ಅಪರ್ಚರ್ ಎಂದರೇನು?

Update: 2019-06-22 12:56 GMT

ಭಾಗ-22

ಕಳೆದವಾರ ಷಟರ್ ಸ್ಪೀಡ್ ಎಂಬ ತಾಂತ್ರಿಕತೆ ಕುರಿತು ಚರ್ಚೆ ನಡೆಸಿದ್ದೆವು. ಅದಕ್ಕಿಂತ ಸ್ವಲ್ಪ ಭಿನ್ನವಾದ ಮತ್ತೊಂದು ತಾಂತ್ರಿಕ ಅಂಶ ಅಪರ್ಚರ್ ಬಗ್ಗೆ ಇಂದು ಒಂದಷ್ಟು ಕಲಿಯೋಣ. ಅಪರ್ಚರ್ ಕೂಡಾ ಬೆಳಕಿನ ಜೊತೆಗೆ ಸಂವಹನ ನಡೆಸುವ ಕ್ರಿಯೆಯೇ ಆಗಿದ್ದರೂ ಇಲ್ಲಿ ಎಷ್ಟು ಪ್ರಮಾಣದ ಬೆಳಕು ಲೆನ್ಸ್ ಒಳಗೆ ಬರುವಂತೆ ನಿಯಂತ್ರಿಸಿಕೊಳ್ಳಬಹುದು ಎಂಬುದು ಮುಖ್ಯವಾಗಿ ತಿಳಿಯಬೇಕಾದ ಸಂಗತಿ. ಲೆನ್ಸ್‌ನ ಒಳಗೆ ಒಂದು ರಂಧ್ರವಿದ್ದು ಅದನ್ನು ಹಿರಿದು ಅಥವಾ ಕಿರಿದುಗೊಳಿಸಿಕೊಂಡು ಆ ರಂಧ್ರದ ಮೂಲಕ ಒಳ ನುಗ್ಗಿ ಬರುವ ಬೆಳಕನ್ನು ನಿಯಂತ್ರಿಸಿ ಅಗತ್ಯಕ್ಕೆ ತಕ್ಕಷ್ಟು ಮಾತ್ರವೇ ಒಳಗೆ ಬಿಟ್ಟುಕೊಂಡು ಚಿತ್ರ ಪರಿಣಾಮಕಾರಿಯಾಗಿ ಮೂಡಿಬರುವಂತೆ ಮಾಡಿಕೊಳ್ಳಬಹುದು. ಪ್ರತಿ ಬಾರಿ ಚಿತ್ರವನ್ನು ಕ್ಲಿಕ್ಕಿಸಿದಾಗಲೂ ಈ ಪ್ರಕ್ರಿಯೆ ನಡೆಯುತ್ತಿರುತ್ತದೆ. ಷಟರ್ ಸ್ಪೀಡ್‌ನಂತೆ ಅಪರ್ಚರ್‌ನಲ್ಲೂ ಕೂಡಾ ನಿಯಮಿತವಾದ ಏರುಗತಿಯ ಸಂಖ್ಯಾ ಸೂಚಿಗಳನ್ನು ನೀಡಲಾಗಿರುತ್ತದೆ. ಆ ಸಂಖ್ಯಾಸೂಚಿಗಳ ಮೂಲಕ ಬೆಳಕಿನ ನಿಯಂತ್ರಣ ಸಾಧಿಸುವುದು ಸುಲಭ. ಅಪರ್ಚರ್ ಸಂಖ್ಯೆ ಎಫ್/1.2ನಿಂದ ಆರಂಭವಾಗಿ ಎಫ್/32 ವರೆಗೆ ರಂಧ್ರವು ಅಗಲವಾಗುತ್ತಾ ತೆರೆದುಕೊಳ್ಳುತ್ತದೆ. ಎಫ್/4 ಇದ್ದರೆ ರಂಧ್ರ ಮಧ್ಯಮ ಗಾತ್ರದಲ್ಲಿ ತೆರೆಯುತ್ತದೆ. ಹೀಗೆಯೇ ಮುಂದುವರಿಸಿಕೊಂಡು ರಂಧ್ರದ ಗಾತ್ರವನ್ನು ಚಿಕ್ಕದಾಗಿಯೂ ಮೂಡಿಕೊಳ್ಳಬಹುದು. ಅದೇ ರೀತಿ ಎಫ್/8 ನಿಂದ ಎಫ್/32ರವರೆಗೆ ಸಂಖ್ಯೆ ಏರಿಸಿದಂತೆಲ್ಲ ರಂಧ್ರ ಇನ್ನಷ್ಟು ಚಿಕ್ಕದಾಗುತ್ತದೆ. ಈ ಅಪರ್ಚರ್ ಯಾವ ಗಾತ್ರದಲ್ಲಿ ತೆರೆದುಕೊಂಡಿರಬೇಕು ಅಂದರೆ ವಿಸ್ತಾರವಾಗಿ ತೆರೆದುಕೊಂಡಿರಬೇಕು ಎನ್ನುವುದು ಈ ಸಂಖ್ಯಾಸೂಚಿಗಳ ಮೂಲಕ ನಾವು ನಿರ್ಧರಿಸಬಹುದು. ಒಂದು ವೇಳೆ ನಾವು ರಂಧ್ರ ದೊಡ್ಡದಾಗಿ ತೆರೆದುಕೊಂಡಿರುವಂತೆ ಮಾಡಿದರೆ ಕ್ಯಾಮೆರಾದ ಒಳಗೆ ಹೆಚ್ಚು ಬೆಳಕು ಬರುತ್ತದೆ. ರಂಧ್ರ ಚಿಕ್ಕದಾದರೆ ಲೆನ್ಸ್ ಮೂಲಕ ಕ್ಯಾಮೆರಾದ ಒಳಗೆ ಬರುವ ಬೆಳಕಿನ ಪ್ರಮಾಣ ಕಡಿಮೆಯಾಗಿರುತ್ತದೆ. ಹೀಗೆ ಮಾಡುವುದರ ಮೂಲಕ ನಾವು ನಮ್ಮ ಚಿತ್ರದಲ್ಲಿ ಎಷ್ಟು ಬೆಳಕು ಬೇಕು ಎಂಬುದನ್ನು ನಿರ್ಧರಿಸಿ ಬೆಳಕಿನ ಪ್ರಮಾಣವನ್ನು ನಿಯಂತ್ರಿಸಬಹುದು. ಬೆಳಕನ್ನು ನಿಯಂತ್ರಿಸಿಕೊಳ್ಳಲು ಇತರೆ ಪೂರಕ ತಾಂತ್ರಿಕತೆಯಿದ್ದರೂ ಇದು ತಾಂತ್ರಿಕತೆಯ ಪ್ರಧಾನ ಭಾಗವಾಗಿದೆ.

ಷಟರ್ ಸ್ಪೀಡ್ ಕ್ಯಾಮೆರಾದ 'body' ಒಳಗಿನ ಕ್ರಿಯೆಯಾದರೆ ಅಪರ್ಚರ್ ಲೆನ್ಸ್ ಒಳಗಿನ ಕ್ರಿಯೆಯಾಗಿದೆ. ಒಬ್ಬ ಸೃಜನಶೀಲ ಛಾಯಾಗ್ರಾಹಕನಿಗೆ ತನ್ನ ಒಂದೊಂದು ಚಿತ್ರಕ್ಕೂ ಎಷ್ಟು ಬೆಳಕಿನ ಅಗತ್ಯತೆ ಇದೆ ಎಂಬುದನ್ನು ನಿರ್ಧರಿಸುವ ಸ್ವಾತಂತ್ರ ನೀಡುತ್ತದೆ ಈ ಅಪರ್ಚರ್. ಅಪರ್ಚರ್ ಅನ್ನು ಇನ್ನಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಈ ಸರಳ ಉದಾಹರಣೆಯನ್ನು ಗಮನಿಸಿ. ಸೂರ್ಯನೆಡೆಗೆ ನಾವು ಕಣ್ಣು ಹಾಯಿಸಿದಾಗ ನಮ್ಮ ಕಣ್ಣಿನ ಐರಿಸ್ ತಕ್ಷಣ ಕಿರಿದಾಗುತ್ತದೆ. ಅದೇ ರೀತಿ ಚಂದಿರನನ್ನು ನೋಡುವಾಗ ಐರಿಸ್ ಅಗಲವಾಗುತ್ತದೆ. ಹಾಗೆಯೇ ನಿಮ್ಮ ಮನೆಯ ಬೆಕ್ಕಿನ ಕಣ್ಣನ್ನು ಗಮನಿಸಿ. ಹಗಲು ಹೊತ್ತಿನಲ್ಲಿ ಬೆಕ್ಕಿನ ಕಣ್ಣಿನಲ್ಲಿ ಕಪ್ಪನೆಯ ಲಂಬಗೆರೆಯೊಂದು ಕಾಣುತ್ತದೆಯಲ್ಲವೇ? ರಾತ್ರಿ ವೇಳೆಯಲ್ಲಿ ಮತ್ತೊಮ್ಮೆ ಗಮನಿಸಿ. ಆ ಗೆರೆ ಸಾಕಷ್ಟು ಅಗಲವಾಗಿ ತೆರೆದುಕೊಂಡಿರುತ್ತದೆ. ಇದೇ ಮಾದರಿಯಲ್ಲಿ ಅಪರ್ಚರ್ ಕೂಡಾ ಕೆಲಸ ಮಾಡುವುದು. ಅದರ ಸಂಖ್ಯೆಯನ್ನು ಹೆಚ್ಚುಗೊಳಿಸಿ ಅಥವಾ ಕಡಿಮೆಗೊಳಿಸಿ ಚಿತ್ರಕ್ಕೆ ಬೇಕಾಗುವ ಪೂರಕ ಬೆಳಕನ್ನು ಹೊಂದಿಸಿಕೊಳ್ಳಬಹುದು. ಹೀಗೆ ಮಾಡುವ ಮೂಲಕ ಚಿತ್ರವನ್ನು ತನ್ನ ಕಲ್ಪನಾ ಶಕ್ತಿಗೂ ಮತ್ತು ಕಲಾತ್ಮಕತೆಗೂ ಅನುಗುಣವಾಗಿ ಚಿತ್ರದ ಮೂಲಕ ಅದನ್ನು ವಾಸ್ತವಗೊಳಿಸಿಕೊಳ್ಳಬಹುದು. ಆ ಮಟ್ಟದ ನಿಯಂತ್ರಣ ಕರಗತ ಮಾಡಿಕೊಳ್ಳುವುದೇ ಛಾಯಾಗ್ರಾಹಕನ ಕೌಶಲ್ಯ ಸಾಧನೆಗೆ ಹಿಡಿದ ಕನ್ನಡಿ. ದೃಶ್ಯವೊಂದರ 'depth of field' ಅಂದರೆ ಚಿತ್ರದ ಸಬ್ಜೆಕ್ಟ್‌ನ ಹಿಂದೆ ಹಾಗೂ ಮುಂದೆ ಇರುವ ಇತರೆ ಅನವಶ್ಯಕ ಮತ್ತು ಅತ್ಯವಶ್ಯಕ ವಸ್ತುಗಳನ್ನು ಮಸುಕುಗೊಳಿಸುವುದನ್ನು ಅಪರ್ಚರ್‌ನ ಮೂಲಕವೇ ಸಾಧಿಸಲು ಸಾಧ್ಯವಾಗುವುದು. ಚಿತ್ರದ ಒಟ್ಟಾರೆ ಅಂದಕ್ಕೆ ಇತರೆ ತಾಂತ್ರಿಕ ಅಂಶಗಳು ಎಷ್ಟು ಮುಖ್ಯವೋ ಅಪರ್ಚರ್ ಕೂಡಾ ಅಷ್ಟೇ ಮುಖ್ಯವಾದುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News