ಬೆತ್ತಲಾಯಿತು ಮಾನವೀಯತೆ

Update: 2019-06-17 18:31 GMT

ಪ್ರತಾಪನ ತಾಯಿ ಆಡುವ ಮಾತುಗಳನ್ನು ಕೇಳಿ ಕಣ್ಣೀರಿಡದವನು ಮನುಷ್ಯನಲ್ಲ. ಈ ಘಟನೆಯನ್ನು ಪ್ರತಿಭಟಿಸದ ಮಾನವನಿಗೆ ಮಾನವೀಯತೆ ಇಲ್ಲ. ‘‘ಅಮ್ಮಾ ಹೇಗಿದ್ದೀರಿ’’ ಎಂದು ಕೇಳಿದ್ದಕ್ಕೆ ‘‘ಪ್ರತಿ ಕ್ಷಣ ಸಾಯುವ ಆಲೋಚನೆಯನ್ನು ಮಾಡುತ್ತಿದ್ದೇನೆ. ಆದರೆ ಅವನಿಗಾಗಿ ಮತ್ತೆ ಮತ್ತೆ ಬದುಕಲು ಪ್ರಯತ್ನಿಸುತ್ತಿದ್ದೇನೆ. ಮೊಬೈಲ್, ಟಿವಿ, ಪತ್ರಿಕೆಗಳನ್ನು ನಿರ್ಬಂಧಿಸಿದ್ದೇನೆ. ಯಾವ ತಾಯಿ ತಾನೇ ವಯಸ್ಸಿಗೆ ಬಂದ ಮಗನನ್ನು ಜಗತ್ತಿನ ಮುಂದೆ ಬೆತ್ತಲಾಗಿ ನಿಲ್ಲಿಸಲು ಬಯಸುತ್ತಾಳೆ ಹೇಳಿ? ಟಿವಿಯವರು ಪದೇ ಪದೇ ಬಿತ್ತರಿಸುವ ನನ್ನ ಮಗನ ಭಾವಚಿತ್ರವನ್ನು ನೋಡಿದಾಗಲೆಲ್ಲ ಪದೇ ಪದೇ ನಾನು ಕೂಡ ಸಾವಿನ ಅಂಚಿಗೆ ಹೋಗುತ್ತೇನೆ. ಎಷ್ಟೊತ್ತಿಗೆ ಕತ್ತಲಾಗುತ್ತದೆ ಎನಿಸುತ್ತೆ. ಯಾಕೆಂದರೆ ನಾನು ಸಮಾಜಕ್ಕೆ ನನ್ನ ಮುಖವನ್ನು ತೋರಿಸಲಾಗದೆ, ಕತ್ತಲಾದಾಗ ಮಾತ್ರ ನನ್ನ ಮಗನನ್ನು ನೋಡಲು ಆಸ್ಪತ್ರೆಗೆ ಹೋಗುತ್ತೇನೆ. ಇತ್ತೀಚೆಗೆ ಬೆಳಗಿನ ಜಾವ ವಾಕ್ ಮಾಡುವುದನ್ನು ನಿರ್ಬಂಧಿಸಿದ್ದೇನೆ. ಪ್ರತಿದಿನ ಇಪ್ಪತ್ತಕ್ಕಿಂತ ಅಧಿಕ ಬಳಗದೊಂದಿಗೆ ವಾಕ್ ಮಾಡುತ್ತಿದ್ದೆ. ಅವರು ಈಗ ನನ್ನನ್ನು ಯಾಕೆ ಹೀಗಾಯಿತು ಎಂದು ಪ್ರಶ್ನೆ ಕೇಳುತ್ತಾರೆ. ನಾನದಕ್ಕೆ ಉತ್ತರಿಸಲಾರೆ. ಕೆಲವರು ನನ್ನ ಕಡೆ ಬೆರಳು ಮಾಡಿ ಇವರ ಮಗ ಅವನೇ ಎನ್ನುತ್ತಾರೆ, ಆಗ ನನ್ನ ಪ್ರಾಣ ಹೋಗುತ್ತದೆ. ದಯಮಾಡಿ ನನ್ನ ಹೆಸರು, ನನ್ನ ಮಗಳ ಹೆಸರು, ನನ್ನ ಕುಟುಂಬದವರ ಹೆಸರನ್ನು ಎಲ್ಲೂ ಪ್ರಸ್ತಾಪ ಮಾಡಬೇಡಿ. ಐಎಎಸ್ ಅಧಿಕಾರಿಯಾಗಿ ನೋಡಬೇಕಿದ್ದ ಮಗನನ್ನು ಹೀಗೆ ನೋಡಿ ನಾವು ಬದುಕುವುದಾದರೂ ಹೇಗೆ? ನಾಳೆ ಇದೆಲ್ಲವೂ ತಿಳಿದ ಮೇಲೆ ಅವನನ್ನು ಉಳಿಸಿಕೊಳ್ಳುವುದು ಹೇಗೆ? ನನ್ನ ಮಗನನ್ನು ಕಾಪಾಡಿ. ನನ್ನ ಕುಟುಂಬದ ಗೌರವವನ್ನು ಕಾಪಾಡಿ’’ ಇದು ಕೇವಲ ಆ ತಾಯಿಯ ವೇದನೆ ಮಾತ್ರವಲ್ಲದೆ. ಸಮಾಜದ ವೇದನೆಯಾಗಬೇಕಿತ್ತು ನಮ್ಮ ಅಂತಃಕರಣದ ಕೊರತೆ ಅದು ಆ ತಾಯಿಯಲ್ಲೇ ಉಳಿದಿದೆ.
ಅಮ್ಮ ತಲೆ ತಗ್ಗಿಸ ಬೇಕಾಗಿದ್ದು ನೀವು ಮಾತ್ರವಲ್ಲ, ಈ ಸಮಾಜ. ಗೌರವ ಕಡಿಮೆಯಾಗಿದ್ದು ನಿಮ್ಮ ಕುಟುಂಬಕ್ಕೆ ಮಾತ್ರ ಅಲ್ಲ, ಈ ನೆಲದ ನಾಗರಿಕತೆಗೆ. ಬೆತ್ತಲಾಗಿದ್ದು ನಿಮ್ಮ ಮಗ ಮಾತ್ರವಲ್ಲ, ಈ ನೆಲದ ಸಂಸ್ಕೃತಿ. ನಿಜವಾಗಿ ನಾಚಿಕೆಯಾಗಬೇಕಾಗಿದ್ದು ಇಲ್ಲಿನ ವಿದ್ಯಾವಂತ ವರ್ಗಕ್ಕೆ. ಇಲ್ಲಿ ನಿಜವಾದ ಅನಾಗರಿಕರೆಂದರೆ, ಇದನ್ನು ಸಮರ್ಥಿಸಿ ಕೊಳ್ಳಲು ಹೊರಟಿರುವವರು. ಇಲ್ಲಿನ ನಿಜವಾದ ಕ್ರೂರಿಗಳೆಂದರೆ ಈ ಘಟನೆಯ ಬಗ್ಗೆ ಮಾತನಾಡದೇ ಇರುವವರು. ಇದನ್ನು ಸಹಿಸಿಕೊಂಡು ಬದುಕುವವರೇ ಇಲ್ಲಿನ ನಿಜವಾದ ಗುಲಾಮರು. ಬರಿಮೈಯಲ್ಲಿ ಬಂದವನಿಗೆ ಬಟ್ಟೆ ನೀಡುವುದನ್ನು ಬಿಟ್ಟು ಬಟ್ಟೆಗೆ ಬದಲಾಗಿ ಪೆಟ್ಟು ನೀಡಿದವರೇ, ಇಲ್ಲಿ ಮಾನಸಿಕ ಹುಚ್ಚರು.
 ನೀವು ನಿಮ್ಮ ಮಗನಿಗೆ ಒಂದು ಮಾತನ್ನು ಹೇಳಿ. ಚರಿತ್ರೆಯನ್ನು ಬದಲಿಸುವ ಎಂದು. ನಾಳೆ ನೀನೇ ಒಂದು ಚರಿತ್ರೆಯಾಗು ಎಂದು. ಆ ಚರಿತ್ರೆ ಮರುಕಳಿಸಬೇಕಾದರೆ ನಿಮ್ಮ ಮಗ ಮತ್ತೆ ಐಎಎಸ್ ಆಗುವುದು. ಆ ಆಶಯಕ್ಕೆ ನೀವು ನೀರೆರೆಯುವುದು. ಧೃತಿಗೆಡದಿರಿ. ಸಮಾಜವನ್ನು ಓದದ ಯಾರ್ಯಾರೊ ಐಎಎಸ್ ಆಗುವುದಕ್ಕಿಂತ ಪ್ರತಾಪ್ ಐಎಎಸ್ ಆದರೆ, ಈಗ ಬೆತ್ತಲುಗೊಂಡ ಸಮಾಜಕ್ಕೆ ಕನಿಷ್ಠ ಬಟ್ಟೆಯನ್ನು ತೊಡಿಸಲು ಮುಂದಾಗಬಹುದು. ಮಾನಸಿಕ ಹುಚ್ಚರು ಯಾರು ಎಂದು ದೃಢೀಕರಿಸಬಹುದು.
ಪ್ರತಾಪ್‌ಗೆ ಅಂತಹ ಶಕ್ತಿ ಇದೆ. ಆತ ಕಳೆದ ಐಎಎಸ್ ಪ್ರಿಲಿಮ್ಸ್ ನಲ್ಲಿ ಎರಡು ಅಂಕಗಳಿಂದ ವಂಚಿತನಾಗಿ ಮುಖ್ಯ ಪರೀಕ್ಷೆಗೆ ಕೂರುವ ಅವಕಾಶವನ್ನು ಕಳೆದುಕೊಂಡಿದ್ದ. ಎಂಬಿಎ ಥರ್ಡ್ ಸೆಮ್‌ಗೆ ಸಿಕ್ಕಿಂ ಯೂನಿವರ್ಸಿಟಿಗೆ ಸೀಟನ್ನು ಗಿಟ್ಟಿಸಿಕೊಂಡು, ಸಿಕ್ಕಿಂಗೆ ಹೊರಡಲು ತಯಾರಿ ನಡೆಸಿದ್ದ. ಹೊಸದಿಲ್ಲಿಯಲ್ಲಿರುವ ಪ್ರತಿಷ್ಠಿತ ಐಎಎಸ್ ತರಬೇತಿ ಸಂಸ್ಥೆಯಾದ ವಾಜಿರಾಂ ಸಂಸ್ಥೆಯಲ್ಲಿ ಒಂದು ವರ್ಷ ಕಠಿಣ ತರಬೇತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ. ಅವನೊಬ್ಬ ಬಲಿಷ್ಠವಾದ ಕ್ವಿಜ್ ಕಾಂಪಿಟೇಟರ್, ತನ್ನ ವಿದ್ಯಾರ್ಥಿ ಜೀವನದಲ್ಲಿ ನೂರಾರು ಸರ್ಟಿಫಿಕೆಟ್, ಮೆಡಲ್‌ಗಳನ್ನು ಪಡೆದುಕೊಂಡಿದ್ದಾನೆ. ಉತ್ತಮ ವಾಗ್ಮಿ ಕೂಡಾ. ದಿಲ್ಲಿಯ ತರಬೇತಿ ಸಂಸ್ಥೆಯೊಂದು ಮುಂದಿನ ತಿಂಗಳಲ್ಲಿ ದಿಲ್ಲಿಗೆ ಬಂದು ತರಗತಿಗಳನ್ನು ತೆಗೆದುಕೊಳ್ಳುವಂತೆ ಆತನಿಗೆ ಆಹ್ವಾನ ನೀಡಿತ್ತು. ಈ ಪ್ರಿಲಿಮ್ಸ್ ಮುಗಿಸಿ ಆತ ದಿಲ್ಲಿಗೆ ತೆರಳಲು ಸಿದ್ಧತೆ ನಡೆಸಿದ್ದ. ಇವೆಲ್ಲದಕ್ಕೂ ಮೊದಲು ಆತ ಮಂಡ್ಯದ ಪಲ್ಯೂಷನ್ ಕಂಟ್ರೋಲ್ ಬೋರ್ಡ್ ಇಲಾಖೆಯಲ್ಲಿ ಎಸ್‌ಡಿಎ ಆಗಿ ತನ್ನ ಕರ್ತವ್ಯ ನಿರ್ವಹಿಸಿದ್ದ. ಇದಕ್ಕಿಂತ ಹೆಚ್ಚಿನದನ್ನು ಸಾಧಿಸಬೇಕೆಂಬ ಛಲದಿಂದ ಸರಕಾರಿ ನೌಕರಿಗೆ ರಾಜೀನಾಮೆ ನೀಡಿ ಬಂದಿದ್ದ. ಮನೆಯಲ್ಲಿ ದಿನಕ್ಕೆ ಹತ್ತು ಗಂಟೆಗಳಿಗಿಂತ ಹೆಚ್ಚಿನ ಅಧ್ಯಯನ ನಡೆಸುತ್ತಿದ್ದ. ಈಗ ನೀವೇ ಹೇಳಿ ಆತ ಮಾನಸಿಕ ಅಸ್ವಸ್ಥನೇ?
 ಆಟಿಸಂ ಇದರ ಅರ್ಥ ಇಂಟಲೆಕ್ಚುವಲ್ ಡಿಸೆಬಿಲಿಟಿ. ಆತ ಮಾನಸಿಕ ಅಸ್ವಸ್ಥನಲ್ಲ. ಅವನೂ ಕೂಡ ಸರಕಾರಿ ಸೇವೆಗೆ ಅರ್ಹ. ಐಎಎಸ್ ಪರೀಕ್ಷೆಗೆ ಕೂರಲು ಅರ್ಹ. ಈ ಸರ್ಟಿಫಿಕೇಟ್ ಇದ್ದರೆ ಐಎಎಸ್ ಪರೀಕ್ಷೆಗೆ ಕೂರಲು ನಾಲ್ಕು ವರ್ಷಗಳ ಸಡಿಲಿಕೆ ಇದೆ. ಅದೊಂದು ಖಿನ್ನತೆ ಮಾತ್ರ ಮಾನಸಿಕ ಅಸ್ವಸ್ಥತೆ ಅಲ್ಲ. ಅಂದು ಅವರ ತಂದೆ ಪೊಲೀಸ್ ಠಾಣೆಗೆ ಸಲ್ಲಿಸದ್ದು ಇದೇ ಸರ್ಟಿಫಿಕೇಟ್.
ಅವರ ತಂದೆಯ ಪ್ರಕಾರ ಅವನೊಬ್ಬ ಸ್ವಾಮಿ ಭಕ್ತ ಆಂಜನೇಯನ ಭಕ್ತ. ವಿಷ್ಣು ಸಹಸ್ರನಾಮದಂತಹ ಕಠಿಣ ಶ್ಲೋಕಗಳನ್ನು ಅಭ್ಯಾಸ ಮಾಡುತ್ತಿದ್ದ. ಆಧ್ಯಾತ್ಮದ ಒಲವಿತ್ತು. ಇಷ್ಟೆಲ್ಲ ಇದ್ದ ಪ್ರತಾಪ್‌ಗೆ ಯಾಕೆ ಹೀಗಾಯ್ತು. ಅದೆಲ್ಲ ನಿಖರವಾದ ತನಿಖೆಯಿಂದಲೇ ತಿಳಿಯಲಿ.
 ಘಟನೆ ಸ್ವಯಂ ಪ್ರೇರಿತವೋ, ಆಕಸ್ಮಿಕವೋ, ಆದರೆ ಘಟನೆಯ ನಂತರ ನಡೆದ ಕ್ರೌರ್ಯ ಮಾತ್ರ ಮನುಷ್ಯತ್ವದ ಆಚೆಗಿನ ಹೇಯಾ ಕೃತ್ಯ. ಅದಾದ ನಂತರ ಈ ಘಟನೆಗೆ ಜಾತಿಯ ಬಣ್ಣ ಬಳಿದು, ಪ್ರತಾಪ್ ಒಬ್ಬ ಮನುಷ್ಯ ಅನ್ನುವುದನ್ನು ಮರೆತು ದಲಿತ ಮನುಷ್ಯನ ಪಟ್ಟಕಟ್ಟಿ ಚಳವಳಿಯನ್ನು ದಲಿತಕರಣಗೊಳಿಸಿ ಏಕಾಂಗಿಯಾಗಿಸಿದ್ದು ಸಾಮಾಜಿಕ ಕ್ರೌರ್ಯ. ದಲಿತ ಎಂದಾಕ್ಷಣ ಸಮಾಜದ ಬಹುದೊಡ್ಡ ವರ್ಗ ಬಾಯಿ ಮುಚ್ಚಿಕೊಂಡು ಮೌನವಾಗಿದ್ದದ್ದಂತೂ, ಬೆತ್ತಲಾದ ಘಟನೆಗಿಂತ ಕ್ರೂರ. ಅಮಾನುಷದ ಕ್ರೂರ ದರ್ಶನ.
ಆತ ಅಸ್ಪೃಶ್ಯ ಎಂದು ತಿಳಿಯದೆಯೂ ಇರಬಹುದು. ಆದರೆ ಆತನನ್ನು ಕಟ್ಟಿ ಹಾಕಲು ಬಳಸಿಕೊಂಡದ್ದು ದಲಿತನನ್ನು. ಆತನನ್ನು ಕರೆದುಕೊಂಡು ಹೋದವನು ಕೂಡ ದಲಿತ.
ಬೆತ್ತಲೆ ಇರಬಹುದು, ಆತ ಅಸ್ಪೃಶ್ಯನೇ ಇರಬಹುದು, ನಿಮ್ಮ ಪ್ರಕಾರ ಆತ ಮಾನಸಿಕ ಅಸ್ವಸ್ಥನೂ ಇರಬಹುದು. ಆದರೆ ಆತ ಮನುಷ್ಯನಲ್ಲವೇ? ಆ ಮನುಷ್ಯನನ್ನು ಜಾತಿ-ಧರ್ಮದ ಆಧಾರದ ಮೇಲಲ್ಲದೆ, ಮನುಷ್ಯ ಧರ್ಮದಿಂದ ಒಂದು ಕ್ಷಣ ವರ್ತಿಸದಿದ್ದರೆ ಇದೆಲ್ಲ ಸಂಭವಿಸುತ್ತಿರಲಿಲ್ಲ.
 ಈತ ದಲಿತನಲ್ಲದೆ ಯಾವುದೇ ಜಾತಿ - ಧರ್ಮದ ವ್ಯಕ್ತಿಯಾಗಿದ್ದರೂ ಕೂಡ ಇದು ಖಂಡನೀಯವೇ ಅಮಾನುಷವೇ. ದ್ರಾವಿಡ ನಾಡಿನಲ್ಲಿ ಇದು ಸಂಭವಿಸಬಾರದಿತ್ತು. ಬಿಹಾರ ಉತ್ತರ ಪ್ರದೇಶದಂತೆ ನಮ್ಮ ನಾಡು ಆಗಬಾರದಿತ್ತು. ಇದು ಬಸವಣ್ಣ ಬಾಳಿದ ಮಣ್ಣಿಗೆ ಅಪಚಾರ.
 ನ್ಯೂಸ್ ಒನ್ ಚರ್ಚೆಯಲ್ಲಿ ಈ ವಿಚಾರವನ್ನು ಸಮರ್ಥಿಸಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರನ್ನು, ‘‘ನೀವೇಕೆ ದಲಿತ ವ್ಯಕ್ತಿಯನ್ನು ಕರೆದು ಪ್ರತಾಪನನ್ನು ಕೈಕಟ್ಟಿಸಿದ್ದೀರಿ?’’ ಎಂದು ಪ್ರಶ್ನೆ ಕೇಳಿದ್ದಕ್ಕೆ, ಅವರು ಉತ್ತರಿಸುತ್ತ, ‘‘ಆ ದಲಿತ ವ್ಯಕ್ತಿ ದಷ್ಟಪುಷ್ಟವಾಗಿದ್ದ ಕಾರಣ ನಾವು ಹಾಗೆ ಮಾಡಿದ್ದೆವು’’ ಎಂದರು. ಅತ್ಯಂತ ಕನಿಷ್ಠ ಕೆಲಸಗಳನ್ನು ಮಾಡುವುದಕ್ಕೆ ದಲಿತರನ್ನು ಬಳಸಿಕೊಳ್ಳುವುದರ ಸಂಕೇತವೇ ಇದು ಇರಬಹುದು. ಅದೆಂತಹ ಅಮಾನುಷ ಪರಿಸ್ಥಿತಿಯಲ್ಲೂ ಒಬ್ಬ ದಲಿತನ ಕೈ ಕಟ್ಟಿಹಾಕಲು ಮತ್ತೊಬ್ಬ ದಲಿತ ಬೇಕೇ ಬೇಕು. ಇದು ಇವತ್ತಿನ ಸಮಾಜದ ಪರಿಸ್ಥಿತಿ.
ನಡು ರಸ್ತೆಯಲ್ಲಿ ಪ್ರತಾಪ್‌ನನ್ನು ಎಳೆದೊಯ್ಯುತ್ತಿದ್ದ ದೃಶ್ಯವನ್ನು ಪದೇ ಪದೇ ನೋಡಿ ಅಮಾನವೀಯತೆಯೊಳಗೆ ಮಾನವೀಯ ಮೌಲ್ಯವನ್ನು ತೋರುತ್ತಿದ್ದ ಎಂದೋ ನಡೆದ ನನ್ನ ಬಾಲ್ಯದ ಘಟನೆ ನನಗೆ ನೆನಪಾಯಿತು.
ಆ ದಿನಗಳಲ್ಲಿ ನನ್ನ ಕಣ್ಣಿಗೆ ಬಿದ್ದ ಕೆಲವು ಕ್ರೂರ ಘಟನೆಗಳನ್ನು ನಾನು ಇಲ್ಲಿ ನೆನೆಯುತ್ತಿದ್ದೇನೆ. ಆ ಕಾಲಕ್ಕೆ ಊರಿನ ಯಾವುದೇ ಬೀದಿಯಲ್ಲಿ ನಾಯಿ ಸತ್ತು ಬಿದ್ದರೆ ಅದನ್ನು ಎಳೆದು, ಊರಿನ ಹೊರಗೆ ಹಾಕುವುದು ನಮ್ಮ ಪಕ್ಕದ ಮನೆಯ ರಾಮಯ್ಯನ ಕೆಲಸವಾಗಿತ್ತು. ಆತ ಹಗ್ಗದಿಂದ ನಾಯಿಯ ಕುತ್ತಿಗೆಯನ್ನು ಬಿಗಿದು ಎಳೆದು ಸಾಗಿಸುತ್ತಿದ್ದ. ಕಲ್ಲು ಮಣ್ಣುಗಳ ತುರಿ ರಸ್ತೆಯಲ್ಲಿ ನಾಯಿಯನ್ನು ಎಳೆಯುವಾಗ ಅದರ ಚರ್ಮ ಕಿತ್ತು ರಕ್ತ ಬಾರದಿರಲಿ ಎಂದು, ನಾಯಿಯ ದೇಹದ ತಳ ಭಾಗಕ್ಕೆ ಹಳೆಯ ಗೋಣಿ ಚೀಲ ಅಥವಾ ಸೊಪ್ಪನ್ನು ಕಟ್ಟಿ ನಾಯಿಯ ದೇಹದಿಂದ ಒಂದು ಹನಿ ರಕ್ತ ಹೊರ ಬಾರದಂತೆ ನೋಡಿಕೊಳ್ಳುತ್ತಿದ್ದ.
ಆದರೆ ಅವತ್ತೊಂದು ದಿನ ನಾಯಿ ಸತ್ತಾಗ ರಾಮಯ್ಯ ಊರಿನಲ್ಲಿರಲಿಲ್ಲ. ಎರಡು ಮೂರು ದಿನ ಕಳೆದು ಊರೆಲ್ಲ ದುರ್ವಾಸನೆ ಬಂದಾಗಲೂ, ಆ ನಾಯಿಯನ್ನು ಹೊರ ಹಾಕಲು ಯಾರೂ ಮನಸ್ಸು ಮಾಡಲಿಲ್ಲ. ಊರಿನ ಜನ ನಾಯಿಯನ್ನು ಹೊರಹಾಕಲು ಯೋಚಿಸುವುದನ್ನು ಬಿಟ್ಟು ರಾಮಯ್ಯನನ್ನು ತೆಗಳಲು ಆರಂಭಿಸಿದರು. ರಾಮಯ್ಯ ಆ ಬೆಳಗ್ಗೆ ಬಂದ. ಕೆಲವು ಪುಂಡರ ಗುಂಪೊಂದು ರಾಮಯ್ಯನ ಮೇಲೆ ಹಲ್ಲೆ ಮಾಡಿ ಆತನ ದೇಹದಿಂದ ರಕ್ತವು ಹೊರ ಬಂತು. ಆ ರಕ್ತ ಸುರಿಯುವ ದೇಹದಲ್ಲೂ ರಾಮಯ್ಯ ತನ್ನ ಕರ್ತವ್ಯವನ್ನು ಮಾಡುತ್ತಾ ಸತ್ತ ನಾಯಿಯ ದೇಹಕ್ಕೆ ಗೋಣಿಚೀಲವನ್ನು ಸುತ್ತಿ ನಾಯಿಯ ದೇಹದಿಂದ ರಕ್ತ ಹೊರಬಾರದಂತೆ ನೋಡಿಕೊಂಡು ನಾಯಿಯನ್ನು ಎಳೆದುಕೊಂಡ ಹೋದ. ಬುದ್ಧಿ ಬಂದ ಮೇಲೆ ಆತನನ್ನು ನಾನು ಇದರ ಬಗ್ಗೆ ಕೇಳಿದೆ. ಆತ ಉತ್ತರಿಸುತ್ತ ‘‘ಜೀವ ಅಂದ್ರ ಎಲ್ಲವೂ ಒಂದೆಯಾ. ದೇಹ ಅಂದ್ರ ಎಲ್ಲರ್ದು ಒಂದೆಯಾ. ಇದನ್ನ ನಮ್ಮ ಅಪ್ಪಹೇಳಿ ಕಲ್ಸಿದ್ದು. ನಮಗೆ ಏನಾದ್ರು ಆಗಲಿ ಮಾತ್ ಬರದೆ ಇರೊ ಪ್ರಾಣಿ ಅದು’’ ಅಂದ. ಬಹುಶಃ ಮಾನವೀಯತೆ ಎಂದರೆ ಇದೇ ಇರಬಹುದು.
ಇಲ್ಲಿ ರಾಮಯ್ಯನ ಮಾನವೀಯತೆ ಆ ದಲಿತ ವ್ಯಕ್ತಿಗೆ ಇದ್ದಿದ್ದರೆ, ಪ್ರತಾಪನನ್ನು ಬೆತ್ತಲಾಗಿ ಎಳೆದೊಯ್ಯುತ್ತಿರಲಿಲ್ಲ. ಹಲ್ಲೆ ಮಾಡಿದ ಜನಕ್ಕೆ ಸ್ವಲ್ಪಮಾನವೀಯತೆ ಇದ್ದಿದ್ದರೆ ಪ್ರತಾಪನ ದೇಹದಲ್ಲಿ ರಕ್ತ ಬರುತ್ತಿರಲಿಲ್ಲ. ನಾವು ನಿಜವಾಗಿ ಜಾತ್ಯತೀತತೆಯ ಭಾರತೀಯರೇ ಆಗಿದ್ದರೆ, ಪ್ರತಾಪ್ ದಲಿತ ಮನುಷ್ಯ ಆಗುತ್ತಿರಲಿಲ್ಲ. ಆತ ಭಾರತೀಯ ಮನುಷ್ಯನಾಗುತ್ತಿದ್ದ.

Writer - ಮಲ್ಕುಂಡಿ ಮಹದೇವಸ್ವಾಮಿ

contributor

Editor - ಮಲ್ಕುಂಡಿ ಮಹದೇವಸ್ವಾಮಿ

contributor

Similar News

ಜಗದಗಲ
ಜಗ ದಗಲ