ಗಿರೀಶ್ ಕಾರ್ನಾಡರ ನಾಟಕಗಳಲ್ಲಿ ಒಡಲ ಮೀಮಾಂಸೆ

Update: 2019-06-15 18:23 GMT

‘‘ಒಡಲುಗೊಂಡವ ಹಸಿವ/ ಒಡಲುಗೊಂಡವ ಹುಸಿವ/ ಒಡಲುಗೊಂಡವನೆಂದು ನೀನೆನ್ನ ಜರಿದೊಮ್ಮೆ ನುಡಿಯದಿರ/ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡಾ ರಾಮನಾಥ’’ ಎಂದು ಶಿವನಿಗೆ ಸವಾಲು ಹಾಕುವ ಜೇಡರದಾಸಿಮಯ್ಯನ ಅದ್ಭುತವಾದ ವಚನವೊಂದಿದೆ. ಇಂತಹ ಒಡಲನ್ನೆ ರೂಪಕವನ್ನಾಗಿ ಮಾಡಿಕೊಂಡು, ಅದರ ವಿಭಿನ್ನ ನೆಲೆಗಳನ್ನು ಹೊಸ ಅರ್ಥಗಳೊಡನೆ ವ್ಯಾಖ್ಯಾನಿಸಿದ ಶ್ರೇಯಸ್ಸು ಆಧುನಿಕ ಸಂದರ್ಭದಲ್ಲಿ ಗಿರೀಶ್ ಕಾರ್ನಾಡರಿಗೆ ಸಲ್ಲುತ್ತದೆ. ಈ ಲೇಖನದ ಪ್ರಥಮ ಭಾಗದಲ್ಲಿ ಅವರ ನಾಟಕಗಳಲ್ಲಿ ಒಡಲು ಬಳಕೆಯಾಗುವ ಮೂರು ಬಗೆಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಮೊದಲನೆಯ ಹಂತದಲ್ಲಿ ದೈಹಿಕ ಹಸಿವು ಎನ್ನುವುದು ಉಪಭೋಗದ ನೆಲೆಯನ್ನು ಆಧರಿಸಿದೆ. ಈ ಹೊತ್ತಿನ ಅರ್ಥದಲ್ಲಿ ಅದನ್ನು consumerism ಎಂದು ನಿರ್ದೇಶಿಸಬಹುದು. ಕಾರ್ನಾಡರು ತಮ್ಮ ‘ಯಯಾತಿ’ (1961) ನಾಟಕ ಬರೆದ ಸಂದರ್ಭದಲ್ಲಿ ಇದು ಇಷ್ಟರ ಮಟ್ಟಿಗೆ ಬಳಕೆಗೆ ಬಂದಿರಲಿಲ್ಲ. ಯಯಾತಿಯ ಉಪಭೋಗದ ತೃಷೆ ಅನೈಸರ್ಗಿಕವಾದುದು. ಅವನಿಗೆ ಎಷ್ಟು ಉಪಭೋಗಿಸಿದರೂ ತಣಿವು ಎನ್ನುವುದಿಲ್ಲ. ಆದ್ದರಿಂದಲೇ ಅವನು ತನ್ನ ತೀರದ ಬಯಕೆಯನ್ನು ಈಡೇರಿಸಿಕೊಳ್ಳಲು ಯಾರೂ ತನ್ನ ವೃದ್ಧಾಪ್ಯವನ್ನು ಸ್ವೀಕರಿಸಲು ಮುಂದೆ ಬರದಿದ್ದಾಗ ತನ್ನ ಮಗ ಪುರುವಿನ ಯವ್ವನವನ್ನೇ ಬಲಿತೆಗೆದುಕೊಳ್ಳುತ್ತಾನೆ. ಇದರ ಪರಿಣಾಮವಾಗಿ ಪುರುವಿನ ಹೆಂಡತಿ ಚಿತ್ರಲೇಖೆ ವಿಷಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ತಾನು ಮಾಡಿದ ಪಾಪದ ಘೋರ ಪರಿಣಾಮವನ್ನು ಯಯಾತಿ ಅರಿತರೂ ಪುರುವಿನ ಯವವ್ವನವನ್ನು ಮರಳಿ ಕೊಟ್ಟರೂ ಅದರಿಂದ ಆದ ದುರಂತವನ್ನು ಮಾತ್ರ ಅವನಿಗೆ ತಪ್ಪಿಸುವುದು ಸಾಧ್ಯವಾಗುವುದಿಲ್ಲ. ತಮ್ಮ ಅನೈಸರ್ಗಿಕ ಉಪಭೋಗವೆನ್ನುವುದು ಇನ್ನೊಬ್ಬರ ನೈಸರ್ಗಿಕ ಉಪಭೋಗದ ಹಕ್ಕನ್ನು ಕಸಿದು ಕೊಳ್ಳುತ್ತದೆ ಎಂಬ ಸತ್ಯದ ಅರಿವಾಗುವುದಾದರೂ ಆದ ಪರಿಣಾಮವನ್ನು ತಪ್ಪಿಸುವುದಂತೂ ಸಾಧ್ಯವಿಲ್ಲ. ಕೊಳ್ಳುಬಾಕ ಸಂಸ್ಕೃತಿಯ ದಾಸನಾಗಿರುವ ಇಂದಿನ ಮನುಷ್ಯ ಇದರಿಂದ ಕಲಿಯಬೇಕಾದ ಪಾಠ ಅಮೂಲ್ಯವಾದುದು. "one has no moral right to tramp upon others human rights’

ಎನ್ನುವ ಸತ್ಯವನ್ನು ಲೇಖಕರು ಇಂದಿನ ಜನಾಂಗಕ್ಕೆ ಮನಗಾಣಿಸಿ ಕೊಡುತ್ತಾರೆ. ಎರಡನೆಯ ಭಾಗದಲ್ಲಿ ದೇಹದ ಯಾವ ಭಾಗ ಶ್ರೇಷ್ಠ, ಯಾವ ಭಾಗ ಕನಿಷ್ಠ ಎನ್ನುವ ಜಿಜ್ಞಾಸೆಯನ್ನು ಹುಟ್ಟುಹಾಕುವ ಅವರ ‘ಹಯವದನ’ ನಾಟಕವನ್ನು ನೋಡಬಹುದಾದ ಆಧುನಿಕತೆ ಎನ್ನುವುದು radicalism ಮತ್ತು ಬೌದ್ಧಿಕತೆಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುವುದರ ಮೂಲಕ ದೇಹದ ಇತರ ಭಾಗಗಳ ಬೆಳವಣಿಗೆಯನ್ನು ಕ್ಷುದ್ರವನ್ನಾಗಿ ಮಾಡಿತು. ಆದರೆ ನೈಸರ್ಗಿಕತೆಗೆ ಹತ್ತಿರವಾಗುವುದು ದೇಹದ ಇನ್ನಿತರ ಭಾಗಗಳೇ ಹೊರತು ತಲೆಯಲ್ಲ. ಬುದ್ಧಿಯ ಮೂಲಕ ಎಲ್ಲವನ್ನೂ ನಿಯಂತ್ರಿಸ ಹೊರಟ ಆಧುನಿಕ ಮನುಷ್ಯ ನಿಸರ್ಗದ ಪ್ರತೀಕವಾದ ಲೈಂಗಿಕತೆಯನ್ನು ಅಲಕ್ಷಿಸಿ ಅದನ್ನು ತುಚ್ಛವೆಂದು ಭಾವಿಸುವುದರ ಹಿಂದಿನ ಅಮಾನವೀಯತೆಯನ್ನು ಈ ನಾಟಕ ಜಾನಪದ ಪರಿಕರಗಳ ಹಿನ್ನೆಲೆಯಲ್ಲಿ ಪರಿಶೀಲಿಸುತ್ತದೆ. ಇಲ್ಲಿ ಬರುವ ಕುದುರೆ ದೇಹದ ಶಕ್ತಿಯ ಪ್ರತೀಕವಾದರೆ, ಮನುಷ್ಯನ ಮುಖ ಬುದ್ಧಿಯ ಪ್ರತೀಕವಾಗಿದೆ. ಪದ್ಮಿನಿಯು ಕಾಳಿಕೊಟ್ಟ ವರವನ್ನು ತನ್ನ ಇಚ್ಛೆಯನ್ನು ಪೂರೈಸಿಕೊಳ್ಳುವ ಸಾಧನವಾಗಿ ಮಾಡಿಕೊಳ್ಳಲು ದೇಹದ ಭಾಗಗಳನ್ನು ಅದಲು ಬದಲು ಮಾಡುತ್ತಾಳೆ. ಇದರಿಂದ ಇಲ್ಲಿಯವರೆಗೂ ಜೀವದ ಗೆಳೆಯರಾಗಿದ್ದ ಕಪಿಲ ಮತ್ತು ದೇವದತ್ತರನ್ನು ಶತ್ರುಗಳನ್ನಾಗಿ ಮಾರ್ಪಡಿಸುತ್ತದೆ. ಅವರಿಬ್ಬರೂ ಪರಸ್ಪರ ಹೋರಾಟದ ಕಣಕ್ಕೆ ಇಳಿಯುತ್ತಾರೆ. ಅದನ್ನು ನೋಡಲಾರದ ಅವಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಬುದ್ಧಿ ಮತ್ತು ದೇಹಗಳ ಹೋರಾಟದಲ್ಲಿ ಅಂತಿಮವಾಗಿ ಯಾವುದೂ ಪೂರ್ಣವಲ್ಲ, ಒಂದನ್ನು ಬಿಟ್ಟು ಇನ್ನೊಂದಕ್ಕೆ ಅಸ್ತಿತ್ವವಿಲ ಎನ್ನುವುದರ ಮೂಲಕ ಎರಡರ ನಡುವೆ ಇರಬೇಕಾದ ಸಮತೋಲವನ್ನು ಎತ್ತಿಹಿಡಿಯುತ್ತದೆ.

ಮೂರನೆಯ ಭಾಗದಲ್ಲಿ ‘ಅಗ್ನಿ ಮತ್ತು ಮಳೆ’ಯ ಮೂಲಕ ಎರಡು ಸಂಸ್ಕೃತಿಗಳ ಪ್ರತೀಕವನ್ನಾಗಿ ಮಾಡಿಕೊಂಡು ವಿಶಾಲವಾದ ವ್ಯಾಪ್ತಿಯಲ್ಲಿ ಇದನ್ನು ಸಾಧಿಸುತ್ತಾರೆ. ಇಲ್ಲಿ ವಿಶಾಖ ಮತ್ತು ರೈಬ್ಯ ಆರ್ಯ ಸಂಸ್ಕೃತಿಯವರಾದರೆ, ನಿತ್ತಿಲೆ ಮತ್ತು ಅರವಸು ಶೂದ್ರ ಸಂಸ್ಕೃತಿಯ ಪ್ರತೀಕವಾಗಿದ್ದಾರೆ. ಮೊದಲನೆಯದರಲ್ಲಿ ಬುದ್ಧಿಯ ಅಹಂಕಾರದ ಪ್ರಕಟಣೆ ಇದ್ದರೆ ಎರಡನೆಯದರಲ್ಲಿ ಮುಗ್ಧತೆ ಮತ್ತು ಪ್ರೀತಿಯ ಅನನ್ಯತೆಗಳು ಪ್ರಕಟವಾಗಿದೆ. ಅದು ತ್ಯಾಗದ ಮೂಲಕ ಗೆಲ್ಲುತ್ತದೆ. ಕೃತಕ ವಾದ ಆರ್ಯ ಸಂಸ್ಕೃತಿಗಿಂತ ನಿಸರ್ಗಕ್ಕೆ ಹತ್ತಿರವಾದ ದೇಸೀ ಸಂಸ್ಕೃತಿಯು ಸಹಜವೆಂದೂ, ಇವೆರಡರ ಸಮ್ಮೇಳನದಿಂದ ಮಾತ್ರ ಸಂಸ್ಕೃತಿ ಪೂರ್ಣಗೊಳ್ಳಲು ಸಾಧ್ಯವೆಂಬ ಆರೋಗ್ಯಕರವಾದ ಮನೋಧರ್ಮವನ್ನು ಪ್ರಕಟಿಸುತ್ತಾರೆ.

ನಾಲ್ಕನೆಯ ಭಾಗದಲ್ಲಿ ಹೆಣ್ಣಿನ ದೇಹದ ಮೇಲೆೆ ಹತೋಟಿಯನ್ನು ಸಾಧಿಸಿ ನಿಯಂತ್ರಿಸಲು ಬಯಸಿದರೆ ಹುಟ್ಟುವ ತೊಡಕುಗಳನ್ನು ‘ನಾಗಮಂಡಲ’ ನಾಟಕ ಜಾನಪದ ಕಥೆಗಳ ಹಿನ್ನೆಲೆಯಲ್ಲಿ ವಿವೇಚಿಸುತ್ತದೆ. ಇಲ್ಲಿ ಬರುವ ಅಪ್ಪಣ್ಣ ಪುರುಷ ಪ್ರಧಾನ ಸಂಸ್ಕೃತಿಯ ಪ್ರತೀಕವಾದರೆ ರಾಣಿ ಅಸಹಾಯಕಳಾದ ಬಲಿಪಶು ಆಗಿದ್ದಾಳೆ. ನಾಗನ ಮೂಲಕ ಅವಳ ನೈಸರ್ಗಿಕ ಬಯಕೆ ಈಡೇರುತ್ತದೆ. ಇದನ್ನು ಅಪ್ಪಣ್ಣನಿಗೆ ತಪ್ಪಿಸಲು ಆಗುವುದಿಲ್ಲ. ನೈಸರ್ಗಿಕತೆಯ ಮೇಲೆ ಹೇರುವ ಯಾವ ಕೃತಕವಾದ ನಿರ್ಬಂಧಗಳು ಅಂತಿಮವಾಗಿ ವಿಫಲವಾಗಿ ಬಿಡುತ್ತವೆ. ಅವಳು ಹಾವನ್ನು ಕೈಯಲ್ಲಿ ಹಿಡಿಯುವುದರ ಮೂಲಕ ತಾನು ಪತಿವ್ರತೆಯೆಂದು ಘೋಷಿಸುವುದು, ಅವನ ಪುರುಷತ್ವದ ಅಹಂಕಾರಕ್ಕೆ ಮರ್ಮಾಘಾತವನ್ನು ಉಂಟುಮಾಡುತ್ತದೆ. ಅವರ ‘ಹಿಟ್ಟಿನ ಹುಂಜ’ ನಾಟಕ ಕೂಡ ಇದೇ ವರ್ಗಕ್ಕೆ ಸೇರುವಂತಹದು. ಇದು ಜೈನ ಕಥೆಯಾದ ಯಶೋಧರ ಚರಿತೆಯನ್ನು ಆಧರಿಸಿದೆ. ಇಲ್ಲಿ ಬರುವ ಅಮೃತಮತಿ ತನ್ನನ್ನು ಒಲಿದ ಷಂಡ ರಾಜನನ್ನು ನಿರಾಕರಿಸಿ ತಾನು ಒಲಿದ ಮಾವುತನನ್ನು ಕೂಡುವುದರ ಮೂಲಕ ಸ್ತ್ರೀಯೊಬ್ಬಳಿಗೆ ಇರಬೇಕಾದ ನೈಸರ್ಗಿಕ ಲೈಂಗಿಕ ಹಕ್ಕನ್ನು ಸಮರ್ಥಿಸುತ್ತಾಳೆ, ಮತ್ತೆ ಅವಳ ಮೇಲೆ ಹೇರಲಾದ ಪ್ರಭುತ್ವದ ಪಾತಿವ್ರತ್ಯದ ಮೌಲ್ಯಗಳನ್ನು ಗಾಳಿಗೆ ತೂರುತ್ತಾಳೆ.

ಹೀಗೆ ಅವರ ನಾಟಕಗಳಲ್ಲಿ ಒಡಲನ್ನು ಕೇಂದ್ರವನ್ನಾಗಿಟ್ಟುಕೊಂಡು ಇದನ್ನು ವಿಭಿನ್ನ ನೆಲೆಗಳಿಗೆ ವಿಸ್ತರಿಸುವಾಗ ಸ್ಥಾಪಿತವಾದ ಅನಾರೋಗ್ಯಕರವಾದ ಮೌಲ್ಯಗಳನ್ನು ನಿರಾಕರಿಸುವುದರೊಂದಿಗೆ ಆರೋಗ್ಯಕರ ನೈಸರ್ಗಿಕ ಮೌಲ್ಯಗಳ ಆಯ್ಕೆಯ ಕಡೆಗೆ ಮುಖಮಾಡುತ್ತಾರೆ. ಇದು ಕಾರ್ನಾಡರ ಜೀವ ಪರವಾದ ನಿಲುವುಗಳಿಗೆ ಸಾಕ್ಷಿಯಾಗಿದೆ.

Writer - ರಘುನಾಥ್ ಕೃಷ್ಣಮಾಚಾರ್

contributor

Editor - ರಘುನಾಥ್ ಕೃಷ್ಣಮಾಚಾರ್

contributor

Similar News