ಅಳಿಸಲಾಗದ ಕಳಂಕಿತರು

Update: 2019-06-21 18:34 GMT

ಭಾಗ-41

ಸಾವರ್ಕರ್‌ರಿಗೆ ತಟ್ಟಿದ್ದ ಕಳಂಕವನ್ನು ತೊಳೆಯಲು ಬಿಜೆಪಿ ಪರಿವಾರ ಅಧಿಕಾರದಲ್ಲಿದ್ದಷ್ಟು ಕಾಲ ಶಕ್ತಿಮೀರಿ ಪ್ರಯತ್ನಿಸಿತು. ಅಂಡಮಾನ್ ಸೆರೆಮನೆಯಲ್ಲಿ ಸಾವರ್ಕರ್‌ರಿದ್ದ ಕೊಠಡಿಯಲ್ಲಿ ಶಿಲಾಫಲಕವನ್ನು ಅಳವಡಿಸಿದರು. ಆ ಕೊಠಡಿಯ ಎದುರಿಗೆ ‘ಷಹೀದ್ ಉದ್ಯಾನವನ’ವನ್ನು ನಿರ್ಮಿಸಿದರು. 2003ರಲ್ಲಿ ಲೋಕಸಭಾ ಕಾರ್ಯಾಲಯದಿಂದ ಸಾವರ್ಕರ್‌ರನ್ನು ಹೊಗಳಿ ಒಂದು ಪುಸ್ತಿಕೆಯನ್ನು ಪ್ರಕಟಿಸಿದರು.
ಇಷ್ಟೆಲ್ಲ ಮಾಡಿದರೂ ಸಾವರ್ಕರ್‌ರು ಗಾಂಧಿ ಕಗ್ಗೊಲೆಯ ಕೊಲೆಗಡುಕರೊಡನೆ ಸಹ ಆರೋಪಿಗಳಾಗಿದ್ದರೆಂಬ ಅಳಿಸಲಾರದ ಕಳಂಕದಿಂದ ಮುಕ್ತರಾದಾರೆಯೇ?

1949 ಫೆಬ್ರವರಿ 10ರಂದು ನ್ಯಾಯಾಧೀಶ ಆತ್ಮಚರಣರು ತೀರ್ಪು ನೀಡಿ ಸಾವರ್ಕರ್‌ರನ್ನು ದೋಷಮುಕ್ತರನ್ನಾಗಿ ಮಾಡಿದ ಮೇಲೆ 1966ರಲ್ಲಿ ನಿಧನರಾಗುವ ತನಕ ಅವರು ಭಾರತದ ರಾಜಕೀಯ ಕ್ಷೇತ್ರದಿಂದ ಬಹುಮಟ್ಟಿಗೆ ನಿರ್ಗಮಿಸಿಬಿಟ್ಟರು. ಅವರು ಬದುಕಿದ್ದ ಕಾಲಾವಧಿಯಲ್ಲಿ ನಡೆದ ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಯಾವ ಗಣನೀಯ ಸಕ್ರಿಯ ಭಾಗವಹಿಸಲಿಲ್ಲ. ಅವರು ಹಿಂದೆ ಅಧ್ಯಕ್ಷರಾಗಿದ್ದ ಹಿಂದೂ ಮಹಾಸಭೆ ಆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರೂ ಉಮೇದುವಾರರಾಗಲಿ, ಆ ಪಕ್ಷದ ಮುಖಂಡರಾಗಲಿ ಸಾವರ್ಕರ್‌ರ ಸಹಾಯವನ್ನು ಅಪೇಕ್ಷಿಸಲಿಲ್ಲ. ಪಡೆಯಲಿಲ್ಲ. ಯಾಕಿರಬಹುದು? ಗಾಂಧಿ ಕಗ್ಗೊಲೆಯ ಸಂಚಿನಲ್ಲಿ ಭಾಗಿಯಾಗಿದ್ದರೆಂಬ ಆರೋಪದಿಂದ ಮುಕ್ತವಾಗಿದ್ದರೂ ಆರೋಪದ ಕಳಂಕ ಅಳಿಸಿಹೋಗಿರಲಿಲ್ಲ. ಅಂಥ ಘೋರ ಪಾಪಕೃತ್ಯವೆಸಗಿದವರೊಡನೆ ಅವರು ಆರೋಪಿತರಾಗಿದ್ದರೆಂಬುದೆ ಅಳಿಸಲಾರದ ಕಳಂಕವೆಂಬ ಭಾವನೆ ದಟ್ಟವಾಗಿ ಹಬ್ಬಿತು. ಜನಮನದಲ್ಲಿ ಹಸುರಾಗಿತ್ತು. ಅಂಥವರನ್ನು ಮುಂದಿಟ್ಟುಕೊಂಡು ರಾಜಕೀಯ ಕಣಕ್ಕಿಳಿಯುವುದು ಭಾರತದಲ್ಲಿ ಮರ್ಯಾದೆ ತರುವಂತಿರಲಿಲ್ಲ. ಈ ಭಾವನೆ ಆಗಿನ ಹಿಂದೂ ಮಹಾಸಭಾ ಸದಸ್ಯರಲ್ಲೂ ಅಂದು ಇದ್ದಿರಬಹುದು. ಅಂದಿನ ಹಿಂದೂ ಮಹಾಸಭೆಯ ವಾರಸುದಾರರೇ ಇಂದಿನ ಭಾರತೀಯ ಜನತಾ ಪಾರ್ಟಿ. ಅವರೇಕೆ 1966ರವರೆಗೆ - ಆ ತರುವಾಯ 1950ರವರೆಗೆ ವೀರ ಸಾವರ್ಕರ್ ಜನ್ಮದಿನೋತ್ಸವವನ್ನಾಗಲಿ, ಪುಣ್ಯತಿಥಿಯನ್ನಾಗಲಿ ಅದ್ದೂರಿಯಾಗಿ ಆಚರಿಸಲಿಲ್ಲ. ಭಾಜಪ ಯಾವಾಗ ರಾಜಕೀಯ ಅಧಿಕಾರ ಸೂತ್ರವನ್ನು ವಹಿಸಿಕೊಂಡಿತೋ ಕೇಂದ್ರ ಸಭಾಂಗಣದಲ್ಲಿ ಅವರ ಭಾವಚಿತ್ರ ಅನಾವರಣ ಮಾಡುವುದರಲ್ಲಿ ಯಶಸ್ವಿಯಾದರು.
1999ರಲ್ಲಿ ಬಿಜೆಪಿ ಪ್ರಮುಖ ಪಕ್ಷದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಾಗ ಸಾವರ್ಕರ್‌ರನ್ನು ರಾಷ್ಟ್ರಮಟ್ಟದ ನಾಯಕ ಪಟ್ಟಕಟ್ಟಲು ನಡುಕಟ್ಟಿದರು. ಹನ್ನೊಂದು ವರ್ಷ ಅಂಡಮಾನ್ ದ್ವೀಪದಲ್ಲಿ ಸೆರೆವಾಸ ಅನುಭವಿಸಿದ್ದ ನೆನಪಿಗಾಗಿ ಅಂಡಮಾನ್ ಸೆರೆಮನೆ ‘ಸ್ವಾತಂತ್ರ ಜ್ಯೋತಿ’ ಸ್ಮಾರಕ ಶಿಲ್ಪವನ್ನು ಸ್ಥಾಪಿಸಲು ನಿರ್ಧರಿಸಿದರು. ಓರ್ವ ಶಿಲ್ಪಿ ಆ ಶಿಲ್ಪವನ್ನು ಮೇ 2004ರ ಹೊತ್ತಿಗೆ ಸಿದ್ಧಪಡಿಸಿದ. ಆ ಶಿಲಾಫಲಕದಲ್ಲಿ ಸಾವರ್ಕರ್‌ರ ಕೆಲವು ವಾಕ್ಯಗಳನ್ನು ಕೆತ್ತಲಾಗಿತ್ತು. ಆ ವಾಕ್ಯಗಳಲ್ಲದೆ ಮದನಲಾಲ್ ಢಿಂಗ್ರಾ, ಭಗತ್‌ಸಿಂಗ್, ಸುಭಾಶ್ಚಂದ್ರ ಬೋಸರ ಕೆಲವು ವಾಕ್ಯಗಳನ್ನೂ ಕೆತ್ತಲಾಗಿತ್ತು. ಆ ‘ಸ್ವಾತಂತ್ರ ಜ್ಯೋತಿ’ ಶಿಲಾಫಲಕವನ್ನು 2004 ಆಗಸ್ಟ್ 9ರಂದು ಅನಾವರಣ ಮಾಡಬೇಕಾಗಿತ್ತು. ಯುಪಿಎ ಸರಕಾರ ಅಧಿಕಾರಕ್ಕೆ ಬಂದಿತ್ತು. ಆ ಶಿಲಾಫಲಕವನ್ನು ಯುಪಿಎ ಸರಕಾರದಲ್ಲಿ ಮಂತ್ರಿಯಾಗಿರುವ ಮಣಿಶಂಕರ ಅಯ್ಯರ್ ಅನಾವರಣ ಮಾಡಬೇಕಾಗಿತ್ತು. ಆಗ ಅಯ್ಯರ್, ಸಾವರ್ಕರ್‌ರ ವಾಕ್ಯಗಳಿದ್ದ ಶಿಲಾಫಲಕವನ್ನು ಕಿತ್ತೆಸೆದು ಅದರ ಜಾಗದಲ್ಲಿ ಮಹಾತ್ಮಾ ಗಾಂಧಿಯ ವಾಕ್ಯಗಳುಳ್ಳ ಶಿಲಾಫಲಕವನ್ನು ಸ್ಥಾಪಿಸಬೇಕೆಂದು ನಿರ್ಧರಿಸಿದರು. ಸುಭಾಷ್, ಭಗತ್‌ಸಿಂಗ್, ಮದನಲಾಲ್ ಢಿಂಗ್ರಾ ಅವರ ವಾಕ್ಯಗಳುಳ್ಳ ಶಿಲಾಫಲಕಗಳನ್ನು ಉಳಿಸಿದರು. ಅಯ್ಯರ್ ದೃಷ್ಟಿಯಲ್ಲಿ ಮಹಾತ್ಮನನ್ನು ಕೊಲೆಮಾಡಿದ ಕೊಲೆಗಡುಕರೊಡನೆ ಸಹ ಆರೋಪಿಯಾಗಿದ್ದ ಸಾವರ್ಕರ್‌ರ ವಾಕ್ಯಗಳನ್ನು ಚಿರಸ್ಥಾಯಿಗೊಳಿಸಿ ದೇಶಕ್ಕೆ ಸ್ವಾತಂತ್ರ ತರುವುದರಲ್ಲಿ ಪ್ರಮುಖ ಪಾತ್ರವಹಿಸಿದ ಮಹಾತ್ಮನ ಮಾತುಗಳಿಗೆ ಸ್ಥಾನ ಇಲ್ಲದಿರುವುದು ಮಹಾತ್ಮನನ್ನು ಕೊಂದಷ್ಟೇ ಪಾತಕ ಕೃತ್ಯವಾಗಿತ್ತು. ಆ ಶಿಲಾಫಲಕದ ಕಲ್ಪನೆಯ ಕರ್ತೃ ಮಾಜಿ ಮಂತ್ರಿ ರಾಮನಾಯ್ಕ: ‘‘ಇದು ಸಾವರ್ಕರ್‌ರಿಗೆ ಮಾಡಿದ ಅಪಮಾನ’’ ಎಂದು ಬೊಬ್ಬೆ ಎಬ್ಬಿಸಿದರು. ಅಯ್ಯರ್ ಅವರ ಕ್ರಮವನ್ನು ಪ್ರತಿಭಟಿಸಿ 2004ರಲ್ಲಿ ಹದಿಮೂರು ದಿನ ಸಂಸತ್ ಉಭಯ ಸದನಗಳ ಕಲಾಪಗಳಿಗೆ ಅಡ್ಡಿಯನ್ನುಂಟುಮಾಡಿದರು. ಅಯ್ಯರ್ ಕ್ಷಮಾಪಣೆ ಕೇಳಬೇಕೆಂದು ಪಟ್ಟುಹಿಡಿದಾಗ ಅದಕ್ಕೆ ಉತ್ತರವಾಗಿ ಅಯ್ಯರ್ ‘‘ನಾನು ಕ್ಷಮೆ ಯಾಚಿಸಬೇಕಾದ ಮಾತೇ ಇಲ್ಲ. ಆ ಶಿಲಾಫಲಕದಲ್ಲಿ ಯಾರ್ಯಾರ ಸ್ಮಾರಕ ಸ್ಥಾಪಿಸಬೇಕೆಂದು ತೀರ್ಮಾನಿಸಿದರೂ ಆ ರಾಮ ನಾಯ್ಕರು ಅವಿವೇಕಿಗಳೆಂಬುದು ಸಾಬೀತಾಗಿದೆ. ಗಾಂಧೀಜಿ ನಮ್ಮ ದೇಶಕ್ಕೆ ಕೊಟ್ಟ ಕೊಡುಗೆಯನ್ನು ಕಡೆಗಾಣಿಸಿದ ಆ ಸ್ವಾತಂತ್ರ ಜ್ಯೋತಿಯಿಂದ ಈ ದೇಶಕ್ಕಾಗಬಹುದಾಗಿದ್ದ ಲಜ್ಜೆಯಿಂದ ದೇಶವನ್ನು ಪಾರುಮಾಡಿದ್ದೇನೆ. ನಮ್ಮ ಸ್ವಾತಂತ್ರ ಸಂಗ್ರಾಮದಲ್ಲಿ ಗಾಂಧೀಜಿಯ ಪ್ರಸ್ತಾಪವಿಲ್ಲದ ಸ್ವಾತಂತ್ರ ಜ್ಯೋತಿಯನ್ನು ನಾನು ಊಹಿಸಲಾರೆ. ರಾಮ ನಾಯ್ಕರು ರಾಷ್ಟ್ರಪಿತನಿಗೆ ಮಾಡಿದ ಅಪಮಾನಕ್ಕಾಗಿ ಕ್ಷಮಾಯಾಚನೆ ಮಾಡಬೇಕು’’ ಎಂದು ಗುಡುಗಿದರು.


ಸಾವರ್ಕರ್‌ರಿಗೆ ತಟ್ಟಿದ್ದ ಕಳಂಕವನ್ನು ತೊಳೆಯಲು ಬಿಜೆಪಿ ಪರಿವಾರ ಅಧಿಕಾರದಲ್ಲಿದ್ದಷ್ಟು ಕಾಲ ಶಕ್ತಿಮೀರಿ ಪ್ರಯತ್ನಿಸಿತು. ಅಂಡಮಾನ್ ಸೆರೆಮನೆಯಲ್ಲಿ ಸಾವರ್ಕರ್‌ರಿದ್ದ ಕೊಠಡಿಯಲ್ಲಿ ಶಿಲಾಫಲಕವನ್ನು ಅಳವಡಿಸಿದರು. ಆ ಕೊಠಡಿಯ ಎದುರಿಗೆ ‘ಷಹೀದ್ ಉದ್ಯಾನವನ’ವನ್ನು ನಿರ್ಮಿಸಿದರು. 2003ರಲ್ಲಿ ಲೋಕಸಭಾ ಕಾರ್ಯಾಲಯದಿಂದ ಸಾವರ್ಕರ್‌ರನ್ನು ಹೊಗಳಿ ಒಂದು ಪುಸ್ತಿಕೆಯನ್ನು ಪ್ರಕಟಿಸಿದರು.

ಇಷ್ಟೆಲ್ಲ ಮಾಡಿದರೂ ಸಾವರ್ಕರ್‌ರು ಗಾಂಧಿ ಕಗ್ಗೊಲೆಯ ಕೊಲೆಗಡುಕರೊಡನೆ ಸಹ ಆರೋಪಿಗಳಾಗಿದ್ದರೆಂಬ ಅಳಿಸಲಾರದ ಕಳಂಕದಿಂದ ಮುಕ್ತರಾದಾರೆಯೇ? ಅವರನ್ನು ಅಕಳಂಕ ಸತ್ಪುರುಷರನ್ನಾಗಿ ತೋರಿಸಲು ಗೋಡ್ಸೆ ಮಾಡಿದ ಕೃತ್ಯವನ್ನು ಸಮರ್ಥಿಸುವವರೂ ಇದ್ದಾರೆ. ಅವನನ್ನು ಸಾವರ್ಕರ್ ‘ಪಂಡಿತರೆಂದು’ ಸಂಬೋಧಿಸಿ ಗೌರವಿಸಿದ್ದಾರೆಂದು ಪ್ರಶಂಸಿದ್ದಾರೆ. ಅವನು ತನ್ನ ‘ದೇವಕಾರ್ಯ’ವನ್ನು ನೆರವೇರಿಸಿದ ಮಹಾಶೂರನೆಂದು ಬಣ್ಣಿಸುತ್ತಿದ್ದಾರೆ. ಅವನು ಗಾಂಧೀಜಿಗೆ ಗುಂಡಿಕ್ಕಿ ಓಡಿಹೋಗದ ಧೀರನೆಂದು ಹೊಗಳುತ್ತಾರೆ. ಪಿಸ್ತೂಲನ್ನು ಕೆಳಗೆಸೆದು ಓಡಿಹೋಗದ ಎದೆಗಾರನೆಂದು ಅವನಿಗೆ ವೀರಯೋಧನ ಪಟ್ಟ ಕಟ್ಟುತ್ತಾರೆ! ಅವನು ಸ್ಥಿತಪ್ರಜ್ಞನಂತೆ ನೇಣುಗಂಬ ಏರಿದನೆಂದು ಧನುರ್ಧಾರಿಯೆಂಬಂತೆ ಚಿತ್ರಿಸುತ್ತಾರೆ!! ಕರ್ಮವೀರನ ಈ ಚಿತ್ರ ಅವನು ಮಾಡಿದ ಹೀನಕೃತ್ಯವನ್ನು ಮುಚ್ಚಿಹಾಕುವುದಿಲ್ಲ. ಗಮನಿಸಬೇಕಾದದ್ದು ನ್ಯಾಯಶಾಸ್ತ್ರ ದೃಷ್ಟಿಯಿಂದ ಅವನು, ಅವನಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಉತ್ತೇಜನ, ಸಹಾನುಭೂತಿ, ಸಹಾಯ ಮಾಡಿದ ಅವನ ಗುರು ಕಳಂಕರಹಿತರೆ ಅಲ್ಲವೆ ಎಂಬುದು ವಿಚಾರಣೆ ನಡೆಸಿದ ನ್ಯಾಯಾಧೀಶರು ಗಾಂಧಿ ಕೊಲೆ ಮಾಡಲು ಸಂಚು ಮಾಡಲಾಗಿತ್ತು ಎಂಬ ನಿರ್ಧಾರಕ್ಕೆ ಬಂದರೂ, ಸಂಶಯದ ಸೌಲಭ್ಯ ಕೊಟ್ಟು ಸಾವರ್ಕರ್‌ರನ್ನು ದೋಷಮುಕ್ತ ಮಾಡಿದರು. ಸಿಮ್ಲಾ ಉಚ್ಚ ನ್ಯಾಯಾಲಯದ ಮೂವರು ಹಿರಿಯ ನ್ಯಾಯಮೂರ್ತಿಗಳು ಮಾಫಿ ಸಾಕ್ಷಿ ಬಡ್ಗೆ ನಂಬಲರ್ಹ ಸಾಕ್ಷಿ ಎಂದೇ ನಿಶ್ಚಿತ ನಿರ್ಧಾರಕ್ಕೆ ಬಂದಿದ್ದಾರೆ. ಅವನು ನಂಬಲರ್ಹನು ಎಂಬುದಕ್ಕೆ ಅವರು ಸಕಾರಣಗಳನ್ನು ಕೊಟ್ಟಿದ್ದಾರೆ. ಕೊನೆಗೂ, ‘‘ಸಾವರ್ಕರ್‌ರನ್ನು ಖುಲಾಸೆ ಮಾಡಿದ ನ್ಯಾಯಾಧೀಶ (ಆತ್ಮಚರಣ)ರ ತೀರ್ಪಿನ ವಿರುದ್ಧ ರಾಜ್ಯ ಸರಕಾರ ಏಕೆ ಅಪೀಲು ಮಾಡಲಿಲ್ಲ?’’ ಎಂಬ ಮಾತನ್ನೂ ಹೇಳಿದ್ದಾರೆ. ಅಪೀಲು ಮಾಡಿದ್ದರೆ ಸಾವರ್ಕರ್‌ರಿಗೆ ಏನಾಗುತ್ತಿತ್ತ್ತೊ! ತರುವಾಯ ಗೋಡ್ಸೆ ಮತ್ತು ಅವನ ಸಹ ಆರೋಪಿಗಳು ಲಂಡನ್‌ನ ಪ್ರೀವ್ಹಿ ಕೌನ್ಸಿಲ್‌ಗೆ ಅಪೀಲು ಮಾಡಿದಾಗ ಆ ‘ಲಾ ಲಾರ್ಡ್ಸ್’ (Law Lords) ಅಪೀಲು ವಿಚಾರಾರ್ಹವಲ್ಲವೆಂದು ಮೊದಲ ಹಂತದಲ್ಲೇ ತಳ್ಳಿಹಾಕುತ್ತಾರೆ! ಕೊನೆಯದಾಗಿ 1964ರಲ್ಲಿ ಭಾರತ ಸರಕಾರ ನೇಮಿಸಿದ್ದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಲ್.ಜೆ.ಕಪೂರ್ ಆಯೋಗದ ವರದಿಯಲ್ಲಿ ಗಾಂಧೀಜಿ ಕೊಲೆಗೆ ಸಂಚು ನಡೆದಿತ್ತು ಎಂದು ಅದರಲ್ಲಿ ಯಾರ ಯಾರ ಪಾತ್ರ ಎಷ್ಟು ಎಂದು ಸ್ಪಷ್ಟವಾಗಿ ವರದಿ ಮಾಡಿದ್ದಾರೆ. ಅವರು ಸಿಮ್ಲಾ ಉಚ್ಚ ನ್ಯಾಯಾಲಯದ ತೀರ್ಪನ್ನು ಒಪ್ಪಿದ್ದಾರೆ. ಆ ತೀರ್ಪು ಬಂದಾಗ ಲಭ್ಯವಿಲ್ಲದ ಹೊಸ ಮಾಹಿತಿಯ ಆಧಾರದ ಮೇಲೆ ಸಾವರ್ಕರ್‌ರ ಪಾತ್ರವನ್ನೂ ಪ್ರಸ್ತಾಪಿಸಿದ್ದಾರೆ. ಅವರು ಕಲಂಕಿತರು ಎಂಬುದು ಈಗ ನಿರ್ವಿವಾದ ಐತಿಹಾಸಿಕ ಸತ್ಯವಾಗಿದೆ. ಆದರೂ ಸಂಘಪರಿವಾರ ಈಗಲೂ ಗಾಂಧಿ ಕಗ್ಗೊಲೆಯನ್ನು ಒಂದು ನಾಲಗೆಯಿಂದ ಸಮರ್ಥಿಸುತ್ತ ಇನ್ನೊಂದು ನಾಲಗೆಯಿಂದ ಗಾಂಧಿ ಹಂತಕರೆಂದು ಕರೆಯುವುದು ‘ಮಾನಹಾನಿ’ ಎಂದು ಅಬ್ಬರಿಸುವುದು ನಡೆದೇ ಇದೆ. ವಿಚಾರಣೆ ಮಾಡಿದ ನ್ಯಾಯಮೂರ್ತಿಗಳು ಪುನರ್ ಮೇಲ್ಮನವಿಯನ್ನು ಹೊಸ್ತಿಲಲ್ಲೇ (at the threshold) ತಳ್ಳಿಹಾಕಿದ ಲಾ ಲಾರ್ಡ್ಸ್ (Law Lords) ನ್ಯಾಯಮೂರ್ತಿ ಕಪೂರ್ ಇವರೆಲ್ಲರೂ ಸಂಘಪರಿವಾರದ ವಿದ್ವಜ್ಜನರ ದೃಷ್ಟಿಯಲ್ಲಿ ಮೂಢಮತಿಗಳು! ‘ನಾನೇಕೆ ಮಹಾತ್ಮಾ ಗಾಂಧಿಯನ್ನು ಕೊಂದೆ’ ಎಂಬ ಆರೋಪಿತ ಹೇಳಿಕೆಯನ್ನು ಓದಿ, ಪತ್ರಿಕಾ ವರದಿಗಳನ್ನು ನಂಬಿ, ಗಾಂಧೀಜಿ ದೇಶದ್ರೋಹಿ, ಗೋಡ್ಸೆ ಮಹಾ ದೇಶಭಕ್ತ ಎಂದು ಭಜನೆ ಮಾಡುವುದು ಹಾಸ್ಯಾಸ್ಪದ. ಅದಿನ್ನು ಕೊನೆಗೊಳ್ಳಬೇಕು. ನ್ಯಾಯಾಲಯಗಳ ತೀರ್ಪಿಗೆ ತಲೆಬಾಗಿ ಸುಮ್ಮನಾಗಬೇಕು. ಗಾಂಧೀಜಿ ಪ್ರತಿಪಾದಿಸಿ ಅದಕ್ಕಾಗಿ ಪ್ರಾಣತೆತ್ತ ಆ ನಿತ್ಯಸತ್ಯ ಕೋಮುಸೌಹಾರ್ದ ವೃದ್ಧಿಯಾಗಲು ಶ್ರಮಿಸಿಬೇಕು. ‘ಪ್ರೇಮ ಏವ ಜಯತೆ’ ಮಂತ್ರವಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ