ತುಂಗಾ, ಭದ್ರಾದಿಂದ ಬೆಂಗಳೂರಿಗೆ ನೀರು ಪೂರೈಕೆಗೆ ಚಿಂತನೆ: ಮಧ್ಯ ಕರ್ನಾಟಕದಲ್ಲಿ ವ್ಯಕ್ತವಾಗುತ್ತಿದೆ ವ್ಯಾಪಕ ಆಕ್ಷೇಪ

Update: 2019-06-16 18:37 GMT

ಶಿವಮೊಗ್ಗ, ಜೂ. 16: ರಾಜಧಾನಿ ಬೆಂಗಳೂರು ಮಹಾನಗರದ ಕುಡಿಯುವ ನೀರು ದಾಹ ನೀಗಿಸಲು ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದಿಂದ ನೀರು ಪೂರೈಸುವ ಯೋಜನೆಯ ನಡುವೆಯೇ, ಜಿಲ್ಲೆಯ ತುಂಗಾ ಹಾಗೂ ಭದ್ರಾ ನದಿಗಳಿಂದಲೂ ಬೆಂಗಳೂರಿಗೆ ನೀರು ಕೊಂಡೊಯ್ಯುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಾರಂಭಿಸಿದೆ. ಇದು ಮಧ್ಯ ಕರ್ನಾಟಕ ಭಾಗದಲ್ಲಿ ಬಿಸಿ ಬಿಸಿ ಚರ್ಚೆಗೆಡೆ ಮಾಡಿಕೊಟ್ಟಿದೆ. 

ಲಿಂಗನಮಕ್ಕಿ ಡ್ಯಾಂನಿಂದ ಬೆಂಗಳೂರಿಗೆ ನೀರು ಪೂರೈಸುವ ಪ್ರಸ್ತಾಪಕ್ಕೆ ಈಗಾಗಲೇ, ಜಿಲ್ಲೆಯ ಸಾರ್ವಜನಿಕ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ತುಂಗಾ ಹಾಗೂ ಭದ್ರಾ ನದಿಗಳಿಂದ ನೀರು ಕೊಂಡೊಯ್ಯುವ ಹೊಸ ಚಿಂತನೆಗೆ ಶಿವಮೊಗ್ಗ ಮಾತ್ರವಲ್ಲದೆ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗಲಾರಂಭಿಸಿದೆ. 

ಸರ್ಕಾರದ ಈ ಚಿಂತನೆ ಕಾರ್ಯಸಾಧುವಲ್ಲ. ಇದು ಭವಿಷ್ಯದಲ್ಲಿ, ಮಧ್ಯ ಕರ್ನಾಟಕ ಜಿಲ್ಲೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬುವುದು ಈ ಭಾಗದವರು ದೂರಲಾರಂಭಿಸಿದ್ದಾರೆ. ಒಂದು ವೇಳೆ ಸರ್ಕಾರವೇನಾದರೂ ಈ ಎರಡೂ ನದಿಗಳಿಂದ ನೀರು ಪೂರೈಕೆಗೆ ಮುಂದಾದರೆ, ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆಯನ್ನು ಕೆಲ ಸಂಘಟನೆಗಳು ನೀಡಲಾರಂಭಿಸಿವೆ. 

ಚಿಂತನೆಯೇನು?: ಇತ್ತೀಚೆಗೆ ಬೆಂಗಳೂರಿನಲ್ಲಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡೆಸಿದ ಚರ್ಚೆಯ ವೇಳೆ, ತುಂಗಾ ಹಾಗೂ ಭದ್ರಾ ನದಿಪಾತ್ರಗಳಿಂದ ಬೆಂಗಳೂರಿಗೆ ನೀರು ತರುವ ವಿಚಾರದ ಬಗ್ಗೆ ಹಿರಿಯ ಅಧಿಕಾರಿಗಳು ಪ್ರಸ್ತಾಪಿಸಿದ್ದರು. ಅನುಷ್ಠಾನ ಸಾಧ್ಯತೆಯ ಬಗ್ಗೆ ಯೋಜನೆಯ ರೂಪುರೇಷೆ ಸಿದ್ದಪಡಿಸುವಂತೆ ಸಿಎಂ ಸೂಚಿಸಿದ್ದಾರೆ ಎಂದು ಹೇಳಲಾಗಿತ್ತು. 

ತುಂಗಾ ನದಿಯಿಂದ 18 ಟಿಎಂಸಿ ಅಡಿ ಹಾಗೂ ಭದ್ರಾ ನದಿಯಿಂದ 12 ಟಿಎಂಸಿ ಅಡಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವುದು ಜಲ ಸಂಪನ್ಮೂಲ ಇಲಾಖೆಯ ಚಿಂತನೆಯಾಗಿದೆ. ಈಗಾಗಲೇ ಜಲ ಸಂಪನ್ಮೂಲ ಇಲಾಖೆಯು ಬೆಂಗಳೂರಿನಿಂದ ಸುಮಾರು 425 ಕಿ.ಮೀ. ದೂರದಲ್ಲಿರುವ ಲಿಂಗನಮಕ್ಕಿ ಡ್ಯಾಂನಿಂದ 30 ಟಿಎಂಸಿಯಷ್ಟು ನೀರು ತರುವ ಯೋಜನೆ ರೂಪಿಸಿದ್ದಾರೆ. ಇದಕ್ಕಿಂತ ತುಂಗಾ-ಭದ್ರಾ ನದಿಗಳಿಂದ ನೀರು ಕೊಂಡೊಯ್ಯುವ ಯೋಜನೆ ಸುಲಭಸಾಧ್ಯ ಎಂಬುವುದು ಕೆಲ ಅಧಿಕಾರಿಗಳ ವಾದವಾಗಿದೆ. 

ಲಿಂಗನಮಕ್ಕಿ ಡ್ಯಾಂನಿಂದ ನೀರು ಕೊಂಡೊಯ್ಯುವ ಯೋಜನೆ ವ್ಯಾಪಕ ವೆಚ್ಚದಾಯಕವಾಗಿದೆ. ಪಶ್ಚಿಮಘಟ್ಟ ಅರಣ್ಯ ಪ್ರದೇಶ ಹಾದು ಹೋಗುವುದು ಸೇರಿದಂತೆ, ಹಲವು ಅಡೆತಡೆಗಳಿಂದ ಕೂಡಿದೆ. ಈ ಕಾರಣದಿಂದ ಬೆಂಗಳೂರಿನಿಂದ ಸುಮಾರು 300 ಕಿ.ಮೀ. ಆಸುಪಾಸಿನಲ್ಲಿರುವ ತುಂಗಾ ಹಾಗೂ ಭದ್ರಾ ನದಿಪಾತ್ರಗಳಿಂದ ನೀರು ಕೊಂಡೊಯ್ಯುವ ಪ್ಲ್ಯಾನ್ ಜಲ ಸಂಪನ್ಮೂಲ ಇಲಾಖೆಯದ್ದಾಗಿದೆ ಎಂದು ಹೇಳಲಾಗುತ್ತಿದೆ. 

ವಿರೋಧವೇಕೆ?: ತುಂಗಾ ಹಾಗೂ ಭದ್ರಾ ನದಿಗಳು ಮಧ್ಯ ಕರ್ನಾಟಕದ ಜೀವನಾಡಿಗಳಾಗಿವೆ. ಲಕ್ಷಾಂತರ ನಾಗರಿಕರ ಕುಡಿಯುವ ನೀರು ದಾಹ ತಣಿಸುವ ಹಾಗೂ ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸುತ್ತದೆ. ಬೆಂಗಳೂರಿಗೆ ಈ ನದಿಗಳಿಂದ ನೀರು ಕೊಂಡೊಯ್ದರೆ ಎಲ್ಲಿ ಭವಿಷ್ಯದಲ್ಲಿ ನೀರಿನ ತತ್ವಾರ ಎದುರಾಗಲಿದೆಯೋ? ಎಂಬ ಆತಂಕ ಮಧ್ಯ ಕರ್ನಾಟಕದ ಜನರದ್ದಾಗಿದೆ. 

ಒಟ್ಟಾರೆ ಊಹೆಗೂ ನಿಲುಕದ ಮಟ್ಟಕ್ಕೆ ಬೆಳೆಯುತ್ತಿರುವ ಬೆಂಗಳೂರು ಮಹಾನಗರಿಯ ದಾಹ ಇಂಗಿಸಲು ರಾಜ್ಯ ಸರ್ಕಾರ ಮಲೆನಾಡಿನ ಜೀವನದಿಗಳತ್ತ ಚಿತ್ತ ಹರಿಸಿದ್ದು, ಮುಂದಿನ ದಿನಗಳಲ್ಲಿ ಇದು ಇನ್ಯಾವ ತಿರುವು ಪಡೆದುಕೊಳ್ಳಲಿದೆ ಎಂಬುವುದನ್ನು ಕಾದು ನೋಡಬೇಕಾಗಿದೆ. 

ಬೆಂಗಳೂರು ಸಾಕುವುದಷ್ಟೆ ಸರ್ಕಾರದ ಜವಾಬ್ದಾರಿನಾ?: ರೈತ ಮುಖಂಡ ಕೆ.ಟಿ.ಗಂಗಾಧರ್ ಪ್ರಶ್ನೆ
ಬೆಂಗಳೂರು ಸಾಕುವುದಷ್ಟೆ ಸರ್ಕಾರದ ಜವಾಬ್ದಾರಿನಾ? ಮೊದಲು ಬೆಂಗಳೂರಿನ ಬೆಳವಣಿಗೆಗೆ ನಿಯಂತ್ರಣ ಹಾಕಬೇಕು. ರಾಜ್ಯದ ಇತರೆ ನಗರಗಳ ಅಭಿವೃದ್ದಿಯತ್ತ ಗಮನಹರಿಸಬೇಕು. ಈ ಮೂಲಕ ರಾಜಧಾನಿಗೆ ವಲಸೆ ಹೋಗುವುದಕ್ಕೆ ಕಡಿವಾಣ ಹಾಕಬೇಕು. ಅದು ಬಿಟ್ಟು ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಭಾವವಿದೆ ಎಂದು ಬೇಕಾಬಿಟ್ಟಿ ಯೋಜನೆ ರೂಪಿಸುವುದನ್ನು ನಿಲ್ಲಿಸಬೇಕು' ಎಂದು ರೈತ ಸಂಘದ ಹಿರಿಯ ಮುಖಂಡ ಕೆ.ಟಿ.ಗಂಗಾಧರ್ ಒತ್ತಾಯಿಸಿದ್ದಾರೆ. 

ಭಾನುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ತುಂಗಾ ಹಾಗೂ ಭದ್ರಾ ನದಿಗಳಿಂದ ಬೆಂಗಳೂರಿಗೆ ನೀರು ಪೂರೈಸುವ ಅಧಿಕಾರಿಗಳ ಚಿಂತನೆ ಕಾರ್ಯಸಾಧುವಲ್ಲ. ಅವೈಜ್ಞಾನಿಕವಾಗಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬಾರದು. ಈ ಕುರಿತಂತೆ ಯಾವುದೇ ಅಂಕಿಅಂಶ, ಯೋಜನೆ ಸಿದ್ದಪಡಿಸಿದರೂ ಅದು ಉಪಯೋಗಕ್ಕೆ ಬರುವುದಿಲ್ಲ ಎಂಬುವುದನ್ನು ಅವರು ಮನವರಿಕೆ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ. 

ತುಂಗಾ ಹಾಗೂ ಭದ್ರಾ ನದಿಗಳು, ಮಧ್ಯ ಕರ್ನಾಟಕ ಜಿಲ್ಲೆಗಳ ಕುಡಿಯುವ ನೀರು ಹಾಗೂ ಕೃಷಿಯ ಮೂಲಾಧಾರವಾಗಿದೆ. ಹಾಗೆಯೇ ಹಲವು ಕೈಗಾರಿಕೆಗಳಿಗೂ ಈ ನದಿಗಳೇ ನೀರಿನ ಕೇಂದ್ರವಾಗಿದೆ. ಈಗಾಗಲೇ ಅಗತ್ಯಕ್ಕಿಂತ ಹೆಚ್ಚಿನ ಒತ್ತಡ ಈ ಎರಡು ನದಿಗಳ ಮೇಲಿದೆ. ಇಂತಹ ಸನ್ನಿವೇಶದಲ್ಲಿ ಈ ಎರಡು ನದಿಗಳಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಚಿಂತನೆ ಸಂಪೂರ್ಣವಾಗಿ ಕಾರ್ಯಸಾಧುವಲ್ಲ. ಇದಕ್ಕೆ ಬದಲಾಗಿ ಬೆಂಗಳೂರಿನಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕು. ಕೆರೆಗಳ ಜೀರ್ಣೋದ್ದಾರಗೊಳಿಸಬೇಕು. ಇತರೆ ಶಾಶ್ವತ ಮಾರ್ಗಗಳತ್ತ ಸರ್ಕಾರ ಗಮನಹರಿಸಬೇಕು. ಯಾವುದೇ ಕಾರಣಕ್ಕೂ ತುಂಗಾ ಹಾಗೂ ಭದ್ರಾ ನದಿಗಳಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವಂತಹ ಅವೈಜ್ಞಾನಿಕ ಯೋಜನೆಗಳತ್ತ ಚಿತ್ತ ಹರಿಸಬಾರದು' ಎಂದು ಕೆ.ಟಿ.ಗಂಗಾಧರ್‍ರವರು ಆಗ್ರಹಿಸುತ್ತಾರೆ. 

Writer - ವರದಿ: ಬಿ.ರೇಣುಕೇಶ್

contributor

Editor - ವರದಿ: ಬಿ.ರೇಣುಕೇಶ್

contributor

Similar News