ಹಿರಿಯರಿಗೆಲ್ಲಿ ನೆಲೆ?

Update: 2019-06-18 18:37 GMT

ವೃದ್ಧರ ಪಾಲನೆಯಲ್ಲಿ ಕುಟುಂಬವು ಅಪೇಕ್ಷಣೀಯ ಪಾತ್ರವನ್ನು ವಹಿಸಬೇಕಾದ ಅಗತ್ಯವಿದೆಯೇ ಹೊರತು ಅವರನ್ನು ತೊರೆಯುವುದಲ್ಲ. ಭವಿಷ್ಯದಲ್ಲಿ ತಮಗೂ ವೃದ್ಧಾಶ್ರಮಗಳು ಕಾಯುತ್ತಿವೆಯೆಂಬುದನ್ನು ಹಾಲಿ ಯುವಜನಾಂಗ ಚೆನ್ನಾಗಿ ಅರಿತುಕೊಳ್ಳಬೇಕಾಗಿದೆ.

ಹೆಲ್ಪೇಜ್ ಇಂಡಿಯಾ ಸಂಸ್ಥೆಯು ನಡೆಸಿದ ‘‘ಭಾರತದಲ್ಲಿ ವೃದ್ಧರಿಗೆ ಕಿರುಕುಳ: ಪಾಲಿಸುವಿಕೆಯಲ್ಲಿ ಕುಟುಂಬದ ಪಾತ್ರ- ಸವಾಲುಗಳು ಹಾಗೂ ಉತ್ತರಗಳು’’ (Elder Abuse in India:Role of family in caregiving-challenges and responses ) ಅಧ್ಯಯನ ವರದಿಯು ನಮ್ಮ ಸಮಾಜದಲ್ಲಿ ವೃದ್ಧರ ಪಾಲನೆಯ ಸ್ಥಿತಿಗತಿ ಬಗ್ಗೆ ಕೆಲವೊಂದು ವಾಸ್ತವಾಂಶಗಳನ್ನು ನಮ್ಮ ಮುಂದಿಡುತ್ತದೆ. ವೃದ್ಧರನ್ನು ಪಾಲಿಸುವವರ ಪೈಕಿ ಶೇ.35ರಷ್ಟು ಮಂದಿ, ವೃದ್ಧರನ್ನು ನೋಡಿಕೊಳ್ಳುತ್ತಿರುವ ಬಗ್ಗೆ ತಮಗೆಂದೂ ಸಂತಸವಿಲ್ಲವೆಂದು ಹೇಳಿಕೊಂಡಿದ್ದಾರೆ. ವೃದ್ಧರು ಮುಖ್ಯವಾಗಿ ಪುತ್ರ, ಸೊಸೆ, ಪುತ್ರಿ ಹಾಗೂ ಅಳಿಯನಿಂದ ಪಾಲನೆಗೊಳಗಾಗುತ್ತಾರೆ.
ನಮ್ಮ ಇಳಿ ವಯಸ್ಸಿನ ಪಾಲಕರ ಬಗ್ಗೆ ನಮಗಿರುವ ಹೊಣೆಗಾರಿಕೆಗಳ ಕುರಿತು ಇಂತಹ ವರದಿಗಳು ಕೆಲವೊಂದು ಮೂಲಭೂತ ಪ್ರಶ್ನೆಗಳನ್ನು ಮುಂದಿಡುತ್ತವೆ.
ಜೂನ್ 14ರಂದು ಭುವನೇಶ್ವರ್‌ನಲ್ಲಿ ಈ ವರದಿಯನ್ನು ಬಿಡುಗಡೆಗೊಳಿಸಲಾಗಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ಇತರ ಪ್ರಮುಖರ ನಡುವೆ ನಾನು ಕೂಡಾ ಭಾಷಣಕಾರನಾಗಿದ್ದೆ. ಸಾಮಾಜಿಕ ಮೌಲ್ಯ ವ್ಯವಸ್ಥೆಯ ನಶಿಸುವಿಕೆಯಿಂದಲೇ ಹಿರಿಯರ ಬಗ್ಗೆ ನಿರ್ಲಕ್ಷ ಹೆಚ್ಚುತ್ತಿದೆ ಎಂದು ಹೆಚ್ಚಿನ ಭಾಷಣಕಾರರು ಅಭಿಪ್ರಾಯಿಸಿದ್ದರು. ನಾನಿದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಇದರ ಹಿಂದಿರುವ ಆಳವಾಗಿ ಬೇರೂರಿರುವ ಕಾರಣಗಳನ್ನು ಕೂಡಾ ವಿಶ್ಲೇಷಿಸಬೇಕಾದ ಅಗತ್ಯವಿದೆ.


  ಇದಕ್ಕಾಗಿ ಮೊದಲು ನಾವು ಬ್ರಿಟಿಷ್ ಆಡಳಿತ ಯುಗದ ಬಗ್ಗೆ ದೃಷ್ಟಿ ಹಾಯಿಸೋಣ. ಆಗಿನ ಕಾಲಕ್ಕೂ, ಪ್ರಸಕ್ತ ಸನ್ನಿವೇಶದ ನಡುವೆ ಹೋಲಿಕೆ ಮಾಡುವ. ದಾದಾಬಾಯಿ ನವರೋಜಿ ಅವರ ‘ಸಂಪತ್ತಿನ ಬತ್ತುವಿಕೆ ಸಿದ್ಧಾಂತ’ವು ಭಾರತದ ಸಂಪತ್ತು ಯಾವೆಲ್ಲಾ ರೀತಿಯಲ್ಲಿ ಬ್ರಿಟನ್‌ಗೆ ಸೋರಿಹೋಯಿತು ಎಂಬ ಬಗ್ಗೆ ಚರ್ಚಿಸಿದೆ. ಖ್ಯಾತ ಇತಿಹಾಸತಜ್ಞ ಬಿಪಿನ್ ಚಂದ್ರ ಅವರು ಭಾರತದಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆ ಛಿದ್ರಗೊಂಡಿರುವುದರ ಹಿಂದೆ ಸುಲಿಗೆಕೋರ ಆರ್ಥಿಕ ವ್ಯವಸ್ಥೆಯ ಪರಿಣಾಮದ ಬಗ್ಗೆ ವಿಶ್ಲೇಷಿಸಿದ್ದರು.
ಬ್ರಿಟಿಷರು ಜಮೀನಿನ ಮೇಲೆ ವಿಪರೀತವಾಗಿ ತೆರಿಗೆಯನ್ನು ಹೇರುತ್ತಿದ್ದರು. ಇದರಿಂದಾಗಿ ಕೃಷಿಯು ರೈತರಿಗೆ ಲಾಭದಾಯಕವಾಗದೆ ಹೋಯಿತು. ಈ ವ್ಯವಸ್ಥೆಯಲ್ಲಿ ಬ್ರಿಟಿಷರು ದೊಡ್ಡ ಜಮೀನುದಾರರಿಗೆ ವಿಶಾಲವಾದ ಪ್ರದೇಶವನ್ನು ಉಂಬಳಿಯಾಗಿ ನೀಡುತ್ತಿದ್ದರು. ಅವರು ಅದನ್ನು ಹಿಡುವಳಿಗಳನ್ನಾಗಿ ಮಾಡಿ ಸಣ್ಣ ರೈತರಿಗೆ ಗೇಣಿಗೆ ನೀಡುತ್ತಿದ್ದರು. ಈ ಜಮೀನುಗಳಲ್ಲಿ ಉತ್ತನೆ, ಬಿತ್ತನೆ ಮಾಡುತ್ತಿದ್ದವರು ಸಣ್ಣ ರೈತರಾಗಿದ್ದರು. ಬ್ರಿಟಿಷರು ಜಮೀನಿನ ಮೇಲೆ ಅಪಾರ ಪ್ರಮಾಣದ ತೆರಿಗೆಗಳನ್ನು ಹೇರುತ್ತಿದ್ದರು. ಇದರಿಂದಾಗಿ ತೆರಿಗೆ ಪಾವತಿಸುವ ಹೊರೆಯು ಬಡರೈತನ ಮೇಲೆ ಬೀಳುತ್ತಿತ್ತು. ತೆರಿಗೆ ಪಾವತಿಸುವಲ್ಲಿ ಉಂಟಾಗುವ ಅಸಾಮರ್ಥ್ಯವು ಕುಟುಂಬದ ಸದಸ್ಯರ ನಡುವೆ ಭಿನ್ನಮತಕ್ಕೆ ಕಾರಣವಾಗುತ್ತಿತ್ತು ಹಾಗೂ ಕ್ರಮೇಣ ಅವಿಭಕ್ತ ಕುಟುಂಬ ಪದ್ಧತಿ ವ್ಯವಸ್ಥೆಯು ಶಿಥಿಲಗೊಳ್ಳುವುದಕ್ಕೆ ನಾಂದಿ ಹಾಡಿತು.
ಸುಲಿಗೆಕೋರ ಅರ್ಥ ವ್ಯವಸ್ಥೆ
ಆರ್ಥಿಕ ವ್ಯವಸ್ಥೆಯ ಬದಲಾವಣೆ ಹಾಗೂ ಸಾಮಾಜಿಕ ಸಂರಚನೆಯ ಮೇಲೆ ಅದರ ಪರಿಣಾಮದ ಬಗ್ಗೆ ವಿಶ್ಲೇಷಣೆ ನಡೆಸೋಣ. ಹಿಂದೆಲ್ಲಾ ಮಿಶ್ರ ಅರ್ಥ ವ್ಯವಸ್ಥೆಯು ಕಡಿಮೆ ಆದಾಯವಿರುವ ಜನರಿಗೆ ಸ್ವಾವಲಂಬನೆಯಿಂದ ಬದುಕು ಸಾಗಿಸಲು ನೆರವಾಗುತ್ತಿತ್ತು ಹಾಗೂ ಅವರ ಆಕಾಂಕ್ಷೆಗಳು ಕೂಡಾ ಸೀಮಿತವಾಗಿದ್ದವು. ಈ ವ್ಯವಸ್ಥೆಯ ಬದಲಿಗೆ ಬಂಡವಾಳಶಾಹಿ ದುರಾಸೆಯಿಂದ ಪ್ರೇರಿತವಾದ ಉದಾರವಾದಿ ಅರ್ಥ ವ್ಯವಸ್ಥೆಯು ರೂಢಿಗೆ ಬಂದಿತು. ಇದಕ್ಕೂ ಮುನ್ನ ಜನರು ಕಡಿಮೆ ದುಡಿಮೆ ಮಾಡುತ್ತಿದ್ದರು ಹಾಗೂ ಹಿರಿಯರು ಸೇರಿದಂತೆ ಕುಟುಂಬದ ಸದಸ್ಯರ ಜೊತೆಗಿರಲು ಅವರಿಗೆ ಸಮಯ ದೊರೆಯುತ್ತಿತ್ತು. ಕುಟುಂಬ ವ್ಯವಸ್ಥೆಯು ಒಂದು ಸಂಸ್ಥೆಯಂತೆ ದೃಢವಾಗಿತ್ತು. ಆದರೆ ನೂತನ ಆರ್ಥಿಕ ವ್ಯವಸ್ಥೆಯು ಜನರ ಮೇಲೆ ಗ್ರಾಹಕವಾದವನ್ನು ಹೇರಿತು ಹಾಗೂ ಆರ್ಥಿಕತೆಯ ವೆಚ್ಚವು ಆಘಾತಕಾರಿಯಾದ ಪ್ರಮಾಣದಲ್ಲಿ ಏರಿತು. ಒಡಿಶಾ ರಾಜಧಾನಿ ಭುವನೇಶ್ವರದಂತಹ 2ನೇ ದರ್ಜೆಯ ನಗರದಲ್ಲಿ 3 ಬಿಎಚ್‌ಕೆ ಫ್ಲಾಟ್‌ನ ಮೌಲ್ಯ ಈಗ 60 ಲಕ್ಷ ರೂ.ಗಳಿಂದ 1.2 ಕೋಟಿ ರೂ.ಗಳಾಗಿವೆ. ಇನ್ನು ದಿಲ್ಲಿ ಹಾಗೂ ಮುಂಬೈನಂತಹ ಬೃಹನ್ನಗರಗಳಲ್ಲಿ ಫ್ಲಾಟ್‌ನ ಮೌಲ್ಯ ಎಷ್ಟಿರಬಹುದೆಂಬುದನ್ನು ಯಾರು ಕೂಡಾ ಊಹಿಸಬಹುದಾಗಿದೆ. ದೇಶಾದ್ಯಂತ ಮಕ್ಕಳ ಶಿಕ್ಷಣದ ವೆಚ್ಚವು ಮಿತಿಮೀರಿ ಏರಿಕೆಯಾಗುತ್ತಿದೆ. ಹೀಗಿರುವಾಗ ಜನರು ತಮ್ಮ ಮೂಲಭೂತ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಹೆಚ್ಚು ಹೆಚ್ಚು ಸಂಪಾದಿಸಲು ತೊಡಗಿಸಿಕೊಳ್ಳುವುದರಲ್ಲಿ ಅಚ್ಚರಿಯೇನಿಲ್ಲ. ಹೀಗೆ ನೂತನ ವ್ಯವಸ್ಥೆಯು ಜನರನ್ನು ವೃತ್ತಿ ಕೇಂದ್ರೀತರನ್ನಾಗಿ ರೂಪಿಸಿತು.
ನನ್ನ ಸ್ನೇಹಿತರೊಬ್ಬರು ಅಮೆರಿಕದಲ್ಲಿ ಉನ್ನತ ದರ್ಜೆಯ ಸಾಫ್ಟ್‌ವೇರ್ ವೃತ್ತಿಪರರಾಗಿದ್ದರು. ಆತ ತನ್ನ ಗೋಳಿನ ಕಥೆಯನ್ನು ಹೀಗೆ ವಿವರಿಸುತ್ತಾರೆ. ‘‘ಕೆಲಸದ ದಿನಗಳಲ್ಲಿ ನನ್ನ ದಿನಚರಿಯು ಬೆಳಗ್ಗೆ ಏಳು ಗಂಟೆಗೆ ಆರಂಭಗೊಂಡು ರಾತ್ರಿ 1 ಗಂಟೆಯತನಕವೂ ಮುಂದುರಿಯುತ್ತದೆ’’. ಇದು ಕೇವಲ ಅವರೊಬ್ಬರದೇ ಕಥೆಯಲ್ಲ. ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಕಥೆ ಇದೇ ರೀತಿಯದ್ದಾಗಿದೆ. ಈ ಪ್ರಕ್ರಿಯೆಯಲ್ಲಿ, ತಮ್ಮ ಕುಟುಂಬವನ್ನು ಹಾಗೂ ವೃದ್ಧಪಾಲಕರ ಜೊತೆಗಿರಲು ಅವರಿಗೆಲ್ಲಿ ಸಮಯ ದೊರೆಯುತ್ತದೆ?. ಇಂತಹ ಅಧಿಕ ವೆಚ್ಚದ ಆರ್ಥಿಕತೆಯಲ್ಲಿ ತಮ್ಮ ಪಾಲಕರ ಬಗ್ಗೆ ಕಾಳಜಿ ವಹಿಸುವ ಇಚ್ಛೆ ಯಾರಿಗಿದ್ದೀತು.
 ಆದರೆ ಈ ವ್ಯವಸ್ಥೆಯಿಂದ ಯಾರು ಪ್ರಯೋಜನ ಪಡೆಯುತ್ತಿದ್ದಾರೆಂಬುದೇ ಈಗ ಇರುವ ಪ್ರಶ್ನೆಯಾಗಿದೆ. ಘನತೆಯ ಬದುಕನ್ನು ಗಳಿಸಲು ದಿನರಾತ್ರಿ ದುಡಿಯುವ ವ್ಯಕ್ತಿಯ ಬದುಕು ಅಂತಿಮವಾಗಿ ಹೋರಾಟದಲ್ಲೇ ಕಳೆಯುತ್ತದೆ. ಮೇಲ್ಮುಖವಾದ ಸಂಪತ್ತಿನ ಹರಿವು ಇರುವಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆಯು ವೃದ್ಧಿಯಾಗುತ್ತದೆ. ಶ್ರೀಮಂತರು ಹಾಗೂ ಬಡವರ ನಡುವಿನ ಅಂತರ ಹೆಚ್ಚುತ್ತಿರುವ ಈ ದೇಶದಲ್ಲಿ ಅಸಮಾನತೆ ಹೆಚ್ಚುತ್ತಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.


ಕುಸಿಯುತ್ತಿರುವ ಕೌಟುಂಬಿಕ ಮೌಲ್ಯಗಳು
ಸಾಂಸ್ಥಿಕ ರಚನೆಗಳನ್ನು ವ್ಯಕ್ತಿಗತವಾಗಿ ಒಡೆದು ಬಂಡವಾಳಶಾಹಿ ವಾದವು ಬೆಳೆಯುತ್ತದೆ. ಸ್ವಾರ್ಥ ಹಾಗೂ ಲೋಭಿತನವು ತ್ಯಾಗ ಹಾಗೂ ಅನುಭೂತಿಯನ್ನು ಮರೆ ಮಾಡುತ್ತದೆ. ಪ್ರಸಕ್ತ ತಲೆಮಾರಿನಲ್ಲಿ ನಾವಿದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
ಇಲ್ಲಿ ಉಲ್ಲೇಖಿಸಿರುವ ಘಟನೆಯೊಂದು ಇದಕ್ಕೆ ನಿದರ್ಶನವಾಗಿದೆ. ವೃದ್ಧಾಶ್ರಮವೊಂದರಲ್ಲಿದ್ದ ವೃದ್ಧನೊಬ್ಬ ನಿಧನರಾದ ಬಳಿಕ ಆಶ್ರಮದ ಪಾಲಕರು ಆತನ ಪುತ್ರನಿಗೆ ಸುದ್ದಿ ತಿಳಿಸಿದರು ಹಾಗೂ ತಂದೆಯ ಅಂತ್ಯಕ್ರಿಯೆಗಾಗಿ ಅಮೆರಿಕದಿಂದ ಆಗಮಿಸುವಂತೆ ಆತನಿಗೆ ತಿಳಿಸಿದರು. ಆದರೆ ಆ ಮಗನು, ಬದಲಿಗೆ ಅಂತ್ಯಕ್ರಿಯೆಗೆ ಬೇಕಾದ ಖರ್ಚಿನ ಹಣವನ್ನು ನೀಡಿದನೇ ಹೊರತು ಬರಲೇ ಇಲ್ಲ. ಇದು ಕೇವಲ ಒಂದು ಉದಾಹರಣೆ ಮಾತ್ರ. ಪುತ್ರ, ಸೊಸೆ, ಪುತ್ರಿ ಹಾಗೂ ಅಳಿಯನಿಂದ ವೃದ್ಧರು ಪರಿತ್ಯಜಿಸಲ್ಪಡುತ್ತಿರುವ ಹಲವಾರು ಅಮಾನವೀಯ ನಿದರ್ಶನಗಳು ವರದಿಯಾಗುತ್ತಲೇ ಇವೆ. ನೂತನ ವ್ಯವಸ್ಥೆಯು ಒಂದು ಸಕಾರಾತ್ಮಕ ಬದಲಾವಣೆಯನ್ನು ತಂದಿದೆ. ಅದುವೇ ಮಹಿಳೆಯರ ಆರ್ಥಿಕ ಸಬಲೀಕರಣವಾಗಿದೆ. ಮಧ್ಯಮವರ್ಗದ ಮಹಿಳೆಯರು ಕೇವಲ ಗೃಹಿಣಿಯರಾಗಿ, ನಿತ್ಯದ ಮನೆಗೆಲಸಗಳನ್ನು ನಿರ್ವಹಿಸುವ ಬದಲಿಗೆ, ಉದ್ಯೋಗಕ್ಕೆ ಸೇರಿ ಸಂಪಾದಿಸುವುದನ್ನು ಇಚ್ಛಿಸುತ್ತಿದ್ದಾರೆ. ಆದರೆ ಈ ನೂತನ ವ್ಯವಸ್ಥೆಯಿಂದಾಗಿ ಸೊಸೆಯ ಸಾಂಪ್ರದಾಯಿಕ ಪಾತ್ರವಾದ ಮನೆಯ ವೃದ್ಧರ ಪಾಲನೆಯು ನಿರ್ಲಕ್ಷಿತವಾಗಿದೆ.
  ಹೆಚ್ಚಿನ ಮಹಿಳೆಯರು ಕೇವಲ ಆಕಾಂಕ್ಷೆಯಿಂದ ಮಾತ್ರವಲ್ಲ ಅನಿವಾರ್ಯವಾಗಿಯೂ ಉದ್ಯೋಗಕ್ಕೆ ಸೇರಬೇಕಾದ ಪರಿಸ್ಥಿತಿಯುಂಟಾಗಿದೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಿದುಕೊಳ್ಳಬೇಕಾದರೆ ಒಂದೇ ಮನೆಯಲ್ಲಿ ಇಬ್ಬರು ದುಡಿಯಬೇಕಾದ ಅಗತ್ಯವಿದೆ. ಮಹಿಳೆಯ ಸಾಂಪ್ರದಾಯಿಕ ಪಾತ್ರವು ಬದಲಾಗುತ್ತಿದ್ದರೂ, ಪುರುಷನು ಮಹಿಳೆಯರ ವಶದಲ್ಲಿದ್ದ ಮನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಿಲ್ಲ.
ನೂತನ ಕುಟುಂಬ ವ್ಯವಸ್ಥೆಯಲ್ಲಿ ಕುಟುಂಬದೊಂದಿಗೆ ಸಮಯ ಕಳೆಯಲು ಇಬ್ಬರಿಗೂ ಕಡಿಮೆ ಸಮಯವಿದೆ. ಆದರೆ ಮಹಿಳೆಯ ಜವಾಬ್ದಾರಿಯು ಹೆಚ್ಚುತ್ತಾ ಹೋಗಿದೆ.
ಇಷ್ಟೊಂದು ಪ್ರಮಾಣದ ಒತ್ತಡಗಳು ಹಾಗೂ ಹೊಣೆಗಾರಿಕೆಗಳಿಂದಾಗಿ ಜನರು ಸ್ವಾರ್ಥವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬಂಡವಾಳಶಾಹಿವಾದ ಹಾಗೂ ಗ್ರಾಹಕವಾದದಿಂದ ಪೋಷಿಸಲ್ಪಟ್ಟ ‘‘ನಾನು, ನನ್ನದು ಹಾಗೂ ನನಗೆ’’ ಎಂಬ ಪ್ರವೃತ್ತಿಯು ಬೆಳೆಯುತ್ತಿದೆ.
 ಇನ್ನು ಕೆಲವೇ ವರ್ಷ ಕಾದುನೋಡಿ. ಸಮಾಜದ ಮೂಲಭೂತ ಘಟಕವಾದ ಕೌಟುಂಬಿಕ ವ್ಯವಸ್ಥೆಯು ಇನ್ನಷ್ಟು ವಿಭಜನೆಯಾಗಲಿದೆ. ಬಹುತೇಕ ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಇದು ಕಾಣಸಿಗುತ್ತಿದೆ.
ಸಾಮಾಜಿಕ ಸುರಕ್ಷತಾ ಕಾರ್ಯತಂತ್ರ ಇಂದಿನ ಅವಶ್ಯಕತೆ
ಉತ್ತಮವಾದ ಕ್ಷೇಮ ಕಾರ್ಯತಂತ್ರದ ಅನುಪಸ್ಥಿತಿಯಲ್ಲಿ ಬಂಡವಾಳಶಾಹಿವಾದವು ಉಳಿದುಕೊಳ್ಳಲಾರದು. ವೃದ್ಧ ಪ್ರಜೆಗಳಿಗೆ ಪ್ರಬಲವಾದ ಸಾಮಾಜಿಕ ರಕ್ಷಣಾ ಕಾರ್ಯತಂತ್ರದ ಅಗತ್ಯವಿದೆ. ಎಲ್ಲಾ ವೃದ್ಧರಿಗೆ ಮಾಸಿಕವಾಗಿ ಕನಿಷ್ಠ 2 ಸಾವಿರ ರೂಪಾಯಿಗಳ ಸಾರ್ವತ್ರಿಕ ಪಿಂಚಣಿ ಯೋಜನೆಗಳ ಅಗತ್ಯವಿದೆ. ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ಆರೋಗ್ಯಪಾಲನೆಯನ್ನು ಒಳಗೊಂಡ ವೃದ್ಧಾಶ್ರಮಗಳ ಅಗತ್ಯವಿದೆ. ವೃದ್ಧರನ್ನು ಮನರಂಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಹ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಸ್ವಯಂಸೇವಾ ವಲಯವು ಪ್ರಮುಖ ಪಾತ್ರವನ್ನು ವಹಿಸಬಹುದಾಗಿದೆ.
ಅಂತಿಮವಾಗಿ ವೃದ್ಧರ ಪಾಲನೆಯಲ್ಲಿ ಕುಟುಂಬವು ಅಪೇಕ್ಷಣೀಯ ಪಾತ್ರವನ್ನು ವಹಿಸಬೇಕಾದ ಅಗತ್ಯವಿದೆಯೇ ಹೊರತು ಅವರನ್ನು ತೊರೆಯುವುದಲ್ಲ. ಭವಿಷ್ಯದಲ್ಲಿ ತಮಗೂ ವೃದ್ಧಾಶ್ರಮಗಳು ಕಾಯುತ್ತಿವೆಯೆಂಬುದನ್ನು ಹಾಲಿ ಯುವಜನಾಂಗ ಚೆನ್ನಾಗಿ ಅರಿತುಕೊಳ್ಳಬೇಕಾಗಿದೆ.

ನನ್ನ ಸ್ನೇಹಿತರೊಬ್ಬರು ಅಮೆರಿಕದಲ್ಲಿ ಉನ್ನತ ದರ್ಜೆಯ ಸಾಫ್ಟ್ ವೇರ್ ವೃತ್ತಿಪರರಾಗಿದ್ದರು. ಆತ ತನ್ನ ಗೋಳಿನ ಕಥೆಯನ್ನು ಹೀಗೆ ವಿವರಿಸುತ್ತಾರೆ. ‘‘ಕೆಲಸದ ದಿನಗಳಲ್ಲಿ ನನ್ನ ದಿನಚರಿಯು ಬೆಳಗ್ಗೆ ಏಳು ಗಂಟೆಗೆ ಆರಂಭಗೊಂಡು ರಾತ್ರಿ 1 ಗಂಟೆಯತನಕವೂ ಮುಂದುವರಿಯುತ್ತದೆ’’. ಇದು ಕೇವಲ ಅವರೊಬ್ಬರದೇ ಕಥೆಯಲ್ಲ. ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಕಥೆ ಇದೇ ರೀತಿಯದ್ದಾಗಿದೆ. ಈ ಪ್ರಕ್ರಿಯೆಯಲ್ಲಿ, ತಮ್ಮ ಕುಟುಂಬವನ್ನು ಹಾಗೂ ವೃದ್ಧಪಾಲಕರ ಜೊತೆಗಿರಲು ಅವರಿಗೆಲ್ಲಿ ಸಮಯ ದೊರೆಯುತ್ತದೆ?. ಇಂತಹ ಅಧಿಕ ವೆಚ್ಚದ ಆರ್ಥಿಕತೆಯಲ್ಲಿ ತಮ್ಮ ಪಾಲಕರ ಬಗ್ಗೆ ಕಾಳಜಿ ವಹಿಸುವ ಇಚ್ಛೆ ಯಾರಿಗಿದ್ದೀತು. 

ಕೃಪೆ: countercurrents

Writer - ಪ್ರದೀಪ್ ಬೈಸಖ್

contributor

Editor - ಪ್ರದೀಪ್ ಬೈಸಖ್

contributor

Similar News

ಜಗದಗಲ
ಜಗ ದಗಲ