ಕಾರ್ನಾಡ್ ಕಂಡ ಸಂಸ್ಕಾರ

Update: 2019-06-15 18:20 GMT

1965ರಲ್ಲಿ ಮೇ ತಿಂಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಮ್ಮೇಳನ ಕಾರವಾರದಲ್ಲಿ ನೆರೆದಿತ್ತು. ಕೀರ್ತಿನಾಚ ಕುರ್ತಕೋಟಿ ಕಾಲೇಜು ರಜೆಯಲ್ಲಿ ಆನಂದ ದಿಂದ ಧಾರವಾಡಕ್ಕೆ ಬಂದು ಜಿ. ಬಿ. ಜೋಶಿಯವರಲ್ಲಿದ್ದರು. ನಾನು ಧಾರವಾಡಕ್ಕೆ ಬಂದರೆ ಅಲ್ಲಿಂದಲೇ ಎಲ್ಲರೂ ಒಂದುಗೂಡಿ ಮುಂದೆ ಸಾಗುವುದೆಂದು ನಿರ್ಧರಿಸಿದೆವು. ನಾನು OUPಯ ಮದ್ರಾಸ್ ಆಫೀಸನ್ನು ಅಸಿಸ್ಟಂಟ್ ಮ್ಯಾನೇಜರ್ ಆಗಿ 1964ರಲ್ಲಿ ಸೇರಿಕೊಂಡಿದ್ದೆ; ಧಾರವಾಡದ ಮುಖಾಂತರ ಕಾರವಾರಕ್ಕೆ ಹೋದರೆ, ದಾರಿಗುಂಟ ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರನ್ನು, ಗ್ರಂಥಾಲಯದ ಅಧಿಕಾರಿಗಳನ್ನು ಭೆಟ್ಟಿಯಾಗುವ ನನ್ನ ಆಫೀಸು ಕರ್ತವ್ಯವನ್ನು ಮುಗಿಸಿಕೊಂಡು ನಿರಾಳವಾಗಿ ಹೊರಟು ಬಿಡಬಹುದೆಂದು ನಾನು ಹೊಳಹು ಹಾಕಿದೆ. ಆ ಪ್ರಕಾರ ಆಫೀಸು ನನಗೆ ಕೊಟ್ಟಿರುವ ಕಾರಿನಲ್ಲಿ ಧಾರವಾಡಕ್ಕೆ ಹೊರಟೆ.

ವೈಎನ್ಕೆ ಸಮ್ಮೇಳನಕ್ಕೆ ಬರುತ್ತೇನೆಂದವರು ನಾನು ಬೆಂಗಳೂರಿಗೆ ಬಂದು ತಲುಪಿದಾಗ, ‘ನಾನು ಬರುವುದಿಲ್ಲ. ಸುಮತೀಂದ್ರ ನಾಡಿಗನನ್ನು ಕರೆದುಕೊಂಡು ಹೋಗು’ ಎಂದು ನಾಡಿಗನನ್ನು ನನ್ನ ಉಡಿಯಲ್ಲಿ ಹಾಕಿದರು. ಬೆಂಗಳೂರಿನಿಂದ ಧಾರವಾಡದ ವರೆಗೆ ನಡೆದ ಮಾತುಕತೆಯಲ್ಲಿ ನಾಡಿಗ ತನ್ನ ಅಜ್ಜ ಕಲೆ ಹಾಕಿದ ಅಶ್ಲೀಲ ಜಾನಪದ ಗೀತೆಗಳನ್ನು ಓದುತ್ತ ಮನರಂಜನೆ ಮಾಡಿದ್ದಷ್ಟೆ ನೆನಪಿದೆ.

ಬಾಪ್ಪಾ- ಆಯಿ (ನನ್ನ ತಂದೆ-ತಾಯಿ) ಮುಂಬೈಗೆ ಹೋಗಿರುವುದರಿಂದ ಮನೆಗೆ ಬೀಗ ಹಾಕಿತ್ತು. ನಾಡಿಗ ಜಿ.ಬಿ.ಯ ಮನೆಯಲ್ಲೇ ಇಳಿದುಕೊಂಡ. ನಾನು ಪ್ರಾ.ಕೆ.ಜೆ. ಶಹಾ ಅವರನ್ನು ಕಾಣಲು ಕರ್ನಾಟಕ ವಿಶ್ವವಿದ್ಯಾನಿಲಯದ campusಗೆ ಹೋದಾಗ ಅವರು ‘ನಾನು ಈ ಹೊತ್ತೇ ಸಂಜೆ ಮುಂಬೈಗೆ ಹೋಗುತ್ತಿದ್ದೇನೆ. ನನ್ನ ಮನೆ ಖಾಲಿ. ನೀನು ಬೇಕಾದರೆ ಇಲ್ಲೇ ಇದ್ದು ಬಿಡು’ ಎಂದು ಮನೆಯ ಬೀಗದ ಕೈ ನನಗೆ ಕೊಟ್ಟು ಸ್ಟೇಶನ್‌ಗೆ ನಡೆದರು.

ಆ ದಿನ ಕೀರ್ತಿ ‘ಒಂದು ಒಳ್ಳೆಯ ಕೃತಿ ಗ್ರಂಥಮಾಲೆಗೆ ಬಂದಿದೆ. ಓದಿ ನೋಡು,’ ಎಂದು ಯು. ಆರ್. ಅನಂತಮೂರ್ತಿ ಬರೆದ ‘ಸಂಸ್ಕಾರ’ ಕಾದಂಬರಿಯ ಹಸ್ತಪ್ರತಿಯನ್ನು ನನ್ನ ಕೈಯಲ್ಲಿಟ್ಟರು. ರಾತ್ರಿ ಅದನ್ನು ಶಹಾ ಅವರ ಮನೆಯಲ್ಲಿ ಓದಿದೆ. ಇಡಿಯ ರಾತ್ರಿ ನಿದ್ದೆ ಬರಲಿಲ್ಲ.

 ‘ಸಂಸ್ಕಾರ’ ಪ್ರಕಟವಾದಾಗ ಇಡಿಯ ಕನ್ನಡ ಸಾಹಿತ್ಯ ಸೃಷ್ಟಿಯನ್ನು ಬಡಿದೆಬ್ಬಿಸಿತು ಅಂದಾಗ ನಾನು ಅದನ್ನೋದಿ ಉತ್ತೇಜಿತನಾದದ್ದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಅವತ್ತು ನಾನು ಎಚ್ಚರವಿದ್ದದ್ದು ಕೇವಲ ಒಂದು ಅತ್ಯುತ್ತಮ ಕಾದಂಬರಿಯನ್ನು ಓದಿದ ಉತ್ಸಾಹದಿಂದ ಮಾತ್ರವಲ್ಲ. Kaleidoscope ನಳಿಗೆಯನ್ನು ತಿರುಗಿಸಿದೊಡನೆ ಅದರೊಳಗಿನ ಬಣ್ಣಬಣ್ಣದ ಗಾಜಿನ ಚೂರುಗಳೆಲ್ಲ ತಮ್ಮ ನಡುವಿನ ಸಂಬಂಧವನ್ನೇ ಬದಲಾಯಿಸಿ ಹೊಸ ರಂಗೋಲಿಗಳನ್ನು ಸೃಷ್ಟಿಸುವಂತೆ ‘ಸಂಸ್ಕಾರ’ ನನಗೆ ಗೊತ್ತಿದ್ದ ಕನ್ನಡ ಜೀವನದ ವಿನ್ಯಾಸವನ್ನೇ ಬದಲಾಯಿಸಿಬಿಟ್ಟಿತು.

ಮೊದಲನೆಯದಾಗಿ ನನಗೆ ಅದರಲ್ಲಿ ಅನಂತಮೂರ್ತಿ ಬಣ್ಣಿಸಿದ್ದ ವಿಶ್ವವೇ ಗೊತ್ತಿರಲಿಲ್ಲ.ನಾನು ‘ಅಗ್ರಹಾರ’ಗಳ ಬಗ್ಗೆ ಕೇಳಿದ್ದೆ. ಮಲೆನಾಡಿನಲ್ಲಿ ಜಾತಿಗೆ ಮಿಸಲಾದ ಹಳ್ಳಿಗಳನ್ನೂ ನೋಡಿದ್ದೆ. ಯಾವುದೋ ಗತಕಾಲದ ಪಳೆಯುಳಿಕೆಗಳು ಎನ್ನುವುದರಾಚೆ ನಾನು ಅವಕ್ಕೆ ಮಹತ್ವ ಕೊಟ್ಟಿರಲಿಲ್ಲ. ಆದರೆ ಅನಂತಮೂರ್ತಿ ಅದ್ಭುತ ಧ್ವನಿಪೂರ್ಣ ಶೈಲಿಯಲ್ಲಿ ಅದನ್ನೆಲ್ಲ ಪುನಃಸೃಷ್ಟಿಸಿದ್ದರು.

ಅಗ್ರಹಾರದಲ್ಲಿಯ ಜೀವನದ ಸಣ್ಣಾತಿಸಣ್ಣ ವಿವರಗಳು, ವಿಧಿಗಳು, ಸುತ್ತಲಿನ ನಿಸರ್ಗ, ಮಾನವೀಯ ಕಲಹಗಳು,ಯಾವುದೋ ಬೇರೆಯದೇ ಬಗೆಯಲ್ಲಿ ನಿಯಾಮಕವೆನಿಸುವ ಮೌಲ್ಯಗಳು,ನನಗೆ ಅರ್ಥವೇ ಆಗದಂಥ ದೃಷ್ಟಿಕೋನಗಳು ಇವುಗಳನ್ನೋದುತ್ತೋದುತ್ತ ನಾನು ದಿಗ್ಭ್ರಾಂತನಾಗಿ ಬಿಟ್ಟೆ.

ಆದರೆ ಕಾದಂಬರಿ ಕೇವಲ ವಾಸ್ತವಿಕ ವಿವರಗಳ ಚೌಕಟ್ಟಿಗೇ ಬದ್ಧವಾಗಿ ಉಳಿಯದೆ, ಅದನ್ನೊಡೆದು ಹೊರಬಂದು,ಆಳವಾದ, ವ್ಯಾಖ್ಯಾನಿಸಲು ಅಶಕ್ಯವಾದ ಹಂತದಲ್ಲಿ ನನ್ನನ್ನು ಕಲಕಿತು.ಸಾಮಾಜಿಕ ನಿಯಮಗಳನ್ನೆಲ್ಲ ಮೀರಿದ ಆಧ್ಯಾತ್ಮಿಕ ತಲ್ಲಣಗಳಲ್ಲಿ ನನ್ನನ್ನು ಎಳೆದೊಯ್ದಿತು.

ನಿಜ ಹೇಳಬೇಕಾದರೆ ನನ್ನ ಜೀವನದಲ್ಲಿ ಮೊದಲನೆಯ ಸಲ ಒಬ್ಬ ಸಮಕಾಲೀನ ಲೇಖಕ ನನ್ನಲ್ಲಿ ಮತ್ಸರವುಂಟು ಮಾಡಿದ್ದ. ರಾಮಾನುಜನ್ ಯಾವಾಗಲೂ ಹೇಳುತ್ತಿದ್ದರು: ‘ಭಾಷಾಂತರವೆಂದರೆ ಯಾರೋ ಇನ್ನೊಬ್ಬರು ಸೃಷ್ಟಿಸಿದ ಶ್ರೇಷ್ಠ ಕೃತಿಯನ್ನು ತನ್ನದಾಗಿಸಿಕೊಳ್ಳುವ ವಿಧಾನ. ಮೂಲಕೃತಿಯ ಬಗ್ಗೆ ಹೊಟ್ಟೆ ಕಿಚ್ಚು ಉಂಟಾಗದಿದ್ದರೆ ಒಳ್ಳೆಯ ಅನುವಾದ ಸಾಧ್ಯವಿಲ್ಲ’ ಎಂದು. ಈಗ ಒಮ್ಮೆಲೆ ಆ ಮಾತು ಅರ್ಥವಾಯಿತು.

ಈ ಕಾದಂಬರಿಯನ್ನು ನಾನು ಬರೆಯಬೇಕಾಗಿತ್ತು. ಅದನ್ನು ಅನಂತಮೂರ್ತಿ ಎಂಬ ಅನರ್ಹ ಬರೆದುಬಿಟ್ಟಿದ್ದ. ಈಗ ಅದನ್ನು ಹೇಗಾದರೂ ಮಾಡಿ ನನ್ನದಾಗಿಸಿಕೊಳ್ಳಬೇಕಾಗಿತ್ತು. ಆದರೆ ಹೇಗೆ ಎಂಬುದು ತಕ್ಷಣ ಹೊಳೆಯಲಿಲ್ಲ.

ಏಕೆಂದರೆ ನನಗೆ ಆಗ ಚಲನಚಿತ್ರ ಕಲೆಯಲ್ಲೇ ಆಸಕ್ತಿಯಿರಲಿಲ್ಲ. ಆಕ್ಸ್ಸ್‌ಫರ್ಡಿನಲ್ಲಿ ನಾನು ಒಳ್ಳೊಳ್ಳೆಯ ಐರೋಪ್ಯ ನಿರ್ದೇಶಕರ ಕೃತಿಗಳನ್ನು ನೋಡಿದ್ದೆ. ಆಗ ಫ್ರಾನ್ಸಿನ New Wave ತುಂಬಿಹರಿಯುತ್ತಿತ್ತು. ಇಟಲಿಯ ಚಲನಚಿತ್ರ ವಿಶ್ವ ಫೆಲ್ಲಿನಿ, ಆಂತೋನಿಯಾನಿ ಅವರನ್ನು ನೀಡಿತ್ತು. ಆದರೆ ಆ ಮಾಧ್ಯಮ ಏಕೋ ನನ್ನನ್ನು ಆಕರ್ಷಿಸಿರಲಿಲ್ಲ. ಧಾರವಾಡದಿಂದ ನಾನು, ಜಿ.ಬಿ., ಕೀರ್ತಿ ರಮಾಕಾಂತ ಹಾಗೂ ಸುಮತೀಂದ್ರ ಕಾರವಾರಕ್ಕೆ ಹೋದೆವು. ಕಾರವಾರದೊಳಗಡೆ ಊರಿನಲ್ಲಿ ದಾರಿ ತಪ್ಪಿ, ಅಲ್ಲೇ ಗುಂಪಾಗಿ ನಿಂತ ತರುಣರಿಗೆ ‘ಕನ್ನಡ ಸಮ್ಮೇಳನ ಎಲ್ಲಿದೆ?’ ಎಂದು ಕೇಳಿದಾಗ, ಅವರಲ್ಲೊಬ್ಬ ಬೆರಳು ಮಾಡಿ ತೋರಿಸಿದ ದಿಕ್ಕಿನಲ್ಲಿ ಹೊರಟೆವು. ನಮ್ಮ ಹಿಂದೆ ನಗೆಯ ಆಸ್ಫೋಟವಾದದ್ದೇಕೆ ಎಂದು ಗೊತ್ತಾದದ್ದು, ನಮ್ಮ ಕಾರು ನೇರವಾಗಿ ಹೋಗಿ ಕಡಲತಡಿ ಸೇರಿದಾಗಲೇ, ಕಾರವಾರದ ಮರಾಠಿ ಜನರನ್ನು ಕನ್ನಡ ಸಮ್ಮೇಳನ ಎಷ್ಟು ಕೆರಳಿಸಿದೆ ಎಂಬುದರ ಅರಿವಾಯಿತು.

ನಾವು ಯಶವಂತ ಚಿತ್ತಾಲರ ಅಣ್ಣನಾದ ದಾವೋದರ ಚಿತ್ತಾಲರಲ್ಲೇ ಇಳಿದುಕೊಂಡೆವು. ಅವರೇ ಸಮ್ಮೇಳನದ ಮೇಲ್ವಿಚಾರಕರಾಗಿದ್ದರು. ಸಮ್ಮೇಳನದ ಅನುಭವ ಆಹ್ಲಾದದಾಯಕವಾಗಿತ್ತು. ಆ ಕಾಲದಲ್ಲಿ ಈಗಿನಂತೆ ಪ್ರತಿಯೊಂದು ಜಿಲ್ಲಾ ನಗರದಲ್ಲಿ ವಾರ್ಷಿಕ ಸಮ್ಮೇಳನವಾಗುತ್ತಿರಲಿಲ್ಲ ವಾದ್ದರಿಂದ ವರ್ಷಕ್ಕೊಮ್ಮೆ ಒಂದು ಗೂಡಲು ಸಿಗುವ ಈ ಅವಕಾಶಕ್ಕೆ ಕರ್ನಾಟಕದ ಇಡಿಯ ಸಾಹಿತ್ಯಲೋಕ ಹುರುಪಿನಿಂದ ಮುಕುರುತ್ತಿತ್ತು, ಸಮ್ಮೇಳನದ ಅಧ್ಯಕ್ಷರಾದ ಕಡೆಂಗೋಡ್ಲು ಶಂಕರಭಟ್ಟರಿಂದ ಹಿಡಿದು ನಿರಂಜನ. ಚಿತ್ತಾಲ, ಶಾಂತಿನಾಥರನ್ನೊಳಗೊಂಡು ನಮ್ಮ ತಲೆಮಾರಿನ ಚಂಪಾ, ಲಂಕೇಶ, ಪೂಚಂತೇ, ಕಂಬಾರರ ವರೆಗೆ ಎಲ್ಲರೊಡನೆ ಪರಿಚಯ-ಹರಟೆ ಹಾಸ್ಯ ವಿನೋದದಲ್ಲಿ ಮೂರು ದಿನ ಹೋದದ್ದೇ ಗೊತ್ತಾಗಲಿಲ್ಲ.

ಸಮ್ಮೇಳನ ಮುಗಿಸಿ, ಧಾರವಾಡದವರನ್ನು ‘ಅಟ್ಟ’ಕ್ಕಿಳಿಸಿ, ನಾನು ಮರಳಿ ಬೆಂಗಳೂರು ತಲುಪುವಷ್ಟರಲ್ಲಿ ನನ್ನ ತಲೆಯಲ್ಲೊಂದು ಹೊಸ ಕಲ್ಪನೆ ರೂಪಗೊಳ್ಳಲಾರಂಭಿಸಿತ್ತು: ‘ಸಂಸ್ಕಾರ’ವನ್ನು ಆಧಾರಿಸಿ ಚಿತ್ರಪಟ ಮಾಡಬೇಕು. ಕಾದಂಬರಿಯ ದರ್ಶನೀಯತೆಯೇ ಚಿತ್ರೀಕರಣ ಅನಿವಾರ್ಯವೆಂದು ಸಾರುತ್ತಿತ್ತು. ಬೆಂಗಳೂರಲ್ಲಿ ವೈಎನ್ಕೆ ಭೇಟಿಯಾದಾಗ ಬರೇ ಆ ಸಾಧ್ಯತೆಯ ಬಗ್ಗೆ ಮಾತನಾಡಿದೆ. ವೈಎನ್ಕೆ ಎಂದಿನಂತೆ ತಾವೂ ಆ ಸಾಹಸದಲ್ಲಿ ಒಂದಾಗಲು ಕೂಡಲೇ ಸಿದ್ಧರಾದರು.

*****

ನಾನು ಮದ್ರಾಸ್ ತಲುಪಿದ ಕೆಲ ತಿಂಗಳಲ್ಲೇ ಮದ್ರಾಸ್ ಪ್ಲೇಯರ್ಸ್ Six characters in Search of an Author ನಾಟಕದ ತಾಲೀಮು ಆರಂಭಿಸಿದರು. ತಾಲೀಮಿನುದ್ದಕ್ಕೂ ಎಲ್ಲರೊಡನೆ ನಾನು ‘ಸಂಸ್ಕಾರ’ದ ಬಗ್ಗೆಯೇ ಮಾತಾಡಿದ್ದು. ಆದರೆ ಅವರೆಲ್ಲರಲ್ಲಿ ಕಾದಂಬರಿ ಓದಿ ಗೊತ್ತಿದ್ದದ್ದು ಕೇವಲ ಎಸ್.ಜಿ. ವಾಸುದೇವ್‌ಗೆ ಮಾತ್ರ. ವಾಸುದೇವ್ ಚಿತ್ರಕಾರ. ನಾಟಕ-ಸಾಹಿತ್ಯಗಳಲ್ಲಿ ಲವಲವಿಕೆಯುಳ್ಳ ವ್ಯಕ್ತಿ. ಚಿತ್ರೀಕರಣದ ಯೋಚನೆಯಿಂದ ಅವನು ಒಮ್ಮೆಲೆ ಉತ್ತೇಜಿತನಾದ. ಆದರೆ ಉಳಿದವರಿಗೆ ಚಿತ್ರ ನಿರ್ಮಾಣದ ಕಲ್ಪನೆಯೇ ಅವ್ಯವಹಾರ್ಯ, ವಿಚಿತ್ರವೆನಿಸಿರಬೇಕು. ಮದ್ರಾಸ್ ಪ್ಲೇಯರ್ಸ್‌ನಲ್ಲಿ ಫಿಲ್ಮ್ ಎಂದರೇನು ಎಂದು ಗೊತ್ತಿರುವ ಏಕಮೇವ ವ್ಯಕ್ತಿಯೆಂದರೆ ಪಟ್ಟಾಭಿ ರಾಮರೆಡ್ಡಿ.

ಪಟ್ಟಾಭಿ ಮತ್ತು ಅವನ ಪತ್ನಿ ಸ್ನೇಹಾ ಆಳವಾದ ರಾಜಕೀಯ ನಂಬಿಕೆಗಳುಳ್ಳವರು. ರಾಮಮನೋಹರ ಲೋಹಿಯಾ ಅವರ ಭಕ್ತರು. ತಮ್ಮನ್ನು ಸಮಾಜವಾದಿಗಳೆಂದು ಸಾರಿಕೊಳ್ಳುತ್ತಿದ್ದರು. ಆ ವರ್ಷ ಗೋಪಾಲಗೌಡ ಬೆಂಗಳೂರಿಗೆ ಬಂದಾಗ ಪಟ್ಟಾಭಿಯ ಮನೆಯಲ್ಲಿ ಅವರಿಗೊಂದು ಔತಣದ ಏರ್ಪಾಟಾಯಿತು. ನಾನು ಗೋಪಾಲಗೌಡರನ್ನು ಭೇಟಿಯಾದದ್ದು ಅದೊಂದೇ ಸಲ. ಆಗ ಗೋಪಾಲಗೌಡರು ಪಟ್ಟಾಭಿಗೆ ‘‘ನೀನು ‘ಸಂಸ್ಕಾರ’ ಚಿತ್ರಪಟವನ್ನೇಕೆ ನಿರ್ಮಿಸಬಾರದು?’’ ಎಂದು ಕೇಳಿದರಂತೆ. ಗುರುಗಳಿಂದ ಆದೇಶ ಸಿಕ್ಕ ಭಕ್ತಿಯಿಂದ ಪಟ್ಟಾಭಿ ಕೂಡಲೇ ಸಿದ್ಧನಾದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News