥ. ಕ್ರಾಂತಿಕಾರಿಗೆ ಸಾವಿಲ್ಲ... ಆತ ಸದಾ ಜನರ ಮನದಲ್ಲಿ ಅಜರಾಮರ... ಎಂಬುವುದಕ್ಕೆ ಆಧುನಿಕ ಜಗತ್ತಿನಲ್ಲಿ ಚೆ ಒಂದು ನಿದರ್ಶನ..
ಕಾಮ್ರೇಡ್.... ಚೆ...ನಿನಗಿದೋ ಕ್ರಾಂತಿಯ ಕೆಂಪು ಸಲಾಂ